WFTW Body: 

ಮತ್ತಾಯ 24ರಲ್ಲಿ ಯೇಸುವು ತನ್ನ ಶಿಷ್ಯರಿಗೆ ತಾನು ಮತ್ತೆ ಬರುತ್ತೇನೆಂದು ತಿಳಿಸಿದಾಗ, ಅವರು ಎಚ್ಚರವಾಗಿ ಇರುವುದಕ್ಕೆ ಒತ್ತು ನೀಡಿ, ಅದನ್ನು ಅನೇಕ ಬಾರಿ ಹೇಳಿದರು (ಮತ್ತಾ. 24:42,44,25:13). ಹಾಗಾಗಿ ಅತಿ ಹೆಚ್ಚಿನ ಪ್ರಾಮುಖ್ಯತೆ ಸಲ್ಲಬೇಕಾದದ್ದು ಆತ್ಮಿಕ ಎಚ್ಚರಿಕೆ ಮತ್ತು ಎಲ್ಲಾ ವೇಳೆಯಲ್ಲಿ ಸಿದ್ಧರಾಗಿ ಇರುವುದಕ್ಕೆ ಹೊರತು ಪ್ರವಾದನೆಯ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ಅಲ್ಲ. ಮತ್ತಾಯ 25ರಲ್ಲಿ (ಇದು ಮತ್ತಾಯ 24ರ ಪ್ರವಾದನೆಗಳ ವಿಚಾರವನ್ನು ಮುಂದುವರಿಸುತ್ತದೆ) ಯೇಸುವು ತನ್ನ ಬರುವಿಕೆಗಾಗಿ ನಮ್ಮನ್ನು ಸಿದ್ಧಗೊಳಿಸಲು, ಮೂರು ಕ್ಷೇತ್ರಗಳಲ್ಲಿ ಎಚ್ಚರಿಕೆಯಿಂದ ಇದ್ದು ನಂಬಿಗಸ್ತಿಕೆಯಿಂದ ನಡೆಯಬೇಕೆಂಬ ಕರೆಯನ್ನು ನಮಗೆ ನೀಡಿದ್ದಾರೆ.

1. ಮರೆಯಾಗಿರುವ ಜೀವಿತದಲ್ಲಿ ನಂಬಿಗಸ್ತಿಕೆ

ಮತ್ತಾ. 25:1-13 : ಈ ಸಾಮ್ಯದಲ್ಲಿ, ಯೇಸುವು ಹತ್ತು ಮಂದಿ ಕನ್ಯೆಯರ ಕುರಿತಾಗಿ ಹೇಳಿದರು. ಈ ಹತ್ತು ಮಂದಿಯಲ್ಲಿ ಯಾರೂ ವ್ಯಭಿಚಾರಿಣಿಯರು ಆಗಿರಲಿಲ್ಲ ಎಂಬುದನ್ನು ಗಮನಿಸಿರಿ (ಯಾಕೋಬ. 4:4ರಲ್ಲಿ ’ಆತ್ಮಿಕ ವ್ಯಭಿಚಾರ’ ಏನೆಂಬ ಸ್ಪಷ್ಟೀಕರಣವನ್ನು ನೋಡಿರಿ). ಅವರೆಲ್ಲರು ಕನ್ಯೆಯರಾಗಿದ್ದರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅವರೆಲ್ಲರು ಜನರ ಮುಂದೆ ಒಳ್ಳೆಯ ಸಾಕ್ಷಿಯನ್ನು ಹೊಂದಿದ್ದರು. ಅವರ ಬೆಳಕು ಪ್ರಕಾಶಿಸುತ್ತಿತ್ತು (ಮತ್ತಾ. 5:16). ಅವರ ಸತ್ಕ್ರಿಯೆಗಳು ಇತರರಿಗೆ ಕಾಣಿಸುತ್ತಿದ್ದವು. ಆದಾಗ್ಯೂ, ಈ ಕನ್ಯೆಯರಲ್ಲಿ ಕೇವಲ ಐದು ಮಂದಿ ಬುದ್ಧಿವಂತೆಯರಾಗಿದ್ದರು. ಆದರೆ ಪ್ರಾರಂಭದಲ್ಲಿ ಇದು ಎಲ್ಲರಿಗೆ ಅಷ್ಟು ಸುಲಭವಾಗಿ ಕಾಣಿಸುತ್ತಿರಲಿಲ್ಲ. ಐದು ಕನ್ಯೆಯರು ಮಾತ್ರ ತಮ್ಮತಮ್ಮ ಎಣ್ಣೆಯ ಪಾತ್ರೆಗಳನ್ನು ತುಂಬಿಸಿಕೊಂಡಿದ್ದರು(ಮತ್ತಾ. 25:4).

ರಾತ್ರಿಯ ಸಮಯದಲ್ಲಿ ದೀಪವು ಎದ್ದು ಕಾಣಿಸಿದರೂ ಸಹ ಎಣ್ಣೆಯ ಪಾತ್ರೆಯು ಕಣ್ಣಿಗೆ ಬೀಳದಿರುವುದು ಯಾವುದನ್ನು ಸೂಚಿಸುತ್ತದೆ ಎಂದರೆ, ಕತ್ತಲೆಯ ಲೋಕದಲ್ಲಿರುವ ಜನರಿಗೆ ದೇವರ ಮುಂದಿರುವ ನಮ್ಮ ರಹಸ್ಯ ಜೀವಿತವು ಕಾಣಿಸದೇ ಇರುವುದನ್ನು ಸೂಚಿಸುತ್ತದೆ. ನಮ್ಮೆಲ್ಲರ ಬಳಿ ಒಂದು ಎಣ್ಣೆಯ ಪಾತ್ರೆಯಿದೆ. ನಮ್ಮ ಪಾತ್ರೆಯಲ್ಲಿ ಎಣ್ಣೆ ಇದೆಯೋ, ಇಲ್ಲವೋ, ಎನ್ನುವ ಪ್ರಶ್ನೆ ಏಳುತ್ತದೆ. ದೇವರ ವಾಕ್ಯದ ಉದ್ದಕ್ಕೂ ಎಣ್ಣೆಯು ಪವಿತ್ರಾತ್ಮನ ಸಂಕೇತವಾಗಿ ಉಪಯೋಗಿಸಲ್ಪಟ್ಟಿದೆ ಮತ್ತು ಇಲ್ಲಿ ಪವಿತ್ರಾತ್ಮನು ನಮ್ಮ ಆತ್ಮಕ್ಕೆ ದೇವರ ಜೀವವನ್ನು ಒದಗಿಸುವುದಕ್ಕೆ ಎಣ್ಣೆಯು ಸೂಚಿತವಾಗಿದೆ. ಆ ಜೀವವು ಬೆಳಕಿನ ಮೂಲಕ ಮನುಷ್ಯರಿಗೆ ಪ್ರಕಟವಾಗುತ್ತದೆ (ಯೋಹಾ. 1:4). ಎಣ್ಣೆಯು ಒಳಗೆ ಇರುವಂತ ಅಂಶವಾಗಿದೆ. ಅನೇಕರು ಹೊರಗೆ ಕಾಣಿಸುವ ತಮ್ಮ ಸಾಕ್ಷಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಾರೆ. ಇದು ಅವರ ಮೂರ್ಖತನವಾಗಿದೆ. ಹೊರಗಿನ ಬೆಳಕು ಮಾತ್ರ ಇದ್ದರೆ ಸಾಲದು ಎಂಬುದನ್ನು ನಾವು ನಮ್ಮ ಶೋಧನೆ ಮತ್ತು ಪರೀಕ್ಷೆಯ ಸಮಯದಲ್ಲಿ ಕಂಡುಕೊಳ್ಳುತ್ತೇವೆ. ಶೋಧನೆಗಳಲ್ಲಿ ನಮ್ಮನ್ನು ಜಯಶಾಲಿಗಳಾಗಿ ನಡೆಸಲು ಒಳಗೆ ರಹಸ್ಯ ದೈವಿಕ ಜೀವ ಇರುವುದು ಅವಶ್ಯವಾಗಿದೆ.

"ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿ ಹೋದರೆ, ನಿನ್ನ ಬಲ ಅತ್ಯಲ್ಪವೇ" (ಜ್ಞಾ. 24:10). ನಾವು ಎಷ್ಟು ಬಲಿಷ್ಠರು ಅಥವಾ ಬಲಹೀನರು ಎನ್ನುವುದನ್ನು ಜೀವನದಲ್ಲಿ ನಾವು ಎದುರಿಸುವ ಸಂಕಟಗಳು ನಮಗೆ ಪ್ರತ್ಯಕ್ಷ ಪಡಿಸುತ್ತವೆ. ಈ ಸಾಮ್ಯದಲ್ಲಿ ಉಂಟಾದ ಸಮಸ್ಯೆಯೆಂದರೆ, ಮದಲಿಂಗನು ಬರುವುದನ್ನು ತಡಮಾಡಿದನು. ಸಮಯವು ನಮ್ಮ ಆತ್ಮಿಕ ನಿಜಸ್ಥಿತಿಯನ್ನು ಸಾಬೀತು ಪಡಿಸುತ್ತದೆ. ನಂಬಿಕೆ ಇದ್ದವನು ಕಡೇ ವರೆಗೂ ತಾಳುತ್ತಾನೆ ಮತ್ತು ರಕ್ಷಣೆ ಹೊಂದುತ್ತಾನೆ. ಹಾಗೆಯೇ ಸಮಯವು ಯಾರಲ್ಲಿ ಒಳಗಿನ ಜೀವಿತ ಇದೆ ಮತ್ತು ಯಾರಲ್ಲಿ ಇಲ್ಲ ಎನ್ನುವುದನ್ನು ಸಹ ಸಾಬೀತು ಪಡಿಸುತ್ತದೆ. ಅನೇಕರು ಬೇಗ ಮೊಳೆತ ಬೀಜಗಳಂತೆ ಇರುತ್ತಾರೆ, ಆದರೆ ಒಳಜೀವಿತವನ್ನು ಹೊಂದಿರುವುದಿಲ್ಲ. ಅವರ ಹೃದಯದ ಸ್ಥಿತಿಯು ಹೆಚ್ಚಿನ ಮಣ್ಣಿಲ್ಲದ ಬಂಡೆಯ ನೆಲದ ಹಾಗಿರುತ್ತದೆ (ಮಾರ್ಕ. 4:5). ಈ ಕಾರಣಕ್ಕಾಗಿ ಹೊಸ ವಿಶ್ವಾಸಿಗಳ ಆತ್ಮಿಕ ಮಟ್ಟವನ್ನು ಅಳೆಯುವುದು ಅಥವಾ ಅವರಲ್ಲಿ ಯಥಾರ್ಥವಾದ ಪೂರ್ಣಹೃದಯ ಇದೆಯೋ ಎನ್ನುವದನ್ನು ಅಳೆಯುವುದು ಕಷ್ಟಕರವಾಗುತ್ತದೆ. ನಮಗೆ ಕಾದು ನೋಡುವ ತಾಳ್ಮೆಯಿದ್ದರೆ, ಸಮಯವು ಎಲ್ಲವನ್ನೂ ತೋರಿಸುತ್ತದೆ. ಹಾಗಾಗಿ ಕ್ರಿಸ್ತನ ಬರುವಿಕೆಗೆ ಸಿದ್ಧರಾಗುವುದು ಹೇಗೆಂದರೆ, ದೇವರ ಮುಂದಿರುವ ನಮ್ಮ ಒಳಜೀವಿತದಲ್ಲಿ ಮತ್ತು ನಮ್ಮ ಸುತ್ತಮುತ್ತಲಿನ ಜನರಿಗೆ ಕಾಣಿಸದೇ ಇರುವಂತ ಕ್ಷೇತ್ರಗಳಲ್ಲಿ, ಅಂದರೆ ನಮ್ಮ ಆಲೋಚನೆಗಳು, ಮನೋಭಾವಗಳು ಮತ್ತು ಉದ್ದೇಶಗಳಲ್ಲಿ ಪರಿಶುದ್ಧತೆ ಮತ್ತು ನಂಬಿಗಸ್ತಿಕೆಯನ್ನು ಹೊಂದಿರುವುದಾಗಿದೆ. ಈ ಮನಸ್ಥಿತಿ ನಮ್ಮಲ್ಲಿ ಇಲ್ಲದಿದ್ದಾಗ, ನಾವು ಕ್ರಿಸ್ತನ ಬರುವಿಕೆಗೆ ಸಿದ್ಧರಾಗಿದ್ದೇವೆ ಎಂದು ಆಲೋಚಿಸುವುದರಿಂದ, ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳುತ್ತಿದ್ದೇವೆ.

2. ನಮ್ಮ ಸೇವೆಯಲ್ಲಿ ನಂಬಿಗಸ್ತಿಕೆ

ಮತ್ತಾ. 25:14-30 : ದೇವರು ನಮಗೆ ಕೊಟ್ಟಿರುವ ವರಗಳ ಉಪಯೋಗದಲ್ಲಿ ನಂಬಿಗಸ್ತಿಕೆಯು ಎರಡನೇ ಸಾಮ್ಯದ ಆದ್ಯತೆಯಾಗಿದೆ. ಈ ವರಗಳು ಯಾವುವೆಂದರೆ, ಸ್ವತ್ತು-ಸಂಪತ್ತುಗಳು, ಹಣ, ಸ್ವಾಭಾವಿಕ ಸಾಮರ್ಥ್ಯ ಮತ್ತು ಪ್ರವೀಣತೆ, ಜೀವನದಲ್ಲಿ ಬರುವ ಸದವಕಾಶಗಳು, ಆತ್ಮಿಕ ವರಗಳು, ಇತ್ಯಾದಿ. ಈ ವಿಷಯದಲ್ಲಿ ಎಲ್ಲರೂ ಒಂದೇ ಸಮನಾಗಿ ಇರುವುದಿಲ್ಲ - ನಾವು ಈ ಸಾಮ್ಯದಲ್ಲಿ ನೋಡುವಂತೆ ಒಬ್ಬನಿಗೆ ಐದು ತಲಾಂತು, ಒಬ್ಬನಿಗೆ ಎರಡು ಮತ್ತು ಇನ್ನೊಬ್ಬನಿಗೆ ಕೇವಲ ಒಂದು ತಲಾಂತು ಸಿಕ್ಕಿರುತ್ತದೆ. ಆದರೆ ಎಲ್ಲರಿಗೂ ತಮಗೆ ಸಿಕ್ಕಿದ್ದನ್ನು ನಂಬಿಗಸ್ತಿಕೆಯಿಂದ ಉಪಯೋಗಿಸಿಕೊಳ್ಳಲು ಒಂದೇ ಪ್ರಮಾಣದ ಸಮಯವು ದೊರಕುತ್ತದೆ. ಯಾವನಿಗೆ ಬಹಳವಾಗಿ ಕೊಟ್ಟಿದೆಯೋ, ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು. ಹಾಗಾಗಿ ಎರಡು ತಲಾಂತುಗಳನ್ನು ಪಡೆದು ಅದನ್ನು ನಾಲ್ಕು ತಲಾಂತುಗಳಿಗೆ ಹೆಚ್ಚಿಸಿದ್ದವನಿಗೆ ಐದು ತಲಾಂತುಗಳಿಂದ ಹತ್ತನ್ನು ಸಂಪಾದಿಸಿದ್ದವನಿಗೆ ಸಿಕ್ಕಿದ್ದಕ್ಕೆ ಸರಿಸಮವಾದ ಬಹುಮಾನ ಸಿಕ್ಕಿತು. ಆದರೆ ತನ್ನ ತಲಾಂತನ್ನು ’ಭೂಮಿಯಲ್ಲಿ ಬಚ್ಚಿಟ್ಟ’ ಕೆಲಸಗಾರನು ನ್ಯಾಯತೀರ್ಪನ್ನು ಎದುರಿಸ ಬೇಕಾಯಿತು (ಮತ್ತಾ. 25:18) - ಈತನು ತನಗೆ ದೇವರಿಂದ ದೊರಕಿದ ವರಗಳನ್ನು ಇಹಲೋಕಕ್ಕಾಗಿ ಉಪಯೋಗಿಸಿದನು ಮತ್ತು ದೇವರಿಗಾಗಿ ಉಪಯೋಗಿಸಲಿಲ್ಲ.

ಯಾರೂ ತನಗೆ ಏನೂ ಸಿಕ್ಕಿಲ್ಲವೆಂದು ಹೇಳಲು ಆಗುವುದಿಲ್ಲ - ಏಕೆಂದರೆ ಎಲ್ಲರೂ ದೇವರಿಂದ ಒಂದಲ್ಲ ಒಂದು ವರಗಳನ್ನು ಪಡೆದಿರುತ್ತಾರೆ. ಆ ವರಗಳನ್ನು ನಾವು ಹೇಗೆ ಉಪಯೋಗಿಸುತ್ತೇವೆ ಎಂಬುದೇ ಈಗಿರುವ ಪ್ರಶ್ನೆಯಾಗಿದೆ. ನಾವು ಸ್ವಂತಕ್ಕಾಗಿ ಉಪಯೋಗ ಮಾಡುವುದು ವರವನ್ನು ಭೂಮಿಯಲ್ಲಿ ಬಚ್ಚಿಟ್ಟಹಾಗಿದೆ. ನಾವು ಯಾವುದನ್ನು ದೇವರ ಮಹಿಮೆಗಾಗಿ ಉಪಯೋಗಿಸುತ್ತೇವೋ, ಅದು ಮಾತ್ರ ನಿತ್ಯತ್ವದ ಸಂಪತ್ತಾಗಿ ಎಣಿಸಲ್ಪಡುತ್ತದೆ. ಈ ಮಾನದಂಡದಿಂದ ಅಳೆಯುವಾಗ ವಿಶ್ವಾಸಿಗಳಲ್ಲಿ ಹೆಚ್ಚಿನ ಮಂದಿ ಎಷ್ಟು ಬಡವರಾಗಿದ್ದಾರೆ ಎಂಬುದನ್ನು ನಾವು ಕಾಣಬಹುದು. ನಮ್ಮ ಧ್ಯೆಯ, "ಸ್ವಂತಕ್ಕಾಗಿ ಏನೂ ಇಲ್ಲ, ಎಲ್ಲವೂ ದೇವರಿಗಾಗಿ" ಎಂಬುದಾಗಿರಬೇಕು. ಆಗ ನಾವು ಕ್ರಿಸ್ತನ ತಿರುಗಿ ಬರುವಿಕೆಗೆ ಸಿದ್ಧರಾಗುತ್ತೇವೆ. ನಾವು ನಮ್ಮಲ್ಲಿರುವ ಎಲ್ಲವನ್ನು ತೊರೆಯದಿದ್ದರೆ ಯೇಸುವಿನ ಶಿಷ್ಯರು ಆಗಲಾರೆವು. ದೇವರಿಂದ ಕೊಡಲ್ಪಟ್ಟ ತನ್ನ ಎಲ್ಲಾ ಆಸ್ತಿಪಾಸ್ತಿಗಳನ್ನು ಮತ್ತು ವರಗಳನ್ನು ಕರ್ತನಿಗಾಗಿ ಉಪಯೋಗಿಸದ ಮನುಷ್ಯನು, ತಾನು ಕ್ರಿಸ್ತನ ಹಿಂದಿರುಗುವಿಕೆಗೆ ತಯಾರಾಗಿದ್ದೇನೆ ಎಂದು ಹೇಳಿಕೊಳ್ಳುವುದಾದರೆ, ಅವನು ತನ್ನನ್ನೇ ವಂಚಿಸಿಕೊಳ್ಳುತ್ತಿದ್ದಾನೆ ಅಷ್ಟೇ.

3. ನಮ್ಮ ಸಹ-ವಿಶ್ವಾಸಿಗಳ ಸೇವೆ ಮಾಡುವುದರಲ್ಲಿ ನಂಬಿಗಸ್ತಿಕೆ

ಮತ್ತಾ. 25:31-46 : ಈ ಕೊನೆಯ ಭಾಗದಲ್ಲಿ, ನಮ್ಮ ಸಹ-ವಿಶ್ವಾಸಿಗಳು ಕೊರತೆಯಲ್ಲಿ ಇರುವಾಗ, ಅವರ ವಿಷಯದಲ್ಲಿ ನಮ್ಮ ಮನೋಭಾವ ಹೇಗಿದೆಯೆಂದು ಯೇಸುವು ಪರೀಕ್ಷಿಸುತ್ತಾರೆ. ಸಹ-ವಿಶ್ವಾಸಿಗಳು ಆತ್ಮಿಕವಾದ ಅಥವಾ ದೈಹಿಕವಾದ ಕೊರತೆಯನ್ನು ಅನುಭವಿಸುತ್ತಿರಬಹುದು. ಇಲ್ಲಿ ನಾವು ನೋಡುವುದು ಏನೆಂದರೆ, ಕೆಲವು ವಿಶ್ವಾಸಿಗಳು ತಮ್ಮ ಸಹ-ವಿಶ್ವಾಸಿಗಳ ಸೇವೆಯನ್ನು ಕರ್ತನ ಸೇವೆ ಎಂಬ ಮನೋಭಾವದಿಂದ ಮಾಡಿದ ಸಲುವಾಗಿ, ಪರಲೋಕ ರಾಜ್ಯದ ಬಾಧ್ಯತೆಯನ್ನು ಪಡೆಯುತ್ತಾರೆ. ಅವರು ಎಷ್ಟು ರಹಸ್ಯವಾಗಿ ಸೇವೆ ಮಾಡಿದರೆಂದರೆ, ಅವರ ಬಲಗೈ ಮಾಡಿದ್ದು ಎಡಗೈಗೂ ತಿಳಿದಿರಲಿಲ್ಲ (ಮತ್ತಾ. 6:3). ಇದು ಹೇಗಿತ್ತೆಂದರೆ, ಕರ್ತನು ಅವರ ಸತ್ಕಾರ್ಯಗಳನ್ನು ಅವರಿಗೆ ಜ್ಞಾಪಿಸಿದಾಗ, ಅವರಿಗೆ ಅದು ನೆನಪಿಗೆ ಬರಲೇ ಇಲ್ಲ (ಮತ್ತಾ. 25:38)! ಇಲ್ಲಿ ಯೇಸುವು ಕಲಿಸಿಕೊಟ್ಟ ಇನ್ನೊಂದು ವಿಷಯವೆಂದರೆ, ನಮ್ಮ ಸಹೋದರರಲ್ಲಿ ಕೇವಲ ಅಲ್ಪನಾದ ಒಬ್ಬನಿಗೆ ನಾವು ಮಾಡಿದ ಯಾವುದೇ ಸೇವೆಯು, ಸ್ವತಃ ಯೇಸುವಿಗೆ ಮಾಡಿದ ಸೇವೆ ಎಂದು ಪರಿಗಣಿಸಲ್ಪಡುತ್ತದೆ (ಮತ್ತಾ. 25:40). ಇಲ್ಲಿ ಅವರು ಬಹಳ ಅಲ್ಪನಾದ ಸಹೋದರನ ಕುರಿತಾಗಿ ಹೇಳಿದ ಮಾತು ಗಮನಾರ್ಹವಾಗಿದೆ, ಏಕೆಂದರೆ ಸಾಮಾನ್ಯವಾಗಿ ನಾವು ಅತಿ ಮುಖ್ಯವಾದ ವಿಶ್ವಾಸಿಗಳ ಸೇವೆ ಮಾಡಲು ತವಕಿಸುತ್ತೇವೆ ಮತ್ತು ಬಡವರು ಮತ್ತು ಹೀನರಾದ ಸಹೋದರರನ್ನು ಕಡೆಗಣಿಸುತ್ತೇವೆ! ಯಾರು ಕೇವಲ ತಮ್ಮ ಅವಶ್ಯತೆಗಳಿಗಾಗಿ ಉಣ್ಣುವುದು, ಕುಡಿಯುವುದು, ಕೊಳ್ಳುವುದು, ಮಾರುವುದು, ಕಟ್ಟುವುದು ಮತ್ತು ನೆಡುವುದರಲ್ಲಿ ಮಗ್ನರಾಗಿರುತ್ತಾರೋ, ಅಂಥವರು ಯೇಸುವು ಪ್ರತ್ಯಕ್ಷನಾಗುವ ದಿನದಲ್ಲಿ ನಿಶ್ಚಯವಾಗಿ ಇಹಲೋಕದಲ್ಲೇ ಉಳಿಯುತ್ತಾರೆ (ಲೂಕ. 17:28,34). ಯಾರು ಮಾಡುವ ಕರ್ತನ ಸೇವೆಯಲ್ಲಿ ಸಹ-ವಿಶ್ವಾಸಿಗಳಿಗೆ ಪ್ರೀತಿ ಮತ್ತು ಕಾಳಜಿಯ ಸೇವೆಯೂ ಸಹ ಸೇರಿದೆಯೋ, ಅಂಥವರು ಮಾತ್ರ ಮೇಲಕ್ಕೆ ಏರಿಸಲ್ಪಡುವರು.

ಇನ್ನೊಂದು ವಾಕ್ಯಭಾಗದಲ್ಲಿ, ಯೇಸುವು ಮೇಲೆ ವಿವರಿಸಿದ ಪಂಗಡಕ್ಕೆ ಸಂಪೂರ್ಣ ವ್ಯತ್ಯಾಸವಾಗಿದ್ದ ಬೇರೆ ಜನರ ಮತ್ತೊಂದು ಗುಂಪಿನ ಬಗ್ಗೆ ಮಾತನಾಡಿದರು. ಇವರು ಕರ್ತನ ಹೆಸರಿನಲ್ಲಿ ತಾವು ಕೈಗೊಂಡಿರುವ ಎಲ್ಲಾ ಸತ್ಕಾರ್ಯಗಳನ್ನು ನೆನಪಿರಿಸಿಕೊಳ್ಳುತ್ತಾರೆ. ಅವರು ಸಹ ಕರ್ತನ ನ್ಯಾಯಾಸನದ ಮುಂದೆ ಬರುತ್ತಾರೆ, ಮತ್ತು ತಾವು ಕರ್ತನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಿದ್ದನ್ನು, ಬೋಧನೆ ಮಾಡಿದ್ದನ್ನು, ರೋಗಿಗಳನ್ನು ಗುಣಪಡಿಸಿದ್ದನ್ನು, ಇಂತಹ ಅನೇಕ ಕಾರ್ಯಗಳನ್ನು ಕರ್ತನಿಗೆ ನೆನಪಿಸುತ್ತಾರೆ. ಆದರೆ ಅವರು ಇಷ್ಟೆಲ್ಲ ಕೆಲಸಗಳನ್ನು ಮಾಡಿದ್ದರೂ ಕರ್ತನಿಂದ ತಿರಸ್ಕರಿಸಲ್ಪಡುತ್ತಾರೆ. ಏಕೆಂದರೆ ಅವರು ಮೊದಲನೆಯ ಅವಶ್ಯಕತೆಯನ್ನು - ಅಂದರೆ, ದೇವರ ಮುಂದೆ ಒಂದು ಪರಿಶುದ್ಧವಾದ ರಹಸ್ಯ ಜೀವಿತವನ್ನು ಹೊಂದಿರುವದನ್ನು ಪೂರೈಸಿರಲಿಲ್ಲ. ಅವರು ತಮ್ಮ ಶ್ರೇಷ್ಠ ವರಗಳಿಂದಾಗಿ ತಮ್ಮನ್ನೇ ಹೆಚ್ಚಳ ಪಡಿಸಿಕೊಳ್ಳುತ್ತಿದ್ದರು.