ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ಪ್ರಕಟನೆ 12:10ರಲ್ಲಿ, ಸೈತಾನನು ದೇವರ ಮುಂದೆ ನಿರಂತರವಾಗಿ ಎಲ್ಲಾ ವಿಶ್ವಾಸಿಗಳನ್ನು ಹಗಲಿರುಳೂ ದೂಷಿಸುತ್ತಾನೆ, ಎಂಬುದಾಗಿ ನಾವು ಓದುತ್ತೇವೆ. ಇದೇ ಸೈತಾನನ "ಪೂರ್ಣಾವಧಿ ಸೇವೆ" ಆಗಿದೆ. ಅದಲ್ಲದೆ ಆತನ ಈ ಸೇವೆಯಲ್ಲಿ ಅನೇಕ ಜೊತೆ-ಕೆಲಸಗಾರರು ಇದ್ದಾರೆ - ಇವರಲ್ಲಿ ವಿಶ್ವಾಸಿಗಳು ಸಹ ಸೇರಿದ್ದಾರೆ ಎನ್ನುವುದು ದುಃಖಕರ ಸಂಗತಿಯಾಗಿದೆ. ಬಹಳ ಮಂದಿ ಕ್ರೈಸ್ತ ವಿಶ್ವಾಸಿಗಳು ಸೈತಾನನ ಜೊತೆಗೆ ಸೇರಿಕೊಂಡು ಈ ದೂಷಣೆಯ ಸೇವೆಯಲ್ಲಿ ತೊಡಗಿದ್ದಾರೆ.

ಆದಾಮನು ಏದೆನ್ ತೋಟದಲ್ಲಿ ಪಾಪ ಮಾಡಿದ ತಕ್ಷಣವೇ, ಸೈತಾನನು ತನ್ನ "ದೂಷಣೆಯ ಆತ್ಮವನ್ನು" ಆತನಿಗೆ ಕೊಟ್ಟನು. ಇದರ ಫಲವಾಗಿ, ದೇವರು ಬಂದು ಆದಾಮನನ್ನು "ಈ ಮರದ ಹಣ್ಣನ್ನು ತಿಂದೆಯಾ?" ಎಂದು ಪ್ರಶ್ನಿಸಿದಾಗ, ಆದಾಮನ ಮೊದಲ ಪ್ರತಿಕ್ರಿಯೆ ಏನಾಗಿತ್ತೆಂದರೆ - ತನ್ನ ಸ್ವಂತ ಪಾಪವನ್ನು ಅರಿಕೆ ಮಾಡುವುದರ ಬದಲು - ತನ್ನ ಹೆಂಡತಿಯ ಬಗ್ಗೆ, "ನನ್ನ ಜೊತೆಯಲ್ಲಿರುವ ಸ್ತ್ರೀಯು ನನಗೆ ಆ ಮರದ ಹಣ್ಣನ್ನು ಕೊಟ್ಟಳು," ಎಂದು ಹೇಳಿದನು (ಆದಿಕಾಂಡ 3:12).

ನಾವೆಲ್ಲರೂ ಚಿಕ್ಕಂದಿನಿಂದಲೂ ಇತರರ ತಪ್ಪುಗಳನ್ನು ಹುಡುಕುವುದನ್ನು ಮತ್ತು ಅವರನ್ನು ದೂಷಿಸುವುದನ್ನು ಕಲಿತುಕೊಂಡಿದ್ದೇವೆ. ನಾವು ಬೆಳೆದು ವಯಸ್ಕರಾದಾಗ, ಈ ದೂಷಣೆ ಮತ್ತು ಚಾಡಿ ಹೇಳುವ ಆತ್ಮವು ಹೆಚ್ಚಿನ ಸೂಕ್ಷ್ಮತೆಯನ್ನು ಮತ್ತು ದುರುದ್ದೇಶದ ಸ್ವಭಾವವನ್ನು ಹೊಂದುತ್ತದೆ. ಈ ದೂಷಣೆಯ ಆತ್ಮವು ಅನೇಕ ಮಂದಿ ವಿಶ್ವಾಸಿಗಳಲ್ಲಿ, ಅವರು ಹೊಸದಾಗಿ ಹುಟ್ಟಿದ ಅನೇಕ ವರ್ಷಗಳ ನಂತರವೂ ಮುಂದುವರಿದಿದೆ, ಎನ್ನುವುದು ದುಃಖಕರ ಸಂಗತಿಯಾಗಿದೆ!

2 ಕೊರಿಂಥದವರಿಗೆ 5:17ರಲ್ಲಿ, "ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾದನು. ಇಗೋ, ಪೂರ್ವ ಸ್ಥಿತಿ ಹೋಗಿ ಎಲ್ಲಾ ನೂತನವಾಯಿತು," ಎಂದು ಹೇಳಲಾಗಿದೆ.

ನಾವು ಹೊಸದಾಗಿ ಹುಟ್ಟಿದಾಗ, ಇತರರನ್ನು ನೂತನ ದೃಷ್ಟಿಯಿಂದ ನೋಡುವಂತಾಗಬೇಕು - ಯೇಸುವಿನಲ್ಲಿದ್ದಂತಹ ಸ್ವಭಾವವನ್ನೇ ನಾವು ಹೊಂದಿರಬೇಕು; ಅಂದರೆ, ಇತರರನ್ನು ದೂಷಿಸುವುದರ ಬದಲಾಗಿ, ನಮ್ಮ ವಿರುದ್ಧ ಪಾಪ ಮಾಡಿದವರಿಗಾಗಿ ದೇವರಲ್ಲಿ ವಿಜ್ಞಾಪನೆ ಮಾಡುವ ಸ್ವಭಾವ ನಮ್ಮದಾಗಬೇಕು. ಆದರೆ ಇಂತಹ ಒಳಗಿನ ಬದಲಾವಣೆಯು ನಾವು ದೇವರೊಂದಿಗೆ ಸಹಕರಿಸಲು ತಯಾರಿದ್ದಾಗ ಮಾತ್ರ ಸಾಧ್ಯವಾಗುತ್ತದೆ. ಫಿಲಿಪ್ಪಿಯವರಿಗೆ 2:12ರಲ್ಲಿ ತೋರಿಸಿರುವ ಹಾಗೆ, ನಾವು ಆದಾಮನಿಂದ ಪಡೆದಿರುವ ಎಲ್ಲಾ ಕೆಟ್ಟ ಸ್ವಭಾವಗಳಿಂದ ನಾವು "ನಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಬೇಕು." ವಿಶ್ವಾಸಿಗಳು ಆದಾಮನ ಮಕ್ಕಳಂತೆ ನಡೆಯುತ್ತಾ, ಇತರರಲ್ಲಿ ತಪ್ಪು ಹುಡುಕುತ್ತಾ ಇರುವುದಕ್ಕೆ ಕಾರಣವೇನೆಂದರೆ, ಅವರು "ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ" ಎಂಬ ಈ ಬೋಧನೆಯನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. ದೇವರ ಮಕ್ಕಳ ಈ ದುಷ್ಟ ಸ್ವಭಾವದಿಂದಾಗಿ, ಕರ್ತನಾದ ಯೇಸು ಹಾಗೂ ಆತನ ಸಭೆಗೆ ಜನರ ಮಧ್ಯದಲ್ಲಿ ಬಹಳ ಕೆಟ್ಟ ಹೆಸರು ಬಂದಿದೆ.

ಯೋಹಾನನು 8:4ರಲ್ಲಿ, ವ್ಯಭಿಚಾರ ಮಾಡುತ್ತಿರುವಾಗಲೇ ಹಿಡಿಯಲ್ಪಟ್ಟು ಫರಿಸಾಯರ ಮೂಲಕ ದೂಷಿಸಲ್ಪಟ್ಟ ಒಬ್ಬ ಬಡ ಹೆಂಗಸಿನ ಕುರಿತಾಗಿ ನಾವು ಓದುತ್ತೇವೆ. ಆಕೆಯನ್ನು ಪಾಪದ ಜೀವಿತದಿಂದ ಬಿಡಿಸಿ ಹೊರತರುವ ಯಾವುದೇ ಆಸೆ ಈ ಫರಿಸಾಯರಿಗೆ ಇರಲಿಲ್ಲ. ಅವರು ತಮ್ಮ ಸ್ವಂತ "ಪರಿಶುದ್ಧತೆ"ಯನ್ನು ತೋರಿಸಿಕೊಂಡು, ಆಕೆಯನ್ನು ನೀಚ ಪಾಪಿಯೆಂದು ತೋರಿಸುವುದರಲ್ಲಿ ಮಾತ್ರ ಆಸಕ್ತರಾಗಿದ್ದರು. ಇವರ ಹಿರಿಯ ಪಿತಾಮಹ ಆದಾಮನು ಹವ್ವಳಿಗೆ ಮಾಡಿದಂತೆ - ಜನರ ಮುಂದೆ ನಿಂತುಕೊಂಡು ಅವರು ಆ ಬಡ ಹೆಂಗಸಿನ ಕಡೆಗೆ ದೂಷಣೆಯ ಕೈಯನ್ನು ಚಾಚಿದರು. ಹಾಗೆ ಮಾಡುವುದರ ಮೂಲಕ ಈ ಫರಿಸಾಯರು ತಾವು ತಮ್ಮ ಹೃದಯದಲ್ಲಿ ದೂರುಗಾರನಾದ ಸೈತಾನನೊಂದಿಗೆ ಅನ್ಯೋನ್ಯತೆ ಹೊಂದಿದ್ದೇವೆಂದು ಪ್ರಕಟಿಸಿದರು. ಇದಕ್ಕಾಗಿಯೇ ಯೇಸುವು ಈ ಫರಿಸಾಯರಿಗೆ, ಸೈತಾನನು ಅವರ ತಂದೆಯಾಗಿದ್ದಾನೆ, ಎಂದು ನೇರವಾಗಿ ಹೇಳಿದನು (ಯೋಹಾ. 8:44).

ಯೇಸುವು ಇಂತಹ ಸ್ತ್ರೀಯರನ್ನು ಅವರ ಪಾಪಗಳಿಂದ ಬಿಡುಗಡೆ ಮಾಡುವುದಕ್ಕಾಗಿ ಬಂದರು - ಅವರನ್ನು ದೂಷಿಸುವುದಕ್ಕಾಗಿ ಅಲ್ಲ. ನಾವು ಯೋಹಾನನು 3:17ರಲ್ಲಿ, ದೇವರು ತನ್ನ ಮಗನನ್ನು ಲೋಕದ ರಕ್ಷಣೆಗಾಗಿ ಕಳುಹಿಸಿದನೇ ಹೊರತು, ಲೋಕವನ್ನು ತೀರ್ಪು ಮಾಡುವುದಕ್ಕಾಗಿ ಅಲ್ಲ, ಎಂದು ಓದುತ್ತೇವೆ.

ತೀರ್ಪು ಮಾಡುವುದು ಮತ್ತು ದೈವಿಕ ತಿದ್ದುಪಡಿ ಮಾಡುವುದರ ನಡುವೆ ಬಹಳ ದೊಡ್ಡ ಅಂತರವಿದೆ. ಪ್ರಕಟನೆ 2 ಮತ್ತು 3 ನೇ ಅಧ್ಯಾಯಗಳಲ್ಲಿ, ಕರ್ತನು ಯೋಹಾನನಿಗೆ ಬಿದ್ದುಹೋಗುತ್ತಿದ್ದ ಐದು ಸಭೆಗಳ ಸಭಾಹಿರಿಯರ ದೈವಿಕ ತಿದ್ದುಪಡಿ ಮಾಡುವಂತೆ ಆದೇಶಿಸಿದನು. ಅದೇ ರೀತಿ, ಪವಿತ್ರಾತ್ಮನು ಪೌಲನಿಗೆ ಕೊರಿಂಥ, ಗಲಾತ್ಯ ಮತ್ತು ಥೆಸಲೋನಿಕ ಸಭೆಗಳ ದೈವಿಕ ತಿದ್ದುಪಡಿ ಮಾಡುವಂತೆ ಆದೇಶಿಸಿದನು. ಇಂತಹ ತಿದ್ದುವಿಕೆಯು ಆತ್ಮಿಕವಾದದ್ದು - ಮತ್ತು ಕೆಲವೊಮ್ಮೆ ದೇವರು ತನ್ನ ಜನರಿಗೆ ಇಂತಹ ತಿದ್ದುವಿಕೆ ಕೊಡುವ ಕರೆಯನ್ನು ತನ್ನ ಅಭಿಷಿಕ್ತ ಸೇವಕರಿಗೆ ನೀಡುತ್ತಾರೆ. ಆದರೆ ಈ ತಿದ್ದುವಿಕೆಗಳು ಯಾವಾಗಲೂ ಪ್ರೀತಿಯಿಂದ ಕೊಡಲ್ಪಡುತ್ತವೆ.

ಎಚ್ಚರವಾಗಿರಿ, ನೀವು "ದೂಷಣೆಯ ಸೇವೆ"ಯನ್ನು ಕೈಗೊಳ್ಳುವಾಗ, ನೀವು ದೈವಿಕ ತಿದ್ದುವಿಕೆಯ ಸೇವೆಯಲ್ಲಿ ತೊಡಗಿದ್ದೀರಿ ಎಂದು ಯೋಚಿಸಿ, ಬಹಳ ಸುಲಭವಾಗಿ ನಿಮ್ಮನ್ನೇ ವಂಚಿಸಿಕೊಳ್ಳಬಹುದು

ದೂಷಣೆಯ ಆತ್ಮವನ್ನು ಕಂಡುಹಿಡಿಯುವುದು ಸುಲಭ. ಯಾರನ್ನು ಇಷ್ಟಪಡುವುದಿಲ್ಲವೋ, ಅವರ ಬಗ್ಗೆ ಮಾಡುವಂತ ದೂಷಣೆಯು ಯಾವಾಗಲೂ ದುರುದ್ದೇಶವನ್ನು ಹೊಂದಿರುತ್ತದೆ. ನೀವು ಪ್ರೀತಿಸುವ ಜನರನ್ನು ಎಂದಿಗೂ ಈ ರೀತಿಯಾಗಿ ದೂಷಿಸುವುದಿಲ್ಲ. ಉದಾಹರಣೆಗೆ, ನೀವು ನಿಮ್ಮ ಮಕ್ಕಳನ್ನು ಎಂದಿಗೂ ಇತರರ ಮುಂದೆ ದೂಷಿಸುವುದಿಲ್ಲ. ಹಾಗಾಗಿ, ಪ್ರೀತಿಯಿಲ್ಲದ ಮನೋಭಾವವು ನಿಮ್ಮಲ್ಲಿ ದೂಷಣೆಯ ಆಲೋಚನೆಗಳನ್ನು ಉಂಟುಮಾಡುತ್ತದೆಂದು ನೀವು ಕಂಡುಕೊಳ್ಳಬಹುದು.

ಕರ್ತನು ದೈವಿಕ ತಿದ್ದುವಿಕೆಯ ಸೇವೆಯನ್ನು ಯಾವಾಗಲೂ ತನ್ನ ನಂಬಿಗಸ್ತ ಸೇವಕರಿಗೆ ಮಾತ್ರ ದಯಪಾಲಿಸುತ್ತಾನೆ - ಉದಾಹರಣೆಗೆ, ಅಪೊಸ್ತಲರಾದ ಯೋಹಾನನು ಮತ್ತು ಪೌಲನಂತ ಸೇವಕರು. ಕರ್ತನು ಎಲ್ಲರನ್ನು ಇಂತಹ ಸೇವೆಗೆ ಕರೆಯುವುದಿಲ್ಲ. ಹಾಗಾಗಿ ಜಾಗರೂಕರಾಗಿರಿ. ನೀವು "ದೂಷಣೆಯ ಸೇವೆಗೆ" ಕೈಹಾಕುವಾಗ, ತಿದ್ದುವಿಕೆಯ ದೈವಿಕ ಸೇವೆಯಲ್ಲಿ ತೊಡಗಿದ್ದೀರಿ ಎಂಬ ತಪ್ಪು ತಿಳುವಳಿಕೆಯಿಂದ ನೀವು ನಿಮ್ಮನ್ನೇ ಸುಲಭವಾಗಿ ವಂಚಿಸಿಕೊಳ್ಳಬಹುದು.

ನೀವು ಈ ದೂಷಣೆಯ ಆತ್ಮವನ್ನು ನಿಮ್ಮಲ್ಲಿ ಉಳಿಸಿಕೊಂಡರೆ, ಕರ್ತನು ಫರಿಸಾಯರನ್ನು ವಿರೋಧಿಸಿದಂತೆಯೇ ನಿಮ್ಮನ್ನು ವಿರೋಧಿಸುತ್ತಾನೆ. ದೂಷಣೆಯ ಕಾರ್ಯ ಸೈತಾನನ ಕಾರ್ಯವಾಗಿದೆ, ಮತ್ತು ವಿಶ್ವಾಸಿಗಳಾದ ನಾವು ಇದರಲ್ಲಿ ಯಾವುದೇ ರೀತಿಯಲ್ಲಿ ಪಾಲ್ಗೊಳ್ಳಬಾರದು.

ನಾವು ಎಲ್ಲಕ್ಕೂ ಮೊದಲು ತಿಳಿದುಕೊಳ್ಳಬೇಕಾದ ವಿಷಯ, ನಮಗೆ ನಮ್ಮ ಸಹ-ವಿಶ್ವಾಸಿಗಳಲ್ಲಿ ಕಾಣಿಸುವ ಒಂದಲ್ಲ ಒಂದು ತಪ್ಪಿಗಾಗಿ ಅವರನ್ನು ದೂಷಿಸುವಂತೆ ಸೈತಾನನು ಹಾಗೂ ಆತನ ದೆವ್ವಗಳು ನಮ್ಮನ್ನು ನಿರಂತರವಾಗಿ ಒತ್ತಾಯಿಸುತ್ತವೆ. ಅದಲ್ಲದೆ ಆ ದೆವ್ವಗಳು ಸಹ-ವಿಶ್ವಾಸಿಗಳನ್ನು ದೂಷಿಸುವಂತೆ ನಿಮ್ಮನ್ನು ಪ್ರೇರೇಪಿಸುವ ಉದ್ದೇಶದಿಂದ, ಅವರ ಹಲವು ತಪ್ಪುಗಳನ್ನು ನಿಮಗೆ ತೋರಿಸುತ್ತವೆ. ನೀವು ಈ ಪ್ರಚೋದನೆಗೆ ಒಳಗಾದರೆ, ಆಗ ನೀವು ದುರಾತ್ಮಗಳ ಸೇನೆಯ ಪ್ರಭಾವಕ್ಕೆ ನಿಮ್ಮನ್ನು ಒಪ್ಪಿಸಿಕೊಡುತ್ತೀರಿ. ಅನೇಕ ವಿಶ್ವಾಸಿಗಳು ಹಲವು ರೀತಿಯ ಅನಾರೋಗ್ಯಕ್ಕೆ ಒಳಗಾಗುವುದಕ್ಕೆ ಒಂದು ಕಾರಣ ಇದಾಗಿರಬಹುದು.

ಈ ದೂಷಣೆಯ ಆತ್ಮವನ್ನು ನಮ್ಮ ಜೀವಿತಗಳಿಂದ ಸಂಪೂರ್ಣವಾಗಿ ಕಿತ್ತು ಒಗೆಯುವ ಅತ್ಯಂತ ತೀವ್ರ ಕ್ರಮವನ್ನು ನಾವು ಕೈಗೊಳ್ಳಬೇಕು - ಇದು ಹೇಗೆಂದರೆ, ಒಬ್ಬ ಶಸ್ತ್ರಚಿಕಿತ್ಸಾತಜ್ಞ ವೈದ್ಯನು ಒಬ್ಬ ರೋಗಿಯ ದೇಹದಲ್ಲಿರುವ ಕ್ಯಾನ್ಸರ್ ರೋಗದ ಅಂಗಾಂಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವಂತೆ. "ದೂಷಣೆಯ ಆತ್ಮವು" ಕ್ಯಾನ್ಸರ್ ರೋಗಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಹಾನಿಕರವೆಂದು ನಮಗೆ ಚೆನ್ನಾಗಿ ಮನವರಿಕೆಯಾಗಬೇಕು.

ಹುಟ್ಟಿನಿಂದಲೇ ನಾವೆಲ್ಲರೂ ಇತರರಲ್ಲಿ ಕೆಟ್ಟದ್ದನ್ನು ಕಂಡುಹಿಡಿಯುವ ದುರಾಭ್ಯಾಸವನ್ನು ಪಡೆದಿದ್ದೇವೆ. ನಾವು ಹಲವಾರು ವರ್ಷಗಳಿಂದ ಜನರ ಬೆನ್ನ ಹಿಂದೆ ಅವರನ್ನು ಟೀಕಿಸುವುದನ್ನು ಮತ್ತು ಜನರನ್ನು ದೂಷಿಸುವುದಕ್ಕಾಗಿ ಅವರಲ್ಲಿ ಯಾವುದಾದರೂ ಕೆಡುಕನ್ನು ಕಂಡುಹಿಡಿಯುವುದನ್ನು ಅಭ್ಯಾಸಿಸಿದ್ದೇವೆ.

ಕೊನೆಯದಾಗಿ : ಯೇಸುವು ಫರಿಸಾಯರಿಗೆ ಹೇಳಿದಂತೆ, ಯಾರು ಪಾಪವಿಲ್ಲದವರೋ ಅವರು ಮಾತ್ರ ಇತರರ ಮೇಲೆ ಕಲ್ಲು ಎಸೆಯುವ ಹಕ್ಕನ್ನು ಹೊಂದಿದ್ದಾರೆ, ಎಂಬ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ. ಹಾಗಾಗಿ ನಮ್ಮಲ್ಲಿ ಯಾರೂ ಇತರರನ್ನು ದೂಷಿಸುವ ಅರ್ಹತೆಯನ್ನು ಹೊಂದಿಲ್ಲ.

ಕರ್ತನಾದ ಯೇಸುವು ನಮ್ಮೆಲ್ಲರನ್ನು ಈ ಸೈತಾನನ ಆತ್ಮದಿಂದ ಸಂಪೂರ್ಣವಾಗಿ ಬಿಡುಗಡೆ ಪಡಿಸಲಿ.

ಆಮೆನ್ .