ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ಆದರೆ ದೀನರಿಗಾದರೊ ಕೃಪೆಯನ್ನು ಅನುಗ್ರಹಿಸುತ್ತಾನೆ. ಹೀಗಿರುವುದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು (1 ಪೇತ್ರ 5:5,6).
ಮೇಲಕ್ಕೆ ತರುವುದು ಎಂದರೆ ನಾವು ಈ ಜಗತ್ತಿನಲ್ಲಿ ಅಥವಾ ಕ್ರೈಸ್ತತ್ವದಲ್ಲಿ ದೊಡ್ಡ ಮನುಷ್ಯರಾಗುವುದು ಮತ್ತು ಮನುಷ್ಯನಿಂದ ಸನ್ಮಾನ ಹೊಂದುವುದು ಎಂಬುದಾಗಿ ಅರ್ಥವಲ್ಲ. ಇದು ಆತ್ಮಿಕವಾಗಿ ಮೇಲಕ್ಕೆ ತರುವುದನ್ನು ಸೂಚಿಸುತ್ತದೆ. ಅದು ನಮ್ಮ ಜೀವಿತ ಮತ್ತು ಸೇವೆಯಲ್ಲಿ ದೇವರ ಎಲ್ಲಾ ಚಿತ್ತವನ್ನು ಪೂರೈಸಲು ಆತ್ಮಿಕ ಅಧಿಕಾರವನ್ನು ನಮಗೆ ಕೊಡಲ್ಪಡುವುದಾಗಿದೆ. ಆದರೆ ಈ ರೀತಿ ಮೇಲಕ್ಕೆ ತರುವಂತದ್ದು, ನಮ್ಮನ್ನು ನಾವು ತಗ್ಗಿಸಿಕೊಳ್ಳುವಂತದ್ದರ ಮೇಲೆ ಅವಲಂಬಿತವಾಗಿರುತ್ತದೆ.
ಈ ಲೋಕದ ತುಂಬಾ, ಇತರರ ದೃಷ್ಟಿಯಲ್ಲಿ ದೊಡ್ಡವರಾಗಲು ಬಯಸುವಂತ ಜನರಿದ್ದಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಪ್ರತಿಯೊಬ್ಬ ರಾಜಕಾರಣಿಯು ಹಾಗೂ ಪ್ರತಿಯೊಬ್ಬ ಉದ್ಯಮಿಯು ದೊಡ್ಡವರಾಗುವಂತದ್ದನ್ನು ಬಯಸುತ್ತಾರೆ. ದುರದೃಷ್ಟವಶಾತ್ ತಮ್ಮನ್ನು ತಾವು ಕ್ರೈಸ್ತ ಸೇವಕರೆಂದು ಕರೆದುಕೊಳ್ಳುವವರೂ ಸಹ ದೊಡ್ಡವರಾಗಲು ಬಯಸುತ್ತಾರೆ. ಅವರು "ರೆವರೆಂಡ್ ಡಾಕ್ಟರ್" ನಂತಹ ಭವ್ಯ ಬಿರುದುಗಳನ್ನು ಹೊಂದಲು ಮತ್ತು ತಮ್ಮ ಸಂಸ್ಠೆಗಳ "ಅಧ್ಯಕ್ಷ" ನಂತಹ ಸ್ಥಾನಗಳನ್ನು ಹೊಂದಲು ಬಯಸುತ್ತಾರೆ. ದು:ಖವೇನೆಂದರೆ, ಇಂದಿನ ಕ್ರೈಸ್ತತ್ವವು ಜಗತ್ತಿನ ಯಾವುದೇ ಕಾರ್ಪೋರೇಷನ್ ಸಂಸ್ಥೆಗಿಂತ ಭಿನ್ನವಾಗೇನೂ ಇಲ್ಲ.
ಯೌವನಸ್ಥ ವಿಶ್ವಾಸಿಗಳು ಇಂದು ತಮ್ಮ ನಾಯಕರನ್ನು ಚಲನಚಿತ್ರ ತಾರೆಯರಂತೆ, ಗಮನ ಸೆಳೆಯುವ ಹಾಗೆ ದೊಡ್ಡ ವೇದಿಕೆಯ ಸಾರ್ವಜನಿಕ ಸಭೆಗಳಲ್ಲಿ, ದುಬಾರಿ ಹೋಟೆಲ್‌ಗಳಲ್ಲಿ ಮತ್ತು ದುಬಾರಿ ಮನೆಗಳಲ್ಲಿ ವಾಸಿಸುವುದನ್ನು ಮತ್ತು ದುಬಾರಿಯಾದ ಕಾರುಗಳನ್ನು ಓಡಿಸುವುದನ್ನು ನೋಡುತ್ತಾರೆ. ದೇವರ ಮಾರ್ಗಗಳ ಬಗ್ಗೆ ಹೆಚ್ಚು ತಿಳಿದಿಲ್ಲದ ಅವರು ಅಂಥಹ ನಾಯಕರನ್ನು ಮೆಚ್ಚುತ್ತಾರೆ ಮತ್ತು ಅವರೂ ಕೂಡ ಆ ಉನ್ನತದ ಸ್ಥಾನವನ್ನು ತಲುಪುವ ದಿನವನ್ನು ಎದುರು ನೋಡುತ್ತಿರುತ್ತಾರೆ! ಇಂತಹ ಬೋಧಕರು ದೇವರಿಗಾಗಿ ಅನೇಕ ವರ್ಷಗಳಿಂದ ನಂಬಿಗಸ್ಥರಾಗಿದ್ದಕ್ಕೆ ಈ ರೀತಿಯಾಗಿ ಸನ್ಮಾನಿಸಲ್ಪಟ್ಟಿದ್ದಾರೆ ಎಂದು ಅವರು ಭಾವಿಸುತ್ತಾರೆ! ಮತ್ತು ನಂಬಿಗಸ್ಥರಾಗಿರುವುದರಿಂದ ತಾವು ಸಹ ಒಂದು ದಿನ ಅಂತಹ ದೊಡ್ಡ ವೇದಿಕೆಗಳಲ್ಲಿ ತಮ್ಮ ಮೇಲೆ ಗಮನ ಸೆಳೆಯುವಂತ ಸ್ಥಾನದಲ್ಲಿ ನಿಲ್ಲುತ್ತೇವೆ ಎಂದು ಅವರು ಕಲ್ಪಿಸಿಕೊಳ್ಳುತ್ತಾರೆ!
ತಾವು ಪಡೆಯುವ ಉಡುಗೊರೆಗಳಿಂದ ಬೋಧಕರು ಸಾಕಷ್ಟು ಹಣ ಗಳಿಸುವುದನ್ನು ಯೌವನಸ್ಥರು ನೋಡಿದಾಗ, ಅವರೂ ಈ ಬೋಧಕರಂತೆ ಐಶ್ವರ್ಯವಂತರಾಗುವ ದಿನವನ್ನು ಎದುರು ನೋಡುತ್ತಿರುತ್ತಾರೆ. ಯೇಸುಕ್ರಿಸ್ತನು ಈ ಯೌವನಸ್ಥರ ಮಾದರಿಯಾಗಿರುವುದಿಲ್ಲ, ಆದರೆ ಚಲನಚಿತ್ರ ನಟರಂತಿರುವ, ಐಶ್ವರ್ಯದಿಂದ ಕೂಡಿರುವಂತ ಈ ಬೋಧಕರು ಅವರಿಗೆ ಮಾದರಿಯಾಗಿದ್ದಾರೆ. ಇದು ಇಂದಿನ ಕ್ರೈಸ್ತತ್ವದಲ್ಲಿ ಒಂದು ದುರಂತವಾಗಿದೆ.
"ಕ್ರಿಸ್ತನು ನಮ್ಮಲ್ಲಿ ಹೆಚ್ಚಬೇಕು ಮತ್ತು ನಾವು ಚಿಕ್ಕವರಾಗಬೇಕು ಎಂದು ಹಂಬಲಿಸಬೇಕು"
ದೇವರನ್ನು ನಾವು ಹಿಂಬಾಲಿಸಿದರೆ, ನಾವು ಐಶ್ವರ್ಯವಂತರಾಗಲಿ ಅಥವಾ ಪ್ರಖ್ಯಾತರಾಗಲಿ ಆಗುವುದಿಲ್ಲ, ಬದಲಾಗಿ ನಾವು ದೈವಿಕರಾಗುತ್ತೇವೆ ಎಂದು ನಾವು ನಮ್ಮ ಜೀವಿತಗಳಿಂದ ಮತ್ತು ನಮ್ಮ ಮಾತುಗಳಿಂದ ನಮ್ಮ ಯೌವನಸ್ಥರಿಗೆ ಪ್ರಚುರಪಡಿಸಬೇಕು.
ಅದೇ ಸಮಯದಲ್ಲಿ, ನಾವು ತಪ್ಪಾಗಿ ಅರ್ಥೈಸಲ್ಪಡುತ್ತೇವೆ, ತಿರಸ್ಕೃತಗೊಳ್ಳುತ್ತೇವೆ ಮತ್ತು ಹಿಂಸೆಗೊಳಪಡುತ್ತೇವೆ! ಅದರೆ ನಮ್ಮನ್ನು ದ್ವೇಷಿಸುವವರನ್ನು ಪ್ರೀತಿಸುವುದಕ್ಕೆ, ಮತ್ತು ನಮ್ಮನ್ನು ಶಪಿಸುವವರನ್ನು ಆಶೀರ್ವದಿಸುವುದಕ್ಕೆ ಸಾಧ್ಯವಿದೆ. ಇದನ್ನೇ ನಾವು ಮುಂದಿನ ಪೀಳಿಗೆಗೆ ಪ್ರಚುರಪಡಿಸಬೇಕಾಗಿದೆ. ಇದನ್ನು ನಾವು ಮಾಡದಿದ್ದಲ್ಲಿ, ಅವರು ಮತ್ತೊಬ್ಬ "ಯೇಸುವನ್ನು ಹಿಂಬಾಲಿಸುತ್ತಾರೆ" - ಅದನ್ನು ಇಂದಿನ ಪ್ರಾಪಂಚಿಕ ಬೋಧಕರಲ್ಲಿ ಅವರು ಕಾಣುವಂತದ್ದಾಗಿದೆ.
ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಮ್ಮನ್ನು ತಗ್ಗಿಸಿಕೊಳ್ಳುವುದರ ಅರ್ಥವೇನೆಂದರೆ, ದೇವರು ನಮ್ಮ ಜೀವಿತದಲ್ಲಿ ಕಳುಹಿಸುವ ಎಲ್ಲಾ ಸನ್ನಿವೇಶಗಳನ್ನು ಆನಂದದಿಂದ ಸ್ವೀಕರಿಸುವಂತದ್ದಾಗಿದೆ. ನಮ್ಮನ್ನು ತಗ್ಗಿಸುವಂತೆ ನಾವು ಆ ಸನ್ನಿವೇಶಗಳನ್ನು ಅನುಮತಿಸುವಾಗ, ನಾವು ಚಿಕ್ಕವರಾಗುತ್ತೇವೆ ಮತ್ತು ದೇವರು ದೊಡ್ಡವರಾಗುತ್ತಾರೆ. ನಾವು ಜನರ ದೃಷ್ಟಿಯಲ್ಲಿ ಚಿಕ್ಕವರಾದರೆ, ಅವರು ನಮ್ಮ ಮೇಲೆ ಅವಲಂಬಿತರಾಗಿ ಜೀವಿಸುವುದಿಲ್ಲ, ಆದರೆ ಅವರು ಕರ್ತನ ಮೇಲೆ ಆತುಕೊಳ್ಳುತ್ತಾರೆ. ಕ್ರಿಸ್ತನು ನಮ್ಮಲ್ಲಿ ಹೆಚ್ಚಬೇಕು ಮತ್ತು ನಾವು ಚಿಕ್ಕವರಾಗಬೇಕು ಎಂದು ಹಂಬಲಿಸಬೇಕು. ನಮ್ಮನ್ನು ಕಡಿಮೆ ಮಾಡಲು ನಮ್ಮ ಜೀವಿತದಲ್ಲಿ ದೇವರು ನಮ್ಮನ್ನು ಅನೇಕ ಸನ್ನಿವೇಶಗಳಲ್ಲಿ ಹಾದು ಹೋಗುವಂತೆ ಮಾಡುತ್ತಾರೆ. ಇದರಿಂದಾಗಿ ಕ್ರಿಸ್ತನು ನಮ್ಮಲ್ಲಿ ಹೆಚ್ಚುತ್ತಾನೆ. ಅಂಥಹ ಸನ್ನಿವೇಶಗಳಲ್ಲಿ ನಮ್ಮನ್ನು ನಾವು ತಗ್ಗಿಸಿಕೊಂಡರೆ, ನಂತರ ನಮ್ಮ ಜೀವಿತದಲ್ಲಿ ದೇವರ ಉದ್ದೇಶವು ನೆರವೇರುತ್ತದೆ.
ನಮ್ಮನ್ನು ನಾವು ತಗ್ಗಿಸಿಕೊಳ್ಳುವುದರಲ್ಲಿ ಒಳಗೊಂಡಿರುವುದೇನೆಂದರೆ, ನಾವು ಯಾರಿಗೆ ತಪ್ಪೆಸಗಿದ್ದೇವೋ ಅವರ ಬಳಿ ಹೋಗಿ ಕ್ಷಮೆಯಾಚಿಸುವುದಾಗಿದೆ. ಕರ್ತನ ಸೇವಕರಾಗಿ, ನಾವು ಎಲ್ಲಾ ಜನರ ಸೇವಕರಾಗಿರಬೇಕು ಮತ್ತು ಅವರನ್ನು ಆಶೀರ್ವದಿಸಲು ಅವರೆಲ್ಲರಗಿಂತ ಕೆಳಗಡೆ ಹೋಗಲು ನಾವು ಸಿದ್ಧರಾಗಿರಬೇಕು. ನಾವು ತಪ್ಪುಗಳನ್ನು ಮಾಡಿದಾಗ, ನಾವು ಅವುಗಳನ್ನು ತಕ್ಷಣವೇ ಅರಿಕೆ ಮಾಡಬೇಕು ಮತ್ತು ಅಗತ್ಯವಿರುವಲ್ಲಿ ಕ್ಷಮೆ ಕೇಳಬೇಕು. ಎಂದಿಗೂ ತಪ್ಪನ್ನು ಮಾಡದೇ ಇರುವವರು ಯಾರೆಂದರೆ, ಅದು ದೇವರು ಮಾತ್ರ.
ಯಾರಾದರೂ ಸರಿ ನಾನು ಕ್ಷಮೆಕೇಳಲು ಸಿದ್ದವಾಗಿದ್ದೇನೆ, ಅದು ಮಕ್ಕಳಿರಬಹುದು, ಸೇವಕರಿರಬಹುದು, ಭಿಕ್ಷುಕರಿರಬಹುದು ಅಥವಾ ಅದು ಯಾರಾದರೂ ಸರಿ ಎಂಬುದಾಗಿ ಕರ್ತನಿಗೆ ನಾನು ಹೇಳಿದ್ದೇನೆ. ಮತ್ತು ಈ ವಿಷಯದಲ್ಲಿ ನಾನು ಎಂದಿಗೂ ನನ್ನ ಘನತೆ ಅಥವಾ ಪ್ರತಿಷ್ಠೆಯ ಮೇಲೆ ನಿಲ್ಲುವುದಿಲ್ಲ. ಮತ್ತು ನಾನು ಆ ರೀತಿ ಮಾಡಿದ್ದೇನೆ, ಅದಕ್ಕಾಗಿ ದೇವರು ನನ್ನನ್ನು ಆಶೀರ್ವದಿಸಿದ್ದಾರೆ.
ನೀವು ಬೇಕು ಅಂತ ಮಾಡದಿದ್ದರೂ, ನಿಮ್ಮ ಹೆಂಡತಿಯರನ್ನು ಆಕಸ್ಮಿಕವಾಗಿ ನೋಯಿಸುವುದು ಎಷ್ಟು ಸುಲಭ ಎಂದು ಮದುವೆ ಆದಂತಹ ನಿಮಗೆಲ್ಲರಿಗೂ ತಿಳಿದಿದೆ. ನೀವು ಅದನ್ನು ಒಳ್ಳೆಯ ಉದ್ದೇಶದಿಂದಲೇ ಹೇಳಿರಬಹುದು. ಆದರೆ ನೀವು ಹೇಳಿದ್ದನ್ನು ನಿಮ್ಮ ಹೆಂಡತಿ ತಪ್ಪಾಗಿ ಅರ್ಥ ಮಾಡಿಕೊಂಡಿರಬಹುದು. ಇದು ಮತ್ತೊಂದು ವಿಧದಲ್ಲಿಯೂ ಆಗಿರಬಹುದು, ಅಂದರೆ ನಿಮ್ಮ ಹೆಂಡತಿ ಹೇಳಿದ್ದನ್ನು ನೀವು ತಪ್ಪಾಗಿ ಅರ್ಥ ಮಾಡಿಕೊಂಡಿರಬಹುದು. ಇಂಥಹ ಪ್ರಕರಣಗಳಲ್ಲಿ ನೀವು ಏನು ಮಾಡಬೇಕು? ಇದನ್ನು ಹೇಳಲು ಇಚ್ಛಿಸುತ್ತೇನೆ : ನಿಮ್ಮ ಉದ್ದೇಶಗಳನ್ನು ಕಷ್ಟಪಟ್ಟು ವಿವರಿಸುವ ಮೂಲಕ ಅಥವಾ ಯಾರ ತಪ್ಪಾಗಿದೆ ಎಂದು ವಿಶ್ಲೇಷಿಸುವುದಕ್ಕಿಂತ, ಕ್ಷಮೆ ಯಾಚಿಸುವುದರಿಂದ ಸಮಾಧಾನವು ಮತ್ತೊಮ್ಮೆ ಪುನ:ಸ್ಥಾಪನೆಗೊಳ್ಳುತ್ತದೆ.
ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ತಪ್ಪಾಗಿ ಅರ್ಥಮಾಡಿಕೊಂಡಿರುವ ಪರಿಸ್ಥಿತಿಯಲ್ಲಿ ನೀವು ಇದ್ದೀರಿ ಎಂದು ಕಂಡುಕೊಳ್ಳಬಹುದು. ಅವರಿಗೆ ಆ ವಿಷಯಗಳ ಬಗ್ಗೆ ವಿವರಣೆಯನ್ನು ಕೊಡುವುದರಲ್ಲಿ ಯಾವ ಪ್ರಯೋಜನವು ಇಲ್ಲ, ಏಕೆಂದರೆ ಅವರು ಅದನ್ನು ಕೇಳಲು ಮನಸ್ಸಿಲ್ಲದವರಾಗಿರಬಹುದು. ಇಂಥಹ ಪ್ರಕರಣಗಳಲ್ಲಿ ನೀವು ಏನು ಮಾಡಬೇಕು, ವಿಶೇಷವಾಗಿ ನೀವು ಸಂಪೂರ್ಣ ಮುಗ್ಧರಾಗಿರುವಾಗ? ನಿಮಗೆ ನೀವೇ ವಿಷಾದ ವ್ಯಕ್ತಪಡಿಸಿಕೊಳ್ಳಬೇಕಾ? ಇಲ್ಲವೇ ಇಲ್ಲ. ದೇವರ ಹಾಗೂ ಮನುಷ್ಯರ ಮುಂದೆ ನಿಮ್ಮ ಮನಸ್ಸಾಕ್ಷಿಯು ಶುದ್ಧವಾಗಿದೆಯೇ ಎಂಬುದನ್ನು ನಿಶ್ಚಯಪಡಿಸಿಕೊಂಡು, ದೇವರಿಗೆ ಆ ವಿಷಯವನ್ನು ಬಿಟ್ಟುಬಿಡಿ. ಅದನ್ನೇ ನೀವು ಮಾಡಬೇಕಾಗಿರುವಂತದ್ದು. ಈ ನೀತಿಯನ್ನು ಅನೇಕ ವರ್ಷಗಳಿಂದ ನಾನು ಅನುಸರಿಸಿದ್ದೇನೆ ಮತ್ತು ನಿಜವಾಗಿಯೂ ಆಶಿರ್ವದಿಸಲ್ಪಟ್ಟಿದ್ದೇನೆ. ನಾನು ಇದನ್ನು ನಿಮಗೂ ಸಹ ಶಿಫಾರಸ್ಸು ಮಾಡುತ್ತೇನೆ.