WFTW Body: 

ನಾವು ಆದಿಕಾಂಡ 32:29ರಲ್ಲಿ ಓದುವುದು ಏನೆಂದರೆ, "ಅಲ್ಲಿ ದೇವರು ಯಾಕೋಬನನ್ನು ಆಶೀರ್ವದಿಸಿದರು". ಆ ಸ್ಥಳದಲ್ಲಿ - ’ಪೆನೀಯೇಲ್’ನಲ್ಲಿ - ದೇವರು ಯಾಕೋಬನನ್ನು ಆಶೀರ್ವದಿಸಲು ನಾಲ್ಕು ಕಾರಣಗಳಿವೆ.

1. ದೇವರೊಂದಿಗೆ ಒಬ್ಬಂಟಿಗನಾಗಿದ್ದನು

ಯಾಕೋಬನು ದೇವರೊಂದಿಗೆ ’ಒಂಟಿಗನಾಗಿ ಇದ್ದ’ ಸ್ಥಳದಲ್ಲಿ ಆಶೀರ್ವಾದವನ್ನು ಪಡೆದನು. ಆತನು ಮಿಕ್ಕವರನ್ನೆಲ್ಲ ಕಳುಹಿಸಿಕೊಟ್ಟ ನಂತರ, ತಾನು ಒಂಟಿಯಾಗಿ ಉಳಿದನು (ಆದಿಕಾಂಡ 32:24). 20ನೇ ಶತಮಾನದ ವಿಶ್ವಾಸಿಗಳಿಗೆ ದೇವರೊಂದಿಗೆ ಒಂಟಿಯಾಗಿ ಬಹಳ ಸಮಯವನ್ನು ಕಳೆಯುವುದು ಕಷ್ಟವೆನಿಸುತ್ತದೆ. ನಮ್ಮಲ್ಲಿ ಹೆಚ್ಚಿನವರಲ್ಲಿ ಇಂಟರ್ನೆಟ್-ಯುಗದ ಆತ್ಮವು ತುಂಬಿದೆ ಮತ್ತು ನಾವು ಹಗಲು-ರಾತ್ರಿ ಬಿಡುವಿಲ್ಲದೆ ಒಂದಲ್ಲ ಒಂದು ಕಾರ್ಯದಲ್ಲಿ ತೊಡಗಿರುತ್ತೇವೆ. ಈ ಸಮಸ್ಯೆ ನಮ್ಮ ಮನೋಭಾವಕ್ಕೆ ಅಥವಾ ಸಂಸ್ಕೃತಿಗೆ ಸಂಬಂಧಿಸಿದಂತದ್ದು ಅಲ್ಲ. ಸಮಸ್ಯೆ ಇಷ್ಟು ಮಾತ್ರ - ನಾವು ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು ಕಲಿತುಕೊಂಡಿಲ್ಲ. ಒಂದು ಸಲ ಯೇಸುವು ತೋರಿಸಿಕೊಟ್ಟಂತೆ, ಒಬ್ಬ ವಿಶ್ವಾಸಿಗೆ ಬೇಕಾಗಿರುವ ಒಂದು ಸಂಗತಿ, ಕರ್ತನ ಪಾದದ ಬಳಿ ಕೂತುಕೊಂಡು ಆತನ ವಾಕ್ಯವನ್ನು ಕೇಳುವುದು (ಲೂಕ. 10:42) . ಆದರೆ ಈ ದಿನ ನಾವು ಈ ಮಾತನ್ನು ನಂಬುವುದಿಲ್ಲ, ಹಾಗಾಗಿ ನಾವು ಯೇಸುವಿನ ಮಾತನ್ನು ಕಡೆಗಣಿಸಿ, ಅದರ ಪರಿಣಾಮವಾಗಿ ಉಂಟಾಗುವ ದುರಂತಕಾರಿ ಫಲಿತಾಂಶದಿಂದ ನರಳುತ್ತೇವೆ. ನಾವು ಎಲ್ಲಾ ವೇಳೆಯಲ್ಲಿ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿದ್ದರೆ ಮತ್ತು ಉಪವಾಸ ಹಾಗೂ ಪ್ರಾರ್ಥನೆಯ ಮೂಲಕ ’ದೇವರೊಂದಿಗೆ ಏಕಾಂತದಲ್ಲಿ ಇರುವುದು’ ಎಂದರೆ ಏನೆಂದು ನಮಗೆ ಗೊತ್ತಿರದಿದ್ದರೆ, ನಾವು ನಿಶ್ಚಯವಾಗಿ ದೇವರ ಬಲ ಅಥವಾ ಆಶೀರ್ವಾದವನ್ನು ಅರಿಯುವುದಿಲ್ಲ - ನಾನು ದೇವರ ನಿಜವಾದ ಬಲದ ಕುರಿತಾಗಿ ಹೇಳುತ್ತಿದ್ದೇನೆ (ಅನೇಕರು ಬಡಾಯಿ ಕೊಚ್ಚಿಕೊಳ್ಳುವ ಕಳಪೆ ಸಂಗತಿಯ ಕುರಿತು ಅಲ್ಲ).

2. ದೇವರಿಂದ ಮುರಿಯಲ್ಪಟ್ಟಿದ್ದನು

ಯಾಕೋಬನು ಆಶೀರ್ವದಿಸಲ್ಪಟ್ಟದ್ದು ಆತನು ಸಂಪೂರ್ಣವಾಗಿ ’ಮುರಿಯಲ್ಪಟ್ಟ’ ಸ್ಥಳದಲ್ಲಿ. ಪೆನೀಯೇಲಿನಲ್ಲಿ, ಒಬ್ಬ ದೇವ-ಪುರುಷನು ಯಾಕೋಬನೊಂದಿಗೆ ಕುಸ್ತಿ ಹೋರಾಟ ಮಾಡಿದನು. ಇಪ್ಪತ್ತು ವರ್ಷಗಳಿಂದ ದೇವರು ಯಾಕೋಬನೊಂದಿಗೆ ಹೋರಾಡುತ್ತಲೇ ಇದ್ದರು, ಆದರೆ ಯಾಕೋಬನು ತನ್ನ ಛಲವನ್ನು ಬಿಟ್ಟಿರಲಿಲ್ಲ. ದೇವರು ಅವನಿಗೆ ತೋರಿಸಲು ಪ್ರಯತ್ನಿಸುತ್ತಿದ್ದುದು ಏನೆಂದರೆ, ಅವನು ಜಾಣತನದಿಂದ ಚತುರ ಯೋಜನೆಗಳನ್ನು ಹಾಕಿಕೊಂಡರೂ, ಅವನು ಕೈ ಹಾಕಿದ ಕಾರ್ಯಗಳೆಲ್ಲವೂ ಸೋಲಿನಲ್ಲಿ ಕೊನೆಗೊಂಡಿದ್ದವು. ಆದರೆ ಯಾಕೋಬನು ಇನ್ನೂ ಹಟಮಾರಿಯಾಗಿದ್ದನು. ಕೊನೆಗೆ ದೇವರು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ತೊಡೆಯ ಕೀಲು ತಪ್ಪಿತು (ಆದಿ. 32:25) . ಮಾನವನ ದೇಹದಲ್ಲಿ ತೊಡೆಯು ಅತ್ಯಂತ ಬಲಿಷ್ಟವಾದ ಭಾಗವಾಗಿದೆ, ಮತ್ತು ದೇವರು ಆ ಭಾಗವನ್ನು ಮುರಿದರು.

3. ದೇವರಿಗಾಗಿ ಹಸಿದಿದ್ದನು

ಯಾಕೋಬನು ಆಶೀರ್ವದಿಸಲ್ಪಟ್ಟದ್ದು ಆತನು ತೀವ್ರಾಸಕ್ತಿಯಿಂದ ’ದೇವರಿಗಾಗಿ ಹಸಿದಿದ್ದ’ ಸ್ಥಳದಲ್ಲಿ. "ನೀನು ನನ್ನನ್ನು ಆಶೀರ್ವದಿಸಿದ ಹೊರತು ನಿನ್ನನ್ನು ಬಿಡುವುದಿಲ್ಲ," ಎಂದು ಅವನು ಕೂಗಿಕೊಂಡನು (ಆದಿ. 32:26). ಈ ಮಾತನ್ನು ಯಾಕೋಬನ ಬಾಯಿಂದ ಕೇಳಿಸಿಕೊಳ್ಳಲು ದೇವರು ಹಿಂದಿನ ಇಪ್ಪತ್ತು ವರ್ಷಗಳಿಂದ ಎಷ್ಟೋ ಉತ್ಸುಕರಾಗಿ ಕಾದಿದ್ದರು. ಚೊಚ್ಚಲತನದ ಹಕ್ಕು, ಸ್ತ್ರೀಯರು, ಹಣ ಮತ್ತು ಆಸ್ತಿ, ಇವೆಲ್ಲವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾ ತನ್ನ ಇಡೀ ಜೀವಿತವನ್ನು ಕಳೆದಿದ್ದ ಈತನು, ಈಗ ಅವೆಲ್ಲವನ್ನು ಬಿಟ್ಟು ದೇವರನ್ನು ಹಿಡಿದುಕೊಂಡನು. ದೇವರು ಈ ಕಾರ್ಯವನ್ನು ಸಾಧಿಸುವ ಉದ್ದೇಶದಿಂದ ಯಾಕೋಬನನ್ನು ಬಹಳಷ್ಟು ಸಮಯದಿಂದ ಸಜ್ಜುಗೊಳಿಸುತ್ತಿದ್ದರು. ಕೊನೆಗೆ, ಕ್ಷಣಿಕ ಲೌಕಿಕ ಸಂಗತಿಗಳನ್ನು ತ್ಯಜಿಸಿ, ಸ್ವತಃ ದೇವರು ಮತ್ತು ಅವರ ಆಶೀರ್ವಾದಕ್ಕಾಗಿ ಹಾತೊರೆದ ಯಾಕೋಬನನ್ನು ನೋಡಿದ ದೇವರ ಹೃದಯವು ಸಂತೋಷದಿಂದ ಅರಳಿರಬೇಕು. ಆ ರಾತ್ರಿ ಯಾಕೋಬನು ಪೆನೀಯೇಲಿನಲ್ಲಿ ’ಅಳುತ್ತಾ ದೇವರ ಕೃಪೆಯನ್ನು ಬೇಡಿಕೊಂಡನು’, ಎಂದು ನಮಗೆ ’ ಹೋಶೇಯ 12:4'ರಲ್ಲಿ ತಿಳಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಕೇವಲ ಲೌಕಿಕ ಸಂಗತಿಗಳಿಗಾಗಿ ಹೆಣಗುತ್ತಿದ್ದ ಈತನು, ಆ ರಾತ್ರಿ ಎಷ್ಟು ಬದಲಾಗಿದ್ದನು. ದೇವರ ಹಲವು ವರ್ಷಗಳ ಪ್ರಯತ್ನ ಕೊನೆಗೂ ಆತನಲ್ಲಿ ಸಫಲವಾಯಿತು!

4. ದೇವರ ಮುಂದೆ ಯಥಾರ್ಥನಾಗಿದ್ದನು

ಯಾಕೋಬನು ’ದೇವರೊಂದಿಗೆ ಯಥಾರ್ಥನಾಗಿ ನಡೆದುಕೊಂಡ’ ಸ್ಥಳದಲ್ಲಿ ಆಶೀರ್ವದಿಸಲ್ಪಟ್ಟನು. ದೇವರು ಆತನನ್ನು, "ನಿನ್ನ ಹೆಸರೇನು?" ಎಂದು ಪ್ರಶ್ನಿಸುತ್ತಾರೆ. ಇಪ್ಪತ್ತು ವರ್ಷಗಳ ಹಿಂದೆ, ಆತನ ತಂದೆಯು ಇದೇ ಪ್ರಶ್ನೆಯನ್ನು ಕೇಳಿದಾಗ, ಆತನು "ನಾನು ಏಸಾವನು" ಎಂದು ಉತ್ತರಿಸಿದ್ದನು (ಆದಿ. 27:19). ಆದರೆ ಈಗ ಆತನು ಪ್ರಾಮಾಣಿಕನಾಗಿ ಉತ್ತರಿಸುತ್ತಾನೆ. "ನಾನು ಯಾಕೋಬನು, ಕರ್ತನೇ," ಎಂದು ಅವನು ಹೇಳುತ್ತಾನೆ - ಆ ಮಾತಿನ ಅರ್ಥ, "ಕರ್ತನೇ, ನಾನೊಬ್ಬ ದೋಚಿಕೊಳ್ಳುವವನು, ವಂಚಕನು ಮತ್ತು ಚೌಕಾಸಿ ಮಾಡುವ ಮನುಷ್ಯನು." ಈಗ ಯಾಕೋಬನಲ್ಲಿ ವಂಚನೆಯ ಸ್ವಭಾವ ಇರಲಿಲ್ಲ. ಈಗ ದೇವರು ಅವನನ್ನು ಹರಸಲು ಸಾಧ್ಯವಾಯಿತು. ಯಾಕೋಬನು ಯಥಾರ್ಥನಾದಾಗ, ನಟನೆಯ ಸೋಗನ್ನು ಬಿಟ್ಟುಬಿಟ್ಟಾಗ, ಅವನು ದೇವರ ಮುಂದೆ, "ಕರ್ತನೇ, ನಾನೊಬ್ಬ ಕಪಟಿ ಮನುಷ್ಯನು. ನನ್ನ ಜೀವನದಲ್ಲಿ ನಾಚಿಗೆ ಪಡುವಂತ ಸುಳ್ಳು ಪ್ರದರ್ಶನ ಇದೆ," ಎಂದು ತಪ್ಪೊಪ್ಪಿಕೊಂಡಾಗ - ಆ ಕ್ಷಣದಲ್ಲಿ - ದೇವರು ಅವನನ್ನು ಆಶೀರ್ವದಿಸಿದರು. ಒಬ್ಬ ಮನುಷ್ಯನು ಸಂಪೂರ್ಣವಾಗಿ ಮುರಿಯಲ್ಪಟ್ಟಾಗ ಮಾತ್ರವೇ ಪೂರ್ಣ ಹೃದಯದಿಂದ ಇದನ್ನು ಒಪ್ಪಿಕೊಳ್ಳುತ್ತಾನೆ, ಎಂದು ನಾನು ಹೇಳುತ್ತೇನೆ. ಅನೇಕ ಕ್ರೈಸ್ತ ಮುಖಂಡರು ತೋರಿಕೆಯ ದೀನತೆಯಿಂದ ಇಂತಹ ಮಾತುಗಳನ್ನು ಆಡುತ್ತಾರೆ - ’ದೀನ ಮನುಷ್ಯನು’ ಎಂಬ ಹೆಸರನ್ನು ಗಳಿಸುವದೇ ಅವರ ಉದ್ದೇಶವಾಗಿದೆ. ನಾನು ಇಂತಹ ಅಸಹ್ಯಕರ ಪ್ರದರ್ಶನದ ಕುರಿತಾಗಿ ಹೇಳುತ್ತಿಲ್ಲ. ನಿಜವಾಗಿ ಮುರಿಯಲ್ಪಟ್ಟು ಪಶ್ಚಾತ್ತಾಪ ಪಡುತ್ತಿರುವ ಪ್ರಾಮಾಣಿಕ ಹೃದಯದ ಕುರಿತಾಗಿ ನಾನು ಪ್ರಸ್ತಾಪಿಸುತ್ತಿದ್ದೇನೆ. ಅದು ಬಹಳ ಬೆಲೆಬಾಳುವಂತದ್ದು. ನಮ್ಮೆಲ್ಲರಲ್ಲಿ ಸಾಕಷ್ಟು ಮುಚ್ಚುಮರೆ ಮತ್ತು ತೋರಿಕೆ ಇದೆ. ನಮ್ಮಲ್ಲಿ ನಿಜವಾದ ಪರಿಶುದ್ಧತೆ ಇಲ್ಲದಿರುವಾಗ, ನಾವು ಪರಿಶುದ್ಧ ಮನುಷ್ಯರಂತೆ ತೋರಿಕೆ ಮಾಡುವುದನ್ನು ದಯೆಯುಳ್ಳ ದೇವರು ಕ್ಷಮಿಸಲಿ. ನಾವು ಯಥಾರ್ಥತೆ ಮತ್ತು ಪ್ರಾಮಾಣಿಕತೆ ಹಾಗೂ ತೆರೆದ ಮನಸ್ಸನ್ನು ಹೊಂದುವಂತೆ ಹೃತ್ಪೂರ್ವಕವಾಗಿ ಹಾತೊರೆಯೋಣ, ಮತ್ತು ಹಾಗೆ ಮಾಡಿದಾಗ ನಮ್ಮ ಜೀವನದಲ್ಲಿ ದೇವರು ಅಪರಿಮಿತವಾದ ಅಶೀರ್ವಾದವನ್ನು ಉಂಟುಮಾಡುವರು.