ಪವಿತ್ರಾತ್ಮನು ಸತ್ಯದ ಆತ್ಮನೆಂದು ಕರೆಯಲ್ಪಟ್ಟಿದ್ದಾನೆ. ಯೇಸು ಹೇಳಿದರು, "ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ಸಕಲ ವಿಷಯದಲ್ಲಿಯೂ ನಡೆಸಿಕೊಂಡು ಹೋಗಿ ಸತ್ಯಕ್ಕೆ ಸೇರಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತಾಡದೆ ಕೇಳಿದ ಮಾತುಗಳನ್ನೇ ಆಡುವನು; ಮತ್ತು ಮುಂದಾಗುವ ಸಂಗತಿಗಳನ್ನು ನಿಮಗೆ ತಿಳಿಸುವನು" (ಯೋಹಾ. 16:13).
ನನ್ನ ಜೀವಿತದಲ್ಲಿ ತಲೆಯಿಂದ ಪಾದದ ವರೆಗೆ ಸಂಪೂರ್ಣವಾಗಿ ಸತ್ಯತೆ ಇರಬೇಕೆಂದು ನಾನು ಬಯಸುತ್ತೇನೆ, ಏಕೆಂದರೆ ಯೇಸುವನ್ನು ಹಿಂಬಾಲಿಸುವುದು ಎಂಬುದರ ಅರ್ಥ ಅದೇ ಆಗಿದೆ. ಯೇಸು ಹೇಳಿದರು, "ನಾನೇ ಸತ್ಯವಾಗಿದ್ದೇನೆ." ಕ್ರೈಸ್ತ ಬೋಧಕರೂ ಸಹ ಎಷ್ಟೋ ಬಾರಿ ಇತರರೊಂದಿಗೆ ಮಾತಾಡುವಾಗ ಸಮಯಕ್ಕೆ ತಕ್ಕಂತೆ ಮಾತನ್ನು ಬದಲಾಯಿಸುತ್ತಾರೆ. "ನಾನು ಹೀಗೆ ಹೇಳಿದರೆ, ಅದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು, ಆದ್ದರಿಂದ ನಾನು ಸ್ವಲ್ಪ ಜಾಣ್ಮೆಯಿಂದ ಮಾತಾಡುತ್ತೇನೆ," ಎಂದುಕೊಳ್ಳುತ್ತಾರೆ. ಯೇಸು ಎಂದಿಗೂ ಚಾಣಾಕ್ಯತನದ ಮಾತನ್ನು ನುಡಿಯಲಿಲ್ಲ, ಅವರು ಯಾವಾಗಲೂ ಸತ್ಯವನ್ನು ಸ್ಪಷ್ಟವಾಗಿ ಮತ್ತು ನೇರವಾಗಿ ಮಾತನಾಡುತ್ತಿದ್ದರು. ಯೇಸು ಒರಟುತನದಿಂದ ವರ್ತಿಸಿದರೆಂದು ನಾನು ಹೇಳುತ್ತಿಲ್ಲ ಮತ್ತು ನಾವು ಒರಟಾಗಿ ವರ್ತಿಸಬೇಕೆಂದು ನಾನು ಹೇಳುತ್ತಿಲ್ಲ, ಆದರೆ ಯೇಸು ಯಾವುದೇ ವೈಯಕ್ತಿಕ ಲಾಭಕ್ಕಾಗಿ ಚುರುಕುತನವನ್ನು ಉಪಯೋಗಿಸಲಿಲ್ಲ. ನಾವು ಸತ್ಯವನ್ನು ಇತರರಿಗೆ ತಿಳಿಸುವಾಗ ನಮ್ಮಲ್ಲಿ ಅವರ ಬಗ್ಗೆ ದಯೆ ಮತ್ತು ಕಾಳಜಿ ಇರಬೇಕು ಎಂದು ನಾನು ನಂಬುತ್ತೇನೆ (ಒರಟುತನವಲ್ಲ) -- ಇನ್ನೊಬ್ಬರ ಮೇಲೆ ಪರಿಣಾಮ ಬೀರುವ ಸತ್ಯವನ್ನು ನುಡಿಯುವುದರ ಬಗ್ಗೆ ನಾನು ಹೇಳುತ್ತಿದ್ದೇನೆ -- ಆದರೆ ನಾವು ಇತರರೊಂದಿಗೆ ಆಡುವ ಮಾತಿನಲ್ಲಿ ಯಾವಾಗಲೂ ದಯೆಯಿರಬೇಕು. ನಮ್ಮ ಸ್ವಂತದ ವಿಷಯಕ್ಕೆ ಬಂದಾಗ ನಾವು ಸತ್ಯವಂತರಾಗಿರಬೇಕು.
ಪವಿತ್ರಾತ್ಮನು ನಮ್ಮನ್ನು ಎಲ್ಲಾ ಸತ್ಯಕ್ಕೆ ನಡೆಸುತ್ತಾನೆಂದು ನಿಮಗೆ ತಿಳಿದಿದೆಯೇ? ಆದಿಸಭೆಯಲ್ಲಿ ಮೊದಲು ನಿರ್ಣಯಿಸಲ್ಪಟ್ಟ ಪಾಪವೆಂದರೆ, ಅಪ್ರಾಮಾಣಿಕತೆಯ ಪಾಪವಾಗಿತ್ತು, ದುರಾಸೆಯ ಪಾಪವಲ್ಲ. ’ಅಪೊಸ್ತಲರ ಕೃತ್ಯಗಳು 5'ರಲ್ಲಿ, ಅನನೀಯನು ಮತ್ತು ಸಪ್ಫೈರಳು, ಅನೇಕ ಜನರು ತಮ್ಮ ಜಮೀನುಗಳನ್ನು ಮಾರಿ ಹಣವನ್ನು ಅಪೊಸ್ತಲರ ಪಾದಗಳ ಬಳಿಗೆ ತರುವುದನ್ನು ನೋಡಿದರು (ಅ.ಕೃ. 4:34-35). ಅನನೀಯನು ಮತ್ತು ಸಪ್ಫೈರಳು ಸಹ ಸಭೆಯಲ್ಲಿ ಪೂರ್ಣ ಹೃದಯವುಳ್ಳವರು ಮತ್ತು ದೇವರಿಗೆ ಸಂಪೂರ್ಣ ಶರಣಾದವರು ಎಂಬ ಖ್ಯಾತಿಯನ್ನು ಪಡೆಯ ಬಯಸಿದರು. ಆದ್ದರಿಂದ ಅವರು ತಮ್ಮ ಜಮೀನಿನ ಒಂದು ಭಾಗವನ್ನು ಮಾರಿದರು. ಆದರೆ ಇತರರು ಮಾಡುತ್ತಿದ್ದಂತೆ ಪೂರ್ಣ ಪ್ರಮಾಣದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಸಮರ್ಪಿಸಲಿಲ್ಲ. ಅವರು ಜಮೀನನ್ನು ಒಂದು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದರು ಎಂದು ಊಹಿಸೋಣ. ಅವರು ಜಮೀನನ್ನು ಮಾರಾಟಮಾಡಿ 50,000 ರೂಪಾಯಿಗಳನ್ನು ತಮ್ಮ ಬಳಿ ಇಟ್ಟುಕೊಂಡು 50%ರಷ್ಟನ್ನು ಮಾತ್ರ ಸಭೆಗೆ ನೀಡಿದರೆಂದು ಭಾವಿಸೋಣ. ಇಂದು ಯಾರಾದರೂ ತಮ್ಮ ಆಸ್ತಿಯನ್ನು ಮಾರಿ ತಮ್ಮ ಆದಾಯದ ಶೇಕಡ 50ರನ್ನು ದೇವರಿಗೆ ತಂದುಕೊಟ್ಟರೆ ನೀವು ಆ ವ್ಯಕ್ತಿಯನ್ನು ಪೂರ್ಣ ಹೃದಯದ ಕ್ರೈಸ್ತನೆಂದು ಕರೆಯುತ್ತೀರಿ! ಆದರೆ ಅನನೀಯ ಕೊಲ್ಲಲ್ಪಟ್ಟದ್ದು ಅವನು ಕೊಟ್ಟದ್ದಕ್ಕಾಗಿಯೋ ಅಥವಾ ಕೊಡದೇ ಇದ್ದುದಕ್ಕಾಗಿಯೋ ಅಲ್ಲ, ಆದರೆ ಅವನು ಸುಳ್ಳು ಹೇಳಿದಕ್ಕಾಗಿ.
ಅವನು ಇತರರ ಜೊತೆಗೆ ಸಾಲಿನಲ್ಲಿ ನಿಂತನು, ಮತ್ತು ಜನರು ಅಪೊಸ್ತಲರ ಪಾದಗಳ ಬಳಿಯಲ್ಲಿ ತಮ್ಮ ಹಣವನ್ನು ಇಡುತ್ತಿದ್ದಾಗ ಮೌನವಾಗಿಯೇ ಇದ್ದನು. ಅವನೂ ತನ್ನ ಹಣವನ್ನು ಹಾಗೆಯೇ ಇಟ್ಟು ಮುಂದೆ ಸಾಗಿದನು. ಅವನು ಮುಂದೆ ಸಾಗುತ್ತಿದ್ದಾಗ ಪೇತ್ರನು, "ಅನನೀಯನೇ, ಇಲ್ಲಿ ಹಿಂದಿರುಗಿ ಬಾ”ಎಂದು ಅವನನ್ನು ಕರೆದನು. ದೇವರು ಪೇತ್ರನಿಗೆ ಈ ವ್ಯಕ್ತಿ ಸುಳ್ಳುಗಾರನೆಂಬ ವಿವೇಚನೆಯನ್ನು ಕೊಟ್ಟರು. ’ಅಪೋಸ್ತಲರ ಕೃತ್ಯಗಳು 5:4'ರಲ್ಲಿ ಪೇತ್ರನು ಅವನಿಗೆ ಹೀಗೆ ಹೇಳಿದನು: "ಆ ಆಸ್ತಿ ಇದ್ದಾಗ ನಿನ್ನದಾಗಿಯೇ ಇತ್ತಲ್ಲವೇ, ಯಾರೂ ನಿನ್ನನ್ನು ಅದನ್ನು ಮಾರಬೇಕೆಂದು ಬಲವಂತ ಮಾಡಲಿಲ್ಲ. ದೇವರಿಗೆ ನಿನ್ನ ಹಣವೂ ಬೇಡ, ನಿನ್ನ ಭೂಮಿಯೂ ಬೇಡ. ಎಲ್ಲರೂ ಸ್ವಯಂಪ್ರೇರಿತರಾಗಿ ಕೊಡುತ್ತಿದ್ದಾರೆ. ನೀನು ಅದನ್ನು ಮಾರಿದ ಮೇಲೆಯೂ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ. ಯಾರೂ ನಿನ್ನನ್ನು ಶೇಕಡಾ 50ರಷ್ಟು ಕೊಡಲು ಅಥವಾ ಶೇಕಡಾ 10ರಷ್ಟು ಅಥವಾ ಶೇಕಡಾ 1ರಷ್ಟು ಕೊಡಲು ಸಹ ಕೇಳಲಿಲ್ಲ -- ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಯಾಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ ಆಡಿದಿ," ಅಂದನು. ಅನನೀಯನು, "ನಾನು ಬಾಯಿ ತೆರೆಯಲೇ ಇಲ್ಲ! ನಾನು ಒಂದು ಮಾತನ್ನೂ ಹೇಳಲಿಲ್ಲ," ಎಂದು ಹೇಳಬಹುದಿತ್ತು. ಆದರೆ ನೀವು ಬಾಯಿ ತೆರೆಯದೇ ದೇವರಿಗೆ ಸುಳ್ಳು ಹೇಳಬಹುದು, ಎಂದು ನಿಮಗೆ ಗೊತ್ತೇ? ಅನನೀಯನು ಸಾಲಿನಲ್ಲಿ ನಿಂತು, ಹಣವನ್ನು ಅಪೊಸ್ತಲರ ಪಾದಗಳ ಬಳಿಯಲ್ಲಿಟ್ಟು ಮುಂದೆ ಸಾಗಿದನು. ಅವನು ಬಾಯಿ ತೆರೆಯಲೇ ಇಲ್ಲ, ಆದರೆ ಅವನ ಆ ಒಂದು ಕ್ರಿಯೆಯಲ್ಲಿಯೇ ಒಂದು ಸುಳ್ಳು ಇತ್ತು. ಇದನ್ನೇ ಕಪಟತನ ಎನ್ನುತ್ತಾರೆ — ಅಂದರೆ ನಟಿಸುವುದು.
ನೀವು ಒಂದು ಸಭೆಯ ಅನ್ಯೋನ್ಯತೆಗೆ ಬಂದು, ಇತರರು ಪೂರ್ಣ ಹೃದಯದಿಂದ ಇರುವ ಹಾಗೆ ನೀವೂ ಇದ್ದಂತೆ ನಟಿಸಬಹುದು; ಆದರೆ ಹಾಗೆ ನಟಿಸಿದ್ದಕ್ಕಾಗಿಯೇ ನೀವು ಸುಳ್ಳುಗಾರರಾಗಿರುತ್ತೀರಿ. ನೀವು ಸಂಪೂರ್ಣರಾಗಿಲ್ಲದೇ ಇರುವಾಗ, ಇತರರಂತೆ ಪೂರ್ಣ ಹೃದಯದಿಂದ ಇರುವಂತೆ ನಟಿಸಿ ಅವರೊಂದಿಗೆ ಕುಳಿತುಕೊಂಡಾಗ, ನೀವು ಬಾಯಿ ತೆರೆಯದಿದ್ದರೂ ಸಹ ಸುಳ್ಳುಗಾರರಾಗುತ್ತೀರಿ. ನೀವು ಯೇಸುವಿಗೆ, "ನನ್ನ ಬೆಳ್ಳಿಯನ್ನೂ ಬಂಗಾರವನ್ನೂ ತೆಗೆದುಕೋ ಸ್ವಾಮಿ, ಒಂದು ಕಣವನ್ನೂ ನಾನು ಹಿಡಿದಿಟ್ಟುಕೊಳ್ಳುವುದಿಲ್ಲ” ಎಂದು ಹಾಡಬಹುದು, ಏಕೆಂದರೆ ಎಲ್ಲರೂ ಹಾಡುತ್ತಿದ್ದಾರೆ, ರಾಗವೂ ಪದಗಳೂ ಚೆನ್ನಾಗಿವೆ, ಆದ್ದರಿಂದ ಹಾಡುತ್ತಿದ್ದೇನೆ, ಎನ್ನಬಹುದು. ಆದರೆ, ನೀವು ಅದನ್ನು ಅರ್ಥಪೂರ್ಣವಾಗಿ ಹಾಡದಿದ್ದರೆ, ನೀವು ಸಂಪೂರ್ಣ ಸುಳ್ಳುಗಾರರಾಗುತ್ತೀರಿ. ಬಹುತೇಕ ಕ್ರೈಸ್ತರು ವಾರದ ಇತರ ಯಾವುದೇ ದಿನಕ್ಕಿಂತ ಭಾನುವಾರ ದೇವರಿಗೆ ಹೆಚ್ಚು ಸುಳ್ಳುಗಳನ್ನು ಹೇಳುತ್ತಾರೆ -- ಅವರು ಹಾಡುವ ಹಾಡುಗಳ ಮೂಲಕ! ನೀವು, "ಎಲ್ಲವನ್ನೂ ಯೇಸುವಿಗೆ ಸಮರ್ಪಿಸುತ್ತೇನೆ,” ಎಂದು ಹಾಡುತ್ತೀರಿ, ಆದರೆ ನಿಜವಾಗಿಯೂ ಎಲ್ಲವನ್ನೂ ಸಮರ್ಪಿಸಿಲ್ಲ, ಹಾಗಾಗಿ ನೀವು ಸುಳ್ಳುಗಾರರಾಗುತ್ತೀರಿ. ಪ್ರಸಂಗ ಮಾಡುವವರು ನಿಮಗೆ ಈ ಸತ್ಯವನ್ನು ಹೇಳದೇ ಇರಬಹುದು, ಆದರೆ ನೀವು ಈ ಸತ್ಯವನ್ನು ತಿಳಿದುಕೊಳ್ಳಲೇ ಬೇಕು, ಏಕೆಂದರೆ ಇದು ಸತ್ಯವಾಗಿದೆ. ನೀವು ಕ್ರಿಸ್ತನಿಗೆ ಎಲ್ಲವನ್ನೂ ಸಮರ್ಪಿಸಿದ್ದರೆ, ಆ ಸಾಲುಗಳನ್ನು ಹಾಡಿರಿ, ಇಲ್ಲವಾದರೆ ಮೌನವಾಗಿರಿ ಅಥವಾ ಹೀಗೆ ಹಾಡಿ, "ಸ್ವಾಮೀ, ನಾನು ಎಲ್ಲವನ್ನೂ ನಿಮಗೆ ಸಮರ್ಪಿಸಲು ಬಯಸುತ್ತೇನೆ, ಆದರೆ ನಾನಿನ್ನೂ ಸಂಪೂರ್ಣವಾಗಿ ಅದನ್ನು ಮಾಡಿಲ್ಲ.” ಅದು ಹೆಚ್ಚು ಪ್ರಾಮಾಣಿಕತೆಯಿಂದ ಕೂಡಿರುತ್ತದೆ. ಅದು ಇತರರು ಹಾಡುತ್ತಿರುವ ರಾಗಕ್ಕೆ ಹೊಂದಿಕೆಯಾಗದಿದ್ದರೂ ಪರವಾಗಿಲ್ಲ. ನೀವು ದೇವರ ಮುಂದೆ ಪ್ರಾಮಾಣಿಕರಾಗಿರಿ.
"ಸತ್ಯದ ಆತ್ಮನು ನಮ್ಮ ಆಂತರ್ಯ ಜೀವಿತದಲ್ಲಿಯೂ, ನಮ್ಮ ಹೃದಯದಲ್ಲಿಯೂ ನಮ್ಮನ್ನು ಸತ್ಯವಂತರನ್ನಾಗಿ ಮಾಡುವನು”
ಇಂತಹ ತಪ್ಪಾದ ಮನೋಭಾವದ ಪರಿಣಾಮವೇನು? '2 ಥೆಸಲೋನಿಕದವರಿಗೆ 2:10'ರ ವಚನವು ಸತ್ಯವನ್ನು ಪ್ರೀತಿಸುವುದನ್ನು ಕಡೆಗಣಿಸುವವರ ಬಗ್ಗೆ ಉಲ್ಲೇಖಿಸುತ್ತದೆ. ಸತ್ಯವನ್ನು ಪ್ರೀತಿಸುವುದು ಎನ್ನುವಂತದ್ದು ಸತ್ಯವನ್ನು ನುಡಿಯುವುದಕ್ಕಿಂತ ಹೆಚ್ಚಾದದ್ದು. ನಾನು ಸತ್ಯವನ್ನು ಮಾತನಾಡಬಹುದು, ಆದರೆ ಅದಕ್ಕಿಂತ ಉನ್ನತ ಮಟ್ಟವೆಂದರೆ — ಸತ್ಯವನ್ನು ಪ್ರೀತಿಸುವುದು. ನನಗೆ ಸತ್ಯವನ್ನು ಮಾತನಾಡಬೇಕೆಂಬ ಅತೀವ ಬಯಕೆ ಇದೆ, ನಾನು ಅದನ್ನು ಪ್ರೀತಿಸುತ್ತೇನೆ ಮತ್ತು ಎಂದಿಗೂ ನನ್ನ ಹೃದಯದೊಳಗೆ ಯಾವ ಸುಳ್ಳೂ ಇರಬಾರದೆಂದು ನಾನು ಬಯಸುತ್ತೇನೆ. ನಾವು ಸತ್ಯವನ್ನು ತೀವ್ರವಾಗಿ ಪ್ರೀತಿಸಿ, ಸುಳ್ಳನ್ನು ಸಂಪೂರ್ಣವಾಗಿ ತ್ಯಜಿಸದಿದ್ದರೆ, '2 ಥೆಸಲೋನಿಕದವರಿಗೆ 2:11'ರ ವಚನವು ಅದರ ಪರಿಣಾಮವನ್ನು ತಿಳಿಸುತ್ತದೆ: ಸ್ವತಃ ದೇವರೇ ನಮ್ಮನ್ನು ಮೋಸಗೊಳಿಸುವರು. ಇದು ಹೊಸ ಒಡಂಬಡಿಕೆಯಲ್ಲಿರುವ ಅತ್ಯಂತ ಭಯಾನಕ ವಚನಗಳಲ್ಲಿ ಒಂದಾಗಿದೆ.
ಪ್ರಿಯ ಸ್ನೇಹಿತನೇ, ಒಂದು ವೇಳೆ ನೀನು ಸತ್ಯವನ್ನು ಪ್ರೀತಿಸದೆ ಹೋದರೆ ನಾನು ನಿನಗೆ ನೇರವಾಗಿ ಹೇಳುತ್ತೇನೆ: ಸರ್ವಶಕ್ತನಾದ ದೇವರು ನಿನ್ನನ್ನು ವಂಚಿಸಲಿದ್ದಾರೆ. ಸೈತಾನನು ಒಬ್ಬ ವಂಚಕನಾಗಿದ್ದಾನೆ. ಅತಿಯಾಸೆ ನಿನ್ನನ್ನು ವಂಚಿಸುತ್ತದೆ. ನಿನ್ನ ಹೃದಯವು ವಂಚನೆಯ ಸ್ವಭಾವದ್ದಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಒಂದು ವೇಳೆ ನಿನ್ನ ರಕ್ಷಣೆಯ ಒಂದೇ ನಿರೀಕ್ಷೆಯಾಗಿರುವ ಸರ್ವಶಕ್ತನಾದ ದೇವರು ನಿನ್ನನ್ನು ವಂಚಿಸಲು ನಿರ್ಧರಿಸಿದರೆ, ನಿನಗೆ ಯಾವ ನಿರೀಕ್ಷೆಯೂ ಇಲ್ಲ. '2 ಥೆಸಲೋನಿಕದವರಿಗೆ 2:11'ರಲ್ಲಿ ಹೀಗೆ ಹೇಳಲಾಗಿದೆ, ದೇವರು ನೀನು ಸುಳ್ಳನ್ನು ನಂಬುವಂತೆ ಮಾಡುತ್ತಾರೆ. ನೀನು ಹೊಸದಾಗಿ ಹುಟ್ಟದಿರುವಾಗ, ಹೊಸದಾಗಿ ಹುಟ್ಟಿದ್ದೀ ಎಂಬುದಾಗಿ ನಂಬುವಂತೆ ಮಾಡುತ್ತಾರೆ. ನೀನು ಪವಿತ್ರಾತ್ಮನಿಂದ ತುಂಬಿಸಲ್ಪಡದೇ ಇರುವಾಗ ತುಂಬಿಸಲ್ಪಟ್ಟಿದ್ದೀ ಎಂಬುದಾಗಿ ನಂಬುವಂತೆ ಮಾಡುತ್ತಾರೆ. ಯಾಕೆ? ಅದು ಸತ್ಯವನ್ನು ಪ್ರೀತಿಸದಿರುವ ಒಂದೇ ಒಂದು ಕಾರಣಕ್ಕಾಗಿ.
ಸತ್ಯವೇದದಲ್ಲಿ ತಿಳಿಸಿರುವ ಮೊದಲನೇ ಪಾಪದ ಬಗ್ಗೆ ನಿಮಗೆ ಗೊತ್ತಿದೆಯೇ? ಅದು ’ಸುಳ್ಳು’, ಸೈತಾನನು ಹವ್ವಳಿಗೆ "ನೀನು ಹೇಗೂ ಸಾಯುವುದಿಲ್ಲ" ಎಂಬುದಾಗಿ ಹೇಳಿದ್ದು (ಆದಿಕಾಂಡ 3:4). ಅದು ಸತ್ಯವೇದದಲ್ಲಿ ಬರೆಯಲ್ಪಟ್ಟಿರುವ ಮೊದಲನೆಯ ಪಾಪವಾಗಿದೆ - ’ಒಂದು ಸುಳ್ಳು’.
ಸತ್ಯವೇದದಲ್ಲಿ ಕಡೆಯದಾಗಿ ಪ್ರಸ್ತಾಪಿಸಲ್ಪಟ್ಟಿರುವ ಪಾಪ ಯಾವುದು? ಒಂದು ವೇಳೆ ನೀವು ಸತ್ಯವೇದದ ಕಟ್ಟಕಡೆಯ ಅಧ್ಯಾಯಕ್ಕೆ ತಿರುಗಿಸುವಾಗ, ಕಡೆಯದಾಗಿ ಪ್ರಸ್ತಾಪಿಸಲ್ಪಟ್ಟಿರುವ ಪಾಪ ’ಸುಳ್ಳು’ ಎಂಬುದಾಗಿ ಕಂಡುಕೊಳ್ಳುತ್ತೀರಿ. ’ಪ್ರಕಟನೆ 22:15'ರಲ್ಲಿ ಹೀಗೆ ಹೇಳಲಾಗಿದೆ, ’ಸುಳ್ಳನ್ನು ಅಭ್ಯಾಸಿಸುವವರು ಪರಿಶುದ್ಧ ಪಟ್ಟಣದ ಹೊರಗಿರುತ್ತಾರೆ.’ ಆದ್ದರಿಂದ ಸತ್ಯವೇದದಲ್ಲಿ ತಿಳಿಸಲ್ಪಟ್ಟ ಮೊದಲನೆಯ ಪಾಪ ಮತ್ತು ಕಡೆಯ ಪಾಪ ’ಸುಳ್ಳು’ ಆಗಿದೆ. ಆದಿಸಭೆಯಲ್ಲಿ ಮೊದಲನೆಯದಾಗಿ ತೀರ್ಪು ಮಾಡಲ್ಪಟ್ಟ ಪಾಪ ’ಸುಳ್ಳಾಗಿತ್ತು’. ದೇವರು ವಂಚನೆಗೆ ಒಳಪಡಿಸುವುದು ಯಾರನ್ನೆಂದರೆ, ಸತ್ಯವನ್ನು ಪ್ರೀತಿಸದೇ ಇರುವವರನ್ನು.
ನಾವು ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವುದು ಬಹಳ ಅವಶ್ಯವಾಗಿದೆ. "ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ"(ಮತ್ತಾ. 5:37). ಇದು ನಿಮ್ಮನ್ನು ವಂಚನೆಯಿಂದ ತಪ್ಪಿಸುತ್ತದೆ. ಯೇಸುವು, "ನಾನೇ ಮಾರ್ಗ" ಎಂಬುದಾಗಿ ಹೇಳಿದ್ದಾರೆ. ನಾವೆಲ್ಲರೂ ಅದನ್ನು ಗೌರವಿಸುತ್ತೇವೆ. ಯೇಸುವು ಮಾರ್ಗವೂ ಜೀವವೂ ಆಗಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಆತನು, "ನಾನೇ ಸತ್ಯ - ನಾನೇ ಅಸ್ತಿತ್ವವು" ಎಂಬುದಾಗಿ ಹೇಳಿದ್ದಾನೆ (ಯೋಹಾ. 14:6).
ಹಳೆ ಒಡಂಬಡಿಕೆಯ ಜನರಿಗೆ ಇದು (ಈ ಅಂತರಂಗದ ಸತ್ಯತೆ) ಕೈಗೆ ಎಟಕಲಿಲ್ಲ. ’ಕೀರ್ತನೆಗಳು 51:6'ರಲ್ಲಿ, ದಾವೀದನು ಬತ್ಷೆಬಳೊಂದಿಗೆ ಪಾಪ ಮಾಡಿದ ನಂತರ ಈ ರೀತಿಯಾಗಿ ಅರಿಕೆ ಮಾಡುತ್ತಾನೆ. "ಕರ್ತನೇ, ನನಗೆ ಅರ್ಥವಾಯಿತು, ನೀನು ಅಂತರಾಳದಲ್ಲಿ ಸತ್ಯವನ್ನು ಬಯಸುತ್ತೀ ಎಂದು. ಅದು ನನ್ನಲಿಲ್ಲ, ನಾನು ಕಪಟಿಯಾಗಿದ್ದೇನೆ, ನಾನು ಗೊಲ್ಯಾತನನ್ನು ಸೋಲಿಸಿದೆ, ನಾನು ಫಿಲಿಷ್ಟಿಯರನ್ನು ಸೋಲಿಸಿದೆ, ಆದರೆ ನಾನು ಹೃದಯದ ಕಪಟತನವನ್ನು ಸೋಲಿಸಲಿಲ್ಲ. ನಾನು ಬತ್ಷೆಬಳೊಂದಿಗೆ ಪಾಪ ಮಾಡಿದೆ ಮತ್ತು ಅದನ್ನು ಮುಚ್ಚಿಡಲು ಪ್ರಯತ್ನಿಸಿದೆ - ಮೊದಲನೆಯದಾಗಿ ಆ ಸಂದರ್ಭದಲ್ಲಿ ಅವಳ ಗಂಡನು ಅವಳೊಂದಿಗೆ ಮಲಗುವಂತೆ ಮಾಡಿ ಆ ಪಾಪವನ್ನು ಮುಚ್ಚಿಡಲು ಪ್ರಯತ್ನಿಸಿದೆ. ಇದರಲ್ಲಿ ನಾನು ಯಶಸ್ವಿಯಾಗಲಿಲ್ಲ. ನಂತರ ಅವಳ ಗಂಡನನ್ನು ಕೊಲ್ಲಿಸಿದೆ ಮತ್ತು ಅವಳನ್ನು ಮದುವೆ ಮಾಡಿಕೊಂಡೆ. ಕರ್ತನೇ, ಈಗ ನನಗೆ ಅರ್ಥವಾಯಿತು, ನೀನು ಅಂತರಂಗದಲ್ಲಿ ಯಥಾರ್ಥ ಚಿತ್ತವನ್ನು ಬಯಸುತ್ತೀಯೆಂದು. ಅದು ನನ್ನಲ್ಲಿಲ್ಲ." ಆದರೆ ಇಂದು ನಾವು ಪಡೆದುಕೊಳ್ಳಲು ಸಾಧ್ಯವಾಗಿರುವ ಅದ್ಭುತ ಸಂಗತಿಗಳಲ್ಲಿ ಒಂದು, ಅಂತರಂಗದ ಯಥಾರ್ಥ ಪ್ರೀತಿಯಾಗಿದೆ, ಏಕೆಂದರೆ ಪವಿತ್ರಾತ್ಮನ ಮೂಲಕ ಇದು ಸಾಧ್ಯವಾಗುತ್ತದೆ. ಸತ್ಯದ ಆತ್ಮನು ನಮ್ಮ ಅಂತರಂಗದ ಜೀವಿತದಲ್ಲಿ ಮತ್ತು ನಮ್ಮ ಹೃದಯದಲ್ಲಿ ಸಂಪೂರ್ಣ ಯಥಾರ್ಥತೆಯನ್ನು ಉಂಟುಮಾಡುತ್ತಾನೆ.
’ಪ್ರಕಟನೆ 14'ರಲ್ಲಿ, ಚಿಯೋನ್ ಪರ್ವತದ ಮೇಲೆ ಯಜ್ಞದ ಕುರಿಯಾದಾತನೊಂದಿಗೆ ನಿಂತಿರುವ ಕೆಲವರ ಬಗ್ಗೆ ಉಲ್ಲೇಖಿಸಲಾಗಿದೆ. ’ಪ್ರಕಟನೆ 14:4'ರಲ್ಲಿ, ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಆತನ ಹಿಂದೆ ಹೋಗುವ ಈ ಜಯಶಾಲಿಗಳ ಗುಂಪಿನ ಬಗ್ಗೆ ಹೇಳಲಾಗಿದೆ. ಅವರ ಒಂದು ಗುಣಲಕ್ಷಣವೆಂದರೆ, "ಅವರ ಬಾಯಲ್ಲಿ ಸುಳ್ಳು ಸಿಕ್ಕಲಿಲ್ಲ" (ಪ್ರಕಟನೆ 14:5). ನಾವು ’ಕೀರ್ತನೆಗಳು 58:3'ರಲ್ಲಿ, ಮನುಷ್ಯರು ಹುಟ್ಟಿನಿಂದಲೇ ಸುಳ್ಳುಗಾರರು ಎಂಬುದಾಗಿ ಓದುತ್ತೇವೆ. ಆದರೆ ಇಲ್ಲಿ ಈ ಗುಂಪಿನ ಜನರು ಸಂಪೂರ್ಣವಾಗಿ ಸುಳ್ಳಿನಿಂದ ಬಿಡುಗಡೆ ಹೊಂದಿದವರಾಗಿದ್ದು, ಅವರ ಅಂತರಾಳದ ಜೀವಿತದಲ್ಲಿ ಸುಳ್ಳು ಸಿಕ್ಕಲಿಲ್ಲ. ಅವರು ಯೇಸುವಿನ ಸಾರೂಪ್ಯವನ್ನು ಹೊಂದಿದ್ದರು: ಪರಿಪೂರ್ಣ ಸತ್ಯವಂತರು! ನಾನು ನಿಮ್ಮನ್ನು ಈ ಗುರಿಯ ಕಡೆಗೆ ಸಾಗಬೇಕೆಂದು ಪ್ರೊತ್ಸಾಹಿಸಲು ಬಯಸುತ್ತೇನೆ: ನಾವು ಎಲ್ಲಾ ವಿಧವಾದ ಸುಳ್ಳಿನಿಂದ ನಮ್ಮನ್ನು ಶುದ್ಧ ಮಾಡಿಕೊಳ್ಳಬೇಕು.
ಸತ್ಯವನ್ನು ನುಡಿಯುವುದಕ್ಕೆ ಯಾವುದೇ ಬೆಲೆ ತೆರಬೇಕಾದರೂ ಸಹ, ನೀವು ಸತ್ಯಕ್ಕಾಗಿ ಬದ್ಧರಾಗಿದ್ದರೆ, ನೀವು ಸತ್ಯದ ಪರವಾಗಿ ನಿಂತು, ಮತ್ತು ನಿಮ್ಮ ಜೀವನದಿಂದ ಸುಳ್ಳನ್ನು ಸಂಪೂರ್ಣವಾಗಿ ತೊಡೆದುಹಾಕಲು ನಿರ್ಧರಿಸಿದರೆ, ಆಗ ನಿಮ್ಮ ಜೀವಿತವು 100%ರಷ್ಟು ಶುದ್ಧವಾಗುತ್ತದೆ. ನೀವು ದೇವರನ್ನು ನೋಡಬಹುದು. ಇಂದಿನ ಕ್ರೈಸ್ತ ಪ್ರಪಂಚದಲ್ಲಿ ಪ್ರಚಲಿತವಾಗಿರುವ ಯಾವುದೇ ವಂಚನೆಯಿಂದ ನೀವು ಎಂದಿಗೂ ಮೋಸ ಹೋಗುವುದಿಲ್ಲ. ನೀವು ಸತ್ಯವನ್ನು ಅರಿಯುವಿರಿ, ಏಕೆಂದರೆ ಸ್ವತಃ ದೇವರೇ ನಿಮಗೆ ಸತ್ಯವನ್ನು ತೋರಿಸುತ್ತಾರೆ ಮತ್ತು ನೀವು ನಿಮ್ಮ ಆತ್ಮಿಕ ಸ್ಥಿತಿಗತಿಗಳ ಬಗ್ಗೆ ಎಂದಿಗೂ ಮೋಸ ಹೋಗುವುದಿಲ್ಲ.