WFTW Body: 

ಅಪೊಸ್ತಲ ಪೌಲನ ಅನುಭವದಿಂದ, ಪವಿತ್ರಾತ್ಮ-ಪ್ರೇರಿತ ಸೇವೆಯ ಕುರಿತಾಗಿ ನಾಲ್ಕು ವಿಷಯಗಳನ್ನು ಆತನ ಮಾತುಗಳಲ್ಲೇ ನಿಮಗೆ ತೋರಿಸಲು ನಾನು ಇಚ್ಛಿಸುತ್ತೇನೆ.

ಪ್ರೀತಿಯಿಂದ ಪ್ರೇರಿತನಾದ ಒಬ್ಬ ದಾಸನು: ಆತ್ಮ-ಪ್ರೇರಿತ ಸೇವೆಯು ಮೊದಲನೆಯದಾಗಿ, ಪ್ರೀತಿಯಿಂದ ಪ್ರೇರಿತನಾದ ಒಬ್ಬ ಗುಲಾಮನು ಮಾಡುವ ಸೇವೆಯಾಗಿದೆ. "ನಾನು ಯಾರವನು ಆಗಿದ್ದೇನೋ, ಯಾರನ್ನು ಸೇವಿಸುತ್ತೇನೋ ಆ ದೇವರು...," ಎಂದು ಪೌಲನು ಅಪೊ. ಕೃ. 27:23 ರಲ್ಲಿ ಹೇಳುತ್ತಾನೆ. ಆತನು ತನ್ನ ದೇವರನ್ನು ಪ್ರೀತಿಸಿ, ಅವರ ಗುಲಾಮನಾದನು. ಅವನ ಜೀವನದಲ್ಲಿ ಅವನಿಗೆ ಯಾವ ಹಕ್ಕೂ ಇರಲಿಲ್ಲ, ಏಕೆಂದರೆ ಆತನು ಎಲ್ಲವನ್ನೂ ತನ್ನ ಯಜಮಾನನಿಗೆ ಒಪ್ಪಿಸಿಕೊಟ್ಟಿದ್ದನು. ಅದಲ್ಲದೆ, ಒಬ್ಬ ಮನುಷ್ಯನು ತನ್ನ ಇಡೀ ಜೀವನವನ್ನು ದೇವರಿಗೆ ಒಪ್ಪಿಸಿಕೊಟ್ಟು ದೇವರಿಗೆ ಒಂದು ದೊಡ್ಡ ಉಪಕಾರವನ್ನು ಮಾಡುವದಿಲ್ಲ. ಖಂಡಿತವಾಗಿ ಇಲ್ಲ! ಆತನು ದೇವರಿಂದ ಕದ್ದಿದ್ದುದನ್ನು ಅವರಿಗೆ ಹಿಂದಿರುಗಿಸುತ್ತಿದ್ದಾನೆ, ಅಷ್ಟೇ. ನಾನು ಇನ್ನೊಬ್ಬನ ಹಣವನ್ನು ಕಳವು ಮಾಡಿ, ಸ್ವಲ್ಪ ಸಮಯದ ನಂತರ ನನ್ನ ಪಾಪದ ಅರಿವಾಗಿ, ಆ ಹಣವನ್ನು ಅವನಿಗೆ ವಾಪಾಸು ಮಾಡಿದರೆ, ನಾನು ಆ ವ್ಯಕ್ತಿಗೆ ಯಾವ ಉಪಕಾರವನ್ನೂ ಮಾಡಿಲ್ಲ. ನಾನು ಅವನ ಬಳಿಗೆ ಒಬ್ಬ ಪಶ್ಚಾತ್ತಾಪ ಪಟ್ಟಿರುವ ಕಳ್ಳನಂತೆ ಹೋಗುತ್ತೇನೆ. ಅದೇ ರೀತಿ ನಾವು ನಮ್ಮ ಜೀವನವನ್ನು ದೇವರಿಗೆ ಸಮರ್ಪಿಸಲು ಬರುವಾಗ, ಇದೇ ಮನೋಭಾವವನ್ನು ಇರಿಸಿಕೊಳ್ಳುವದು ಒಳ್ಳೆಯದು. ದೇವರು ನಮ್ಮನ್ನು ಖರೀದಿ ಮಾಡಿದ್ದಾರೆ. ನಾವು ಇದನ್ನು ಒಪ್ಪಿಕೊಂಡರೆ, ನಮ್ಮ ಜೀವನ ಸಮರ್ಪಣೆಗೆ ಸೂಕ್ತವಾದ ಕಾರಣ ಏನೆಂದು ನಮಗೆ ತಿಳಿಯುತ್ತದೆ.

ಪೌಲನು ದೇವರಿಗೆ ಒಬ್ಬ ಪ್ರೀತಿಪೂರ್ವಕ ಗುಲಾಮನಾಗಿದ್ದನು. ಒಬ್ಬ ಇಬ್ರಿಯನು ತನ್ನ ಯಜಮಾನನಿಗೆ ಆರು ವರ್ಷ ದಾಸನಾಗಿದ್ದು, ಏಳನೆಯ ವರ್ಷದಲ್ಲಿ ಏನೂ ಕೊಡದೆ ಬಿಡುಗಡೆಗೊಳ್ಳುವ ಅವಕಾಶವಿದ್ದಾಗ್ಯೂ, ಆತನು ತನ್ನ ಯಜಮಾನನನ್ನು ಪ್ರೀತಿಸಿದ್ದರಿಂದ ದಾಸತ್ವದಲ್ಲೇ ಮುಂದುವರಿಯಲು ನಿರ್ಧಾರ ಮಾಡಿದಂತೆ (ವಿಮೋಚನಕಾಂಡ 21:1-6) , ಪೌಲನು ತನ್ನ ಕರ್ತನ ಸೇವೆಯನ್ನು ಮಾಡಿದನು. ಆತನು ಸಂಬಳಕ್ಕಾಗಿ ಕೆಲಸ ಮಾಡುವಂಥ ಕೂಲಿಯಾಳು ಆಗಿರಲಿಲ್ಲ, ಆದರೆ ಯಾವ ಹಕ್ಕು ಬಾಧ್ಯತೆಯೂ ಇಲ್ಲದೆ ಸೇವೆ ಮಾಡುವವನು ಆಗಿದ್ದನು. ಈ ರೀತಿಯಾಗಿ ತಮ್ಮನ್ನೇ ಒಪ್ಪಿಸಿಕೊಡುವಂಥ ಜನರನ್ನು ದೇವರು ಹುಡುಕುತ್ತಿದ್ದಾರೆ - ಯಾರು ಅವರನ್ನೇ ದೃಷ್ಟಿಸಿ, ಅವರು ಏನನ್ನು ಬಯಸುತ್ತಾರೆಂದು ತಿಳಿಯಲು ಕಾದಿರುವವರನ್ನು - ಆದರೆ ದೇವರಿಗಾಗಿ ತಮ್ಮ ಸ್ವಂತ ಅನಿಸಿಕೆಯ ಪ್ರಕಾರ ಏನಾದರೂ ಮಾಡುವದರಲ್ಲಿ ಮಗ್ನರಾಗಿರುವ ಜನರನ್ನಲ್ಲ. ಒಬ್ಬ ಗುಲಾಮನು ತನ್ನ ಇಷ್ಟದಂತೆ ಕೆಲಸ ಮಾಡುವದಿಲ್ಲ. ಇಲ್ಲ. ಗುಲಾಮನು ತನ್ನ ಯಜಮಾನನನ್ನು, "ಒಡೆಯನೇ, ನಾನು ಏನು ಮಾಡಬೇಕೆಂದು ನಿಮ್ಮ ಇಚ್ಛೆಯಾಗಿದೆ?" ಎಂದು ಕೇಳುತ್ತಾನೆ. ಮತ್ತು ಅವನ ಆದೇಶದ ಪ್ರಕಾರ ಕೆಲಸ ಮಾಡುತ್ತಾನೆ. "ಒಬ್ಬ ಸೇವಕನು ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಯಜಮಾನನು ಹೇಳಿದ ಕೆಲಸವನ್ನು ಮಾತ್ರ ಮಾಡುತ್ತಾನೆ" (1 ಕೊರಿಂಥ 4:2 - Living Bible) .

ಸುವಾರ್ತಾ ಪ್ರಸಾರದಲ್ಲಿ ಹೆಚ್ಚಿನ ಉತ್ಸಾಹ: ಎರಡನೆಯ ವಿಷಯ, ಪವಿತ್ರಾತ್ಮನ ತುಂಬಿಸುವಿಕೆಯಿಂದ ಮಾಡುವ ಸೇವೆಯು, ಇತರರಿಗೆ ತೀರಿಸಬೇಕಾದ ಸಾಲವೆಂದು ತಿಳಿದುಕೊಂಡು ಮಾಡುವ ಸೇವೆಯಾಗಿದೆ. ಪೌಲನು ಹೇಳಿದಂತೆ, "ಗ್ರೀಕರಿಗೂ (ಸಭ್ಯರು) ಇತರ ಜನಗಳಿಗೂ (ಅಶಿಕ್ಷಿತರು) ತೀರಿಸಬೇಕಾದ ಋಣ ನನ್ನ ಮೇಲೆ ಅದೆ" (ರೋಮಾ 1:14) ." ದೇವರು ನಮಗೆ ಒಂದು ಅಮೂಲ್ಯ ನಿಧಿಯನ್ನು ಈ ಲೋಕದ ಜನರೊಂದಿಗೆ ಹಂಚಿಕೊಳ್ಳಲಿಕ್ಕಾಗಿ ನೀಡಿದ್ದಾರೆ. ನಮ್ಮನ್ನು ಅಂಚೆ-ಕಛೇರಿಯ ಒಬ್ಬ ಪೇದೆಗೆ ಹೋಲಿಸಿಕೊಳ್ಳಬಹುದು; ಮತ್ತು ಹಲವಾರು ಜನರಿಗೆ ’ಮನಿಯಾರ್ಡರ್’ ಮೂಲಕ ಬಂದಿರುವ ಬಹಳ ದೊಡ್ಡ ಮೊತ್ತದ ಹಣವನ್ನು ತಲುಪಿಸುವ ಜವಾಬ್ದಾರಿ ಆ ಅಂಚೆ-ಜವಾನನ ಮೇಲೆ ಇರಿಸಲಾಗಿದೆ. ಒಬ್ಬೊಬ್ಬನಿಗೂ ಸೇರಬೇಕಾದ ಹಣವನ್ನು ತಲುಪಿಸುವ ತನಕ ಆ ಅಂಚೆ-ಜವಾನನು ಅವರೆಲ್ಲರ ಸಾಲಗಾರನಾಗಿರುತ್ತಾನೆ. ಅವನ ಕೈಯಲ್ಲಿ ಲಕ್ಷಾಂತರ ಮೊತ್ತದ ಹಣ ಇರಬಹುದು, ಆದರೆ ಅದರಲ್ಲಿ ಒಂದು ಕಾಸು ಕೂಡ ಅವನಿಗೆ ಸೇರಿದ್ದಲ್ಲ. ಅವನು ಅನೇಕ ಜನರ ಸಾಲಗಾರನಾಗಿದ್ದಾನೆ. ದೇವರು ಅಪೊಸ್ತಲನಿಗೆ ಸುವಾರ್ತೆಯ ಶುಭಸಂದೇಶವನ್ನು ಒಪ್ಪಿಸಿಕೊಟ್ಟಾಗ, ಅದು ಇಂತಹದೇ ಒಂದು ಸಾಲವಾಗಿದೆ ಎಂದು ಆತನು ಗ್ರಹಿಸಿದನು. ಅದು ಇತರರಿಗೆ ಪ್ರಸಾರವಾಗಬೇಕು ಎಂದು ಆತನಿಗೆ ತಿಳಿದಿತ್ತು. ಆ ರಕ್ಷಣೆಯ ಸಂದೇಶವನ್ನು ಅವರಿಗೆ ತಲುಪಿಸಿ ಮುಗಿಸುವ ತನಕ ಆ ಋಣವು ತನ್ನ ಮೇಲೆ ಇರುತ್ತದೆಂದು ಸಹ ಅವನು ಅರಿತಿದ್ದನು. 25 ವರ್ಷಗಳನ್ನು ಸುವಾರ್ತೆಯ ಉಪದೇಶಕನಾಗಿ ಕಳೆದ ನಂತರವೂ, ಪೌಲನು "ನಾನೊಬ್ಬ ಸಾಲಗಾರನು," ಎಂದು ಹೇಳುತ್ತಾನೆ, ಮತ್ತು ರೋಮಾಪುರದ ಕ್ರೈಸ್ತರ ಬಳಿಗೆ ಬಂದು ಅವರ ಋಣವನ್ನು ತೀರಿಸಲು ತಾನು ಸಿದ್ಧನಾಗಿರುವದಾಗಿ ಹೇಳುತ್ತಾನೆ. ರೋಮಾ 1:14-16ರಲ್ಲಿ ಕಂಡುಬರುವ ಮೂರು "ನಾನು"ಗಳನ್ನು ಗಮನಿಸಿರಿ: "ನನ್ನ ಮೇಲೆ ಋಣ ಅದೆ ...ನಾನು ಸಿದ್ಧವಾಗಿದ್ದೇನೆ ...ನಾನು ನಾಚಿಕೊಳ್ಳುವವನಲ್ಲ". ಪವಿತ್ರಾತ್ಮ-ಪ್ರೇರಿತ ಸೇವೆಯು ಸ್ನೇಹಪರವಾಗಿದೆ. ಇತರರಿಗೆ ಸಲ್ಲಬೇಕಾದ ಋಣವನ್ನು ಗುರುತಿಸಿ, ಅದನ್ನು ಪೂರೈಸಲು ಅದು ಯಾವಾಗಲೂ ಸಿದ್ಧವಾಗಿರುತ್ತದೆ. ಆತ್ಮ-ಭರಿತ ಸೇವೆಯು ಉತ್ಸಾಹದಿಂದ ತುಂಬಿದ್ದು, ಯಾವಾಗಲೂ ಇತರರ ಬಗ್ಗೆ ಕಾಳಜಿ ಹೊಂದಿರುತ್ತದೆ. ಅದು ಇತರರ ಅವಶ್ಯಕತೆಗಳನ್ನು ಗಮನಿಸುತ್ತದೆಯೇ ಹೊರತು, ತನ್ನ ಸ್ವಂತ ತೃಪ್ತಿಯನ್ನು ಗಮನಿಸುವದಿಲ್ಲ. ಸ್ವತಃ ಕ್ರಿಸ್ತನು ಒಮ್ಮೆಯೂ ಸಹ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ (ರೋಮಾ. 15:3) .

ಮಾನವ ಅಪೂರ್ಣತೆ: ಮೂರನೆಯದಾಗಿ, ಆತ್ಮ-ಭರಿತ ಸೇವೆಯು ಮಾನವ ಕುಂದುಕೊರತೆಗಳ ಅರಿವುಳ್ಳ ಒಂದು ಸೇವೆಯಾಗಿದೆ. 2 ಕೊರಿಂಥ 10:1 ರಲ್ಲಿ ಪೌಲನು ಹೇಳುವ ಮಾತನ್ನು ಗಮನಿಸಿ: "ನಾನು ನಿಮ್ಮೆದುರಿನಲ್ಲಿ ಕೀಳಾಗಿದ್ದೇನೆ" - ಬೇರೆ ಶಬ್ದಗಳಲ್ಲಿ ಹೇಳುವುದಾದರೆ, "ನನ್ನಲ್ಲಿ ಆಕರ್ಷಕ ವ್ಯಕ್ತಿತ್ವವಿಲ್ಲ." ಸಂಪ್ರದಾಯದ ಮೂಲಕ ಅಪೊಸ್ತಲ ಪೌಲನ ಬಗ್ಗೆ ಕಂಡುಬಂದಿರುವ ವಿಷಯವೇನೆಂದರೆ, ಆತನು ಕೇವಲ 4 ಅಡಿ 10 ಇಂಚು ಎತ್ತರವಿದ್ದನು ಮತ್ತು ಅವನ ತಲೆ ಬೋಳಾಗಿತ್ತು. ಅವನಿಗೆ ಗಿಣಿಮೂಗು ಇದ್ದಿತು ಮತ್ತು ಬಹುಶ: ಅವನು ಕಣ್ಣಿನ ಕಾಯಿಲೆಯಿಂದ ಬಳಲುತ್ತಿದ್ದನು. ಅವನಲ್ಲಿ ಚಲನಚಿತ್ರ ತಾರೆಯರ ವ್ಯಕ್ತಿತ್ವ ಇರಲಿಲ್ಲವೆಂಬುದು ಸ್ಪಷ್ಟವಾಗಿತ್ತು. ಅವನ ಯಶಸ್ಸು ಯಾವುದೇ ಮಾನವ ವಿಶೇಷತೆಯಿಂದ ಉಂಟಾಗಲಿಲ್ಲ, ಏಕೆಂದರೆ ಹೊರತೋರಿಕೆಯಲ್ಲಿ ಮತ್ತು ಮಾತಿನಲ್ಲಿ ಅವನು ಬಹಳ ಸಾಮಾನ್ಯ ವ್ಯಕ್ತಿಯಾಗಿದ್ದನು. ಪೌಲನು ತನ್ನ ವಾಕ್ಯಬೋಧನೆಯ ಕುರಿತಾಗಿ ಕೊರಿಂಥದವರಿಗೆ ಬರೆದಂತೆ, "ನಾನು ನಿಮ್ಮಲ್ಲಿಗೆ ಬಂದಾಗ ಭಯಪಡುವವನೂ, ಬಹು ನಡುಗುವವನೂ ಆಗಿದ್ದೆನು" (1 ಕೊರಿಂಥ. 2:3) . ಅವನು ವಾಕ್ಯಬೋಧನೆ ಮಾಡುವಾಗ ತನ್ನ ಬಲಹೀನತೆಯ ಬಗ್ಗೆ ಯೋಚಿಸುತ್ತಿದ್ದನೇ ಹೊರತು, ತನ್ನ ಒಳಗಿನಿಂದ ಹರಿದು ಬರುತ್ತಿದ್ದ ದೇವರ ಬಲದ ಕುರಿತಾಗಿ ಅಲ್ಲ. ಇದನ್ನೇ ಪವಿತ್ರಾತ್ಮನ ತುಂಬುವಿಕೆಯ ಸೇವೆ ಎಂದು ಹೇಳುವದು - ಇಲ್ಲಿ ನೆನಪಿಸಿಕೊಳ್ಳುವಂತಹ ವಿಷಯ, ಪೌಲನ ಬೋಧನೆಯ ಫಲವಾಗಿ ಧರ್ಮಹೀನ ಕೊರಿಂಥ ನಗರದಲ್ಲಿ ಒಂದು ಕ್ರೈಸ್ತಸಭೆಯು ಸ್ಥಾಪಿಸಲ್ಪಟ್ಟಿತು.

ನಮ್ಮ ಕರೆಗೆ ಓಗೊಡುವದು: ನಾಲ್ಕನೆಯದಾಗಿ, ಆತ್ಮ-ಭರಿತ ಸೇವೆಯು ದೇವರ ನಿರ್ದಿಷ್ಟ ಕರೆಯನ್ನು ಪೂರೈಸುವ ಸೇವೆಯಾಗಿದೆ. ಪೌಲನು ಕೊಲೊಸ್ಸೆ. 1:24,25 ರಲ್ಲಿ, "ನಾನು ಸುವಾರ್ತೆಗೆ ಮತ್ತು ಸಭೆಗೆ ಸೇವಕನಾದೆನು." ಎಂದೂ, ಮತ್ತು 1 ತಿಮೊಥೆಯ. 2:7 ರಲ್ಲಿ, "ನಾನು ಅಪೊಸ್ತಲನಾಗಿ ನೇಮಿಸಲ್ಪಟ್ಟೆನು," ಎಂದೂ ಹೇಳುತ್ತಾನೆ. ಪೌಲನು ಸೇವೆಗಾಗಿ ತನ್ನ ರಕ್ಷಕನ ತಿವಿಯಲ್ಪಟ್ಟ ಕೈಗಳಿಂದ ನೇಮಿಸಲ್ಪಟ್ಟಿದ್ದನೇ ಹೊರತು, ಇನ್ಯಾರ ಮೂಲಕವೂ ಅಲ್ಲ. ಅಪೊಸ್ತಲನಾಗುವಂತೆ ಪೌಲನನ್ನು ದೇವರೇ ಕರೆದರು. ಈ ಕರೆಯು, ಆತನು ಕೊಲೊಸ್ಸೆ. 1:25 ರಲ್ಲಿ ಹೇಳಿರುವಂತೆ, ಆತನಿಗೆ ಕೊಡಲ್ಪಟ್ಟಿತು. ಅದು ದೇವರ ವರವಾಗಿತ್ತು - ಆತನು ಸಂಪಾದಿಸಿದ ಅಥವಾ ಸಾಧಿಸಿದ ಕಾರ್ಯವಾಗಿರಲಿಲ್ಲ. ಅದೇ ವಚನದಲ್ಲಿ ಆತನು ಮುಂದೆ ವಿವರಿಸುವಂತೆ, ಆತನ ಕರೆಯು ಇತರರ ಪ್ರಯೋಜನಕ್ಕಾಗಿ ಆತನಿಗೆ ದಯಪಾಲಿಸಲ್ಪಟ್ಟಿತು. ಅದು ಸಭೆಯ ಅಭಿವೃದ್ಧಿಗಾಗಿ ಅವನಿಗೆ ಕೊಡಲ್ಪಟ್ಟ ಮೇಲಧಿಕಾರ ಅಥವಾ ಉಸ್ತುವಾರಿಕೆಯಾಗಿತ್ತು. ನಮ್ಮಲ್ಲಿ ಪ್ರತಿಯೊಬ್ಬನಿಗಾಗಿ ದೇವರು ಒಂದು ನಿರ್ದಿಷ್ಟ ಕರೆಯನ್ನು ಇರಿಸಿದ್ದಾರೆ. ದೇವರು ನಮಗಾಗಿ ನಿಶ್ಚಯಿಸದಿರುವ ಯಾವುದೋ ಕೆಲಸಕ್ಕಾಗಿ ನಾವು ದೇವರನ್ನು ಕೇಳಿಕೊಳ್ಳುವದು ವ್ಯರ್ಥವಾಗಿದೆ - ಏಕೆಂದರೆ ನಾವು ಯಾವ ವರವನ್ನು ಹೊಂದಬೇಕೆಂದು ಪವಿತ್ರಾತ್ಮನು ನಿಶ್ಚಯಿಸುತ್ತಾನೆ. ಪೌಲನು ಒಬ್ಬ ಅಪೊಸ್ತಲನಾಗಿ ಕರೆಯಲ್ಪಟ್ಟನು. ಆದರೆ ಪ್ರತಿಯೊಬ್ಬನು ಅಂತಹ ಕರೆಯನ್ನು ಪಡೆಯುವದಿಲ್ಲ. ನಾವು ದೇವರ ಸಮ್ಮುಖದಲ್ಲಿ ಯಾವುದನ್ನು ಅವಶ್ಯವಾಗಿ ಕೇಳಿಕೊಳ್ಳಬೇಕೆಂದರೆ, ಆತನು ನಮಗೆ ಕೊಟ್ಟಿರುವ ಕರೆಯನ್ನು ಸಮರ್ಪಕವಾಗಿ ಪೂರೈಸಲು ಬೇಕಾದ ಬಲಕ್ಕಾಗಿ. ಪೌಲನು ಅರ್ಖಿಪ್ಪನಿಗೆ ಕೊಟ್ಟ ಸಲಹೆ ಹೀಗಿತ್ತು: "ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರು!" (ಕೊಲೊಸ್ಸೆ. 4:17) .

ಕ್ರಿಸ್ತನ ದೇಹದಲ್ಲಿ ದೇವರು ಹಲವು ಕೊಡುಗೆಗಳನ್ನು ಇರಿಸಿದ್ದಾರೆ. ನಾವು ಮಾಡಬೇಕಾದ ಮುಖ್ಯವಾದ ಕೆಲಸ, ನಮ್ಮ ವರವನ್ನು ಮತ್ತು ಕರೆಯನ್ನು ಗುರುತಿಸುವದು - ಮತ್ತು ಆ ವರವನ್ನು ಉಪಯೋಗಿಸಿಕೊಂಡು, ನೀಡಲಾದ ಆ ಕರೆಯನ್ನು ಪೂರೈಸುವದು. ಆತ್ಮ-ಪ್ರೇರಿತ ಸೇವೆ ಯಾವುದೆಂದರೆ, ದೇವರು ನಮಗೆ ಕೊಡುವ ಆ ನಿರ್ದಿಷ್ಟ ಕರೆಯನ್ನು ಪೂರೈಸುವ ಸೇವೆಯಾಗಿದೆ. ನಾವು ಆಸಕ್ತಿಯಿಂದ ಕೇಳಿಕೊಳ್ಳುವಂತೆ ಹೊಸ ಒಡಂಬಡಿಕೆಯು ನಮ್ಮನ್ನು ವಿಶೇಷವಾಗಿ ಪ್ರೋತ್ಸಾಹಿಸುವ ಒಂದು ವರವಿದೆ: ಅದು ಯಾವುದೆಂದರೆ, ಪ್ರವಾದನೆಯ ವರವು (1 ಕೊರಿಂಥ. 14:39) . ಬಹುಶಃ ಇಂದು ಸಭೆಯಲ್ಲಿ ಅತಿ ಹೆಚ್ಚಾಗಿ ಅವಶ್ಯವಿರುವ ವರ ಇದಾಗಿದೆ ಎಂದು ಹೇಳಬಹುದು. ಪ್ರವಾದನೆಯ ಸೇವೆಯು ಭಕ್ತಿವೃದ್ಧಿಯನ್ನೂ (ಬಲಗೊಳಿಸುವದು ಮತ್ತು ಬೆಳೆಸುವದು), ಎಚ್ಚರಿಕೆಯನ್ನೂ (ಗದರಿಸುವದು ಮತ್ತು ಸವಾಲು ಹಾಕುವದು) ಮತ್ತು ಸಂತೈಸುವದನ್ನೂ (ಸಮಾಧಾನಪಡಿಸುವದು ಮತ್ತು ಪ್ರೋತ್ಸಾಹಿಸುವದು) ಒದಗಿಸುತ್ತದೆ (1 ಕೊರಿಂಥ. 14:3). ನಾವು ಪ್ರಾರ್ಥಿಸುವಾಗ ನಮ್ಮ ಸಭೆಗಳಲ್ಲಿ ದೇವರ ಸತ್ಯವನ್ನು ಭಯವಿಲ್ಲದೆ, ಭೇದಭಾವವಿಲ್ಲದೆ ತೋರಿಸುವ ಪ್ರವಾದಿಗಳನ್ನು ಕೊಡುವಂತೆ ದೇವರನ್ನು ಕೇಳಿಕೊಳ್ಳಬೇಕು - ಇವರು ಸಂಪಾದನೆ, ಗೌರವ ಮತ್ತು ಜನಪ್ರಿಯತೆಯಲ್ಲಿ ಹೆಚ್ಚು ಆಸಕ್ತರಾದ ವೃತ್ತಿಪರ ಧಾರ್ಮಿಕ ಪಂಡಿತರಿಗಿಂತ (ಬೋಧಕರು) ಉನ್ನತ ಮಟ್ಟದ ವ್ಯಕ್ತಿಗಳು ಆಗಿರುತ್ತಾರೆ. ನಮ್ಮಲ್ಲಿ ಪ್ರತಿಯೊಬ್ಬನೂ ನಮ್ಮ ವೈಯಕ್ತಿಕ ಕರೆ ಯಾವುದೆಂದು ದೇವರ ಸಮ್ಮುಖದಲ್ಲಿ ಕೇಳಿಕೊಳ್ಳುವಂತೆ ಕರ್ತನು ನಮಗೆ ಸಹಾಯ ಮಾಡಲಿ.