ವಿವಾಹಿತ ದಂಪತಿಗಳು ಒಟ್ಟಾಗಿ ಒಂದು ಮನೆ ಕಟ್ಟುವ ಯೋಜನೆಯನ್ನು ಹಾಕಿಕೊಂಡು, ಒಂದೊಂದಾಗಿ ಇಟ್ಟಿಗೆಗಳನ್ನು ಜೋಡಿಸುತ್ತಾ ಮುಂದುವರಿಯುತ್ತಾರೆ. ಭೌತಿಕವಾಗಿಯೂ, ಆತ್ಮಿಕವಾಗಿಯೂ ಮನೆ ಕಟ್ಟುವ ವಿಧಾನ ಇದೇ ಆಗಿದೆ. ನಾವು ಬಳಸುವ ಆತ್ಮಿಕ "ಇಟ್ಟಿಗೆಗಳು" ಯಾವುವು?
ದಂಪತಿಗಳ ನಡುವಿನ ಆಲೋಚನೆಗಳು ಮತ್ತು ಅವರು ಒಬ್ಬರಿಗೊಬ್ಬರು ಆಡುವ ಮಾತುಗಳು ಮನೆ ಕಟ್ಟಲು ಬಳಸುವ ಇಟ್ಟಿಗೆಗಳಂತಿವೆ, ಎಂದು ನಾವು ಹೇಳಬಹುದು. ನೀವು ನಿಮ್ಮ ಸ್ವಂತ ಮನೆಯನ್ನು ಕಟ್ಟುವುದಕ್ಕೆ ಎಂತಹ ಇಟ್ಟಿಗೆಗಳನ್ನು ಬಳಸುತ್ತೀರಿ ಎಂಬುದನ್ನು ನೀವೇ ನಿರ್ಣಯಿಸಬೇಕು. ಅನೇಕ ಗಂಡ ಹೆಂಡಂದಿರು (ತಮ್ಮ ಆತ್ಮಿಕ ಮನೆಗೆ) ಬಹಳ ಕಳಪೆಯಾದ ಇಟ್ಟಿಗೆಗಳನ್ನು ಬಳಸುವುದರಿಂದ, ಅವರ ಮನೆಗಳು ಕುಸಿದು ಬೀಳುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ನಾವು ಭೌತಿಕವಾಗಿ ಒಂದು ಮನೆಯನ್ನು ಕಟ್ಟುವಾಗ, ಬಹಳ ಎಚ್ಚರ ವಹಿಸಿ ಉತ್ತಮ ಗುಣಮಟ್ಟದ ಇಟ್ಟಿಗೆಗಳನ್ನು ಆರಿಸಿಕೊಳ್ಳುತ್ತೇವೆ. ಏಕೆಂದರೆ ಆ ಮನೆ ಹಲವಾರು ವರ್ಷ ಭದ್ರವಾಗಿ ಇರಬೇಕೆಂದು ನಾವು ಬಯಸುತ್ತೇವೆ. ಆದರೆ ಭೌತಿಕ ಮನೆಗಳು ನಿತ್ಯತ್ವದವರೆಗೆ ಉಳಿಯುವುದಿಲ್ಲ. ಅವು ಮುಂದೆ ಒಂದು ದಿನ ಬಿದ್ದುಹೋಗುತ್ತವೆ. ನಾವು ಹೆಚ್ಚು ಗಮನ ನೀಡಬೇಕಾದ ನಿಜವಾದ ಮನೆ ಯಾವುದೆಂದರೆ, ನಿತ್ಯತ್ವಕ್ಕಾಗಿ ನಾವು ನಮ್ಮ ಜೀವನ ಸಂಗಾತಿಯೊಂದಿಗೆ ಬೆಳೆಸಿಕೊಳ್ಳುವ ಸಂಬಂಧವಾಗಿದೆ. ಹಾಗಾಗಿ ನಿಮ್ಮಿಬ್ಬರ ನಡುವಿನ ಆಲೋಚನೆಗಳು ಹಾಗೂ ನೀವು ಆಡುವ ಮಾತುಗಳ ಬಗ್ಗೆ ಎಚ್ಚರ ವಹಿಸಿರಿ. ಅವು ಪರಿಶುದ್ಧ ಮತ್ತು ಉತ್ತಮ ಆಲೋಚನೆಗಳು ಹಾಗೂ ಮಾತುಗಳು ಆಗಿರಲಿ.
ಇಬ್ರಿಯರಿಗೆ 12:15'ರ ವಚನವು ಕಹಿತನದ ಬೇರಿನ ಬಗ್ಗೆ ಎಚ್ಚರಿಸುತ್ತದೆ. ಈ ಕಹಿತನ ನಮ್ಮ ಹೃದಯದಲ್ಲಿ ನಮ್ಮ ಜೀವನ ಸಂಗಾತಿಯ ವಿರುದ್ಧ ಉಂಟಾಗಬಹುದು. ಅದೇ ರೀತಿಯಾಗಿ, ಕೊಲೊಸ್ಸೆಯವರಿಗೆ 3:19'ರಲ್ಲಿ, ಗಂಡಂದಿರು ತಮ್ಮ ಹೆಂಡಂದಿರ ಮೇಲೆ ಕಹಿತನ ಹೊಂದಬಾರದು ಎಂಬುದಾಗಿಯೂ ಸತ್ಯವೇದವು ಆಜ್ಞಾಪಿಸುತ್ತದೆ. ನಮ್ಮ ಹೃದಯದ ಚಿಂತನೆಗಳು ಮತ್ತು ಮನೋಭಾವಗಳು , ಅಂದರೆ ನಮ್ಮ ಕಹಿತನವನ್ನು ನಾವು ಸಂಪೂರ್ಣವಾಗಿ "ಸಾಯಿಸುವುದು" ಅಗತ್ಯವಾಗಿದೆ. ನಮ್ಮ ಹೃದಯದ ಆಲೋಚನೆಗಳಲ್ಲಿ ರಕ್ತದ ಗುರುತು ಕಾಣಿಸಬೇಕು. ಅಂದರೆ, ನಮ್ಮ ಸ್ವಾರ್ಥಭಾವವು ಶಿಲುಬೆಯ ಮೇಲೆ ಸಾಯಬೇಕು. ನಾನು ಪ್ರೀತಿಯಿಲ್ಲದ ಆಲೋಚನೆಗಳನ್ನು, ಸ್ವಾರ್ಥದ ಆಲೋಚನೆಗಳನ್ನು ಮತ್ತು ಭೇದಭಾವವನ್ನು ಹುಟ್ಟಿಸುವ ಆಲೋಚನೆಗಳನ್ನು ಸಾಯಿಸಬೇಕು. ಸೈತಾನನು ಯಾವಾಗಲೂ ಬಳಿಯಲ್ಲೇ ಇದ್ದಾನೆ ಎಂಬುದನ್ನು ಒಂದು ಕ್ಷಣವೂ ಮರೆಯಬೇಡಿರಿ; ಅವನು ನಿಮ್ಮ ಕೈಯಲ್ಲಿ ತನ್ನ ಕಲ್ಲುಗಳು ಮತ್ತು ಇಟ್ಟಿಗೆಗಳನ್ನು ಇರಿಸಿ, ನೀವು ಅವುಗಳಿಂದ ನಿಮ್ಮ ಮನೆ ಕಟ್ಟಬೇಕೆಂದು ನಿರೀಕ್ಷಿಸುತ್ತಾನೆ. ವಿವಾಹಿತರಾದ ನಾವೆಲ್ಲರೂ ಇಂತಹ ಶೋಧನೆಗಳು ಬರುವುದನ್ನು ನೋಡಿದ್ದೇವೆ — ನಮ್ಮ ಸಂಗಾತಿಯ ವಿರುದ್ಧ ಕಠಿಣ, ಸ್ವಾರ್ಥದ, ಕಹಿಯಾದ, ಸಂಶಯಿಸುವ ಆಲೋಚನೆಗಳನ್ನು ತರುವಂತದ್ದು. ನಾವು ನಮ್ಮ ಸ್ವಂತ ಪ್ರಯೋಜನವನ್ನೇ ಯೋಚಿಸಿ ಮನೆ ಕಟ್ಟಬೇಕೆಂಬ ಉದ್ದೇಶದಿಂದ, ಸೈತಾನನು ಸ್ವಾರ್ಥದ ಇಟ್ಟಿಗೆಗಳನ್ನು ನಮಗೆ ತಂದು ಕೊಡುತ್ತಾನೆ. ಅವನು ನಿಮ್ಮ ಸಂಗಾತಿಯನ್ನು ಸಂಶಯಿಸುವ ಇಟ್ಟಿಗೆಗಳನ್ನು ತರುತ್ತಾನೆ. ಸಂಶಯವನ್ನು ಸಾಯಿಸಿರಿ ಮತ್ತು ನಂಬಿಕೆಯನ್ನು ಕಲಿಯಿರಿ. ಸಂಶಯದ ಆಲೋಚನೆಗಳು ಸೈತಾನನು ಕೊಡುವಂತ ಅತ್ಯಂತ ಕೆಟ್ಟ ಇಟ್ಟಿಗೆಗಳಾಗಿವೆ.
ಅದೇ ರೀತಿಯಾಗಿ, ನಾವು ಮಾತನಾಡುವ ಮಾತುಗಳೇ ನಾವು ನಮ್ಮ ಮನೆಯನ್ನು ಕಟ್ಟುವ ಇಟ್ಟಿಗೆಗಳಾಗಿವೆ. ದಂಪತಿಗಳು ಆಡುವ ಎಲ್ಲಾ ಮಾತುಗಳನ್ನು "ಸೇವ್ ಮಾಡಿ" ಮತ್ತೊಮ್ಮೆ ಕೇಳಿಸಿಕೊಂಡರೆ (ನ್ಯಾಯತೀರ್ಪಿನ ದಿನದಲ್ಲಿ ಅದು ನಿಜವಾಗಿ ನಡೆಯುತ್ತದೆ), ನಾವು ಎಷ್ಟು ಮಂದಿ ಅದನ್ನು ಕೇಳಿಸಿಕೊಳ್ಳಲು ಇಷ್ಟಪಡುತ್ತೇವೆಂದು ನಾನು ಯೋಚಿಸುತ್ತೇನೆ ಅಥವಾ, ನಾವು ಅಲ್ಲಿಂದ ಓಡಿ ಹೋಗಿ ಅವಿತುಕೊಳ್ಳಲು ಬಯಸುತ್ತೇವೋ? ಒಬ್ಬರೊಂದಿಗೆ ಒಬ್ಬರು ದಯೆಯಿಂದ ಮತ್ತು ಪ್ರೀತಿಯಿಂದ ಮಾತನಾಡಿದ ಕೆಲವು ದಂಪತಿಗಳು ಆ ಸಮಯದಲ್ಲಿ ಎಷ್ಟು ಹರ್ಷಗೊಳ್ಳುತ್ತಾರೆ! ನ್ಯಾಯತೀರ್ಪಿನ ದಿನದಲ್ಲಿ ಇಡೀ ಲೋಕವೇ ಅವರ ಮಾತುಗಳನ್ನು ಕೇಳಿಸಿಕೊಂಡರೂ ಅವರು ಧೈರ್ಯದಿಂದ ಇರುತ್ತಾರೆ.
ನಾವು ಪರಿಪೂರ್ಣರಲ್ಲ, ಆದರೆ ನಾವು ನಮ್ಮನ್ನು ತಗ್ಗಿಸಿಕೊಳ್ಳಲು, ಒಳ್ಳೆಯ ಮಾತುಗಳನ್ನಾಡಲು ಮತ್ತು ನಮ್ಮ ನಾಲಿಗೆಯ ಮೇಲೆ ಸೈತಾನನು ಇಡುವಂತ ಕೆಟ್ಟ ಮಾತುಗಳನ್ನು ಮರಣಕ್ಕೆ ಒಪ್ಪಿಸುವುದನ್ನು ಕಲಿಯಲು ಸಾಧ್ಯವಿದೆ. ಗಂಡ-ಹೆಂಡತಿಯರು ಒಬ್ಬರಿಗೊಬ್ಬರು ಆಡುವ ಹೊಲಸು ಮಾತುಗಳನ್ನು ಒಮ್ಮೆ ಯೋಚಿಸಿ ನೋಡಿ (ನಿನ್ನ ಅಪ್ಪ ಹಾಗೆಯೇ ಇದ್ದ ಅಥವಾ ನಿನ್ನ ಅಕ್ಕ ಹಾಗೆಯೇ ಇದ್ದಳು ಮುಂತಾದವು). ಇಂತಹ ಇಟ್ಟಿಗೆಗಳನ್ನು ಎಷ್ಟೋ ಜನರು ತಮ್ಮ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಉಪಯೋಗಿಸುತ್ತಾರೆ ಎಂಬುದು ದುಃಖದ ಸಂಗತಿ. ಆದರೆ ಇಂತಹ ಶೋಚನೀಯ ನಿಜಸ್ಥಿತಿ ಇದ್ದಾಗ್ಯೂ, ದೇವರು ತನ್ನ ವಾಕ್ಯದಲ್ಲಿ ನಮಗೆ ಕೊಟ್ಟಿರುವ ಮಾದರಿಯ ಪ್ರಕಾರ, ನಾವು ದೇವರನ್ನು ಮಹಿಮೆ ಪಡಿಸುವ ಒಂದು ಮನೆಯನ್ನು ಕಟ್ಟಬೇಕಾಗಿದೆ.
"ನಾವು ಆಡುವ ಮಾತುಗಳೇ ನಾವು ನಮ್ಮ ಮನೆಯನ್ನು ಕಟ್ಟುವ ಇಟ್ಟಿಗೆಗಳಾಗಿವೆ
ಎಫೆಸದವರಿಗೆ 4:29 ಹೀಗೆ ಹೇಳುತ್ತದೆ: "ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು." ಹೊಲಸು ಮಾತುಗಳು ಒಡಕು ಇಟ್ಟಿಗೆಗಳಿಗೆ ಸಮಾನ. ನಾವು ಗಂಡ-ಹೆಂಡತಿಯರಾಗಿ ಈ ಒಂದು ಸರಳವಾದ ನಿಯಮವನ್ನು ಪಾಲಿಸುವುದಾದರೆ — ಅಂದರೆ, ನಮ್ಮ ಸಂಗಾತಿಗೆ ಕೃಪೆಯನ್ನು ನೀಡುವ ಮಾತುಗಳನ್ನು ಮಾತ್ರ ಆಡುವುದಾದರೆ, ಜನರು ಅನೇಕ ವರ್ಷಗಳಲ್ಲಿ ಕಟ್ಟಿರುವ ಕೊಳಕು ಮನೆಗಳಿಗಿಂತ, ಒಂದೇ ವರ್ಷದಲ್ಲಿ ನಾವು, ಉತ್ತಮವಾದ ಒಂದು ಮನೆಯನ್ನು ಹೊಂದುತ್ತೇವೆ. ಇದನ್ನು ಸಾಧಿಸಲು ಖಂಡಿತವಾಗಿಯೂ ನಮ್ಮಲ್ಲಿ ಪ್ರತಿಯೊಬ್ಬರಿಗೂ ಅವಕಾಶವಿದೆ. ಯಾರನ್ನಾದರೂ ನಿಂದಿಸುವ ಶೋಧನೆಗಳು ನಿಮ್ಮ ಮನೆಯಲ್ಲಿ ಬರಬಹುದು. ಆದರೆ ಅದು ಕೇವಲ ಒಂದು ದುಷ್ಪ್ರೇರಣೆ ಅಥವಾ ಶೋಧನೆ ಮಾತ್ರವೇ ಆಗಿದೆ. ಯಾರಾದರೂ ನಿಮ್ಮ ಮನೆಗೆ ಬಂದಾಗ ನೀವು ಚಾಡಿ ಮಾತುಗಳನ್ನಾಡಲು ಆರಂಭಿಸುವುದಾದರೆ, ನೀವು ಹಾಳಾದ ಇಟ್ಟಿಗೆಗಳಿಂದ ನಿಮ್ಮ ಮನೆಯನ್ನು ಕಟ್ಟುತ್ತಿರುವಿರಿ. ಸೈತಾನನು ನಿಮಗೆ ಹಾಳಾದ ಇಟ್ಟಿಗೆಗಳನ್ನು ಒಪ್ಪಿಸಿದ್ದಾನೆ ಮತ್ತು ನೀವು ಅವುಗಳನ್ನು ಕೈಚಾಚಿ ಸ್ವೀಕರಿಸಿದ್ದೀರಿ. ನಿಮ್ಮ ಮನೆಯನ್ನು ಹೀಗೆ ಹಾಳು ಮಾಡಲು ಅವನಿಗೆ ಅವಕಾಶವನ್ನು ಕೊಡಬೇಡಿರಿ. ದೇವರು ತೋರಿಸಿರುವ ಮಾದರಿಯನ್ನು ಅನುಸರಿಸಲು ನೀವು ಗಂಭೀರವಾಗಿ ತೀರ್ಮಾನಿಸುವುದಾದರೆ, ನಿಮ್ಮ ಮನೆಯು ಒಂದು ಸ್ವರ್ಗದಂತಹ ಮನೆಯಾಗುವುದು - ಇದರಲ್ಲಿ ಸಂಶಯವೇ ಇಲ್ಲ.
ಧರ್ಮೋಪದೇಶಕಾಂಡ 33:16'ರಲ್ಲಿ, ದೇವರನ್ನು "ಮುಳ್ಳುಗಿಡದಲ್ಲಿ ವಾಸಿಸಿದಾತನು" ಎಂಬುದಾಗಿ ಉಲ್ಲೇಖಿಸಲಾಗಿದೆ. ವಿಮೋಚನಕಾಂಡ 3ನೇ ಅಧ್ಯಾಯದಲ್ಲಿ ದೇವರು ಉರಿಯುವ ಪೊದೆಯೊಳಗಿನಿಂದ ಮೋಶೆಯ ಸಂಗಡ ಮಾತಾಡಿದ ಸಂದರ್ಭವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲಿ ಸತ್ಯವೇದದಲ್ಲಿ ಮೊದಲನೆಯ ಬಾರಿಗೆ ದೇವರು ವಾಸಿಸುವ ಸ್ಥಳದ ಕುರಿತಾಗಿ ಹೇಳಲ್ಪಟ್ಟಿದೆ. ಆ ಪೊದೆಯನ್ನು ಬೆಂಕಿಯು ಆವರಿಸಿದಾಗ ಅದರಲ್ಲಿ ಯಾವುದೇ ಕ್ರಿಮಿ ಅಥವಾ ಕೀಟಗಳು ಉಳಿದಿರಲು ಸಾಧ್ಯವಿದೆ ಎಂಬುದಾಗಿ ನೀವು ಊಹಿಸುತ್ತೀರಾ? ಆ ಬೆಂಕಿಯು ಪ್ರತಿಯೊಂದು ಕ್ರಿಮಿ ಮತ್ತು ಕೀಟವನ್ನು ನಾಶ ಮಾಡುತ್ತದೆ. ನಮಗೆ ಅಂತಹ ಬೆಂಕಿ - ನಮ್ಮ ಮನೆಗಳಲ್ಲಿನ ಎಲ್ಲಾ ಕ್ರಿಮಿಕೀಟಗಳನ್ನು ಸಾಯಿಸುವಂಥದ್ದು - ಅಂದರೆ, ಪವಿತ್ರಾತ್ಮನ ಬೆಂಕಿಯು ಬೇಕಾಗಿದೆ. ಇಲ್ಲಿ ನಾನು ಎಂತಹ ಕ್ರಿಮಿಕೀಟಗಳ ಬಗ್ಗೆ ಮಾತನಾಡುತ್ತಿದ್ದೇನೆ? ನಾವು ಒಬ್ಬರು ಇನ್ನೊಬ್ಬರ ಬಗ್ಗೆ ದೇವಭಯವಿಲ್ಲದ ಆಲೋಚನೆಗಳನ್ನು ಮಾಡುವುದು, ಕರುಣೆಯಿಲ್ಲದ, ಹೊಲಸಾದ, ಬೇಡವಾದ ಚಾಡಿ ಮಾತುಗಳನ್ನು ಆಡುವುದು, ಮುಂತಾದವುಗಳು. ನಾವು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಾಗ, ನಮ್ಮ ಮನೆಗಳ ಮೇಲೆ ಪವಿತ್ರಾತ್ಮನ ಬೆಂಕಿ ಉರಿಯುವಾಗ, ನಮ್ಮ ಮನೆಯು ಕ್ರಿಮಿ-ಕೀಟಗಳು ನಾಶ ಮಾಡಲ್ಪಟ್ಟ ಪರಿಶುದ್ಧ ಮನೆಯಾಗುತ್ತದೆ. ನಮ್ಮ ಮನೆಯು ಭೌತಿಕವಾಗಿ ಹಸನಾಗಿ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ನಮ್ಮ ಆಲೋಚನೆಗಳಲ್ಲಿ ಮತ್ತು ಮಾತುಗಳಲ್ಲಿ ಪರಿಶುದ್ಧತೆ ಇರಬೇಕು.
ದೇವರಿಗೆ ಇಷ್ಟವಾದ ಸಂಗತಿಗಳು ಹಾಗೂ ಮನುಷ್ಯರು ಇಷ್ಟಪಡುವ ಸಂಗತಿಗಳ ನಡುವೆ ಇರುವಂತ ವ್ಯತ್ಯಾಸ ಇದೇ ಆಗಿದೆ. ಫರಿಸಾಯರ ಹೊರಗಿನ ನಡತೆಯು ಶುಚಿಯಾಗಿರುತ್ತದೆ. ಆದರೆ ಯೇಸುವಿನ ಶಿಷ್ಯರು ಒಳಗಿನ ಶುದ್ಧತೆಯನ್ನು ಕಾಪಾಡಿಕೊಳ್ಳುತ್ತಾರೆ. ದೇವರು ಅವರ ಮನೆಗಳಲ್ಲಿ ನೆಲೆಸುವುದಕ್ಕೆ ಕಾರಣ ಏನೆಂದರೆ, ಅವರ ಆಲೋಚನೆಗಳಲ್ಲಿ ಹಾಗೂ ಮಾತುಗಳಲ್ಲಿ ಯಥಾರ್ಥತೆ ಇರುತ್ತದೆ. ನಾವು ಇದಕ್ಕಾಗಿ ಹಂಬಲಿಸುವುದಾದರೆ, ಹಳೆ ಒಡಂಬಡಿಕೆಯಲ್ಲಿ ದೇವದರ್ಶನದ ಗುಡಾರದ ಮೇಲೆ ದೇವರ ಮಹಿಮೆ ಅಥವಾ ದೇವರ ತೇಜಸ್ಸು ಇಳಿದು ಬಂದ ಹಾಗೆ ನಮ್ಮ ಮನೆಗಳಲ್ಲೂ ದೇವರ ತೇಜಸ್ಸು ಇಳಿದು ಬರುತ್ತದೆ. ನಮ್ಮಲ್ಲಿ ಅನೇಕರ ಮನೆಗಳು ಇಂತಹ ಮನೆಗಳಾದರೆ, ಅದು ಎಷ್ಟೊಂದು ಅದ್ಭುತಕರವಾಗಿರುತ್ತದೆ! ಪೊದೆಯಲ್ಲಿ ವಾಸಿಸುವ ದೇವರು ತನ್ನನ್ನು ಮಹಿಮೆ ಪಡಿಸುವ ಮನೆಯಲ್ಲೂ ನೆಲೆಸುತ್ತಾರೆ.