WFTW Body: 

ಯೆಹೂದ್ಯರು ಒಂದು ವಿಷಯದ ಬಗ್ಗೆ ಹೆಚ್ಚಳಪಡುತ್ತಿದ್ದರು, ಏನೆಂದರೆ ದೇವರ ವಾಕ್ಯವು ತಮಗೆ ಮಾತ್ರ ದೊರೆತಿದ್ದು, ಜಗತ್ತಿನ ಇತರ ಜನಾಂಗಗಳಿಗೆ ಅದು ಸಿಕ್ಕಿರಲಿಲ್ಲ, ಎಂಬುದಾಗಿ. ಆದರೆ ಅವರು ತಮಗೆ ದೊರಕಿದ್ದ ಆ ವಾಕ್ಯಕ್ಕೆ ಅನುಸಾರವಾಗಿ ಜೀವಿಸಲಿಲ್ಲ; ಮತ್ತು ಕೊನೆಗೆ ದೇವರ ವಾಕ್ಯವು ಪ್ರವಾದನೆಯ ಮೂಲಕ ತೋರಿಸಲ್ಪಟ್ಟಾತನು ತಮ್ಮ ನಡುವೆ ಬಂದಾಗ, ಅವರು ಆತನನ್ನು ತಿರಸ್ಕರಿಸಿದರು. ಇದೇ ರೀತಿಯಾಗಿ ನಮ್ಮಲ್ಲಿ ಹೊಸ ಒಡಂಬಡಿಕೆಯ ಅರ್ಥವನ್ನು ಗ್ರಹಿಸಿಕೊಂಡಿರುವವರೂ ಸಹ ಅದರ ಬಗ್ಗೆ ಹೆಮ್ಮೆ ಪಟ್ಟುಕೊಂಡು, ನಮ್ಮನ್ನೇ ವಂಚಿಸಿಕೊಳ್ಳುವ ಸಾಧ್ಯತೆ ಇದೆ.

ರೋಮಾ. ಅಧ್ಯಾಯ 2ರಿಂದ (Living Bible) ಅಳವಡಿಸಲಾಗಿರುವ ಈ ಕೆಳಗಿನ ಭಾಗವು ನಮ್ಮೆದುರು ಇರುವ ಅಪಾಯಕರ ಸ್ಥಿತಿಯನ್ನು ತೋರಿಸುತ್ತದೆ:

ನೀವು ಹೀಗೆ ಅಂದುಕೊಳ್ಳಬಹುದು, "ನಾವು ಬಹಳ ಸ್ಪಷ್ಟವಾಗಿ ಅರ್ಥಮಾಡಿಕೊಂಡಿರುವ ಹೊಸ ಒಡಂಬಡಿಕೆಯನ್ನು ಅನೇಕ ಕ್ರೈಸ್ತರು ಅರಿತುಕೊಳ್ಳದಿರುವುದು ಎಷ್ಟು ದುಃಖಕರವಾಗಿದೆ".

ಸ್ವಲ್ಪ ತಡೆಯಿರಿ! ನಿಮ್ಮ ಜೀವನವನ್ನು ಯಥಾರ್ಥವಾಗಿ ಪರೀಕ್ಷಿಸಿರಿ, ಮತ್ತು ನಿಮ್ಮ ಜೀವನ ಹೊಸ ಒಡಂಬಡಿಕೆಯನ್ನು ತಿಳಕೊಳ್ಳದಿರುವ ಆ ಇತರ ಕ್ರೈಸ್ತರ ಜೀವನಕ್ಕಿಂತ ಉತ್ತಮವಾಗಿದೆಯೋ, ಎಂದು ನೋಡಿರಿ. ನೀವು ನಿಮ್ಮ ಹೊಸ ಒಡಂಬಡಿಕೆಯ ಜ್ಞಾನವು ಸೈದ್ಧಾಂತಿಕವಾಗಿ ಬಹಳ ಉತ್ತಮವಾಗಿದೆ ಎಂಬ ಒಂದು ವಿಷಯಕ್ಕಾಗಿ ಬಹುಶಃ ಹೆಚ್ಚಳ ಪಡುತ್ತಿದ್ದೀರಾ? ಅಥವಾ ನೀವು ನಿಜವಾಗಿಯೂ ಹೊಸ ಒಡಂಬಡಿಕೆಗೆ ಅನುಗುಣವಾದ ಜೀವನವನ್ನು ಜೀವಿಸುತ್ತಿದ್ದೀರಾ?

ದೇವರು ನೀತಿವಂತನಾಗಿದ್ದಾನೆ, ಮತ್ತು ಆತನಲ್ಲಿ ಪಕ್ಷಪಾತವಿಲ್ಲ ಎಂಬುದನ್ನು ನಾವು ಅರಿತಿದ್ದೇವೆ. ಹಾಗಿರುವಾಗ, ದೇವರು ಆ ಕ್ರೈಸ್ತರ ದೋಷಗಳಿಗಾಗಿ ಅವರನ್ನು ದಂಡಿಸಿ, ಅಂಥ ಜೀವಿತವನ್ನೇ ಜೀವಿಸುತ್ತಿರುವ ನಿಮಗೆ - "ಒಬ್ಬ ಹೊಸ ಒಡಂಬಡಿಕೆಯ ಕ್ರೈಸ್ತನು" ಎಂದು ನೀವು ನಿಮ್ಮನ್ನು ಹೇಳಿಕೊಳ್ಳುತ್ತಿರುವುದರಿಂದ - ದಂಡನೆಯಿಂದ ವಿನಾಯಿತಿ ನೀಡುತ್ತಾರೆಂದು ಯೋಚಿಸುತ್ತೀರಾ?

ನಿಮ್ಮ ಕುರಿತಾದ ದೇವರ ದಯಾ ಸಹನೆಗಳು ನಿಜವಾಗಿಯೂ ಅಪಾರವಾಗಿವೆ. ಆತನಿಗೆ ಕಾಣಿಸುತ್ತಿರುವ ನಿಮ್ಮ ನಿಜಸ್ಥಿತಿ ನಿಮಗೂ ಕಾಣಿಸಲಿ, ಎಂದು ಆತನು ನಿಮಗೆ ದೀರ್ಘಶಾಂತಿಯಿಂದ ಸಮಯ ನೀಡಿದ್ದಾನೆ. ಈ ಉಪಕಾರದ ಮೂಲಕ ನೀವು ನಿಮ್ಮನ್ನು ತೀರ್ಪು ಮಾಡಿಕೊಳ್ಳಲಿ, ಮತ್ತು ಪಶ್ಚಾತ್ತಾಪ ಪಟ್ಟು ಬದಲಾಗುವಂತೆ ಪ್ರೇರೇಪಣೆ ಹೊಂದಲಿ, ಎಂದು ಆತನು ಕಾದಿದ್ದಾನೆ.

ಆದರೆ ಬಹುಶಃ ನಿಮ್ಮ ಯೋಚನೆ ಏನೆಂದರೆ, ನಿಮ್ಮ ಹೊಸ ಒಡಂಬಡಿಕೆಯ ತಿಳುವಳಿಕೆ ಚೆನ್ನಾಗಿದೆ ಮತ್ತು ನೀವು ಇತರರಿಗೂ ದೇವರ ವಾಕ್ಯವನ್ನು ಸರಿಯಾಗಿ ವಿವರಿಸುತ್ತೀರಿ, ಹಾಗಿರುವಾಗ ನಿಮ್ಮ ಕೃತ್ಯಗಳೆಲ್ಲವೂ ಸರಿಯಾದವು, ಎಂದು. ನೀವು ಇತರರಿಗಿಂತ ಹೆಚ್ಚಾಗಿ ದೇವರ ಕೋಪವನ್ನು ಕೂಡಿಟ್ಟುಕೊಳ್ಳುತ್ತಾ ಇದ್ದೀರಿ - ಏಕೆಂದರೆ ನೀವು ಇತರರಿಗೆ ತೋರಿಸಿಕೊಟ್ಟು ಹೆಚ್ಚಳ ಪಡುತ್ತಿರುವ ಸತ್ಯಕ್ಕೆ ವಿರುದ್ಧವಾಗಿ ಜೀವಿಸುತ್ತಿದ್ದೀರಿ.

ದೇವರು ಪ್ರತಿಯೊಬ್ಬನ ಕೃತ್ಯ ಹಾಗೂ ಆತನ ಗುಪ್ತ ಜೀವನಕ್ಕೆ - ಆತನ ಯೋಚನೆಗಳು, ಮನೋಭಾವಗಳು ಹಾಗೂ ಉದ್ದೇಶಗಳಿಗೆ - ತಕ್ಕ ಪ್ರತಿಫಲವನ್ನು ಕೊಡುವ ದಿವಸವು ಸಮೀಪಿಸುತ್ತಿದೆ. ಹಾಗಾಗಿ ಪ್ರತಿಯೊಬ್ಬನಿಗೆ ಅವನ ಜೀವಿತ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲ ಸಿಗುತ್ತದೆ - ದೇವರ ಚಿತ್ತವನ್ನು ಪೂರೈಸಿ, ನಿರುತ್ಸಾಹಗೊಳ್ಳದೆ ಆತನ ಪ್ರಭಾವ ಘನತೆಗಳ ಹೆಚ್ಚಳಕ್ಕಾಗಿ ಶ್ರಮಿಸುವವರಿಗೆ ನಿತ್ಯ ಜೀವ. ಅದೇ ರೀತಿಯಾಗಿ, ಯಾರು ಹೊಸ ಒಡಂಬಡಿಕೆಯ ಜ್ಞಾನವನ್ನು ಹೊಂದಿರುವುದಾಗಿ ಬಾಯಿಮಾತಿನಲ್ಲಿ ಹೇಳಿ, ಸ್ವೇಚ್ಛೆ, ಆತ್ಮಿಕ ಜಂಬ ಮತ್ತು ಗುಪ್ತ ಪಾಪಗಳನ್ನು ಅನುಸರಿಸುತ್ತಾರೋ, ಅವರನ್ನು ಆತನು ತಿರಸ್ಕರಿಸುವನು.

ಬರಲಿರುವ ಆ ದಿವಸದಲ್ಲಿ, ಪಾಪಗಳನ್ನು ಅನುಸರಿಸುತ್ತಾ ಮುಂದುವರಿಯುವ ಪ್ರತಿಯೊಬ್ಬರಿಗೆ - ಹೊಸ-ಒಡಂಬಡಿಕೆಯ ಕ್ರೈಸ್ತರಿಗೂ ಮತ್ತು ಇತರ ಸಾಂಪ್ರದಾಯಿಕ ಕ್ರೈಸ್ತರಿಗೂ - ಸಂತೈಸಲಾರದ, ಕೊನೆಯಿಲ್ಲದ ದುಃಖದ ಅನುಭವ ಆಗಲಿದೆ. ಆದರೆ ಯಾರು ದೇವರಿಗೆ ವಿಧೇಯರಾಗಿ ನಡೆಯುತ್ತಾರೋ ಅವರಿಗೆ, ಅವರು "ಹೊಸ-ಒಡಂಬಡಿಕೆಯ ಕ್ರೈಸ್ತರಾಗಿದ್ದರೂ" ಅಥವಾ ಇತರ ಗುಂಪುಗಳ ಕ್ರೈಸ್ತರಾಗಿದ್ದರೂ, ದೇವರಿಂದ ಪ್ರಭಾವವೂ ಮಾನವೂ ಸಿಗಲಿವೆ. ದೇವರಲ್ಲಿ ಪಕ್ಷಪಾತವಿಲ್ಲ.

ನಿಜ ಏನೆಂದರೆ, ಪಾಪವು ಯಾರಲ್ಲೇ ಇರಲಿ ದೇವರು ಅದನ್ನು ಶಿಕ್ಷಿಸುವನು. ದೇವರು ಕ್ರಿಸ್ತನನ್ನು ಅರಿಯದ ಅನ್ಯರನ್ನೂ ಕೂಡ ಶಿಕ್ಷಿಸಲಿದ್ದಾರೆ, ಏಕೆಂದರೆ ಅವರು ಸತ್ಯವೇದವನ್ನು ಅರಿಯದಿದ್ದರೂ, ಯಾವುದು ತಪ್ಪು ಯಾವುದು ಸರಿಯೆಂದು ಅವರಿಗೆ ಸೂಚಿಸುವ ಒಂದು ಮನಸ್ಸಾಕ್ಷಿಯನ್ನು ದೇವರು ಅವರಲ್ಲಿ ಇರಿಸಿದ್ದಾರೆ. ಈ ರೀತಿಯಾಗಿ ದೇವರ ನಿಯಮಗಳ ಮುಖ್ಯ ತಾತ್ಪರ್ಯ ಅವರ ಹೃದಯದಲ್ಲಿ ಬರೆಯಲ್ಪಟ್ಟಿದೆ, ಮತ್ತು ಅವರ ಮನಸ್ಸಾಕ್ಷಿಯು ಅವರಿಗೆ ಸರಿ-ತಪ್ಪುಗಳನ್ನು ತೋರಿಸುತ್ತದೆ.

ಆದರೆ ಹೊಸ-ಒಡಂಬಡಿಕೆಯ ಕ್ರೈಸ್ತರು ಪಾಪ ಮಾಡಿದರೆ, ದೇವರು ಅವರನ್ನು ಇತರರಿಗಿಂತ ಹೆಚ್ಚಾಗಿ ದಂಡಿಸುತ್ತಾರೆ, ಏಕೆಂದರೆ ಅವರು ಇತರರಿಗಿಂತ ಹೆಚ್ಚಾಗಿ ದೇವರ ನಿಯಮಗಳನ್ನು ಅರಿತಿದ್ದಾಗ್ಯೂ, ಅವುಗಳಿಗೆ ವಿಧೇಯರಾಗಲಿಲ್ಲ. ರಕ್ಷಣೆಯು ಸಿಗುವಂಥದ್ದು ಬೋಧನೆಯನ್ನು ತಿಳಿದಿರುವವನಿಗೆ ಅಲ್ಲ, ಆದರೆ ಅದನ್ನು ಪಾಲಿಸುವವನಿಗೆ. ದೇವರು ಯಾರಿಗೆ ಹೆಚ್ಚಾಗಿ ಕೊಟ್ಟಿದ್ದಾರೋ, ಅವರಿಂದ ಹೆಚ್ಚಿನದ್ದನ್ನು ಅಪೇಕ್ಷಿಸುತ್ತಾರೆ.

ಹಾಗಾಗಿ ನೀವು "ಹೊಸ ಒಡಂಬಡಿಕೆಯ ಕ್ರೈಸ್ತರು" ಆಗಿದ್ದು, ದೇವರ ಸತ್ಯತೆಗಳನ್ನು ನೀವು ಅರಿತಿರುವ ಕಾರಣಕ್ಕಾಗಿ, ನಿಮ್ಮ ಮತ್ತು ದೇವರ ನಡುವೆ ಎಲ್ಲವೂ ಸರಿಯಾಗಿದೆ ಎಂದು ಯೋಚಿಸಬೇಡಿರಿ. ನೀವು ದೇವರ ಚಿತ್ತವನ್ನು ಅರಿತಿರುವುದರ ಸಲುವಾಗಿ, ದೇವರ ಆಪ್ತ ಮಿತ್ರರು ಆಗಿದ್ದೀರಿ ಎಂದೂ ಸಹ ಯೋಚಿಸಿಕೊಳ್ಳಬಹುದು; ನಿಮ್ಮಲ್ಲಿ ಸರಿ-ತಪ್ಪುಗಳ ವಿವೇಚನೆ ಇದೆ ಮತ್ತು ದೇವರ ಹೊಸ ಒಡಂಬಡಿಕೆಯ ನಿಯಮಗಳನ್ನು ನೀವು ಬಲ್ಲವರಾಗಿದ್ದೀರಿ. ದೇವರ ಸತ್ಯವೇದದ ನಿಗೂಢ ಜ್ಞಾನವನ್ನು ಅಜ್ಞಾನಿಗಳಿಗೆ ತಿಳಿಸಿ ಅವರನ್ನು ಬೆಳಕಿಗೆ ನಡೆಸುವ ಅರ್ಹತೆ ನಿಮ್ಮಲ್ಲಿದೆ ಎಂದು ನೀವು ಯೋಚಿಸಬಹುದು.

ಆದರೆ ಮೊದಲು ನಿಮ್ಮನ್ನು ಪರೀಕ್ಷಿಸಿಕೊಳ್ಳಿರಿ. ನೀವು ಕದಿಯಬಾರದೆಂದು ಇತರರಿಗೆ ಬೋಧಿಸಬಹುದು - ಆದರೆ ಎಂದಾದರೂ ನೀವು ಮಾಡದಿರುವ ಯಾವುದೋ ಕಾರ್ಯಕ್ಕಾಗಿ ಪ್ರಶಂಸೆಯನ್ನು ನೀವು ಕದ್ದಿದ್ದೀರಾ? ನೀವು ವ್ಯಭಿಚಾರ ಮಾಡಬಾರದೆಂದು ಹೇಳುತ್ತೀರಿ - ಆದರೆ ನೀವು ಸುಂದರ ಯುವತಿಯರನ್ನು ನೋಡಿ ಮೋಹಿಸುತ್ತೀರಾ? "ಮೂರ್ತಿಪೂಜೆ ಮಾಡಬೇಡಿರಿ," ಎಂದು ನೀವು ಹೇಳುತ್ತೀರಿ - ಆದರೆ ನೀವು ಹಣವನ್ನು ನಿಮ್ಮ ದೇವರನ್ನಾಗಿ ಮಾಡಿದ್ದೀರಾ?

ನೀವು ಹೊಸ ಒಡಂಬಡಿಕೆಯ ತಿಳುವಳಿಕೆಯ ಬಗ್ಗೆ ಹೆಚ್ಚಳ ಪಡಬಹುದು., ಆದರೆ ನಿಮ್ಮ ಜೀವನ ರೀತಿಯ ದೆಸೆಯಿಂದ ದೇವರ ನಾಮವು ದೂಷಣೆಗೆ ಗುರಿಯಾಗಿದೆಯೇ?

ನಿಮ್ಮ ಹೊಸ ಒಡಂಬಡಿಕೆಯ ಜ್ಞಾನವು ಸಾರ್ಥಕವಾಗುವುದು ನೀವು ಅದಕ್ಕೆ ಅನುಸಾರವಾಗಿ ಜೀವಿದಾಗ ಮಾತ್ರ. ಆದರೆ ನೀವು ಅದರ ಬೋಧನೆಯನ್ನು ಮೀರಿ ನಡೆಯುವುದಾದರೆ, ಇತರರ ಮಟ್ಟದಲ್ಲೇ ನೀವೂ ಸಹ ಇದ್ದೀರಿ. ಆದರೆ ಆ ಇತರ ಕ್ರೈಸ್ತರು (ನೀವು ತುಚ್ಛವಾಗಿ ನೋಡುವಂಥವರು) ದೇವರ ನಿಯಮಗಳಿಗೆ ವಿಧೇಯರಾಗಿ ನಡೆದರೆ, ಅವರಲ್ಲಿ ಸಾಕಷ್ಟು ಹೊಸ ಒಡಂಬಡಿಕೆಯ ಜ್ಞಾನ ಇಲ್ಲವಾದರೂ ದೇವರು ಅವರನ್ನು ಸನ್ಮಾನಿಸುವರು. ನ್ಯಾಯ ತೀರ್ಪಿನ ದಿನದಲ್ಲಿ, ದೇವರ ಬಗ್ಗೆ ಮತ್ತು ದೇವರ ವಾಗ್ದಾನಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿದ್ದರೂ ಅದಕ್ಕೆ ವಿಧೇಯರಾಗಿ ಜೀವಿಸದಿರುವ ನಿಮಗಿಂತ ಅವರು ಹೆಚ್ಚಿನ ಗೌರವಕ್ಕೆ ಪಾತ್ರರಾಗುವರು.

ನೀವು ಹೊಸ ಒಡಂಬಡಿಕೆಯ ಸಭೆಗೆ ಸೇರುವ ಮೂಲಕ ಅಥವಾ ಅದರ ಸತ್ಯಾಂಶಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ನೀವು ಒಬ್ಬ ಹೊಸ-ಒಡಂಬಡಿಕೆಯ ಕ್ರೈಸ್ತರು ಆಗುವುದಿಲ್ಲ. ಹೊಸ-ಒಡಂಬಡಿಕೆಯ ನಿಜವಾದ ಒಬ್ಬ ಕ್ರೈಸ್ತನು ಯಾವಾಗಲೂ ದೇವರನ್ನು ಸಂತೋಷ ಪಡಿಸುವ ಹೃದಯವನ್ನು ಹೊಂದಿರುತ್ತಾನೆ, ಏಕೆಂದರೆ ಆತನು ಯಾವಾಗಲೂ ತನ್ನನ್ನು ಪರೀಕ್ಷಿಸಿಕೊಳ್ಳುತ್ತಾನೆ ಮತ್ತು ಹಾಗಾಗಿ ಪ್ರತಿ ದಿನವೂ ಪಾಪವನ್ನು ಜಯಿಸಿ ಜೀವಿಸುತ್ತಾನೆ. ದೇವರು ಹುಡುಕುತ್ತಿರುವುದು ಸರಿಯಾದ ಧಾರ್ಮಿಕ ತತ್ವಗಳನ್ನು ಹೊಂದಿರುವವರನ್ನು ಅಲ್ಲ, ಆದರೆ ಯಾರು ಯೇಸುವು ನಡೆದ ಹಾದಿಯಲ್ಲಿ ದಿನಾಲೂ ನಡೆಯುವಂತೆ ತಮ್ಮ ಹೃದಯ ಮತ್ತು ಮನಸ್ಸನ್ನು ಪವಿತ್ರಾತ್ಮನ ಅಧೀನಕ್ಕೆ ಒಪ್ಪಿಸಿಕೊಡುತ್ತಾರೋ ಅವರನ್ನು. ಯಾರ ಜೀವನದಲ್ಲಿ ಈ ರೀತಿಯ ಬದಲಾವಣೆ ಇದೆಯೋ ಅವರು ಮಾತ್ರ ಆ ಅಂತಿಮ ದಿನದಲ್ಲಿ ದೇವರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.

ಕೇಳುವುದಕ್ಕೆ ಕಿವಿಯುಳ್ಳವನು ಇದನ್ನು ಕೇಳಲಿ.