ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ಒಬ್ಬ ವಿಶ್ವಾಸಿಯು ದೇವರ ಮುಖದ ಮುಂದೆ ಜೀವಿಸದಿದ್ದರೆ, ಬಹಳ ಸುಲಭವಾಗಿ ಅವನಿಗೆ ತನ್ನ ನಿಜವಾದ ಆತ್ಮಿಕ ಸ್ಥಿತಿಯ ವಿಷಯದಲ್ಲಿ ಮಂಕು ಕವಿಯುತ್ತದೆ. ಈ ವಿಷಯವು ಪ್ರಕಟಣೆ ಪುಸ್ತಕದಲ್ಲಿ ಕರ್ತನು ಏಳು ಸಭೆಗಳ ಹಿರಿಯರನ್ನು ಗದರಿಸಿದ್ದರಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆತನು ಲವೊದಿಕೀಯದಲ್ಲಿದ್ದ ಸಭೆಯ ದೂತನಿಗೆ (ಸಂದೇಶಕನಿಗೆ) ಹೇಳಿದ ಮಾತು, "ನೀನು ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬಟ್ಟೆಯಿಲ್ಲದವನು ಆಗಿರುವುದನ್ನು ತಿಳಿಯದೆ ಇದ್ದೀ" (ಪ್ರಕ. 3:17).

ದೇವರು ನಮ್ಮ ಹೃದಯಗಳಲ್ಲಿ ಅಡಗಿರುವುದನ್ನು ಪ್ರಕಟಪಡಿಸುವುದಕ್ಕಾಗಿ, ನಮ್ಮ ಜೀವಿತಗಳಲ್ಲಿ ವಿಭಿನ್ನ ಪರಿಸ್ಥಿತಿಗಳು ಸಂಭವಿಸುವುದನ್ನು ಅನುಮತಿಸುತ್ತಾರೆ. ನಮ್ಮ ಹಲವಾರು ವರ್ಷಗಳ ಜೀವಿತದಲ್ಲಿ, ನಾವು ಬೇರೆ ಬೇರೆ ಜನರ ಮೂಲಕ ಪಡೆದಿರುವ ಕಷ್ಟಕರ ಅನುಭವಗಳ ಕಹಿ ನೆನಪುಗಳನ್ನು ನಾವು ನಮ್ಮ ಹೃದಯಗಳಲ್ಲಿ ಶೇಖರಿಸಿದ್ದೇವೆ. ಇವು ನಮ್ಮ ಹೃದಯಗಳ ತಳದಲ್ಲಿ ಅಡಗಿರುತ್ತವೆ - ಮತ್ತು ನಾವು ನಮ್ಮ ಹೃದಯಗಳು ಚೊಕ್ಕವಾಗಿವೆಯೆಂದು ಯೋಚಿಸುತ್ತೇವೆ. ಹೀಗಿರುವಾಗ ದೇವರು ಯಾವುದೋ ಒಂದು ಸಣ್ಣ ಘಟನೆಯು ಸಂಭವಿಸುವದಕ್ಕೆ ಅವಕಾಶ ನೀಡುತ್ತಾರೆ, ಮತ್ತು ಅದು ಒಳಗಿರುವ ಎಲ್ಲಾ ಅಹಿತಕರ ಸಂಗತಿಗಳನ್ನು ಕದಡಿ ಮೇಲಕ್ಕೆತ್ತಿ ನಮ್ಮ ಮನಸ್ಸಿಗೆ ತರುತ್ತದೆ. ಆಗ ನಾವು ಆ ಕಲ್ಮಶವನ್ನು ತೊಲಗಿಸಿ, ಅದಕ್ಕೆ ಸಂಬಂಧಿಸಿದ ಜನರನ್ನು ಕ್ಷಮಿಸಿ, ಅವರನ್ನು ಪ್ರೀತಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಇಂತಹ ಅವಕಾಶ ಬಂದಾಗ ನಾವು ನಮ್ಮ ಹೃದಯಗಳಿಂದ ಕಲ್ಮಶಗಳನ್ನು ತೆಗೆದುಹಾಕದಿದ್ದರೆ, ಆ ಘಟನೆಯ ನಂತರ ಅವೆಲ್ಲವೂ ಮತ್ತೊಮ್ಮೆ ಹೃದಯದ ತಳಕ್ಕೆ ಇಳಿದು ಅಲ್ಲಿ ನೆಲೆಸುತ್ತವೆ. ನಾವು ಎಲ್ಲವೂ ಸರಿಹೋಯಿತೆಂದು ಯೋಚಿಸಬಹುದು. ಆದರೆ ಹಾಗೆ ಆಗಿರುವುದಿಲ್ಲ. ಇನ್ನೊಂದು ಚಿಕ್ಕ ಪ್ರಸಂಗವು ಮತ್ತೊಮ್ಮೆ ಎಲ್ಲವನ್ನು ನಮಗೆ ಜ್ಞಾಪಕಪಡಿಸುತ್ತದೆ. ಹಾಗಾಗಿ ಪ್ರತೀ ಬಾರಿ ಯಾವುದೋ ಕೆಟ್ಟ ಯೋಚನೆ ಮೇಲೆದ್ದು ಬಂದಾಗ, ನಾವು ಅದನ್ನು ತೆಗೆದುಹಾಕಿ ನಮ್ಮನ್ನು ಸ್ವಚ್ಛಪಡಿಸಿಕೊಳ್ಳಬೇಕು.

"ದುಂದುಗಾರ ಮಗ"ನ ಸಾಮ್ಯದ ದೊಡ್ಡಣ್ಣನನ್ನು ನೋಡಿದರೆ, ಆತನಲ್ಲಿ ತಮ್ಮನ ಕುರಿತಾಗಿ ತಪ್ಪಾದ ಮನೋಭಾವ ಇದ್ದುದನ್ನು ನಾವು ಕಾಣಬಹುದು. ಆದಾಗ್ಯೂ, ಆ ಭಾವನೆ ಹೊರಬಂದದ್ದು ಆ ತಮ್ಮನು ತನ್ನ ತಂದೆಯ ಬಳಿಗೆ ಹಿಂದಿರುಗಿದ ನಂತರ, ಮತ್ತು ಅವನಿಗಾಗಿ ಒಂದು ಹಬ್ಬ ಆಚರಿಸಲ್ಪಟ್ಟ ಸಂದರ್ಭದಲ್ಲಿ. ಆ ಅಣ್ಣನು ತನ್ನ ತಮ್ಮನ ಮೇಲೆ ಆಪಾದನೆಗಳನ್ನು ಹೊರಿಸುವಾಗ, ತನ್ನ ಮನಸ್ಸಿನ ಕಲ್ಪನೆಗಳು ಸರಿಯೋ, ತಪ್ಪೋ ಎಂದು ಪರೀಕ್ಷಿಸದೆ (ಉದಾಹರಣೆಗಾಗಿ, ತಮ್ಮನು "ಸೂಳೆಯರನ್ನು ಕಟ್ಟಿಕೊಂಡು ತಂದೆಯ ಬದುಕನ್ನು ನುಂಗಿಬಿಟ್ಟನು," ಎಂದು ಹೇಳಿದ್ದು, ಲೂಕ. 15:30), ದೂಷಣೆಯನ್ನು ಮಾಡುವುದನ್ನು ನಾವು ನೋಡುತ್ತೇವೆ. ನಮಗೆ ಯಾರೊಂದಿಗಾದರೂ ಒಳ್ಳೆಯ ಹೊಂದಾಣಿಕೆ ಇಲ್ಲದಿರುವಾಗ, ನಾವು ಯಾವಾಗಲೂ ಆತನ ಬಗ್ಗೆ ಅತಿ ಕೆಟ್ಟದಾದ ಸಂಗತಿಗಳನ್ನು ನಂಬುತ್ತೇವೆ.

ತಂದೆಯು ತನ್ನ ಹಿರೀಮಗನಿಗೆ, "ಕಂದಾ, ನನ್ನದೆಲ್ಲಾ ನಿನ್ನದೇ" (ಲೂಕ. 15:31), ಎಂದು ಹೇಳುತ್ತಾನೆ. ತಂದೆಯು ತನಗೆ ಕೊಟ್ಟಿದ್ದ ಸ್ವತ್ತಿನ ಬಗ್ಗೆ ಆತನು ಯೋಚಿಸದೆ, ತಾನು ಮಾಡಿದ್ದ ಕೆಲಸಗಳನ್ನು ಮಾತ್ರ ನೆನಪಿಸಿಕೊಳ್ಳುತ್ತಾನೆ: "ಇಷ್ಟು ವರುಷ ನಿನ್ನ ಸೇವೆ ಮಾಡಿದ್ದೇನೆ, ಮತ್ತು ನಾನು ನಿನ್ನ ಒಂದು ಅಪ್ಪಣೆಯನ್ನಾದರೂ ಎಂದೂ ಮೀರಲಿಲ್ಲ". ಅವನ ತಮ್ಮನ ಕುಂದುಕೊರತೆಗಳು ಸಹ ಅವನ ಆಲೋಚನೆಗಳಲ್ಲಿ ತುಂಬಿದ್ದವು, "ನಿನ್ನ ಈ ಮಗನು ನಿನ್ನ ಬದುಕನ್ನು ನುಂಗಿಬಿಟ್ಟಿದ್ದಾನೆ" (ಲೂಕ. 15:29-32). ದೇವರು ಸಹ, ಆ ತಂದೆಯಂತೆ ನಮಗೆ ಈ ಮಾತನ್ನು ಹೇಳುತ್ತಾರೆ, "ನನ್ನದೆಲ್ಲಾ ನಿನ್ನದೇ". ಯೇಸುವಿನಲ್ಲಿ ಇರುವ ಪ್ರತಿಯೊಂದು ಸಂಗತಿಯೂ ನಮ್ಮದಾಗಿದೆ - ಆತನ ಸಕಲ ಪರಿಶುದ್ಧತೆ, ಆತನ ಸಕಲ ಒಳ್ಳೆಯತನ, ಆತನ ಅಪಾರ ಸಹನೆ, ಆತನ ಅಪಾರ ದೀನತೆ, ಇತ್ಯಾದಿ.

ಈ ದೃಷ್ಟಾಂತದಿಂದ ನಾವು ಕಲಿಯಬೇಕಾದ ಪಾಠ ಇಷ್ಟು ಮಾತ್ರ: ಯಾವಾಗಲೂ ದೇವರ ಕೃಪಾತಿಶಯದ ಬಗ್ಗೆ ಯೋಚಿಸಿರಿ - ಮತ್ತು ನೀವು ಮಾಡಿರುವ ಕಾರ್ಯಗಳು, ಅಥವಾ ನಿಮ್ಮ ಸಹ-ವಿಶ್ವಾಸಿಗಳ ತಪ್ಪುಗಳ ಕುರಿತಾಗಿ ಅಲ್ಲ.

ಕೃಪೆಯಲ್ಲಿಯೂ ಹಾಗೂ ನಮ್ಮ ಕರ್ತ ಮತ್ತು ರಕ್ಷಕನಾಗಿರುವ ಯೇಸು ಕ್ರಿಸ್ತನ ವಿಷಯದ ಜ್ಞಾನದಲ್ಲಿಯೂ ಅಭಿವೃದ್ಧಿ ಹೊಂದುತ್ತಾ ಇರುವುದು ನಮ್ಮ ಗುರಿಯಾಗಿರಬೇಕು (2 ಪೇತ್ರ. 3:18). ಕೃಪೆಯ ಇನ್ನೊಂದು ನಿಖರವಾದ ವಿವರಣೆ ಹೀಗಿದೆ: "ನೀವು ಆಶೀರ್ವಾದ ಹೊಂದುವುದಕ್ಕಾಗಿ, ಕೃಪೆಯು ಐಶ್ವರ್ಯವಂತನಾಗಿದ್ದ ಯೇಸುವನ್ನು ನಿಮಗೋಸ್ಕರ ಬಡತನದಲ್ಲಿ ಸೇರಿಸಿತು." (2 ಕೊರಿ. 8:9 - ಭಾವಾನುವಾದ). ಕೃಪೆಯು ನಮ್ಮ ಜೀವಿತಗಳಲ್ಲೂ ಇದೇ ಕಾರ್ಯವನ್ನು ಮಾಡುತ್ತದೆ. ಕೊರತೆಯಲ್ಲಿರುವ ಈ ಲೋಕಕ್ಕೆ ನಾವು ಆಶೀರ್ವಾದವನ್ನು ತರುವುದಾದರೆ, ಅದಕ್ಕಾಗಿ ನಾವು ಅಲ್ಪರು, ಗೌರವಿಸಲ್ಪಡದವರು ಮತ್ತು ಇತರರ ತಿರಸ್ಕಾರಕ್ಕೂ ಒಳಗಾದವರು ಮತ್ತು ಬೇರೆಯವರ ದೃಷ್ಟಿಯಲ್ಲಿ ದರಿದ್ರರು ಆಗುವ ಮನಸ್ಸನ್ನು ಕೃಪೆಯು ನಮಗೆ ಕೊಡುತ್ತದೆ. ಯೇಸುವು ತನ್ನ ತಂದೆಯಿಂದ ಕೃಪೆಯ ಅಭಿಷೇಕವನ್ನು ಪಡೆದುದರಿಂದ, ಆತನು ಉಪಕಾರಗಳನ್ನು ಮಾಡುತ್ತಾ ಸಂಚರಿಸಿದನು (ಅ.ಕೃ. 10:38). ನಿಮಗೂ ಕೃಪೆಯು ಇದನ್ನೇ ಮಾಡುತ್ತದೆ - ನಿಮ್ಮನ್ನು ಇತರರಿಗೆ ಅಶೀರ್ವಾದ ನಿಧಿಯನ್ನಾಗಿ ಮಾಡುತ್ತದೆ.

ಯೇಸುವು ಒಂದು ಕಷ್ಟಕರ ಸನ್ನಿವೇಶವನ್ನು ಎದುರಿಸಿದಾಗ, ’ತಂದೆಯೇ, ಈ ಪರಿಸ್ಥಿತಿಯಿಂದ ನನ್ನನ್ನು ತಪ್ಪಿಸು,’ ಎಂದು ಹೇಳಲಿಲ್ಲ, ಆದರೆ "ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ," ಎಂದು ಪ್ರಾರ್ಥಿಸಿದನು (ಯೋಹಾ. 12:28). ನೀವೂ ಸಹ ಕಷ್ಟಕರ ಸನ್ನಿವೇಶಗಳಲ್ಲಿ ಇದೇ ಪ್ರಾರ್ಥನೆಯನ್ನು ಮಾಡಬೇಕು. ಸಲೀಸಾದ ಜೀವನ ನಿಮ್ಮ ಧ್ಯೇಯವಾಗಿರಬಾರದು, ಆದರೆ ನೀವು ಎಂತಹ ಕಷ್ಟ-ನಷ್ಟವನ್ನಾದರೂ ಸಹಿಸಿಕೊಂಡು, ದೇವರನ್ನು ಮಹಿಮೆ ಪಡಿಸುವ ಜೀವನವನ್ನು ಜೀವಿಸಬೇಕು. ದೇವರು ನಿಮಗಾಗಿ ನೇಮಿಸಿರುವ ಕಠಿಣ ಜನರು ಅಥವಾ ಕಠಿಣ ಪರಿಸ್ಥಿತಿಯನ್ನು ದೂರ ಮಾಡುವಂತೆ ದೇವರನ್ನು ಕೇಳಬೇಡಿರಿ. ಆ ಪರಿಸ್ಥಿತಿಯಲ್ಲಿ ನಿಮ್ಮನ್ನೇ ಬದಲಾಯಿಸುವಂತೆ ದೇವರನ್ನು ಕೇಳಿಕೊಳ್ಳಿರಿ. ಹೀಗೆ ಪ್ರಾರ್ಥಿಸುವವರು ಕೃಪೆಯಲ್ಲಿ ಅಭಿವೃದ್ಧಿ ಹೊಂದುತ್ತಾ ಸಾಗುತ್ತಾರೆ - ಮತ್ತು ಹಿಂದಿನ ಜೀವಿತದಲ್ಲಿ ಅನೇಕ ಸೋಲುಗಳನ್ನು ಅನುಭವಿಸಿದ್ದರೂ, ಅವರು ನಿಜವಾದ ದೇವಭಕ್ತರಾಗಿ ಬದಲಾಗುತ್ತಾರೆ. "ನನ್ನ ಕೃಪೆಯೇ ನಿನಗೆ ಸಾಕು" (2 ಕೊರಿ. 12:9), ಎಂಬ ವಾಗ್ದಾನದ ಬಗ್ಗೆ ಯೋಚಿಸಿರಿ. ದೇವರ ಕೃಪೆಯು ನೀವು ಕೈಗೊಳ್ಳಬೇಕಾದ ಪ್ರತಿಯೊಂದು ಕಾರ್ಯಕ್ಕೂ ಸಾಕಾಗುತ್ತದೆ ಮತ್ತು ಅದು ನೀವು ಯಾವುದೇ ಸಮಯದಲ್ಲಿ ಎದುರಿಸ ಬೇಕಾಗುವ ಪ್ರತಿಯೊಂದು ಪರೀಕ್ಷೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಸಮರ್ಥವಾಗಿದೆ.