ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಸಭೆ
WFTW Body: 

ನೀವು ಧಾರ್ಮಿಕತೆ ಮತ್ತು ಆತ್ಮಿಕತೆ ಇವುಗಳನ್ನು ಪ್ರತ್ಯೇಕಿಸುವುದನ್ನು ಕಲಿಯಬೇಕು. ’ಧಾರ್ಮಿಕತೆ’ ಎಂದರೆ ಅನೇಕ ಕ್ರಿಸ್ತೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಾಗಿದೆ. ಆದರೆ ನಾವು ’ಆತ್ಮಿಕ’ರಾದಾಗ, ಪವಿತ್ರಾತ್ಮನು ನಮ್ಮ ನಡವಳಿಕೆಯನ್ನು (ಎಲ್ಲಾ ಸಂದರ್ಭಗಳಲ್ಲಿ) ಯೇಸುವಿನ ಸ್ವಭಾವಕ್ಕೆ ಸರಿಹೊಂದುವಂತೆ ಬದಲಾಯಿಸಲಿ, ಎಂಬ ಮನೋಭಾವದಿಂದಿರುವುದಾಗಿದೆ (’ಫಿಲಿಪ್ಪಿಯವರಿಗೆ 2:5'ರಲ್ಲಿ ಹೇಳಿರುವಂತೆ .. "ನಿಮ್ಮಲ್ಲಿಯೂ ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸಿರಲಿ...."). ನಮ್ಮ ಮನೋಭಾವದಲ್ಲಿ ಇಂತಹ ಬದಲಾವಣೆ ಇಲ್ಲದಿರುವಾಗ - ಸ್ತ್ರೀಯರ ಬಗ್ಗೆ, ಹಣಕಾಸಿನ ಬಗ್ಗೆ, ಜನರು, ಸನ್ನಿವೇಷಗಳು, ಲೋಕದ ಗೌರವ, ಇತ್ಯಾದಿ ವಿಷಯಗಳಲ್ಲಿ - ನಾವು ಹೆಚ್ಚು ಆತ್ಮಿಕರಾಗುತ್ತಿದ್ದೇವೆ ಎಂಬುದಾಗಿ ನಾವು ನಮ್ಮನ್ನೇ ಎಂದಿಗೂ ವಂಚಿಸಿಕೊಳ್ಳಬಾರದು. ನಾವು ಕೇವಲ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ "ಸುಣ್ಣ ಹಚ್ಚಿದ ಸಮಾಧಿಗಳಾಗಿದ್ದ" ಫರಿಸಾಯರಂತೆ ಆಗುತ್ತೇವೆ. ಇಂತಹ ತಪ್ಪಾದ ಮನೋಭಾವಗಳಿಂದ ರಕ್ಷಣೆಯನ್ನು ಪಡೆಯಲು, ನಾವು ಪವಿತ್ರಾತ್ಮನ ಸಹಾಯವನ್ನು ಹೊಂದಿ, ಬಹಳವಾಗಿ ಶ್ರಮಿಸಿ ಹೋರಾಡಬೇಕು.

’ಧಾರ್ಮಿಕ ಸ್ವಭಾವ’ ಮತ್ತು ’ಆತ್ಮಿಕ ಸ್ವಭಾವ’ ಇವುಗಳ ನಡುವೆ ಬಹಳಷ್ಟು ವ್ಯತ್ಯಾಸವಿದೆ. ಹಳೆಯ ಒಡಂಬಡಿಕೆಯ ಅಡಿಯಲ್ಲಿ ನೀತಿವಂತರಾಗಲು ಪ್ರಯತ್ನಿಸಿದ ಅನೇಕರು ’ಧಾರ್ಮಿಕ ಫರಿಸಾಯರು’ಗಳಾಗಿ ಮಾರ್ಪಾಡಾದರು. ಇವರು ಯೇಸುವಿನ ಮಹಾ ಶತ್ರುಗಳಾಗಿದ್ದರು. ಈ ದಿನವೂ ಸಹ, ನಾವು ಹೊಸ ಒಡಂಬಡಿಕೆಯ ಸತ್ಯಾಂಶಗಳನ್ನು ಧರ್ಮಶಾಸ್ತ್ರದ ಆಜ್ಞೆಗಳಂತೆ ಸ್ವೀಕರಿಸಬಹುದು, ಮತ್ತು ಆಗ ನಾವು ಕೇವಲ ಧಾರ್ಮಿಕ ಮನೋಭಾವವನ್ನು ಹೊಂದುತ್ತೇವೆ. ಹಾಗೆ ಮಾಡಿದರೆ, ಈ ದಿನ ನಾವೂ ಸಹ ದೇವರ ಮಹಾ ಶತ್ರುಗಳಾಗುತ್ತೇವೆ.

ಒಬ್ಬ ವ್ಯಕ್ತಿಯು ದೇವರ ವಾಕ್ಯವನ್ನು ಪಠ್ಯಪುಸ್ತಕದಂತೆ ಅಭ್ಯಾಸ ಮಾಡುವುದರಲ್ಲಿ ಹೆಚ್ಚು ಆಸಕ್ತನಾಗಿದ್ದು, ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಮತ್ತು ದೇವರನ್ನು ಮೆಚ್ಚಿಸುವುದನ್ನು ಕಡೆಗಣಿಸಿದರೆ, ಆತನು ಒಬ್ಬ ಆತ್ಮಿಕ ಕ್ರೈಸ್ತನಾಗುವ ಬದಲು ಒಬ್ಬ ಧಾರ್ಮಿಕ ಫರಿಸಾಯನಾಗುವ ಅಪಾಯವನ್ನು ಎದುರಿಸುತ್ತಾನೆ. ಹಳೆಯ ಒಡಂಬಡಿಕೆಯ ಸಮಯದಲ್ಲಿ, ಜನರು ಕರ್ತನ ’ಧರ್ಮಶಾಸ್ತ್ರವನ್ನು’ ಧ್ಯಾನಿಸಬೇಕೆಂಬ ಆಜ್ಞೆಯನ್ನು ಪಡೆದಿದ್ದರು (ಕೀರ್ತನೆಗಳು 1:2). ಆದರೆ ಹೊಸ ಒಡಂಬಡಿಕೆಯಲ್ಲಿ, ಸುವಾರ್ತೆಗಳಲ್ಲಿ ಕಾಣಿಸುವ ’ಕರ್ತ ಯೇಸುವಿನ ಪ್ರಭಾವವನ್ನು’ ನಾವು ಧ್ಯಾನಿಸಬೇಕಾಗಿದೆ (2 ಕೊರಿ. 3:18). ಬರೆಯಲ್ಪಟ್ಟ ಆಜ್ಞೆಯಿಂದ ಮರಣವು ಬರುತ್ತದೆ. ದೇವರಾತ್ಮನು ಜೀವವನ್ನು ಕೊಡುತ್ತಾನೆ.

"ದೇವರ ರಾಜ್ಯವೆಂದರೆ, ಪವಿತ್ರಾತ್ಮನಿಂದ ಉಂಟಾಗುವ ನೀತಿಯೂ, ಸಮಾಧಾನವೂ, ಆನಂದವೂ ಆಗಿದೆ" (ರೋಮಾ. 14:17). ’ಧಾರ್ಮಿಕತೆ’ಯಲ್ಲಿ ಮಾನವನ ನೀತಿವಂತಿಕೆ ಇರಬಹುದು, ಆದರೆ ಅದರ ಮೂಲಕ ಸಮಾಧಾನ ಮತ್ತು ಆನಂದ ಇವುಗಳು ಸಿಗಲಾರವು. ಅದರಲ್ಲಿ ಗುಣುಗುಟ್ಟುವಿಕೆಗಳು ಮತ್ತು ಅಸಮಾಧಾನಗಳು, ಮತ್ತು ಭಯಗಳು ಹಾಗೂ ಚಿಂತೆಗಳು ಇವೆಲ್ಲಾ ಇರುತ್ತವೆ. ನಿಜವಾದ ಕ್ರೈಸ್ತತ್ವವು, ನಂಬಿಕೆಯ ಮೂಲಕ ’ಸಂಪೂರ್ಣ ಸಮಾಧಾನ’ವನ್ನು ಕೊಡುತ್ತದೆ - ಅಂದರೆ, ’ದೇವರೊಂದಿಗೆ ಸಮಾಧಾನ’ (ಎಲ್ಲಾ ಸಂಗತಿಗಳಲ್ಲಿ ಪರಿಶುದ್ಧವಾದ ಮನಸ್ಸಾಕ್ಷಿ), ’ಮನುಷ್ಯರೊಂದಿಗೆ ಸಮಾಧಾನ’ (ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ), ಮತ್ತು ’ಹೃದಯದಲ್ಲಿ ಸಮಾಧಾನ’ (ಚಿಂತೆ ಮತ್ತು ಅಶಾಂತಿಯಿಂದ ಬಿಡುಗಡೆ). ಅದು ’ಪರಿಪೂರ್ಣ ಸಂತೋಷ’ವನ್ನೂ ತರುತ್ತದೆ - ಅಂದರೆ, ಪ್ರತಿಯೊಂದು ಸನ್ನಿವೇಶದಲ್ಲಿ ಕೃತಜ್ಞತೆ ಹಾಗೂ ದೇವರ ಸ್ತುತಿ, ಇವುಗಳು ಉಕ್ಕಿ ಹರಿಯುವಂತ ಜೀವನ.

ನಾವು ಒಂದು ಹಾಡನ್ನು ಹೀಗೆ ಹಾಡುತ್ತೇವೆ:
"ಆತನು ತನ್ನ ಸ್ವಂತ ದುಃಖಗಳಿಗಾಗಿ ಕಣ್ಣೀರು ಮಿಡಿಯಲಿಲ್ಲ;
ಆದರೆ ನಮಗಾಗಿ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿ ಬೆವರನ್ನು ಸುರಿಸಿದನು."

ಯೇಸುವು ಈ ಪ್ರಕಾರವೇ ಜೀವಿಸಿದರು. ಅವರು ಒಮ್ಮೆಯೂ ತನ್ನ ಸ್ವಂತಕ್ಕಾಗಿ ಕನಿಕರ ಪಡಲಿಲ್ಲ. ಅವರು ರಕ್ತವನ್ನು ಸುರಿಸುತ್ತಾ ಶಿಲುಬೆಯನ್ನು ಹೊತ್ತುಕೊಂಡು ನಡೆಯುವಾಗಲೂ, ತನ್ನೊಂದಿಗೆ ಬರುತ್ತಿದ್ದ ಇತರರಿಗೆ, "ನನಗೋಸ್ಕರ ಅಳಬೇಡಿರಿ" ಎಂದು ಹೇಳಿದರು (ಲೂಕ. 23:28). ಯೇಸುವಿನಲ್ಲಿ ಸ್ವಂತಕ್ಕಾಗಿ ಅನುಕಂಪ ಇರಲಿಲ್ಲ. ಅವರು ತನ್ನ ತಂದೆಯ ಮುಖದ ಮುಂದೆ ಜೀವಿಸುತ್ತಿದ್ದುದರಿಂದ, ಇತರರು ತನ್ನೊಂದಿಗೆ ಕೆಟ್ಟದಾಗಿ ವ್ಯವಹರಿಸಿದರೂ, ಅವರು ಎಲ್ಲಾ ವೇಳೆಯಲ್ಲಿ ಸಂತೋಷಿಸಿದರು. ನಾವು ಸಹ ಇದೇ ರೀತಿ ಇರಬೇಕು - ನಮ್ಮ ಸ್ವಂತ ದುಃಖಗಳಿಗಾಗಿ ನಾವು ಕಣ್ಣೀರು ಸುರಿಸಬಾರದು.

ಧಾರ್ಮಿಕತೆಯಲ್ಲಿ ಬಹಳಷ್ಟು ಚಟುವಟಿಕೆಗಳು ಇರಬಹುದು. ಆದರೆ ಅದು ಅಹಂಕಾರದಿಂದ ತುಂಬಿರುತ್ತದೆ ಮತ್ತು ಇತರರನ್ನು ತಿರಸ್ಕಾರ ಭಾವನೆಯಿಂದ ನೋಡುತ್ತದೆ. ನಾವು ಇತರರನ್ನು ಕೀಳಾಗಿ ನೋಡುವಾಗ, ಅಥವಾ ನಮ್ಮ ನೀತಿವಂತಿಕೆಯ ಬಗ್ಗೆ ಹೆಮ್ಮೆ ಪಡುವಾಗ, ನಾವು ಧಾರ್ಮಿಕರಾಗಿದ್ದೇವೆ, ಆತ್ಮಿಕರಲ್ಲ (ಹಳೆಯ ಒಡಂಬಡಿಕೆಯಲ್ಲಿ ದೀನತೆಯ ಬಗ್ಗೆ ಬಹಳ ಕಡಿಮೆ ಬರೆಯಲ್ಪಟ್ಟಿದೆ, ಏಕೆಂದರೆ ದೀನತೆಯು ಹೊಸ-ಒಡಂಬಡಿಕೆಗೆ ಸಂಬಂಧಿಸಿದ ಸದ್ಗುಣವಾಗಿದೆ). ನಾವು ಸತ್ಯವೇದದ ಉತ್ತಮ ಜ್ಞಾನವನ್ನು ಪಡೆಯುತ್ತಿರುವಾಗಲೂ, ಆತ್ಮಿಕತೆಯಲ್ಲಿ ಬೆಳೆಯುತ್ತಿದ್ದೇವೆ, ಮತ್ತು ಕೇವಲ ಧಾರ್ಮಿಕರಾಗುತ್ತಿಲ್ಲ, ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅವಶ್ಯವಾಗಿದೆ.

ನಿಮಗೆ ಹಾನಿ ಮಾಡಿರುವ ಎಲ್ಲರನ್ನೂ ಕ್ಷಮಿಸಿರಿ, ದೇವರೊಂದಿಗೆ ಹಾಗೂ ಮನುಷ್ಯರೊಂದಿಗೆ ಎಲ್ಲವನ್ನೂ ಸರಿಪಡಿಸಿಕೊಳ್ಳಿರಿ, ಪವಿತ್ರಾತ್ಮನಿಂದ ತುಂಬಿಸಲ್ಪಡುವುದಕ್ಕಾಗಿ ಶ್ರದ್ಧೆಯಿಂದ ಬೇಡಿಕೊಳ್ಳಿರಿ ಮತ್ತು ದೇವರ ಕೃಪೆಯ ಸಹಾಯದಿಂದ ಪ್ರತಿದಿನವೂ ಯೇಸುವಿನ ಮರಣದ ಹಾದಿಯಲ್ಲಿ ನಡೆಯುವುದಾಗಿ ನಿರ್ಧರಿಸಿರಿ. ಹಾಗೆ ಮಾಡಿದರೆ ನೀವು ಒಬ್ಬ ಆತ್ಮಿಕ ಮನುಷ್ಯರಾಗುವಿರಿ.