ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   Struggling ಶಿಷ್ಯಂದಿರಿಗೆ
WFTW Body: 

"ನೀತಿವಂತಿಕೆಗಾಗಿ ಹಿಂಸೆಪಡುವವರು ಧನ್ಯರು; ಪರಲೋಕ ರಾಜ್ಯವು ಅವರದು" (ಮತ್ತಾ. 5:10). ಇದಕ್ಕೆ ಮುಂಚೆ ನಾವು ಪರಿಗಣಿಸಿರುವ ಮತ್ತೊಂದು ವಚನವು ಹೇಳುವಂತೆ, "ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕ ರಾಜ್ಯವು ಅವರದು." ನಾವು ದೀನರಾಗಿರುವಾಗ ಮತ್ತು ಸಮಾಧಾನಕ್ಕಾಗಿ ತವಕಿಸಿ, ನೀತಿವಂತಿಕೆಗಾಗಿ ಹಸಿದು ಬಾಯಾರಿದಾಗ, ಮತ್ತು ಕೃಪೆಯುಳ್ಳವರಾಗಿ ನಡೆದುಕೊಂಡು, ಇತರರೊಂದಿಗೆ ಸ್ವಂತ ಹಕ್ಕನ್ನು ಚಲಾಯಿಸಲು ನಿರಾಕರಿಸುವಾಗ, ನಾವು ಈ ಲೋಕದ ಕೆಟ್ಟ ಹಿಂಸಾಚಾರಿಗಳನ್ನು ಎದುರಿಸಬೇಕಾಗುತ್ತದೆ. ದೇವಭಕ್ತಿಯಿಂದ ಜೀವಿಸಲು ಶ್ರಮಿಸುತ್ತಿರುವ ಪ್ರತಿಯೊಬ್ಬನೂ ಹಿಂಸೆಗೆ ಒಳಗಾಗುತ್ತಾನೆ. ಹಾಗಾಗಿ ನಾವು ನೀತಿವಂತರಾಗಿ ಜೀವಿಸಲು ಪ್ರಯತ್ನಿಸುವಾಗ ಹಿಂಸೆಗೆ ಒಳಗಾಗುತ್ತೇವೆ.

"2 ತಿಮೊಥೆಯನಿಗೆ 3:12"ರ ವಚನವು ಪವಿತ್ರಾತ್ಮನಿಂದ ಪ್ರೇರಿತವಾದ ಒಂದು ಖಚಿತ ಅಥವಾ ಖಂಡಿತವಾದ ಹೇಳಿಕೆಯಾಗಿದೆ. ಪೌಲನು "ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸುಳ್ಳ ಎಲ್ಲರೂ ಹಿಂಸೆಗೆ ಒಳಗಾಗುವರು," ಹೇಳುತ್ತಾನೆ. ಈ ವಾಕ್ಯವು "ಕೆಲವರು" ಎಂದಾಗಲೀ, "ಅನೇಕರು" ಎಂದಾಗಲೀ, "ಹೆಚ್ಚಿನವರು" ಎಂದಾಗಲೀ ಹೇಳುವುದಿಲ್ಲ. ಇಲ್ಲಿ ಈ ಪದಗಳಲ್ಲಿ ಒಂದನ್ನು, ಅಥವಾ "ಎಲ್ಲರೂ" ಎಂಬ ಪದವನ್ನು ಬಳಸಲು ಸಾಧ್ಯವಿದೆ. ಇಲ್ಲಿ "ಎಲ್ಲರೂ" ಎಂದು ಹೇಳಲಾಗಿದೆ. ಹಾಗಾಗಿ ಇದರಲ್ಲಿ ಕ್ರಿಸ್ತ ಯೇಸುವಿನಲ್ಲಿ ಭರವಸೆ ಇಟ್ಟಿರುವ ಒಬ್ಬೊಬ್ಬ ವಿಶ್ವಾಸಿಯೂ ಸೇರಿದ್ದಾನೆ (ತನ್ನನ್ನು ವಿಶ್ವಾಸಿಯೆಂದು ಕರೆದುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯಲ್ಲ, ಆದರೆ ಸದ್ಭಕ್ತನಾಗಿ ಜೀವಿಸಲು ಬಯಸುವಂತ ಪ್ರತಿಯೊಬ್ಬನು).

ನೀತಿವಂತಿಕೆಗಾಗಿ ಹಿಂಸೆಪಡುವುದರ ಅರ್ಥವೇನು? ನೀತಿಗಾಗಿ ದೃಢವಾಗಿ ನಿಲ್ಲುವುದರ ಅರ್ಥವೇನೆಂದು ನಾವು ಪರಿಗಣಿಸಬೇಕು. ಇದರ ಅರ್ಥವೇನೆಂದರೆ, ನಿಮ್ಮ ಕೆಲಸದ ಸ್ಥಳದಲ್ಲಿ ಅಥವಾ ಬೇರೊಂದು ಸಂದರ್ಭದಲ್ಲಿ, ನೀವು "ಆ ತಪ್ಪು ಕೆಲಸವನ್ನು ನಾನು ಮಾಡೆನು" ಎಂದು ಹೇಳುವವರು ಆಗಿರಬೇಕು. ಅನೇಕ ಜನರು ತಮ್ಮ ನೌಕರಿಯ ಸ್ಥಳದಲ್ಲಿ ತಪ್ಪು ಮಾಡುವುದರಲ್ಲಿ ತಾವೂ ಸೇರಿಕೊಳ್ಳುತ್ತಾರೆ - ಅವರು ಸುಳ್ಳು ಹೇಳುತ್ತಾರೆ, ಮೋಸ ಮಾಡುತ್ತಾರೆ, ಯಾವುದೋ ತಪ್ಪು ಕೆಲಸವನ್ನು ಮಾಡಿಸಲು ಲಂಚ ಕೊಡುತ್ತಾರೆ. ಕ್ರೈಸ್ತರು ಈ ರೀತಿಯಾಗಿ ನಡೆಯುವಾಗ, ನಿಶ್ಚಯವಾಗಿ ಹಿಂಸೆಯನ್ನು ಎದುರಿಸುವುದಿಲ್ಲ; ಆದರೆ ಅವರು ಈ ಮಾರ್ಗದಲ್ಲಿ ಹೋಗಲು ನಿರಾಕರಿಸಿದರೆ, ಲಂಚವನ್ನು ಸ್ವೀಕರಿಸಲು, ಅಥವಾ ಯಾವುದೋ ತಪ್ಪನ್ನು ಮಾಡಲು ನಿರಾಕರಿಸಿದರೆ, ಅವರು ತಮ್ಮ ಮೇಲಧಿಕಾರಿಗಳಿಂದ (ಆ ಲಂಚದಲ್ಲಿ ಪಾಲನ್ನು ಅಥವಾ ಬೇರೇನನ್ನೋ ಬಯಸುವಂತವರು) ಬೆದರಿಕೆಗಳನ್ನು ಎದುರಿಸಬಹುದು. ಇಂತಹ ಅನೇಕ ದೃಷ್ಟಾಂತಗಳಿವೆ. ನೀವು ನ್ಯಾಯಕ್ಕಾಗಿ ದೃಢವಾಗಿ ನಿಂತಾಗ ನಿಮ್ಮ ನೌಕರಿಯನ್ನು ಕಳೆದುಕೊಳ್ಳಬಹುದು ಅಥವಾ ನಿಮ್ಮ ಮೇಲಿನ ಅಧಿಕಾರಿಗಳ ಕೋಪಕ್ಕೆ ಗುರಿಯಾಗಬಹುದು, ಆದರೆ ಪರಲೋಕ ರಾಜ್ಯವು ನಿಮ್ಮದಾಗುತ್ತದೆ. ನಿಮ್ಮ ಈ ನಿಲುವಿನಿಂದಾಗಿ ನೀವು ಯಾವುದೋ ಲೌಕಿಕ ನಷ್ಟವನ್ನು ಅನುಭವಿಸಬಹುದು - ಒಂದು ಹುದ್ದೆ, ಅಥವಾ ಕೆಲಸದಲ್ಲಿ ಬಡ್ತಿಯನ್ನು ಕಳಕೊಳ್ಳಬಹುದು - ಆದರೆ ನೀವು ಇದಕ್ಕೆ ಬದಲಾಗಿ ಪರಲೋಕದ ಸಂಪತ್ತನ್ನು ಗಳಿಸುತ್ತೀರಿ. ಇದು ಅಮೂಲ್ಯವಾದದ್ದು ಅಲ್ಲವೇ?

"ದೇವರಿಗಾಗಿ ಧೃಢವಾಗಿ ನಿಂತುಕೋ. ನೀನು ಏನು ಪಡೆಯಬೇಕೆಂದು ದೇವರು ಬಯಸುತ್ತಾರೋ, ಅದನ್ನು ನಿನಗೆ ಕೊಡುವುದಕ್ಕೆ ಅವರು ಸಮರ್ಥರಾಗಿದ್ದಾರೆ"

ಒಂದು ಸಂಸ್ಥೆಗೆ ಪ್ರವೇಶ ಪಡೆಯಲು ಅಥವಾ ಒಂದು ನೌಕರಿಯನ್ನು ಪಡೆಯಲು ಸುಳ್ಳು ಹೇಳುವುದು ಸರಿಯೇ? ಅದರಿಂದ ಪ್ರಯೋಜನವಿಲ್ಲ! ಒಬ್ಬ ಕ್ರೈಸ್ತನಿಗೆ ಇದು ಎಂದಿಗೂ ಯೋಗ್ಯವಲ್ಲ. ಇದನ್ನು ಮಾಡದೇ ಇರುವುದು ಬಹಳ ಉತ್ತಮ, ಇಲ್ಲವಾದರೆ ಆತನು ದೇವರ ಚಿತ್ತದ ಹೊರಗಿರುತ್ತಾನೆ. ನೀವು ಯಾವುದೋ ಸಂದರ್ಭದಲ್ಲಿ ಒಂದು ಸುಳ್ಳು ಹೇಳಿ ಒಂದು ಸಂಸ್ಥೆಗೆ ಪ್ರವೇಶವನ್ನು ಪಡೆದರೆ, ಇದು ದೇವರ ನಡೆಸುವಿಕೆ ಅಲ್ಲವೆಂದು ನೀವು ಖಚಿತವಾಗಿ ತಿಳಿಯಬೇಕು. ನೀವು ಒಂದು ಕಠಿಣ ಪರಿಸ್ಥಿತಿಯನ್ನು ಎದುರಿಸುವಾಗ ಸೈತಾನನು ನಿಮಗೆ ಏನು ಹೇಳಬಹುದು ಎಂದರೆ, "ಇಲ್ಲಿ ಸುಳ್ಳನ್ನು ಹೇಳು, ಏಕೆಂದರೆ ಸುಳ್ಳು ಬಹಳ ಬಲಶಾಲಿಯಾಗಿದೆ; ಇದರ ಮೂಲಕ ನೀನು ಏನನ್ನಾದರೂ ಗಳಿಸಬಹುದು." ಅದೇ ವೇಳೆ ಪವಿತ್ರಾತ್ಮನು ಹೀಗೆ ಹೇಳುತ್ತಾನೆ, "ಇಲ್ಲ, ಅದೊಂದು ಸುಳ್ಳು; ದೇವರು ಸರ್ವಶಕ್ತನು. ನಿನಗೆ ಬೇಕಾದದ್ದನ್ನು ಗಳಿಸಲು ಸುಳ್ಳು ಹೇಳುವುದು ಅತ್ಯಂತ ಪ್ರಬಲವಾದ ಮಾರ್ಗವಲ್ಲ. ದೇವರಿಗಾಗಿ ಧೃಢವಾಗಿ ನಿಂತುಕೋ. ನೀನು ಏನು ಪಡೆಯಬೇಕೆಂದು ದೇವರು ಬಯಸುತ್ತಾರೋ, ಅದನ್ನು ನಿನಗೆ ಕೊಡುವುದಕ್ಕೆ ಅವರು ಸಮರ್ಥರಾಗಿದ್ದಾರೆ."ನೀನು ಏನನ್ನು ಹೊಂದಬೇಕೋ, ಅದನ್ನು ದೇವರು ನಿನಗೆ ಕೊಡುತ್ತಾರೆಂದು ಆಗ ನೀನು ಅರಿತುಕೊಳ್ಳುವೆ.

ನಾನು ನೌಕಾಪಡೆಯಲ್ಲಿ ನೌಕರಿ ಮಾಡುತ್ತಿದ್ದ ಅವಧಿಯಲ್ಲಿ, ಅನೇಕ ಸಂದರ್ಭಗಳಲ್ಲಿ ನಾನು ನನ್ನ ಹಿರಿಯ ಅಧಿಕಾರಿಗಳ ಮುಂದೆ ದೃಢವಾಗಿ ನಿಂತು, "ಸರ್, ನನನ್ನು ದಯವಿಟ್ಟು ಕ್ಷಮಿಸಿ, ನಾನು ಆ ಕೆಲಸವನ್ನು ಮಾಡಲಾರೆ, ಏಕೆಂದರೆ ನನ್ನ ಮನಸಾಕ್ಷಿಯು ಇದಕ್ಕೆ ಒಪ್ಪುವುದಿಲ್ಲ. ನಾನೊಬ್ಬ ಕ್ರೈಸ್ತನಾಗಿದ್ದೇನೆ," ಎಂದು ಹೇಳಬೇಕಾಗಿ ಬಂದದ್ದು ನನಗೆ ನೆನಪಿದೆ. ಇದು ಬಹಳ ಅಪಾಯಕರವಾಗಿತ್ತು, ಹೀಗೆ ಹೇಳುವುದು ಸೇನಾಪಡೆಯಲ್ಲಿ ಅಪಾಯಕರವಾಗಿದೆ. ಒಂದು ಲೌಕಿಕ ನೌಕರಿಯಲ್ಲಿ ಹೀಗೆ ಹೇಳಿದರೆ, ನೀವು ಕೆಲಸದಿಂದ ವಜಾ ಮಾಡಲ್ಪಟ್ಟು ಕೆಲಸವನ್ನು ಕಳೆದುಕೊಳ್ಳಬಹುದು. ಆದರೆ ಸೇನಾಪಡೆಯಲ್ಲಿ, ನೀವು ಸೇನಾ ನ್ಯಾಯಲಯದ ಮುಂದೆ ನಿಲ್ಲುವ ಅಪಾಯ ಉಂಟಾಗುತ್ತದೆ, ಅಂದರೆ ಜೈಲುವಾಸದ ಶಿಕ್ಷೆಯನ್ನು ಪಡೆಯಬಹುದು, ಏಕೆಂದರೆ ಸೇನಾಪಡೆಯಲ್ಲಿ ಆದೇಶವನ್ನು ಪಾಲಿಸದಿರುವುದು ಬಹಳ ಗಂಭೀರವಾದ ಸಂಗತಿಯಾಗಿದೆ. ಇಂತಹ ಅನೇಕ ಸಂದರ್ಭಗಳು ಎದುರಾದದ್ದು ನನಗೆ ನೆನಪಿದೆ ಮತ್ತು ಆಗ ನನ್ನನ್ನು ಕಾಪಾಡಲು ನಾನು ದೇವರ ಮೇಲೆ ನಂಬಿಕೆ ಇಡಬೇಕಾಯಿತು. ಅಧಿಕಾರಿಗಳು ನನ್ನ ಮನಸಾಕ್ಷಿಗೆ ವಿರೋಧವಾಗಿ ಏನನ್ನಾದರೂ ಮಾಡಲು ಹೇಳಿದರೆ, ನಾನು, "ಸರ್, ದಯವಿಟ್ಟು ಕ್ಷಮಿಸಿ, ನಾನೊಬ್ಬ ಕ್ರೈಸ್ತನು, ನಾನು ಇದನ್ನು ಮಾಡಲಾರೆ," ಎಂದು ಉತ್ತರಿಸುತ್ತಿದ್ದೆ. ಆ ಮೇಲಧಿಕಾರಿ ಎಷ್ಟೇ ಹಿರಿಯನಾಗಿದ್ದರೂ ನಾನು ಹೆದರಲಿಲ್ಲ.

ನಾನು ಹೀಗೆ ಮಾಡಿದ್ದಕ್ಕಾಗಿ ಯಾವುದೋ ರೀತಿಯ ಹಾನಿಗೆ ಒಳಗಾಗುವ ಸಾಧ್ಯತೆಯಿತ್ತು, ಅಂದರೆ ನನ್ನ ಮೇಲಧಿಕಾರಿ ನನಗೆ ಕೆಲಸದಲ್ಲಿ ಬಡ್ತಿಗೆ ಉತ್ತಮ ಶಿಫಾರಸು ನೀಡದೇ ಇರಬಹುದು. ಒಂದು ಸಲ ಅರ್ಧ ಘಂಟೆಯೊಳಗೆ ನಾನು ನನ್ನ ಹುದ್ದೆಯಿಂದ ವರ್ಗಾಯಿಸಲ್ಪಟ್ಟೆ. ನನಗೆ ಅನಾನುಕೂಲ ಉಂಟಾಗಬಹುದು, ಆದರೆ ನಾನು ಅದಕ್ಕೆ ಸಿದ್ಧನಾಗಿದ್ದೆ. ಇಂತಹ ತೊಂದರೆಗಳನ್ನು ಯಾವುದೇ ರೀತಿಯ ಹಿಂಸೆಯೆಂದು ತಿಳಿಯಬಾರದು; ಆದಿ ಕ್ರೈಸ್ತರು ಸಿಂಹಗಳಿಂದ ತಿಂದುಹಾಕಲ್ಪಟ್ಟದ್ದಕ್ಕೆ ಹೋಲಿಸಿ ನೋಡಿದರೆ ಇವೆಲ್ಲವೂ ಕೇವಲ ಸೊಳ್ಳೆ ಕಡಿತದಂತಿದ್ದವು. ಆದರೆ ಆ ಆದಿ ಕ್ರೈಸ್ತರು ಆ ಮರಣವನ್ನೂ ಸಹ ಎದುರಿಸಿದರು.

ಈ ವಿಷಯದಲ್ಲಿ ದೇವರು ನಿಮ್ಮನ್ನು ಪರೀಕ್ಷಿಸುತ್ತಾರೆ. ಹಲವಾರು ಸಂದರ್ಭಗಳಲ್ಲಿ ದೇವರು ನನ್ನನ್ನು ಪರೀಕ್ಷಿಸಿದ್ದಾರೆಂದು ನನಗೆ ಗೊತ್ತಿದೆ ಮತ್ತು ಆ ಪರೀಕ್ಷೆಯಲ್ಲಿ ನಾನು ಉತ್ತೀರ್ಣನಾಗಿರದಿದ್ದರೆ, ನಾನು ಈ ದಿನ ಎಲ್ಲಿದ್ದೇನೋ ಅಲ್ಲಿಗೆ ತಲುಪುತ್ತಿರಲಿಲ್ಲ ಮತ್ತು ದೇವರು ನನಗೆ ಕೊಟ್ಟಿರುವ ಸೇವೆಯನ್ನು ನಾನು ಪಡೆಯುತ್ತಿರಲಿಲ್ಲ. ನಿಮ್ಮ ಹಿಂದಿನ ಅನುಭವಗಳಲ್ಲಿ ನೀವು ಧೃಢವಾಗಿ ನಿಂತಿದ್ದರೆ ಮತ್ತು ನೀತಿವಂತಿಕೆಗಾಗಿ ಯಾವುದೋ ಲೌಕಿಕ ನಷ್ಟವನ್ನು ಅನುಭವಿಸಲು ಸಿದ್ಧರಾಗಿದ್ದರೆ, ಬಹುಶಃ ನೀವು ಒಂದು ಸೇವೆಯನ್ನು ಹೊಂದಬಹುದಾಗಿತ್ತು. ಪರಲೋಕ ರಾಜ್ಯದ ಇನ್ನೂ ಹೆಚ್ಚಿನ ಅಂಶವನ್ನು ಪಡೆಯಲು ನಿಮಗಿದ್ದ ಅವಕಾಶವು ತಪ್ಪಿಹೋಯಿತು. ನೀವು ಹಿಂದಿನವುಗಳ ಬಗ್ಗೆ ಏನೂ ಮಾಡಲು ಆಗುವುದಿಲ್ಲ; ಕಳೆದು ಹೋದದ್ದನ್ನು ನೀವು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಆದರೆ ನೀವು ಭವಿಷ್ಯದ ವಿಷಯದಲ್ಲಿ ಮಾಡಬಹುದಾದದ್ದು ಇನ್ನೂ ಇದೆ. "ಕರ್ತನೇ, ಮುಂದಿನ ದಿನಗಳಲ್ಲಾದರೂ ನಾನು ನೀತಿಗಾಗಿ ಮತ್ತು ಪ್ರಾಮಾಣಿಕತೆಗಾಗಿ ಧೃಢವಾಗಿ ನಿಲ್ಲಲು ಬಯಸುತ್ತೇನೆ," ಎಂದು ಹೇಳಿರಿ. ಒಬ್ಬ ಕ್ರೈಸ್ತನು ಯಾವುದೇ ಸಂದರ್ಭದಲ್ಲಿ ಅಡ್ಡದಾರಿಯಲ್ಲಿ ನಡೆಯಬಾರದು. ಒಬ್ಬ ಕ್ರೈಸ್ತನು ಯಾವುದೇ ರೀತಿಯ ಲಾಭಕ್ಕಾಗಿ ಸುಳ್ಳು ಹೇಳಬಾರದು ಅಥವಾ ಮೋಸ ಮಾಡಬಾರದು. ದೇವರು ಧೃಢವಾಗಿ ನಿಲ್ಲುವವರನ್ನು ಹುಡುಕುತ್ತಿದ್ದಾರೆ, ಮತ್ತು ಅವರಿಗೆ ಇನ್ನೂ ಹೆಚ್ಚಿನ ಸೇವೆಯ ಅವಕಾಶವನ್ನು ಒದಗಿಸುತ್ತಾರೆ.