WFTW Body: 

ನಾವು ಸತ್ಯವೇದದ ಆರಂಭದ ಪುಟಗಳನ್ನು ಅದರ ಕೊನೆಯ ಪುಟಗಳೊಂದಿಗೆ ಹೋಲಿಸಿ ನೋಡಿದರೆ, ಅಂತ್ಯಕಾಲವು ಸಮೀಪಿಸುವಷ್ಟರಲ್ಲಿ, ಎರಡು ವೃಕ್ಷಗಳು (ಜೀವವೃಕ್ಷ ಹಾಗೂ ಒಳ್ಳೇದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರ) ಎರಡು ರೀತಿಯ ಸಾಮಾಜಿಕ ವ್ಯವಸ್ಥೆಗಳನ್ನು - ಯೆರೂಸಲೇಮು ಮತ್ತು ಬಾಬೆಲ್ - ನಿರ್ಮಿಸಿರುವುದಾಗಿ ಕಂಡುಕೊಳ್ಳುತ್ತೇವೆ.

ಯಾವುದು ನಿಜವಾಗಿ ಪವಿತ್ರಾತ್ಮನಿಂದ ಹುಟ್ಟಿದೆಯೋ - ದೇವರಿಂದ ಉತ್ಪತ್ತಿಯಾಗಿ, ಅವರಿಂದ ನಡೆಸಲ್ಪಟ್ಟು ಮತ್ತು ಅವರಿಗಾಗಿ ಇದೆಯೋ - ಅದು ಶಾಶ್ವತವಾಗಿ ಉಳಿಯುತ್ತದೆ; ಆದರೆ ಯಾವುದು ಮಾನವ ಪ್ರಾಣದ ಬಲದಿಂದ ಹುಟ್ಟಿದೆಯೋ - ಮಾನವನಿಂದ ಉತ್ಪತ್ತಿಯಾಗಿ, ಆತನಿಂದ ನಡೆಸಲ್ಪಟ್ಟು ಮತ್ತು ಆತನಿಗಾಗಿ ಇದೆಯೋ - ಅದು ನಾಶವಾಗುತ್ತದೆ.

ಇಂದು ನಾವು ಆದಿಕಾಂಡ ಮತ್ತು ಪ್ರಕಟನೆಯ ಪುಸ್ತಕಗಳ ನಡುವಿನ ಪುಟಗಳಲ್ಲಿ ಜೀವಿಸುತ್ತಿದ್ದೇವೆ. ನಮಗೆ ಅರಿವಿದ್ದೋ ಅಥವಾ ಅರಿವಿಲ್ಲದೆಯೋ, ನಾವು ಇವೆರಡು ಸಾಮಾಜಿಕ ವ್ಯವಸ್ಥೆಗಳಲ್ಲಿ ಒಂದಕ್ಕೆ ಸೇರಿಸಲ್ಪಡುತ್ತೇವೆ - ಒಂದು, ದೃಢ ಮನಸ್ಸಿನಿಂದ ದೇವರನ್ನು ಉನ್ನತಕ್ಕೆ ಏರಿಸಿ ಮಹಿಮೆಪಡಿಸುತ್ತದೆ; ಮತ್ತು ಇನ್ನೊಂದು, ಮಾನವನನ್ನು ಮಹಿಮೆಪಡಿಸಿ ಉನ್ನತಕ್ಕೆ ಏರಿಸುವ ಗುರಿಯನ್ನು ಹೊಂದಿದೆ; ಒಂದು ಕ್ರಿಸ್ತನನ್ನು ಹಿಂಬಾಲಿಸುತ್ತದೆ, ಮತ್ತೊಂದು ಆದಾಮನನ್ನು ಹಿಂಬಾಲಿಸುತ್ತದೆ; ಒಂದು ಪವಿತ್ರಾತ್ಮನಲ್ಲಿ ಜೀವಿಸುತ್ತದೆ ಮತ್ತು ಇನ್ನೊಂದು ಶರೀರಭಾವ ಮತ್ತು ಮಾನವ ಪ್ರಾಣದ ಬಲದಿಂದ ಜೀವಿಸುತ್ತದೆ.

ಯೆರೂಸಲೇಮಿನ ವಿಶಿಷ್ಟ ಲಕ್ಷಣವೆಂದರೆ ಅದರ "ಪರಿಶುದ್ಧತೆ"ಯಾಗಿದೆ. ಅದು "ಪರಿಶುದ್ಧ ನಗರ"ವೆಂದು ಕರೆಯಲ್ಪಟ್ಟಿದೆ.

ದೇವರ ಸ್ವರವನ್ನು ಯೇಸು ಮತ್ತು ಆದಾಮ ಇವರಿಬ್ಬರೂ ಕೇಳಿಸಿಕೊಂಡರು - ಒಬ್ಬನು ಆ ಸ್ವರಕ್ಕೆ ವಿಧೇಯನಾದನು ಮತ್ತು ಮತ್ತೊಬ್ಬನು ಅವಿಧೇಯನಾದನು ಎಂಬ ಅಂಶವೇ ಅವರ ನಡುವಿನ ವ್ಯತ್ಯಾಸವಾಗಿತ್ತು. ಯೇಸುವಿನ ಸ್ವರವನ್ನು ಕೇಳಿಸಿಕೊಳ್ಳುವವರಲ್ಲೂ ಸಹ ಇದೇ ವ್ಯತ್ಯಾಸ ಇರುತ್ತದೆಂದು ಯೇಸು ಹೇಳಿದರು - ಒಬ್ಬನು ಅವರ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುತ್ತಾನೆ ಮತ್ತು ಬಂಡೆಯ ಮೇಲೆ ನಿತ್ಯತ್ವಕ್ಕೂ ಅಲುಗಾಡದಂತ ಮನೆಯನ್ನು ಕಟ್ಟುತ್ತಾನೆ, ಮತ್ತೊಬ್ಬನು ಯೇಸುವಿನ ಸ್ವರವನ್ನು ಕೇಳಿಯೂ ಅದಕ್ಕೆ ವಿಧೇಯನಾಗುವುದಿಲ್ಲ, ಹಾಗಾಗಿ ಅವನು ಮರಳಿನ ಮೇಲೆ ಮನೆಯನ್ನು ಕಟ್ಟುತ್ತಾನೆ; ಅಂತಿಮವಾಗಿ ಅವನು ನಾಶವಾಗುತ್ತಾನೆ (ಮತ್ತಾ. 7:24-27).

ಮೇಲಿನ ಸಾಮ್ಯದಲ್ಲಿ ಎರಡು ಮನೆಗಳೆಂದು ಯೇಸುವು ಉಲ್ಲೇಖಿಸಲಾಗಿರುವುದು ಯೆರೂಸಲೇಮ್ ಮತ್ತು ಬಾಬೆಲ್ ಪಟ್ಟಣಗಳಾಗಿವೆ.

ಇವತ್ತಿನ ದಿನದಲ್ಲೂ ನಂಬಿಕೆಯ ಮೂಲಕ ನಿಜವಾಗಿ ನೀತಿವಂತರೆಂದು ನಿರ್ಣಯಿಸಲ್ಪಟ್ಟು, ಹೊಸ ಒಡಂಬಡಿಕೆಗೆ ಒಳಗಾಗಿ, ಯೇಸುವಿನ ರಕ್ತದ ಮುದ್ರೆಯಿಂದ ದೃಢಪಡಿಸಲ್ಪಟ್ಟು, ದೇವರ ಚಿತ್ತಕ್ಕೆ ವಿಧೇಯರಾಗಿ ಯೇಸುವನ್ನು ಹಿಂಬಾಲಿಸುತ್ತಾ ಜೀವಿಸುವ ಜನರು ಇದ್ದಾರೆ (ವಿಶೇಷವಾಗಿ ಮತ್ತಾಯನು 5,6,7ನೇ ಅಧ್ಯಾಯಗಳಲ್ಲಿ ವಿವರಿಸಿರುವಂತೆ); ಇವರು ಬಂಡೆಯ ಮೇಲೆ ಸಭೆಯನ್ನು ಕಟ್ಟುವವರಾಗಿದ್ದಾರೆ ಮತ್ತು ಯೆರೂಸಲೇಮ್ ಪಟ್ಟಣದ ಒಂದು ಭಾಗವಾಗಿದ್ದಾರೆ. ನಾನು ಈ ಪಂಗಡಕ್ಕೆ ಸೇರಿದ್ದೇನೋ ಇಲ್ಲವೋ ಎಂದು ಕಂಡುಕೊಳ್ಳಲು ಮತ್ತಾಯನು 5-7ನೇ ಅಧ್ಯಾಯಗಳನ್ನು ಓದಿಕೊಳ್ಳಬೇಕು.

ಅದೇ ರೀತಿ, ಇತರ ಜನರೂ ಸಹ ಇದ್ದಾರೆ (ಇವರದ್ದೇ ದೊಡ್ಡ ಬಹುಮತವಾಗಿದೆ); ಅವರು ಮತ್ತಾಯನು 5-7ನೇ ಅಧ್ಯಾಯಗಳ ಯೇಸುವಿನ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ, ಆದರೆ ಅವರಲ್ಲಿ ನೀತಿವಂತರೆಂದು ನಿರ್ಣಯಿಸಲ್ಪಡುವಿಕೆ, ನಂಬಿಕೆ ಮತ್ತು ಕೃಪೆ ಇವುಗಳ ಬಗ್ಗೆ ತಪ್ಪಾದ ತಿಳುವಳಿಕೆಯಿದೆ, ಅವರು ಸುಳ್ಳು ಭದ್ರತೆಯನ್ನು ಇರಿಸಿಕೊಂಡು ಜೀವಿಸುತ್ತಾರೆ, ಯೇಸುವಿನ ವಾಕ್ಯಕ್ಕೆ ವಿಧೇಯರಾಗುವ ಬಗ್ಗೆ ಕಾಳಜಿ ವಹಿಸುವುದಿಲ್ಲ, ಮತ್ತು ಮರಳಿನ ಮೇಲೆ ಕಟ್ಟಲ್ಪಟ್ಟ ಮನೆಯಂತೆ - ಬಾಬೆಲ್ ಪಟ್ಟಣದಂತೆ - ಅಂತಿಮವಾಗಿ ಶಾಶ್ವತ ನಾಶನಕ್ಕೆ ಗುರಿಯಾಗುತ್ತಾರೆ.

ಇವರು ತಮ್ಮ ಸ್ವಂತ ದೃಷ್ಟಿಯಲ್ಲಿ ’ಕ್ರೈಸ್ತರು’ ಆಗಿರುತ್ತಾರೆ, ಏಕೆಂದರೆ ಯೇಸುವು ತಿಳಿಸಿದಂತೆ, ಮರಳಿನ ಮೇಲೆ ಮನೆ ಕಟ್ಟಿದ ಮನುಷ್ಯ ಯೇಸುವಿನ ಸ್ವರವನ್ನು ಕೇಳಿದವನೇ ಆಗಿರುತ್ತಾನೆ, ಹಾಗಾಗಿ ಆತನು ಅನ್ಯರ ಗುಂಪಿಗೆ ಸೇರಿದವನಲ್ಲ, ಆದರೆ ಸತ್ಯವೇದವನ್ನು ಓದಿ ’ಸಭೆ’ಗೆ ಹೋಗುತ್ತಿರುತ್ತಾನೆ. ಅವನಲ್ಲಿದ್ದ ಒಂದೇ ಒಂದು ಸಮಸ್ಯೆಯೆಂದರೆ ಅವನು ವಾಕ್ಯಕ್ಕೆ ವಿಧೇಯನಾಗಲಿಲ್ಲ, ಹಾಗಾಗಿ ಯೇಸುವಿನ ವಾಕ್ಯಕ್ಕೆ ವಿಧೇಯರಾದ ಪ್ರತಿಯೊಬ್ಬನಿಗೆ ನೀಡಲಾದ ನಿರಂತರವಾದ ರಕ್ಷಣೆಯ ವಾಗ್ದಾನಕ್ಕೆ ಅವನು ಬಾಧ್ಯನಾಗಲಿಲ್ಲ (ಇಬ್ರಿಯರಿಗೆ 5:9-10). ಅವನಲ್ಲಿದ್ದ ನಂಬಿಕೆಯು ಯಥಾರ್ಥವಾಗಿರಲಿಲ್ಲ, ಏಕೆಂದರೆ ಅವನು ನಂಬಿಕೆಯನ್ನು ಸಮರ್ಥಿಸುವ ವಿಧೇಯತೆಯ ಕಾರ್ಯಗಳನ್ನು ಹೊಂದಿರಲಿಲ್ಲ (ಯಾಕೋಬನು 2:22,26).

ಆದಾಮನ ನೇತೃತ್ವಕ್ಕೆ ಒಳಪಟ್ಟವರು ತಮ್ಮ ನಾಯಕನನ್ನು ಹಿಂಬಾಲಿಸಿ ಪ್ರಕಟಿಸಲ್ಪಟ್ಟ ದೇವರ ಚಿತ್ತಕ್ಕೆ ಅವಿಧೇಯರಾಗುತ್ತಾರೆ, ಆದರೂ "ತಾವು ಹೇಗೂ ಸಾಯುವುದಿಲ್ಲ"ವೆಂಬ ಸೈತಾನನ ಮಾತಿನಲ್ಲಿ ಭರವಸೆಯಿಡುತ್ತಾರೆ (ಆದಿಕಾಂಡ 3:4), ಏಕೆಂದರೆ ತಾವು ’ಕ್ರಿಸ್ತನನ್ನು ಸ್ವೀಕರಿಸಿದ್ದೇವೆ’ ಎಂದು ಅವರು ಹೇಳಿಕೊಳ್ಳುತ್ತಾರೆ. ಈ ರೀತಿಯಾಗಿ ಅವರು ಸುಳ್ಳು ಭದ್ರತೆಯೊಂದಿಗೆ ಬಾಬೆಲಿನಲ್ಲಿ ಜೀವಿಸುತ್ತಾರೆ.

ಇದಕ್ಕೆ ಸರಿಸಮಾನವಾಗಿ, ಕ್ರಿಸ್ತನ ನೇತೃತ್ವಕ್ಕೆ ಒಳಪಟ್ಟವರು ದೇವರ ಚಿತ್ತಕ್ಕೆ ವಿಧೇಯರಾಗಿ, "ಯೇಸುವು ನಡೆದಂತೆಯೇ ನಡೆಯುವವರು" (1 ಯೋಹಾ.2:6) ಎಂಬುದಾಗಿ ಗುರುತಿಸಲ್ಪಡುತ್ತಾರೆ. ಇವರೇ ಕ್ರಿಸ್ತನ ಸಹೋದರರು ಹಾಗೂ ಸಹೋದರಿಯರು (ಮತ್ತಾ. 12:50), ಮತ್ತು ಇವರು ಯೆರೂಸಲೇಮಿನ ಸೌಭಾಗ್ಯದಲ್ಲಿ ಭಾಗಿಗಳಾಗುತ್ತಾರೆ.

ಮತ್ತಾಯನು 5ರಿಂದ 7ನೇ ಅಧ್ಯಾಯಗಳ ಕೊನೆಯಲ್ಲಿ ಯೇಸು ಸ್ವಾಮಿ ತಿಳಿಸಿದ ಸಾಮ್ಯದಲ್ಲಿ ಒಂದು ಕುತೂಹಲಕರ ವಿಷಯವೇನೆಂದರೆ, ಇಂದು ಹೇಗೆ ಬಾಬೆಲ್ ಮತ್ತು ಯೆರೂಸಲೇಮ್ ಇವೆರಡೂ ಪಟ್ಟಣಗಳು ನಿಂತಿವೆಯೋ, ಹಾಗೆಯೇ - ಸ್ವಲ್ಪಕಾಲ, ಮಳೆ ಮತ್ತು ಪ್ರವಾಹ ಬರುವ ತನಕ - ಬುದ್ದಿಯುಳ್ಳ ಮನುಷ್ಯನ ಮನೆ ಹಾಗೂ ಬುದ್ಧಿಹೀನ ಮನುಷ್ಯನ ಮನೆ ಇವೆರಡೂ ನಿಂತಿದ್ದವು. ಬುದ್ಧಿಹೀನ ಮನುಷ್ಯನು ತನ್ನ ಮನೆಯು ಹೊರಗಿನಿಂದ ಹೇಗೆ ಕಾಣಿಸುತ್ತದೆ ಎಂಬುದರ ಬಗ್ಗೆ ಮಾತ್ರ ಕಾಳಜಿ ವಹಿಸಿದನು (ಮನುಷ್ಯರ ಮುಂದೆ ತನ್ನ ಸಾಕ್ಷಿ), ಬುದ್ದಿಯುಳ್ಳ ಮನುಷ್ಯನು ಪ್ರಾಥಮಿಕವಾಗಿ ಅಸ್ತಿವಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಿದನು (ದೇವರ ಮುಂದೆ ತನ್ನ ಹೃದಯದ ಅಂತರಂಗದ ಜೀವಿತ ಹೇಗಿದೆ ಎನ್ನುವುದರ ಬಗ್ಗೆ).

ಯೆರೂಸಲೇಮಿನ ವಿಶಿಷ್ಟ ಲಕ್ಷಣವೇನೆಂದರೆ ಅದರ ಪರಿಶುದ್ಧತೆ. ಇದನ್ನು "ಪರಿಶುದ್ಧ ಪಟ್ಟಣ" ಎಂದು ಕರೆಯಲಾಗಿದೆ (ಪ್ರಕಟನೆ 21:2). ಆದರೆ ಬಾಬೆಲ್ ನಗರವು ತನ್ನ ಶ್ರೇಷ್ಠತೆಯಿಂದ ನಿಂತಿದೆ. ಇದನ್ನು "ಮಹಾಪಟ್ಟಣ" ಎಂದು ಕರೆಯಲಾಗಿದೆ (ಪ್ರಕಟನೆ 18:10). ಪ್ರಕಟನೆಯ ಪುಸ್ತಕದಲ್ಲಿ ಇದನ್ನು "ಮಹಾ" ಎಂಬುದಾಗಿ ಹನ್ನೊಂದು ಬಾರಿ ಕರೆಯಲಾಗಿದೆ.

ದೇವರಿಗೆ ವಿಧೇಯರಾಗಿ ನಿಜವಾದ ಪರಿಶುದ್ಧತೆಯಲ್ಲಿ ಜೀವಿಸುವವರು ಮತ್ತು ನಂಬಿಕೆಯ ಮೂಲಕ ಪಡೆಯಲಾಗುವ ಕೃಪೆಯ ಮೂಲಕ ಕ್ರಿಸ್ತನ ಸ್ವಭಾವದಲ್ಲಿ ಪಾಲ್ಗೊಳ್ಳುವವರು ಒಂದುಗೂಡಿಸಲ್ಪಟ್ಟು ಯೆರೂಸಲೇಮ್ ಪಟ್ಟಣವು ಕಟ್ಟಲ್ಪಡುತ್ತದೆ; ಆದರೆ ಯಾರು ಈ ಲೋಕದಲ್ಲಿ ಶ್ರೇಷ್ಠರೆಂದು ಎಣಿಸಲ್ಪಡಲು ತವಕಿಸುತ್ತಾರೋ (ಮನುಷ್ಯರಿಂದ ದೊರಕುವ ಸಾಕ್ಷಿ ಮತ್ತು ಗೌರವ) ಅವರು ಬಾಬೆಲ್ ಪಟ್ಟಣವಾಗಿ ಕಟ್ಟಲ್ಪಡುತ್ತಾರೆ.

ದೇವಜನರಿಗೆ ಸಾವಿರದ ಒಂಭೈನೂರು ವರ್ಷಗಳಿಂದಲೂ ದೇವರಿಂದ ಈ ಕರೆಯು ಬರುತ್ತಿದೆ:
ನನ್ನ ಪ್ರಜೆಗಳೇ, ಅವಳನ್ನು (ಬಾಬೆಲನ್ನು) ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬೇಡಿರಿ, ಇಲ್ಲವಾದರೆ ಅವಳಿಗಾಗುವ ಉಪದ್ರವ ನಿಮಗೂ ಆಗುವುದು (ಪ್ರಕಟನೆ 18:4 - TLB ಅನುವಾದ).

ನಾವು ಇಂದು ಯುಗಾಂತ್ಯವನ್ನು ಸಮೀಪಿಸುತ್ತಾ ಇರುವಾಗ, ಆ ಕರೆಯು ನಮಗೆ ಮತ್ತಷ್ಟು ತುರ್ತಾಗಿ ಕೇಳಿಸುತ್ತಿದೆ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ