WFTW Body: 

ನಾವು ಹೊಸ ವರ್ಷವನ್ನು ಆರಂಭಿಸುತ್ತಿರುವ ಈ ಸಮಯದಲ್ಲಿ, ನಂಬಿಕೆಯನ್ನು ಹುಟ್ಟಿಸುವವನೂ, ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು, ನಾವು ನಮಗೆ ನೇಮಕವಾಗಿರುವ ಓಟವನ್ನು ಸ್ಥಿರಚಿತ್ತದಿಂದ ಓಡೋಣ (ಇಬ್ರಿ 12:1,2). ನಾವು ಆತನನ್ನು ದೃಷ್ಟಿಸುತ್ತೇವೆ, ಜೊತೆಗೆ "ಓಟವನ್ನು ಓಡುತ್ತೇವೆ". ನಾವು ಸುಮ್ಮನೆ ನಿಂತುಕೊಳ್ಳುವುದಿಲ್ಲ. ನಂಬಿಕೆಯ ಓಟ ಹೇಗಿರುತ್ತದೆಂದರೆ, ನೀವು ಅದರಲ್ಲಿ ಸುಮ್ಮನೆ ನಿಲ್ಲಲು ಸಾಧ್ಯವಿಲ್ಲ. ಸಮಯ ಕಡಿಮೆ ಇದೆ, ಹಾಗಾಗಿ ನೀವು ಓಡಲೇ ಬೇಕಾಗಿದೆ. ನೀವು ಒಂದು ವೇಳೆ ಎಡವಿ ಬಿದ್ದರೆ, ಮೇಲೆದ್ದು ಓಟವನ್ನು ಮುಂದುವರಿಸಿರಿ. ಅನೇಕ ಬಾರಿ ಓಟದ ಸ್ಪರ್ದೆಯಲ್ಲಿ ಓಟಗಾರರು ಎಡವಿ ಬಿದ್ದರೂ, ಮತ್ತೆ ಮೇಲೆದ್ದು ಓಟವನ್ನು ಮುಂದುವರಿಸಿ, ಪಂದ್ಯದಲ್ಲಿ ಮೊದಲನೇ ಸ್ಥಾನವನ್ನು ಗಳಿಸಿರುವಂಥ ನಿದರ್ಶನಗಳಿವೆ. ಹಾಗಾಗಿ ನೀವು ಕರ್ತನ ಜೊತೆಯಲ್ಲಿ ನಡೆಯುವಾಗ, ಕೆಲವೊಮ್ಮೆ ಜಾರಿ ಬಿದ್ದರೆ ನಿರುತ್ಸಾಹ ಹೊಂದದಿರಿ. ಬಿದ್ದಲ್ಲೇ ಉಳಕೊಳ್ಳಬೇಡಿರಿ. ಎದ್ದೇಳಿರಿ, ನಿಮ್ಮ ಪಾಪವನ್ನು ಅರಿಕೆಮಾಡಿದ ಮೇಲೆ, ಓಡುತ್ತಾ ಮುಂದುವರೆಯಿರಿ.

ನೀವು ಹುಟ್ಟುವದಕ್ಕೆ ಮೊದಲೇ ದೇವರು ನಿಮ್ಮ ಜೀವನದ ಪ್ರತಿಯೊಂದು ದಿನಕ್ಕಾಗಿ ಒಂದು ಯೋಜನೆಯನ್ನು ತಯಾರಿಸಿದ್ದಾರೆ

ಕೀರ್ತನೆ. 139:16-18ರಲ್ಲಿ ಈ ರೀತಿಯಾಗಿ ಹೇಳಲಾಗಿದೆ (Living Bible ಭಾಷಾಂತರ): "ಕರ್ತನೇ, ನಾನು ಇನ್ನೂ ತಾಯಿಯ ಗರ್ಭದಲ್ಲಿ ಇದ್ದಾಗ, ನಿನ್ನ ಕಣ್ಣುಗಳು ನನ್ನನ್ನು ನೋಡಿದವು. ನಾನು ಉಸಿರಾಡಲು ಪ್ರಾರಂಭಿಸುವ ಮೊದಲೇ ನನ್ನ ಜೀವಿತದ ಪ್ರತಿಯೊಂದು ದಿನಕ್ಕಾಗಿ ಒಂದೊಂದು ಯೋಜನೆ ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟಿತು. ದೇವರೇ, ನೀನು ನನ್ನ ಬಗ್ಗೆ ಎಡೆಬಿಡದೆ ಯೋಚಿಸುತ್ತಿ ಎಂದು ತಿಳಿದು ನಾನು ಎಷ್ಟೋ ಹಿಗ್ಗುತ್ತೇನೆ. ನನ್ನ ಕುರಿತಾದ ನಿನ್ನ ಸಂಕಲ್ಪಗಳನ್ನು ಲೆಕ್ಕಿಸುವುದಾದರೆ, ಅವು ಸಮುದ್ರದ ಮರಳಿಗಿಂತ ಹೆಚ್ಚಾಗಿವೆ. ಮುಂಜಾನೆ ನಾನು ಎಚ್ಚರವಾಗಲು, ನೀನು ಮುಂಚಿನಂತೆಯೇ ನನ್ನ ಬಗ್ಗೆ ಯೋಚಿಸುತ್ತಲೇ ಇದ್ದೀಯ."

ನಿಮ್ಮ ಜೀವನದ ಪ್ರತಿಯೊಂದು ದಿನಕ್ಕಾಗಿ ದೇವರು ತಮ್ಮ ಮನಸ್ಸಿನಲ್ಲಿ ಒಂದು ಯೋಜನೆಯನ್ನು ಹಾಕಿಕೊಂಡಿದ್ದಾರೆ. ಅವರು ಈ ಹೊಸ ವರ್ಷದಲ್ಲಿ ನಿಮಗೆ ಬರಲಿರುವ ಶೋಧನೆಗಳನ್ನು ನಿಶ್ಚಯಿಸಿದ್ದಾರೆ, ಏಕೆಂದರೆ ಅವುಗಳ ಮೂಲಕ ನಿಮಗೆ "ಅಮೂಲ್ಯವಾದ ಆತ್ಮಿಕ ಶಿಕ್ಷಣ" ಪ್ರಾಪ್ತವಾಗುತ್ತದೆ. ದೇವರ ಪುಸ್ತಕದಲ್ಲಿ, ನೀವು ಈ ವರ್ಷ ಮಾಡಲಿರುವ ದೊಡ್ಡ ತಪ್ಪುಗಳು ನಿಮ್ಮ ಒಳಿತಿಗಾಗಿ ಫಲಿಸುವಂತೆ ಅವರು ಹೇಗೆ ಉಪಯೋಗಿಸುತ್ತಾರೆಂದು ಸಹ ಬರೆಯಲಾಗಿದೆ. ನೀವು ಈ ವರ್ಷ ಏನೇನು ಮಾಡಬೇಕೆಂದು ಅವರು ಯೋಜಿಸಿದ್ದಾರೆ. ಆ ಯೋಜನೆ ಏನೆಂದು ತಿಳಿದುಕೊಳ್ಳಲು ನೀವು ಪೂರ್ಣ ಹೃದಯದಿಂದ ಪ್ರಯತ್ನಿಸಿರಿ.

ಯೇಸುವು ಭೂಮಿಯ ಮೇಲೆ ಓಡಾಡಿದಾಗ, ಜನರು ಆತನ ಮೂಲಕ ಪರಲೋಕ ಜೀವನವನ್ನು ರುಚಿಸಿ ನೋಡಿದರು. ಆತನಲ್ಲಿದ್ದ ಅನುಕಂಪ, ಇತರರ ಬಗ್ಗೆ ಕಾಳಜಿ, ಆತನ ಪವಿತ್ರ ಜೀವನ, ನಿಸ್ವಾರ್ಥ ಪ್ರೇಮ ಮತ್ತು ದೀನ ಮನಸ್ಸು, ಇವೆಲ್ಲವೂ ಸ್ವತಃ ದೇವರ ಮನಸ್ಸಿನ ಚಿತ್ರಣವನ್ನು ಅವರಿಗೆ ನೀಡಿದವು. ಈಗ ನಮ್ಮ ಹೃದಯಗಳ ಒಳಗೆ ಈ ದೇವರ ಜೀವ ಮತ್ತು ಪರಲೋಕದ ವಾತವರಣವನ್ನು ಉಂಟುಮಾಡಲು ಪವಿತ್ರಾತ್ಮನು ಬಂದಿದ್ದಾನೆ. ಈ ಲೋಕಕ್ಕೆ ಪರಲೋಕ ಜೀವನವನ್ನು ಪ್ರದರ್ಶಿಸುವುದಕ್ಕಾಗಿ ದೇವರು ನಮ್ಮನ್ನು ಭೂಮಿಯ ಮೇಲೆ ಇರಿಸಿದ್ದಾರೆ. ಈ ಹೊಸ ವರ್ಷದಲ್ಲಿ ದೇವರು ಇಚ್ಛಿಸುವುದು ಏನೆಂದರೆ, ನಾವು ನಮ್ಮ ಮನೆ ಮತ್ತು ನಮ್ಮ ಸಭೆಗಳಲ್ಲಿ ಉಲ್ಲಾಸ, ಸಮಾಧಾನ, ಪ್ರೀತಿ, ಪರಿಶುದ್ಧತೆ ಮತ್ತು ದೇವರ ಒಳ್ಳೇತನದ ಅನುಭವವನ್ನು ರುಚಿಸಿ ನೋಡಬೇಕು ಎಂಬುದಾಗಿದೆ.

ಯೇಸುವು ಈ ಭೂಮಿಯ ಮೇಲೆ ಪರಲೋಕದ ಜೀವನವನ್ನು ಜೀವಿಸಿದರು. ನೀವು ಅವರ ಮೇಲೆ ದೃಷ್ಟಿ ಇರಿಸಿ ಅವರನ್ನು ಹಿಂಬಾಲಿಸುವುದಾದರೆ, ಈ ವರ್ಷದ ಪ್ರತಿಯೊಂದು ದಿನವೂ ನಿಮಗೆ ಭೂಮಿಯ ಮೇಲೆ ಪರಲೋಕ ಜೀವಿತದ ಅನುಭವ ಸಿಗುವುದು. ಭೂಮಿಯ ಮೇಲೆ ಜೀವಿಸಿದ ಮನುಷ್ಯರಲ್ಲಿ ಅತ್ಯಂತ ಹೆಚ್ಚಿನ ಆನಂದವನ್ನು ಯೇಸುವು ಅನುಭವಿಸಿದರು. ಆತನಿಗೆ ಆ ಆನಂದದ ಅನುಭವ ದೊರೆತದ್ದು ತನ್ನ ತಂದೆಯ ಚಿತ್ತವನ್ನು ಪಾಲಿಸುವುದರ ಮೂಲಕ - ಮತ್ತು ಜೀವನದಲ್ಲಿ ಸುಲಭವಾದ ಮಾರ್ಗದಲ್ಲಿ ನಡೆಯುವ ಮೂಲಕವಲ್ಲ. ಆತನಿಗೆ ತಂದೆಯ ಪರಿಪೂರ್ಣ ಪ್ರೀತಿ ಎಂಥದ್ದೆಂದು ತಿಳಿದಿತ್ತು, ಮತ್ತು ಈ ಕಾರಣಕ್ಕಾಗಿ ತನ್ನ ಜೀವಿತದಲ್ಲಿ ತಂದೆಯಿಂದ ಬಂದ ಪ್ರತಿಯೊಂದು ಅನುಭವವನ್ನೂ ಆತನು ಸಂತೋಷದಿಂದ ಸ್ವೀಕರಿಸಿದನು. ಅದು ಆತನ ಜೀವನದ ರಹಸ್ಯವಾಗಿತ್ತು. ನಂಬಿಕೆಯಿಂದ ನಡೆಯುವುದು ಎಂದರೆ, ತಂದೆಯ ಪರಿಪೂರ್ಣ ಪ್ರೀತಿಯಲ್ಲಿ ಭರವಸೆ ಇರಿಸಿ, ಅವರ ಪ್ರತಿಯೊಂದು ಯೋಜನೆಯೂ ನಮ್ಮ ಒಳಿತಿಗಾಗಿ ಇದೆ ಎಂದು ನಂಬುವುದಾಗಿದೆ.

ಕೀರ್ತನೆ 16:8 ಹೀಗೆ ಹೇಳುತ್ತದೆ: "ನಾನು ಕರ್ತನನ್ನು ಯಾವಾಗಲೂ "ನನ್ನ ಎದುರಿಗೇ" ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲುವುದಿಲ್ಲ." ಯೇಸುವು ಇದೇ ರೀತಿಯಾಗಿ ಜೀವಿಸಿದರು (ಅ.ಕೃ. 2:25). ಅವರು ಯಾವ ಪರಿಸ್ಥಿತಿಯಲ್ಲೂ ಕದಲಲಿಲ್ಲ, ಏಕೆಂದರೆ ಅವರು ಯಾವಾಗಲೂ ತನ್ನ ತಂದೆಯ ಸಮ್ಮುಖದಲ್ಲಿ ಜೀವಿಸಿದರು. ಹಾಗಾಗಿ ಯಾವಾಗಲೂ ಅವರಲ್ಲಿ ಪರಿಪೂರ್ಣ ಸಂತೋಷವೂ ಸಹ ಇತ್ತು (ಕೀರ್ತನೆ 16:11). ನಾವೂ ಸಹ ಹೀಗೆ ಜೀವಿಸಬೇಕೆಂದು ದೇವರ ಇಚ್ಛೆಯಾಗಿದೆ. ತಂದೆಯು ನಿರೀಕ್ಷಿಸುವ "ಕನಿಷ್ಠ ಭಾಗ" ಎಷ್ಟೆಂದು ಯೆಸುವು ಹುಡುಕಲಿಲ್ಲ, ಆದರೆ ತಾನು ತನ್ನ ತಂದೆಗಾಗಿ "ಗರಿಷ್ಠ" ಎಷ್ಟನ್ನು ಮಾಡಲು ಸಾಧ್ಯವಿದೆ ಎಂದು ನೋಡಿದರು.

ನಮ್ಮ ಮನೋಭಾವವೂ ಸಹ, "ಕರ್ತನು ನನ್ನ ಭೂಲೋಕ ಜೀವಿತದ ಈ ಮುಂದಿನ ವರ್ಷದಲ್ಲಿ, ನನ್ನಿಂದ ಅತಿ ಹೆಚ್ಚಾಗಿ ಎಷ್ಟನ್ನು ಪಡೆಯಬಹುದು?" ಎಂದಾಗಿರಬೇಕು. ನಮ್ಮ ಸ್ವಂತ ಚಿತ್ತವನ್ನು ನಿರಾಕರಿಸಿ, ದೇವರ ಚಿತ್ತವನ್ನು "ಎಡೆಬಿಡದೆ ಪ್ರತಿ ದಿನ" ಪಾಲಿಸುವುದರಿಂದ ನಿಜವಾದ ಆತ್ಮಿಕ ಜೀವಿತ ಪ್ರಾಪ್ತವಾಗುತ್ತದೆ. ಯೇಸುವು ಈ ರೀತಿಯಾಗಿ ಪ್ರತಿ ದಿನ ತಂದೆಯ ಚಿತ್ತವನ್ನು ದೃಢಮನಸ್ಸಿನಿಂದ ಪಾಲಿಸಿ, ತನ್ನ ತಂದೆಗೆ "ಪ್ರಿಯನಾಗಿರುವ ಮಗನು" ಎನ್ನಿಸಿಕೊಂಡರು. ನಾವೂ ಸಹ ಈ ಹೊಸ ವರ್ಷದಲ್ಲಿ ಈ ಹಾದಿಯಲ್ಲಿ ನಡೆದರೆ, "ದೇವರಿಗೆ ಪ್ರಿಯರು" ಎನ್ನಿಸಿಕೊಳ್ಳಬಹುದು.

ದೇವರು ನಿಮ್ಮ ತಲೆಗೆ ತೈಲವನ್ನು ಹಚ್ಚಿ, ನಿಮ್ಮ ಪಾತ್ರೆಯು ತುಂಬಿ ಹೊರಸೂಸುವಂತೆ ಮಾಡುವುದರಿಂದ ಅನೇಕರಿಗೆ ಆಶೀರ್ವಾದ ಉಂಟಾಗುವಂತೆ ಮಾಡಿ, ನಿಮ್ಮನ್ನು ಆಶೀರ್ವದಿಸಲು ಬಯಸುತ್ತಾರೆ. ಪ್ರವಾದಿ ಎಲೀಷನ ಸೇವಾವಧಿಯಲ್ಲಿ, ದೇವರು ಒಬ್ಬ ಬಡ ವಿಧವೆಯ ಮನೆಯಲ್ಲಿ ಎಲ್ಲಾ ಪಾತ್ರೆಗಳು ಎಣ್ಣೆಯಿಂದ ತುಂಬುವಂತೆ ಮಾಡಿ, ಆಕೆ ತನ್ನ ನೆರೆಯವರ ಪಾತ್ರೆಗಳಲ್ಲೂ ಎಣ್ಣೆ ತುಂಬಿಸುವಂತೆ ಮಾಡಿದರು (2 ಅರಸುಗಳು 4:1-7). ದೇವರ ಅಭಿಷೇಕದಲ್ಲಿ ಇರುವ ಬಲ ಮತ್ತು ಆಶೀರ್ವಾದ ಎಷ್ಟೆಂದರೆ, ಅದು ನೀವು ಈ ವರ್ಷ ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯನ್ನು ಆಶೀರ್ವದಿಸಲು ಸಾಕಾಗುತ್ತದೆ. ಆ ಬಡ ವಿಧವೆಯಂತೆ ನೀವು ಈ ವರ್ಷ ನಿಮ್ಮ ನೆರೆಯವರನ್ನು ಆಶೀರ್ವದಿಸಬಹುದು. ಹೀಗೆ ಇತರರ ಬಾಳಿನಲ್ಲಿ ಎಣ್ಣೆಯನ್ನು ನೀವು ತುಂಬಿರಿ. ಬೇರೆಯವರಿಗೆ ನೀರು ಹಾಯಿಸುವವನಿಗೆ ದೇವರು ಸ್ವತಃ ನೀರು ಕೊಡುತ್ತಾರೆ (ಜ್ಞಾನೋಕ್ತಿ. 11:25).

ಅಪೊಸ್ತಲನಾದ ಯೋಹಾನನು "ದೇವರಾತ್ಮ ವಶನಾದಾಗ," ದೇವರ ಸ್ವರವನ್ನು ತುತೂರಿಯ ಶಬ್ದದಷ್ಟು ಜೋರಾಗಿ ಕೇಳಿದನು (ಪ್ರಕಟನೆ 1:10). ನೀವು ಮುಂದಿನ ವರ್ಷದಲ್ಲಿ ಪ್ರತಿ ದಿನ ದೇವರಾತ್ಮನ ಮೂಲಕ ಜೀವಿಸಿದರೆ, ನಿಮಗೂ ಸಹ ದೇವರ ಧ್ವನಿಯು ಪ್ರತಿ ದಿನ ಸ್ಪಷ್ಟವಾಗಿ ಕೇಳಿಸುವುದು, ಮತ್ತು ಅದು ನಿಮಗೆ ಮಾರ್ಗದರ್ಶನ ಮಾಡುವುದು, ಅಲ್ಲದೆ ನಿಮ್ಮನ್ನು ಉತ್ತೇಜಿಸುವುದು. ನೀವು ಪಾಪದ ಕುರಿತಾಗಿ ಸೂಕ್ಷ್ಮತೆಯನ್ನು ಇರಿಸಿಕೊಂಡು, ದೇವರ ಸಮ್ಮುಖದಲ್ಲಿ ನಿಮ್ಮನ್ನು ತಗ್ಗಿಸಿಕೊಂಡು ನಡೆದು, ಪ್ರತಿ ದಿನ ಪವಿತ್ರಾತ್ಮನಲ್ಲಿ ನೆಲೆಗೊಳ್ಳಿರಿ.

ಈ ಹೊಸ ವರ್ಷದಲ್ಲಿ ಕರ್ತನು ನಿಮ್ಮನ್ನು ಶ್ರೇಷ್ಠವಾಗಿ ಆಶೀರ್ವದಿಸಲಿ!