ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ದೇವರು ಇಸ್ರಾಯೇಲ್ಯರನ್ನು ಐಗುಪ್ತದೇಶದ ಗುಲಾಮತನದಿಂದ ಬಿಡುಗಡೆಗೊಳಿಸಿ, ಅವರನ್ನು ಅರಣ್ಯದ ಮೂಲಕ ನಡೆಸಿದ ಸಂದರ್ಭದಲ್ಲಿ, "ನಾನು ಅವರ ಮಧ್ಯದಲ್ಲಿ ವಾಸಿಸುವದಕ್ಕೆ ಅವರು ನನಗಾಗಿ ಒಂದು ದೇವಾಲಯವನ್ನು ಕಟ್ಟಲಿ," ಎಂದು ಅವರಿಗೆ ಆಜ್ಞಾಪಿಸಿದರು (ವಿಮೋ. 25:8). ದೇವರ ಈ ವಾಸಸ್ಥಾನವು ಗುಡಾರವೆಂದು ಕರೆಯಲ್ಪಟ್ಟಿತು. ಇಸ್ರಾಯೇಲ್ಯರು ಕಾನಾನ್ ದೇಶವನ್ನು ಪ್ರವೇಶಿಸಿದ ನಂತರ, ಈ ಗುಡಾರಕ್ಕೆ ಬದಲಾಗಿ ಒಂದು ದೇವಾಲಯವು ನಿರ್ಮಿಸಲ್ಪಟ್ಟಿತು.

ದೇವರಿಗೆ ತನ್ನ ಜನರ ಮಧ್ಯದಲ್ಲಿ ನೆಲೆಸಬೇಕೆಂಬ ಹಂಬಲವಿತ್ತು ಎಂಬುದಾಗಿ ನಾವು ಮೇಲಿನ ವಚನದಲ್ಲಿ ನೋಡುತ್ತೇವೆ. ಈಗ ಕ್ರಿಸ್ತನ ಬರುವಿಕೆಯ ನಂತರ, ದೇವರು ಭೂಲೋಕದ ಯಾವುದೇ ಕಟ್ಟಡದಲ್ಲಿ ವಾಸಿಸುವುದಿಲ್ಲ. ಈಗ ಅವರು ಮನುಷ್ಯರ ಹೃದಯಗಳಲ್ಲೂ, ಅವರ ಮನೆಗಳಲ್ಲೂ ವಾಸಿಸಲು ಬಯಸುತ್ತಾರೆ. ಕರ್ತನು ಈ ದಿನವೂ ಸಹ, "ನಾನು ನಿಮ್ಮ ಮಧ್ಯದಲ್ಲಿ ವಾಸಿಸುವಂತೆ ನನಗಾಗಿ ಒಂದು ಗುಡಾರವನ್ನು (ಪರಿಶುದ್ಧ ಸ್ಥಳವನ್ನು) ಕಟ್ಟಿರಿ," ಎಂಬುದಾಗಿ ನುಡಿಯುತ್ತಾನೆ. ದೇವರು ಇದೇ ಉದ್ದೇಶದಿಂದ ಗಂಡ-ಹೆಂಡತಿಯ ಒಂದು ಜೋಡಿಯನ್ನು ಮದುವೆಯ ಮೂಲಕ ಒಂದುಗೂಡಿಸುತ್ತಾರೆ. ದೇವರು ಅವರೊಂದಿಗೆ ವಾಸಿಸಲಿಕ್ಕಾಗಿ ಅವರು ತಮ್ಮ ಮನೆಯನ್ನು ಒಂದು ಪವಿತ್ರ ಸ್ಥಳವಾಗಿ ನಿರ್ಮಿಸಬೇಕು.

ದೇವರ ಮಹಿಮೆಗಾಗಿ ಒಂದು ಮನೆಯನ್ನು ನಿರ್ಮಿಸುವುದು

ಸಾಮಾನ್ಯವಾಗಿ ಜನರು ಮದುವೆ ಮಾಡಿಕೊಂಡ ನಂತರ, ತಮ್ಮ ಸ್ವಂತಕ್ಕಾಗಿ ಒಂದು ಮನೆಯನ್ನು ಕಟ್ಟಿಕೊಳ್ಳಬೇಕೆಂದು ಯೋಚಿಸುತ್ತಾರೆ. ಕ್ರೈಸ್ತರಲ್ಲದ ಪ್ರತಿಯೊಬ್ಬ ದಂಪತಿಗಳೂ ಸಹ ಇದೇ ಗುರಿಯನ್ನು ಹೊಂದಿರುತ್ತಾರೆ. ಆದರೆ ನಾವು ವಿಶ್ವಾಸಿಗಳಾಗಿ ಕರ್ತ ಯೇಸು ಕ್ರಿಸ್ತನನ್ನು ಮತ್ತು ಆತನ ವಾಕ್ಯವನ್ನು ಗೌರವಿಸುವುದಾದರೆ, ನಾವು ನಮ್ಮ ಸ್ವಂತಕ್ಕಾಗಿ ಒಂದು ಮನೆಯನ್ನು ಕಟ್ಟಿಕೊಳ್ಳಬಾರದು. ನಾವು ಕಟ್ಟುವಂತದ್ದು ದೇವರ ವಾಸಕ್ಕೆ ಯೋಗ್ಯವಾದ ಒಂದು ಸ್ಥಾನವಾಗಿರಬೇಕು. ನಿಜವಾದ ಒಬ್ಬ ಕ್ರೈಸ್ತನ ಮನೆ ಮತ್ತು ಕ್ರೈಸ್ತರಲ್ಲದವರ ಮನೆಯ ನಡುವಿನ ಮೂಲಭೂತ ವ್ಯತ್ಯಾಸ ಇದೇ ಆಗಿದೆ. ಅನೇಕ ವಿಶ್ವಾಸಿಗಳು ಈ ಧ್ಯೇಯ ಅಥವಾ ಗುರಿಯನ್ನು ಹೊಂದದಿರುವುದರಿಂದ, ಅವರ ಮನೆಗಳಲ್ಲಿ ಸಾಕಷ್ಟು ಸಂಕಟ ಹಾಗೂ ಭಕ್ತಿಹೀನತೆಯು ನಮಗೆ ಕಾಣಿಸುತ್ತದೆ. ಅವರು ಮನೆಯನ್ನು ದೇವರಿಗಾಗಿ ಅಲ್ಲ, ತಮ್ಮ ಸ್ವಂತಕ್ಕಾಗಿ ಕಟ್ಟಿಕೊಳ್ಳುತ್ತಾರೆ.

ಜನರು ಮದುವೆ ಮಾಡಿಕೊಳ್ಳುವಾಗ, ತಾವು ಬಹಳ ಸಂತೋಷವಾಗಿ ಜೀವಿಸುತ್ತೇವೆಂಬ ದೊಡ್ಡ ನಿರೀಕ್ಷೆಯನ್ನು ಹೊಂದಿರುತ್ತಾರೆ. ಆದರೆ ಆರು ತಿಂಗಳ ನಂತರ, ವಾಸ್ತವಿಕತೆಯು ಪ್ರಕಟವಾದಾಗ, ಅವರ ಕಥೆ ಬೇರೆಯೇ ಆಗಿರುತ್ತದೆ. ಅವರು ನಿರಂತರವಾಗಿ ಜಗಳಾಡುತ್ತಾರೆ ಮತ್ತು ಕಿರಿಚಾಡುತ್ತಾರೆ. ವಿವಾಹದ ಹತ್ತನೇ ವಾರ್ಷಿಕೋತ್ಸವದ ವೇಳೆಗೆ, ಅನೇಕ ದಂಪತಿಗಳು ಪರಸ್ಪರ ಬೇಸತ್ತು ಹೋಗಿರುತ್ತಾರೆ. ಅದಕ್ಕೆ ಕಾರಣವೇನು? ಕಾರಣವೇನೆಂದರೆ, ಅವರು ತಮ್ಮ ಸ್ವಾರ್ಥಕ್ಕಾಗಿ ಒಂದು ಮನೆಯನ್ನು ನಿರ್ಮಿಸಿಕೊಳ್ಳಲು ಹೊರಟಿದ್ದರು. ಆದರೆ ದೇವರ ವಾಕ್ಯವು ನಮಗೆ ಕಲಿಸುವುದು ಏನೆಂದರೆ, ನಾವು ದೇವರ ಮಹಿಮೆಯನ್ನು ಬಯಸಿ, ಆತನಿಗಾಗಿ ನಮ್ಮ ಮನೆಯನ್ನು ನಿರ್ಮಿಸಲು ತವಕಿಸಿದರೆ ಮಾತ್ರ ನಿಜವಾದ ಸಂತೋಷಕರ ವೈವಾಹಿಕ ಜೀವನವನ್ನು ನಡೆಸಬಹುದು.

ದೇವರು ವಿವಾಹಿತ ದಂಪತಿಗಳಿಗಾಗಿ ಹೊಂದಿರುವ ಉದ್ದೇಶ, ಹಳೆಯ ಒಡಂಬಡಿಕೆಯಲ್ಲಿ ಅವರು ಇಸ್ರಾಯೇಲ್ಯರಿಗಾಗಿ ಹೊಂದಿದ್ದ ಉದ್ದೇಶವೇ ಆಗಿದೆ. ದೇವರು ತನ್ನ ಮಹಿಮೆಗಾಗಿ ಒಂದು ಮನೆ ಕಟ್ಟಲ್ಪಡಬೇಕು ಎಂಬ ಉದ್ದೇಶದಿಂದ ಒಬ್ಬ ಪುರುಷ ಮತ್ತು ಸ್ತ್ರೀಯನ್ನು ವಿವಾಹದಲ್ಲಿ ಒಂದಾಗಿಸುತ್ತಾರೆ. ವಿಮೋಚನಾ ಕಾಂಡದಲ್ಲಿ, ದೇವರು ತನ್ನ ಗುಡಾರವನ್ನು ಕಟ್ಟುವುದಕ್ಕಾಗಿ ಸ್ಪಷ್ಟವಾದ ಯೋಜನೆಯನ್ನು ಇಸ್ರಾಯೇಲ್ಯರಿಗೆ ಕೊಟ್ಟರು ಮತ್ತು ಅವರು ಅದನ್ನು ದೇವರು ಅಜ್ಞಾಪಿಸಿದ ರೀತಿಯಲ್ಲೇ ಕಟ್ಟಬೇಕಾಗಿತ್ತು. ದೇವರ ಯೋಜನೆಗೆ ಸಂಪೂರ್ಣ ವಿಧೇಯರಾಗುವ ದೀನತೆ ಇಸ್ರಾಯೇಲ್ಯರಲ್ಲಿ ಇತ್ತು. ಅದರ ಫಲವಾಗಿ ಕರ್ತನ ಮಹಿಮೆಯು ಆ ಗುಡಾರದ ಮೇಲೆ ಇಳಿದು ನೆಲೆಯಾಗಿ ನಿಂತಿತು (ವಿಮೋ. 40:34). ಅದೇ ರೀತಿ, ನಿಮ್ಮ ಮನೆಯಲ್ಲಿ ದೇವರ ಮಹಿಮೆ ನೆಲೆಯಾಗಿ ನಿಲ್ಲಬೇಕಾದರೆ, ನೀವು ಕೂಡ ನಿಮ್ಮ ಕುಟುಂಬ ಜೀವಿತವನ್ನು ದೇವರ ವಾಕ್ಯದ ಪ್ರಕಾರವೇ ಜೀವಿಸಬೇಕು. ನಿಮ್ಮ ವಿವಾಹ ಜೀವನವನ್ನು ದೇವರ ವಾಕ್ಯದಲ್ಲಿ ಆಜ್ಞಾಪಿಸಿರುವ ರೀತಿಯಲ್ಲಿ ಕಟ್ಟಲು ಪ್ರಯತ್ನಿಸಿರಿ. ಆಗ ಖಚಿತವಾಗಿ ದೇವರ ಮಹಿಮೆಯು ನಿಮ್ಮ ಮನೆಗೆ ಇಳಿದು ಬಂದು ನೆಲೆಸುತ್ತದೆ.

"ನಾವು ದೇವರ ಮಹಿಮೆಯನ್ನು ಬಯಸಿ, ನಮ್ಮ ಮನೆಯನ್ನು ದೇವರಿಗಾಗಿ ಕಟ್ಟುವುದಾದರೆ ಮಾತ್ರ ಸಂತೋಷಕರ ವಿವಾಹ ಜೀವನವನ್ನು ಹೊಂದಬಹುದೆಂದು ದೇವರ ವಾಕ್ಯವು ನಮಗೆ ಕಲಿಸುತ್ತದೆ”

ದೇವರ ಕ್ರಮದ ಪ್ರಕಾರ ಮನೆಯ ನಿರ್ಮಾಣ

ಅನೇಕ ಕ್ರೈಸ್ತ ಮನೆಗಳಲ್ಲಿ ಕಹಿತನ, ಅಸೂಯೆ, ಗುಣಗುಟ್ಟುವಿಕೆ ಮತ್ತು ಹಣದ ವ್ಯಾಮೋಹವು ನಮಗೆ ಕಾಣಿಸುತ್ತದೆ. ಇದು ಅಕ್ರೈಸ್ತರ ಮನೆಗಳಿಗಿಂತ ಹೆಚ್ಚು ವಿಭಿನ್ನವಾಗಿಲ್ಲ. ಇದಕ್ಕೆ ಕಾರಣ ಸ್ಪಷ್ಟವಾಗಿದೆ: ದಂಪತಿಗಳು ತಮ್ಮ ಮನೆಯನ್ನು ದೇವರ ವಾಕ್ಯದ ಪ್ರಕಾರ ನಿರ್ಮಿಸಲು ಪ್ರಯತ್ನಿಸದೇ ಇರುವಾಗ, ದೇವರ ಮಹಿಮೆ ಆ ಮನೆಯನ್ನು ತುಂಬಲು ಸಾಧ್ಯವಾಗುವುದಿಲ್ಲ. ಇದಕ್ಕೆ ಬದಲಾಗಿ, ಅವರು ತಮ್ಮ ಮನೆಯನ್ನು ತಮ್ಮ ಸ್ವಂತ ಆಲೋಚನೆಯ ಪ್ರಕಾರ ನಿರ್ಮಿಸಿದ್ದಾರೆ.

1 ಕೊರಿಂಥ. 11:3'ರಲ್ಲಿ, ಮನೆಯಲ್ಲಿ (ಕುಟುಂಬದಲ್ಲಿ) ಇರಬೇಕಾದ ದೇವರ ಕ್ರಮವನ್ನು ನಾವು ಸ್ಪಷ್ಟವಾಗಿ ನೋಡುತ್ತೇವೆ: "ಕ್ರಿಸ್ತನು ಪುರುಷನ ತಲೆಯಾಗಿದ್ದಾನೆ ಮತ್ತು ಪುರುಷನು ಸ್ತ್ರೀಯ ತಲೆಯಾಗಿದ್ದಾನೆ." ಅನೇಕ ಕ್ರೈಸ್ತರ ಮನೆಗಳಲ್ಲಿ ಮರದ ಫಲಕದ ಮೇಲೆ - "ಈ ಮನೆಗೆ ಕ್ರಿಸ್ತನು ತಲೆಯಾಗಿದ್ದಾನೆ" - ಎಂದು ಬರೆಯಲ್ಪಟ್ಟಿರುವುದನ್ನು ನಾವು ಕಾಣುತ್ತೇವೆ. ಆದರೆ ವಾಸ್ತವವಾಗಿ ಕ್ರಿಸ್ತನು ಆ ಮನೆಯ ತಲೆಯಾಗಿ ಇರುವುದಿಲ್ಲ. ದೇವರು ಆದಾಮ ಮತ್ತು ಹವ್ವಳನ್ನು ಸೃಷ್ಟಿಸಿದಾಗ, ಆತನು ಆದಾಮನನ್ನು ಹವ್ವಳಿಗೆ ತಲೆಯಾಗಿ ಕೊಟ್ಟನು. ಸ್ವತಃ ದೇವರೇ ಆದಾಮನ ತಲೆಯಾಗಿದ್ದನು. ದೇವರು ಅವರಿಬ್ಬರನ್ನು ಒಟ್ಟುಗೂಡಿಸಿದ ನಂತರ, ನಾವು ಸತ್ಯವೇದದಲ್ಲಿ ಓದುವ ಮುಂದಿನ ವಿಷಯವೆಂದರೆ ಸೈತಾನನು ಅಲ್ಲಿಗೆ ಪ್ರವೇಶಿಸಿದ್ದು. ಇದು ನಮಗೆ ಕಲಿಸುವುದು ಏನೆಂದರೆ, ಇಂದಿಗೂ ಸಹ, ದೇವರು ಗಂಡು ಮತ್ತು ಹೆಣ್ಣನ್ನು ವಿವಾಹದಲ್ಲಿ ಒಟ್ಟಿಗೆ ಸೇರಿಸಿದ ಕೂಡಲೇ ಸೈತಾನನು ಅಲ್ಲಿಗೆ ಬರುತ್ತಾನೆ. ಆದ್ದರಿಂದ, ನಾವು ಎಚ್ಚರಿಕೆಯಿಂದಿರಬೇಕು. ಸೈತಾನನು ನಮ್ಮ ಮನೆಗಳನ್ನು ಪ್ರವೇಶಿಸಲು ನಾವು ಅವಕಾಶವನ್ನು ಕೊಡಬಾರದು.

ಸೈತಾನನು ಆ ಮೊದಲ ಮನೆಗೆ ಹೇಗೆ ಪ್ರವೇಶಿಸಿದನು? ಆದಾಮ ಮತ್ತು ಹವ್ವಳು ದೇವರ ಕ್ರಮವನ್ನು ಪಾಲಿಸಲಿಲ್ಲ ಎಂಬುದೇ ಇದಕ್ಕೆ ಕಾರಣ. ಸೈತಾನನು ಹವ್ವಳ ಬಳಿಗೆ ಬಂದು ದೇವರ ಆಜ್ಞೆಯನ್ನು ಆಕೆ ಉಲ್ಲಂಘಿಸುವಂತೆ ಸೂಚಿಸಿದಾಗ, ಅವಳು ಹೀಗೆ ಹೇಳಬೇಕಾಗಿತ್ತು: "ಸೈತಾನನೇ, ನಾನು ಸ್ವಂತವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ದೇವರು ನನಗೆ ತಲೆಯಾಗಿ ಒಬ್ಬನನ್ನು ಕೊಟ್ಟಿದ್ದಾರೆ. ಮೊದಲು ನಾನು ಅವನನ್ನು ಕೇಳಿ ಆ ಮೇಲೆ ನಿನಗೆ ಉತ್ತರಿಸುತ್ತೇನೆ." ಅವಳು ಹಾಗೆ ಮಾಡಿದ್ದರೆ ಕಥೆಯೇ ಬೇರೆಯಾಗಿರುತ್ತಿತ್ತು! ಆದರೆ ಅವಳು ಸೈತಾನನೊಂದಿಗೆ ಮಾತುಕತೆಯನ್ನು ಮುಂದುವರಿಸಿದಳು ಮತ್ತು ಅಂತಿಮವಾಗಿ ತನ್ನ ತಲೆಯಾದ ತನ್ನ ಗಂಡನನ್ನು ಕೇಳದೆ ತಾನೇ ನಿರ್ಧಾರವನ್ನು ತೆಗೆದುಕೊಂಡಳು. ಅವಳು ದೇವರ ನಿಯಮವನ್ನು ಉಲ್ಲಂಘಿಸಿದಳು, ನಂತರ ತನ್ನ ಗಂಡನಿಗೂ ದೇವರ ಮಾತನ್ನು ಮೀರಲು ಹೇಳಿದಳು. ಆಗ ಆದಾಮನು ಅವಳಿಗೆ, "ದೇವರು ನನ್ನ ತಲೆಯಾಗಿದ್ದಾನೆ. ನಾನು ಆತನನ್ನು ಕೇಳುತ್ತೇನೆ" ಎಂದು ಹೇಳಬೇಕಾಗಿತ್ತು. ಆದರೆ ಅವನು ಸಹ ದೇವರ ಕ್ರಮವನ್ನು ಪಾಲಿಸಲಿಲ್ಲ. ಅವರು ತಮ್ಮ ಮನೆಗಾಗಿ ದೇವರು ಇಟ್ಟಿದ್ದ ಕ್ರಮವನ್ನು ಪಾಲಿಸಿದ್ದರೆ, ಇಂದು ಜಗತ್ತಿನಲ್ಲಿರುವ ಎಲ್ಲಾ ಪಾಪ, ಸಂಕಟ ಮತ್ತು ಗೊಂದಲಗಳು ಇರುತ್ತಿರಲಿಲ್ಲ. ಇಂದಿಗೂ ಸೈತಾನನು ಅನೇಕ ಮನೆಗಳಿಗೆ ನುಗ್ಗಿ ಅವುಗಳನ್ನು ಹಾಳುಮಾಡುವುದು ಹೀಗೆಯೇ. ಕೀರ್ತನೆ. 127:1'ರಲ್ಲಿ ಹೀಗೆ ಹೇಳಲಾಗಿದೆ, "ಕರ್ತನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರ ಶ್ರಮವು ವ್ಯರ್ಥ."

ಕರ್ತನು ನಮ್ಮ ಮನೆಯನ್ನು ಕಟ್ಟುವ ಏಕೈಕ ಮಾರ್ಗವೆಂದರೆ, ನಾವು ಚಾಚೂತಪ್ಪದೆ ಆತನ ವಾಕ್ಯವನ್ನು ಪಾಲಿಸುವುದು.