WFTW Body: 

ರೋಮಾಪುರದವರಿಗೆ 7:14-25 ಈ ವಾಕ್ಯಭಾಗದಲ್ಲಿ ಪರಿಪೂರ್ಣತೆಯ ಕಡೆಗೆ ಭರದಿಂದ ಮುಂದುವರಿಯಲು ಬಯಸುವಂತವರಿಗೆ ಒಂದು ಬಹಳ ಮುಖ್ಯವಾದ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಅಪೊಸ್ತಲ ಪೌಲನು ಇದರಲ್ಲಿ ಹಂಚಿಕೊಂಡಿರುವ ಅನುಭವ ಆತನು ಕ್ರೈಸ್ತನಾಗಿ ಹುಟ್ಟಿದ ನಂತರದ್ದಾಗಿದೆ, ಏಕೆಂದರೆ ಮಾನಸಾಂತರ ಹೊಂದದಿರುವ ಒಬ್ಬ ವ್ಯಕ್ತಿಯು, "ನಾನು ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದ ಪಡುವವನಾಗಿದ್ದೇನೆ," ಎಂದು ಹೇಳಲಾರನು (ರೋಮಾ. 7:22).

ರೋಮಾಪುರದವರಿಗೆ ಪೌಲನು ಬರೆದ ಪತ್ರವು, ಅದರ ಮೊದಲನೇ ಅಧ್ಯಾಯದಿಂದ ಆರಂಭಿಸಿ, "ದೇವರ ಬಲಸ್ವರೂಪವಾದ ಸುವಾರ್ತೆಯ ಮೂಲಕ ಉಂಟಾಗುವ ರಕ್ಷಣೆ" (ರೋಮಾ. 1:16) ಎಂಬ ವಿಷಯವನ್ನು ಕ್ರಮಬದ್ಧವಾಗಿ ವಿವರಿಸುತ್ತದೆ. 3, 4 ಮತ್ತು 5ನೇ ಅಧ್ಯಾಯಗಳಲ್ಲಿ, ನಾವು ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸಲ್ಪಡುವುದರ ಬಗ್ಗೆ ಪೌಲನು ಹೇಳುತ್ತಾನೆ; ಆ ಮೇಲೆ ರೋಮಾಪುರದವರಿಗೆ 6ನೇ ಅಧ್ಯಾಯದಲ್ಲಿ, ಪಾಪದ ಮೇಲೆ ಜಯದ ಬಗ್ಗೆ ಮಾತನಾಡುತ್ತಾನೆ. ಇದರ ನಂತರ ಪೌಲನು 7ನೇ ಅಧ್ಯಾಯದಲ್ಲಿ ಮುಂದಿನ ಹಂತಕ್ಕೆ ಹೋಗುತ್ತಾನೆ. ಇದನ್ನು ಬರೆಯುವ ಸಮಯದಲ್ಲಿ ಆತನು ತನ್ನ ಮಾನಸಾಂತರಕ್ಕೆ ಹಿಂದಿನ ಅವಧಿಗೆ ತಿರುಗಿ ಹೋಗುವುದಿಲ್ಲ. ಇಲ್ಲ. ಅವನು ಸುವಾರ್ತೆ ಹೇಗೆ ಪ್ರಗತಿ ಸಾಧಿಸುತ್ತದೆಂದು ವಿವರಿಸುತ್ತಾನೆ. ಪರಿಪೂರ್ಣತೆಯ ಕಡೆಗೆ ಭರದಿಂದ ನಡೆಯಲು ಆಸಕ್ತನಾದ ಒಬ್ಬ ವ್ಯಕ್ತಿಯು ತನ್ನ ಆಂತರಿಕ ಜೀವನದಲ್ಲಿ ಎದುರಿಸುವ ಹೋರಾಟವನ್ನು ಅವನು ಇಲ್ಲಿ ವಿವರಿಸುತ್ತಾನೆ. ಆ ವ್ಯಕ್ತಿಯು ಇನ್ನು ಮುಂದೆ ತನ್ನ ಜಾಗ್ರತ ಜೀವಿತದಲ್ಲಿ ದೇವರ ಚಿತ್ತವನ್ನು ಮಾತ್ರ ಮಾಡುವ ನಿರ್ಣಯವನ್ನು ಮಾಡಿದ್ದಾನೆ. ಅವನು ಹೋರಾಟದಲ್ಲಿ ಜಯ ಗಳಿಸಲು ಇಚ್ಛಿಸುತ್ತಾನೆ ಮತ್ತು ತನ್ನ ಅಗತ್ಯತೆಯ ಸಮಯದಲ್ಲಿ ಸಮಯೋಚಿತ ಕೃಪೆಯನ್ನು ಕಂಡುಕೊಂಡಿದ್ದಾನೆ. ಆದಾಗ್ಯೂ, ಎರಡು ವಿಷಯಗಳು ಆತನ ಗಮನಕ್ಕೆ ಬರುತ್ತವೆ: (i) ಅತನು ಗಮನಿಸದಿರುವ ಕ್ಷಣದಲ್ಲಿ, ಈಗಾಗಲೇ ಬೆಳಕನ್ನು ಹೊಂದಿರುವ ಕ್ಷೇತ್ರದಲ್ಲಿಯೇ ಇನ್ನೂ ಬೀಳುತ್ತಿದ್ದಾನೆ (ಇದು ಅರಿವಿದ್ದು ಮಾಡುವ ಪಾಪ); ಮತ್ತು (ii) ಕೆಲವೊಮ್ಮೆ ಒಬ್ಬ ಕ್ರೈಸ್ತನು ನಡೆಯಬೇಕಾದಂತೆ ನಡೆಯಲು ಅವನಿಗೆ ಸಾಧ್ಯವಾಗಿಲ್ಲ ಮತ್ತು ಆತನು ಬಿದ್ದ ನಂತರವೇ ಇದನ್ನು ಅರಿತುಕೊಂಡಿದ್ದಾನೆ (ಬೀಳುವುದಕ್ಕೆ ಮೊದಲು ಈ ಹೊಸ ಕ್ಷೇತ್ರದ ಬಗ್ಗೆ ಅವನಿಗೆ ತಿಳುವಳಿಕೆ ಇರಲಿಲ್ಲ - ಇದು ಅರಿವಿಲ್ಲದ ಪಾಪ).

ಯಾರಿಗೆ ಸಂಪೂರ್ಣ ಪರಿಪೂರ್ಣತೆಯಲ್ಲಿ ಆಸಕ್ತಿ ಇಲ್ಲವೋ, ಅವನಿಗೆ ಈ ಹೋರಾಟ ಇರುವುದಿಲ್ಲ, ಯಾಕೆಂದರೆ ಅವನು ’ರೋಮಾಪುರದವರಿಗೆ 5ನೇ ಅಧ್ಯಾಯ’ದಲ್ಲೇ ನಿಂತುಬಿಟ್ಟಿದ್ದಾನೆ. ಎಲ್ಲಾ ಪಾಪದ ಮೇಲೆ ಸಂಪೂರ್ಣ ಜಯಹೊಂದಲು ಯಾರು ಪ್ರಯತ್ನಿಸುತ್ತಾನೋ (ರೋಮಾ. 6:14) , ಅವನು ಈ ಹೋರಾಟವನ್ನು ಎದುರಿಸುತ್ತಾನೆ ಮತ್ತು "ಅಯ್ಯೋ, ನಾನು ಎಂತಹ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಮತ್ತೆ ಮತ್ತೆ ಆತ್ಮಿಕ ಮರಣಕ್ಕೆ ಒಳಗಾಗಿ ಪಾಪದ ವಶದಲ್ಲಿರುವ ನನ್ನ ದೇಹದಿಂದ ಯಾರು ನನ್ನನ್ನು ಬಿಡಿಸುವವರು?" ಎಂದು ತನ್ನೊಳಗೆ ಕೊರಗುತ್ತಾನೆ (ರೋಮಾ. 7:24) .

ಯಾರು ಇಂತಹ ಹೋರಾಟವನ್ನು ಎದುರಿಸುತ್ತಿರುವುದಾಗಿ ಒಪ್ಪಿಕೊಳ್ಳುವುದಿಲ್ಲವೋ, ಅವರು ತಮ್ಮ ಒಳಜೀವಿತದ ನಿಜಸ್ಥಿತಿಯನ್ನು ಒಪ್ಪಿಕೊಳ್ಳುತ್ತಿಲ್ಲ. ಇಲ್ಲಿ ನಮಗೆ ಶ್ರೇಷ್ಠವಾದ ನಿರೀಕ್ಷೆಯನ್ನು ನೀಡುವ ಒಂದು ವಿಷಯವನ್ನು ಗಮನಿಸಿರಿ: ನಾವು ಬಲಹೀನತೆಯ ಒಂದು ಕ್ಷಣದಲ್ಲಿ ಪಾಪ ಮಾಡಿದಾಗ, ನಾವು ಒಂದು ಪಾಪಕಾರ್ಯವನ್ನು ಮಾಡಿದ್ದೇವೆ - ಹೌದು, ನಾವು ಅದಕ್ಕಾಗಿ ಪಶ್ಚಾತ್ತಾಪಪಟ್ಟು ಅರಿಕೆ ಮಾಡಿ, ಮತ್ತು ಅದನ್ನು ತ್ಯಜಿಸಿ, ಕ್ರಿಸ್ತನು ತನ್ನ ರಕ್ತದಿಂದ ನಮ್ಮನ್ನು ಶುದ್ಧೀಕರಿಸ ಬೇಕೆಂದು ಆತನನ್ನು ಕೇಳಿಕೊಳ್ಳಬೇಕು. ಆದಾಗ್ಯೂ ಇದು ನಾವು ಅರಿವಿದ್ದು ಮಾಡಬಯಸಿದ ಕಾರ್ಯವಲ್ಲ. ಇದನ್ನು ಸ್ಪಷ್ಟವಾಗಿ ತೋರಿಸುವಂಥದ್ದು ಯಾವುದೆಂದರೆ, ಅದನ್ನು ಮಾಡಿದ ನಂತರ ನಾವು ಅದಕ್ಕಾಗಿ ಪಶ್ಚಾತ್ತಾಪ ಪಟ್ಟಿರುವುದು. ನಾವು ಇಂತಹ ಪಾಪದ ಕೃತ್ಯಗಳನ್ನು ದ್ವೇಷಿಸಿ ಅವುಗಳಿಗಾಗಿ ದುಃಖಿಸುತ್ತಿದ್ದರೆ, ಒಂದು ದಿನ ನಾವು ಪಾಪಗಳ ಮೇಲೆ ಜಯಶಾಲಿಗಳಾಗುತ್ತೇವೆ.

ರೋಮಾಪುರದವರಿಗೆ 7ನೇ ಅಧ್ಯಾಯವನ್ನು ಶ್ರದ್ಧೆಯಿಂದ ಓದಿಕೊಳ್ಳಿರಿ ಮತ್ತು ಈ ವಚನಗಳ ಬಗ್ಗೆ ನಿಮಗೆ ಬೆಳಕನ್ನು ಕೊಡಬೇಕೆಂದು ದೇವರನ್ನು ಕೇಳಿಕೊಳ್ಳಿರಿ. ’ ರೋಮಾಪುರದವರಿಗೆ 7:1-13'ರ ವಾಕ್ಯಭಾಗವು, ನಾವು ಧರ್ಮಶಾಸ್ತ್ರದ ನಿಯಮಗಳ ಮಾರ್ಗದರ್ಶನದಿಂದ ಮುಕ್ತರಾಗುವುದು ಹೇಗೆಂದು ವಿವರಿಸುತ್ತದೆ. ಈಗ ನಾವು ಕ್ರಿಸ್ತನನ್ನು ವಿವಾಹವಾಗಿದ್ದೇವೆ, ಹಾಗಾಗಿ ಈಗ ಧರ್ಮಶಾಸ್ತ್ರದ ನಿಯಮಗಳಿಗಿಂತ ಮೇಲ್ಮಟ್ಟದಲ್ಲಿ ಜೀವಿಸುತ್ತೇವೆ, ಆದರೆ ದೇವರ ಆಜ್ಞೆಗಳು ಕೇವಲ ವಿಧಿ-ನಿಯಮಗಳೆಂಬ ಮನೋಭಾವ ನಮ್ಮಲ್ಲಿಲ್ಲ. ನಮ್ಮಲ್ಲಿ "ಧರ್ಮಶಾಸ್ತ್ರಕ್ಕೆ ತೋರಿಕೆಯ ವಿಧೇಯತೆ ಇರುವುದಿಲ್ಲ, ಆದರೆ ನಾವು ಹೊಸ ರೀತಿಯಲ್ಲಿ ಪವಿತ್ರಾತ್ಮ ಪ್ರೇರಿತರಾಗಿ ದೇವರ ಸೇವೆ ಮಾಡುತ್ತೇವೆ" (ರೋಮಾ. 7:6).

ಯಾರು ಪಾಪದ ವಿರುದ್ಧ ತಮ್ಮ ಹೋರಾಟಗಳ ಬಗ್ಗೆ ಯಥಾರ್ಥರಾಗಿ ಇರುವುದಿಲ್ಲವೋ, ಅವರು ಜಯವನ್ನು ಪಡೆಯುವುದಿಲ್ಲ. ಈ ನಿಟ್ಟಿನಲ್ಲಿ ಪ್ರಮುಖ ಪ್ರಶ್ನೆ ಏನೆಂದರೆ, ನಾವು ರೋಮಾಪುರದವರಿಗೆ 7ನೇ ಅಧ್ಯಾಯವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇವೋ ಎಂದಲ್ಲ, ಆದರೆ ನಮ್ಮೊಳಗೆ ನಡೆಯುತ್ತಿರುವ ಹೋರಾಟಗಳ ಬಗ್ಗೆ ನಾವು ಸಂಪೂರ್ಣವಾಗಿ ಪ್ರಾಮಾಣಿಕರಾಗಿ ಇದ್ದೇವೋ, ಇಲ್ಲವೋ ಎಂಬುದಾಗಿದೆ. ಯಾರು ತಮ್ಮ ಮನಸ್ಸಿನ ಹೋರಾಟಗಳಲ್ಲಿ ಪ್ರಾಮಾಣಿಕರಾಗಿಲ್ಲವೋ - ಅವರು ಕಪಟಿಗಳು - ಅವರಿಂದ ದೂರ ಸರಿಯಬೇಕೆಂದು ನಾನು ನಿಮ್ಮನ್ನು ಬಲವಾಗಿ ಒತ್ತಾಯಿಸುತ್ತೇನೆ. ನಿಮ್ಮಲ್ಲಿ ವಿವೇಚನೆ ಇರಬೇಕು. ಸರ್ಪಗಳಂತೆ ಜಾಣರೂ, ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ. ದೇವರು ನಿಮ್ಮಿಂದ ಅಪೇಕ್ಷಿಸುವ ಅತಿ ಮುಖ್ಯ ಸಂಗತಿ ಯಥಾರ್ಥತೆಯಾಗಿದೆ, ಎಂಬುದನ್ನು ನೆನಪಿರಿಸಿಕೊಳ್ಳಿರಿ. ಪರಿಶುದ್ಧತೆಯ ಕಡೆಗೆ ಸಾಗುವುದಕ್ಕೆ ಮೊದಲ ಹೆಜ್ಜೆ ಇದಾಗಿದೆ.