WFTW Body: 

ನಾವು ವಿಮೋಚನಕಾಂಡ 17ನೇ ಅಧ್ಯಾಯದಲ್ಲಿ, ಇಸ್ರಾಯೇಲ್ಯರು ಕುಡಿಯುವ ನೀರಿಲ್ಲದ ಒಂದು ಸ್ಥಳಕ್ಕೆ ಬರುವದನ್ನು ನೋಡುತ್ತೇವೆ. ಅಲೆಗಳ ಏರಿಳಿತದ ಹಾಗೆ, ಇಸ್ರಾಯೇಲ್ಯರು ಮತ್ತೊಮ್ಮೆ ಗುಣಗುಟ್ಟಲು ಪ್ರಾರಂಭಿಸುತ್ತಾರೆ. ಆಗ ಮತ್ತೊಮ್ಮೆ ಕರ್ತನು ತಾನು ನೀಡುವ ಪರಿಹಾರವು ಇಸ್ರಾಯೇಲ್ಯರ ಕಣ್ಣೆದುರಿಗೇ ಇರುವದಾಗಿ ತೋರಿಸಿಕೊಡುತ್ತಾನೆ. ಆತನು ಮೋಶೆಗೆ ಹೀಗೆನ್ನುತ್ತಾನೆ, "ನಿನ್ನ ಎದುರಿನ ಆ ಬಂಡೆಯನ್ನು ಹೊಡೆ" (ವಚನ 6). ಮೋಶೆಯು ಆ ಬಂಡೆಯನ್ನು ಹೊಡೆಯುತ್ತಾನೆ, ಮತ್ತು ಅಲ್ಲಿಂದ ನೀರು ಹೊರಡುತ್ತದೆ. ನಾನು ಮೊದಲ ಬಾರಿ ಈ ವಚನವನ್ನು ಓದಿದಾಗ, ನನ್ನ ಮನಸ್ಸಿನಲ್ಲಿ ಒಂದು ಸಣ್ಣ ಬಂಡೆ, ಅದರಿಂದ ಹೊರಡುವ ನೀರಿನ ಒಂದು ಚಿಕ್ಕ ಧಾರೆ, ಆ ನೀರನ್ನು ಎಲ್ಲರೂ ಕುಡಿಯುವ ಒಂದು ಚಿತ್ರಣವನ್ನು ಮಾಡಿಕೊಂಡೆನು. ಆದರೆ ಆ ಅರಣ್ಯದಲ್ಲಿ ಬಾಯಾರಿದ್ದ ಎಷ್ಟು ಜನರು ಇದ್ದರೆಂದು ನಿಮಗೆ ಗೊತ್ತಿದೆಯೇ? ಕೇವಲ 20 ರಿಂದ 60ರ ನಡುವಿನ ವಯಸ್ಸಿನ 6,00,000 ಜನ. ಇದಲ್ಲದೆ ಅನೇಕ ಮುದಿ ವಯಸ್ಸಿನ ಹಿರಿಯರು, ಯುವಕ ಯುವತಿಯರು ಮತ್ತು ಮಕ್ಕಳು ಅಲ್ಲಿ ಇದ್ದರು. ಅಲ್ಲಿ ಕಡಿಮೆ ಎಂದರೂ 20 ಲಕ್ಷ ಮಂದಿ ಇದ್ದಿರಬಹುದು. ಹಾಗಿದ್ದಲ್ಲಿ 20 ಲಕ್ಷ ಜನರು ಕುಡಿಯುವುದಕ್ಕೆ ಎಷ್ಟು ನೀರು ಬೇಕಾಗಿತ್ತು? ನೀರಿನ ಒಂದು ಚಿಕ್ಕ ಧಾರೆ ಅವರಿಗೆ ಸಾಕಿತ್ತಾ? ಇಲ್ಲ! ಆ 20 ಲಕ್ಷ ಜನರು ತಕ್ಷಣಕ್ಕೆ ನೀರು ಕುಡಿಯಬೇಕೆಂದರೆ, ಅಲ್ಲಿ ನಾಲ್ಕು ದಿಕ್ಕುಗಳಿಗೆ ಹರಿಯುವ ಅನೇಕ ಹೊಳೆಗಳು ಇದ್ದಿರಬೇಕು. ಆ 20 ಲಕ್ಷ ಜನರು ಸಾಲಾಗಿ ಬಂದು ನೀರಿನ ಒಂದು ಸಣ್ಣ ತೊರೆಯಿಂದ ನೀರು ಕುಡಿಯುವದಾಗಿದ್ದರೆ, ಆ ಸಾಲು ಮುಂದೆ ಹೋಗುವುದಕ್ಕಿಂತ ಮುಂಚೆಯೇ ಅನೇಕರು ಬಾಯಾರಿಕೆಯಿಂದ ಸಾಯುತ್ತಿದ್ದರು! ಇಲ್ಲ. ಆ ಅರಣ್ಯದಲ್ಲಿ ಹೊಡೆಯಲ್ಪಟ್ಟ ಆ ಬಂಡೆಯಿಂದ ಅನೇಕ ಹೊಳೆಗಳು ಹರಿದವು. ಯೋಹಾನ 7:37-39 ರಲ್ಲಿ ಶಿಲುಬೆಗೆ ಏರಿಸಲ್ಪಟ್ಟ (ಬಂಡೆಯನ್ನು ಹೊಡೆಯುವಂತದ್ದು) ಒಬ್ಬ ಮನುಷ್ಯನಿಂದ ದೈವಿಕವಾದ ನೀರು ಹರಿಯುವ ಇಂತಹದೇ ಚಿತ್ರಣವನ್ನು ಯೇಸುವು ಕೊಟ್ಟಿದ್ದಾರೆ.

ಕಲ್ವಾರಿಯಲ್ಲಿ ಯೇಸುವಿನ ಹೊಡೆಯಲ್ಪಡುವಿಕೆಯು ಪಂಚಶತ್ತಮ ದಿನಕ್ಕೆ ದಾರಿಮಾಡಿತು. ಯಾವಾಗಲೂ ಪಂಚಶತ್ತಮ ದಿನ ಬರುವದಕ್ಕೆ ಮೊದಲು ಕಲ್ವಾರಿಯು ಬರುತ್ತದೆ. ನಾವು ಪವಿತ್ರಾತ್ಮನ ಸ್ನಾನ ಪಡೆದ ತಕ್ಷಣವೇ ಜೀವವುಳ್ಳ ನೀರಿನ ಹೊಳೆಗಳು ನಮ್ಮಿಂದ ಉಕ್ಕಿ ಹರಿಯುವುದಿಲ್ಲ. ನಾವು ಪ್ರಾಮಾಣಿಕರಾಗಿರುವುದಾದರೆ, ನಾವು ಇದನ್ನು ಒಪ್ಪಿಕೊಳ್ಳುತ್ತೇವೆ. ಇತರರನ್ನು ಆಶೀರ್ವದಿಸುವ ಹೊಳೆಗಳು ನಮ್ಮಿಂದ ಉಕ್ಕಿ ಹರಿಯುವದಕ್ಕೆ ಮುನ್ನ, ದೇವರು ನಮ್ಮನ್ನು ಮುರಿಯುವದಕ್ಕಾಗಿ ನಮ್ಮನ್ನು ಹೊಡೆದು ಶಿಲುಬೆಗೆ ಏರಿಸುವ ಒಂದು ಕಾರ್ಯವನ್ನು ಮಾಡಬೇಕು. ದೇವರು ಹುಡುಕುತ್ತಿರುವದು ನಿಮ್ಮ-ನನ್ನಂತಹ ಸಾಮಾನ್ಯರನ್ನು, ಪ್ರಯೋಜನಕ್ಕೆ ಬಾರದವರನ್ನು, ಬಲಹೀನರನ್ನು, ಮೂರ್ಖರನ್ನು; ಇಂಥವರನ್ನು ಈ ಲೋಕದಾದ್ಯಂತ ಲಕ್ಷಾಂತರ ಜನರಿಗೆ ಆಶಿರ್ವಾದದ ನಿಧಿಯಾಗುವಂತೆ ಅವರು ಮಾಡಬಲ್ಲರು. ಆದರೆ ಇದು ದೇವರು ನಮ್ಮನ್ನು ಹೊಡೆದು ಮುರಿಯಲು ನಾವು ಅನುಮತಿಸುತ್ತೇವೋ, ಇಲ್ಲವೋ ಎನ್ನುವುದರ ಮೇಲೆ ಅವಲಂಬಿತವಾಗಿದೆ.

ಹೊಳೆಗಳು ಉಕ್ಕಿ ಹರಿಯಲು ಪ್ರಾರಂಭಿಸಿದ ತಕ್ಷಣವೇ, 8ನೇ ವಚನದಲ್ಲಿ ನಾವು ಈ ರೀತಿಯಾಗಿ ಓದುತ್ತೇವೆ, "ಅಮಾಲೇಕ್ಯರು ಬಂದರು". ಹಳೆ ಒಡಂಬಡಿಕೆಯ ಉದ್ದಕ್ಕೂ, ಅಮಾಲೇಕ್ಯರು ನಮ್ಮ ಮಾಂಸದ ಚಿತ್ರಣವಾಗಿದ್ದಾರೆ. ಆತ್ಮ ಮತ್ತು ಮಾಂಸವು ಸತತವಾಗಿ ಘರ್ಷಣೆಯಲ್ಲಿವೆ. ಹೊಳೆಗಳು ಉಕ್ಕಿ ಹರಿಯಲು ಆರಂಭಿಸಿದ ತಕ್ಷಣವೇ ಅಮಾಲೇಕ್ಯರು ದೇವಜನರ ವಿರುದ್ಧ ಯುದ್ಧ ಮಾಡಲು ಕಾಣಿಸಿಕೊಳ್ಳುತ್ತಾರೆ. ಯೇಸುವು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ತಕ್ಷಣವೇ ಸೈತಾನನು ಯೇಸುವನ್ನು ಶೋಧಿಸಲು ಬಂದನು (ಲೂಕ 3:22, 4:12) . ಅಮಾಲೇಕ್ಯರು ಮೋಶೆ ಮತ್ತು ಯೆಹೋಶುವ ಇವರಿಬ್ಬರು ಸೇರಿ ಮಾಡಿದ ಹೋರಾಟದಿಂದ ಅಂತಿಮವಾಗಿ ಸೋತುಹೋದರು. ಮೋಶೆಯು ಬೆಟ್ಟದ ತುದಿಯಲ್ಲಿ ತನ್ನ ಕೈಗಳನ್ನೆತ್ತಿ ಪ್ರಾರ್ಥಿಸಿದನು ಮತ್ತು ಯೆಹೋಶುವನು ಕಣಿವೆಯಲ್ಲಿ ಅಮಾಲೇಕ್ಯರ ವಿರುದ್ಧ ಯುದ್ಧ ಮಾಡಿದನು. ನಾವೂ ಸಹ ಮಾಂಸವನ್ನು ಜಯಿಸಲು ಸಮರ್ಥರಾಗುವದು ಇವೆರಡರ ಐಕ್ಯತೆಯ ಮೂಲಕ - ಆತ್ಮದ ಖಡ್ಗವನ್ನು (ದೇವರ ವಾಕ್ಯ) ಶತ್ರುವಿನ ವಿರುದ್ಧ ನೇರವಾಗಿ ಉಪಯೋಗಿಸಿದಾಗ (ಅರಣ್ಯದಲ್ಲಿ ಯೇಸುವು ಉಪಯೋಗಿಸಿದಂತೆ) ಮತ್ತು ನಮ್ಮ ಕೈಗಳನ್ನು ಎತ್ತಿ (ನಮ್ಮ ಅಸಹಾಯಕತೆ ಮತ್ತು ಬಲಹೀನತೆಯನ್ನು ಒಪ್ಪಿಕೊಂಡು) ದೇವರಿಗೆ ಪ್ರಾರ್ಥಿಸಿದಾಗ.

ಮೋಶೆಯ ಕೈಗಳು ಬಳಲಿದಾಗ, ಆರೋನ ಮತ್ತು ಹೂರರು ಆತನ ಕೈಗಳನ್ನು ಎತ್ತಿ ಹಿಡಿದರು (ವಿಮೋಚನಕಾಂಡ 17:12) . ನಾವು ನಿಶ್ಯಕ್ತತೆಯಿಂದ ಬಲಹೀನರಾದಾಗ, ನಮಗೂ ಸಹ ಸಹಾಯಕ್ಕಾಗಿ ಆರೋನ ಮತು ಹೂರರ ಅಗತ್ಯತೆ ಇದೆ. ನನ್ನ ಕ್ರೈಸ್ತ ಜೀವಿತದಲ್ಲಿ ನಾನು ಗ್ರಹಿಸಿಕೊಂಡಿರುವ ದೊಡ್ಡ ಸತ್ಯಗಳಲ್ಲಿ ಒಂದು ಇದು: "ನಾನು ಒಬ್ಬಂಟಿಗನಾಗಿ ಜಯಶಾಲಿಯಾಗಲು ಸಾಧ್ಯವಿಲ್ಲ. ಕ್ರಿಸ್ತನ ದೇಹದ ನನ್ನ ಸಹ ವಿಶ್ವಾಸಿಗಳು ನನಗೆ ಅಗತ್ಯವಾಗಿ ಬೇಕಾಗಿದ್ದಾರೆ".

ನಾನು ಅನೇಕ ವರುಷಗಳ ಹಿಂದೆಯೇ ದಾರಿತಪ್ಪದೇ ಇಂದಿನ ವರೆಗೂ ನಿಂತಿರುವದಾದರೆ, ಮತ್ತು ನಾನು ತಿಳಿದುಕೊಂಡಿರುವ ಸತ್ಯತೆಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳದೇ ಇನ್ನೂ ಇರುವದಾದರೆ, ಅದಕ್ಕೆ ಒಂದು ಕಾರಣ, ನನ್ನನ್ನು ಸತತವಾಗಿ ಪ್ರೋತ್ಸಾಹಿಸಿ, ನನಗಾಗಿ ಪ್ರಾರ್ಥಿಸಿ ನನ್ನನ್ನು ಎಚ್ಚರಿಸಿದಂತಹ ಸಹೋದರ, ಸಹೋದರಿಯರನ್ನು ನಾನು ಹೊಂದಿದ್ದೇನೆ. ಹಲವಾರು ವರುಷಗಳಿಂದ ನನ್ನ ಕೈಗಳನ್ನು ಎತ್ತಿ ಹಿಡಿದಿರುವ ಅನೇಕ ಆರೋನ ಮತ್ತು ಹೂರರನ್ನು ನಾನು ಹೊಂದಿದ್ದೇನೆ, ಮತ್ತು ಅವರು ನನಗೆ ಎಷ್ಟು ಅಮೂಲ್ಯರೆಂದು ನಾನು ಅರಿತಿದ್ದೇನೆ. ಆರೋನ ಮತು ಹೂರರು ಮೋಶೆಯು ಹೊಂದಿದ ವರಗಳನ್ನು ಹೊಂದಿರಲಿಲ್ಲ ಮತ್ತು ಮೋಶೆಯು ದೇವರನ್ನು ಅರಿತಿದ್ದಂತೆ ಅವರು ಅರಿತಿರಲಿಲ್ಲ. ಆದರೂ ಮೋಶೆಗೆ ಅವರ ಅಗತ್ಯತೆ ಇತ್ತು. ಆರೋನನಾದರೂ ಒಬ್ಬ ನಾಯಕನಾಗಿದ್ದನು. ಆದರೆ ಹೂರನು ಒಬ್ಬ ಅಪರಿಚಿತ ವ್ಯಕ್ತಿಯಾಗಿದ್ದನು, ಇವನು ಮುಂದೆ ಸತ್ಯವೇದದಲ್ಲಿ ಎಲ್ಲೂ ಕಾಣಸಿಗುವುದಿಲ್ಲ! ಆದರೆ ಮೋಶೆಯು ಒಬ್ಬ ದೊಡ್ಡ ದೈವಿಕ ಮನುಷ್ಯನಾಗಿದ್ದರೂ ಸಹ, ಆತನಿಗೆ ಯಾರೂ ಅರಿಯದ ಈ ಮನುಷ್ಯನ ಸಹಾಯ ಅಗತ್ಯವಾಗಿತ್ತು. ಹಾಗಾಗಿ ಕ್ರಿಸ್ತನ ದೇಹದ ದುರ್ಬಲ ಅಪರಿಚಿತ ಸಹೋದರರನ್ನು ಅಲಕ್ಷ್ಯ ಮಾಡಬೇಡಿರಿ. ನೀವು ವಿಶ್ವದ ಒಬ್ಬ ಅತಿ ದೊಡ್ಡ ದೈವಿಕ ಮನುಷ್ಯನೇ ಆಗಿದ್ದರೂ, ನಿಮಗೆ ಅವರ ಅವಶ್ಯಕತೆ ಇದೆ. ಗೆತ್ಸೇಮನೆಯಲ್ಲಿ ಸ್ವತಃ ಯೇಸುವು, ಆಗಾಗ ಎಡವಿ ಬೀಳುವ ಸ್ವಭಾವದ ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಪ್ರಾರ್ಥನೆಯಲ್ಲಿ ತನ್ನೊಂದಿಗೆ ಕೈಗೂಡಿಸುವಂತೆ ಕೇಳಿಕೊಂಡನು! "ತಲೆಯು (ಕ್ರಿಸ್ತನು) ಕಾಲುಗಳಿಗೆ (ದೇಹದ ಅಲ್ಪ ಮಾನವುಳ್ಳ ಅಂಗಗಳು) - ನನಗೆ ನೀವು ಅವಶ್ಯವಿಲ್ಲವೆಂದು ಹೇಳುವುದಕ್ಕಾಗುವುದಿಲ್ಲ" (1 ಕೊರಿಂಥ 12:21) .