WFTW Body: 

ಹಳೆ ಒಡಂಬಡಿಕೆಯ ಪವಿತ್ರಾತ್ಮನ ಸೇವೆ ಮತ್ತು ಹೊಸ ಒಡಂಬಡಿಕೆಯ ಪವಿತ್ರಾತ್ಮನ ಸೇವೆಯ ನಡುವಿನ ವ್ಯತ್ಯಾಸವನ್ನು ತೋರಿಸುವುದಕ್ಕೆ ನನ್ನ ತಂದೆಯವರು (ಜ್ಯಾಕ್ ಪೂನನ್ ರವರು ) ಒಂದು ಉದಾಹರಣೆ ಕೊಡುವುದನ್ನು ನಾನು ಕೇಳಿದ್ದೇನೆ: ಹಳೆಯ ಒಡಂಡಿಕೆಯಲ್ಲಿ, ಮನುಷ್ಯನ ಹೃದಯವು ಒಂದು ಮುಚ್ಚಿದ ಬಟ್ಟಲಿನ ಹಾಗಿತ್ತು (ಇದು ಯೆಹೂದ್ಯರ ದೇವಾಲಯದ ಪರದೆಯಿಂದ ಮುಚ್ಚಲ್ಪಟ್ಟ ಅತಿ ಪವಿತ್ರ ಸ್ಥಳವನ್ನು ಹೋಲುತ್ತದೆ). ಈ ಬಟ್ಟಲಿನ ಮುಚ್ಚಳದ ಮೇಲೆ ಪವಿತ್ರಾತ್ಮನು ಸುರಿಯಲ್ಪಟ್ಟಾಗ, ಆತನು ಮುಚ್ಚಳದಿಂದ ಉಕ್ಕಿ ನದಿಗಳಂತೆ ಹರಿದು ಅನೇಕರನ್ನು ಆಶೀರ್ವದಿಸಿದನು - ಪವಿತ್ರಾತ್ಮನು ಮೋಶೆ, ಸ್ನಾನಿಕನಾದ ಯೋಹಾನ ಮತ್ತು ಇತರರ ಜೀವನದಲ್ಲಿ ಈ ರೀತಿಯಾಗಿ ಕೆಲಸ ಮಾಡಿದನು.

ಆದರೆ ಹೊಸ ಒಡಂಬಡಿಕೆಯಲ್ಲಿ, ಈ ಮುಚ್ಚಳವು ತೆಗೆಯಲ್ಪಟ್ಟಿದೆ (2 ಕೊರಿ. 3:12-18). ಯೇಸುವಿನ ಮರಣದ ನಂತರ ದೇವಾಲಯದಲ್ಲಿ ಹರಿಯಲ್ಪಟ್ಟ ಪರದೆಯು, ಅತಿ ಪರಿಶುದ್ಧ ಸ್ಥಳವನ್ನು ಪ್ರವೇಶಿಸುವ ದಾರಿಯು ತೆರೆಯಲ್ಪಟ್ಟಿದೆಯೆಂದು ಸಾಂಕೇತಿಕವಾಗಿ ಸೂಚಿಸಿತು. ಈಗ ಪವಿತ್ರಾತ್ಮನು ಸುರಿಯಲ್ಪಡುವಾಗ, ಆತನು ಮೊದಲು ಪಾತ್ರೆಯನ್ನು ತುಂಬುತ್ತಾನೆ - ಅಂದರೆ, ವಿಶ್ವಾಸಿಯ ಹೃದಯವನ್ನು ಮೊದಲು ಶುಚಿಗೊಳಿಸುತ್ತಾನೆ - ನಂತರ "ವಿಶ್ವಾಸಿಯ ಅಂತರಾಳದಿಂದ ಹರಿದು ಬಂದು" ಅನೇಕರನ್ನು ಆಶೀರ್ವದಿಸುತ್ತಾನೆ, ಎಂದು ಯೇಸುವು ಯೋಹಾನನು 7:37-39'ರಲ್ಲಿ ವಿವರಿಸಿದನು. ಈ ರೀತಿಯಾಗಿ ಹೊಸ ಒಡಂಡಿಕೆಯ ಸಭೆಯು ಕಟ್ಟಲ್ಪಡುತ್ತದೆ.

ಈಗಲೂ ನಾವು ಪವಿತ್ರಾತ್ಮನನ್ನು ಇತರರಿಗೆ ಸುವಾರ್ತೆ ಬೋಧಿಸುವುದಕ್ಕಾಗಿ ಮಾತ್ರ ಉಪಯೋಗಿಸಲು ಪ್ರಯತ್ನಿಸುತ್ತಿದ್ದರೆ, ನಾವು ಕೇವಲ ಒಂದು ಸಮೂಹ ಅಥವಾ ಒಂದು ಸಂಘವನ್ನು ಕಟ್ಟುತ್ತೇವೆ. ಆದರೆ ಎಲ್ಲಕ್ಕೂ ಮೊದಲು ದೇವರು ನಮ್ಮನ್ನು ತುಂಬಿಸಿ, ನಮ್ಮ ಹೃದಯದಲ್ಲಿ ಆತನ ಪ್ರೀತಿಯನ್ನು ಸುರಿಸಲು ನಾವು ಸಮ್ಮತಿಸುವುದಾದರೆ, ಆಗ ಪವಿತ್ರಾತ್ಮನು ನಮ್ಮ ಅಂತರಾಳದಿಂದ ಹರಿದು ಇತರರ ಬಳಿಗೆ ಹೋಗಲು ಸಾಧ್ಯವಾಗುತ್ತದೆ. ಆಗ ನಾವು ಇಂತಹ ಅನ್ಯೋನ್ಯತೆಯ ಆತ್ಮವನ್ನು ಹೊಂದಿರುವವರ ಜೊತೆಗೆ ಸೇರಿಕೊಂಡು ಸಭೆಯನ್ನು ಕಟ್ಟುವೆವು. ನಮ್ಮ ಹೃದಯದಲ್ಲಿ ದೇವರಿಗಾಗಿ ಮತ್ತು ಇತರರಿಗಾಗಿ ಪ್ರೀತಿಯು ತುಂಬಿ ಹೊರಸೂಸುತ್ತದೆ ಮತ್ತು ನಾವು ಒಬ್ಬೊಬ್ಬರೂ ಶಿಲುಬೆಯನ್ನು ಹೊತ್ತಾಗ ನಿಜವಾದ ಅತ್ಮಿಕ ಐಕ್ಯತೆಯು ಬೆಳೆಯುತ್ತದೆ.

ನಿಜವಾದ ಸಭೆಯು ವಾಸ್ತವವಾಗಿ ಕಟ್ಟಲ್ಪಡುವುದು ಪ್ರಾಥಮಿಕವಾಗಿ ನಾವು ಒಬ್ಬರನ್ನೊಬ್ಬರು ಅಗಲಿರುವ ಸಮಯದಲ್ಲಿ. ಅದು ನಾವು ಭಾನುವಾರದ ಕೂಟಕ್ಕಾಗಿ ಸೇರಿದಾಗ ಮಾತ್ರವೇ ಕಟ್ಟಲ್ಪಡುವುದಿಲ್ಲ. ಹೌದು, ಆ ಕೂಟಗಳಲ್ಲಿ ಪವಿತ್ರಾತ್ಮನ ವರಗಳ ಮೂಲಕ ಸಭೆಯು ಕಟ್ಟಲ್ಪಡುತ್ತದೆ. ಆದರೆ ನಾವು ಒಬ್ಬರನ್ನೊಬ್ಬರು ಅಗಲಿರುವ ಸಮಯದಲ್ಲಿ ಅದು ಇನ್ನೂ ಹೆಚ್ಚಾಗಿ ಕಟ್ಟಲ್ಪಡುತ್ತದೆ. ನಮಗೆ ಯಾವುದಾದರೂ ಶೋಧನೆಗಳು ಬಂದಾಗ - ಅಪ್ರಾಮಾಣಿಕವಾಗಿ ನಡೆಯುವುದಕ್ಕೆ, ಅಥವಾ ಕೋಪಿಸಿಕೊಳ್ಳುವುದಕ್ಕೆ, ಅಥವಾ ಕಣ್ಣುಗಳ ಮೂಲಕ ವ್ಯಭಿಚಾರ ಮಾಡುವುದಕ್ಕೆ - ಇಂತಹ ಸಂದರ್ಭಗಳಲ್ಲಿ ನೀವು ಕರ್ತನ ಸಭೆಗೆ ಸೇರಿದ್ದೀರೋ ಇಲ್ಲವೋ ಎಂಬುದನ್ನು ನೀವು ಸಾಬೀತು ಪಡಿಸುತ್ತೀರಿ. ಈ ಶೋಧನೆಗಳು ಬಂದಾಗ ನಾವು ಶಿಲುಬೆಯನ್ನು ಹೊತ್ತು, ನಮ್ಮ ಸ್ವಂತ ಚಿತ್ತಕ್ಕೆ ಸತ್ತು, ಕರ್ತನಿಗಾಗಿ ಭಯಭಕ್ತಿಯನ್ನು ಕಾಪಾಡಿಕೊಂಡು ಪಾಪವನ್ನು ಎದುರಿಸಿದರೆ, ಆಗ ನಾವು ಬೆಳಕಿನಲ್ಲಿ ನಡೆಯುತ್ತೇವೆ ಮತ್ತು ಕರ್ತನೊಂದಿಗೆ ಅನ್ಯೋನ್ಯತೆಯನ್ನು ಹೊಂದುತ್ತೇವೆ. ನಾವು ಹೀಗೆ ನಡೆದರೆ, ಸಭೆಯಾಗಿ ಸೇರಿದಾಗ ನಮ್ಮ ನಡುವೆ ನಿಜವಾದ ಅನ್ಯೋನ್ಯತೆ ಇರುತ್ತದೆ (1 ಯೋಹಾ 1:7).

ನಮ್ಮ ಹೃದಯಗಳು "ಪ್ರೀತಿಯಲ್ಲಿ ಹೊಂದಿಕೆಯಾಗುತ್ತವೆ" ಎಂದು ಕೊಲೊಸ್ಸೆಯವರಿಗೆ 2:2'ರ ವಚನವು ಹೇಳುತ್ತದೆ. ನನ್ನ ಸ್ವ-ಪ್ರಯತ್ನದಿಂದ ಇತರರೊಂದಿಗೆ ಪ್ರೀತಿಯ ಹೊಂದಿಕೆಯು ಸಾಧ್ಯವಾಗುವುದಿಲ್ಲ. ನಮ್ಮ ಹೃದಯಗಳನ್ನು ಪ್ರೀತಿಯಿಂದ ಜೋಡಿಸುವ ಈ ಕಾರ್ಯವನ್ನು ಪವಿತ್ರಾತ್ಮನು ಮಾತ್ರ ಮಾಡಬಲ್ಲನು. ಆದಾಗ್ಯೂ, ನಾನು ಮನುಷ್ಯನ ಯೋಜನೆಯ ಮೂಲಕ ನನ್ನ ಹೃದಯವನ್ನು ನಿಮ್ಮ ಹೃದಯದೊಂದಿಗೆ ಒಂದಾಗಿಸಲು ಪ್ರಯತ್ನಿಸಿದರೆ - ಯಾವುದೋ ಉಡುಗೊರೆ ಕೊಡುವುದು, ಅಥವಾ ನಿಮ್ಮೊಂದಿಗೆ ಸಮಯ ಕಳೆಯುವುದು, ಇತ್ಯಾದಿ - ನಾನು ಒಂದು ಸಂಘವನ್ನು (ಸಾಮಾಜಿಕ ಒಂದುಗೂಡುವಿಕೆ) ಮಾತ್ರ ಕಟ್ಟುತ್ತೇನೆ. ಆದರೆ ದೇವರು ಹೇಳುವುದು ಏನೆಂದರೆ, "ನೀನು ನಿನ್ನ ಸ್ವಾರ್ಥಕ್ಕೆ ಸತ್ತರೆ ಸಾಕು." ಪವಿತ್ರಾತ್ಮನು ನನ್ನನ್ನು ಇರಿಸಿರುವ ಸ್ಥಳೀಯ ಸಭೆಯಲ್ಲಿ ನಾನು ಹಾಗೆ ಮಾಡಿದಾಗ, ಆತನು ಕಣ್ಣಿಗೆ ಕಾಣಿಸದ ದೈವಿಕ ಪ್ರಭಾವದ ಮೂಲಕ ಸ್ವಂತ ಚಿತ್ತಕ್ಕೆ ಸಾಯುವ ಇತರ ವಿಶ್ವಾಸಿಗಳೊಂದಿಗೆ ನನ್ನ ಹೃದಯವನ್ನು ಒಂದುಗೂಡಿಸುತ್ತಾನೆ.

ಆಗ ನಮ್ಮ ನಡುವೆ ಸಿಹಿಯಾದ ಐಕ್ಯತೆ ಉಂಟಾಗುತ್ತದೆ - ಇದಕ್ಕೆ ಕಾರಣ ನಾವೆಲ್ಲರು ಒಂದೇ ಸಿದ್ಧಾಂತವನ್ನು ನಂಬುವುದು ಅಥವಾ ಎಲ್ಲರಿಗೂ ಪರಿಚಿತವಾದ ಹಾಡುಗಳನ್ನೇ ಹಾಡುವುದು ಅಲ್ಲ, ಆದರೆ ನಾವೆಲ್ಲರೂ ನೆಲಕ್ಕೆ ಬಿದ್ದು ನಮ್ಮ ಸ್ವಚಿತ್ತಕ್ಕೆ ಸತ್ತಿರುವುದೇ ಇದಕ್ಕೆ ಕಾರಣವಾಗಿದೆ. ನಾವು ಈ ರೀತಿಯಾಗಿ ಪವಿತ್ರಾತ್ಮನ ಮೂಲಕ ಪರಸ್ಪರ ಐಕ್ಯತೆಯನ್ನು ಹೊಂದುತ್ತೇವೆ.

ನಾವು ಸ್ವಂತ ಚಿತ್ತಕ್ಕೆ ಸಾಯದೆ ಯಾವುದೇ ಐಕ್ಯತೆಯನ್ನು ಹೊಂದಿದ್ದರೆ, ಅದು ಕೇವಲ ಗೆಳೆತನ ಆಗಿರುತ್ತದೆ, ಮತ್ತು ನಿಜವಾದ ಕ್ರಿಸ್ತೀಯ ಅನ್ಯೋನ್ಯತೆಯಲ್ಲ. ಅನ್ಯೋನ್ಯತೆಯು ಒಂದು ಅತ್ಮಿಕ ವಿಷಯವಾಗಿದೆ, ಆದರೆ ಗೆಳೆತನವು ಒಂದು ಲೌಕಿಕ ಸಂಗತಿಯಾಗಿದೆ.
==============================
"ನೀನು ನೆಲಕ್ಕೆ ಬಿದ್ದು ನಿನ್ನ ಸ್ವಾರ್ಥಕ್ಕೆ ಸಾಯಿ, ಅಷ್ಟೇ"
==============================

ಪ್ರಪಂಚದ ಜನರು ಗೆಳೆತನವನ್ನು ಹೊಂದಿರುತ್ತಾರೆ. ಪ್ರಪಂಚದ ಅನೇಕ ಸಾಮಾಜಿಕ ಸಂಘಗಳ ಸದಸ್ಯರ ನಡುವೆ ಬಹಳ ಆಪ್ತ ಸ್ನೇಹವಿರುತ್ತದೆ ಮತ್ತು ಆಳವಾದ ಪರಸ್ಪರ ಕಾಳಜಿಯೂ ಇರುತ್ತದೆ. ಆದರೆ ಅವರಲ್ಲಿ ನಿಜವಾದ ಅನ್ಯೋನ್ಯತೆ ಇರಲಾರದು - ಏಕೆಂದರೆ ಅದು ನಮ್ಮ ಜೀವಿತದಲ್ಲಿ ಪವಿತ್ರಾತ್ಮನು ಮಾತ್ರ ಮಾಡಬಹುದಾದ ಒಂದು ಆತ್ಮಿಕ ಕಾರ್ಯವಾಗಿದೆ. ದೇವರ ಒಬ್ಬ ಮಗ ಅಥವಾ ಮಗಳು "ತನ್ನ ದೇಹದಲ್ಲಿ ಯೇಸುವಿನ ಮರಣಾವಸ್ಥೆಯನ್ನು ಅನುಭವಿಸುತ್ತಿದ್ದಾನೆ" ಎಂಬುದನ್ನು ದೇವರು ಕಂಡುಕೊಂಡಾಗ, ಅದಕ್ಕೆ ಪ್ರತಿಫಲವಾಗಿ ದೇವರು ಆತನಿಗೆ ಅಥವಾ ಆಕೆಗೆ ಇನ್ನೂ ಪ್ರಭಾವವುಳ್ಳ "ಯೇಸುವಿನ ಜೀವವನ್ನು" ಕೊಡುತ್ತಾರೆ (2 ಕೊರಿ. 4:10,11). ಇಬ್ಬರು ವಿಶ್ವಾಸಿಗಳಲ್ಲಿ ಇರುವಂತ ಈ "ಯೇಸುವಿನ ಜೀವದಿಂದ" ಅವರ ನಡುವೆ ಯಥಾರ್ಥವಾದ ಐಕ್ಯತೆ ಉಂಟಾಗುತ್ತದೆ. ಅದಲ್ಲದೆ ಇಂತಹ ಜನರ ಮೂಲಕ ದೇವರು ತಮ್ಮ ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟುತ್ತಾರೆ.

ನಾನು ಈ ಸತ್ಯಾಂಶಗಳನ್ನು ಅರಿತುಕೊಳ್ಳಲು ಪ್ರಾರಂಭಿಸಿದಾಗ, ನಾನು "ಕರ್ತನೇ, ನಿನ್ನ ನಿಜವಾದ ಸಭೆಯನ್ನು ಕಟ್ಟಬೇಕೆಂದು ಇಚ್ಛಿಸುವ ಜನರು ಎಲ್ಲಿದ್ದಾರೆ?" ಎಂದು ಕರ್ತನನ್ನು ಕೇಳುವುದನ್ನು ನಿಲ್ಲಿಸಿದೆನು. ದೇವರು ಅವರನ್ನು ಹುಡುಕಿ, ಅವರನ್ನು ಮತ್ತು ನಮ್ಮನ್ನು ಜೊತೆಗೂಡಿಸುತ್ತಾರೆಂದು ನನಗೆ ಅರಿವಾಯಿತು - ಮೊದಲು ಸ್ವತಃ ನಾನು ನೆಲಕ್ಕೆ ಬಿದ್ದು ಸಾಯಲು ಸಿದ್ಧನಾಗಿದ್ದರೆ ಇದು ಸಾಧ್ಯವಾಗುತ್ತದೆ. ನಾನು ಸಾಯಲು ಸಿದ್ಧನಾಗದಿದ್ದರೆ, ಆಗ ದೇವರು ಅವರನ್ನು ನನ್ನ ಬಳಿಗೆ ತರುವುದಿಲ್ಲ.

ನಮ್ಮ ಸುತ್ತಮುತ್ತಲು ಪೂರ್ಣಹೃದಯದ ವಿಶ್ವಾಸಿಗಳನ್ನು ಹುಡುಕಲು ಪ್ರಯತ್ನಿಸುವುದು, "ದೊಡ್ಡ ರಾಶಿಯಲ್ಲಿ ಸೂಜಿಗಳನ್ನು" ಹುಡುಕುವಷ್ಟೇ ಕಷ್ಟಕರ ಕೆಲಸವಾಗಿದೆ. ಒಂದು ಹುಲ್ಲಿನ ರಾಶಿಯಲ್ಲಿ ಸೇರಿಕೊಂಡ ಪುಟ್ಟ ಸೂಜಿಗಳನ್ನು ಆರಿಸಿ ತೆಗೆಯುವುದಕ್ಕೆ ಹಲವು ವರ್ಷಗಳೇ ಬೇಕಾಗಬಹುದು; ಬಹುಶಃ ಕೆಲವು ವರ್ಷಗಳ ಪ್ರಯಾಸದಿಂದ ನಾವು ಒಂದು ಸೂಜಿಯನ್ನು ಹುಡುಕಬಹುದು. ಆದರೆ ಕರ್ತರು ಹೀಗೆನ್ನುತ್ತಾರೆ, "ನೀನು ಆ ಸೂಜಿಗಳನ್ನು ಹುಡುಕುತ್ತಾ ಸಮಯವನ್ನು ವ್ಯರ್ಥಗೊಳಿಸಬೇಡ. ಅವು ಎಲ್ಲಿವೆಯೆಂದು ನನಗೆ ತಿಳಿದಿದೆ. ನೀನು ಸುಮ್ಮನೆ ನೆಲಕ್ಕೆ ಬೀಳು ಮತ್ತು ನಿನ್ನ ಸ್ವಾರ್ಥಕ್ಕೆ ಸಾಯಿ" ಆಗ ನಿನ್ನೊಳಗಿನ ಯೇಸುವಿನ ಜೀವವು ಎಷ್ಟು ಪ್ರಭಾವಶಾಲಿಯಾದ ಅಯಸ್ಕಾಂತವಾಗುತ್ತದೆ ಎಂದರೆ, ಅದು ಆ ಸೂಜಿಗಳನ್ನು (ಪೂರ್ಣಹೃದಯದ ವಿಶ್ವಾಸಿಗಳನ್ನು) ಎಳೆದು ತರುತ್ತದೆ" (ಯೋಹಾ. 1:4; 12:32).

ದೈವಿಕ ಜೀವಿತಕ್ಕಾಗಿ ಮತ್ತು ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟುವುದಕ್ಕಾಗಿ ನಿನ್ನಂತೆಯೇ ಕಾತುರರಾಗಿರುವ ಇತರ ವಿಶ್ವಾಸಿಗಳು ನಿನ್ನ ಕಡೆಗೆ ಮತ್ತು ನೀನು ಸಾರುವ ಶಿಲುಬೆಯ ಸಂದೇಶಕ್ಕೆ ಸೆಳೆಯಲ್ಪಡುವರು. ಇದು ದೇವರ ವಿಧಾನವಾಗಿದೆ. ದೇವರು ಪೂರ್ಣಹೃದಯದ ಜನರನ್ನು ನಮ್ಮ ಬಳಿಗೆ ಕರೆತರುತ್ತಾರೆ. ಯೇಸುವು ಹೇಳಿದಂತೆ, "ತಂದೆಯು ನನಗೆ ಕೊಡುವಂಥವರೆಲ್ಲರು ನನ್ನ ಬಳಿಗೆ ಬರುವರು" (ಯೋಹಾ. 6:37). ನಮಗಾಗಿಯೂ ತಂದೆಯು ಇದನ್ನೇ ಮಾಡುವರು. ಹೊಸ ಒಡಂಬಡಿಕೆಯ ಸಭೆಯನ್ನು ನಾವು ಈ ರೀತಿಯಾಗಿ ಕಟ್ಟುತ್ತೇವೆ.