ಒಬ್ಬ ವಿಶ್ವಾಸಿಯು ತನ್ನ ಜೀವಿತದಲ್ಲಿ ದೇವರ ಪರಿಪೂರ್ಣ ಚಿತ್ತವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಸೌಲನು ಇಸ್ರಾಯೇಲ್ಯರ ಅರಸನಾಗಿ ದೇವರಿಂದ ಆರಿಸಲ್ಪಟ್ಟನು, ಆದರೆ ಕ್ರಮೇಣವಾಗಿ ಆತನ ತಾಳ್ಮೆಯ ಕೊರತೆಯಿಂದಾಗಿ ಮತ್ತು ಅವಿಧೇಯತೆಯಿಂದಾಗಿ, ದೇವರು ಅವನನ್ನು ತಿರಸ್ಕಾರ ಮಾಡಬೇಕಾಗಿ ಬಂತು. ಹೌದು, ಅವನು ಸಿಂಹಾಸನದ ಮೇಲೆ ಇನ್ನೂ ಕೆಲವು ವರ್ಷಗಳು ಮುಂದುವರಿದನು, ಆದರೆ ಆತನ ಜೀವಿತಕ್ಕಿದ್ದ ದೇವರ ಚಿತ್ತವನ್ನು ಕಳೆದುಕೊಂಡನು. ಸೊಲೊಮೋನನು ಇದೇ ರೀತಿಯ ಇನ್ನೊಂದು ಉದಾಹರಣೆಯಾಗಿದ್ದಾನೆ. ಅವನು ತನ್ನ ಆರಂಭದ ವರ್ಷಗಳಲ್ಲಿ ದೇವರನ್ನು ಮೆಚ್ಚಿಸಿದನು, ಆದರೆ ಮುಂದೆ ಆತನು ಅನೇಕ ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡದ್ದರಿಂದ ಬಿದ್ದುಹೋದನು.
ಅರಣ್ಯದಲ್ಲಿ ಇಸ್ರಾಯೇಲ್ಯರು ನಾಶವಾದ ನಿದರ್ಶನದಿಂದ ನಾವು ಎಚ್ಚರಿಕೆ ತೆಗೆದುಕೊಳ್ಳಬೇಕೆಂದು ಹೊಸ ಒಡಂಬಡಿಕೆಯಲ್ಲಿ ನಮಗೆ ಎರಡು ಬಾರಿ ಬುದ್ಧಿ ಹೇಳಲ್ಪಟ್ಟಿದೆ. ಇಸ್ರಾಯೇಲ್ಯರಿಗಾಗಿ ದೇವರ ಪರಿಪೂರ್ಣ ಚಿತ್ತವು ಅವರು ಕಾನಾನ್‌ದೇಶವನ್ನು ಸೇರುವುದಾಗಿತ್ತು. ಆದರೆ ಅವರಲ್ಲಿ ಇಬ್ಬರನ್ನು ಹೊರತಾಗಿ ಉಳಿದವರೆಲ್ಲರೂ ತಮ್ಮ ಅಪನಂಬಿಕೆ ಮತ್ತು ಅವಿಧೇಯತೆಯ ಫಲವಾಗಿ ದೇವರ ಅತ್ಯುತ್ತಮವಾದದ್ದನ್ನು ಕಳೆದುಕೊಂಡರು (1 ಕೊರಿ. 10:1-12; ಇಬ್ರಿ. 3:7-14). ಇದೇ ರೀತಿಯಲ್ಲಿ ಅನೇಕ ವಿಶ್ವಾಸಿಗಳೂ ಸಹ ಅವಿಧೇಯತೆ ಮತ್ತು ರಾಜಿ ಮಾಡಿಕೊಂಡದ್ದರ ಫಲವಾಗಿ - ವಿಶೇಷವಾಗಿ ಮದುವೆಯ ವಿಷಯದಲ್ಲಿ ಅಥವಾ ಉದ್ಯೋಗ ಇಲ್ಲವೇ ವೃತ್ತಿಯನ್ನು ಆರಿಸಿಕೊಳ್ಳುವುದರಲ್ಲಿ - ತಮ್ಮ ಜೀವಿತಕ್ಕಾಗಿ ಇದ್ದಂತಹ ದೇವರ ಪರಿಪೂರ್ಣ ಯೋಜನೆಯನ್ನು ಕಳೆದುಕೊಂಡಿದ್ದಾರೆ.
’ಜಿ. ಕ್ರಿಶ್ಚಿಯನ್ ವೈಸ್’ ಎಂಬ ಬರಹಗಾರರ "ದೇವರ ಪರಿಪೂರ್ಣ ಚಿತ್ತ"ಎಂಬ ಪುಸ್ತಕದಲ್ಲಿ, ಒಂದು ಸತ್ಯವೇದ ಕಾಲೇಜಿನ ಒಬ್ಬ ಶಿಕ್ಷಕರು ಒಂದು ದಿನ ತಮ್ಮ ವಿದ್ಯಾರ್ಥಿಗಳನ್ನು ಸಂಬೋಧಿಸಿ,"ನಾನು ನನ್ನ ಜೀವಿತದ ಬಹು ದೊಡ್ಡ ಅಂಶವನ್ನು ದೇವರ ಎರಡನೇ ಅತ್ಯುತ್ತಮದ ಮಟ್ಟದಲ್ಲಿ ಜೀವಿಸಿದ್ದೇನೆ," ಎಂದು ಹೇಳಿದ್ದನ್ನು ಪ್ರಸ್ತಾಪಿಸಲಾಗಿದೆ. ದೇವರು ಅವರನ್ನು ತಮ್ಮ ಯೌವ್ವನದ ಪ್ರಾಯದಲ್ಲಿ ಮಿಷಿನರಿಯಾಗಿ ಕರೆ ನೀಡಿದ್ದರು, ಆದರೆ ಅವರು ಮದುವೆ ಮಾಡಿಕೊಂಡದ್ದರ ಫಲವಾಗಿ ಆ ಕರೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. ಇದರ ನಂತರ ಅವರು ಒಂದು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾ, ಒಂದು ಸ್ವ-ಇಚ್ಚಾ ಮಾರ್ಗದ ಉದ್ದಿಮೆಯನ್ನು ಆರಂಭಿಸಿದರು; ಅವರ ಮುಖ್ಯ ಉದ್ದೇಶ ಹಣ ಸಂಪಾದನೆಯಾಗಿತ್ತು. ದೇವರು ಅನೇಕ ವರ್ಷಗಳ ಕಾಲ ಅವರೊಟ್ಟಿಗೆ ಮಾತನಾಡುತ್ತಲೇ ಇದ್ದರು, ಆದರೆ ಅವರು ದೇವರಿಗೆ ಒಳಪಡಲು ನಿರಾಕರಿಸಿದರು. ಒಂದು ದಿನ ಅವರ ಚಿಕ್ಕ ಮಗುವು ಕುರ್ಚಿಯ ಮೇಲಿನಿಂದ ಉರುಳಿಬಿದ್ದು ಸತ್ತುಹೋಯಿತು. ಇದರಿಂದಾಗಿ ಅವರು ದೇವರಿಗೆ ಮೊಣಕಾಲೂರಿ ಅಡ್ಡಬಿದ್ದು, ಇಡೀ ರಾತ್ರಿ ದೇವರ ಮುಂದೆ ಕಣ್ಣೀರಿನ ಪ್ರಾರ್ಥನೆ ಮಾಡಿದರು ಮತ್ತು ತಮ್ಮ ಜೀವಿತವನ್ನು ಸಂಪೂರ್ಣವಾಗಿ ದೇವರ ಕೈಗೆ ಒಪ್ಪಿಸಿದರು. ಅವರು ಆಫ್ರಿಕಾ ಖಂಡಕ್ಕೆ ಹೋಗುವ ಸಮಯ ಈಗಾಗಲೇ ಮೀರಿಹೋಗಿತ್ತು. ಆ ಬಾಗಿಲು ಮುಚ್ಚಲ್ಪಟ್ಟಿತ್ತು. ಅದು ತನಗಾಗಿ ದೇವರ ಅತ್ಯುತ್ತಮ ಯೋಜನೆಯಾಗಿತ್ತೆಂದು ಅವರಿಗೆ ತಿಳಿದಿತ್ತು, ಆದರೆ ಅವರು ಅದನ್ನು ಕಳೆದುಕೊಂಡಿದ್ದರು. ಈಗ ಉಳಿದಿದ್ದ ಜೀವನದ ಭಾಗವನ್ನು ಸ್ವಲ್ಪ ಮಟ್ಟಿಗಾದರೂ ಬಳಸಿಕೊಳ್ಳುವಂತೆ ಮಾತ್ರ ಅವರು ದೇವರನ್ನು ಕೇಳಿಕೊಳ್ಳ ಬಹುದಾಗಿತ್ತು. ಅವರು ಸತ್ಯವೇದದ ಶಾಲೆಯಲ್ಲಿ ಶಿಕ್ಷಕರಾದರು, ಆದರೆ ಇದು ಅವರಿಗಾಗಿ ದೇವರ ಅತ್ಯುತ್ತಮಕ್ಕಿಂತ ಕೆಳಗಿನ ಕೇವಲ ಎರಡನೇ ಮಟ್ಟದ ಆಯ್ಕೆಯಾಗಿತ್ತೆಂದು ಅವರು ಎಂದಿಗೂ ಮರೆಯಲು ಸಾಧ್ಯವಾಗಲಿಲ್ಲ.
ವೈಸರವರು ಮುಂದುವರಿಸುತ್ತಾ ಹೀಗೆ ಹೇಳುತ್ತಾರೆ, "ಇದರ ನಂತರ ಇದೇ ರೀತಿಯ ಸಾಕ್ಷಿಯನ್ನು ಹೊಂದಿರುವ ಹಲವಾರು ಜನರನ್ನು ನಾನು ಭೇಟಿಯಾಗಿದ್ದೇನೆ. ಸಾಮಾನ್ಯವಾಗಿ ಇವೆಲ್ಲವೂ ಕಣ್ಣೀರಿನಲ್ಲಿ ಮುಳುಗಿರುವ ಸಾಕ್ಷಿಗಳಾಗಿವೆ, ಅಥವಾ ಗುರುತರದ್ದಾಗಿದೆ, ಇಲ್ಲವಾದರೆ ಕಹಿಯಾದ ಕಣ್ಣೀರಿನಿಂದ ತುಂಬಿವೆ. ದೇವರಿಗೆ ಸ್ತೋತ್ರವಾಗಲಿ, ಪಾಪಿಗಳನ್ನು ಮತ್ತು ದೇವರ ಪರಿಪೂರ್ಣ ಚಿತ್ತವಾದ ಏಕೈಕ ಪ್ರವೇಶ ಮಾರ್ಗವನ್ನು ನಿರಾಕರಿಸಿದ ಜನರನ್ನು ಸಹ ಹೇಗೆ ಬಳಸಿಕೊಳ್ಳಬೇಕೆಂದು ದೇವರಿಗೆ ತಿಳಿದಿದೆ, ಆದಾಗ್ಯೂ ಅಂತಹ ಜೀವಿತವು ಎಂದಿಗೂ ದೇವರು ಮೂಲತ: ಉದ್ದೇಶಿಸಿದಂತೆ ಇರುವುದಿಲ್ಲ. ಒಬ್ಬ ವ್ಯಕ್ತಿಯು ತನ್ನ ಜೀವಿತಕ್ಕಾಗಿ ದೇವರ ಪರಿಪೂರ್ಣ ಚಿತ್ತವನ್ನು ಕಳೆದುಕೊಳ್ಳುವುದು ಒಂದು ದುರಂತವೇ ಸರಿ. ಕ್ರೈಸ್ತ ವಿಶ್ವಾಸಿಯೇ, ನೀನು ದೇವರ ಅತ್ಯುತ್ತಮ ಯೋಜನೆಯನ್ನು ಕಳೆದುಕೊಳ್ಳದಂತೆ ನನ್ನ ಈ ಮಾತುಗಳನ್ನು ಮತ್ತು ಈ ಸಾಕ್ಷಿಯನ್ನು ಚೆನ್ನಾಗಿ ನೆನಪಿನಲ್ಲಿ ಇರಿಸಿಕೋ. ಜೀವಿತದ ಯಾವುದೇ ಹಂತದಲ್ಲಿ ದೇವರು ತನ್ನ ಕೈಗೆ ಒಪ್ಪಿಸಲ್ಪಟ್ಟ ಯಾವ ಜೀವಿಯನ್ನೇ ಆದರೂ ಬಳಸಿಕೊಳ್ಳುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಜೀವನದ ಪ್ರಯಾಣದ ಆರಂಭದಲ್ಲೇ ದೇವರಿಗಾಗಿ ತವಕಿಸುವಂತ ಮತ್ತು ಅವರ ಚಿತ್ತಕ್ಕೆ ಶರಣಾಗುವಂತ ಜನರೊಂದಿಗೆ ನಾವು ಎಣಿಸಲ್ಪಡೋಣ, ಮತ್ತು ಈ ರೀತಿಯಾಗಿ ನೋವು ಮತ್ತು ಅವಮಾನದ ಅಡ್ಡದಾರಿಗಳಿಂದ ಹೊರಕ್ಕೆ ಬರೋಣ."
"ಪ್ರಸ್ತುತ ದಿನದಲ್ಲಿ ಹಲವಾರು ತೊಂದರೆಗಳಿದ್ದರೂ, ನಿನ್ನ ಸಮಯವನ್ನು ಸದುಪಯೋಗ ಪಡಿಸಿಕೋ"
ನಾವು ಜಯದ ಜೀವಿತವನ್ನು ಜೀವಿಸಲಿಕ್ಕಾಗಿ ಅಥವಾ ಕರ್ತರಿಗೆ ಗರಿಷ್ಠ ಉಪಯೋಗವಾಗಲಿಕ್ಕಾಗಿ ಅಥವಾ ಇತರರಿಗೆ ಆಶೀರ್ವಾದ ನಿಧಿಗಳಾಗಿರಲಿಕ್ಕಾಗಿ ನಮ್ಮ ಸ್ವಂತ ಇಷ್ಟದ ಪ್ರಕಾರ ಯಾವುದೋ ಸ್ಥಳವನ್ನು ಆರಿಸಿಕೊಳ್ಳಬಾರದು. ಕೆಲವರು ತಮ್ಮ ವೃತ್ತಿ, ವಾಸಸ್ಥಳಗಳನ್ನು ತಾವೇ ಆಯ್ಕೆ ಮಾಡಿಕೊಂಡು, ನಂತರ ತಾವು ಎಲ್ಲಿದ್ದರೂ ದೇವರಿಗೆ ಸಾಕ್ಷಿಗಳಾಗಿ ಇರಬಹುದೆಂದು ಭಾವಿಸುತ್ತಾರೆ. ದೇವರು ತನ್ನ ಕರುಣೆಯಿಂದ ಅಂತಹ ವಿಶ್ವಾಸಿಗಳನ್ನು ಒಂದು ಸೀಮಿತ ರೀತಿಯಲ್ಲಿ ಬಳಸಿಕೊಳ್ಳಬಹುದು. ಆದರೆ ದೇವರ ದ್ರಾಕ್ಷೇತೋಟದಲ್ಲಿ ಅವರ ಉಪಯುಕ್ತತೆಯು ಬಹಳ ಸೀಮಿತವಾಗಿರುತ್ತದೆ, ಯಾಕೆಂದರೆ ಅವರು ದೇವರನ್ನು ಆಸಕ್ತಿಯಿಂದ ಹುಡುಕಿ, ಆತನ ಪರಿಪೂರ್ಣವಾದ ಯೋಜನೆಯಲ್ಲಿ ತಾವು ನೆಲೆಗೊಂಡಿರುವುದಿಲ್ಲ. ಕುಂಠಿತವಾದ ಆತ್ಮಿಕ ಬೆಳವಣಿಗೆ ಮತ್ತು ಸೀಮಿತವಾಗಿ ಫಲ ಕೊಡುವಂತದ್ದು ದೇವರ ನಿಯಮಗಳ ಅಸಡ್ಡೆ ಮತ್ತು ನಿರ್ಲಕ್ಷ್ಯದ ಪರಿಣಾಮವಾಗಿ ಆಗುತ್ತದೆ.
ನೀವು ಯಾವುದಾದರೂ ವಿಷಯದಲ್ಲಿ ದೇವರಿಗೆ ಅವಿಧೇಯರಾಗಿದ್ದರೆ, ಕೂಡಲೇ ಮಾನಸಾಂತರಪಟ್ಟು, ತಡಮಾಡದೆ ಆತನ ಕಡೆಗೆ ತಿರುಗಿಕೊಳ್ಳಿರಿ. ಯೋನನ ವಿಷಯದಲ್ಲಿ ನಡೆದಂತೆ, ನಿಮ್ಮ ಜೀವಿತಕ್ಕಾಗಿ ಇರಿಸಲಾಗಿರುವ ದೇವರ ಯೋಜನೆಗಳಿಗೆ ಮರಳಿ ಬರಲು ನಿಮಗೆ ಇನ್ನೊಂದು ಅವಕಾಶ ಸಿಗಬಹುದು.
ನಮ್ಮೆಲ್ಲರಿಗೆ ಒಂದೇ ಒಂದು ಜೀವಿತವಿದೆ. ಯಾರು ಪೌಲನ ರೀತಿಯಲ್ಲಿ, ತನ್ನ ಜೀವಿತದ ಕೊನೆಯಲ್ಲಿ ದೇವರಿಂದ ನೇಮಿಸಲ್ಪಟ್ಟ ಕೆಲಸವನ್ನು ಮುಗಿಸಿದ್ದೇನೆ ಎಂದು ಹೇಳಬಲ್ಲನೋ, ಅವನು ಧನ್ಯನು (2 ತಿಮೊ. 4:7).
"ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಸ್ಥಿರವಾಗಿ ಇರುವನು ಮತ್ತು ಸಾಯುವುದಿಲ್ಲ"(1 ಯೋಹಾನ. 2:17 - JBP ಭಾಷಾಂತರ).
"ಆದಕಾರಣ ನೀವು ಜವಾಬ್ದಾರಿಯಿಂದ ನಡೆದುಕೊಳ್ಳಿರಿ. ಜೀವನದ ಬಗ್ಗೆ ಜ್ಞಾನವಿಲ್ಲದವರಾಗಿರದೆ, ಜ್ಞಾನವಂತರಾಗಿರಿ. ಈ ದಿನಗಳು ಕೆಟ್ಟವುಗಳಾಗಿವೆ; ಕಠಿಣಕಾಲವು ಎದುರಾದರೂ, ಸಮಯವು ಬೆಲೆಯುಳ್ಳದ್ದೆಂದು ತಿಳಿದು ಅದನ್ನು ಉಪಯೋಗಿಸಿಕೊಳ್ಳಿರಿ. ಮತ್ತು ಬುದ್ಧಿಹೀನರಾಗಿ ನಡೆಯದೆ ಕರ್ತನ ಚಿತ್ತವೇನೆಂಬುದನ್ನು ವಿಚಾರಿಸಿರಿ, ಮತ್ತು ಅದನ್ನೇ ಅನುಸರಿಸಿರಿ" (ಎಫೆ. 5:15-17 - JBP ಭಾಷಾಂತರ - ಸ್ವ. ಅನು.).