WFTW Body: 

ಸೈತಾನ ಹಾಗೂ ನಮ್ಮ ದುರಾಸೆಗಳು ಬಹಳ ಪ್ರಬಲವಾಗಿ ಕಾರ್ಯ ಮಾಡುವುದನ್ನು ದೇವರು ಅನುಮತಿಸಿರುವುದರಿಂದ ಅವುಗಳ ಬಲವು ಅತಿಯಾಗಿದೆ, ಹಾಗಾಗಿ ನಾವು ನಮ್ಮ ಸ್ವಂತ ಬಲದಿಂದ ಇವನ್ನು ಜಯಿಸಬಹುದೆಂದು ಯೋಚಿಸಲು ಎಂದಿಗೂ ಸಾಧ್ಯವಿಲ್ಲ. ನಾವು ಬಲಕ್ಕಾಗಿ ದೇವರನ್ನು ಯಾಚಿಸಲೇ ಬೇಕಾಗುತ್ತದೆ. ಇಸ್ರಾಯೇಲ್ಯರು ತಮ್ಮನ್ನು ಕಾನಾನಿನ ದೇಶವಾಸಿಗಳ ಗಾತ್ರಕ್ಕೆ ಹೋಲಿಸಿ ನೋಡಿ, ತಾವು ಮಿಡತೆಗಳಂತೆ ಇದ್ದೇವೆಂದು ಅಂದುಕೊಂಡರು. ಹಾಗಿದ್ದರೂ ಯೆಹೋಶುವನು ಮತ್ತು ಕಾಲೇಬನು ದೇವರ ಬಲವನ್ನು ಆಶ್ರಯಿಸಿದರು ಮತ್ತು ಆ ದೇಶಕ್ಕೆ ಹತ್ತಿಹೋಗಿ ಅಲ್ಲಿದ್ದ ಉನ್ನತಪುರುಷರನ್ನು ಸಾಯಿಸಿದರು. ನಮ್ಮ ದುರಾಸೆಗಳನ್ನು ಸಂಪೂರ್ಣವಾಗಿ ಜಯಿಸಲು ನಮ್ಮಲ್ಲಿ ಇಂತಹ ಪ್ರೇರಣೆಯನ್ನು ಹೊಂದಿರುವ ಮನಸ್ಸು ಅವಶ್ಯವಾಗಿದೆ. ಹಾಗಾಗಿ ವಿಶ್ವಾಸಭರಿತರಾಗಿ ಹೀಗೆ ಹೇಳುತ್ತಾ ಮುಂದುವರಿಯಿರಿ, "ನಾನು ದೇವರ ಬಲದ ಮೂಲಕ ಸೈತಾನನನ್ನು ಮತ್ತು ನನ್ನ ಎಲ್ಲಾ ದುರಾಸೆಗಳನ್ನು ಜಯಿಸಬಲ್ಲೆ ಮತ್ತು ಜಯಿಸುತ್ತೇನೆ".

* ಪ್ರತಿಯೊಂದು ಶೋಧನೆಯಲ್ಲಿ ನಿಮಗೆ ಎರಡು ದಾರಿಗಳು ತೆರೆದಿರುತ್ತವೆ - (i) ಮನಸ್ಸನ್ನು ತೃಪ್ತಿ ಪಡಿಸುವ ದಾರಿ, ಮತ್ತು (ii) ಯಾತನೆಯ ದಾರಿ, ಅಂದರೆ ಶರೀರದ ಸುಖ-ಹಾರೈಕೆಯನ್ನು ನಿರಾಕರಿಸುವಂಥದ್ದು. ಈ ಎರಡನೆಯ ದಾರಿ "ಶರೀರದಲ್ಲಿ ಬಾಧೆ ಪಡುವ ದಾರಿಯಾಗಿದೆ" (1 ಪೇತ್ರ. 4:1). ಹೀಗೆ ನೀವು ಶರೀರಭಾವವನ್ನು ತಡೆಯುತ್ತಾ ಮತ್ತು ಬಾಧೆಪಡುತ್ತಾ ಮುಂದುವರಿದರೆ, ಅಂತ್ಯದಲ್ಲಿ ಪಾಪ ಮಾಡುವುದರ ಬದಲಾಗಿ ಸಾಯಬೇಕಾದರೆ, ಅದಕ್ಕೂ ಸಿದ್ಧರಾಗುತ್ತೀರಿ. ಆಗ ನೀವು "ಪ್ರಾಣಾಪಾಯಕ್ಕೂ ಹಿಂಜರಿಯದೆ ಪಾಪವನ್ನು ವಿರೋಧಿಸುವಿರಿ" (ಇಬ್ರಿ. 12:4).

* ಒಬ್ಬ ಕ್ರೀಡಾಪಟುವು ಎಷ್ಟೋ ವಿಚಾರಗಳಲ್ಲಿ ತನ್ನನ್ನು ಶಿಸ್ತು ಪಡಿಸಿಕೊಳ್ಳುತ್ತಾನೆ. ಇದೇ ರೀತಿ ನೀವು ಸೈತಾನನನ್ನು ಮತ್ತು ನಿಮ್ಮ ಶರೀರದ ಆಶಾಪಾಶಗಳನ್ನು ಜಯಿಸಿ, ಕೊನೆಯಲ್ಲಿ ಈ ಪರಲೋಕದ ಓಟದ ಸ್ಪರ್ಧೆಯನ್ನು ಗೆಲ್ಲಬಯಸಿದರೆ, ನೀವು ನಿಮ್ಮ ಶರೀರದ ಆಶೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಪೌಲನು ಹೀಗೆ ಹೇಳುತ್ತಾನೆ, "ನಾನು ನನ್ನ ದೇಹವನ್ನು ಜಜ್ಜಿ ಸ್ವಾಧೀನ ಪಡಿಸಿಕೊಂಡು, ಅದು ಮಾಡಬೇಕಾದದ್ದನ್ನೇ ಮಾಡುವಂತೆಯೂ, ಮತ್ತು ಸ್ವಂತ ಇಷ್ಟದಂತೆ ನಡೆಯದಂತೆಯೂ ಅದನ್ನು ನಿಯಂತ್ರಿಸುತ್ತೇನೆ. ಇಲ್ಲವಾದರೆ ಇತರರಿಗೆ ಬೋಧಿಸುವ ನಾನೇ ಅಯೋಗ್ಯನು ಎನಿಸಿಕೊಂಡೇನು" (1 ಕೊರಿ. 9:27 - Living Bible).

* ಶೋಧನೆಯು ಒಂದು ಆಲೋಚನೆಯಾಗಿ ನಮ್ಮ ಮನಸ್ಸಿನೊಳಗೆ ಬರುತ್ತದೆ. ನಾವು ಅದನ್ನು ಒಡನೆಯೇ ತಡೆಯಬೇಕು. ಆದರೆ ಸಾಮಾನ್ಯವಾಗಿ ನಾವು ಆ ಕೆಟ್ಟ ಆಲೋಚನೆಯನ್ನು ತಡೆಯಲು ನಿರ್ಧರಿಸಿದ ಪ್ರಾರಂಭದಲ್ಲಿ ಯಶಸ್ವಿಯಾಗುವುದಿಲ್ಲ, ಏಕೆಂದರೆ ನಾವು ಅದನ್ನು ವಿರೋಧಿಸುವುದಕ್ಕೆ ಬದಲಾಗಿ ಕನಿಷ್ಠ ಕೆಲವು ಸೆಕೆಂಡುಗಳ ಕಾಲ ಅದನ್ನು ಆನಂದಿಸುತ್ತೇವೆ. ನಾವು ಎಷ್ಟೋ ವರ್ಷಗಳಿಂದ ರೂಢಿಸಿಕೊಂಡ ಜೀವನ ವಿಧಾನವೇ ಇದಕ್ಕೆ ಕಾರಣ. ಈ ಪ್ರತಿರೋಧವನ್ನು ಆರಂಭಿಸುವಲ್ಲಿ ವಿಳಂಬವನ್ನು ಕಡಿಮೆಗೊಳಿಸುತ್ತಾ, ಅದನ್ನು ಶೂನ್ಯಕ್ಕೆ ಇಳಿಸುವ ವರೆಗೆ ನಾವು ಹೋರಾಡುತ್ತಲೇ ಇರಬೇಕು! ನಾವು ಪಾಪ ಮಾಡಿದಾಗ, ತಕ್ಷಣ ತಪ್ಪೊಪ್ಪಿಕೊಳ್ಳಬೇಕು ಮತ್ತು ಪಶ್ಚಾತ್ತಾಪ ಪಡಬೇಕು ಮತ್ತು ದುಃಖಿಸಬೇಕು.

ಪೇತ್ರನು ಸಮುದ್ರದಲ್ಲಿ ಮುಳುಗುತ್ತಿದ್ದಾಗ "ಕಾಪಾಡು" ಎಂದು ಸಹಾಯಕ್ಕಾಗಿ ಕೂಗಿಕೊಂಡ ಹಾಗೆ, ಯಾವುದೇ ವೇಳೆ ಶೋಧನೆಯ ಒತ್ತಡ ಅತಿಯಾಗಿದೆಯೆಂದು ನಮಗೆ ಅನಿಸಿದಾಗ ಮತ್ತು ಅದಕ್ಕೆ ಸೋಲೊಪ್ಪುವ ಭಯ ನಮ್ಮಲ್ಲಿ ಉಂಟಾದಾಗ, ನಾವು ತಡಮಾಡದೆ ಸಹಾಯಕ್ಕಾಗಿ ಮೊರೆಯಿಡಬೇಕು (ಮತ್ತಾ. 14:30). "ಸಹಾಯಕ್ಕಾಗಿ ಕೃಪಾಸನದ ಮುಂದೆ ಓಡಿ ಬರುವುದು," ಎಂಬುದರ ಅರ್ಥ ಇದೇ ಆಗಿದೆ. ನೀವು ನಿಮ್ಮ ಜೀವನದಲ್ಲಿ ಪಾಪವನ್ನು ಜಯಿಸಬೇಕೆಂಬ ದೃಢನಿರ್ಧಾರ ಮಾಡಿದ್ದೀರಿ ಎಂಬುದನ್ನು ದೇವರಿಗೆ ಸಾಬೀತು ಪಡಿಸುವ ಕಾರ್ಯಗಳು ಯಾವುವೆಂದರೆ, ನೀವು ಪಾಪದಿಂದ ತಪ್ಪಿಸಿಕೊಂಡು ಓಡಿಹೋಗುವುದು ಮತ್ತು ಪಾಪದ ಸಂಗಡ ಹೋರಾಡುವುದು. ನೀವು ಹಾಗೆ ಮಾಡಿದಾಗ, ಸರ್ವಶಕ್ತ ದೇವರು ನಿಮಗೆ ಸಹಾಯ ಮಾಡುತ್ತಾರೆ.