"ತೀರ್ಪುಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವುದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವುದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು. ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವುದೇಕೆ?
ನೀನು ನಿನ್ನ ಸಹೋದರನಿಗೆ - ನಿನ್ನ ಕಣ್ಣಿನೊಳಗಿಂದ ರವೆಯನ್ನು ತೆಗೆಯುತ್ತೇನೆ ಬಾ, ಎಂದು ಹೇಳುವದು ಹೇಗೆ? ನಿನ್ನ ಕಣ್ಣಿನಲ್ಲಿ ತೊಲೆಯಿದೆಯಲ್ಲಾ. ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದುಹಾಕಿಕೋ; ಆಮೇಲೆ ನಿನ್ನ ಸಹೋದರನ ಕಣ್ಣಿನೊಳಗಿಂದ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು" (ಮತ್ತಾ. 7:1-5).
ನಮ್ಮಲ್ಲಿ ಪ್ರತಿಯೊಬ್ಬರು ಯಾವಾಗಲೂ ನಮ್ಮನ್ನೇ ತೀರ್ಪುಮಾಡಿಕೊಳ್ಳುವುದನ್ನು ಮತ್ತು ಎಂದಿಗೂ ಇತರರನ್ನು ತೀರ್ಪುಮಾಡದಿರುವುದನ್ನು ನಿರಂತರವಾಗಿ ನೆನಪಿಟ್ಟುಕೊಳ್ಳುವುದು ಅವಶ್ಯವಾಗಿದೆ.
ನಮ್ಮೆಲ್ಲರಿಗೆ ವಿವೇಚನೆ ಅವಶ್ಯವಾಗಿ ಬೇಕಾಗಿದೆ - ಆದರೆ ವಿವೇಚನೆ ಒಂದು ಆತ್ಮಿಕ ಗುಣವಾಗಿದೆ, ಇತರರನ್ನು ತೀರ್ಪುಮಾಡುವ ಶರೀರಭಾವದ ಕಾರ್ಯಕ್ಕಿಂತ ಇದು ಬಹಳ ವಿಭಿನ್ನವಾಗಿದೆ.
ನಾವೆಲ್ಲರೂ ರೋಮಾ. 14ನೇ ಅಧ್ಯಾಯವನ್ನು ಆಗಾಗ ಧ್ಯಾನಿಸುತ್ತಿರಬೇಕು. ಹಾಗೆ ಮಾಡುವುದರಿಂದ ದೇವರು ಅನೇಕ ಕ್ಷೇತ್ರಗಳಲ್ಲಿ ತನ್ನ ಮಕ್ಕಳಿಗೆ ಕೊಡುವಂತ ಸ್ವಾತಂತ್ರ್ಯವನ್ನು ನಾವು ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳಲು ನಮಗೆ ಸಾಧ್ಯವಾಗುತ್ತದೆ.
ನಾವು ಇತರರನ್ನು ತೀರ್ಪುಮಾಡುವ ಸಾಧ್ಯತೆಯಿರುವ ಕೆಲವು ನಿದರ್ಶನಗಳು
(ನೇರವಾಗಿ ಅಥವಾ ನಮ್ಮ ಮನಸ್ಸಿನೊಳಗೆ ) ಈ ಕೆಳಗೆ ಕೊಡಲ್ಪಟ್ಟಿವೆ. ನಾವು ಇಂತಹ ವಿಷಯಗಳಲ್ಲಿ ಇತರರ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಕೊಡುವುದು ಸರಿಯಲ್ಲ (ಅಥವಾ ನಮ್ಮ ಮನಸ್ಸಿನಲ್ಲೂ ನಾವು ಇವನ್ನು ಯೋಚಿಸಬಾರದು):
- ಇನ್ನೊಬ್ಬರು ಒಂದು ಕಾರನ್ನು (ಅಥವಾ ಎರಡು ಕಾರುಗಳನ್ನು!) ಹೊಂದಿರಬಹುದೇ ? ಅಥವಾ ಅದು ಯಾವ ಮಾಡೆಲ್ ನ ಕಾರು ಆಗಿರಬೇಕು.
- ಇನ್ನೊಬ್ಬರ ಮನೆ ಯಾವ ಮಟ್ಟಕ್ಕಿಂತ ಹೆಚ್ಚು ಭವ್ಯವಾದದ್ದು ಆಗಿರಬಾರದು
- ಇನ್ನೊಬ್ಬರು ತಮ್ಮ ಮನೆಯಲ್ಲಿ ದುಬಾರಿ ಸಾಧನಗಳನ್ನು ಬಳಸಿಕೊಳ್ಳಬಹುದೇ?
- ಇನ್ನೊಬ್ಬರು ತಮ್ಮ ಮಕ್ಕಳಿಗೆ ಎಷ್ಟು ಉನ್ನತ ಶಿಕ್ಷಣವನ್ನು ನೀಡಬಹುದು?
- ಇನ್ನೊಬ್ಬರು ಹೆಚ್ಚಿನ ಹಣ ಗಳಿಸಲಿಕ್ಕಾಗಿ ಬೇರೆ ಊರಿಗೆ, ಅಥವಾ ವಿದೇಶಕ್ಕೆ ವಲಸೆ ಹೋಗಬಹುದೇ?
- ಇನ್ನೊಬ್ಬರು ಎಷ್ಟು ಆಸ್ತಿಯನ್ನು ಹೊಂದಿರಬಹುದು? ಅಥವಾ ಅವರು ಬ್ಯಾಂಕ್ ಖಾತೆಯಲ್ಲಿ ಎಷ್ಟು ಉಳಿತಾಯವನ್ನು ಹೊಂದಿರಬೇಕು? (ಗಮನಿಸಿರಿ: ನಮಗಾಗಿ ಹಣವನ್ನು ಕೂಡಿಟ್ಟುಕೊಳ್ಳಬಾರದು. ಮತ್ತಾ. 6:19); ಆದರೆ ತಂದೆತಾಯಿಯಾರು ಮಕ್ಕಳಿಗೋಸ್ಕರ ಕೂಡಿಸಿ ಇಡಬೇಕೆಂದು ಆಜ್ಞಾಪಿಸಲಾಗಿದೆ (2 ಕೊರಿಂಥದ. 12:14; 1 ತಿಮೊಥೆ. 5:8).
- ದುಬಾರಿ ಹೋಟೆಲ್‍ಗಳಲ್ಲಿ ತಂಗಬಹುದೇ? ಅಥವಾ ದುಬಾರಿ ಉಪಹಾರಗೃಹಗಳಲ್ಲಿ ಊಟತಿಂಡಿ ಮಾಡಬಹುದೇ?
- ಒಬ್ಬ ಸಹೋದರಿಯು ಆಭರಣಗಳನ್ನು ಅಥವಾ ಬೆಲೆಬಾಳುವ ಸೀರೆ/ಉಡುಪನ್ನು ಧರಿಸಬಹುದೇ? (ಯಾವುದು "ದುಬಾರಿ"ಯೆಂದು ನಿರ್ಣಯಿಸುವವರು ಯಾರು?), ಅಥವಾ ಸಲ್ವಾರ್-ಕಮೀಜನ್ನು ಇಲ್ಲವೇ ಮಹಿಳೆಯರ ಪ್ಯಾಂಟನ್ನು ಹಾಕಿಕೊಳ್ಳಬಹುದೇ? (ಸ್ತ್ರೀಯರು ಉಡುಪನ್ನು ಡಂಭವಿಲ್ಲದೆ ಧರಿಸಬೇಕೆಂದು ಸತ್ಯವೇದವು ಆಜ್ಞಾಪಿಸುತ್ತದೆ - ಹಾಗಾಗಿ ದೇಹವನ್ನು ಪ್ರದರ್ಶಿಸುವಂತ, ಬಿಗಿಯಾದ, ಪ್ರಚೋದನಾತ್ಮಕ ವಿನ್ಯಾಸದ ಉಡುಪುಗಳನ್ನು ಧರಿಸದಂತೆ ನಾವು ಸಹೋದರಿಯರನ್ನು ಎಚ್ಚರಿಸಬೇಕು).
- ಪುರುಷರು ಕೂದಲನ್ನು ಉದ್ದವಾಗಿ ಬೆಳೆಸಿಕೊಳ್ಳಬಹುದೇ? (ಪ್ರಾಕೃತಿಕ ಜ್ಞಾನವು "ಕೂದಲನ್ನು ಕತ್ತರಿಸಬೇಕೆಂದು" ಹೇಳುತ್ತದೆ. ಆದರೆ ದೇವರು ಹಾಗೆಂದು ಏನೂ ಹೇಳಿಲ್ಲ - (1 ಕೊರಿ. 11:14). ಅದಲ್ಲದೆ "ಉದ್ದವಾದದ್ದು" ಅಥವಾ "ಚಿಕ್ಕದು" ಎಂದು ನಿರ್ಣಯಿಸುವವರು ಯಾರು?).
- ಸ್ತ್ರೀಯರು ಕೂದಲನ್ನು ಚಿಕ್ಕದಾಗಿ ಕತ್ತರಿಸಬಹುದೇ? (ಉದ್ದನೆಯ ಕೂದಲು ಅವಳಿಗೆ ಮಹಿಮೆಯನ್ನು ಕೊಡುತ್ತದೆ, ಆದರೆ ದೇವರು ಇದನ್ನು ಆಜ್ಞಾಪಿಸಲಿಲ್ಲ. 1 ಕೊರಿಂಥ. 11:15. ಅದಲ್ಲದೆ "ಉದ್ದವಾದದ್ದು" ಅಥವಾ "ಚಿಕ್ಕದು" ಎಂದು ನಿರ್ಣಯಿಸುವವರು ಯಾರು?).
- ಇನ್ನೊಬ್ಬರು ಅವನ/ಅವಳ ಕೂದಲಿಗೆ ಬಣ್ಣ ಹಚ್ಚಿಕೊಳ್ಳಬಹುದೇ?
- ಒಬ್ಬ ಸಹೋದರಿಯು ಯಾವುದೇ ವಿಧವಾದ ಮೇಕಪ್‍ನಿಂದ ಅಲಂಕಾರ ಮಾಡಿಕೊಳ್ಳಬಹುದೇ?
- ಯಾರಾದರೂ ಟಿವಿಯಲ್ಲಿ ಕ್ರೀಡೆಗಳನ್ನು ವೀಕ್ಷಿಸಬಹುದೇ? (ಅತಿಯಾಗಿ ವೀಕ್ಷಿಸುವುದು ಆ ವ್ಯಕ್ತಿ ಕರ್ತನೊಂದಿಗೆ ನಡೆಯುವುದಕ್ಕೆ ತಡೆಯಾಗುತ್ತದೆ. ಏಕೆಂದರೆ ಕ್ರೀಡಾಪ್ರೇಮವು ಬಹಳ ಸುಲಭವಾಗಿ ಒಂದು ವಿಗ್ರಹವಾಗುತ್ತದೆ ಮತ್ತು ಇದರ ಬಗ್ಗೆ ನಾವು ಜನರನ್ನು ಎಚ್ಚರಿಸಬೇಕು).
- ಒಬ್ಬನು ಟಿವಿಯನ್ನು ಹೊಂದಿರುವುದು ಸರಿಯೇ ಅಥವಾ ತಪ್ಪೇ ? (ಅವನು ಏನನ್ನು ವೀಕ್ಷಿಸುತ್ತಾನೆ ಎಂಬುದು ಮುಖ್ಯ ವಿಷಯವಾಗಿದೆ).
- ಯಾರಾದರೂ ವಿವಾಹ ಸಂಗಾತಿಯನ್ನು ಆಯ್ಕೆಮಾಡುವಾಗ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಟ್ಟವನ್ನು ನೋಡುವುದು ಸರಿಯೇ? (ಗಮನಿಸಿರಿ: ಎಲ್ಲಾ ಕ್ಷೇತ್ರಗಳಲ್ಲಿ (ಆತ್ಮ. ಪ್ರಾಣ ಮತ್ತು ಶರೀರಗಳಲ್ಲಿ), "ಸಮನಾಗಿ ಇಜ್ಜೋಡಾಗಬೇಕೆಂದು" ಹೇಳಿರುವಾಗ ವಿವೇಕವುಳ್ಳ ವಿಶ್ವಾಸಿಗಳು "ಪ್ರಾಣಕ್ಕೆ ಸಂಬಂಧಿಸಿದ" ಈ ಅಂಶಗಳನ್ನು ಸಹ ಪರಿಗಣಿಸುತ್ತಾರೆ).
- ಇನ್ನೊಬ್ಬರು ತಮ್ಮ ವಿವಾಹ ಸಮಾರಂಭವನ್ನು ಎಷ್ಟು ಅದ್ದೂರಿಯಾಗಿ ನಡೆಸುತ್ತಾರೆ.
- ಇಂತಹ ಇನ್ನೂ ಅನೇಕ ಸಂಗತಿಗಳು.
ಇವು ಕೆಲವು ಉದಾಹರಣೆಗಳು ಮಾತ್ರ. ಇನ್ನೂ ಇಂತಹ ಹಲವಾರು ವಿಷಯಗಳು ಇವೆಯೆಂದು ನನಗೆ ಖಾತ್ರಿಯಿದೆ. ಇವುಗಳಲ್ಲಿ ಅನೇಕ ನಿರ್ಣಯಗಳು ಆಯಾ ಕುಟುಂಬದ ಆದಾಯವನ್ನು ಅವಲಂಬಿಸುತ್ತವೆ. ವಿಶ್ವಾಸಿಗಳ ಆದಾಯದಲ್ಲಿ ಬಹಳ ವ್ಯತ್ಯಾಸ ಇರುತ್ತದೆ. ಒಂದು ದೊಡ್ಡ ನಗರದ ಸರಳ ಕಾರು, ಮನೆ, ಶೈಕ್ಷಣಿಕ ಮಟ್ಟ, ನೌಕರಿ ಅಥವಾ ವಿವಾಹ ಸಮಾರಂಭವು ಒಂದು ಬಡ ಹಳ್ಳಿಯ ಜನರ ದೃಷ್ಟಿಯಲ್ಲಿ ಭವ್ಯ ಮತ್ತು ಅತ್ಯಂತ ವೈಭವವುಳ್ಳದ್ದು ಎಂದು ಪರಿಗಣಿಸಲ್ಪಡುತ್ತದೆ. ಹಾಗಾಗಿ, ನಾವು ಒಬ್ಬರನ್ನೊಬ್ಬರು ತೀರ್ಪುಮಾಡುವುದು ಸರಿಯಲ್ಲ.
"ನಮ್ಮಲ್ಲಿ ದೇವರ ಭಯ ಇರಬೇಕು - ಆಗ ನಾವು ನಮ್ಮ ಕಣ್ಣಿನಿಂದ ನೋಡಿದ್ದನ್ನು, ಅಥವಾ ಕಿವಿಯಿಂದ ಕೇಳಿಸಿಕೊಂಡದ್ದನ್ನು ತೀರ್ಪುಮಾಡುವುದಿಲ್ಲ, ಇದಕ್ಕೆ ಬದಲಾಗಿ ಯಾವಾಗಲೂ ನ್ಯಾಯವಾಗಿ ನಿರ್ಣಯಿಸುತ್ತೇವೆ
ಒಂದು ವಿವಾಹ ಸಮಾರಂಭ ಎಷ್ಟು ಅದ್ದೂರಿಯಾಗಿ ನಡೆಯುತ್ತದೆ ಎಂಬುದು ಎರಡೂ ಕಡೆಯ ತಂದೆತಾಯಿಯರ ಆರ್ಥಿಕ ಸ್ಥಿತಿಯನ್ನು ಹಾಗೂ ಅವರು ಎಷ್ಟು ಹೃತ್ಪೂರ್ವಕ ಮನಸ್ಸುಳ್ಳವರಾಗಿದ್ದಾರೆ ಎಂಬುದನ್ನು ಅವಲಂಬಿಸುತ್ತದೆ. ಶಾಂತಿಯನ್ನು ಕಾಪಾಡಿಕೊಳ್ಳುವ ಪ್ರಯುಕ್ತ, ತಂದೆತಾಯಿಯರಲ್ಲಿ ಒಬ್ಬರು, ವರ ಅಥವಾ ವಧುವಿನಲ್ಲಿ ಒಬ್ಬರಿಗೆ ಒಪ್ಪಿಗೆ ಇಲ್ಲದಿದ್ದಾಗ, ಅಂತಿಮ ನಿರ್ಧಾರವು ಬದಲಾಗಬಹುದು. ಹಾಗಾಗಿ ಮದುವೆ ಯಾವ ರೀತಿ ನಡೆಯಿತು ಎಂಬ ವಿಷಯದಲ್ಲಿ ನಾವು ಯಾರನ್ನೂ ತೀರ್ಪುಮಾಡಬಾರದು.
ನಾವು ಸರಳವಾಗಿರುವ ಕ್ಷೇತ್ರಗಳಲ್ಲಿ ಇತರರು ಹಣ ಖರ್ಚುಮಾಡುವುದನ್ನು ತೀರ್ಪುಮಾಡುವ ಪ್ರವೃತ್ತಿ ನಮ್ಮಲ್ಲಿದೆ. ಇಂತಹ ಯಾವುದೋ ಒಂದು ಕ್ಷೇತ್ರದಲ್ಲಿ ಇತರರನ್ನು ತೀರ್ಪುಮಾಡುವ ಅನೇಕರು, ಮತ್ತೊಂದು ಕ್ಷೇತ್ರದಲ್ಲಿ ಸ್ವತಃ ತಾವೇ ತಪ್ಪುಮಾಡುತ್ತಾರೆ. ಆದರೆ ಅವರು ತೀರ್ಪುಮಾಡುವ ತಮ್ಮ ಪ್ರವೃತ್ತಿಯ ಸಲುವಾಗಿ ಕುರುಡರಾಗಿ ಇರುವುದರಿಂದ, ಅವರು ತಮ್ಮ ಸ್ವಂತದ ವಿಫಲತೆಗಳನ್ನು ನೋಡುವುದಿಲ್ಲ. ಈ ಕಾರಣಕ್ಕಾಗಿ, ಇತರರ ಕಣ್ಣಿನ ರವೆಯನ್ನು ತೀರ್ಪುಮಾಡುವುದನ್ನು ಬಿಟ್ಟುಬಿಡುವುದು ಒಳ್ಳೆಯದು.
ನಾವು "ಸ್ವಂತದ ವಿಷಯಗಳನ್ನು ಗಮನಿಸುವುದನ್ನು" ಕಲಿತುಕೊಳ್ಳಬೇಕು ಮತ್ತು ಏನು ಮಾಡಬೇಕೆಂದು ಇತರರಿಗೆ ಹೇಳುವ ಇಚ್ಛೆಯುಳ್ಳವರು ಆಗಿರಬಾರದು. ಇಲ್ಲವಾದರೆ ನಾವು ಫರಿಸಾಯರಂತೆ ಸ್ವನೀತಿಯುಳ್ಳವರಾಗಿ "ಪರಕಾರ್ಯಗಳಲ್ಲಿ ತಲೆಹಾಕುತ್ತೇವೆ" (1 ಪೇತ್ರ. 4:15). ಪ್ರತಿಯೊಬ್ಬನು ಆತನ ಮನಸ್ಸಾಕ್ಷಿಗೆ ಅನುಗುಣವಾಗಿ ನಡೆಯಲು ಅವಕಾಶ ನೀಡುವುದು ಬಹಳ ಒಳ್ಳೆಯದು.
ನಾವು ಕ್ರೈಸ್ತಸಭೆಯಲ್ಲಿ, ಮುಖ್ಯವಾಗಿ ಪಾಪ ಮತ್ತು ಹಣದಾಸೆಯ ವಿರುದ್ಧವಾಗಿ ಬೋಧಿಸಬೇಕು; ಮತ್ತು ಯಾರಾದರೂ ನಮ್ಮ ಸಲಹೆಯನ್ನು ಕೇಳಿದಾಗ ಮಾತ್ರ ಅದನ್ನು ನೀಡಬೇಕು. ಆದಾಗ್ಯೂ, ಎದ್ದುಕಾಣುವ ಯಾವುದೋ ಪಾಪವು ಸಭೆಯ ಮೇಲೆ ಪರಿಣಾಮ ಬೀರುತ್ತಿದ್ದರೆ, ಆಗ ಅದನ್ನು ನಿಷೇಧಿಸಬೇಕು.
ಅದಲ್ಲದೆ ಹಣಕಾಸಿನ ವ್ಯವಹಾರಗಳಲ್ಲಿ, ಎಲ್ಲಾ ವಿಶ್ವಾಸಿಗಳು ತಮ್ಮ ಆರ್ಥಿಕ ಪರಿಮಿತಿಯನ್ನು ಮೀರದಂತೆ ನಾವು ಅವರನ್ನು ಪ್ರೋತ್ಸಾಹಿಸಬೇಕು. ಸಾಲಗಾರರಾಗುವುದು, ದೇವರು ನಮ್ಮ ಸುತ್ತಲು ಹಾಕಿರುವ ಆರ್ಥಿಕ ಸುರಕ್ಷೆಯ ಗೋಡೆಯನ್ನು ದಾಟಿಹೋದಂತೆ. ಪ್ರಸಂಗಿ 10:8 (ವಚನದ ಎರಡನೇ ಭಾಗವನ್ನು) ನೋಡಿರಿ (ಇಲ್ಲಿ "ಹಾವಿನ ಕಡಿತ" ಎಂಬ ಅರ್ಥದಲ್ಲಿ ಬಳಸಲಾಗಿರುವ "ನಾಶಕ್" ಎಂಬ ಇಬ್ರಿಯ ಭಾಷೆಯ ಪದವು, ಸಾಲ"ವೆಂಬ ಅರ್ಥವುಳ್ಳ "ನಶಾ" ಎಂಬ ಮತ್ತೊಂದು ಇಬ್ರಿಯ ಪದವನ್ನು ಹೋಲುತ್ತದೆ). ವಿಶ್ವಾಸಿಗಳು ಸಾಲದಿಂದ ಸಾಧ್ಯವಾದಷ್ಟು ಮಟ್ಟಿಗೆ (ತುರ್ತು ಪರಿಸ್ಥಿತಿಗಳು ಮತ್ತು ವೈದ್ಯಕೀಯ ಚಿಕಿತ್ಸೆ, ಅಥವಾ ಮನೆಯ ಖರೀದಿ/ಮನೆ ಕಟ್ಟುವುದು ಇಲ್ಲವೇ ಕಾರು ಖರೀದಿ, ಇತ್ಯಾದಿಗಳಿಗೆ ಹೊರತಾಗಿ) ದೂರವಿರುವಂತೆ ನಾವು ಅವರನ್ನು ಪ್ರೋತ್ಸಾಹಿಸಬೇಕು. ಸಾಲ ಮಾಡಿದ್ದೇ ಆದರೆ, ಅವರು ತಮ್ಮ ಸಾಲವನ್ನು ಆದಷ್ಟು ಶೀಘ್ರವಾಗಿ ತೀರಿಸುವಂತೆ ಅವರನ್ನು ಪ್ರೋತ್ಸಾಹಿಸಬೇಕು (ರೋಮಾ. 13:8).
ಆದಾಗ್ಯೂ, ಸತ್ಯವೇದವು ಬೋಧಿಸುವ ಈ ಕೆಳಗಿನ ವಿಷಯಗಳನ್ನು ಕಲಿಸಲು ನಾವು ಹಿಂದೇಟು ಹಾಕುತ್ತೇವೆಂದು ಇದರ ಅರ್ಥವಲ್ಲ:
- ಸಭೆಯು ಸಂಕಟದ ಮೂಲಕ ಹಾದುಹೋಗುತ್ತದೆ [ಸಭೆ ಮತ್ತು ಸಂಕಟಕಾಲ ಎಂಬ ಲೇಖನವನ್ನು ಓದಿಕೊಳ್ಳಿರಿ].
- ಸ್ತ್ರೀಯರು ಪ್ರಾರ್ಥಿಸುವಾಗ/ ಪ್ರವಾದಿಸುವಾಗ ತಲೆಯ ಮೇಲೆ ಮುಸುಕು ಹಾಕಿಕೊಳ್ಳುವುದು [ಸ್ತ್ರೀಯರು ಮುಸುಕು ಹಾಕಿಕೊಳ್ಳುವುದು ಮತ್ತು ತಲೆಯ ಮೇಲಿನ ಮುಸುಕು - ಈ ಕುರಿತಾದ ಆತ್ಮಿಕ ಹೇಳಿಕೆಗಳನ್ನು ಓದಿಕೊಳ್ಳಿರಿ]
ಈ ವಿಷಯಗಳಲ್ಲಿ ಕೆಲವು ವಿಶ್ವಾಸಿಗಳು ವಿಭಿನ್ನ ಅಭಿಪ್ರಾಯ ಹೊಂದಿದ್ದರೆ, ನಾವು ಅವರನ್ನು ತೀರ್ಪುಮಾಡುವುದಿಲ್ಲ. ಆದರೆ ಸತ್ಯವೇದವು ಸ್ಪಷ್ಟವಾಗಿ ಕಲಿಸುವ ಸಂಗತಿಗಳನ್ನು ನಾವು ಸಭೆಯಲ್ಲಿ ಕಲಿಸಲು ಹಿಂಜರಿಯುವುದಿಲ್ಲ.
ತೀತ. 2:4,5ರ ವಚನವು ಸ್ಪಷ್ಟವಾಗಿ, ಹೆಂಡಂದಿರು ಪ್ರಾಥಮಿಕವಾಗಿ "ತಮ್ಮ ತಮ್ಮ ಮನೆಗಳಲ್ಲೇ ಕೆಲಸಮಾಡುವವರು" ಆಗಿರಬೇಕೆಂದು ಹೇಳಿರುವುದನ್ನು ಪರಿಗಣಿಸಿರಿ. ಇದನ್ನು ನಾವು ಬೋಧಿಸಬೇಕು. ಆದರೆ ಒಬ್ಬ ಹೆಂಡತಿಯು ಮನೆಯಿಂದ ಹೊರಗೆ ಹೋಗಿ ನೌಕರಿ ಮಾಡುವುದನ್ನು ಸತ್ಯವೇದವು ನಿಷೇಧಿಸುವುದಿಲ್ಲ. ಹಾಗಾಗಿ, ನಾವೂ ಸಹ ಅದನ್ನು ನಿಷೇಧಿಸಬಾರದು. ಹಲವು ವಿಧವಾದ ಪರಿಸ್ಥಿತಿಗಳಲ್ಲಿ ಒಬ್ಬ ಹೆಂಡತಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಬಹುದು; ಒಂದು ವೇಳೆ ಆಕೆಯ ಗಂಡ ಅಶಕ್ತನಾಗಿರಬಹುದು, ಅಥವಾ ಕೆಲಸವನ್ನು ಕಳೆದುಕೊಂಡಿರಬಹುದು, ಇತ್ಯಾದಿ. ಹಾಗಾಗಿ ಒಬ್ಬ ಹೆಂಡತಿಯು ಕೆಲಸಕ್ಕೆ ಹೋಗುವ ವಿಷಯದಲ್ಲಿ ನಾವು ಎಂದಿಗೂ ತೀರ್ಪು ಮಾಡಬಾರದು.
ಅಥವಾ, ಕ್ರಿಸ್ಮಸ್ ಅಥವಾ ಈಸ್ಟರ್ ಆಚರಣೆಯನ್ನು ಪರಿಗಣಿಸಿರಿ. ಈ ಹಬ್ಬಗಳು ದೇವಜ್ಞಾನವಿಲ್ಲದ ಮೂಲದಿಂದ ಬಂದಿವೆಯೆಂಬ ಸ್ಪಷ್ಟತೆಯನ್ನು ನಾವು ಹೊಂದಿರಬಹುದು. ಆದರೆ ಬೇರೆ ಕೆಲವು ವಿಶ್ವಾಸಿಗಳು ಇಂತಹ ಯಾವುದೇ ತಿಳುವಳಿಕೆಯನ್ನು ಹೊಂದದಿರಬಹುದು.
ನಾವು ನಮ್ಮ ನಂಬಿಕೆಯ ವಿಷಯದಲ್ಲಿ ದೃಢವಾಗಿರಬೇಕು. ಆದರೆ ಈ ದಿನಗಳನ್ನು ಆಚರಿಸುವ ಇತರರನ್ನು ನಾವು ತೀರ್ಪುಮಾಡಬಾರದು. ಇದನ್ನು ರೋಮಾ 14:4-6ರಲ್ಲಿ ಬಹಳ ಸ್ಪಷ್ಟವಾಗಿ ತೋರಿಸಲಾಗಿದೆ.
ರೋಮಾ. 14ನೇ ಅಧ್ಯಾಯದಲ್ಲಿ ಪವಿತ್ರಾತ್ಮನು ನಮಗೆ ನೀಡಿರುವ ಸ್ವಾತಂತ್ರ್ಯವನ್ನು ಯಾವುದೇ ಕ್ರೈಸ್ತಸಭೆಯು ತನ್ನ ಸದಸ್ಯರಿಗೆ ಕೊಡದಿದ್ದಲ್ಲಿ, ಆ ಸಭೆಯು ನಿಯಮನಿಷ್ಠೆಗಳ ಹಿಡಿತಕ್ಕೆ ಅಧೀನವಾಗಿದೆ.
ತೀರ್ಪುಮಾಡುವುದು ಮತ್ತು ದೇವರ ವಾಕ್ಯದ ಸತ್ಯಾಂಶಗಳನ್ನು ಘೋಷಿಸುವುದು ಇವೆರಡು ವಿಭಿನ್ನ ವಿಷಯಗಳಾಗಿವೆಯೆಂದು ತಿಳಕೊಳ್ಳುವುದು ಅವಶ್ಯವಾಗಿದೆ. ನಾವು ನಮ್ಮ ಸಭೆಗಳಲ್ಲಿ ದೇವರ ಸಂಕಲ್ಪವನ್ನು ಸಂಪೂರ್ಣವಾಗಿ ಬೋಧಿಸಬೇಕು. "ನಿಯಮನಿಷ್ಠೆಗಳ ಸಭೆ"ಯೆಂಬ ದೂಷಣೆ ಬರುತ್ತದೆಂಬ ಭಯದಿಂದಾಗಿ ನಾವು ದೇವರ ಸತ್ಯಾಂಶದ ಯಾವುದೇ ಭಾಗವನ್ನು ಬೋಧಿಸುವುದನ್ನು ತಡೆಹಿಡಿಯಬಾರದು. ಆದರೆ ಪ್ರಾಮುಖ್ಯವಲ್ಲದ ವಿಷಯಗಳಲ್ಲಿ ನಮ್ಮ ಬೋಧನೆಯನ್ನು ಸ್ವೀಕರಿಸಲು ಮತ್ತು ಕೈಗೊಳ್ಳಲು ಕೆಲವರು ಒಪ್ಪದಿದ್ದರೆ, ನಾವು ಅವರನ್ನು ತೀರ್ಪಿಗೆ ಒಳಪಡಿಸಬಾರದು. ಅವರ ನಡವಳಿಕೆಯಿಂದ ಸಭೆಯ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗದೇ ಇದ್ದಲ್ಲಿ, ನಾವು ಈ ತೀರ್ಪನ್ನು ದೇವರ ಕೈಗೆ ಒಪ್ಪಿಸಬೇಕು.
ಯೇಸುವಿನ ಮೇಲಿನ ನಮ್ಮ ತೀವ್ರ ಪ್ರೀತಿ ಮತ್ತು ಆತನ ಸಾರೂಪ್ಯವನ್ನು ಹೊಂದುವ ನಮ್ಮ ಹಂಬಲಕ್ಕೆ ಪ್ರಾಮುಖ್ಯತೆ ಕೊಡುವುದರ ಬದಲಾಗಿ, ಮೇಲೆ ಉಲ್ಲೇಖಿಸಿರುವ ಗಣನೀಯವಲ್ಲದ ಚಿಕ್ಕ ವಿಷಯಗಳ ಕಡೆಗೆ ಹೆಚ್ಚು ಗಮನ ಹರಿಸುವಂತ ದೊಡ್ಡ ಅಪಾಯದ ಬಗ್ಗೆ ನಾವು ಎಚ್ಚರವಾಗಿರಬೇಕು.
ಮೇಲೆ ಉಲ್ಲೇಖಿಸಿದ ವಿಷಯಗಳು ಹೊರತೋರಿಕೆಯ ವಿಷಯಗಳಾಗಿವೆ. ಆದರೆ ದೇವರು ಹೃದಯವನ್ನು ದೃಷ್ಟಿಸುತ್ತಾರೆ ಮತ್ತು ನಾವು ಇವನ್ನು ದೃಷ್ಟಿಸಲಾರೆವು. ಹಾಗಾಗಿ ನಮ್ಮಲ್ಲಿ ದೇವರ ಭಯ ಇರಬೇಕು - ಆಗ ನಾವು "ಕಣ್ಣಿಗೆ ಕಂಡಂತೆ, ಕಿವಿಗೆ ಕೇಳಿದಂತೆ ನಿರ್ಣಯಿಸುವುದಿಲ್ಲ. ಆದರೆ ಯಾವಾಗಲೂ ನ್ಯಾಯವಾಗಿ ತೀರ್ಪು ಮಾಡುತ್ತೇವೆ" (ಯೆಶಾ. 11:3,4).
ನಾವು ಅತ್ಯಾಸಕ್ತಿಯಿಂದ "ಪ್ರೀತಿಗಾಗಿ ಹಂಬಲಿಸಿದರೆ" (1 ಕೊರಿ. 14:1), ಮತ್ತು ನಮ್ಮ ಕರ್ತನಿಂದ "ಮನಸ್ಸಿನ ದೀನತೆಯನ್ನು ಕಲಿಯುವುದನ್ನು" ಶ್ರದ್ಧೆಯಿಂದ ಅಪೇಕ್ಷಿಸಿದರೆ (ಮತ್ತಾ. 11:29), ನಾವು ಇತರರನ್ನು ತೀರ್ಪುಮಾಡುವ ಈ ದೊಡ್ಡ ಅಪಾಯದಿಂದ ಬಿಡುಗಡೆ ಹೊಂದುತ್ತೇವೆ.
ಯಾವಾಗಲೂ ತಮ್ಮನ್ನು ತೀರ್ಪುಮಾಡಿಕೊಳ್ಳುವವರು ಮತ್ತು ಎಂದಿಗೂ ಇತರರನ್ನು ತೀರ್ಪುಮಾಡದ ಜನರು ಪ್ರಪಂಚದಲ್ಲಿ ಅತ್ಯಂತ ಹರ್ಷಭರಿತ ಜನರಾಗಿದ್ದಾರೆ.