WFTW Body: 

ದಾವೀದನು ’ಕೀರ್ತನೆ 27:4'ರಲ್ಲಿ, "ನಾನು ನನ್ನ ಜೀವಮಾನವೆಲ್ಲಾ ಕರ್ತನ ಮನೆಯಲ್ಲಿ ವಾಸಮಾಡುತ್ತಾ, ಆತನ ಪ್ರಸನ್ನತೆಯನ್ನು ನೋಡುವದಕ್ಕೂ, ಆತನ ಮಂದಿರದಲ್ಲಿ ಧ್ಯಾನ ಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಕೇಳಿಕೊಂಡು, ಅದನ್ನೇ ಎದುರು ನೋಡುತ್ತಿರುವೆನು," ಎನ್ನುತ್ತಾನೆ.

ದಾವೀದನು ಒಬ್ಬ ಶ್ರೇಷ್ಠ ಅರಸನಾಗಿದ್ದನು. ಆತ ಐಶ್ವರ್ಯವಂತನೂ, ಅನೇಕ ಯುದ್ಧಗಳನ್ನು ಜಯಿಸಿದಾತನೂ, ಬಹಳ ಪ್ರಖ್ಯಾತನೂ ಆಗಿದ್ದನು. ಆದಾಗ್ಯೂ ಆತನು ಹೇಳಿದ ಮಾತು, "ನಾನು ಇವುಗಳಿಂದ ತೃಪ್ತನಾಗಿಲ್ಲ. ನಾನು ಕರ್ತನಿಂದ ಒಂದೇ ಒಂದು ವರವನ್ನು ಬೇಡಿಕೊಂಡಿದ್ದೇನೆ. ಆ ವರ ನಾನು ಸಮಸ್ತ ವಿಶ್ವದ ರಾಜನಾಗುವುದು ಅಲ್ಲ, ಅಥವಾ ಒಬ್ಬ ಶ್ರೇಷ್ಠ ಬೋಧಕನಾಗುವುದು ಅಲ್ಲ, ಅಥವಾ ಬಹಳ ಖ್ಯಾತಿಯನ್ನು ಸಂಪಾದಿಸುವುದು ಅಲ್ಲ. ನಾನು ಕರ್ತನಿಂದ ಬಯಸಿದ ಒಂದು ಸಂಗತಿಯೆಂದರೆ, ನಾನು ಕರ್ತನ ಪ್ರಸನ್ನತೆಯನ್ನು ಕಾಣುವುದು, ಮತ್ತು ಆ ಪ್ರಸನ್ನತೆಯನ್ನು ಹೆಚ್ಚು ಹೆಚ್ಚಾಗಿ ನೋಡುತ್ತಾ ನನ್ನ ಜೀವಿತವನ್ನು ಕಳೆಯುವುದಾಗಿದೆ." ನಮ್ಮ ಜೀವಿತದಲ್ಲೂ ಸಹ ಈ ಒಂದು ಬಯಕೆ ಮಾತ್ರ ಇದೆಯೇ?

ನಾವು ಯೋಹಾನ 20ನೇ ಅಧ್ಯಾಯದಲ್ಲಿ, ಇದೇ ಬಯಕೆ ಬೇರೊಬ್ಬ ವ್ಯಕ್ತಿಯಲ್ಲೂ ಇದ್ದುದನ್ನು ಕಾಣುತ್ತೇವೆ. ಆ ವ್ಯಕ್ತಿ ಮಗ್ದಲದ ಮರಿಯಳಾಗಿದ್ದಳು. ಆಕೆ ಆ ಭಾನುವಾರದ ಮುಂಜಾನೆ ಬೆಳಗಾಗುವುದಕ್ಕೆ ಮುನ್ನ ಸಮಾಧಿಯ ಬಳಿಗೆ ಹೋದಳು. ಆ ವೇಳೆಯಲ್ಲಿ ಆಕೆ ಏಕೆ ನಿದ್ರಿಸಲಿಲ್ಲ? ಆಕೆ ಅಷ್ಟು ಬೇಗನೆ ಎದ್ದು ಮುಂಜಾವಿನ ಕತ್ತಲಲ್ಲಿ ಸಮಾಧಿಗೆ ಹೋಗಲು ಕಾರಣವೇನು? ಇದಕ್ಕೆ ಕಾರಣ, ಆಕೆಯ ಜೀವಿತದಲ್ಲಿದ್ದ ಒಂದು ಆಸೆ ತನ್ನ ಕರ್ತನನ್ನು ನೋಡುವುದಾಗಿತ್ತು. ನಾವು ಓದಿಕೊಳ್ಳುವಂತೆ, ಆಕೆ ಸಮಾಧಿಯ ಬಳಿಗೆ ಬಂದಾಗ ಅದು ಬರಿದಾಗಿತ್ತು. ಆಕೆ ಅಲ್ಲಿಂದ ಓಡಿ ಹೋಗಿ, ಇತರ ಶಿಷ್ಯರಲ್ಲಿ ಕೆಲವರಿಗೆ ಈ ವಿಷಯವನ್ನು ತಿಳಿಸಿದಳು. ಅವರು ಸಹ ಬಂದರು ಮತ್ತು ಸಮಾಧಿಯ ಒಳಗೆ ಬಗ್ಗಿ ನೋಡಿದರು, ಮತ್ತು ಅನಂತರ ಅವರವರ ಮನೆಗಳಿಗೆ ಹಿಂದಿರುಗಿದರು - ಒಂದು ವೇಳೆ ಹಿಂದಿರುಗಿ ಮತ್ತೊಮ್ಮೆ ನಿದ್ರೆ ಮಾಡಿರಬಹುದು.

ಆದರೆ ಮಗ್ದಲದ ಮರಿಯಳು ಮಾತ್ರ ಆ ಸಮಾಧಿಯ ಗುಹೆಯ ಹೊರಗೆ ಅಳುತ್ತಾ ನಿಂತಳು. ನೋಡಿರಿ, ಆಕೆ ಕರ್ತನನ್ನು ಪ್ರೀತಿಸಿದ ಹಾಗೆ ಆ ಶಿಷ್ಯರು ಕರ್ತನನ್ನು ಪ್ರೀತಿಸಲಿಲ್ಲ. ಶಿಷ್ಯಂದಿರು ಬರಿದಾಗಿದ್ದ ಸಮಾಧಿಯನ್ನು ನೋಡಿದಾಗ, ಮನೆಗೆ ಹಿಂದಿರುಗಿದರು ಮತ್ತು ನಿದ್ರೆ ಹೋದರು. ಆದರೆ ಕರ್ತನು ಮರಿಯಳ ಸರ್ವಸ್ವನಾಗಿದ್ದನು, ಹಾಗಾಗಿ ಆಕೆಯ ಮನಸ್ಸು ಹಾಗೆ ಮಾಡಲು ಒಪ್ಪಲಿಲ್ಲ. ದೇವರಿಗೆ ಕ್ರೈಸ್ತ ಸಭೆಯಲ್ಲಿ ಇಂತಹ ಜನರು ಬೇಕಾಗಿದ್ದಾರೆ. ಯೇಸುವು ಮಗ್ದಲದ ಮರಿಯಳ ಬಳಿ ಬಂದು ಆಕೆಯನ್ನು ಮಾತನಾಡಿಸಿದಾಗ, ಆಕೆಯು ಆತನನ್ನು ತೋಟಗಾರನೆಂದು ಅಂದುಕೊಂಡು, "ಅಯ್ಯಾ, ನೀನು ಆತನನ್ನು ಎತ್ತಿಕೊಂಡು ಹೋಗಿದ್ದರೆ, ಎಲ್ಲಿ ಇಟ್ಟಿದ್ದಿಯೆಂದು ನನಗೆ ಹೇಳು; ನಾನು ಅವನನ್ನು ಹೊತ್ತು ಕೊಂಡು ಹೋಗುತ್ತೇನೆ," ಎಂದು ನುಡಿದಳು. ಆಕೆ ಆ ದೇಹವನ್ನು ಹೊತ್ತುಕೊಂಡು ಹೋಗಲೂ ಸಿದ್ಧಳಾಗಿದ್ದಳು. ನಿಮಗೆ ತಿಳಿದಿದೆ, ಒಬ್ಬ ಸ್ತ್ರೀಯು ಒಂದು ಮೃತ ದೇಹವನ್ನು ಹೊತ್ತುಕೊಂಡು ಸಾಗಿಸುವುದು ಸಾಮಾನ್ಯವಾಗಿ ಒಂದು ಅಸಾಧ್ಯ ಸಂಗತಿಯಾಗಿದೆ. ಆದರೆ ಆಕೆಯ ಕರ್ತನ ಪ್ರೀತಿ ಎಂಥದ್ದು ಎಂದರೆ, ಆಕೆ ಆತನಿಗಾಗಿ ಎಂತಹ ಕಷ್ಟ ತೆಗೆದುಕೊಳ್ಳುವುದಕ್ಕೂ ಸಿದ್ಧಳಾಗಿದ್ದಳು. "ಕರ್ತನ ಅನುಗ್ರಹಕ್ಕಾಗಿ ಹಂಬಲಿಸುವುದು," ಎಂಬುದರ ಅರ್ಥ ಇದೇ ಆಗಿದೆ. ಆ ಅನುಭವದ ಪರಿಣಾಮ ಏನೆಂದರೆ, ನಮ್ಮಲ್ಲಿ ಒಂದೇ ಒಂದು ಆಸೆ ಇರುತ್ತದೆ - ಕರ್ತನ ಸೌಂದರ್ಯವನ್ನು ನೋಡುವ ಹಂಬಲ - ಮತ್ತು ಅದರ ಹೊರತಾಗಿ ಇನ್ಯಾವುದೂ ಬೇಡವೆನಿಸುತ್ತದೆ. ನಾನು ಶ್ರೀಮಂತನಾಗಲು ಅಥವಾ ಪ್ರಖ್ಯಾತನಾಗಲು ಬಯಸುವುದಿಲ್ಲ, ಕೇವಲ ನನ್ನ ಕರ್ತನ ಸೌಂದರ್ಯವನ್ನು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚಾಗಿ ನೋಡುವುದು ಮಾತ್ರ ನನಗೆ ಬೇಕಾಗಿದೆ.

ಒಂದು ಸಲ ಒಬ್ಬ ವಿಧವೆಯನ್ನು ಭೇಟಿಮಾಡಲು ಒಬ್ಬ ಮನುಷ್ಯನು ಆಕೆಯ ಮನೆಗೆ ಹೋದ ದೃಷ್ಟಾಂತ ನನಗೆ ಜ್ಞಾಪಕಕ್ಕೆ ಬರುತ್ತದೆ. ಆಕೆ ತೀರಾ ಬಡವಳಾಗಿದ್ದಳು, ಆದರೆ ಆಕೆ ಕರ್ತನನ್ನು ಪ್ರೀತಿಸುತ್ತಿದ್ದಳು. ಆಕೆಗೆ ನಾಲ್ಕೈದು ಮಕ್ಕಳಿದ್ದರು, ಮತ್ತು ಆಕೆ ಒಂದು ಬಹಳ ಪುಟ್ಟ ಮಣ್ಣಿನ ಗುಡಿಸಲಲ್ಲಿ ವಾಸಿಸುತ್ತಿದ್ದಳು. ಆ ಮನುಷ್ಯನು ಆಕೆಯನ್ನು, "ನಿನ್ನ ಮನೆ ಇಷ್ಟೊಂದು ಸಂತೋಷ, ಸಮಾಧಾನಗಳಿಂದ ತುಂಬಿರಲು ಕಾರಣವೇನು?" ಎಂದು ಪ್ರಶ್ನಿಸಿದನು. "ನಿನ್ನ ಮಕ್ಕಳು ಅರೆಹೊಟ್ಟೆ ಊಟ ಮಾಡುತ್ತಾರೆ, ಆದರೂ ಅವರು ಯಾವಾಗಲೂ ನಗುತ್ತಿರುತ್ತಾರೆ. ನಿನ್ನ ಮನೆಯಲ್ಲಿ ಅನೇಕ ತೊಂದರೆಗಳು ಮತ್ತು ಅನಾರೋಗ್ಯದ ಸಮಸ್ಯೆಗಳಿವೆ, ಹಾಗಿದ್ದರೂ ನಿಮ್ಮಲ್ಲಿ ಯಾವಾಗಲೂ ಹರ್ಷ ತುಂಬಿದೆ. ನಿಮ್ಮ ಜೀವನದ ರಹಸ್ಯವೇನು?" ಇದಕ್ಕೆ ಆಕೆ ನೀಡಿದ ಉತ್ತರ, "ನನಗೆ ಯೇಸು ಕ್ರಿಸ್ತನೇ ಸರ್ವಸ್ವವು. ಈ ಜಗತ್ತಿನಲ್ಲಿ ನನಗೆ ಬೇರೇನೂ ಬೇಕಿಲ್ಲ" ಎಂಬುದಾಗಿತ್ತು.

ಪ್ರಿಯರೇ, ಕರ್ತ ಯೇಸು ಕ್ರಿಸ್ತನು ನಮ್ಮ ಸರ್ವಸ್ವವಾದರೆ, ನಾವು ಸಹ ಆಕೆಯ ಹಾಗೆಯೇ ಆಗುತ್ತೇವೆ.