ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಹೊಸ ಒಡಂಬಡಿಕೆಯು ನಿರೂಪಿಸುವ ವಿಷಯಗಳಲ್ಲಿ ಪವಿತ್ರಾತ್ಮನು ಒಂದು ಪ್ರಮುಖ ವಿಷಯವಾಗಿದ್ದಾನೆ, ಮತ್ತು ಯೆಶಾಯನ ಪ್ರವಾದನಗ್ರಂಥದ 40ರಿಂದ 66ನೇ ಅಧ್ಯಾಯದ ವರೆಗಿನ ಭಾಗದಲ್ಲೂ ಸಹ ಪವಿತ್ರಾತ್ಮನು ಒಂದು ಮುಖ್ಯ ವಿಷಯವಾಗಿದ್ದಾನೆ.

"ಇಗೋ, ನಾನು ಎತ್ತಿ ಹಿಡಿಯುವ ನನ್ನ ಸೇವಕನನ್ನು ನೋಡು ..." (ಯೆಶಾಯನು 42:1) . ದೇವರ ನಿಜವಾದ ಸೇವಕನು ದೇವರಿಂದ ಎತ್ತಿ ಹಿಡಿಯಲ್ಪಟ್ಟವನು, ಹಣದ ಮೂಲಕ ಅಥವಾ ಒಂದು ಸಂಸ್ಥೆಯ ಮೂಲಕ ಅಥವಾ ಯಾವುದೋ ಮಾನವ ಸಂಘಟನೆಯ ಮೂಲಕ ಅಲ್ಲ. ಕರ್ತರೇ ನಮ್ಮನ್ನು ಯಾವಾಗಲೂ ಎತ್ತಿ ಹಿಡಿಯುವವರು ಆಗಿರಬೇಕು. ಮನುಷ್ಯರು ನಮಗೆ ಉಡುಗೊರೆಗಳನ್ನು ನೀಡಬಹುದು. ಆದರೆ ನಾವು ಎಂದಿಗೂ ಮನುಷ್ಯರ ಮೇಲೆ ಅಥವಾ ಹಣದ ಮೇಲೆ ಅವಲಂಬಿತರು ಆಗಿರಬಾರದು. "ಎತ್ತಿ ಹಿಡಿಯುವುದು" ಎಂಬ ಪದವು ನಾವು ಯಾವ ರೀತಿ ಆಧರಿಸಲ್ಪಟ್ಟಿದ್ದೇವೆಂದು ಸೂಚಿಸುತ್ತದೆ. ನಾವು ಕರ್ತರ ಮೇಲೆ ಮಾತ್ರ ಅವಲಂಬಿತರಾಗಿ ಇರಬೇಕು. ನಾವು ಅಸಹಾಯಕತೆಯ ಸ್ಥಳಕ್ಕೆ ಬಂದಾಗ ದೇವರು ತನ್ನ ಆತ್ಮವನ್ನು ನಮ್ಮ ಮೇಲೆ ಇರಿಸುತ್ತಾರೆ.

ಯೆಶಾಯನು 42:2-3ರಲ್ಲಿ ಹೀಗೆ ಬರೆಯಲ್ಪಟ್ಟಿದೆ: "ಇವನು ಕೂಗಾಡುವುದಿಲ್ಲ ಅಥವಾ ಬೀದಿಗಳಲ್ಲಿ ಇವನು ಆರ್ಭಟಿಸುವ ಧ್ವನಿಯೇ ಕೇಳಿಸುವುದಿಲ್ಲ." ಇದೇ ಮಾತನ್ನು ’ ಮತ್ತಾಯನು 12:18-20'ರಲ್ಲಿ ಯೇಸುವನ್ನು ಕುರಿತು ಉಲ್ಲೇಖಿಸಲಾಗಿದೆ; ಅಲ್ಲಿ ಹೀಗೆ ಹೇಳಲಾಗಿದೆ: "ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವುದಿಲ್ಲ. ಇವನು ಜಜ್ಜಿದ ದಂಟನ್ನು ಮುರಿಯುವವನಲ್ಲ ..."

ಅದರ ಅರ್ಥ, ಯಾವನಾದರೂ ತನ್ನ ಜೀವನವನ್ನು ವ್ಯರ್ಥಗೊಳಿಸಿದ್ದರೆ, ಕರ್ತರು ಅವನನ್ನು ನಿರುತ್ಸಾಹಗೊಳಿಸುವುದಿಲ್ಲ, ಆದರೆ ಅವನನ್ನು ಪ್ರೋತ್ಸಾಹಿಸಿ ಗುಣಪಡಿಸುತ್ತಾರೆ. ಆರಿಹೋಗುತ್ತಿರುವ ಒಂದು ಮೇಣದಬತ್ತಿಯನ್ನು ಕರ್ತರು ಆರಿಸುವುದಿಲ್ಲ. ಅದಕ್ಕೆ ಬದಲಾಗಿ, ಅವರು ಮೆಲ್ಲನೆ ಗಾಳಿ ಊದಿ ಅದನ್ನು ಬೆಳಗಿಸುತ್ತಾರೆ. ದೇವರು ವಿಫಲರಾಗಿರುವ ಬಲಹೀನ ವಿಶ್ವಾಸಿಗಳಿಗೆ ಸಹಾಯ ನೀಡಲು ಬಯಸುತ್ತಾರೆ. ನಿರುತ್ಸಾಹಗೊಂಡು ದುಃಖಿಸುತ್ತಿರುವ ಜನರ ಆತ್ಮವನ್ನು ಮೇಲೆತ್ತಿ ಅವರಿಗೆ ಸಹಾಯ ನೀಡಲು ಅವರು ಇಚ್ಛಿಸುತ್ತಾರೆ.

ಕರ್ತರ ಒಬ್ಬ ನಿಜವಾದ ಸೇವಕನು ಯಾವಾಗಲೂ ಇದೇ ರೀತಿಯ ಪ್ರೋತ್ಸಾಹಿಸುವ ಸೇವೆಯನ್ನು ಹೊಂದಿರುತ್ತಾನೆ: ಎದೆಗುಂದಿ ಕೊರಗುತ್ತಿರುವವರನ್ನು ಮತ್ತು ನಿರುತ್ಸಾಹಗೊಂಡಿರುವವರನ್ನು ಮತ್ತು ನಿರೀಕ್ಷೆಯನ್ನು ಕಳಕೊಂಡಿರುವವರನ್ನು ಹಾಗೂ ಜೀವನದಲ್ಲಿ ಬೇಸರಗೊಂಡವರನ್ನು ಮೇಲಕ್ಕೆತ್ತಿ ಅವರ ಆತ್ಮಕ್ಕೆ ನಿರೀಕ್ಷೆಯನ್ನು ನೀಡುತ್ತಾನೆ. ನಾವೆಲ್ಲರು ಇಂತಹ ಸೇವೆಗಾಗಿ ಉತ್ಸುಕರಾಗಿರೋಣ, ಯಾಕೆಂದರೆ ಇಂತಹ ಸೇವೆ ಎಲ್ಲೆಲ್ಲೂ ಜನರಿಗೆ ಅವಶ್ಯವಾಗಿದೆ.

ಯೆಶಾಯನು 42:6-8'ರಲ್ಲಿ ಕರ್ತರು ನಮಗೆ ಹೀಗೆನ್ನುತ್ತಾರೆ: "ನಾನು ಧರ್ಮದ ಸಂಕಲ್ಪದ ಅನುಸಾರವಾಗಿ ನಿನ್ನನ್ನು ಕರೆದಿದ್ದೇನೆ. ನೀನು ಕುರುಡರಿಗೆ ಕಣ್ಣುಕೊಟ್ಟು, ಬಂಧಿಗಳನ್ನು ಸೆರೆಯಿಂದ ಹೊರಗೆ ಕರೆತರಬೇಕು ಎಂದು ನಿನ್ನನ್ನು ಕರೆದಿದ್ದೇನೆ." ಇದು ಒಂದು ಅತ್ಯುತ್ತಮ ಸೇವೆಯಾಗಿದೆ. ಆದರೆ ಯಾವಾಗಲೂ ಒಂದು ವಿಷಯ ನೆನಪಿರಲಿ. "ನನ್ನ ಮಹಿಮೆಯನ್ನು ಮತ್ತೊಬ್ಬನೊಂದಿಗೆ ಹಂಚಿಕೊಳ್ಳುವುದಿಲ್ಲ" (ಯೆಶಾಯನು 42:8) .

ನಮ್ಮ ಸೇವೆಯಲ್ಲಿ ಎಂದಿಗೂ ದೇವರ ಮಹಿಮೆಯನ್ನು ನಾವೇ ತೆಗೆದುಕೊಳ್ಳಬಾರದು. ಸೇವೆಯ ಮೂಲಕ ನಾವೇ ಸ್ವತಃ ಸನ್ಮಾನವನ್ನು ಅಥವಾ ಘನತೆಯನ್ನು ಪಡೆದುಕೊಳ್ಳುವುದು ಅತ್ಯಂತ ಗಂಭೀರವಾದ ಅಪರಾಧವಾಗಿದೆ. ಇದು ಹಣವನ್ನು ಕದಿಯುವುದಕ್ಕಿಂತ ಕೆಟ್ಟದ್ದಾಗಿದೆ. ದೇವರು ನಿಮ್ಮನ್ನು ಮತ್ತು ನಿಮ್ಮ ಸೇವೆಯನ್ನು ಆಶೀರ್ವದಿಸಿ, ನಿಮ್ಮನ್ನು ಪ್ರಭಾವಯುತವಾಗಿ ಉಪಯೋಗಿಸಿಕೊಳ್ಳಬಹುದು. ಆದರೆ ಅವರು ತಮ್ಮ ಮಹಿಮೆಯನ್ನು ಬೇರೆ ಯಾರಿಗೂ ಕೊಡುವುದಿಲ್ಲ. ನೀವು ದೇವರ ಮಹಿಮೆಯನ್ನು ಮುಟ್ಟಲು ಆರಂಭಿಸಿದರೆ, ಕರ್ತರ ಅನೇಕ ಸೇವಕರು ನಾಶಗೊಂಡಂತೆ, ನೀವು ನಿಮ್ಮನ್ನೇ ನಾಶ ಪಡಿಸಿಕೊಳ್ಳುತ್ತೀರಿ. ನೀವು ಜನರ ಮುಂದೆ ನಿಮ್ಮನ್ನೇ ಹೆಚ್ಚಳ ಪಡಿಸಿಕೊಳ್ಳಲು ಪ್ರಾರಂಭಿಸಿ, ಜನರನ್ನು ಕರ್ತನ ಕಡೆಗೆ ನಡೆಸುವುದಕ್ಕೆ ಬದಲಾಗಿ ನಿಮ್ಮ ಬಳಿಗೆ ಸೆಳೆದರೆ ಮತ್ತು ದೇವರು ಮಾಡಿದ ಕಾರ್ಯದ ಮೂಲಕ ಸ್ವಂತ ಗೌರವವನ್ನು ಹೆಚ್ಚಿಸಿಕೊಂಡರೆ, ನೀವು ತುಂಬಾ ಅಪಾಯಕರ ನೆಲೆಯಲ್ಲಿ ನಿಂತಿದ್ದೀರಿ. ಈ ರೀತಿ ಸಾವಿರಾರು ಜನ ತಮ್ಮ ಜೀವನದಲ್ಲಿ ದೇವರ ಅಭಿಷೇಕವನ್ನು ಕಳೆದುಕೊಂಡಿದ್ದಾರೆ.

ಯೆಶಾಯನು 42:19 : "ನನ್ನ ಸೇವಕನ ಹೊರತು ಯಾರು ಕುರುಡರು? ನಾನು ಕಳುಹಿಸುವ ದೂತನಂತೆ ಯಾರು ಕಿವುಡರು? ಕರ್ತನ ಸೇವಕನ ಪ್ರಕಾರ ಅಂಧನು ಯಾರು? ನೀನು ನನ್ನೊಂದಿಗೆ ಸಮಾಧಾನವಾಗಿ ಇರುವುದರಿಂದ ನೀನೊಬ್ಬ ಕುರುಡನಂತಿರುವೆ." (ಸ್ವ. ಅನು. - NASB ಆಧಾರಿತ). ಈ ವಚನ ವಿಶೇಷವಾಗಿ ಯೇಸುವಿನ ಕುರಿತಾಗಿ ಹೇಳಲ್ಪಟ್ಟಿರುವುದರಿಂದ (ಇದನ್ನು ನಾವು ಈ ಅಧ್ಯಾಯದ ಮೊದಲನೇ ವಚನದಲ್ಲಿ ನೋಡುತ್ತೇವೆ), ಇದೊಂದು ಅಸ್ಪಷ್ಟ ವಚನದಂತೆ ಕಾಣಿಸುತ್ತದೆ.

ಈ ವಚನದ ಅರ್ಥವೇನು? ದೇವರ ಒಬ್ಬ ನಿಜವಾದ ಸೇವಕನು ಸುತ್ತಮುತ್ತಲಲ್ಲಿ ತಾನು ಕಾಣುವ ಮತ್ತು ಕೇಳುವ ಸಂಗತಿಗಳಿಗೆ ಕುರುಡನು ಮತ್ತು ಕಿವುಡನು ಆಗಿರುತ್ತಾನೆ. "ನೀನು ಬಹು ವಿಷಯಗಳನ್ನು ಕಂಡಿದ್ದರೂ, ನಿನಗೆ ಗಮನವಿಲ್ಲ" (ಯೆಶಾಯನು 42:20). ಆತನು ಅಲ್ಲಿ ಇಲ್ಲಿ ಸುತ್ತಾಡುತ್ತಾ, ಇತರರಲ್ಲಿ ಪಾಪವನ್ನು ಹುಡುಕುವುದಿಲ್ಲ. ಅವನು ಜನರ ಸಂಭಾಷಣೆಯನ್ನು ಸೂಕ್ಷ್ಮವಾಗಿ ವಿಚಾರಮಾಡಿ, ಅವರನ್ನು ಯಾವುದೋ ಮಾತಿನ ಮೂಲಕ ಹಿಡಿಯಲು ಪ್ರಯತ್ನಿಸುವುದಿಲ್ಲ. ಫರಿಸಾಯರು ಅದನ್ನೇ ಮಾಡುತ್ತಿದ್ದರು - ಯಾವಾಗಲೂ ಯೇಸುವನ್ನು ಯಾವುದೋ ಮಾತಿನ ಮೂಲಕ ಸಿಕ್ಕಿಸಿ ಹಾಕಲು ಕಾದಿದ್ದರು. ದುರದೃಷ್ಟವಶಾತ್ ಅನೇಕ ಕ್ರೈಸ್ತರೂ ಸಹ ಇದನ್ನೇ ಮಾಡುತ್ತಾರೆ - ಯಾವಾಗಲೂ ಯಾರನ್ನಾದರೂ ಅವರ ಮಾತಿನ ಮೂಲಕ ದೂಷಿಸುವುದಕ್ಕೆ ಕಾದಿರುತ್ತಾರೆ - ಅವರಲ್ಲಿ ಹೆಚ್ಚಾಗಿ ಆತನ ಸೇವೆಯ ಬಗ್ಗೆ ಹೊಟ್ಟೆಕಿಚ್ಚು ಇರುವುದರಿಂದ. ನೀವು ಈ ಅಭ್ಯಾಸವನ್ನು ಬಿಟ್ಟುಬಿಡಿರಿ.

ನಿಮ್ಮ ಅಕ್ಕಪಕ್ಕದಲ್ಲಿ ನೀವು ನೋಡುವ ಮತ್ತು ಕೇಳಿಸಿಕೊಳ್ಳುವ ಅನೇಕ ಸಂಗತಿಗಳ ಬಗ್ಗೆ ನೀವು ಕಿವುಡರೂ ಕುರುಡರೂ ಆಗಿರಿ. ನಿಮ್ಮ ವಿರುದ್ಧವಾಗಿ ಯಾರೋ ಸುಳ್ಳು ಆಪಾದನೆ ಹೊರಿಸಿದ್ದನ್ನು ಗಮನಿಸಿದಿರೋ? ನೀವು ಕಿವುಡರಾಗಿದ್ದರೆ, ಇದು ನಿಮ್ಮ ಕಿವಿಗೆ ಬೀಳುತ್ತಿರಲಿಲ್ಲ. ಹಾಗಾಗಿ ನೀವು "ಕಿವುಡರಾಗಿರಿ"! ದೇವರ ಒಬ್ಬ ಸೇವಕನು ಅಂದದ ಸ್ತ್ರೀಯರನ್ನು ನೋಡುವ ವಿಷಯದಲ್ಲಿ "ಕುರುಡ"ನಾಗಿದ್ದರೆ ಉತ್ತಮವಲ್ಲವೇ? ನಿಮಗೆ ಕಣ್ಣಿದ್ದರೂ, ನೀವು ನೋಡುವುದಿಲ್ಲ. ನೀವು "ಕುರುಡ"ರಾಗಿದ್ದೀರಿ! ಕಿವಿಯಿದ್ದರೂ ನೀವು ಕೇಳಿಸಿಕೊಳ್ಳುವುದಿಲ್ಲ! ಇದು ಹೇಗೆಂದರೆ, ನೀವು "ಕಣ್ಣಿಗೆ ಕಂಡಂತೆ ತೀರ್ಪು ಮಾಡುವುದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವುದಿಲ್ಲ." ಯೇಸುವು ಈ ರೀತಿಯಾಗಿ ಜೀವಿಸಿದರು, ಮತ್ತು ನಾವು ಸಹ ಇದೇ ರೀತಿ ಜೀವಿಸಬೇಕು (ಯೆಶಾಯನು 11:3) .