ಮತ್ತಾಯ 5:3ರಲ್ಲಿ, "ಆತ್ಮದಲ್ಲಿ ಬಡವರಾಗಿರುವವರು ಧನ್ಯರು," ಎಂದು ಯೇಸುವು ನುಡಿದರು. "ಧನ್ಯ" ಎಂಬ ಈ ಪದದ ಅರ್ಥ "ಸಂತೋಷ" ಎಂಬುದಾಗಿದೆ, ಅಥವಾ ಸತ್ಯವೇದದ Amplified Bible' ಎಂಬ ಭಾವಾನುವಾದದಲ್ಲಿ ಇದಕ್ಕೆ "ಮೆಚ್ಚುಗೆಗೆ ಯೋಗ್ಯನು, ಅಥವಾ, ಅಸೂಯೆ ಪಡಬಹುದಾದವನು" ಎಂದು ವಿವರಣೆಯಿದೆ. ನೀವು ಭೂಲೋಕದಲ್ಲಿ ಯಾರ ಮೇಲಾದರೂ ಅಸೂಯೆಪಡುವುದಾದರೆ, ಐಶ್ವರ್ಯವಂತನ ಮೇಲೆ, ಪ್ರಸಿದ್ಧಿ ಗಳಿಸಿರುವವನ ಮೇಲೆ, ಮತ್ತು ಸುಂದರನಾಗಿರುವವನ ಮೇಲೆ ಅಸೂಯೆ ಪಡಬೇಡಿರಿ. ಆತ್ಮದಲ್ಲಿ ಬಡವನಾಗಿರುವವನ ಮೇಲೆ ಅಸೂಯೆಪಡಿರಿ. ಏಕೆಂದರೆ ಪರಲೋಕರಾಜ್ಯವು ಅವನದ್ದಾಗಿದೆ. ಇತರ ಅನೇಕ ರೀತಿಯ ಗುಣವಂತರು, ಅಂದರೆ ಆಕರ್ಷಕ ವ್ಯಕ್ತಿಗಳು ಮತ್ತು ಐಶ್ವರ್ಯವಂತರು ಪ್ರಾಪಂಚಿಕ ವಸ್ತುಗಳನ್ನು ಹೊಂದಿರಬಹುದು ಮತ್ತು ಈ ಲೋಕದ ರಾಜ್ಯವನ್ನು ಪಡೆದಿರಬಹುದು. ಆದರೆ ಪರಲೋಕರಾಜ್ಯವು ಆತ್ಮದಲ್ಲಿ ಬಡವರದ್ದಾಗಿದೆ. ದೀರ್ಘಾವಧಿಯಲ್ಲಿ ನೋಡುವುದಾದರೆ, ಈ ವ್ಯಕ್ತಿಯು ಮೆಚ್ಚುಗೆಗೆ ಯೋಗ್ಯನಾಗಿದ್ದಾನೆ. ಏಕೆಂದರೆ ಅವನ ಸಂಪತ್ತು ನಿತ್ಯತ್ವದಲ್ಲಿ ಶಾಶ್ವತವಾಗಿರುತ್ತದೆ. ನಾವು ನಮ್ಮ ಭೂಲೋಕದ ಜೀವಿತವನ್ನು ಪರಿಗಣಿಸುವಾಗ, ಅದು ಒಂದು ವೇಳೆ 70 ಅಥವಾ 80 ವರ್ಷಗಳೇ ಇರಬಹುದು, ಮನುಷ್ಯನು ನಿತ್ಯತ್ವದ ಜೀವಿಯೆಂದು ನೀವು ನಿಜವಾಗಿ ನಂಬುವಿರಾದರೆ (ನಿತ್ಯತ್ವವು ಅಂತ್ಯವಿಲ್ಲದ್ದಾಗಿದೆ, ನಿತ್ಯತ್ವದಲ್ಲಿ ಕೋಟಿಗಟ್ಟಳೆ ವರ್ಷಗಳು ಒಂದೇ ಕ್ಷಣದಂತೆ ಇರುತ್ತದೆ), 70 ವರ್ಷಗಳು ಯಾವ ಲೆಕ್ಕ? ಏನೂ ಇಲ್ಲ! 2 ಪೇತ್ರ. ಪತ್ರಿಕೆಯಲ್ಲಿ, "ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ, ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ" ಎಂದು ಹೇಳಾಗಿದೆ! ನಿತ್ಯತ್ವದ ಬೆಳಕಿನಲ್ಲಿ, ನಮ್ಮ ಭೂಮಿಯ ಮೇಲಿನ ಇಡೀ ಜೀವಿತವು ತುಂಬಾ ಚಿಕ್ಕದಾಗಿದೆ.
ಜ್ಞಾನಿಯು ಯಾರೆಂದರೆ, ದೇವರ ರಾಜ್ಯದಲ್ಲಿ ತನ್ನ ಭವಿಷ್ಯದ ಜೀವಿತದ ಕಡೆಗೆ ಹೆಚ್ಚಿನ ಗಮನ ಕೊಡುವವನು ಮತ್ತು ನಮಗೆ ಇದರ ಕುರಿತಾಗಿ ತಿಳಿಸಲಾಗಿರುವುದು ಏನೆಂದರೆ, ಯಾರು ಆತ್ಮದಲ್ಲಿ ಬಡವನಾಗಿದ್ದಾನೋ ಅವನು ದೇವರ ರಾಜ್ಯದಲ್ಲಿ ಅತ್ಯಂತ ಭಾಗ್ಯವಂತನು ಆಗಿರುತ್ತಾನೆ. ಅನೇಕ ಕ್ರೈಸ್ತರು "ಆತ್ಮದ ಬಡತನ" ಎಂಬುದನ್ನು ಅರ್ಥ ಮಾಡಿಕೊಂಡಿಲ್ಲ, ಏಕೆಂದರೆ ಸತ್ಯವೇದದ ಇಂತಹ ಅಸ್ಪಷ್ಟ ಹೇಳಿಕೆಗಳಲ್ಲಿ ಅವರಿಗೆ ಆಸಕ್ತಿಯಿಲ್ಲ. ಅವರು ಸುಮ್ಮನೆ ಓದಿಕೊಳ್ಳುತ್ತಾರೆ ಮತ್ತು ಮುಂದುವರಿಯುತ್ತಾರೆ. ನನಗೆ ಸಹಾಯವಾಗಿರುವ ಒಂದು ವಿಷಯವೆಂದರೆ, ದೇವರ ವಾಕ್ಯವನ್ನು ಒಂದು ದೃಷ್ಟಾಂತದ ರೀತಿಯಿಂದ ಯೋಚಿಸುವುದು. ನಾನು ಚಿತ್ರಗಳ ರೂಪದಲ್ಲಿ ಯೋಚಿಸಿದಾಗ, ನನಗೆ ದೇವರ ವಾಕ್ಯದ ಬಗ್ಗೆ ಸ್ಪಷ್ಟ ತಿಳುವಳಿಕೆ ಸಿಗುತ್ತದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ವಾಸ್ತವವಾಗಿ, ಸ್ವತಃ ಯೇಸುವು ಅನೇಕ ಸಿದ್ಧಾಂತಗಳನ್ನು ದೃಷ್ಟಾಂತಗಳ ಮೂಲಕ ವಿವರಿಸಿದ್ದಾರೆ. ಅವುಗಳಲ್ಲಿ ಉಪ್ಪು ಮತ್ತು ಬೆಳಕಿನಂತಹ ಅನೇಕ ಸಾಮ್ಯಗಳನ್ನು ನಾವು ಕಾಣಬಹುದು.
ನಾವು "ಆತ್ಮದ ಬಡತನ"ವನ್ನು "ಶರೀರದ ಬಡತನ"ಕ್ಕೆ ಹೋಲಿಸಿ ನೋಡಬಹುದು, ಏಕೆಂದರೆ ಮನುಷ್ಯನು ಆತ್ಮ ಮತ್ತು ದೇಹಗಳಿಂದ ಕೂಡಿದವನಾಗಿದ್ದಾನೆ ಮತ್ತು ಶರೀರದ ಬಡತನ ಏನೆಂದು ನಮಗೆ ತಿಳಿದಿದೆ. ಒಬ್ಬ ಭಿಕಾರಿ ಅಥವಾ ಭಿಕ್ಷುಕನು ದೇಹದಲ್ಲಿ ಬಡವನಾಗಿದ್ದಾನೆ, ಅದರ ಅರ್ಥ ಅವನ ಬಳಿ ತನ್ನ ಶರೀರದ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಏನೂ ಇರುವುದಿಲ್ಲ. ಅತಿ ಬಡತನದಿಂದಾಗಿ ಬೀದಿಯಲ್ಲಿ ವಾಸಿಸುವ ಒಬ್ಬ ಭಿಕ್ಷುಕನು ತನ್ನ ಅವಶ್ಯಕತೆಗಳಿಗಾಗಿ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುವುದರ ಮೂಲಕ ಒಂದು ದಿನದ ಜೀವಿತಕ್ಕೆ ಸಾಕಾಗುವಷ್ಟನ್ನು ಮಾತ್ರ ಪಡೆಯಬಹುದು, ಮತ್ತು ಮರುದಿನ ಆತನು ಇನ್ನೊಂದಿಷ್ಟನ್ನು ಪಡೆಯಲು ಅದೇ ಮನೆಗೆ ಹಿಂದಿರುಗಿ ಬರುತ್ತಾನೆ. ಇದೇ ರೀತಿ, "ಆತ್ಮದ ಬಡತನ" ಎಂಬ ವಾಕ್ಯಭಾಗಕ್ಕೂ ಈ ಚಿತ್ರಣವು ಅನ್ವಯಿಸುತ್ತದೆ, ಮತ್ತು ಶಿಷ್ಯನು ತನ್ನ ಪ್ರತಿದಿನದ ಆತ್ಮಿಕ ಅವಶ್ಯಕತೆಯನ್ನು ಗಮನಿಸಬೇಕು ಎಂಬುದು ಯೇಸುವಿನ ಉದ್ದೇಶವಾಗಿತ್ತು. ಭಿಕ್ಷುಕನು ತನ್ನ ದೈಹಿಕ ಕೊರತೆಯನ್ನು ಅರಿತುಕೊಂಡು, ಪ್ರತಿದಿನ ಸಹಾಯಕ್ಕಾಗಿ ಒಬ್ಬ ಉದಾರ ವ್ಯಕ್ತಿಯ ಮನೆಗೆ ಹೋಗುವುದನ್ನೇ ಅನುಸರಿಸುವವನ ವಿವರಣೆ ಇಲ್ಲಿದೆ. ಆ ದಾನಿಯು ಭಿಕ್ಷುಕನನ್ನು, "ನಿನ್ನೆ ನಾನು ನಿನಗೆ ಕೊಟ್ಟದ್ದನ್ನು ಏನು ಮಾಡಿದೆ?" ಎಂದು ಕೇಳಿದರೆ ಅವನು, "ಅದು ನಿನ್ನೆಗೆ ಮುಗಿಯಿತು - ನಿನ್ನೆ ನೀವು ಕೊಟ್ಟದ್ದು ನಿನ್ನೆಯ ಅವಶ್ಯಕತೆಗೆ ಮಾತ್ರ ಸಾಕಾಯಿತು, ಮತ್ತು ಈಗ ನನಗೆ ಮತ್ತೆ ಹಣದ ಅವಶ್ಯಕತೆಯಿದೆ. ನನ್ನ ಬಳಿ ಒಂದು ಪೈಸೆಯೂ ಕೂಡ ಇಲ್ಲ. ನನಗೆ ಈಗ ಅವಶ್ಯಕತೆಯಿದೆ," ಎಂದು ಹೇಳುತ್ತಾನೆ.
"ನಮ್ಮ ಆತ್ಮಿಕ ಕೊರತೆಗಳ ಕುರಿತು ನಿರಂತರವಾಗಿ ಎಚ್ಚರಿಕೆಯಿಂದಿರುವುದೇ ಆತ್ಮದ ಬಡತನ ಎಂಬುದರ ಅರ್ಥವಾಗಿದೆ"
ಯಾವ ವ್ಯಕ್ತಿ "ಆತ್ಮದಲ್ಲಿ ಬಡವನಾಗಿರುತ್ತಾನೋ,"ಅವನು ದೇವರ ಬಳಿಗೆ ಬಂದು, "ಕರ್ತನೇ, ನಾನು ಕೊರತೆಯುಳ್ಳ ವ್ಯಕ್ತಿ," ಎಂದು ಅರಿಕೆ ಮಾಡುತ್ತಾನೆ. ಒಬ್ಬ ಭಿಕ್ಷುಕನು ಪ್ರತಿದಿನವೂ ತನ್ನ ದೈಹಿಕ ಅವಶ್ಯಕತೆಗಳಿಗಾಗಿ ಹೇಗೆ ಬೇಡುತ್ತಾನೋ, ಹಾಗೆಯೇ ಆತ್ಮದಲ್ಲಿ ಬಡವನಾದವನು ತನ್ನ ಆತ್ಮಿಕ ಕೊರತೆಯ ಬಗ್ಗೆ ಎಚ್ಚರಿಕೆ ವಹಿಸಿ, ಒಂದೊಂದು ದಿನವೂ ದೇವರ ಬಳಿಗೆ ಬರುತ್ತಾನೆ, ಮತ್ತು ತನ್ನ ಆತ್ಮಿಕ ಅವಶ್ಯಕತೆಯ ಪೂರೈಕೆಗಾಗಿ ಸಹಾಯವನ್ನು ಯಾಚಿಸುತ್ತಾನೆ.
ಜ್ಞಾನೋಕ್ತಿಗಳ ಪುಸ್ತಕದಲ್ಲಿ ಒಂದು ವಚನವು ಈ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತದೆ. ಜ್ಞಾನೋಕ್ತಿ. 8ನೇ ಅಧ್ಯಾಯವು ಜ್ಞಾನದ ಕುರಿತಾಗಿದೆ, ಮತ್ತು ಇಲ್ಲಿ (ಜ್ಞಾನೋಕ್ತಿ 8:12ರಿಂದ ಆರಂಭಿಸಿ) "ಜ್ಞಾನವೆಂಬ ನಾನು ..." ಕ್ರಿಸ್ತನೇ ಜ್ಞಾನವೆಂಬುದಾಗಿ ಚಿತ್ರೀಕರಿಸಲಾಗಿದೆ. ಆತನು ಮುಂದುವರಿಸುತ್ತಾ, ಜ್ಞಾನದ ಮೂಲಕವೇ ಜಗತ್ತು ಉಂಟಾಯಿತೆಂದು ಹೇಳುತ್ತಾನೆ. ಮತ್ತು ಜ್ಞಾನೋಕ್ತಿ 8:23ರಲ್ಲಿ, ಪ್ರಾರಂಭದಲ್ಲಿ ಭೂಮಿಯಾಗಲೀ ಬಯಲುಗಳಾಗಲೀ ಇತರ ಸೃಷ್ಟಿಯಾಗಲೀ ಸೃಷ್ಟಿಯಾಗುವುದಕ್ಕೆ ಮುಂಚೆ - ಅನಾದಿಕಾಲದಲ್ಲಿ ಆಕಾಶಮಂಡಲವನ್ನು ಸ್ಥಾಪಿಸಿದಾಗ (ವ. 27), ತಾನು ಇದ್ದೆನೆಂದು ಹೇಳುತ್ತಾನೆ. ಆದುದರಿಂದ ನಮಗೆ ಅವಶ್ಯಕವಾಗಿರುವುದು ಜ್ಞಾನವಾಗಿದೆ, ಮತ್ತು ಇಲ್ಲಿ (ವಚನ 34) ಹೇಳಿರುವ ಹಾಗೆ, "ನನ್ನ ದ್ವಾರಗಳ ಬಳಿ ಪ್ರತಿದಿನವೂ ಕಾಯುತ್ತಾ, ನನ್ನ ಮಾತುಗಳನ್ನು ಕೇಳುವವನು ಭಾಗ್ಯವಂತನು." ಈಗ ದೇವರ ದ್ವಾರಗಳ ಬಳಿ ಕಾಯುತ್ತಿರುವ ಆ ಭಿಕ್ಷುಕನ ಕುರಿತು ಆಲೋಚಿಸಿರಿ. ಒಬ್ಬ ಭಿಕ್ಷುಕನು ಹೇಗೆ ಆ ದಿನದ ಹಣದ ಕಾಣಿಕೆಗಾಗಿ ಕಾಯುತ್ತಿರುತ್ತಾನೋ, ಹಾಗೆಯೇ ನಾವು ಸಹ ಆತ್ಮದಲ್ಲಿ ಕಡುಬಡವರು ಅಥವಾ ದರಿದ್ರರಾಗಿ ಪ್ರತಿದಿನದ ಆಹಾರಕ್ಕಾಗಿ ದೇವರ ಮುಂದೆ ಬರಬೇಕಾಗಿದೆ.
ನಮಗೆ ಯಾವುದೇ ಕೊರತೆ ಇಲ್ಲವಾದರೆ, ನಾವು ಈ ಸ್ಥಿತಿಯಲ್ಲಿ ಬರುವುದನ್ನು ಇಷ್ಟಪಡುವುದಿಲ್ಲ. ಶ್ರೀಮಂತರು ಬೇರೆ ಜನರ ಮನೆಯ ಮುಂದೆ ಹೋಗಿ ಭಿಕ್ಷೆ ಬೇಡಲಾರರು; ಏಕೆಂದರೆ ಹಾಗೆ ಮಾಡುವುದು ಅವರಿಗೆ ಅವಮಾನಕರವಾಗಿದೆ. ಆದರೆ ಒಬ್ಬ ಭಿಕ್ಷುಕನಿಗೆ ಇದು ಅವಮಾನಕರವಲ್ಲ, ಏಕೆಂದರೆ ಅವನಿಗೆ ಕೊರತೆಯಿದೆ. ಅವನ ಬಳಿ ಊಟಕ್ಕಾಗಲೀ ಅಥವಾ ದಿನದ ಅವಶ್ಯಕತೆಗಾಗಲೀ ಹಣವಿಲ್ಲವೆಂಬುದು ಅವನಿಗೆ ಗೊತ್ತಿದೆ. ಒಬ್ಬ ವ್ಯಕ್ತಿಗೆ ತನ್ನ ದಿನನಿತ್ಯದ ಆತ್ಮಿಕ ಅವಶ್ಯಕತೆಯ ಅರಿವಿದ್ದರೆ ಮಾತ್ರ, ಆತನು ಪ್ರತಿದಿನವೂ ದೇವರ ಮುಂದೆ ಬಂದು, "ಕರ್ತನೇ, ನಾನೊಬ್ಬ ದರಿದ್ರನು. ದಯವಿಟ್ಟು ನನಗೆ ಈ ದಿನಕ್ಕಾಗಿ ಜ್ಞಾನವನ್ನು ದಯಪಾಲಿಸಿರಿ," ಎಂದು ಕೇಳಿಕೊಳ್ಳುತ್ತಾನೆ. ಜ್ಞಾನೋಕ್ತಿ 8:35ರಲ್ಲಿ ಹೇಳಿರುವಂತೆ, "ಯಾವನು ನನ್ನನ್ನು ಹೊಂದುತ್ತಾನೋ, ಅವನು ಜೀವವನ್ನು ಹೊಂದುತ್ತಾನೆ."
ಹಾಗಾಗಿ ಆತ್ಮದ ಬಡತನದ ಅರ್ಥ ಏನೆಂದರೆ: ಯಾವಾಗಲೂ ನಮ್ಮ ಆತ್ಮಿಕ ಕೊರತೆಯನ್ನು ಅರಿತಿರುವುದು. ಯಾವ ವ್ಯಕ್ತಿಯು ಸತತವಾಗಿ ತನ್ನ ಆತ್ಮಿಕ ಕೊರತೆಯ ಬಗ್ಗೆ ಅರಿವನ್ನು ಹೊಂದಿರುತ್ತಾನೋ ಮತ್ತು ಯಾವಾಗಲೂ ದೇವರಿಂದ ಜ್ಞಾನವನ್ನು ಬೇಡಿಕೊಳ್ಳುತ್ತಾನೋ, ಅವನು ದೇವರಿಂದ ಸಕಲ ಪರಲೋಕರಾಜ್ಯವನ್ನು ಪಡೆಯುತ್ತಾನೆ. ನೀನು ಪರಲೋಕರಾಜ್ಯವು ದೇವರ ರಾಜ್ಯದ ಸಮಸ್ತ ಸಂಪತ್ತು ಎಂಬುದಾಗಿ ತಿಳಿದುಕೊಂಡಲ್ಲಿ, ಎಫೆಸ 1:3ರಲ್ಲಿ ಸತ್ಯವೇದವು ತಿಳಿಸಿರುವಂತೆ, "ದೇವರು ಪರಲೋಕದಲ್ಲಿನ ಸಕಲ ಆತ್ಮೀಯ ವರಗಳನ್ನು ನಮಗೆ ಕ್ರಿಸ್ತ ಯೇಸುವಿನಲ್ಲಿ ಅನುಗ್ರಹಿಸಿದ್ದಾರೆ". ಪವಿತ್ರಾತ್ಮನ ಒಂದೊಂದು ವರವೂ ಪರಲೋಕದಲ್ಲಿ ಕ್ರಿಸ್ತನ ಮೂಲಕ ನಮ್ಮದಾಗಿದೆ. ನಾವು ಪರಲೋಕ ರಾಜ್ಯದ ಎಲ್ಲಾ ಆತ್ಮಿಕ ಆಶೀರ್ವಾದಗಳನ್ನು ಸಾವಿರ ಕೋಣೆಗಳನ್ನು ಹೊಂದಿರುವ ಪರಲೋಕದ ಒಂದು ಭವ್ಯ ಅರಮನೆಯಂತೆ ಭಾವಿಸಿಕೊಳ್ಳಬಹುದು. ಮತ್ತು ಆ ಅರಮನೆಯ ಎಲ್ಲಾ ಕೋಣೆಗಳನ್ನು ತೆರೆಯುವಂತ ಮುಖ್ಯ ಬೀಗದ ಕೈ ಯಾವುದೆಂದರೆ ಆತ್ಮದ ಬಡತನವಾಗಿದೆ. ಆತ್ಮದಲ್ಲಿ ಬಡವನಾಗಿರುವವನು ಧನ್ಯನು, ಯಾಕೆಂದರೆ ಆತನು ಇಡೀ ಪರಲೋಕ ರಾಜ್ಯವನ್ನು ಪಡೆದುಕೊಳ್ಳುವನು - ಅಂದರೆ ಆ ಭವ್ಯ ಅರಮನೆಯ ಒಂದೊಂದು ಕೋಣೆಯನ್ನು ಸಹ ಆತನು ಹೊಂದಿಕೊಳ್ಳಬಹುದು. ಆತನು ಆ ಬೀಗದ ಕೈಯನ್ನು ಭದ್ರವಾಗಿ ಹಿಡಿದುಕೊಂಡಲ್ಲಿ, ಪ್ರತಿಯೊಂದು ಕೋಣೆಗಳಲ್ಲಿರುವ ನಿಧಿಯೂ ಆತನದ್ದಾಗಿದೆ.