WFTW Body: 

ಅಪೊಸ್ತಲನಾದ ಪೌಲನು ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯಲ್ಲಿ, ಸಂತೋಷದ ಮನೋಭಾವಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. "ನಾನು ನಿಮಗೋಸ್ಕರ ದೇವರನ್ನು ಬೇಡಿಕೊಳ್ಳುವ ಎಲ್ಲಾ ಸಮಯಗಳಲ್ಲಿಯೂ ಸಂತೋಷದಿಂದಲೇ ಬೇಡುವವನಾಗಿದ್ದೇನೆ" (ಫಿಲಿಪ್ಪಿ 1:4). "ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ" (ಫಿಲಿಪ್ಪಿ 4:4).

ಪೌಲನು ಫಿಲಿಪ್ಪಿಯವರಿಗೆ ಈ ಪತ್ರಿಕೆಯನ್ನು ಬರೆದದ್ದು ತನ್ನ ಸೆರೆಮನೆವಾಸದ ಸಮಯದಲ್ಲಿ (ಫಿಲಿಪ್ಪಿ 1:13). ಪೌಲನು ತಾನು ಸ್ವತಃ ಸೆರೆಮನೆಯ ವಾಸದಲ್ಲಿ ಇದ್ದಾಗ ಬರೆದ ಪತ್ರದಲ್ಲಿ ಸಂತೋಷಕ್ಕೆ ಅಷ್ಟು ಹೆಚ್ಚಾದ ಪ್ರಾಧಾನ್ಯತೆ ನೀಡಿರುವಂಥದ್ದು ನಮಗೆ ಒಂದು ಸವಾಲಾಗಿದೆ. ನಮ್ಮ ಎಲ್ಲಾ ಪರಿಸ್ಥಿತಿಗಳು ಅನುಕೂಲಕರವಾಗಿ ಇರುವಾಗ ಸಂತೋಷದ ಕುರಿತಾಗಿ ಬೋಧಿಸುವುದು ಒಂದು ಸಂಗತಿ. ಆದರೆ ನಮ್ಮ ಪರಿಸ್ಥಿತಿಗಳು ಕಷ್ಟಗಳಿಂದ ಕೂಡಿರುವಾಗ ಸಂತೋಷದ ಬಗ್ಗೆ ಬರೆಯುವುದು ಮತ್ತೊಂದು ಸಂಗತಿ. ಪೌಲನ ಈ ಮಾತುಗಳು ನಮಗೆ ಬೋಧಿಸುವುದೇನೆಂದರೆ - ಒಬ್ಬ ಕ್ರೈಸ್ತನು ಎಲ್ಲಾ ಸಂದರ್ಭಗಳಲ್ಲಿ ಸಂತೋಷವನ್ನು ಹೊಂದಿರಲು ಸಾಧ್ಯವಿದೆ. ಅದು ಕ್ರಿಸ್ತನ ಮನಸ್ಸಾಗಿದೆ, ಕ್ರಿಸ್ತನ ನಡವಳಿಕೆಯಾಗಿದೆ.

ಯೇಸುವು ಶಿಲುಬೆಗೆ ಏರುವದಕ್ಕೆ ಹಿಂದಿನ ರಾತ್ರಿ ಸಂತೋಷದ ಬಗ್ಗೆ ಬಹಳವಾಗಿ ಮಾತನಾಡಿದರು (ಯೋಹಾನ 15 ಮತ್ತು 16ನೇ ಅಧ್ಯಾಯಗಳು). ಯೇಸುವು ತನ್ನ ಕೊನೆಯ ಭೋಜನದ ವೇಳೆಯಲ್ಲಿ ತನ್ನ ಶಿಷ್ಯಂದಿರಿಗೆ ಹೇಳಿದ ಮಾತುಗಳು ಇವು - "ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂತಲೂ, ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ." "ನಿಮ್ಮ ಆನಂದವನ್ನು ಯಾರೂ ನಿಮ್ಮಿಂದ ತೆಗೆಯುವದಿಲ್ಲ." "ನಾನು ನನ್ನ ಸಂತೋಷವನ್ನು ನಿಮಗೆ ಕೊಡುತ್ತೇನೆ". ಯೇಸು ತಪ್ಪಾದ ದೂಷಣೆಯನ್ನು ಎದುರಿಸಲಿದ್ದರು ಮತ್ತು ಮುಂದಿನ ಕೆಲವು ತಾಸುಗಳಲ್ಲಿ ಅಪರಾಧಿಯಾಗಿ ಸಾರ್ವಜನಿಕ ಸ್ಥಳದಲ್ಲಿ ಶಿಲುಬೆಗೆ ಏರಲಿದ್ದರು. ಹಾಗಿದ್ದರೂ ಸಹ ಯೇಸು ತಮ್ಮ ಸಂತೋಷವನ್ನು ಇತರರೊಟ್ಟಿಗೆ ಹಂಚಿ, ಅವರನ್ನು ಪ್ರೋತ್ಸಾಯಿಸುತ್ತಿದ್ದರು.

ಕ್ರಿಸ್ತನ ಇಂತಹ ಮನೋಭಾವ ಮತ್ತು ಮನಸ್ಸು ಪೌಲನಲ್ಲಿ ಇತ್ತು. ಅತನು ಸೆರೆಮನೆಯಲ್ಲಿ ಸಂತೋಷಭರಿತನಾಗಿದ್ದನು. ಪೌಲನು ಈ ಪತ್ರಿಕೆಯನ್ನು ಬರೆದಂತ ಸಮಯದಲ್ಲಿ ಗೃಹ ಬಂಧನಕ್ಕೆ ಒಳಗಾಗಿದ್ದನೋ, (ಅ.ಕೃತ್ಯಗಳು 28:16, 30, 31) ಅಥವಾ ರೋಮ್ ನಗರದ ಸೆರೆಮನೆಯಲ್ಲೇ ಇದ್ದನೋ ಎನ್ನುವದು ನಮಗೆ ತಿಳಿದಿಲ್ಲ. ಆ ದಿನಗಳಲ್ಲಿ ರೋಮ್ನ ಸೆರೆಮನೆಗಳು ಇಲಿಗಳು, ಸೊಳ್ಳೆಗಳು ಮತ್ತು ತೆವಳುವ ಕ್ರಿಮಿಕೀಟಗಳಿಂದ ತುಂಬಿದ್ದ ಕತ್ತಲೆಯ ಗೂಡುಗಳಾಗಿದ್ದವು. ಅಲ್ಲಿ ಸೆರೆವಾಸಿಗಳು ನೆಲದ ಮೇಲೆ ಮಲಗಬೇಕಿತ್ತು ಮತ್ತು ಅವರಿಗೆ ಸ್ವಲ್ಪ ಊಟ ಮಾತ್ರ ಕೊಡಲ್ಪಡುತ್ತಿತ್ತು. ಪೌಲನು ಇವೆರಡರಲ್ಲಿ ಎಲ್ಲಿ ಇದ್ದನೋ, ಅಂತೂ ಅವನ ಪರಿಸ್ಥಿತಿ ನಿಶ್ಚಯವಾಗಿ ಉಲ್ಲಾಸಕರವಾಗಿ ಇರಲಿಲ್ಲ. ಅಂಥಹ ಪರಿಸ್ಥಿತಿಗಳಲ್ಲಿ ಪೌಲನು ಇದ್ದರೂ, ಸುವಾರ್ತೆ ಸಾರಿದ್ದಕ್ಕಾಗಿ ಸೆರೆಮನೆಗೆ ಹಾಕಲ್ಪಟ್ಟಿದ್ದೇನೆಂಬ ವಿಷಯ ಪೌಲನನ್ನು ಸಂತೋಷಭರಿತನಾಗಿ ಮಾಡಿತ್ತು. ಆತನು ತನ್ನ ಯಾತನೆಗಳಿಗಾಗಿ ಕಣ್ಣೀರನ್ನು ಸುರಿಸಲಿಲ್ಲ. ಆತನು ಯಾರಿದಂಲೂ ಅನುಕಂಪವನ್ನು ಬಯಸಲಿಲ್ಲ. ಪೌಲನು ಸಂತೋಷಭರಿತನಾಗಿದ್ದನು.

ಸಕಲ ಸೌಲಭ್ಯಗಳನ್ನು ಅನುಭವಿಸುತ್ತಿದ್ದರೂ, ಸಣ್ಣ ಪುಟ್ಟ ಅನಾನುಕೂಲತೆಗಳನ್ನು ದೂರುವ ಕ್ರೈಸ್ತರಿಗೆ ಪೌಲನು ಎಂಥಾ ಮಾದರಿಯಾಗಿದ್ದಾನೆ ಅಲ್ಲವೇ? ವಿಶ್ವಾಸಿಗಳು ಸಣ್ಣ ಕಷ್ಟಗಳನ್ನು ಎದುರಿಸುತ್ತಿರುವಾಗ ಅಥವಾ ಸಣ್ಣ ಸಂಕಟಗಳ ಮೂಲಕ ಹಾದು ಹೋಗುವಾಗ, ಮತ್ತೊಬ್ಬರಿಂದ ಅನುಕಂಪವನ್ನು ಗಿಟ್ಟಿಸಿಕೊಳ್ಳಲು ಹೇಗೆ ಪ್ರಯತ್ನಿಸುತ್ತಾರೆ ಎಂಬುದನ್ನು ನಾವು ನೋಡುತ್ತೇವೆ. ಪೌಲನು ತನ್ನ ಯಾತನೆಗಳ ವಿಷಯವಾಗಿ ಒಂದೇ ಒಂದು ಮಾತನ್ನು ಇಲ್ಲಿ ಹೇಳಿಲ್ಲ. ಆತನು ಹೀಗೆ ಹೇಳಿದನು, "ನಾನು ನಿಮಗೋಸ್ಕರ ದೇವರನ್ನು ಬೇಡಿಕೊಳ್ಳುವ ಎಲ್ಲಾ ಸಮಯಗಳಲ್ಲಿಯೂ ಸಂತೋಷದಿಂದಲೇ ಬೇಡುವವನಾಗಿದ್ದೇನೆ" (ಫಿಲಿಪ್ಪಿ 1:3,4). ಪೌಲನು ಇಡೀ ರಾತ್ರಿ ತನ್ನ ಕತ್ತಲು ಕೋಣೆಯಲ್ಲಿ ಸೊಳ್ಳೆಗಳ ಕಡಿತ, ಇಲಿಗಳ ಕಾಟ ಮತ್ತು ಕ್ರಿಮಿಕೀಟಗಳ ಪೀಡೆ ಇವೆಲ್ಲವನ್ನೂ ಅನುಭವಿಸಿದ ಮೇಲೆ ಈ ಪತ್ರವನ್ನು ಬರೆದಿರುತ್ತಾನೆ ಎಂಬುದಾಗಿ ನಾನು ಕಲ್ಪಿಸಿಕೊಳ್ಳುತ್ತೇನೆ. ಅವನು ಈ ಪತ್ರಿಕೆಯನ್ನು ರಾತ್ರಿಯೆಲ್ಲಾ ಸೊಳ್ಳೆಗಳಿಂದ ಕಡಿಸಿಕೊಂಡು, ಮತ್ತು ಹೊದ್ದುಕೊಳ್ಳುವುದಕ್ಕೆ ಬೆಚ್ಚಗಿನ ಬಟ್ಟೆಗಳು ಇಲ್ಲದೆ ಇದ್ದಾಗ ಬರೆದಿರಬಹುದು. ಆತನ ಸಂತೋಷವು ತನ್ನ ಪರಿಸ್ಥಿತಿಗಳಿಂದ ಬಂದಿರಲಿಲ್ಲ, ಆದರೆ ಆತನು ಪಿಲಿಪ್ಪಿಯ ವಿಶ್ವಾಸಿಗಳಲ್ಲಿ ನೋಡಿದ ದೇವರ ಕೃಪೆಯಿಂದಾಗಿ ಆತನಲ್ಲಿ ಸಂತೋಷ ಉಂಟಾಗಿತ್ತು.

ಅನೇಕ ವರ್ಷಗಳ ಹಿಂದೆ ಕರ್ತನಿಂದ ಲಭಿಸಿದ್ದ ಒಂದು ದರ್ಶನದ ಮೂಲಕ ಪೌಲನು ಫಿಲಿಪ್ಪಿಗೆ ನಡೆಸಲ್ಪಟ್ಟಿದ್ದನು (ಅ.ಕೃತ್ಯಗಳು 16:9-12). ಪೌಲನು ಈ ದರ್ಶನದ ಮೂಲಕ ಅಲ್ಲಿಗೆ ನಡೆಸಲ್ಪಟ್ಟು, ಜನರನ್ನು ದೇವರ ಕಡೆಗೆ ನಡೆಸಿದನು ಮತ್ತು ಫಿಲಿಪ್ಪಿಯಲ್ಲೇ ಸೆರೆಮನೆಗೂ ಹಾಕಲ್ಪಟ್ಟನು. ಅಲ್ಲಿ ಜೈಲಿನ ಅಧಿಕಾರಿ ಪರಿವರ್ತನೆ ಹೊಂದಿ ಬಹುಶಃ ಈಗ ಫಿಲಿಪ್ಪಿಯ ಒಬ್ಬ ಸಭಾ ಹಿರಿಯನಾಗಿ, ಜನರಿಗೆ ಈ ರೀತಿ ಹೇಳಿರಬಹುದು, "ಈತನು ಸೆರೆಮನೆಯಲ್ಲಿ ಸ್ತುತಿ ಪದಗಳನ್ನು ಹಾಡುವದನ್ನು ನಾನು ನೋಡಿದ್ದೇನೆ." ಪೌಲನ ಸಂತೋಷ ದೇವರ ಸೇವೆಯಲ್ಲಿ ಬಳಸಲ್ಪಟ್ಟ ಆತನ ಜೀವಿತದ ಫಲವಾಗಿತ್ತು. ನೀವು ನಿಮ್ಮ ಜೀವಿತದ ಕೊನೆಯ ಹಂತಕ್ಕೆ ಬರುವಾಗ ನಿಮ್ಮನ್ನು ಸಂತೋಷಗೊಳಿಸುವಂಥದ್ದು, ದೇವರಿಂದ ನಿಮಗೆ ಕೊಡಲ್ಪಟ್ಟ ಆರೋಗ್ಯ ಮತ್ತು ಬಲವು ಕರ್ತನ ಸೇವೆಗಾಗಿ, ಆತನ ರಾಜ್ಯಕ್ಕಾಗಿ ಜನರನ್ನು ಒಂದುಗೂಡಿಸಿ, ಆತನ ಸಭೆಯನ್ನು ಕಟ್ಟುವುದಕ್ಕಾಗಿ ಉಪಯೋಗಿಸಲ್ಪಟ್ಟಿತು ಎನ್ನುವ ವಿಷಯವೇ. ಇದರ ಬಗ್ಗೆ ಈಗಲೇ ಯೋಚಿಸಿ, ಆಗ ನೀವೂ ಪೌಲನಂತೆ ನಿಮ್ಮ ಜೀವಿತದ ಕೊನೆಗೆ ಬರುವಾಗ, ನಿಮ್ಮ ಜೀವಿತದಲ್ಲಿ ದೇವರು ನಡೆಸಿದ ವಿಷಯಗಳಿಗಾಗಿ ದೇವರಿಗೆ ಕೃತಜ್ಞತೆಯುಳ್ಳವರಾಗುವಿರಿ.