ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ನಾವು ಕರ್ತನಿಂದ ಆಶೀರ್ವಾದವನ್ನು ಹೊಂದುವುದಕ್ಕಾಗಿ ಮತ್ತು ಅದರ ಮೂಲಕ ನಾವು ಲೋಕದಲ್ಲಿ ಭೇಟಿಯಾಗುವ ಪ್ರತಿಯೊಂದು ಕುಟುಂಬಕ್ಕೆ (ಮತ್ತು ವ್ಯಕ್ತಿಗೆ) ಆಶೀರ್ವಾದ ನಿಧಿಯಾಗಲು ಕರೆಯಲ್ಪಟ್ಟಿದ್ದೇವೆ. ಗಲಾತ್ಯದವರಿಗೆ 3:13,14 ರಲ್ಲಿ ಹೇಳಿರುವಂತೆ, ಅಬ್ರಹಾಮನಿಗೆ ಉಂಟಾದ ಆಶೀರ್ವಾದವು ಪವಿತ್ರಾತ್ಮನ ವರದ ಮೂಲಕ ನಮಗೂ ಸಹ ದೊರಕುವುದಕ್ಕಾಗಿ ಕ್ರಿಸ್ತನು ನಮ್ಮ ನಿಮಿತ್ತ ಶಿಲುಬೆಯ ಮೇಲೆ ಶಾಪಗ್ರಸ್ತನಾದನು. ಆ ಆಶೀರ್ವಾದವು ಆದಿಕಾಂಡ 12:2,3 ರಲ್ಲಿ ಕಂಡುಬರುತ್ತದೆ; ಅಲ್ಲಿ ದೇವರು ಅಬ್ರಹಾಮನಿಗೆ "ನಾನು ನಿನ್ನನ್ನು ಆಶೀರ್ವದಿಸುತ್ತೇನೆ, ಮತ್ತು ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದ ಉಂಟಾಗುವುದು," ಎಂದು ನುಡಿದರು. ಅದಕ್ಕಾಗಿಯೇ ನಾವು ನಿರಂತರವಾಗಿ ಪವಿತ್ರಾತ್ಮನಿಂದ ತುಂಬಿಸಲ್ಪಡುವಂತೆ ನಾವು ದೇವರನ್ನು ಕೇಳಿಕೊಳ್ಳುತ್ತೇವೆ.

ಇದು ನಿಮ್ಮ ಬಾಧ್ಯತೆಯಾಗಿದೆ. ಹಾಗಾಗಿ ಇದನ್ನು ಕೇಳಿ ಪಡದುಕೊಳ್ಳಿರಿ ಮತ್ತು ಎಲ್ಲಾ ವೇಳೆಯಲ್ಲಿ ಅದರಲ್ಲಿ ಜೀವಿಸಿರಿ. ನೀವು ಯಾವಾಗಲೂ ಪಾಪಕ್ಕಾಗಿ ಮಾನಸಾಂತರಪಟ್ಟು, ಅದನ್ನು ಅರಿಕೆಮಾಡುತ್ತಾ ಒಳ್ಳೇ(ಶುದ್ಧ) ಮನಸ್ಸಾಕ್ಷಿಯನ್ನು ಇರಿಸಿಕೊಂಡು, ಆಶೀರ್ವಾದ ಹರಿದು ಬರುವ ಕಾಲುವೆಗೆ ತಡೆ ಉಂಟಾಗದಂತೆ ನೋಡಿಕೊಳ್ಳಿರಿ.

ದೇವರು ಮೊದಲನೆಯದಾಗಿ ಮಾಡ ಬಯಸುವುದು ಏನೆಂದರೆ, ನಿಮ್ಮ ಪ್ರತಿಯೊಂದು ಕಾರ್ಯದಲ್ಲಿ - ಆತ್ಮಿಕತೆ, ಭೌತಿಕತೆ, ದೈಹಿಕವಾಗಿ, ಶೈಕ್ಷಣಿಕ, ಹಾಗೂ ಉದ್ಯೋಗ ಮತ್ತು ಇತರ ನಿಮ್ಮ ಎಲ್ಲದರಲ್ಲೂ - ನಿಮ್ಮನ್ನು ಆಶೀರ್ವದಿಸುವುದು. ದೇವರ ವಾಗ್ದಾನಗಳು ಹೀಗಿವೆ: "ನಿನ್ನ ಕಾರ್ಯವೆಲ್ಲವೂ ಸಫಲವಾಗುತ್ತದೆ" (ಕೀರ್ತನೆಗಳು 1:3) ಮತ್ತು "ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವೆ" (ಯೆಹೋಶುವನು 1:8). ಹೊಸ ಒಡಂಬಡಿಕೆಯ ಈ ದಿನಗಳಲ್ಲಿ, ನೀನು ದೇವರ ಆಶೀರ್ವಾದದ ಮೂಲಕ ಮೊದಲು ನಿನ್ನ ಆತ್ಮಿಕ ಜೀವನದಲ್ಲಿ, ಮತ್ತು ನಂತರ ಲೌಕಿಕ ಸಂಗತಿಗಳಲ್ಲೂ ಸಮೃದ್ಧನಾಗಬೇಕೆಂದು ಮತ್ತು ಸಫಲನಾಗಬೇಕೆಂದು ದೇವರ ಇಚ್ಛೆಯಾಗಿದೆ; ಹಳೆಯ ಒಡಂಬಡಿಕೆಯ ಕಾಲದ ಜನರಿಗೆ ಕೊಡಲ್ಪಟ್ಟಿದ್ದ ಕೇವಲ ಭೌತಿಕ ಸಂಗತಿಗಳ ಆಶೀರ್ವಾದಕ್ಕಿಂತ ಇದು ವಿಭಿನ್ನವಾಗಿದೆ.

"ದೇವರು ನಿಮ್ಮ ಜೀವಿತದ ಮೂಲಕ ಇತರರನ್ನು ಆಶೀರ್ವದಿಸಲು ಬಯಸುತ್ತಾರೆ "

ಎರಡನೆಯದಾಗಿ, ದೇವರು ನಿಮ್ಮ ಜೀವಿತದ ಮೂಲಕ ಇತರರನ್ನು ಆಶೀರ್ವದಿಸಲು ಇಚ್ಛಿಸುತ್ತಾರೆ. ಇತರರು ನಿಮ್ಮಲ್ಲಿ ದೇವರ ಜೀವಿತದ ಯಾವುದೋ ಅಂಶವನ್ನು ರುಚಿಸಿ ನೋಡಲು ಸಾಧ್ಯವಾಗಬೇಕು. ಇದರ ಪರಿಣಾಮವಾಗಿ ನೀವು ಕೆಲವರಿಗೆ "ಜೀವದ ಪರಿಮಳ"ವಾದರೆ, ಇನ್ನು ಕೆಲವರಿಗೆ (ದೇವರನ್ನು ತ್ಯಜಿಸುವವರಿಗೆ), ನೀವು "ಮರಣದ ವಾಸನೆ"ಯಾಗುತ್ತೀರಿ (2 ಕೊರಿ. 2:16).

ಇವೆಲ್ಲವೂ ನೆರವೇರಬೇಕಾದರೆ, ನೀವು ಯಾವಾಗಲೂ ಹೆಚ್ಚಿನ ಉತ್ಸುಕತೆಯಿಂದ ಪವಿತ್ರಾತ್ಮನ ತುಂಬುವಿಕೆಗಾಗಿ ತವಕಿಸಬೇಕು.

ನಮ್ಮ ಇಹಲೋಕದ ಉದ್ಯೋಗವು, ನಮ್ಮ ಜೀವನದ ಅವಶ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಮಾತ್ರ, ಹೀಗಿರಲಾಗಿ, ನಾವು ಯಾರ ಮೇಲೂ ಹಣಕಾಸಿನ ವಿಷಯದಲ್ಲಿ ಅವಲಂಬಿತರಾಗದೇ, ನಾವು ಕರ್ತನಿಗೆ ಸೇವೆ ಮಾಡಬಹುದಾಗಿದೆ. ಆದರೆ ನಮ್ಮ ಲೌಕಿಕ ಜೀವಿತದ ಅಲ್ಪಾವಧಿಯಲ್ಲಿ ನಾವು ಸಾಧ್ಯವಾದಷ್ಟು ಜನರಿಗೆ ಆಶೀರ್ವಾದ ನಿಧಿಯಾಗಿರುವ ಬಯಕೆ ನಮ್ಮಲ್ಲಿರಬೇಕು.

ಭಾರತದ ಪ್ರಸಿದ್ಧ ಬೋಧಕರು ಸಾಮಾನ್ಯವಾಗಿ ಮಹಾನಗರಗಳಲ್ಲಿ ಮಾತ್ರ ಬೋಧಿಸುತ್ತಾರೆ. ಅವರು ಹಳ್ಳಿಯ ಸರಳ, ಬಡ (ಮತ್ತು ಅನಕ್ಷರಸ್ಥ) ಜನರೊಂದಿಗೆ ಬೆರೆಯುವ ಅವಕಾಶವನ್ನು ಹುಡುಕುವುದೇ ಇಲ್ಲ. ಹಾಗಿರುವಾಗ ದೇವರು ನಮಗೆ ಭಾರತದ ಹಳ್ಳಿಗಳ ಬಡಜನರ ಸೇವೆಯ ಸುಯೋಗವನ್ನು ಮತ್ತು ಗೌರವವನ್ನು ಕೊಟ್ಟಿದ್ದಾರೆಂದು ನಾನು ಸಂತೋಷಿಸುತ್ತೇನೆ. ನಾನು ಅಲ್ಲಿ ಜಯದ ಜೀವಿತದ ಶುಭಸಂದೇಶವನ್ನು ಸಾರಿದ್ದೇನೆ - ಮತ್ತು ಆ ಹಳ್ಳಿಗಳಲ್ಲಿ ಕರ್ತನು ಸಭೆಗಳನ್ನು ನೆಟ್ಟಿದ್ದಾನೆ. ಮತ್ತು ನನ್ನ ಪತ್ನಿಯು ಅಲ್ಲಿ ಬಡ ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದಾಳೆ. ನಾವಿಬ್ಬರೂ ಈ ಜನರ ಸೇವೆಯ ಮೂಲಕ ಅಪಾರ ಆಶೀರ್ವಾದವನ್ನು ಹೊಂದಿದ್ದೇವೆ.

ದೇವರು ನಮ್ಮ ಸಂದೇಶಗಳನ್ನು ಮತ್ತು ನಮ್ಮ ಲೇಖನಗಳನ್ನು ಎಷ್ಟೋ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿದ್ದಾರೆ ಎಂಬುದನ್ನು ನೋಡುವಾಗ ಇದೊಂದು ವಿಸ್ಮಯವೇ ಸರಿ. ಅವುಗಳು ಪ್ರಪಂಚದ ಎಲ್ಲಾ ಮೂಲೆಗಳಿಗೆ - ಭೂಲೋಕದ ಕಟ್ಟಕಡೆಯ ವರೆಗೆ - ತಲುಪಿವೆ (ಅ.ಕೃತ್ಯಗಳು 1:8). ಅನೇಕ ಬೋಧಕರು ಸಹ ಅವರವರ ಸಭೆಗಳಲ್ಲಿ ತಾವು ಕೊಡುವ ಸಂದೇಶಗಳಲ್ಲಿ ನಮ್ಮ ಪುಸ್ತಕಗಳು ಮತ್ತು ಸಂದೇಶಗಳಲ್ಲಿ ಇರುವ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಹೀಗೆ ದೇವರ ವಾಕ್ಯವು ಇನ್ನಷ್ಟು ಹರಡಿ, ನಾನು ಹೋಗಲು ಅಸಾಧ್ಯವಾದ ಸಭೆಗಳನ್ನು ತಲುಪುತ್ತಿದೆ. ಕರ್ತರಿಗೆ ಸ್ತೋತ್ರವಾಗಲಿ. ಜನರು ನಮ್ಮ ಸಂದೇಶಗಳ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅವುಗಳ ಮೂಲಕ ಹಣ ಸಂಪಾದನೆ ಮಾಡಲು ಪ್ರಯತ್ನಿಸದಿದ್ದರೆ, ಅವೆಲ್ಲವನ್ನು ಧಾರಾಳವಾಗಿ ಉಪಯೋಗಿಸುವಂತೆ ನಾವು ಅವರನ್ನು ಪ್ರೋತ್ಸಾಹಿಸಿದ್ದೇವೆ.

ದೇವರಾತ್ಮನ ನಿರಂತರ ಅಭಿಷೇಕಕ್ಕಾಗಿ ಮತ್ತು ಪ್ರವಾದನೆಯ ವರಕ್ಕಾಗಿ ("ಕೇಳುಗರ ಅವಶ್ಯಕತೆಗೆ ತಕ್ಕಂತೆ ದೇವರ ವಾಕ್ಯವನ್ನು ಬೋಧಿಸುವ ಸಾಮರ್ಥ್ಯ") ಕರ್ತನನ್ನು ಬೇಡಿಕೊಳ್ಳಿರಿ. ಪ್ರವಾದನೆಯ ವರವನ್ನು ಅಪೇಕ್ಷಿಸುವುದು ಅಹಂಕಾರವೆಂದು ಯೋಚಿಸಬೇಡಿರಿ. ಸೈತಾನನು ಜನರನ್ನು ಈ ರೀತಿಯಾಗಿ ಮರುಳು ಮಾಡುತ್ತಾನೆ. "ಪ್ರವಾದಿಸುವ ವರವನ್ನು ಆಸಕ್ತಿಯಿಂದ ಅಪೇಕ್ಷಿಸಿರಿ," ಎಂದು ಪವಿತ್ರಾತ್ಮನು ಪ್ರತಿಯೊಬ್ಬ ವಿಶ್ವಾಸಿಯನ್ನು ಒತ್ತಾಯಿಸುತ್ತಾನೆ (1 ಕೊರಿ. 14:1). ಹಾಗಾಗಿ ಈ ವರವನ್ನು ಕೇಳಿಕೊಳ್ಳಿರಿ. ನೀವು ಯಾವುದೇ ಅವಶ್ಯಕ ಸಂಗತಿಗಾಗಿ ದೇವರನ್ನು ಕೇಳಿಕೊಳ್ಳದಿದ್ದಲ್ಲಿ - ಅದು ಯಾವುದೇ ವಿಷಯವಾಗಿರಲಿ - ಅದು ನಿಮಗೆ ದೊರಕುವುದಿಲ್ಲ. ಲೌಕಿಕ ಅವಶ್ಯಕತೆಗಳಿಗಾಗಿ, ಬುದ್ಧಿಶಕ್ತಿಗಾಗಿ, ನಿಮ್ಮ ನೌಕರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯ ಪರಿಹಾರಕ್ಕಾಗಿ, ಅಥವಾ ಸಾಮಾನ್ಯವಾಗಿ ಯಾವುದೇ ಸಮಸ್ಯೆಯ ಕುರಿತಾಗಿ - ನೀವು ಧೈರ್ಯವಾಗಿ ಕೇಳಿಕೊಳ್ಳಬೇಕು. ನಾವು ಕಷ್ಟಗಳನ್ನು ಎದುರಿಸುವುದನ್ನು ದೇವರು ಅನುಮತಿಸುವುದಕ್ಕೆ ಕಾರಣ, ನಾವು ದೇವರ ಬಳಿಗೆ ಹೋಗಿ, ಅವರ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕೆಂಬ ಉದ್ದೇಶದಿಂದ. ಯೇಸುವು ಶಾಂತವಾಗಿಸುವ ಯಾವುದೇ ಬಿರುಗಾಳಿಯನ್ನು ನಾವು ಎದುರಿಸದೇ ಇದ್ದರೆ, ಅದು ಎಂತಹ ನೀರಸ ಅಥವಾ ಬೇಸರದ ಜೀವನವಾಗುತ್ತದೆ! ಹಾಗಾಗಿ ಕೇಳಿಕೊಳ್ಳಿರಿ - ಮತ್ತು ಕೇಳಿಕೊಳ್ಳುತ್ತಲೇ ಮುಂದುವರಿದು ಪರಿಪೂರ್ಣ ಆನಂದವನ್ನು ಹೊಂದಿರಿ.