ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಶಿಷ್ಯಂದಿರಿಗೆ
WFTW Body: 

ವಿಮೋಚನಕಾಂಡ 25:8ರಲ್ಲಿ ದೇವರು, ತಾನು ಮಾನವನೊಂದಿಗೆ ನೆಲೆಸಲು ಇಚ್ಛಿಸುವೆನು, ಎಂಬ ತನ್ನ ಚಿತ್ತವನ್ನು ಮೊದಲ ಬಾರಿಗೆ ಪ್ರಕಟಿಸುವದನ್ನು ನಾವು ಕಾಣುತ್ತೇವೆ. ಅಲ್ಲಿ ದೇವರು ಹೇಳುವ ಮಾತು, "ನಾನು ಅವರ ಮಧ್ಯದಲ್ಲಿ ವಾಸಿಸುವದಕ್ಕೆ ನನಗೆ ಒಂದು ದೇವಸ್ಥಾನವನ್ನು ಕಟ್ಟಿಸಬೇಕು". ಇದು ದೇವರ ಗುಡಾರ ಹಾಗೂ ಅದರ ಮೇಲೆ ನೆಲೆಸಿದ್ದ ದೇವರ ಅಗ್ನಿಯ ಬಗ್ಗೆ ಹೇಳುತ್ತದೆ - ಈ ದೇವರ ತೇಜಸ್ಸು ಲೋಕದ ಅನ್ಯಜನರಿಂದ ಆ ಇಸ್ರಾಯೇಲ್ಯರು ವಿಭಿನ್ನರಾಗಿದ್ದರು ಎಂಬುದಾಗಿ ಸೂಚಿಸಿತು. ಆ ಗುಡಾರದಲ್ಲಿನ ಬಹಳ ಮುಖ್ಯ ಅಂಶ ಯಾವುದೆಂದರೆ, ಅದರ ಮೇಲೆ ನೆಲೆಸಿದ್ದ ದೇವರ ತೇಜಸ್ಸು (ಅಗ್ನಿ) ಆಗಿತ್ತು - ಮತ್ತು ಇದು ಆತನು ತನ್ನ ಜನರ ಮಧ್ಯೆ ಇರುವದನ್ನು ಸೂಚಿಸುತ್ತಿತ್ತು. ನಾವು ಮಾಡಬೇಕಾದ ಬಹಳ ಮುಖ್ಯವಾದ ಕಾರ್ಯ ಯಾವುದೆಂದರೆ, ನಮ್ಮ ಮನೆಯನ್ನು ದೇವರು ನೆಲೆಸುವ ತಾಣವಾಗಿ ಮಾಡುವದು - ಒಬ್ಬರನ್ನೊಬ್ಬರು ಸಂತೋಷಗೊಳಿಸುವ ಸ್ಥಳವಾಗಿ ಅಲ್ಲ. ಒಬ್ಬರನ್ನೊಬ್ಬರು ಸಂತೋಷ ಪಡಿಸುವದು ಒಳ್ಳೆಯದೇನೋ ಹೌದು; ಇತರ ಜನರನ್ನು ಆಶೀರ್ವದಿಸುವ ಸ್ಥಳವಾಗಿಯೂ ಅಲ್ಲ, ಇತರರು ಆಶೀರ್ವಾದ ಹೊಂದುವದು ಒಳ್ಳೆಯದು, ಹೌದು; ಎಲ್ಲಕ್ಕಿಂತ ಮುಖ್ಯವಾಗಿ ಅದು ದೇವರ ಸಾನ್ನಿಧ್ಯ ಇರುವಂಥ ಸ್ಥಳ ಮತ್ತು ಯೇಸುವಿಗೆ ತನ್ನ ಇಷ್ಟದ ಸ್ಥಳವೆಂಬ ಭಾವನೆ ಕೊಡುವಂಥದ್ದು ಆಗಿರಬೇಕು. ದೇವರು ಹೀಗೆ ಹೇಳುತ್ತಾರೆ, "ನಾನು ಇರಬಹುದಾದ ಒಂದು ಸ್ಥಳವನ್ನು ಅವರು ನನಗಾಗಿ ತಯಾರು ಮಾಡಲಿ".

ಒಂದು ಕ್ರೈಸ್ತ ಮನೆಯು ಯೇಸುವಿಗೆ ತನ್ನ ಸ್ವಂತ ಮನೆಯೆಂಬ ಭಾವನೆಯನ್ನು ಕೊಡಬೇಕು. ಅಂದರೆ, ಅಲ್ಲಿನ ಎಲ್ಲಾ ಚಟುವಟಿಕೆಗಳು ಅವರನ್ನು ಸಂತೋಷ ಪಡಿಸಬೇಕು - ನಾವು ಓದುವ ಪುಸ್ತಕಗಳು, ಪತ್ರಿಕೆಗಳು, ಗಂಡ-ಹೆಂಡತಿಯರ ನಡುವಿನ ಸಂಭಾಷಣೆ, ನಾವು ಚರ್ಚಿಸುವ ವಿಷಯಗಳು, ನಾವು TVಯಲ್ಲಿ ವೀಕ್ಷಿಸುವ ಕಾರ್ಯಕ್ರಮಗಳು, ಇತ್ಯಾದಿ ಎಲ್ಲವೂ. ನಾವು ಜೀವಿಸಬಹುದಾದ ಅತೀ ಅದ್ಭುತವಾದ ಜೀವನ ಯಾವುದೆಂದರೆ, ಯೇಸುವೇ ನಮ್ಮ ಜೀವನದ ಕೇಂದ್ರಬಿಂದುವಾಗಿದ್ದು, ನಮ್ಮ ಪ್ರತಿಯೊಂದು ಚಟುವಟಿಕೆಯೂ ಯೇಸುವಿಗೆ ಇಷ್ಟವಾಗಿದೆಯೋ ಇಲ್ಲವೋ ಎಂಬುದರ ಮೇಲೆ ನಿರ್ಧಾರವಾಗುವದು - ನಮ್ಮ ಸಮಯದ ಉಪಯೋಗ, ನಮ್ಮ ಹಣದ ಬಳಕೆ, ನಾವು ಎಲ್ಲವನ್ನೂ ಮಾಡುವ ರೀತಿ, ಇವುಗಳು. ನಾವು ಹೀಗೆ ಜೀವಿಸಿದರೆ, ಆಗ ನಮ್ಮ ಜೀವಿತ ಕೊನೆಗೊಳ್ಳುವಾಗ, ಅಥವಾ ಅದಕ್ಕೆ ಮೊದಲು ಯೇಸುವಿನ ಬರೋಣವಾದಲ್ಲಿ, ನಾವು ಆತನ ಮುಂದೆ ನಿಂತಾಗ ಆತನು, "ಭಲಾ, ಚೆನ್ನಾಗಿ ಮಾಡಿದ್ದಿ," ಎಂದು ಹೇಳುತ್ತಾನೆ. ನಮ್ಮ ಮನೆ ಒಂದು ಅರಮನೆಯಾಗಿರಲಿ ಅಥವಾ ಒಂದು ಗುಡಿಸಲೇ ಆಗಿರಲಿ - ಹೊರನೋಟದ ಅಂದಚಂದವು ಮುಖ್ಯವಲ್ಲ. ಆತನು ನಮ್ಮ ಹೃದಯವನ್ನು ನೋಡುತ್ತಾನೆ. ಆದುದರಿಂದ ನಮ್ಮೆಲ್ಲರ ಹೃದಯಗಳು ದೇವರ ವಾಸಕ್ಕೆ ಒಂದು ದೇವಾಲಯ - ಒಂದು ಪವಿತ್ರ ಸ್ಥಳ - ಆಗಿರುವದನ್ನು ಖಚಿತಪಡಿಸಿರಿ.

ದೇವರು ನೆಲೆಸುವ ಜಾಗ ಯಾವುದು?

1. ಸಮಾಧಾನವಿರುವ ಮನೆಯಲ್ಲಿ: ಮೊದಲನೆಯದಾಗಿ, ದೇವರು ನೆಲೆಸುವದು ಸಮಾಧಾನ ಇರುವ ಮನೆಯಲ್ಲಿ. ಯೇಸುವು ತನ್ನ ಶಿಷ್ಯರನ್ನು ಬೇರೆ ಬೇರೆ ಸ್ಥಳಗಳಲ್ಲಿ ಬೋಧಿಸುವದಕ್ಕಾಗಿ ಕಳುಹಿಸಿದಾಗ, ಅವರು ಶಾಂತಿ ಸಮಾಧಾನವಿರುವ ಮನೆಗೆ ಹೋಗುವಂತೆ ಹೇಳಿದರು. ಅದಲ್ಲದೆ, ಅಂತಹ ಒಂದು ಮನೆ ಸಿಕ್ಕಿದಾಗ, ಅವರು ಆ ಮನೆಯಲ್ಲಿಯೇ ಇರಬೇಕು, ಅದನ್ನು ಬಿಟ್ಟು ಮತ್ತೊಂದು ಮನೆಗೆ ಹೋಗಬಾರದೆಂದು ಹೇಳಿದರು (ಲೂಕ 10:5-7) . ಅವರು ಹಾಗೆ ಹೇಳಿದ್ದೇಕೆ? ಏಕೆಂದರೆ, ಸಮಾಧಾನವಿರುವ ಅನೇಕ ಮನೆಗಳು ಸಿಗುವುದಿಲ್ಲವೆಂದು ಅವರಿಗೆ ತಿಳಿದಿತ್ತು. ಜಗಳಾಟವಿಲ್ಲದ ಮನೆಯಲ್ಲಿ ದೇವರು ನೆಲೆಸುತ್ತಾರೆ. ಸಾಮಾನ್ಯವಾಗಿ ಗಂಡ-ಹೆಂಡತಿಯರ ನಡುವೆ ಯಾವ ವಿಷಯಕ್ಕಾಗಿ ಜಗಳ ಶುರುವಾಗುತ್ತದೆ? ಹೆಚ್ಚಾಗಿ ಲೌಕಿಕ ಸಂಗತಿಗಳಿಗಾಗಿ - ದಿನನಿತ್ಯದ ಯಾವುದೋ ಸಂಗತಿ ಸರಿಯಾಗಿ ಆಗದಿದ್ದುದಕ್ಕಾಗಿ. ಈ ಲೋಕದಲ್ಲಿ ಹಲವಾರು ಸಂಗತಿಗಳು ಸರಿಯಾಗಿ ನಡೆಯುವದಿಲ್ಲ. ಆದರೆ ಹಾಗೆ ಆದಾಗ, ಪಾಪವೊಂದೇ ಗಂಭೀರವಾದ ವಿಷಯವೆಂದು ನೆನಪಿಟ್ಟುಕೊಳ್ಳಿರಿ. ಬೇರೆಲ್ಲಾ ವಿಷಯಗಳೂ ಅಷ್ಟೊಂದು ಮುಖ್ಯವಲ್ಲ. ನಮ್ಮ ನಡುವೆ ಕಹಿ ಭಾವನೆ ಇರಿಸಿಕೊಂಡು, ಲೌಕಿಕ ಸಮಸ್ಯೆಗಳಿಂದಾಗಿ ಒಬ್ಬರು ಇನ್ನೊಬ್ಬರೊಟ್ಟಿಗೆ ಮಾತನಾಡದೇ ಇರುವುದು ದೇವರ ಹೃದಯಕ್ಕೆ ನೋವನ್ನು ನೀಡುತ್ತದೆ. ಪಾಪವನ್ನು ದ್ವೇಷಿಸಿರಿ - ಏಕೆಂದರೆ, ನಿಮ್ಮ ವೈವಾಹಿಕ ಜೀವನವನ್ನು ಅದೊಂದು ಮಾತ್ರ ಹಾಳುಮಾಡುತ್ತದೆ. ನಮ್ಮ ಮನೆಯು ದೇವರ ಒಂದು ಮಂದಿರವಾಗಿ ಇರಬೇಕು ಎಂದು ನೆನಪಿಡಿರಿ. ಹಾಗಾಗಿ ನಮ್ಮ ಮನೆಯ ಸಮಾಧಾನವನ್ನು ಕೆಡಿಸುವ ಯಾವುದಾದರೂ ಪರಿಸ್ಥಿತಿ ಉಂಟಾದರೆ, ಮನೆಯು ದೇವರ ಮಂದಿರವಾಗಿ ಮುಂದುವರಿಯುವುದಿಲ್ಲ.

ನಮ್ಮ ಪ್ರತಿಯೊಂದು ಚಟುವಟಿಕೆಯಲ್ಲೂ ನಾವು ಹೀಗೆ ಹೇಳೋಣ, "ಕರ್ತನೇ, ಜನರು ನಮ್ಮ ಕುರಿತಾಗಿ ಸಂತೋಷಿಸಿದರೂ ಬಿಟ್ಟರೂ ಚಿಂತೆಯಿಲ್ಲ; ನೀವು ಸಂತೋಷಿಸುತ್ತೀರಾ? ನಮ್ಮ ಜೀವನದಲ್ಲಿ, ನಮ್ಮ ಆಲೋಚನೆಗಳಲ್ಲಿ ಅಥವಾ ಇತರರ ಬಗ್ಗೆ ನಮ್ಮ ಮನೋಭಾವದಲ್ಲಿ ಏನಾದರೂ ನಿಮ್ಮನ್ನು ಬೇಸರಗೊಳಿಸುತ್ತಿದೆಯೇ? ನೀವು ನಮ್ಮ ಮನೆಯಲ್ಲಿ ಸಂತೋಷವಾಗಿ ಇದ್ದೀರಾ? ನಾವು ಪ್ರತಿಯೊಂದು ಸಂಗತಿಯನ್ನು ಈ ಪ್ರಶ್ನೆಯ ಮೂಲಕ ಪರೀಕ್ಷಿಸಿ ನೋಡೋಣ: ’ಇದು ಕರ್ತನಿಗೆ ಇಷ್ಟವಿದೆಯೇ?’ ದೇವರು ಪ್ರತಿಷ್ಠಾಪಿಸಿದ ಮೊದಲ ಕುಟುಂಬದಲ್ಲಿ ಏನಾಯಿತು ಎನ್ನುವದನ್ನು ನೆನಪಿನಲ್ಲಿ ಇಟ್ಟುಕೊಳ್ಳಿರಿ. ಸೈತಾನನು ಆದಾಮ ಮತ್ತು ಹವ್ವಳ ನಡುವೆ ಬರುವುದಕ್ಕೆ ಕಾಯುತ್ತಾ ನಿಂತಿದ್ದನು. ಮತ್ತು ಆತನು ಅದರಲ್ಲಿ ಸಫಲನಾದನು. ಅದೇ ರೀತಿ ಯೋಬ ಮತ್ತು ಆತನ ಹೆಂಡತಿಯ ನಡುವೆ ಬರುವಲ್ಲಿ ಆತನು ಸಫಲನಾದನು. ಹಾಗೆಯೇ ಇಸಾಕ ಮತ್ತು ರೆಬೆಕ್ಕಳ ನಡುವೆಯೂ ಆತನು ಬಂದನು. ಸೈತಾನನು ಗಂಡ ಮತ್ತು ಹೆಂಡತಿಯ ನಡುವೆ ಅಡ್ಡ ಬರುವದು ಎಂದಿಗೂ ದೇವರ ಚಿತ್ತವಲ್ಲ. ಹಾಗಾಗಿ ನಮ್ಮ ವಿವಾಹದಲ್ಲಿ ಎಂದಿಗೂ ಹಾಗೆ ಆಗದಿರಲಿ. ದೇವರು ನಮ್ಮ ಮನೆಯ ಬಗ್ಗೆ ಯಾವಾಗಲೂ ಸಂತೋಷಿಸಲಿ ಮತ್ತು ಎಲ್ಲಾ ಸಮಯದಲ್ಲೂ ನಮಗೆ ಅವರ ಸಮಾಧಾನವನ್ನು ಕರುಣಿಸಲಿ.

2. ದೀನರೂ ಮುರಿಯಲ್ಪಟ್ಟವರೂ ಆದ ಪತಿ-ಪತ್ನಿ ಇರುವ ಮನೆಯಲ್ಲಿ: ದೇವರು ನೆಲೆಸುವ ಬಗ್ಗೆ ನಾನು ಹೇಳಬಯಸುವ ಎರಡನೆಯ ವಿಷಯ ಯೆಶಾಯ 57:15ರಲ್ಲಿ ಇದೆ: "ಉನ್ನತ ಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು ಜಜ್ಜಿಹೋದ ದೀನ ಮನದೊಂದಿಗೆ ಇರುತ್ತೇನೆ." ದೇವರ ವಾಸಸ್ಥಾನವು ಪರಿತಪಿಸುವ ಆತ್ಮ, ಮುರಿಯಲ್ಪಟ್ಟ ಮನಸ್ಸು ಇರುವವರ ಜೊತೆಗೆ ಇರುತ್ತದೆ. ಒಬ್ಬ ಮುರಿಯಲ್ಪಟ್ಟ ವ್ಯಕ್ತಿಯು ಇತರರ ಕೊರತೆ ನ್ಯೂನ್ಯತೆಗಳಿಗಿಂತ ತನ್ನ ಸ್ವಂತ ಕೊರತೆ ಮತ್ತು ತನ್ನ ಸೋಲುಗಳನ್ನು ಚೆನ್ನಾಗಿ ಅರಿತಿದ್ದಾನೆ. ಈ ಲೋಕದಲ್ಲಿ ಇತರರ ಸೋಲುಗಳ ಬಗ್ಗೆ ತಿಳಿದಿರುವ ಜನ ಧಾರಾಳವಾಗಿ ಇದ್ದಾರೆ. ಇಂದು ಸಾಮಾನ್ಯ ಕುಟುಂಬಗಳಲ್ಲಿ, ಹೆಚ್ಚಿನ ಮಾತುಕತೆಗಳು ಇತರರು ಮತ್ತು ಅವರ ಕುಟುಂಬಗಳ ಸೋಲುಗಳ ಕುರಿತಾಗಿ ಇರುತ್ತವೆ. ನಾವು ಬೇರೆಯವರ ವಿಫಲತೆಗಳನ್ನು ತಕ್ಷಣವೇ ಗಮನಿಸುತ್ತೇವೆ. ಆದರೆ, ಅವರ ಒಳ್ಳೆಯತನ ಹೆಚ್ಚಾಗಿ ನಮ್ಮ ಗಮನಕ್ಕೆ ಬರುವದಿಲ್ಲ. ನಾವೇ ದೇವರ ಕೃಪೆಯ ಮೂಲಕ ರಕ್ಷಿಸಲ್ಪಟ್ಟ ಪಾಪಿಗಳು ಆಗಿರುವಾಗ, ನಮಗೆ ಇತರರ ಮೇಲೆ ಕಲ್ಲೆಸೆಯುವ ಯಾವ ಅಧಿಕಾರವೂ ಇಲ್ಲ.

ಆದರೆ ನಾವು ನಮ್ಮ ಹಳೆಯ ಪಾಪಗಳಿಂದ ದೂರ ಸರಿಯಲು ಬಯಸುತ್ತೇವೆ, ಎಂಬ ಭರವಸೆ ನನಗಿದೆ - ಮುಖ್ಯವಾಗಿ ಇತರರ ಲೋಪ-ದೋಷಗಳನ್ನು ಚರ್ಚಿಸುವ ಪಾಪ. ಸ್ನಾನದಮನೆಯ ಕನ್ನಡಿ ಮತ್ತು ವಾಹನದ ಹಿನ್ನೋಟದ ಕನ್ನಡಿ, ಇವುಗಳ ನಡುವಿನ ವ್ಯತ್ಯಾಸ ನಮಗೆ ಗೊತ್ತಿದೆ. ಸ್ನಾನದಮನೆಯ ಕನ್ನಡಿಯಲ್ಲಿ ನಾವು ನಮ್ಮ ಮುಖವನ್ನು ನೋಡುತ್ತೇವೆ, ಆದರೆ ವಾಹನದ ಕನ್ನಡಿಯಲ್ಲಿ ನಾವು ಇತರರ ಮುಖಗಳನ್ನು ನೋಡುತ್ತೇವೆ. ದೇವರ ವಾಕ್ಯವು ಒಂದು ಕನ್ನಡಿಯ ಹಾಗಿದೆ, ಎಂದು ಯಾಕೋಬ 1:23-25 ಹೇಳುತ್ತದೆ. ಆದರೆ ಅದು ಸ್ನಾನದಕೋಣೆಯ ಕನ್ನಡಿಯೇ ಅಥವಾ ವಾಹನದ ಕನ್ನಡಿಯೇ? ನಾವು ಅದರಲ್ಲಿ ಯಾರನ್ನು ಕಾಣುತ್ತೇವೆ? ದೇವರ ವಾಕ್ಯದಲ್ಲಿ ಇತರರಿಗೆ ಬೋಧಿಸಲಿಕ್ಕಾಗಿ ವಚನವನ್ನು ನಾವು ಹುಡುಕುತ್ತೇವೋ? ಅಥವಾ ನಮಗೆ ಅದರಲ್ಲಿ ನಾವು ವಿಧೇಯರಾಗದೇ ಇರುವ ವಿಷಯಗಳು ಕಾಣಿಸುತ್ತವೆಯೇ? "ಗ್ರಂಥದ ಸುರುಳಿಯಲ್ಲಿ ನನ್ನ ಬಗ್ಗೆ ಬರೆಯಲಾಗಿದೆ," ಎಂದು ಇಬ್ರಿಯ 10:7 ತಿಳಿಸುತ್ತದೆ.

3. ಗಂಡ ಮತ್ತು ಹೆಂಡತಿ ಪವಿತ್ರರಾಗಿರುವ ಮನೆ: ಪ್ರತಿದಿನವೂ ಗಂಡ ಮತ್ತು ಹೆಂಡತಿ ಪವಿತ್ರತೆಯಲ್ಲಿ ನಡೆಯುವ ಮನೆಯಲ್ಲಿ ದೇವರು ನೆಲೆಸುತ್ತಾರೆ. ಯೆಹಜ್ಕೇಲ 43:12 ಹೀಗೆ ಹೇಳುತ್ತದೆ: "ದೇವಾಲಯದ ಪ್ರದೇಶವೆಲ್ಲಾ ಸುತ್ತಮುತ್ತಲು ಅತಿ ಪರಿಶುದ್ಧವಾಗಿ ಇರಬೇಕು. ಇಗೋ, ದೇವಸ್ಥಾನದ ನಿಯಮವು ಇದೇ." ದೇವರ ಗುಡಾರವು ಮೂರು ಭಾಗಗಳನ್ನು ಒಳಗೊಂಡಿತ್ತು - ಹೊರಗಣ ಪ್ರಾಕಾರ, ಪವಿತ್ರಸ್ಥಾನ ಮತ್ತು ಮಹಾ ಪವಿತ್ರಸ್ಥಾನ. ಮತ್ತು ಈ ಮೂರರಲ್ಲಿ ಮಹಾಪವಿತ್ರಸ್ಥಾನವು ಎಲ್ಲಕ್ಕಿಂತ ಚಿಕ್ಕದಾಗಿತ್ತು. ಆದರೆ ಇಲ್ಲಿ ನಾವು ಓದುವದು ಏನೆಂದರೆ, ಹೊಸ ಒಡಂಬಡಿಕೆಯಲ್ಲಿ ಹೊರಗಣ ಪ್ರಾಕಾರ ಮತ್ತು ಪವಿತ್ರಸ್ಥಾನಗಳು ಇರುವುದಿಲ್ಲ. ಇಡೀ ಪ್ರದೇಶವು ಮಹಾಪವಿತ್ರಸ್ಥಾನವಾಗಿ ಇರುತ್ತದೆ. ಇದರ ಅರ್ಥವೇನೆಂದರೆ, ಹೊಸ ಒಡಂಬಡಿಕೆಯ ವ್ಯವಸ್ಥೆಯಲ್ಲಿ ದೇವರ ಮಹಿಮೆಯು ಗುಡಾರದಲ್ಲಿ ಇದ್ದಂತೆ ಒಂದು ಮೂಲೆಗೆ ಸೀಮಿತವಾಗಿ ಇರುವುದಿಲ್ಲ. ಅದು ಇಡೀ ಆವರಣದಲ್ಲಿ ಹರಡಿರುತ್ತದೆ. ನಮ್ಮ ಜೀವನದಲ್ಲಿ ಇದರ ಅರ್ಥವೇನೆಂದರೆ, ನಾವು ಎಲ್ಲಾ ವೇಳೆಯಲ್ಲೂ ಪವಿತ್ರರಾಗಿ ಇರುತ್ತೇವೆ - ಭಾನುವಾರ ಮಾತ್ರವೇ ಅಲ್ಲ, ಆದರೆ ಪ್ರತಿನಿತ್ಯ. ನಾವು ಸತ್ಯವೇದವನ್ನು ಓದುವ ಸಮಯದಲ್ಲಿ ಮಾತ್ರವೇ ಪವಿತ್ರರಾಗಿ ಇರುವುದಿಲ್ಲ, ಆದರೆ ಇತರ ಕಾರ್ಯಗಳನ್ನು ಮಾಡುವಾಗಲೂ ಹಾಗೆಯೇ ಇರುತ್ತೇವೆ. ನಮ್ಮ ಜೀವಿತದ ಉದ್ದಗಲವೂ ಮತ್ತು ನಮ್ಮ ಮನೆಯ ಮೂಲೆಮೂಲೆಯೂ ಪವಿತ್ರವಾಗಲಿದೆ. ಅದಲ್ಲದೆ, ಪವಿತ್ರತೆಯು ಕೆಲವು ಧಾರ್ಮಿಕ ಸಂಸ್ಕಾರಗಳ ಆಚರಣೆಯ ಪ್ರಶ್ನೆಯಲ್ಲ. ಬದಲಾಗಿ, ನಮ್ಮ ತಿಳುವಳಿಕೆಗೆ ಅನುಸಾರವಾಗಿ ದೇವರಿಗೆ ಇಷ್ಟವಿಲ್ಲದ ಪ್ರತಿಯೊಂದು ವಿಷಯವನ್ನೂ ಬಿಟ್ಟುಬಿಡುವದಾಗಿದೆ .

ಇದು ನಮ್ಮ ಜೀವನದಲ್ಲಿ ನಿಜವಾಗಲಿ!