WFTW Body: 

ಯೇಸುವು ತನ್ನ ಶಿಷ್ಯರಿಗೆ ಮತ್ತಾಯನು 24ನೇ ಅಧ್ಯಾಯದಲ್ಲಿ ತನ್ನ ತಿರುಗಿ ಬರುವಿಕೆಯ ಬಗ್ಗೆ ಹೇಳಿದ ಸಂದರ್ಭದಲ್ಲಿ, ಶಿಷ್ಯರು ಎಚ್ಚರವಾಗಿ ಇರಬೇಕೆಂದು ಮತ್ತೆ ಮತ್ತೆ ಒತ್ತಿ ಹೇಳಿದರು (ಮತ್ತಾ. 24:42,44; 25:13). ಹಾಗಾಗಿ ಪ್ರವಾದನೆಯ ವಿವರಗಳನ್ನು ತಿಳಿದುಕೊಳ್ಳುವುದು ಮುಖ್ಯವಲ್ಲ. ಆತ್ಮಿಕ ಎಚ್ಚರಿಕೆಗೆ ಮತ್ತು ಎಲ್ಲಾ ವೇಳೆಯಲ್ಲಿ ಸಿದ್ಧತೆಯಿಂದ ಇರುವುದಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾಗಿದೆ. ಮತ್ತಾ. 25ನೇ ಅಧ್ಯಾಯದಲ್ಲಿ (ಮತ್ತಾ. 24ನೇ ಅಧ್ಯಾಯದ ಪ್ರವಾದನೆಗಳ ನಂತರ ಬರುವಂಥದ್ದು) ಯೇಸುವು ತನ್ನ ಬರುವಿಕೆಗಾಗಿ ನಮ್ಮನ್ನು ಸಿದ್ಧಪಡಿಸುವುದಕ್ಕಾಗಿ, ಮೂರು ಕ್ಷೇತ್ರಗಳಲ್ಲಿ ಎಚ್ಚರಿಕೆ ವಹಿಸಿ ನಂಬಿಗಸ್ತರಾಗಿ ನಡೆಯಬೇಕೆಂಬ ಕರೆ ನೀಡಿದ್ದಾರೆ.

1. ಇತರರಿಗೆ ಕಾಣಿಸದಿರುವ ಜೀವಿತದಲ್ಲಿ ನಂಬಿಗಸ್ತಿಕೆ

ಮತ್ತಾ. 25:1-13: ಈ ಸಾಮ್ಯದಲ್ಲಿ, ಯೇಸುವು ಹತ್ತು ಮಂದಿ ಕನ್ಯೆಯರ ಬಗ್ಗೆ ಹೇಳಿದರು. ಈ ಹತ್ತು ಮಂದಿಯಲ್ಲಿ ಯಾರೂ ವ್ಯಭಿಚಾರಿಣಿಯರು ಆಗಿರಲಿಲ್ಲ ಎಂಬುದು ಬಹಳ ಮುಖ್ಯ ವಿಷಯವಾಗಿದೆ (ಆತ್ಮಿಕ ವ್ಯಭಿಚಾರವನ್ನು ಯಾಕೋ. 4:4ರಲ್ಲಿ ವಿವರಿಸಲಾಗಿದೆ). ಇವರೆಲ್ಲರು ಕನ್ಯೆಯರಾಗಿದ್ದರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಜನರ ಮುಂದೆ ಅವರೆಲ್ಲರೂ ಒಳ್ಳೆಯ ಸಾಕ್ಷಿ ಹೊಂದಿದ್ದರು. ಅವರ ಬೆಳಕು ಪ್ರಕಾಶಿಸುತ್ತಿತ್ತು (ಮತ್ತಾ. 5:16). ಅವರ ಒಳ್ಳೆಯ ಕಾರ್ಯಗಳು ಎಲ್ಲರಿಗೂ ಕಾಣಿಸುತ್ತಿದ್ದವು. ಆದಾಗ್ಯೂ, ಈ ಕನ್ಯೆಯರಲ್ಲಿ ಕೇವಲ ಐದು ಮಂದಿ ಬುದ್ಧಿವಂತೆಯರಾಗಿದ್ದರು. ಆದರೆ ಆರಂಭದಲ್ಲಿ ಇದು ಇತರರಿಗೆ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಕೇವಲ ಐವರು ಕನ್ಯೆಯರು ತಮ್ಮ ಎಣ್ಣೆಯ ಪಾತ್ರೆಗಳಲ್ಲಿ ಎಣ್ಣೆಯನ್ನು ತುಂಬಿಸಿಕೊಂಡಿದ್ದರು (ಮತ್ತಾ. 25:4).

ರಾತ್ರಿಯ ವೇಳೆ ಎಲ್ಲರಿಗೆ ದೀಪದ ಬೆಳಕು ಕಾಣಿಸುತ್ತಿತ್ತು, ಆದರೆ ಎಣ್ಣೆಯ ಪಾತ್ರೆಗಳು ಕಾಣಿಸುತ್ತಿರಲಿಲ್ಲ; ಇದು ಸೂಚಿಸುವುದು ಏನೆಂದರೆ, ನಾವು ದೇವರ ಮುಂದೆ ಜೀವಿಸುವ ರಹಸ್ಯ ಜೀವಿತವು ಕತ್ತಲೆಯಲ್ಲಿರುವ ಲೋಕದ ಜನರಿಗೆ ಕಾಣಿಸುವುದಿಲ್ಲ. ನಮ್ಮೆಲ್ಲರ ಬಳಿ ಎಣ್ಣೆಯ ಪಾತ್ರೆಗಳಿವೆ. ನಮ್ಮ ಪಾತ್ರೆಯಲ್ಲಿ ಎಣ್ಣೆ ಇದೆಯೋ, ಇಲ್ಲವೋ ಎಂದು ನಾವು ಪ್ರಶ್ನಿಸಿಕೊಳ್ಳಬೇಕು. ದೇವರ ವಾಕ್ಯದಲ್ಲಿ ಎಲ್ಲೆಡೆ ಹೇಳಿರುವಂತೆ, ಎಣ್ಣೆಯು ಪವಿತ್ರಾತ್ಮನ ಗುರುತಾಗಿದೆ ಮತ್ತು ಪವಿತ್ರಾತ್ಮನು ನಮ್ಮ ಆತ್ಮಕ್ಕೆ ದೇವರ ಜೀವವನ್ನು ಒದಗಿಸುವುದನ್ನು ಇಲ್ಲಿ ಸೂಚಿಸಲಾಗಿದೆ. ದೇವರ ಆ ಜೀವವು ನಮ್ಮ ಬೆಳಕಿನ ಮೂಲಕ ಹೊರಗೆ ಪ್ರಕಟವಾಗುತ್ತದೆ (ಯೋಹಾ. 1:4). ಎಣ್ಣೆಯು ಒಳಗಿನ ಅಂಶವಾಗಿದೆ. ಅನೇಕ ವಿಶ್ವಾಸಿಗಳು ಕೇವಲ ಹೊರಗೆ ಕಾಣಿಸುವ ತಮ್ಮ ಸಾಕ್ಷಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇದು ಅವರ ಮೂರ್ಖತನವಾಗಿದೆ. ನಮ್ಮಲ್ಲಿ ಕೇವಲ ಹೊರಗಿನ ಬೆಳಕು ಇದ್ದರೆ ಸಾಲದು ಎಂಬುದನ್ನು ನಾವು ಶೋಧನೆ ಮತ್ತು ಪರೀಕ್ಷೆಯನ್ನು ಎದುರಿಸುವಾಗ ಕಂಡುಕೊಳ್ಳುತ್ತೇವೆ. ನಮ್ಮನ್ನು ಶೋಧನೆಗಳ ಮೂಲಕ ಜಯಿಶಾಲಿಗಳಾಗಿ ನಡೆಸಲು ನಮ್ಮೊಳಗೆ ದೈವಿಕ ಜೀವವು ಅವಶ್ಯವಾಗಿದೆ.

"ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿ ಹೋದರೆ, ನಿನ್ನ ಬಲ ಅತ್ಯಲ್ಪವೇ" (ಜ್ಞಾ. 24:10). ನಾವು ಬಲಿಷ್ಠರೋ ಅಥವಾ ಬಲಹೀನರೋ ಎಂಬುದನ್ನು ಜೀವಿತದಲ್ಲಿ ಎದುರಾಗುವ ಸಂಕಟಗಳು ನಮಗೆ ತೋರಿಸಿಕೊಡುತ್ತವೆ. ಮೇಲೆ ಪ್ರಸ್ತಾಪಿಸಿದ ಸಾಮ್ಯದಲ್ಲಿ ಬರುವ ಸಮಸ್ಯೆ ಏನೆಂದರೆ, ಮದಲಿಂಗನು ಹಿಂದಿರುಗುವುದನ್ನು ತಡಮಾಡಿದನು. ಸಮಯವು ನಮ್ಮ ಆತ್ಮಿಕ ನಿಜಸ್ಥಿತಿಯನ್ನು ತೋರಿಸಿಕೊಡುತ್ತದೆ. ನಂಬಿಕೆಯನ್ನು ಹೊಂದಿರುವಾತನು ಕೊನೆಯವರೆಗೂ ತಾಳುತ್ತಾನೆ ಮತ್ತು ರಕ್ಷಣೆಯನ್ನು ಪಡೆಯುತ್ತಾನೆ. ಯಾರಲ್ಲಿ ಒಳಜೀವಿತವಿದೆ ಮತ್ತು ಯಾರಲ್ಲಿ ಇಲ್ಲ ಎಂಬುದನ್ನು ಸಹ ಸಮಯವೇ ತೋರಿಸಿಕೊಡುತ್ತದೆ. ಅನೇಕರು ತಕ್ಷಣ ಮೊಳೆಯುವ ಬೀಜಗಳಂತಿದ್ದಾರೆ. ಆದರೆ ಅವರಲ್ಲಿ ಒಳಜೀವಿತ ಇರುವುದಿಲ್ಲ. ಅವರ ಹೃದಯವು ಮಣ್ಣಿಲ್ಲದ ಬಂಡೆನೆಲದಂತಿದೆ (ಮಾರ್ಕ. 4:5). ಈ ಕಾರಣಕ್ಕಾಗಿ ಹೊಸ ವಿಶ್ವಾಸಿಗಳ ಆತ್ಮಿಕ ಮಟ್ಟವನ್ನು ಅಳೆಯುವುದು ಅಥವಾ ಅವರಲ್ಲಿ ಯಥಾರ್ಥವಾದ ಪೂರ್ಣಹೃದಯ ಇದೆಯೋ ಎಂದು ತಿಳಿಯುವುದು ಸುಲಭವಲ್ಲ. ಕಾದು, ನಿರೀಕ್ಷಿಸುವ ತಾಳ್ಮೆ ನಮ್ಮಲ್ಲಿದ್ದರೆ, ಸಮಯವು ಎಲ್ಲವನ್ನೂ ತೋರಿಸುತ್ತದೆ. ಹಾಗಾಗಿ ಕ್ರಿಸ್ತನ ಬರುವಿಕೆಗೆ ಸಿದ್ಧರಾಗುವುದು ಹೇಗೆಂದರೆ, ದೇವರ ಮುಂದೆ ನಮ್ಮ ಒಳಜೀವಿತದಲ್ಲಿ ಮತ್ತು ನಮ್ಮ ಸುತ್ತಲಿನ ಜನರಿಗೆ ಕಾಣಿಸದಿರುವಂತ ಕ್ಷೇತ್ರದಲ್ಲಿ - ಅಂದರೆ ನಮ್ಮ ಆಲೋಚನೆಗಳು, ಮನೋಭಾವಗಳು ಮತ್ತು ಉದ್ದೇಶಗಳಲ್ಲಿ - ಪರಿಶುದ್ಧತೆ ಮತ್ತು ನಂಬಿಗಸ್ತಿಕೆಯನ್ನು ಕಾಯ್ದುಕೊಳ್ಳುವುದಾಗಿದೆ. ನಮ್ಮಲ್ಲಿ ಇಂತಹ ಒಳಜೀವಿತ ಇಲ್ಲದಿದ್ದಾಗ, ನಾವು ಕ್ರಿಸ್ತನ ಬರುವಿಕೆಗೆ ಸಿದ್ಧರಾಗಿದ್ದೇವೆಂದು ಆಲೋಚಿಸಿ, ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತಿದ್ದೇವೆ.

2. ನಮ್ಮ ಸೇವೆಯಲ್ಲಿ ನಂಬಿಗಸ್ತಿಕೆ -

ಮತ್ತಾ. 25:14-30 : ಎರಡನೇ ಸಾಮ್ಯದ ಆದ್ಯತೆ ಏನೆಂದರೆ, ದೇವರು ನಮಗೆ ಕೊಟ್ಟಿರುವ ವರಗಳನ್ನು ನಂಬಿಗಸ್ತಿಕೆಯಿಂದ ಬಳಸುವುದಾಗಿದೆ. ಈ ವರಗಳು ಯಾವುವೆಂದರೆ, ಸ್ವತ್ತು-ಸಂಪತ್ತುಗಳು, ಹಣ, ಸ್ವಾಭಾವಿಕ ಸಾಮರ್ಥ್ಯ ಮತ್ತು ಪ್ರವೀಣತೆ, ಜೀವನದಲ್ಲಿ ಬರುವ ಸದವಕಾಶಗಳು, ಆತ್ಮಿಕ ವರಗಳು, ಮುಂತಾದವುಗಳು. ಈ ವಿಷಯದಲ್ಲಿ ಎಲ್ಲರೂ ಒಂದೇ ಸಮನಾಗಿ ಇರುವುದಿಲ್ಲ. ನಾವು ಈ ಸಾಮ್ಯದಲ್ಲಿ ನೋಡುವಂತೆ ಒಬ್ಬನಿಗೆ ಐದು ತಲಾಂತು, ಒಬ್ಬನಿಗೆ ಎರಡು ಮತ್ತು ಇನ್ನೊಬ್ಬನಿಗೆ ಕೇವಲ ಒಂದು ತಲಾಂತು ಸಿಕ್ಕಿರುತ್ತದೆ. ಆದರೆ ಎಲ್ಲರಿಗೂ ತಮಗೆ ಸಿಕ್ಕಿದ್ದನ್ನು ನಂಬಿಗಸ್ತಿಕೆಯಿಂದ ಉಪಯೋಗಿಸಿಕೊಳ್ಳಲು ಸಿಕ್ಕಿದ ಸಮಯ ಅಥವಾ ಅವಧಿ ಸಮನಾಗಿರುತ್ತದೆ. ಯಾವನಿಗೆ ಬಹಳವಾಗಿ ಕೊಟ್ಟಿದೆಯೋ, ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು. ಹಾಗಾಗಿ ಎರಡು ತಲಾಂತುಗಳನ್ನು ಪಡೆದು ಅದನ್ನು ನಾಲ್ಕು ತಲಾಂತುಗಳಿಗೆ ಹೆಚ್ಚಿಸಿದವನಿಗೆ ಮತ್ತು ಐದು ತಲಾಂತುಗಳಿಂದ ಹತ್ತನ್ನು ಸಂಪಾದಿಸಿದವನಿಗೆ ಸಮನಾದ ಬಹುಮಾನ ಸಿಕ್ಕಿತು. ಆದರೆ ತನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟ ಕೆಲಸಗಾರನು ನ್ಯಾಯತೀರ್ಪನ್ನು ಎದುರಿಸ ಬೇಕಾಯಿತು (ಮತ್ತಾ. 25:18) - ಈತನು ತನಗೆ ದೇವರಿಂದ ದೊರಕಿದ ವರಗಳನ್ನು ಇಹಲೋಕಕ್ಕಾಗಿ ಉಪಯೋಗಿಸಿದನು ಮತ್ತು ದೇವರಿಗಾಗಿ ಉಪಯೋಗಿಸಲಿಲ್ಲ. ಯಾರೂ ತನಗೆ ಏನೂ ಸಿಕ್ಕಿಲ್ಲವೆಂದು ಹೇಳಲು ಆಗುವುದಿಲ್ಲ. ಏಕೆಂದರೆ ಎಲ್ಲರೂ ದೇವರಿಂದ ಒಂದಲ್ಲ ಒಂದು ವರವನ್ನು ಪಡೆದಿರುತ್ತಾರೆ. ಆ ವರಗಳನ್ನು ನಾವು ಹೇಗೆ ಉಪಯೋಗಿಸುತ್ತೇವೆ ಎಂಬುದೇ ಪ್ರಮುಖ ಪ್ರಶ್ನೆಯಾಗಿದೆ. ನಾವು ಸ್ವಂತಕ್ಕಾಗಿ ಉಪಯೋಗ ಮಾಡಿಕೊಳ್ಳುವುದು ವರವನ್ನು ಭೂಮಿಯಲ್ಲಿ ಬಚ್ಚಿಟ್ಟಹಾಗಿದೆ. ನಾವು ಯಾವುದನ್ನು ದೇವರ ಮಹಿಮೆಗಾಗಿ ಉಪಯೋಗಿಸುತ್ತೇವೋ, ಅದು ಮಾತ್ರ ನಿತ್ಯತ್ವದ ಸಂಪತ್ತಾಗಿ ಎಣಿಸಲ್ಪಡುತ್ತದೆ. ಈ ಮಾನದಂಡದಿಂದ ಅಳೆಯುವಾಗ ವಿಶ್ವಾಸಿಗಳಲ್ಲಿ ಹೆಚ್ಚಿನ ಮಂದಿ (ಆತ್ಮಿಕವಾಗಿ) ಬಡವರಾಗಿದ್ದಾರೆ ಎಂಬುದನ್ನು ನಾವು ಕಾಣಬಹುದು. ನಮ್ಮ ಧ್ಯೆeಯ, "ಸ್ವಂತಕ್ಕಾಗಿ ಏನೂ ಇಲ್ಲ, ಎಲ್ಲವೂ ದೇವರಿಗಾಗಿ" ಎಂಬುದಾಗಿರಬೇಕು. ಆಗ ನಾವು ಕ್ರಿಸ್ತನ ತಿರುಗಿ ಬರುವಿಕೆಗೆ ಸಿದ್ಧರಾಗುತ್ತೇವೆ. ನಾವು ನಮ್ಮಲ್ಲಿರುವ ಎಲ್ಲವನ್ನೂ ತ್ಯಜಿಸದಿದ್ದರೆ, ನಾವು ಯೇಸುವಿನ ಶಿಷ್ಯರು ಆಗಲಾರೆವು. ದೇವರು ಕೊಟ್ಟಿರುವ ಎಲ್ಲಾ ಆಸ್ತಿಪಾಸ್ತಿಗಳನ್ನು ಮತ್ತು ವರಗಳನ್ನು ಕರ್ತನಿಗಾಗಿ ಉಪಯೋಗಿಸದ ಮನುಷ್ಯನು, ತಾನು ಕ್ರಿಸ್ತನ ಹಿಂದಿರುಗುವಿಕೆಗೆ ತಯಾರಾಗಿದ್ದೇನೆ ಎಂದು ಹೇಳಿಕೊಳ್ಳುವುದಾದರೆ, ಅವನು ತನ್ನನ್ನೇ ವಂಚಿಸಿಕೊಳ್ಳುತ್ತಿದ್ದಾನೆ, ಅಷ್ಟೇ.

"ನಮ್ಮ ಜೀವನದಲ್ಲಿ ಬರುವ ವಿಪರೀತ ಪರಿಸ್ಥಿತಿಗಳು ನಾವು ಬಲಶಾಲಿಗಳೋ ಅಥವಾ ಬಲಹೀನರೋ ಎಂಬುದನ್ನು ನಮಗೆ ತೋರಿಸಿಕೊಡುತ್ತವೆ.

3. ನಮ್ಮ ಸಹ-ವಿಶ್ವಾಸಿಗಳ ಸೇವೆಯಲ್ಲಿ ನಂಬಿಗಸ್ತಿಕೆ -

ಮತ್ತಾ. 25:31-46 : ಈ ಕೊನೆಯ ಭಾಗದಲ್ಲಿ, ನಮ್ಮ ಸಹ-ವಿಶ್ವಾಸಿಗಳು ಕೊರತೆಯಲ್ಲಿ ಇರುವಾಗ, ಅವರ ವಿಷಯದಲ್ಲಿ ನಮ್ಮ ಮನೋಭಾವ ಹೇಗಿದೆಯೆಂದು ಯೇಸುವು ಪರೀಕ್ಷಿಸುತ್ತಾರೆ. ಸಹ-ವಿಶ್ವಾಸಿಗಳು ಆತ್ಮಿಕ ಅಥವಾ ದೈಹಿಕ ಕೊರತೆಯನ್ನು ಎದುರಿಸುತ್ತಿರಬಹುದು. ಇಲ್ಲಿ ನಾವು ನೋಡುವುದು ಏನೆಂದರೆ, ಕೆಲವು ವಿಶ್ವಾಸಿಗಳು ತಮ್ಮ ಸಹ-ವಿಶ್ವಾಸಿಗಳ ಸೇವೆಯನ್ನು ಕರ್ತನ ಸೇವೆಯೆಂಬ ಮನೋಭಾವದಿಂದ ಮಾಡಿದ ಸಲುವಾಗಿ ಪರಲೋಕ ರಾಜ್ಯದ ಬಾಧ್ಯತೆಯನ್ನು ಪಡೆಯುತ್ತಾರೆ. ಅವರು ಎಷ್ಟು ರಹಸ್ಯವಾಗಿ ಸೇವೆ ಮಾಡಿದರೆಂದರೆ, ಅವರ ಬಲಗೈ ಮಾಡಿದ್ದು ಎಡಗೈಗೂ ತಿಳಿದಿರಲಿಲ್ಲ (ಮತ್ತಾ. 6:3). ಇದು ಹೇಗಿತ್ತೆಂದರೆ, ಕರ್ತನು ಅವರ ಸತ್ಕಾರ್ಯಗಳನ್ನು ಅವರಿಗೆ ಜ್ಞಾಪಿಸಿದಾಗ, ಅವರಿಗೆ ಅದು ನೆನಪಿಗೆ ಬರಲೇ ಇಲ್ಲ (ಮತ್ತಾ. 25:38)!

ಇಲ್ಲಿ ಯೇಸುವು ಕಲಿಸಿಕೊಟ್ಟ ಇನ್ನೊಂದು ವಿಷಯವೆಂದರೆ, ನಮ್ಮ ಸಹೋದರರಲ್ಲಿ ಅತ್ಯಲ್ಪನಾದವನಿಗೆ ನಾವು ಮಾಡುವ ಯಾವುದೇ ಸೇವೆಯು, ಸ್ವತಃ ಯೇಸುವಿಗೆ ಮಾಡಿದ ಸೇವೆ ಎಂದು ಪರಿಗಣಿಸಲ್ಪಡುತ್ತದೆ (ಮತ್ತಾ. 25:40). ಇಲ್ಲಿ ಅವರು ಅತ್ಯಲ್ಪನಾದ ಸಹೋದರನ ಕುರಿತಾಗಿ ಹೇಳಿದ ಮಾತು ಗಮನಾರ್ಹವಾಗಿದೆ, ಏಕೆಂದರೆ ಸಾಮಾನ್ಯವಾಗಿ ನಾವು ಪ್ರಮುಖ ವಿಶ್ವಾಸಿಗಳ ಸೇವೆ ಮಾಡಲು ಬಯಸುತ್ತೇವೆ ಮತ್ತು ಬಡವ ಮತ್ತು ನಿರ್ಲಕ್ಷಿಸಲ್ಪಟ್ಟ ಸಹೋದರನನ್ನು ಕಡೆಗಣಿಸುತ್ತೇವೆ! ಯಾರು ಕೇವಲ ತಮ್ಮ ಅವಶ್ಯತೆಗಳಿಗಾಗಿ ಉಣ್ಣುವುದು, ಕುಡಿಯುವುದು, ಕೊಳ್ಳುವುದು, ಮಾರುವುದು, ಕಟ್ಟುವುದು ಮತ್ತು ನೆಡುವುದರಲ್ಲಿ ಮಗ್ನರಾಗಿರುತ್ತಾರೋ, ಅಂಥವರು ಯೇಸುವು ಪ್ರತ್ಯಕ್ಷನಾಗುವ ದಿನದಲ್ಲಿ ನಿಶ್ಚಯವಾಗಿ ಇಹಲೋಕದಲ್ಲೇ ಉಳಿಯುತ್ತಾರೆ (ಲೂಕ. 17:28,34).ತಾವು ಮಾಡುವ ಕರ್ತನ ಸೇವೆಯಲ್ಲಿ ಸಹ-ವಿಶ್ವಾಸಿಗಳ ಪ್ರೀತಿ ಮತ್ತು ಕಾಳಜಿಯ ಸೇವೆಯನ್ನು ಸೇರಿಸಿದ್ದಾರೋ, ಅಂಥವರು ಮಾತ್ರ ಮೇಲಕ್ಕೆ ಕರೆಯಲ್ಪಡುವರು.

ಇನ್ನೊಂದು ವಾಕ್ಯಭಾಗದಲ್ಲಿ, ಯೇಸುವು ಮೇಲೆ ವಿವರಿಸಿದ ಪಂಗಡಕ್ಕೆ ಸಂಪೂರ್ಣ ವ್ಯತಿರಿಕ್ತರಾಗಿದ್ದ ಮತ್ತೊಂದು ಜನರ ಪಂಗಡವನ್ನು ಉಲ್ಲೇಖಿಸಿದರು. ಇವರು ಕರ್ತನ ಹೆಸರಿನಲ್ಲಿ ತಾವು ಕೈಗೊಂಡ ಎಲ್ಲಾ ಸತ್ಕಾರ್ಯಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುತ್ತಾರೆ. ಅವರು ಸಹ ಕರ್ತನ ನ್ಯಾಯಾಸನದ ಮುಂದೆ ಬರುತ್ತಾರೆ, ಮತ್ತು ತಾವು ಕರ್ತನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಿದ್ದನ್ನು, ಬೋಧನೆ ಮಾಡಿದ್ದನ್ನು, ರೋಗಿಗಳನ್ನು ಗುಣಪಡಿಸಿದ್ದನ್ನು, ಇಂತಹ ಅನೇಕ ಕಾರ್ಯಗಳನ್ನು ಕರ್ತನಿಗೆ ನೆನಪಿಸುತ್ತಾರೆ. ಆದರೆ ಅವರು ಇಷ್ಟೆಲ್ಲ ಕಾರ್ಯಗಳನ್ನು ಮಾಡಿದ್ದರೂ ಕರ್ತನಿಂದ ತಿರಸ್ಕರಿಸಲ್ಪಡುತ್ತಾರೆ. ಏಕೆಂದರೆ ಮೊದಲನೆಯ ಅವಶ್ಯಕತೆ - ಅಂದರೆ, ದೇವರ ಮುಂದೆ ಒಂದು ಪರಿಶುದ್ಧವಾದ ರಹಸ್ಯ ಜೀವಿತವನ್ನು ಜೀವಿಸುವುದು - ಅವರಲ್ಲಿ ಇಲ್ಲವಾಗಿತ್ತು. ಅವರು ತಮ್ಮ ಶ್ರೇಷ್ಠ ವರಗಳ ನಿಮಿತ್ತ ಹೆಚ್ಚಳಪಡುತ್ತಿದ್ದರು.