WFTW Body: 

ಮತ್ತಾಯನು 14:19'ನೇ ವಚನದಲ್ಲಿ, ಇತರರಿಗೆ ಅಶೀರ್ವಾದವಾಗಲು ಬೇಕಾದ ಮೂರು ಹೆಜ್ಜೆಗಳನ್ನು ನಾವು ನೋಡುತ್ತೇವೆ:

  • (1) ಯೇಸುವು ಅಲ್ಲಿ ಎಲ್ಲವನ್ನೂ - ರೊಟ್ಟಿಗಳನ್ನು ಮತ್ತು ಮೀನುಗಳನ್ನು - ಕೈಯಲ್ಲಿ ತೆಗೆದುಕೊಂಡರು
  • .

  • (2) ಅವರು ಅವುಗಳನ್ನು ಆಶೀರ್ವದಿಸಿದರು; ಮತ್ತು
  • (3) ಅವರು ಅವುಗಳನ್ನು ಮುರಿದರು.li>

    ಇದರ ಮೂಲಕ ಅಲ್ಲಿ ನೆರೆದಿದ್ದ ಜನರ ದೊಡ್ಡ ಗುಂಪಿಗೆ ಊಟ ದೊರಕಿತು. ಕರ್ತರು ಇದೇ ರೀತಿಯಾಗಿ ನಿಮ್ಮನ್ನು ಸಹ ಇತರರಿಗೆ ಆಶೀರ್ವಾದವಾಗಿ ಮಾಡಬಯಸುತ್ತಾರೆ. ಆ ಸಂದರ್ಭದಲ್ಲಿ ಒಬ್ಬ ಚಿಕ್ಕ ಬಾಲಕನು ಮಾಡಿದ ಹಾಗೆ, ಮೊದಲು ನೀವು ನಿಮ್ಮ ಎಲ್ಲವನ್ನು ಅವರ ಕೈಗೆ ಕೊಡಬೇಕಾಗುತ್ತದೆ. ಅನಂತರ ಅವರು ನಿಮಗೆ ಪವಿತ್ರಾತ್ಮನ ಬಲವನ್ನು ಕೊಟ್ಟು ಅಶೀರ್ವದಿಸುತ್ತಾರೆ. ಇದರ ನಂತರ ಅವರು ನಿಮ್ಮನ್ನು ಅನೇಕ ಶೋಧನೆಗಳು, ಆಶಾಭಂಗಗಳು, ಈಡೇರದ ನಿರೀಕ್ಷೆಗಳು, ಸೋಲುಗಳು, ಕಾಯಿಲೆಗಳು, ವಿಶ್ವಾಸ ದ್ರೋಹಗಳು, ಇತ್ಯಾದಿಗಳ ಮೂಲಕ ಮುರಿಯುತ್ತಾರೆ ಮತ್ತು ತಗ್ಗಿಸುತ್ತಾರೆ, ಮತ್ತು ಇತರರ ದೃಷ್ಟಿಯಲ್ಲಿ ನಿಮ್ಮನ್ನು ಗಣನೆಗೆ ಇಲ್ಲದವರ ಹಾಗೆ ಮಾಡುತ್ತಾರೆ. ಆಮೇಲೆ, ಅವರು ನಿಮ್ಮ ಮೂಲಕ ಇತರರನ್ನು ಅಶೀರ್ವದಿಸುತ್ತಾರೆ. ಹಾಗಾಗಿ ಅವರ ಮುರಿಯುವಿಕೆಗೆ ನಿಮ್ಮನ್ನು ಒಪ್ಪಿಸಿಕೊಡಿರಿ. ಸತ್ಯವೇದವು ಹೇಳುವುದು ಏನೆಂದರೆ, ಯೇಸುವು ಮೊದಲು ಜಜ್ಜಲ್ಪಟ್ಟನು ಮತ್ತು ಆ ಮೇಲೆ ಆತನ ಕೈಯಿಂದ ತಂದೆಯಾದ ದೇವರ ಸಂಕಲ್ಪವು ನೆರವೇರಿತು (ಯೆಶಾ. 53:10-12 ನೋಡಿರಿ).

    ಯೇಸುವಿನ ಜೀವನದ ವಿವಿಧ ಸನ್ನಿವೇಶಗಳಲ್ಲಿ ಅವರು ತನ್ನ ಮಾನವ ಚಿತ್ತವು ಮುರಿಯಲ್ಪಡುವುದನ್ನು ಅನುಮತಿಸಿದರು. ಅವರು ನಿರ್ದೋಷಿಯಾಗಿ ತನ್ನನ್ನು ದೇವರಿಗೆ ಸಮರ್ಪಿಸಿಕೊಳ್ಳಲು ಇದೊಂದೇ ವಿಧಾನವಾಗಿತ್ತು. ಪವಿತ್ರಾತ್ಮನು ಈ ಉದ್ದೇಶಕ್ಕಾಗಿಯೇ ಅವರನ್ನು ಬಲಪಡಿಸಿದನು (ಇಬ್ರಿ. 9:14). ನೀವು ಸಹ ಬಲಿಷ್ಠವಾದ ನಿಮ್ಮ ಸ್ವಂತ ಚಿತ್ತವನ್ನು ಮುರಿಯಲು ಪವಿತ್ರಾತ್ಮನಿಗೆ ಅವಕಾಶ ನೀಡಿದರೆ ಮಾತ್ರ ಆತ್ಮಿಕ ಮನುಷ್ಯರಾಗುತ್ತೀರಿ. ದೇವರು ನೀವು ಮಾಡಬೇಕೆಂದು ಉದ್ದೇಶಿಸುವ ಸಂಗತಿಯನ್ನು ಮಾಡುವುದಕ್ಕೆ ಬದಲಾಗಿ, ನೀವು ನಿಮ್ಮ ಬಲಿಷ್ಠವಾದ ಸ್ವಂತ ಇಚ್ಛಾ-ಶಕ್ತಿಯ ಪ್ರೇರಣೆಯಂತೆ ಮಾಡುವ ಶೋಧನೆಯನ್ನು ಎದುರಿಸುವ ಸಂದರ್ಭಗಳಲ್ಲಿ, ನಿಮ್ಮ ಸ್ವೇಚ್ಛೆಯು ಮುರಿಯಲ್ಪಡಬೇಕು.

    ದೇವರ ಚಿತ್ತವು ನಿಮ್ಮ ಸ್ವ-ಚಿತ್ತವನ್ನು ಹಾದುಹೋಗುವ ಸ್ಥಳಗಳಲ್ಲಿ ನಿಮ್ಮ ಶಿಲುಬೆಯು ಕಂಡುಬರುತ್ತದೆ. ಅಲ್ಲಿ ನಿಮ್ಮ ಸ್ವಂತ ಇಚ್ಛೆಯನ್ನು ಶಿಲುಬೆಗೆ ಏರಿಸಬೇಕು. ಆ ಸಂದರ್ಭದಲ್ಲಿ ಪವಿತ್ರಾತ್ಮನು ನಿಮಗೆ ಸಾಯುವಂತೆ ಹೇಳುತ್ತಾನೆ. ನೀವು ಪವಿತ್ರಾತ್ಮನ ಮಾರ್ಗದರ್ಶನವನ್ನು ತಪ್ಪದೆ ಪಾಲಿಸಿದರೆ, ನಿಮ್ಮಲ್ಲಿ ಯಾವಾಗಲೂ ಮುರಿದ ಮನಸ್ಸು ಇರುತ್ತದೆ; ಮತ್ತು ದೇವರು ಮುರಿದ ಆತ್ಮವಿರುವ ಜನರನ್ನು ನಿರಂತರವಾಗಿ ಬಲಪಡಿಸಿ, ಚೇತರಿಸುವಂತೆ ಮಾಡುವ ವಾಗ್ದಾನವನ್ನು ಕೊಟ್ಟಿದ್ದಾರೆ. ಕರ್ತರ ವಾಣಿಯು ನುಡಿಯುವುದು ಏನೆಂದರೆ, "ನಾನು ಉನ್ನತಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುತ್ತೇನೆ, ಆದಾಗ್ಯೂ ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವನಗೊಳಿಸುವುದಕ್ಕಾಗಿ, ಜಜ್ಜಿಹೋದ ದೀನಮನಸ್ಸು ಇರುವವರ ಸಮೀಪದಲ್ಲಿ ಇರುತ್ತೇನೆ" (ಯೆಶಾ. 57:15).

    ನಿಮ್ಮಲ್ಲಿ ಯಾವಾಗಲೂ ಸ್ವಂತ ಅಗತ್ಯತೆಯ ಪ್ರಜ್ಞೆ - ಅಂದರೆ "ಆತ್ಮದ ಬಡತನ" ಇರುವುದು ಒಳ್ಳೆಯದು. ಆದರೆ ದೇವರು ಹೆಚ್ಚಿನ ಶ್ರದ್ಧೆಯಿಂದ ತನ್ನನ್ನು ಹುಡುಕುವ ಪ್ರತಿಯೊಬ್ಬನಿಗೆ ಬಹಳ ವಿಶೇಷವಾದ ಪ್ರತಿಫಲವನ್ನು ಕೊಡುತ್ತಾರೆಂಬ ನಂಬಿಕೆಯೂ ಸಹ ನಿಮ್ಮಲ್ಲಿ ಇರಬೇಕು. ದೇವರು ನಿಮ್ಮನ್ನು ಆಶೀರ್ವದಿಸುತ್ತಾರೆ ಮತ್ತು ತನ್ನ ಬಲವನ್ನು ನಿಮ್ಮಲ್ಲಿ ತುಂಬುತ್ತಾರೆಂದು ನೀವು ನಂಬದೇ ಹೋದರೆ, ನಿಮ್ಮ "ಆತ್ಮದ ಬಡತನ"ದಿಂದ ಯಾವ ಪ್ರಯೋಜನವೂ ಉಂಟಾಗುವುದಿಲ್ಲ.

    ಪ್ರತಿಯೊಂದು ಕ್ರೈಸ್ತಸಭೆಯಲ್ಲಿ, ನೀವು ಬಡವರನ್ನು ಮತ್ತು ನಿರ್ಬಲರನ್ನು ಗಮನಿಸಿರಿ ಮತ್ತು ಅವರನ್ನು ಪ್ರೋತ್ಸಾಹಿಸಿರಿ. ಎಳೆಯ ಮಕ್ಕಳನ್ನು ಮಾತನಾಡಿಸಿ ಹುರಿದುಂಬಿಸಿರಿ, ಏಕೆಂದರೆ ಹೆಚ್ಚಿನ ಜನರು ಮಕ್ಕಳನ್ನು ಕಡೆಗಣಿಸುತ್ತಾರೆ. ಕ್ರೈಸ್ತಸಭೆಯಲ್ಲಿ ಯಾವಾಗಲೂ ಕೆಳಮಟ್ಟದ ಹಾಗೂ ಯಾರೂ ಗಮನಿಸದ ಸ್ಥಳವನ್ನು ಕಂಡುಕೊಳ್ಳಿರಿ ಮತ್ತು ಯಾರಿಗೂ ಕಾಣದ ಸೇವೆಗಳನ್ನು ಮಾಡಿರಿ. ಯಾವುದೇ ಸಭೆಯಲ್ಲಿ ಎಂದಿಗೂ ಪ್ರಾಮುಖ್ಯತೆಗಾಗಿ ತವಕಿಸಬೇಡಿರಿ, ಮತ್ತು ನಿಮ್ಮ ಯೋಗ್ಯತೆ ಹಾಗೂ ಪ್ರತಿಭೆಗಳ ಮೂಲಕ ಯಾರನ್ನೂ ಯಾವುದೇ ರೀತಿಯಲ್ಲಿ ಮೆಚ್ಚಿಸಲು ಪ್ರಯತ್ನಿಸಬೇಡಿರಿ. ಆದರೆ ಸಭಾಕೂಟಗಳಲ್ಲಿ ಯಾವಾಗಲೂ ಧೈರ್ಯವಾಗಿ ಸಾಕ್ಷಿ ನೀಡಲು ಮತ್ತು ಯಾವುದೇ ವಿಧವಾದ ಸಹಾಯ ಮಾಡಲು - ಸಭಾಂಗಣವನ್ನು ಸ್ವಚ್ಛಗೊಳಿಸುವುದೇ ಆಗಲೀ ಅಥವಾ ಪಿಯಾನೋ ನುಡಿಸುವುದೇ ಆಗಲೀ - ಹಿಂಜರಿಯಬೇಡಿರಿ. ಯಾವುದೇ ಸೇವೆ ಮಾಡುವುದರಲ್ಲಿ, ಯಾವತ್ತೂ ಬೇರೆಯವರೊಂದಿಗೆ ಪೈಪೋಟಿಗೆ ಇಳಿಯಬೇಡಿರಿ. ನೀವು ನಂಬಿಗಸ್ತರಾಗಿದ್ದರೆ, ದೇವರು ಸಿದ್ಧಗೊಳಿಸಿರುವ ಸೇವೆಯ ಅವಕಾಶವನ್ನು, ಸೂಕ್ತ ಸಮಯದಲ್ಲಿ ಸ್ವತಃ ಅವರೇ ನಿಮಗಾಗಿ ತೆರೆಯುತ್ತಾರೆ.