ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ತಮ್ಮ ನಡುವೆ ಬರಲು ಒಬ್ಬ ಗಂಡ ಮತ್ತು ಹೆಂಡತಿ ಪಿಶಾಚನಿಗೆ ಅವಕಾಶವನ್ನು ಒದಗಿಸಿದರೆ, ಅವರ ಮದುವೆಯ ಜೀವಿತವು ಒಂದು ಅರಣ್ಯದಂತಾಗಲು ಪ್ರಾರಂಭಿಸುತ್ತದೆ. ಜ್ಞಾನೋಕ್ತಿಗಳು 24:30-32' ಹೀಗೆ ಹೇಳುತ್ತದೆ, "ಸೋಮಾರಿಯ ಹೊಲದ ಮೇಲೆಯೂ, ಬುದ್ಧಿಹೀನನ ತೋಟದ ಮೇಲೆಯೂ ಹಾದು ಹೋದೆನು. ಆಹಾ, ಮುಳ್ಳುಗಿಡಗಳು ಅದರಲ್ಲಿ ಹರಡಿಕೊಂಡಿದ್ದವು, ಅದರ ಕಲ್ಲಿನ ಗೋಡೆಯು ಹಾಳಾಗಿತ್ತು. ಆಗ ನಾನು ನೋಡಿ ಮನಸ್ಸಿಟ್ಟೆನು; ದೃಷ್ಟಿಸಿ ಶಿಕ್ಷಿತನಾದೆನು(ಪಾಠ ಕಲಿತುಕೊಂಡೆನು)." ಒಂದು ತೋಟವನ್ನು ನಿರ್ಲಕ್ಷಿಸಿದಾಗ, ಬಹಳ ಬೇಗನೆ ಅದು ವಿಪರೀತವಾಗಿ ಬೆಳೆದು ಹಾಳಾಗುತ್ತದೆ. ನೀವು ಕಳೆಗಳು, ಮುಳ್ಳುಗಳು ಮತ್ತು ಮುಳ್ಳು ಗಿಡಗಳನ್ನು ತೋಟದಲ್ಲಿ ಬಿತ್ತಬೇಕಾಗಿಲ್ಲ. ಏಕೆಂದರೆ ಅವು ತಾವಾಗಿಯೇ ಬೆಳೆಯುತ್ತವೆ. ನೀವು ಎರಡು ಮನೆಗಳ ಮುಂದೆ ಹಾದು ಹೋಗುತ್ತಿರುವಾಗ, ಅವುಗಳಲ್ಲಿ ಒಂದು ಸುಂದರ ಉದ್ಯಾನವನ್ನು ಹೊಂದಿದ್ದರೆ ಮತ್ತು ಇನ್ನೊಂದು ಮಿತಿಮೀರಿ ಗಿಡಗಳು ಬೆಳೆದು ಅರಣ್ಯದಂತೆ ಕಾಣುವ ಉದ್ಯಾನವನ್ನು ಹೊಂದಿದ್ದರೆ, ಸುಂದರವಾದ ಉದ್ಯಾನವನವು ತಾನಾಗಿಯೇ ಅಲ್ಲಿಗೆ ಬಂದಿದೆಯೆಂದು ನೀವು ಭಾವಿಸುವುದಿಲ್ಲ. ಸುಂದರವಾದ ಉದ್ಯಾನವನ್ನು ಹೊಂದಿರುವ ವ್ಯಕ್ತಿಯು ಬೆವರು ಸುರಿಸಿ ದುಡಿದು ಅದನ್ನು ಆ ರೀತಿ ಬೆಳೆಸಿರಬೇಕು ಎಂದು ನೀವು ಭಾವಿಸುತ್ತೀರಿ. ಇದಕ್ಕೆ ವ್ಯತಿರಿಕ್ತವಾಗಿ ಮಿತಿಮೀರಿ ಬೆಳೆದು ಅರಣ್ಯದಂತಿರುವ ಉದ್ಯಾನವನ್ನು ಹೊಂದಿರುವ ವ್ಯಕ್ತಿಯು ಬಹಳ ಶ್ರಮಿಸಿ ಅದನ್ನು ಆ ರೀತಿ ಮಾಡಿದ್ದಾನೆಂದು ನೀವು ಭಾವಿಸುವುದಿಲ್ಲ. ಅವನ ಉದ್ಯಾನವು ನಿರ್ಲಕ್ಷ್ಯದ ನಿಮಿತ್ತ ಅರಣ್ಯವಾಯಿತು.

ಇದೇ ತತ್ವವು ಮದುವೆಯಲ್ಲೂ ಅನ್ವಯಿಸುತ್ತದೆ. ನೀವು ಒಂದು ಸುಂದರವಾದ ಕುಟುಂಬವನ್ನು ನೋಡಿದರೆ, ಅದು ತಾನಾಗಿಯೇ ಸುಂದರವಾಗಲಿಲ್ಲ ಎಂದು ನೀವು ಖಂಡಿತವಾಗಿ ಹೇಳಬಹುದು. ಅದನ್ನು ಸುಂದರವಾಗಿಸಲು ಆ ಗಂಡ ಮತ್ತು ಹೆಂಡತಿ ಇಬ್ಬರೂ ಶ್ರಮಿಸಿರುತ್ತಾರೆ. ಗಂಡ ಮತ್ತು ಹೆಂಡತಿ ಇಬ್ಬರೂ ಆಗಾಗ ಕಳೆಗಳನ್ನು ಕಿತ್ತು ಹಾಕುತ್ತಾ, ನಿಯಮಿತವಾಗಿ ನೀರು ಹಾಕದಿದ್ದರೆ ಯಾವುದೇ ಮದುವೆಯು ಸುಂದರವಾದ ಉದ್ಯಾನದಂತೆ ಆಗಲು ಸಾಧ್ಯವೇ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ನೀವು ನಿಮ್ಮ ವಿವಾಹ ಜೀವಿತವನ್ನು ನಿರ್ಲಕ್ಷಿಸಿದರೆ, ಅದು ತಾನಾಗಿಯೇ ಒಂದು ಅರಣ್ಯದಂತೆ ಆಗುತ್ತದೆ.

ನೀವು ಜಾಗರೂಕರಾಗಿರದಿದ್ದರೆ, ಸೈತಾನನು ನಿಮ್ಮ ವಿವಾಹ ಸಂಬಂಧವನ್ನು ನಾಶಮಾಡುವುದಕ್ಕಾಗಿ, ಕಳ್ಳನಂತೆ ನಿಧಾನವಾಗಿ ಆದರೆ ಖಚಿತವಾಗಿ, ನಿಮ್ಮ ಮನೆಯನ್ನು ಪ್ರವೇಶಿಸುತ್ತಾನೆ. ಇದು ಒಂದೇ ರಾತ್ರಿಯೊಳಗೆ ನಡೆಯುವ ಸಂಗತಿಯಲ್ಲ. ಒಂದು ಅರಣ್ಯವು ಹಾಳುಬೀಳುವುದಕ್ಕೆ ಎರಡು ಅಥವಾ ಮೂರು ದಿನಗಳು ಸಾಕಾಗುವುದಿಲ್ಲ. ನೀವು ನಿಮ್ಮ ವಿವಾಹದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಭಾವಿಸಬಹುದು, ಆದರೆ ಅದನ್ನು ನೀವು ಜೋಪಾನವಾಗಿ ಸಂರಕ್ಷಿಸದಿದ್ದರೆ, ಕಾಲಕ್ರಮೇಣ ಅದು ಖಂಡಿತವಾಗಿ ಒಂದು ಹಾಳುಬಿದ್ದ ಅರಣ್ಯವಾಗುತ್ತದೆ .

ಈಗಾಗಲೇ ನಿಮ್ಮ ತೋಟವು ಒಂದು ಹಾಳುಬಿದ್ದ ಅರಣ್ಯದಂತೆ ಆಗಿದ್ದರೆ ಏನು ಮಾಡಬೇಕು? ಆ ಅರಣ್ಯವನ್ನು ಮತ್ತೆ ತೋಟವನ್ನಾಗಿ ಹೇಗೆ ಮಾರ್ಪಡಿಸಬಹುದು ಎಂಬುದನ್ನು ಪರಿಗಣಿಸೋಣ .

"ಯಾವುದೇ ವಿವಾಹದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಕಳೆಗಳನ್ನು ಕಿತ್ತು ಹಾಕಿ, ಸಮಯಕ್ಕೆ ಸರಿಯಾಗಿ ಅದಕ್ಕೆ ನೀರು ಹಾಯಿಸದೆ ಇದ್ದರೆ, ಅದು ಒಂದು ಸುಂದರ ತೋಟವಾಗುವುದು ಅಸಾಧ್ಯ".

ದೇವರು ನಮಗೆ ಎರಡು ಮಹತ್ತರವಾದ ವಾಗ್ದಾನಗಳನ್ನು ಕೊಡುತ್ತಾರೆ. ಮೊದಲನೆಯ ವಾಗ್ದಾನ ಯೆಶಾಯನು 51:3'ರಲ್ಲಿದೆ; ಇಲ್ಲಿ ಕರ್ತನು ಹೇಳುವುದೇನೆಂದರೆ, “ಅಲ್ಲಿನ ಹಾಳು ಪ್ರದೇಶವನ್ನೆಲ್ಲಾ ಕರ್ತನು ಏದೆನ್ ತೋಟದಂತೆಯೂ, ಅಲ್ಲಿನ ಮರುಭೂಮಿಯನ್ನು ಕರ್ತನ ಕಳಕಳಿಸುವ ವನದಂತೆಯೂ ಮಾಡುವನು”. ಇದು ಎಷ್ಟು ಶ್ರೇಷ್ಠವಾದ ವಾಗ್ದಾನವಾಗಿದೆ! ನಿಮ್ಮ ಜೀವಿತದಲ್ಲಿ ಇದನ್ನು ನಡೆಸಿಕೊಡುವಂತೆ ಕರ್ತನನ್ನು ಕೇಳಿರಿ. ನೀವು ಬೇಡಿಕೊಳ್ಳದಿದ್ದರೆ, ನಿಮಗೆ ಇದು ಸಿಗುವುದಿಲ್ಲ. ಯಾಕೋಬನು 4:2'ರಲ್ಲಿ, "ನೀವು ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ದೊರೆಯಲಿಲ್ಲ," ಎನ್ನಲಾಗಿದೆ. ನಿಮ್ಮ ಹಾಳುಬಿದ್ದಿರುವ ಪ್ರದೇಶವನ್ನು ಕರ್ತನ ವಾಗ್ದಾನಕ್ಕೆ ಅನುಸಾರವಾಗಿ ಮತ್ತೊಮ್ಮೆ ಏದೆನ್ ತೋಟವನ್ನಾಗಿ ಮಾರ್ಪಡಿಸುವಂತೆ ಕೇಳಿಕೊಳ್ಳಿರಿ.

ಎರಡನೇ ವಾಗ್ದಾನವು ಯೆಹೆಜ್ಕೇಲನು 36:34-36'ರಿಂದ ಬಂದಿದೆ, "ಹಾದು ಹೋಗುವವರೆಲ್ಲರ ಕಣ್ಣೆದುರಿಗೆ ಬೀಡುಬಿದ್ದು ಕಾಡಾದ ಭೂಮಿಯನ್ನು ಗೆಯ್ಯುವರು. ಆಗ ಜನರು - ಕಾಡಾಗಿದ್ದ ಈ ದೇಶವು ಏದೆನ್ ಉದ್ಯಾನದಂತೆ ಕಳಕಳಿಸುತ್ತದೆ ಎಂದು ಹೇಳುವರು. ಕರ್ತನಾದ ನಾನೇ ನುಡಿದಿದ್ದೇನೆ, ನಡಿಸುತೇನೆ." ಇದು ತೀರಾ ಹಾಳಾದ ವೈವಾಹಿಕ ಜೀವಿತದ ಬಗ್ಗೆ ಮಾತನಾಡುತ್ತದೆ; ಅದರ ಸ್ಥಿತಿ ಹಾದುಹೋಗುವ ಜನರಿಗೂ ಸಹ ಗೋಚರಿಸುತ್ತಿತ್ತು. ಆದರೆ ಇಂತಹ ಹಾಳಾದ ವಿವಾಹವನ್ನೂ ಸಹ ತಾನು ಸರಿಪಡಿಸುತ್ತೇನೆಂದು ದೇವರು ಹೇಳುತ್ತಾರೆ. ಮತ್ತು ಹಿಂದೆ ಅದರ ಶೋಚನೀಯ ಸ್ಥಿತಿಯನ್ನು ನೋಡಿದ್ದವರು ಈಗ ಅದನ್ನು ನೋಡಿ ಅದು ಏದೆನ್ ಉದ್ಯಾನದಂತೆ ಆಗಿದೆಯೆಂದು ಹೇಳುವರು.

ಈ ಅದ್ಭುತವಾದ ವಾಗ್ದಾನಗಳನ್ನು ಓದಿಕೊಂಡ ನಂತರ, ನಿಮ್ಮ ವಿವಾಹವೆಂಬ ಅರಣ್ಯವನ್ನು ಪವಿತ್ರಾತ್ಮನ ಸಹಾಯವಿಲ್ಲದೆ ತೋಟವನ್ನಾಗಿ ಪರಿವರ್ತಿಸಲು ನಿಮಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹು ಮುಖ್ಯವಾದದ್ದು. ವಿವಾಹ ಸಮಾಲೋಚನಾ ವಿಧಾನಗಳಿಂದಲ್ಲ ಅಥವಾ ಅನೇಕ ಪುಸ್ತಕಗಳನ್ನು ಓದುವುದರಿಂದಲ್ಲ. ಆದರೆ ಕೇವಲ ಪವಿತ್ರಾತ್ಮನ ಸಹಾಯದಿಂದ ಮಾತ್ರವೇ ಇದು ಸಾಧ್ಯ. ದೇವರು ಯೆಹೆಜ್ಕೇಲನು 36:26'ರಲ್ಲಿ ತನ್ನ ಪವಿತ್ರಾತ್ಮನನ್ನು ನಮಗೆ ವಾಗ್ದಾನ ಮಾಡಿದ್ದಾರೆ: "ನಾನು ನಿಮಗೆ ಹೊಸ ಹೃದಯವನ್ನು ಕೊಟ್ಟು ನಿಮ್ಮಲ್ಲಿ ನೂತನ ಸ್ವಭಾವವನ್ನು ಹುಟ್ಟಿಸುವೆನು; ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು." ಆದಿಕಾಂಡ 2:10'ರಲ್ಲಿ, ಏದೆನ್ ಸೀಮೆಯಲ್ಲಿ ಒಂದು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತ್ತು, ಎಂದು ನಾವು ಓದುತ್ತೇವೆ. ಆ ನದಿಯು ನಮ್ಮ ವಿವಾಹವೆಂಬ ತೋಟದ ಮಧ್ಯದಿಂದ ಹರಿದು ಎಲ್ಲವನ್ನೂ ಚೈತನ್ಯಗೊಳಿಸುವ ಪವಿತ್ರಾತ್ಮನ ಚಿತ್ರಣವಾಗಿದೆ.

ಅರಣ್ಯದ ಹಾಗಿರುವ ನಮ್ಮ ದಾಂಪತ್ಯ ಜೀವನವನ್ನು ಒಂದು ಉದ್ಯಾನವನವನ್ನಾಗಿ ಪುನಃ ಮಾರ್ಪಡಿಸಲು ನಾವು ಅಶಕ್ತರು ಎಂಬುದಾಗಿ ಒಪ್ಪಿಕೊಂಡು, ದೇವರೇ, ನಮಗೆ ನೆರವಾಗಿರಿ, ಎಂಬುದಾಗಿ ನಾವು ಮೊರೆಯಿಡುವಾಗ, ಆತನು ನಮಗೆ ಸಹಾಯ ಮಾಡುತ್ತಾನೆ. ಕೀರ್ತನೆಗಳು 127:1'ರಲ್ಲಿ ಈ ರೀತಿ ಹೇಳಲ್ಪಟ್ಟಿದೆ, "ಯೆಹೋವನು ಮನೆ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವುದು ವ್ಯರ್ಥ." ದೇವರು ನಮಗೆ ಸಹಾಯ ಮಾಡದಿದ್ದರೆ ನಮ್ಮ ದಾಂಪತ್ಯವನ್ನು ನಾವು ಒಂದು ಉದ್ಯಾನವನವನ್ನಾಗಿ ಮಾಡಲು ಕಷ್ಟ ಪಡುವುದು ವ್ಯರ್ಥ. ಒಂದು ವೇಳೆ ಈಗ ನಮ್ಮ ದಾಂಪತ್ಯವು ಉದ್ಯಾನವನವಾಗಿರಬಹುದು, ಆದರೆ ಕರ್ತನು ಅದನ್ನು ಕಾಯದಿದ್ದಲ್ಲಿ, ಅದೊಂದು ಅರಣ್ಯವಾಗಿ ಬದಲಾಗದಂತೆ ನಾವು ಕಾಪಾಡಲು ಸಾಧ್ಯವಾಗುವುದಿಲ್ಲ.

ನಿಮ್ಮ ದಾಂಪತ್ಯ ಸಂಬಂಧವು ಈ ದಿನ ಹೇಗಿದೆ? ಅದೊಂದು ಅರಣ್ಯದಂತೆ ಇದೆಯೇ? ನೀವು ನಿಮ್ಮ ದಾಂಪತ್ಯವನ್ನು ಮತ್ತೊಮ್ಮೆ ಉದ್ಯಾನವನದಂತೆ ಮಾಡುವ ನಿರೀಕ್ಷೆಯನ್ನು ಬಿಟ್ಟುಬಿಟ್ಟಿದ್ದೀರಾ? "ನಾನು ಪಡೆದಿರುವ ಸಂಗಾತಿಯೊಂದಿಗೆ ಒಂದು ಉದ್ಯಾನವನವನ್ನು ಹೊಂದಲು ಅಸಾಧ್ಯ," ಎಂಬುದಾಗಿ ನೀವು ಹೇಳುತ್ತೀರಾ? ನೀವು ಅದನ್ನೇ ಹೇಳಬೇಕು ಎಂಬುದಾಗಿ ಸೈತಾನನು ನಿಮ್ಮಿಂದ ಬಯಸುತ್ತಾನೆ. ಆದರೆ ನಾವು ಎಂದಿಗೂ ನಿರೀಕ್ಷೆಯನ್ನು ಬಿಟ್ಟುಬಿಡಬಾರದು. ನೀವು ಪುನಃ ಸ್ಥಾಪಿಸುವುದರ ಬಗ್ಗೆ ದೇವರ ವಾಗ್ದಾನಗಳನ್ನು ಈಗ ನೀವು ಕಂಡುಕೊಂಡಿರುವಾಗ, ಅವುಗಳನ್ನು ನಂಬಿಕೆಯ ಮೂಲಕ ನಿಮ್ಮ ವಿವಾಹದಲ್ಲಿ ನಿಮ್ಮದಾಗಿಸಿಕೊಳ್ಳಿರಿ. ಯೆಹೆಜ್ಕೇಲನು 36:37'ರ ವಾಗ್ದಾನ ಹೀಗಿದೆ. "ಕರ್ತನು ಇಂತೆನ್ನುತ್ತಾನೆ, ಅವರು ನನ್ನನ್ನು ಕೇಳುವವರೆಗೂ ಕಾಯುತ್ತೇನೆ. ಅನಂತರ ನಾನು ಅವರಿಗಾಗಿ ಅದನ್ನು ಮಾಡುತ್ತೇನೆ." ನಾವು ದೇವರನ್ನು ಕೇಳಿದರೆ ಮಾತ್ರ ಅವರು ನಮಗಾಗಿ ಅದನ್ನು ಮಾಡುತ್ತಾರೆ. ಆದ್ದರಿಂದ ನೀವು ಕರ್ತನ ಬಳಿ ಬಂದು, "ಕರ್ತನೇ, ನೀನು ನನ್ನ ದಾಂಪತ್ಯದಲ್ಲಿ ಇದನ್ನು ಮಾಡಬಲ್ಲೆ ಎಂಬುದಾಗಿ ನಾನು ನಂಬುತ್ತೇನೆ. ನಾನು ನನ್ನ ನಿರೀಕ್ಷೆಯನ್ನು ಕಳಕೊಳ್ಳುವುದಿಲ್ಲ," ಎಂಬುದಾಗಿ ಹೇಳಬೇಕು.