WFTW Body: 

ಹಳೆಯ ಒಡಂಬಡಿಕೆಯ ನಿಯಮವು ಹೀಗಿತ್ತು: "ನೀನು ಸುಳ್ಳಾಣೆಯಿಡಬಾರದು; ನೀನು ಇಟ್ಟುಕೊಂಡ ಆಣೆಗಳನ್ನು ಕರ್ತನಿಗೆ ಸಲ್ಲಿಸಬೇಕು," ಮತ್ತು "ನಿನ್ನ ನೆರೆಯವನ ವಿರುದ್ಧ ಸುಳ್ಳು ಸಾಕ್ಷಿ ಹೇಳಬಾರದು." ಇಂದಿನ ಭಾಷೆಯಲ್ಲಿ ಸರಳವಾಗಿ ಹೇಳುವುದಾದರೆ, ಒಂದು ಆಣೆ ಇಡುವುದು ಅಂದರೆ ಪ್ರಮಾಣ ಮಾಡಿ ಏನನ್ನಾದರೂ ಒಪ್ಪಿಕೊಳ್ಳುವುದು. ಜನರು ತಮ್ಮ ಕೈಯನ್ನು ಸತ್ಯವೇದದ ಮೇಲಿಟ್ಟು, ಸತ್ಯವನ್ನು ಮಾತನಾಡುತ್ತೇನೆ, ಎಂದು ಹೇಳುತ್ತಾರೆ. ಇದರ ನಿಜವಾದ ಅರ್ಥವೇನೆಂದರೆ, "ನಾನು ಹೆಚ್ಚಿನ ಸಮಯ ಸುಳ್ಳು ಹೇಳುತ್ತೇನೆ, ಆದರೆ ಈಗ ಸತ್ಯ ಹೇಳಲಿದ್ದೇನೆ." ಯಾರಾದರೂ ಸತ್ಯವೇದದ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದಾಗ ಅದರ ಅರ್ಥ ಇದೇ ಆಗಿರುತ್ತದೆ. ಆದರೆ, ಯಾಕೋಬನು ಬರೆದ ಪತ್ರಿಕೆಯಲ್ಲಿ ನೀವು ಯಾವಾಗಲೂ ಸತ್ಯವನ್ನೇ ಮಾತನಾಡಬೇಕೆಂದು ಹೇಳಲಾಗಿದೆ (ಯಾಕೋಬನು 5:12), ಮತ್ತು ಇದರ ಬಗ್ಗೆ ಯೇಸುವೂ ಸಹ ಅದನ್ನೇ ಹೇಳಿದ್ದಾರೆ.

ಮತ್ತಾಯನು 5:33-37'ರ ವಚನಗಳ ಸಾರಾಂಶವೇನೆಂದರೆ, ನಾವು ಯಾವಾಗಲೂ ಸತ್ಯವಂತರಾಗಿರಬೇಕು. ನಾವು ನಮ್ಮ ಮಾತುಗಳಲ್ಲಿ ಚಾಣಾಕ್ಷತೆ, ಜಾಣತನ ಮತ್ತು ಮೋಸದ ತಂತ್ರಗಳನ್ನು ಬಳಸಬಾರದು, ಮತ್ತು ನ್ಯಾಯಾಲಯದಲ್ಲಿ ಮಾತನಾಡುವಂತೆ ಕಾನೂನುಬದ್ಧವಾಗಿ ಸತ್ಯ ಹೇಳುತ್ತಿದ್ದೇವೆ, ಎಂದು ವಾದಿಸಬಾರದು. ನಾವು ಇತರರಿಂದ ಸತ್ಯವಂತರೆಂದು ಗುರುತಿಸಲ್ಪಡಬೇಕು ಮತ್ತು ಯಾವುದರಲ್ಲೂ ಸುಳ್ಳು ಹೇಳಬಾರದು. ನಮ್ಮ ಮಾತು ಹೌದಾದರೆ "ಹೌದು", ಅಲ್ಲವಾದರೆ "ಅಲ್ಲ" ಎಂದಿರಲಿ. ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದು. ನಾನು "ಹೌದು" ಎಂಬ ಪದವನ್ನು ವಂಚನೆಯಿಂದ ಉಪಯೋಗಿಸಬೇಕಾದ ಅಗತ್ಯ ಉಂಟಾದರೆ, ಅದರಲ್ಲಿ ಏನೋ ತಪ್ಪಿದೆ ಎಂದರ್ಥ ಮತ್ತು ಅದು ಅಂತಿಮವಾಗಿ ನಮ್ಮನ್ನು ಕಪಟತನಕ್ಕೆ ನಡೆಸುತ್ತದೆ.

ನೀವು ’ವಿಮೋಚನಕಾಂಡ 20'ನೇ ಅಧ್ಯಾಯದಲ್ಲಿ ಕೊಡಲ್ಪಟ್ಟಿರುವ ದಶಾಜ್ಞೆಗಳನ್ನು ಓದಿಕೊಂಡರೆ, ಅದು "ನೀವು ಸುಳ್ಳು ಹೇಳಬಾರದು," ಎಂದು ಹೇಳಿಲ್ಲ. ಒಂಬತ್ತನೇ ಆಜ್ಞೆಯು, "ನಿಮ್ಮ ನೆರೆಯವರ ವಿರುದ್ಧ ಸುಳ್ಳುಸಾಕ್ಷಿ ಹೇಳಬಾರದು," ಎಂದಾಗಿತ್ತು. ಇದು ಮೂಲತಃ ಕಾನೂನು ಅಥವಾ ನ್ಯಾಯಾಲಯದ ವಿಚಾರಗಳಿಗೆ ಸಂಬಂಧಿಸಿತ್ತು, ಅಂದರೆ ನ್ಯಾಯಾಲಯದಲ್ಲಿ ನೀವು ಸುಳ್ಳು ಹೇಳಬಾರದು ಎಂದಾಗಿತ್ತು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನೀವು ಯಾವ ವಿಷಯದಲ್ಲಾದರೂ ಪ್ರಮಾಣ ಮಾಡಿದರೆ ಸತ್ಯ ಹೇಳಲೇಬೇಕು. ಇದೇ ಹಳೆಯ ಒಡಂಬಡಿಕೆಯ ಮಾನದಂಡವಾಗಿತ್ತು, ಏಕೆಂದರೆ "ಸುಳ್ಳು ಹೇಳಬೇಡಿ" ಎಂಬ ಆಜ್ಞೆಯನ್ನು ಯಾರೂ ಪಾಲಿಸಲಾರರೆಂಬುದು ದೇವರಿಗೆ ತಿಳಿದಿತ್ತು. ಅದೇ ರೀತಿ, ಹಳೆಯ ಒಡಂಬಡಿಕೆಯಲ್ಲಿ "ನೀವು ಕೋಪ ಮಾಡಿಕೊಳ್ಳಬಾರದು," ಎಂಬ ಆಜ್ಞೆ ಇರಲಿಲ್ಲ, ಏಕೆಂದರೆ ಅಂತಹ ಆಜ್ಞೆಯನ್ನು ಯಾರೂ ಪಾಲಿಸಲಾರರೆಂಬುದು ದೇವರಿಗೆ ತಿಳಿದಿತ್ತು. ಆದ್ದರಿಂದ ಆ ಕಾಲದಲ್ಲಿ ಆಜ್ಞೆಯು "ನೀವು ನರಹತ್ಯ ಮಾಡಬಾರದು," ಎಂದಾಗಿತ್ತು. ಅದೇ ರೀತಿ, ಹಳೆಯ ಒಡಂಬಡಿಕೆಯಲ್ಲಿ "ಸ್ತ್ರೀಯನ್ನು ಮೋಹಿಸಬಾರದು," ಎಂಬ ಆಜ್ಞೆ ಇರಲಿಲ್ಲ, ಏಕೆಂದರೆ ಅದನ್ನು ಯಾರೂ ಪಾಲಿಸಲಾರರೆಂಬುದು ದೇವರಿಗೆ ತಿಳಿದಿತ್ತು. ಹಾಗಾಗಿ ಆಜ್ಞೆಯು, "ವ್ಯಭಿಚಾರ ಮಾಡಬಾರದು," ಎಂದಾಗಿತ್ತು.

ಆದರೆ ಈಗ ಹೊಸ ಒಡಂಬಡಿಕೆಯಲ್ಲಿ, ಪವಿತ್ರಾತ್ಮನು ನಮ್ಮೊಳಗೆ ದಾನವಾಗಿ ತುಂಬಲ್ಪಟ್ಟಿದ್ದಾನೆ, ಮತ್ತು ನಾವು ಅಂತಹ ಜೀವಿತವನ್ನು ಜೀವಿಸಲು ಸಾಧ್ಯವಾಗುತ್ತದೆ. ಪವಿತ್ರಾತ್ಮನು ಶಕ್ತಿಯುತವಾಗಿ ಹರಿದು ಬರುವಾಗ, ಆತನು ವಿದ್ಯುತ್‌ಶಕ್ತಿಯು ಹೇಗೆ ಹರಿದು ದೀಪವನ್ನು ಬೆಳಗಿಸುತ್ತದೋ ಅಥವಾ ಫ್ಯಾನನ್ನು ತಿರುಗಿಸುತ್ತದೋ ಅಥವಾ ನಮ್ಮ ಮನೆಗಳಲ್ಲಿ ಯಂತ್ರೋಪಕರಣಗಳನ್ನು ಚಲಾಯಿಸುತ್ತದೋ, ಅದೇ ರೀತಿ ಬರುತ್ತಾನೆ. ಪವಿತ್ರಾತ್ಮನ ಶಕ್ತಿ ಬಂದಾಗ ನಾವು ಸಾಮಾನ್ಯವಾಗಿ ಮಾಡಲು ಆಗದಿರುವಂತ ಕೆಲವು ಸಂಗತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಈಗ ನಾವು ಕಣ್ಣಿನ ಆಶೆಯನ್ನು ಜಯಿಸಲು ಸಾಧ್ಯವಾಗುತ್ತದೆ, ಕೋಪವನ್ನು ಜಯಿಸಲು ಸಾಧ್ಯವಾಗುತ್ತದೆ, ನಮ್ಮ ಸಂಗಾತಿಯೊಂದಿಗೆ ಕಿರಿಚಾಡುವುದನ್ನು ನಿಲ್ಲಿಸಲು ಸಾಧ್ಯವಾಗುತ್ತದೆ. ಎಲ್ಲಾ ಸಮಯದಲ್ಲೂ ಸತ್ಯವನ್ನು ಮಾತನಾಡಲು ಸಾಧ್ಯವಾಗುತ್ತದೆ, ಮತ್ತು ನಿಮ್ಮ ಮಾತಿನಲ್ಲಿ, ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದು ಹೇಳಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಕಂಡುಬರುವ ಒಂದು ಉದಾಹರಣೆಯನ್ನು ಉಪಯೋಗಿಸಿಕೊಳ್ಳೋಣ: ಒಂದು ವೇಳೆ ನೀವು ನ್ಯಾಯಾಲಯದಲ್ಲಿ ಒಂದು ಮಾರಾಟದ ಕ್ರಯಪತ್ರವನ್ನು ಅಥವಾ ಯಾವುದೋ ಬೇರೊಂದು ಒಪ್ಪಂದ ಪತ್ರವನ್ನು ಸಹಿ ಮಾಡಬೇಕಾದಾಗ, ಸಹಿ ಮಾಡುವ ಮೊದಲು ಆ ಒಪ್ಪಂದವನ್ನು ಬಹಳ ಜಾಗರೂಕತೆಯಿಂದ ಓದಿ, ಅನಂತರ ಆ ಒಪ್ಪಂದದ ಪತ್ರಕ್ಕೆ ಸಹಿ ಹಾಕುತ್ತೀರಿ, ಯಾಕೆಂದರೆ ಅದು ಕಾನೂನಿಗೆ ಅನುಸಾರವಾಗಿ ನ್ಯಾಯಾಲಯದಿಂದ ಜಾರಿಗೊಳಿಸಲಾಗುತ್ತದೆ ಎಂದು ನಿಮಗೆ ಗೊತ್ತಿದೆ. ಅದೇ ರೀತಿ, ಒಬ್ಬ ಕ್ರೈಸ್ತನ ಮಾತು ಒಂದು ಒಪ್ಪಂದ ಪತ್ರಕ್ಕೆ ಸಹಿ ಮಾಡುವಷ್ಟೇ ಯೋಗ್ಯವಾಗಿರಬೇಕು. ನಿಮ್ಮ ಜೀವಿತದಲ್ಲಿ ಇದು ಸತ್ಯವಾಗಿದೆಯೇ?

ನನಗೆ ನೆನಪಿದೆ, ನನ್ನ ಸ್ವಂತ ಜೀವಿತದಲ್ಲಿ ಒಂದು ಸಾರಿ ನನ್ನ ಮನೆಯಲ್ಲಿ ನಾನು ಮಾರಾಟಕ್ಕೆ ಇಟ್ಟಿದ್ದ ಯಾವುದೋ ಒಂದು ವಸ್ತುವನ್ನು ಕೊಂಡುಕೊಳ್ಳಲು ಯಾರೋ ಒಬ್ಬ ವ್ಯಕ್ತಿಯೊಂದಿಗೆ ನಾನು ಒಪ್ಪಂದ ಮಾಡಿಕೊಂಡಿದ್ದೆನು. ಅದು ಸಾಕಷ್ಟು ದುಬಾರಿಯ ವಸ್ತುವಾಗಿತ್ತು ಮತ್ತು ನಾವಿಬ್ಬರೂ ಅದಕ್ಕೆ ಒಂದು ಕ್ರಯವನ್ನು ಒಪ್ಪಿಕೊಂಡಿದ್ದೆವು, ಆದರೆ ಆ ವ್ಯಕ್ತಿಯು ಅದನ್ನು ತೆಗೆದುಕೊಳ್ಳಲು ಅನೇಕ ತಿಂಗಳುಗಳು ಬರಲೇ ಇಲ್ಲ. ಅಷ್ಟರಲ್ಲಿ ಆ ವಸ್ತುವಿನ ಬೆಲೆಯು ಹೆಚ್ಚಾಗಿತ್ತು, ಹಾಗಾಗಿ ನಾನು ಅವನಿಗೆ ಹೀಗೆ ಹೇಳಬಹುದಾಗಿತ್ತು - ’ಓ, ನೀನು ಆಗ ಬಂದು ತೆಗೆದುಕೊಳ್ಳಲಿಲ್ಲ, ಈಗ ಅದರ ಬೆಲೆ ಏರಿದೆ,’ ಎಂಬುದಾಗಿ. ನಾನು ಅವನ ಜೊತೆ ಯಾವ ಒಪ್ಪಂದದ ಪತ್ರವನ್ನೂ ಸಹಿ ಮಾಡಿರದಿದ್ದರೂ, ಆ ವಸ್ತುವನ್ನು ಒಂದು ಕ್ರಯಕ್ಕೆ ಕೊಡಲು ಬಾಯಿಮಾತಿನಿಂದ ಒಪ್ಪಿಕೊಂಡಿದ್ದರಿಂದ ಕರ್ತನು ನನಗೆ ಹೀಗೆ ಹೇಳಿದರು, "ನಿನ್ನ ಮಾತು ಹೌದಾದರೆ ಹೌದಿರಲಿ ಮತ್ತು ಅಲ್ಲವಾದರೆ ಅಲ್ಲ ಎಂದಿರಲಿ." ಆ ಸಹೋದರನು ಸಂಕಟದಲ್ಲಿ ಬಿದ್ದವನಾಗಿದ್ದರಿಂದ ನಾನು ಇನ್ನೂ ಹೆಚ್ಚಾಗಿ ನನ್ನ ಮಾತನ್ನು ಉಳಿಸಿಕೊಳ್ಳಲು ಬಯಸಿದೆನು. "ಖಂಡಿತವಾಗಿ ಮೊದಲು ಹೇಳಿದ ಕ್ರಯಕ್ಕೆ ನೀನು ಆ ವಸ್ತುವನ್ನು ತೆಗೆದುಕೊಳ್ಳಬಹುದು," ಎಂದು ನಾನು ಆ ವ್ಯಕ್ತಿಗೆ ಹೇಳಿದಾಗ ಅವನು ಸಂತೋಷಪಟ್ಟನು. ಹೀಗೆ ಮಾಡಿದ್ದರಿಂದ ನಾನು ಏನನ್ನು ನಷ್ಟ ಹೊಂದಿದೆ? ಹಣದ ವಿಷಯದಲ್ಲಿ ನನಗೆ ಸ್ವಲ್ಪ ನಷ್ಟವಾಗಿರಬಹುದು. ನಾನು ಅದನ್ನು ಸ್ವಲ್ಪ ಹೆಚ್ಚು ಬೆಲೆಗೆ ಅವನಿಗೆ ಕೊಡಬಹುದಾಗಿತ್ತು, ಮತ್ತು ನಾನು ಕೆಲವು ಸಾವಿರಗಳಷ್ಟು ಲಾಭ ಗಳಿಸಬಹುದಾಗಿತ್ತು, ಆದರೆ ನನ್ನಲ್ಲಿ ಒಂದು ಕೆಟ್ಟ ಮನಸಾಕ್ಷಿ ಉಳಿದುಕೊಳ್ಳುತ್ತಿತ್ತು, ಯಾಕೆಂದರೆ ನನ್ನ ಹೌದು ಹೌದಾಗಿರುತ್ತಿರಲಿಲ್ಲ.

ನಮ್ಮ ನಡತೆಯಲ್ಲಿ ಕ್ರಿಸ್ತನಂತೆ ಇರುವುದಕ್ಕಾಗಿ ಮತ್ತು ಪ್ರಾಮಾಣಿಕನಾಗಿರಲು, ಅಂದರೆ ಯಥಾರ್ಥಚಿತ್ತನಾಗಿರಲು ಸ್ವಲ್ಪ ಹಣವನ್ನು ಕಳೆದುಕೊಳ್ಳುವುದು ಯೋಗ್ಯವಾದದ್ದಾಗಿದೆ. ನಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂಬುದನ್ನು ನಾವು ನಡೆಸಿಕೊಡಲು ಸಿದ್ಧರಿದ್ದೇವೋ ಇಲ್ಲವೋ ಎಂಬುದನ್ನು ಕಂಡುಕೊಳ್ಳುವುದಕ್ಕಾಗಿ, ನಾವು ಅನೇಕ ಸಾರಿ ಹಣದ ಕ್ಷೇತ್ರದಲ್ಲಿ ಶೋಧಿಸಲ್ಪಡುತ್ತೇವೆ.

ದೇವರು ನಮ್ಮನ್ನು ಇನ್ನೂ ಉನ್ನತ ಸ್ಥಾನಕ್ಕೆ ನಡೆಸುವ ಮೊದಲು ನಮ್ಮನ್ನು ಈ ವಿಷಯದಲ್ಲಿ ಪರೀಕ್ಷಿಸುತ್ತಾರೆ. ನನ್ನ ಜೀವನದಲ್ಲಿ ಹಲವಾರು ಬಾರಿ ನಾನು ಏನನ್ನಾದರೂ ಕಳೆದುಕೊಳ್ಳಬೇಕಾದ ಅಥವಾ ತ್ಯಾಗ ಮಾಡಬೇಕಾದ ಸಂದರ್ಭಗಳಲ್ಲಿ ದೇವರು ನನ್ನನ್ನು ಪರೀಕ್ಷಿಸಿದ್ದನ್ನು ನಾನು ಕಂಡುಕೊಂಡಿದ್ದೇನೆ. ಆತನು ನಾನು ಈ ಆಜ್ಞೆಗಳ ಪ್ರಕಾರ ಜೀವಿಸುತ್ತೇನೋ ಎಂದು ನೋಡಲು ನನ್ನನ್ನು ಪರೀಕ್ಷಿಸುತ್ತಾರೆ. ಆಗ ನಾನು ಆ ಆಜ್ಞೆಯನ್ನು ನಿಜವಾಗಿ ನಂಬುತ್ತೇನೋ ಇಲ್ಲವೋ ಎಂಬುದನ್ನು ನಾನು ಕಂಡುಕೊಳ್ಳುತ್ತೇನೆ. ಸತ್ಯವನ್ನು ಮಾತನಾಡುವುದರಿಂದ ನಮಗೆ ಯಾವುದೇ ನಷ್ಟವಿಲ್ಲದ ಅನೇಕ ಸಂದರ್ಭಗಳು ಇಂದಿನ ದಿನಗಳಲ್ಲಿ ಇವೆ. ಅಲ್ಲಿ ಯಾವುದೇ ಪರೀಕ್ಷೆಯಿಲ್ಲ, ಆದರೆ ಉದಾಹರಣೆಗೆ, ನೀವು ಸತ್ಯವನ್ನು ಮಾತನಾಡುವುದರಿಂದ ಯಾವಾಗ ನಿಮ್ಮ ಕೆಲಸಕ್ಕೆ ಕುತ್ತು ಬರುತ್ತದೋ (ಕೆಲಸ ಕಳೆದುಕೊಳ್ಳಬೇಕಾಗುತ್ತದೋ) - ಆಗಲೇ ನೀವು ಇನ್ನೂ ಹೆಚ್ಚಿನ ಉನ್ನತ ಸೇವೆಗೆ ನಿಮ್ಮನ್ನು ನಡೆಸಬಹುದೋ ಇಲ್ಲವೋ ಎಂದು ದೇವರಿಂದ ಪರೀಕ್ಷೆಗೆ ಒಳಪಡುತ್ತೀರಿ. ಈ ರೀತಿಯ ಅನೇಕ ಕ್ಷೇತ್ರಗಳಲ್ಲಿ ದೇವರು ನಮ್ಮನ್ನು ಪರೀಕ್ಷಿಸುತ್ತಾರೆಂದು ನಾನು ನಂಬುತ್ತೇನೆ ಮತ್ತು ಬಹಳಷ್ಟು ಜನರು, ಯುವಕರು, ದೇವರ ಈ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ.

ದೇವರು ಯಾರನ್ನೂ ತನ್ನ ನಂಬಿಗಸ್ತನಾದ ಸೇವಕನಾಗಲು ಬಲವಂತ ಪಡಿಸುವುದಿಲ್ಲ. ಆತನು, ನೀವು ಮತ್ತು ನಾನು ಆತನ ನಂಬಿಗಸ್ತರಾದ ಸೇವಕರಾಗಿರಬೇಕೆಂದು ಬಯಸುತ್ತಾನೆಂದು ನಾನು ನಂಬುತ್ತೇನೆ, ಆದಾಗ್ಯೂ ನೀವು ನಂಬಿಗಸ್ತರಾಗಿರುತ್ತಿರೋ ಇಲ್ಲವೋ, ದೇವರ ವಾಕ್ಯದ ಗುಣಮಟ್ಟಕ್ಕೆ ಬದ್ಧರಾಗಿರುತ್ತೀರೋ ಇಲ್ಲವೋ, ಮತ್ತು ಜನರನ್ನು ಮೆಚ್ಚಿಸುವುದಕ್ಕೋಸ್ಕರ ದೇವರ ವಿಷಯಗಳಲ್ಲಿ ನೀವು ರಾಜಿ ಮಾಡಿಕೊಳ್ಳುತ್ತೀರೋ ಇಲ್ಲವೋ ಎಂಬುದು, ನೀವು ಎಂದಾದರೂ ದೇವರ ನಿಜವಾದ ಸೇವಕರಾಗುತ್ತೀರೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತದೆ.

"ದೇವರು ನಮ್ಮನ್ನು ಇನ್ನೂ ಉನ್ನತ ಮಟ್ಟಕ್ಕೆ ನಡೆಸುವ ಮೊದಲು ಈ ವಿಷಯದಲ್ಲಿ ನಮ್ಮನ್ನು ಪರೀಕ್ಷಿಸುತ್ತಾರೆ”

ಉದಾಹರಣೆಗೆ ಒಂದು ಸಂದರ್ಭವನ್ನು ಯೋಚಿಸಿರಿ, ನೀವು ಒಂದು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೀರಿ, ಮತ್ತು ಅಲ್ಲಿರುವ ಒಂದು ದುಬಾರಿ ಯಂತ್ರವನ್ನು ನೀವು ಆಕಸ್ಮಿಕವಾಗಿ ತಪ್ಪಾಗಿ ಬಳಸಿ ಹಾಳು ಮಾಡಿದ್ದೀರಿ, ಆದರೆ ನೀವು ಹೀಗೆ ಮಾಡಿದ್ದನ್ನು ಯಾರು ನೋಡಿಲ್ಲ. ಈ ಯಂತ್ರವನ್ನು ಅನೇಕ ಜನರು ಬಳಸುತ್ತಾರೆ ಮತ್ತು ಸ್ವಲ್ಪ ಸಮಯದ ನಂತರ ಯಾರೋ ಒಬ್ಬರು ಯಂತ್ರ ಕೆಲಸ ಮಾಡುತ್ತಿಲ್ಲ, ಎಂಬುದನ್ನು ಕಂಡುಹಿಡಿಯುತ್ತಾರೆ ಮತ್ತು ಇದನ್ನು ತನಿಖೆ ಮಾಡಲು ಅಧಿಕಾರಿಗಳು ಬರುತ್ತಾರೆ. ಕಚೇರಿಯ ಹಿರಿಯಧಿಕಾರಿಯು ಬಂದು, ಯಂತ್ರವನ್ನು ಯಾರು ಹಾಳು ಮಾಡಿದ್ದೀರಿ, ಎಂದು ಕೇಳುತ್ತಾರೆ. ಅದು ನೀವೇ ಎಂದು ನಿಮಗೆ ತಿಳಿದಿದೆ, ಆದರೆ ಅದನ್ನು ತಿಳಿಯಲು ಇನ್ನಾರಿಗೂ ಸಾಧ್ಯವಿಲ್ಲ, ಏಕೆಂದರೆ ಅನೇಕ ಜನರು ಅದನ್ನು ಬಳಸುತ್ತಿದ್ದರು; ಹಾಗಾಗಿ ನೀವು ಸುಮ್ಮನಿರುತ್ತಿರಿ. ನೀವು ಬಾಯಿ ಬಿಡದ ಕಾರಣ ಸುಳ್ಳು ಹೇಳಿಲ್ಲ ಎಂದು ನೀವು ಭಾವಿಸುತ್ತೀರಿ, ಆದರೆ ವಾಸ್ತವವಾಗಿ ನೀವು ಸುಳ್ಳು ಹೇಳಿದ್ದೀರಿ. ನೀವು ಬಾಯಿ ಬಿಡದೆಯೇ ಸುಳ್ಳು ಹೇಳಿದ್ದೀರಿ! ನಿಮ್ಮ ಕೆಲಸವನ್ನು ಉಳಿಸಿಕೊಳ್ಳಲಿಕ್ಕಾಗಿ, ಯಂತ್ರವನ್ನು ಕೊನೆಯದಾಗಿ ಬಳಸಿದ್ದು ಮತ್ತು ಅದನ್ನು ಯಾವುದೋ ರೀತಿ ಹಾಳು ಮಾಡಿದ್ದು ನೀವೇ ಎಂದು ನೀವು ಒಪ್ಪಿಕೊಳ್ಳಲಿಲ್ಲ. ಒಂದು ವೇಳೆ ನೀವು ತಪ್ಪೊಪ್ಪಿಕೊಂಡಿದ್ದರೆ, ಅದು ದುಬಾರಿ ಯಂತ್ರವಾದ್ದರಿಂದ ಬಹುಶಃ ಅವರು ನಿಮ್ಮನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದರು.

ಆ ಕ್ಷಣದಲ್ಲಿ ಹೆಚ್ಚು ಪ್ರಮುಖವಾದದ್ದೇನು? ಸೈತಾನನು ನಿಮ್ಮ ಬಳಿಗೆ ಬಂದು, "ಸುಳ್ಳು ಸರ್ವಶಕ್ತಿಯುತವಾದದ್ದು; ನೀನು ಸುಳ್ಳು ಹೇಳಿ ನಿನ್ನ ಉದ್ಯೋಗವನ್ನು ಉಳಿಸಿಕೊಳ್ಳಬಹುದು,” ಎಂದು ಹೇಳುತ್ತಾನೆ. ಅದೇ ಸಮಯದಲ್ಲಿ ಪವಿತ್ರಾತ್ಮನು ನಿಮ್ಮ ಹೃದಯದಲ್ಲಿ, ಅದು ಸುಳ್ಳು ಎಂದು ಮೃದುವಾಗಿ ಹೇಳುತ್ತಾನೆ. ದೇವರು ಸರ್ವಶಕ್ತನಲ್ಲವೇ? ಈ ಪರಿಸ್ಥಿತಿಯಲ್ಲಿ ದೇವರನ್ನು ನಂಬಿ ಸತ್ಯವನ್ನು ಹೇಳಿದರೆ, ಬಹುಶಃ ನೀವು ಉದ್ಯೋಗವನ್ನು ಕಳೆದುಕೊಳ್ಳಬಹುದು, ಆದರೆ ದೇವರು ನಿಮಗೆ ಇನ್ನೂ ಉತ್ತಮವಾದುದನ್ನು ಕೊಡುವರು. ನಿಮ್ಮಲ್ಲಿ ಇಂತಹ ನಂಬಿಕೆ ಇದೆಯೆ? ಇಂತಹ ಸಂದರ್ಭಗಳಲ್ಲೇ ನಾವು ಪರೀಕ್ಷೆಗೆ ಒಳಗಾಗುತ್ತೇವೆ.

ನಾನು ಇಲ್ಲಿ ಹೇಳುತ್ತಿರುವುದು ಕೇವಲ ಸಿದ್ಧಾಂತವಲ್ಲ. ದೇವರು ನನ್ನನ್ನು ಈ ಕ್ಷೇತ್ರದಲ್ಲಿ ಅನೇಕ ಬಾರಿ, ಹಲವಾರು ಸಂದರ್ಭಗಳಲ್ಲಿ ಪರೀಕ್ಷಿಸಿದ್ದಾರೆ - ನಾನು ಚಾತುರ್ಯದಿಂದ ಅಥವಾ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳಬಲ್ಲೆನೇ, ಎಂದು ನೋಡುವುದಕ್ಕಾಗಿ ಅಲ್ಲ; ಆದರೆ ನಾನು ಪ್ರಾಮಾಣಿಕನಾಗಿದ್ದೇನೆಯೇ? ಸತ್ಯವನ್ನು ಹೇಳಲು ಬೆಲೆ ತೆರಲು ಸಿದ್ಧನಾಗಿದ್ದೇನೆಯೇ? ಎಂಬುದನ್ನು ನೋಡಲಿಕ್ಕಾಗಿ.

ಕರ್ತನು ನನ್ನನ್ನು ಅಭಿಷೇಕಿಸಿ, ಯಾವುದೇ ಬೆಲೆ ಕೊಡಬೇಕಾದರೂ ವೇದಿಕೆಯಿಂದ ಸತ್ಯವನ್ನು ಸಾರುವ ಸೇವೆಯನ್ನು ನನಗೆ ಕೊಡುವುದಕ್ಕಾಗಿ ಈ ರೀತಿಯ ಪರೀಕ್ಷೆಗಳನ್ನೇ ಉಪಯೋಗಿಸಿಕೊಂಡನು. ಇಂದು ವೇದಿಕೆಗಳ ಮೇಲೆ, ಕ್ರೈಸ್ತ ಗುಂಪುಗಳು ಹಾಗೂ ಪಂಗಡಗಳ ನಡುವೆ, ಯಾವುದೇ ಬೆಲೆ ತೆರಬೇಕಾದರೂ ಸತ್ಯವನ್ನು ಸಾರುವ ಅನೇಕ ದೇವ ಪ್ರವಾದಿಗಳನ್ನು ದೇವರು ಬಯಸುತ್ತಾರೆಂದು ನಾನು ನಂಬುತ್ತೇನೆ — ಅವರು ಹೊರಹಾಕಲ್ಪಟ್ಟು ದ್ವೇಷಿಸಲ್ಪಟ್ಟರೂ, ತಿರಸ್ಕೃತರಾದರೂ, ತಪ್ಪಾಗಿ ಅರ್ಥ ಮಾಡಿಕೊಳ್ಳಲ್ಪಟ್ಟರೂ, ಟೀಕಿಸಲ್ಪಟ್ಟರೂ, ಸುಳ್ಳು ಆರೋಪಗಳಿಗೆ ಒಳಗಾದರೂ ಸತ್ಯವನ್ನು ನುಡಿಯಲು ಸಿದ್ಧರಾಗಿರಬೇಕು. ದೇವರು ನಿಮ್ಮನ್ನು ಆ ಸೇವೆಗೆ ಸಿದ್ಧಗೊಳಿಸುವ ಮಾರ್ಗವೆಂದರೆ, ದೈನಂದಿನ ಜೀವನದ ಸಾಮಾನ್ಯ ಸಂದರ್ಭಗಳಲ್ಲಿ ನಿಮ್ಮನ್ನು ಪರೀಕ್ಷಿಸುವುದು — ನೀವು ಸತ್ಯದ ಪರ ನಿಂತದ್ದರಿಂದ ಉದ್ಯೋಗ ಕಳೆದುಕೊಳ್ಳಬೇಕಾದರೂ, ಹಣ ನಷ್ಟವಾದರೂ, ಸತ್ಯವನ್ನು ಮಾತನಾಡುವಿರಾ, ಎಂಬುದನ್ನು ಅವರು ಪರೀಕ್ಷಿಸುತ್ತಾರೆ. ಇದು ಒಂದು ಅತ್ಯಂತ ಪ್ರಮುಖ ಕ್ಷೇತ್ರವಾಗಿದೆ.