ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ಜೀವನದ ನಾಲ್ಕು ಗುಣಲಕ್ಷಣಗಳನ್ನು ನಾವು ಅಪೊಸ್ತಲ ಪೌಲನ ಜೀವನದಲ್ಲಿ ನೋಡೋಣ

1. ಸಂಪೂರ್ಣ ಸಂತುಷ್ಟಿ: ಮೊದಲನೆಯದಾಗಿ, ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ಜೀವನವು ಒಂದು ಸಂಪೂರ್ಣ ಸಂತುಷ್ಟಿಯ ಜೀವನವಾಗಿದೆ. ಪೌಲನು ಫಿಲಿ. 4:11 ರಲ್ಲಿ ಹೀಗೆ ಹೇಳುತ್ತಾನೆ, "ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿ ಇರುವುದನ್ನು ಕಲಿತುಕೊಂಡಿದ್ದೇನೆ." ಇಂತಹ ಸಂತೃಪ್ತಿಯು ಅದರೊಂದಿಗೆ ಸಂಪೂರ್ಣ ಸಂತೋಷವನ್ನೂ, ದೀರ್ಘಶಾಂತಿಯನ್ನೂ ತರುತ್ತದೆ. ಈ ಕಾರಣಕ್ಕಾಗಿ ಪೌಲನು ಇದೇ ಅಧ್ಯಾಯದ 4 ಮತ್ತು 7ನೇ ವಚನಗಳಲ್ಲಿ ಸಂತೋಷ ಮತ್ತು ಸಮಾಧಾನದ ಕುರಿತಾಗಿ ಹೇಳುತ್ತಾನೆ (ಫಿಲಿ. 4:4,7) . ದೇವರು ನಮ್ಮೊಂದಿಗೆ ಸಂಪೂರ್ಣ ತೃಪ್ತಿಕರವಾಗಿ ವ್ಯವಹರಿಸಿದ್ದಾರೆಂದು ನಮಗೆ ಅನಿಸಿದಾಗ ಮಾತ್ರ ನಾವು ದೇವರನ್ನು ಸ್ತೋತ್ರಪಡಿಸಲು ಸಾಧ್ಯವಾಗುತ್ತದೆ. ದೇವರು ಸಾರ್ವಭೌಮನು ಆಗಿರುವುದರಿಂದ, ಆತನು ನಮ್ಮ ಜೀವಿತದ ಪ್ರತಿಯೊಂದು ಪರಿಸ್ಥಿತಿಯನ್ನು ಅನುಕೂಲಕರವಾಗಿ ನಡೆಸಲು ಸಮರ್ಥನು (ರೋಮಾ. 8:28) , ಎಂದು ನಾವು ನಂಬಿದಾಗ ನಮ್ಮ ಎಲ್ಲಾ ಸನ್ನಿವೇಶಗಳಲ್ಲಿ ವ್ಯಾಪಕವಾದ ಸಂತೃಪ್ತಿಯು ಇರುತ್ತದೆ. ಆಗ ನಾವು ಹಬಕ್ಕೂಕನಂತೆ, ನಮ್ಮ ತೋಟದ ಮರಗಳು ಫಲ ಕೊಡದಿದ್ದರೂ, ನಮ್ಮ ದನಕರುಗಳು ನಾಶವಾದರೂ ಮತ್ತು ನಮ್ಮ ವ್ಯವಹಾರಗಳಲ್ಲಿ ದೊಡ್ಡ ಹಣಕಾಸಿನ ಬಿಕ್ಕಟ್ಟು ಉಂಟಾದರೂ - ಯಾವುದೇ ಪರಿಸ್ಥಿತಿಯಲ್ಲಿ ಕರ್ತನಿಗೆ ಉತ್ಸಾಹಸ್ತೋತ್ರವನ್ನು ಸಮರ್ಪಿಸಬಹುದು ( ಹಬಕೂಕ್ಕನು 3:17,18) . ಎಫೆ. 5:18-20 ವಚನಗಳಲ್ಲಿ, ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ಪರಿಣಾಮವಾಗಿ ನಮ್ಮ ಹೃದಯದಿಂದ ದೇವರ ಸ್ತೋತ್ರವು ಹೊರಸೂಸುತ್ತದೆಂದು ಸೂಚಿಸಲಾಗಿದೆ. ಅಪೊಸ್ತಲ ಪೌಲನ ಕಾಲುಗಳನ್ನು ಕೋಳದಿಂದ ಬಿಗಿದು ಅವನನ್ನು ಸೆರೆಮನೆಯೊಳಗೆ ಹಾಕಿದಾಗಲೂ, ಅವನು ಸ್ತುತಿಪದಗಳನ್ನು ಹಾಡುತ್ತಿದ್ದನು (ಅ.ಕೃ. 16:25) . ಅವನು ಅಲ್ಲಿಯೂ ನೆಮ್ಮದಿಯಾಗಿದ್ದನು, ಮತ್ತು ಯಾವ ವಿಷಯವಾಗಿಯೂ ಗೊಣಗಲಿಲ್ಲ. ಆತ್ಮ-ಭರಿತ ಜೀವಿತದ ಪ್ರಥಮ ಲಕ್ಷಣಗಳಲ್ಲಿ ಇದು ಒಂದಾಗಿದೆ. ಇಸ್ರಾಯೇಲ್ಯರು ಅರಣ್ಯ ಪ್ರದೇಶದಲ್ಲಿ ದೇವರ ವಿರುದ್ಧವಾಗಿ ಗೊಣಗುಟ್ಟಿದ ಹಾಗೆ, ಒಬ್ಬ ಕ್ರೈಸ್ತನಲ್ಲಿ ಗೊಣಗುಟ್ಟುವಿಕೆಯು ಕಾಣಿಸಿದಾಗ, ಆತನು ಇನ್ನೂ ವಾಗ್ದಾನ ಮಾಡಲ್ಪಟ್ಟ ದೇಶಕ್ಕೆ ಜಯಪ್ರದವಾಗಿ ಪ್ರವೇಶಿಸಿಲ್ಲವೆಂದು ಅದು ಸೂಚಿಸುತ್ತದೆ.

2. ಪರಿಶುದ್ಧತೆಯಲ್ಲಿ ಅಭಿವೃದ್ಧಿ ಹೊಂದುವುದು: ಎರಡನೆಯದಾಗಿ, ದೇವರಾತ್ಮನಿಂದ ತುಂಬಿಸಲ್ಪಟ್ಟ ಜೀವನವು ಪವಿತ್ರತೆಯಲ್ಲಿ ಬೆಳೆಯುವ ಜೀವಿತವಾಗಿದೆ. ಒಬ್ಬನು ತನ್ನ ಸ್ವಂತ ಜೀವನದಲ್ಲಿ ಹೆಚ್ಚು ಪರಿಶುದ್ಧನು ಆಗುತ್ತಿರುವಾಗ, ದೇವರ ಅಪಾರ ಪರಿಶುದ್ಧತೆಯು ಅವನ ಮಾನಸಿಕ ದೃಷ್ಟಿಗೆ ಹೆಚ್ಚು ಹೆಚ್ಚಾಗಿ ಕಾಣಿಸುತ್ತದೆ. ಇವೆರಡು ಸಂಗತಿಗಳು ಒಂದೇ ಸಮಯದಲ್ಲಿ ನಡೆಯುತ್ತವೆ. ವಾಸ್ತವಿಕವಾಗಿ, ಆತನಲ್ಲಿ ಮೊದಲನೆಯದು (ಪರಿಶುದ್ಧತೆಯಲ್ಲಿ ಬೆಳವಣಿಗೆ) ಇದೆಯೋ ಇಲ್ಲವೋ ಎಂಬುದನ್ನು ಎರಡನೆಯದರ (ದೇವರ ಪರಿಶುದ್ಧತೆಯ ಅರಿವು) ಮೂಲಕ ಪರೀಕ್ಷಿಸಬಹುದು. ಪೌಲನ ಮಾನಸಾಂತರದ 25 ವರ್ಷಗಳ ನಂತರ ಅವನು ಹೀಗೆ ಹೇಳುತ್ತಾನೆ, "ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ" (1 ಕೊರಿ. 15:9). ಇನ್ನೂ ಐದು ವರ್ಷಗಳ ನಂತರ ಆತನು, "ನಾನು ದೇವಜನರೊಳಗೆ ಅತ್ಯಲ್ಪನು" (ಎಫೆ. 3:8-9), ಎನ್ನುತ್ತಾನೆ. ಇನ್ನೂ ಒಂದು ವರ್ಷದ ನಂತರ ಆತನು ಹೇಳುವುದು ಏನೆಂದರೆ, "ನಾನೇ ಪಾಪಿಗಳಲ್ಲಿ ಮುಖ್ಯನು ಆಗಿದ್ದೇನೆ (ಗಮನಿಸಿರಿ, "ಆಗಿದ್ದೆನು" ಎಂದಲ್ಲ, "ಆಗಿದ್ದೇನೆ" ಎಂಬ ಹೇಳಿಕೆ) (1 ತಿಮೊ. 1:15). ಈ ಹೇಳಿಕೆಗಳಲ್ಲಿ ಅವನ ಪವಿತ್ರತೆಯ ಬೆಳವಣಿಗೆಯೆನ್ನು ನೀವು ಗಮನಿಸಿದಿರಾ? ಪೌಲನು ಹೆಚ್ಚು ಹೆಚ್ಚಾಗಿ ದೇವರ ಹತ್ತಿರಕ್ಕೆ ಹೋಗುತ್ತಿದ್ದಂತೆ ಅವನಿಗೆ ತನ್ನ ಸ್ವಂತ ಶರೀರಭಾವದ ಭ್ರಷ್ಟತೆ ಮತ್ತು ಕೆಟ್ಟತನ ಹೆಚ್ಚು ಹೆಚ್ಚಾಗಿ ಗೋಚರವಾಗುತ್ತಿತ್ತು. ಅವನ ಶರೀರಾಧೀನ ಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲವೆಂದು ಅವನಿಗೆ ತಿಳಿಯಿತು (ರೋಮಾ. 7:18).

ಆತ್ಮಭರಿತ ಮನುಷ್ಯನು ಕೇವಲ ಇತರರ ಎದುರು ತನ್ನ ಪವಿತ್ರತೆ ಬೆಳೆಯುತ್ತಿರುವಂತೆ ತೋರಿಸಿಕೊಳ್ಳಲು ಬಯಸುವುದಿಲ್ಲ, ಆದರೆ ಅವನು ನಿಜವಾಗಿ ಬೆಳೆಯುತ್ತಿರುತ್ತಾನೆ. ಯಾವ ಅನುಭವಗಳು ಅವನನ್ನು ಪವಿತ್ರ ಗೊಳಿಸಿವೆ ಎಂಬ ಸಾಕ್ಷಿಯನ್ನು ಅವನು ಹಂಚಿಕೊಳ್ಳುವುದಿಲ್ಲ, ಅಥವಾ ಇತರರಿಗೆ ಪರಿಶುದ್ಧತೆಯ ತತ್ವಜ್ಞಾನವನ್ನು ಬೋಧಿಸಲು ಪ್ರಯತ್ನಿಸುವುದಿಲ್ಲ. ಅವನ ಜೀವನದಲ್ಲಿ ಪವಿತ್ರತೆ ಹೇಗಿರುತ್ತದೆಂದರೆ, ಇತರರು ತಾವಾಗಿಯೇ ಅವನ ಬಳಿಗೆ ಬಂದು, ಅವನ ಪವಿತ್ರತೆಯ ಗುಟ್ಟನ್ನು ತಿಳಿಸುವಂತೆ ಕೇಳಿಕೊಳ್ಳುತ್ತಾರೆ. ಜೆ.ಬಿ. ಫಿಲಿಪ್ಸ್ರನವರು ಮಾಡಿರುವ ಭಾಷಾಂತರದಲ್ಲಿ ಹೇಳುವಂತೆ, "ಅವನ ಸ್ವಭಾವದಲ್ಲಿ ಇರುವ ಪವಿತ್ರತೆಯು ಭ್ರಮೆಯಲ್ಲ" (ಎಫೆ. 4:24) .

3. ಶಿಲುಬೆಗೆ ಹಾಕಲ್ಪಟ್ಟ ಜೀವಿತ: ಮೂರನೆಯದಾಗಿ, ಆತ್ಮಭರಿತ ಜೀವಿತವು ಶಿಲುಬೆಗೆ ಹಾಕಲ್ಪಟ್ಟ ಜೀವಿತವಾಗಿದೆ. "ನಾನು ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವನಾಗಿದ್ದೇನೆ," ಎಂದು ಪೌಲನು ಹೇಳಿದನು (ಗಲಾ. 2:20) . ಶಿಲುಬೆಯ ದಾರಿಯು ಪವಿತ್ರಾತ್ಮನಿಂದ ತುಂಬಿಸುವಿಕೆಯ ದಾರಿಯಾಗಿದೆ. ಆತ್ಮನು ಯೇಸುವನ್ನು ನಡೆಸಿದ ಹಾಗೆ, ನಮ್ಮನ್ನು ಯಾವಾಗಲೂ ಶಿಲುಬೆಗೆ ನಡೆಸುತ್ತಾನೆ. ಪವಿತ್ರಾತ್ಮ ಮತ್ತು ಶಿಲುಬೆ ಇವೆರಡನ್ನು ಅಗಲಿಸಲು ಆಗುವುದಿಲ್ಲ. ಶಿಲುಬೆಯು ಬಲಹೀನತೆ, ಅಗೌರವ ಮತ್ತು ಮರಣದ ಒಂದು ಚಿಹ್ನೆಯಾಗಿದೆ. ಅಪೊಸ್ತಲನಾದ ಪೌಲನು ತನ್ನ ಜೀವನದಲ್ಲಿ ಭಯ, ದಿಕ್ಕುತೋಚದ ಸ್ಥಿತಿ, ದುಃಖ ಮತ್ತು ಕಣ್ಣೀರು ಇವೆಲ್ಲವನ್ನು ಸಾಕಷ್ಟು ಅನುಭವಿಸಿದನು (2 ಕೊರಿ. 1:8;2 ಕೊರಿ. 4:8;2 ಕೊರಿ.6:10;2 ಕೊರಿ. 7:5 ನೋಡಿರಿ). ಜನರು ಅವನನ್ನು ಒಬ್ಬ ಹುಚ್ಚು ಹಿಡಿದವನು ಮತ್ತು ಮರುಳನೆಂದು ತಿಳಿದಿದ್ದರು. ಎಷ್ಟೋ ಸಲ ಜನರು ಅವನನ್ನು "ಲೋಕದ ಕಸವೋ, ಎಲ್ಲಾದರ ಹೊಲಸೋ," ಎಂಬಂತೆ ನೋಡಿದರು (1 ಕೊರಿ. 4:13) . ಪವಿತ್ರಾತ್ಮನ ತುಂಬಿಸುವಿಕೆಗಯ ಜೊತೆಯಲ್ಲಿ ಇಂತಹ ಸ್ಥಿತಿ ಅನುಚಿತವೆಂದು ಹೇಳುವಂತಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ಮನುಷ್ಯನು ದೇವರು ತನ್ನನ್ನು ಅವಮಾನ ಮತ್ತು ಮರಣದ ಹಾದಿಯಲ್ಲಿ ಇನ್ನೂ ಮುಂದಕ್ಕೆ, ಅವರ ಹತ್ತಿರಕ್ಕೆ ನಡೆಸುವುದನ್ನು ಕಾಣುತ್ತಾನೆ.

4. ನಿರಂತರವಾಗಿ ವಿಸ್ತರಿಸಲ್ಪಡುವುದು: ನಾಲ್ಕನೆಯದಾಗಿ, ಆತ್ಮಭರಿತ ಜೀವನವು ನಿರಂತರವಾಗಿ ಹೆಚ್ಚು ಹೆಚ್ಚಾದ ತುಂಬಿಸುವಿಕೆಗಾಗಿ ತವಕಿಸುವ ಜೀವಿತವಾಗಿದೆ. ಪೌಲನು ಮಾನಸಾಂತರಗೊಂಡು ಸುಮಾರು 30 ವರ್ಷಗಳ ನಂತರ ಮತ್ತು ತನ್ನ ಜೀವನದ ಅಂತ್ಯವನ್ನು ಸಮೀಪಿಸುತ್ತಾ ಇದ್ದಾಗ, "ನಾನು ಓಡುತ್ತಾ ಇದ್ದೇನೆ," ಎಂದು ಹೇಳುತ್ತಾನೆ (ಫಿಲಿ. 3:14) . ಅವನು ಇನ್ನೂ ತನ್ನ ಗುರಿಯನ್ನು ತಲುಪಿಲ್ಲ. ಅವನು ತನ್ನ ಜೀವನದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಪವಿತ್ರಾತ್ಮನ ತುಂಬಿಸುವಿಕೆಗಾಗಿ ಕಾತರಿಸುತ್ತಿದ್ದಾನೆ, ಮತ್ತು ಆತ್ಮಿಕವಾಗಿ ಆ ಗುರಿಯನ್ನು ತಲುಪುವುದಕ್ಕಾಗಿ ಶಕ್ತಿಮೀರಿ ಹೆಣಗುತ್ತಿದ್ದಾನೆ. "ನಾನು ಸಿದ್ಧಿಗೆ (ಪರಿಪೂರ್ಣತೆಗೆ) ಬಂದವನೆಂದು ಹೇಳುವುದಿಲ್ಲ," ಎಂದು ಅವನು ಅನ್ನುತ್ತಾನೆ (ಫಿಲಿ. 3:12). ಆದರೆ 15ನೇ ವಚನದಲ್ಲಿ ಆತನು ಇದಕ್ಕೆ ವಿರುದ್ಧವಾದಂತೆ ತೋರುವ ಮಾತನ್ನು ಆಡುತ್ತಾನೆ: "ನಮ್ಮಲ್ಲಿ ಪ್ರವೀಣರಾದವರು ಇದೇ ಅಭಿಪ್ರಾಯ ಉಳ್ಳವರಾಗಿ ಇರೋಣ." (ಫಿಲಿ. 3:15). ಇದು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ಜೀವನದ ಒಂದು ಅಸಂಗತ ಸ್ಥಿತಿಯಾಗಿದೆ - ಪರಿಪೂರ್ಣರು, ಆದರೂ ಅಪೂರ್ಣರು; ಬೇರೆ ಮಾತುಗಳಲ್ಲಿ ಹೇಳುವುದಾದರೆ, ತುಂಬಿರುವದು ಮತ್ತು ಇನ್ನೂ ಹೆಚ್ಚಿನ ತುಂಬಿಸುವಿಕೆಯನ್ನು ಬಯಸುವದು. ಆತ್ಮ-ಭರಿತ ಸ್ಥಿತಿಯು ಸ್ಥಿರವಾದದ್ದಲ್ಲ. ತುಂಬಿಸುವಿಕೆಯಲ್ಲಿ ಮೇಲು ಮೇಲಿನ ಹಂತಗಳು ಇವೆ. ಸತ್ಯವೇದವು ವಿವರಿಸುವಂತೆ, ಪವಿತ್ರಾತ್ಮನು ನಮ್ಮನ್ನು ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ನಡೆಸುತ್ತಾನೆ (2 ಕೊರಿ. 3:18) - ಅಥವಾ ಬೇರೆ ಮಾತುಗಳಲ್ಲಿ ಹೇಳುವುದಾದರೆ, ತುಂಬುವಿಕೆಯಿಂದ ಇನ್ನೂ ವಿಸ್ತಾರವಾದ ತುಂಬುವಿಕೆಗೆ. ಒಂದು ಲೋಟವು ನೀರಿನಿಂದ ತುಂಬಿರಬಹುದು; ಹಾಗೆಯೇ ಒಂದು ಮಡಕೆಯೂ ತುಂಬಿರಬಹುದು; ಹಾಗೆಯೇ ಒಂದು ಕೆರೆ ಮತ್ತು ಒಂದು ನದಿಯು ನೀರಿನಿಂದ ತುಂಬಿರಬಹುದು. ಆದರೆ ಒಂದು ತುಂಬಿದ ಲೋಟ ಮತ್ತು ತುಂಬಿ ಹರಿಯುವ ನದಿಯ ನಡುವೆ ಬಹಳ ಅಂತರವಿದೆ.

ಪವಿತ್ರಾತ್ಮನು ನಮ್ಮಲ್ಲಿ ಇನ್ನೂ ಹೆಚ್ಚಾಗಿ ನೆಲೆಗೊಳ್ಳಲು ಬಯಸುವುದರಿಂದ, ಆತನು ನಿರಂತರವಾಗಿ ನಮ್ಮ ಆತ್ಮಿಕ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಾನೆ. ಈ ನಿಟ್ಟಿನಲ್ಲಿ ಶಿಲುಬೆಯು ಮುಖ್ಯ ಪಾತ್ರ ವಹಿಸುತ್ತದೆ. ನಾವು ಶಿಲುಬೆಯ ದಾರಿಯನ್ನು ತಪ್ಪಿಸಿಕೊಳ್ಳುವುದಾದರೆ, ನಮ್ಮ ಜೀವಿತಗಳು ವಿಸ್ತರಿಸಲಾರವು. ನಾವು ನಮ್ಮ ಜೀವನದಲ್ಲಿ ಯಾವಾಗಲೂ ಶಿಲುಬೆಯನ್ನು ಹೊರುವುದಾದರೆ, ನಮ್ಮ ಪಾತ್ರೆಯು ಒಂದು ಮಡಕೆಯಾಗುತ್ತದೆ, ಮಡಕೆಯು ನೀರಿನ ಕೊಳವಾಗುತ್ತದೆ, ಕೊಳವು ಒಂದು ನದಿಯಾಗುತ್ತದೆ ಮತ್ತು ನದಿಯು ಅನೇಕ ಹೊಳೆಗಳಾಗಿ ಹರಿಯುತ್ತವೆ. ನಮ್ಮ ಸಾಮರ್ಥ್ಯವು ಹಂತ ಹಂತವಾಗಿ ಹೆಚ್ಚುತ್ತಿರುವಾಗ, ನಾವು ಮತ್ತೆ ತುಂಬಿಸಲ್ಪಡಬೇಕು. ಈ ರೀತಿಯಾಗಿ ಕರ್ತ ಯೇಸುವಿನ ಈ ವಾಗ್ದಾನವು ನಮ್ಮಲ್ಲಿ ಈಡೇರುತ್ತದೆ, "ನನ್ನನ್ನು ನಂಬಿದವನ ಹೊಟ್ಟೆಯೊಳಗಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುವವು" (ಅವನು ಪವಿತ್ರಾತ್ಮ ವರವನ್ನು ಕುರಿತು ಹೇಳಿದನು) ( ಯೋಹಾ. 7:38,39 ).