ಸತ್ಯವೇದದಲ್ಲಿ ಜನರು ಕುರಿಗಳಿಗೆ ಹೋಲಿಸಲ್ಪಟ್ಟಿದ್ದಾರೆ. ಕುರಿಗಳು ಪ್ರಶ್ನಿಸದೇ ಮಂದೆಯನ್ನು ಕುರುಡಾಗಿ ಹಿಂಬಾಲಿಸುವ ಸ್ವಭಾವವನ್ನು ಹೊಂದಿವೆ. ಆದರೆ ಕರ್ತನಾದ ಯೇಸುವು ಬಂದು ಪ್ರತಿಯೊಂದನ್ನೂ ದೇವರ ವಾಕ್ಯದ ಮೂಲಕ ಪರಿಶೋಧಿಸುವುದನ್ನು ನಮಗೆ ಕಲಿಸಿಕೊಟ್ಟಿದ್ದಾರೆ. ಫರಿಸಾಯರು ಮಾನವ ಸಂಪ್ರದಾಯಗಳನ್ನು ಗೌರವಿಸಿದರು. ಆದರೆ ಯೇಸು ಸ್ವಾಮಿಯು ದೇವರ ವಾಕ್ಯವನ್ನು ಎತ್ತಿಹಿಡಿದರು. ನಾವು ದೇವರ ಪ್ರತಿಯೊಂದು ವಾಕ್ಯವನ್ನು ಆಧರಿಸಿ ಜೀವಿಸಬೇಕು - ಮತ್ತು ದೇವರ ವಾಕ್ಯಕ್ಕೆ ವಿರುದ್ಧವಾದ ಪ್ರತಿಯೊಂದು ಮಾನವ ಸಂಪ್ರದಾಯವನ್ನು ತಿರಸ್ಕರಿಸಬೇಕು(ಮತ್ತಾ. 4:4).
ದೇವರ ವಾಕ್ಯ ಹಾಗೂ ಮಾನವ ಸಂಪ್ರದಾಯದ ನಡುವಿನ ಪ್ರಾಚೀನ ಹೋರಾಟವನ್ನೇ ಯೇಸುಸ್ವಾಮಿಯು ಫರಿಸಾಯರೊಂದಿಗೆ ನಿರಂತರವಾಗಿ ನಡೆಸಿದರು. ನಾವು ಕ್ರೈಸ್ತಸಭೆಯಲ್ಲಿ ಇಂದಿಗೂ ಇದೇ ಹೋರಾಟದಲ್ಲಿ ತೊಡಗಿದ್ದೇವೆ. ಭೂಲೋಕದಲ್ಲಿ ಪರಲೋಕದ ಬೆಳಕು ನಮಗೆ ಕೇವಲ ದೇವರ ವಾಕ್ಯದಿಂದ ದೊರಕುತ್ತದೆ. ದೇವರು ಆದಿಯಲ್ಲಿ ಬೆಳಕನ್ನು ಸೃಷ್ಟಿಸಿದಾಗ, ಅವರು ತಕ್ಷಣವೇ ಬೆಳಕನ್ನೂ ಕತ್ತಲೆಯನ್ನೂ ಬೇರೆ ಬೇರೆ ಮಾಡಿದರು. ಕತ್ತಲೆಯಲ್ಲಿ ಪಾಪ ಹಾಗೂ ಮಾನವ ಸಂಪ್ರದಾಯ ಇವೆರಡೂ ಸೇರಿವೆ. ಹಾಗಾಗಿ ನಾವು ನಿಷ್ಕಳಂಕವಾದ ದೇವರ ವಾಕ್ಯದಿಂದ ಮಾನವ ಸಂಪ್ರದಾಯ ಹಾಗೂ ಪಾಪ ಇವೆರಡನ್ನೂ ಪ್ರತ್ಯೇಕಿಸಬೇಕು - ಈ ರೀತಿಯಾಗಿ ಸಭೆಯಲ್ಲಿ ಇವುಗಳು ಸೇರಿಕೊಳ್ಳದಂತೆ ನೋಡಿಕೊಳ್ಳಬೇಕು.
ಕ್ರಿಸ್ಮಸ್
ಈಗ ಕ್ರಿಸ್ಮಸ್‌ನ ವಿಷಯವಾಗಿ ನೋಡೋಣ. ಅನೇಕರು ಕ್ರಿಸ್ಮಸ್ ಹಬ್ಬವನ್ನು ಯೇಸುಕ್ರಿಸ್ತನ ಜನ್ಮದಿನವೆಂದು ಕೊಂಡಾಡುತ್ತಾರೆ! ವಿವಿಧ ಧರ್ಮಗಳಿಗೆ ಸೇರಿದ ಅಂಗಡಿಗಳ ವ್ಯಾಪಾರಿಗಳೂ ಕ್ರಿಸ್ಮಸ್ ಹಬ್ಬವನ್ನು ಅತ್ಯಾಸಕ್ತಿಯಿಂದ ಎದುರು ನೋಡುತ್ತಾರೆ, ಯಾಕೆಂದರೆ ಅದು ಅವರಿಗೆ ಒಳ್ಳೇ ಲಾಭವನ್ನು ದೊರಕಿಸುವ ಕಾಲ! ಇದೊಂದು ವ್ಯಾಪಾರಕ್ಕೆ ಸಂಬಂಧಿಸಿದ ಹಬ್ಬದ ದಿನವಾಗಿದೆ - ಆದರೆ ಇದು ಆತ್ಮಿಕ ಸಂಬಂಧ ಹೊಂದಿರುವ ವಿಶೇಷ ದಿನವಲ್ಲ. ಕ್ರಿಸ್ಮಸ್ ಕಾರ್ಡುಗಳು ಹಾಗೂ ಕ್ರಿಸ್ಮಸ್ ಕೊಡುಗೆಗಳಿಗಾಗಿ ಕೋಟ್ಯಾಂತರ ಹಣ ವೆಚ್ಚವಾಗುತ್ತದೆ. ಇದಲ್ಲದೆ ಈ ಕ್ರಿಸ್ಮಸ್ ಅವಧಿಯಲ್ಲಿ ಮಧ್ಯಪಾನ ವ್ಯಾಪಾರವೂ ಹೆಚ್ಚುತ್ತದೆ.
ಹಾಗಾಗಿ ಇದು ನಿಜವಾಗಿಯೂ ದೇವರ ಮಗನ ಜನ್ಮದಿನವೋ, ಅಥವಾ ಮತ್ತೊಬ್ಬ ಯೇಸುವಿನ ಜನ್ಮದಿನವೋ?
ನಾವು ಮೊದಲನೆಯದಾಗಿ ದೇವರ ವಾಕ್ಯವನ್ನು ನೋಡೋಣ. ಬೆತ್ಲೆಹೇಮಿನಲ್ಲಿ ಯೇಸುವು ಜನಿಸಿದ ಆ ರಾತ್ರಿಯ ವೇಳೆಯಲ್ಲಿ, ಕುರುಬರು ಯೂದಾಯ ಸೀಮೆಯ ಬಯಲಿನಲ್ಲಿ ಕುರಿಹಿಂಡನ್ನು ಕಾಯುತ್ತಿದ್ದರೆಂದು ಸತ್ಯವೇದವು ನಮಗೆ ತಿಳಿಸುತ್ತದೆ (ಲೂಕ. 2:7-14). ಆದರೆ ಇಸ್ರಾಯೇಲ್ ಸೀಮೆಯಲ್ಲಿ ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳ ವರೆಗೆ ಬಹು ಚಳಿ ಹಾಗೂ ಮಳೆಯಾಗುವ ಕಾಲವಾಗಿದ್ದು, ಆ ಸೀಮೆಯ ಕುರುಬರು ಈ ಅವಧಿಯಲ್ಲಿ ತಮ್ಮ ಕುರಿಹಿಂಡನ್ನು ರಾತ್ರಿಯ ವೇಳೆಯಲ್ಲಿ ತೆರೆದ ಬಯಲಿನಲ್ಲಿ ಬಿಡುತ್ತಿರಲಿಲ್ಲ. ಹಾಗಾಗಿ ನಿಜವಾದ ಯೇಸುಸ್ವಾಮಿಯು ಮಾರ್ಚ್‌ನಿಂದ ಸೆಪ್ಟಂಬರ್ ತಿಂಗಳಿನ ನಡುವಿನ ಅವಧಿಯಲ್ಲಿ ಜನಿಸಿರಬೇಕು. ಹಾಗಾದರೆ ಡಿಸೆಂಬರ್ 25ನೇ ತಾರೀಖು, ಅಜಾಗರೂಕರಾಗಿರುವ ಕ್ರೈಸ್ತಪ್ರಪಂಚದ ಮೇಲೆ ದೇವರನ್ನು ಅರಿಯದ ಜನರು ಹೇರಿರುವ ಮತ್ತೊಬ್ಬ ಯೇಸುವಿನ ಜನ್ಮದಿನವಾಗಿರಬೇಕು!
ಒಂದು ವೇಳೆ ನಮಗೆ ಯೇಸುವಿನ ಜನ್ಮದಿನ ನಿಖರವಾಗಿ ತಿಳಿದಿದ್ದರೂ, ಕ್ರೈಸ್ತಸಭೆಯು ಆ ದಿನವನ್ನು ಆಚರಿಸುವುದು ದೇವರ ಉದ್ದೇಶವಾಗಿದೆಯೋ ಎಂಬ ಪ್ರಶ್ನೆ ಎದುರಾಗುತ್ತದೆ. ನಿಶ್ಚಯವಾಗಿ ಯೇಸುವಿನ ತಾಯಿಯಾದ ಮರಿಯಳಿಗೆ ಯೇಸುವಿನ ಜನ್ಮದಿನ ನಿಖರವಾಗಿ ತಿಳಿದಿತ್ತು. ಪಂಚಾಶತ್ತಮ ದಿನದ ನಂತರ, ಮರಿಯಳು ಅನೇಕ ವರ್ಷಗಳು ಅಪೊಸ್ತಲರೊಂದಿಗೆ ಇದ್ದಳು. ಹಾಗಿದ್ದರೂ, ಸತ್ಯವೇದದ ಒಂದು ಪುಸ್ತಕದಲ್ಲೂ ಯೇಸುವಿನ ಜನ್ಮದಿನವು ದಾಖಲಾಗಿಲ್ಲ. ಇದು ಏನನ್ನು ತೋರಿಸುತ್ತದೆ? ಇಷ್ಟೇ - ಯೇಸುವಿನ ಜನ್ಮದಿನದ ತಾರೀಖನ್ನು ದೇವರು ಉದ್ದೇಶಪೂರ್ವಕವಾಗಿ ಮರೆಮಾಡಿದ್ದಾರೆ, ಯಾಕೆಂದರೆ ದೇವರ ಚಿತ್ತ ಈ ದಿನವನ್ನು ತನ್ನ ಸಭೆಯು ಆಚರಿಸಬೇಕೆಂದು ಇರಲಿಲ್ಲ. ಯೇಸುವು ವರ್ಷಕ್ಕೊಂದು ಬಾರಿ ಜನ್ಮದಿನವನ್ನು ಆಚರಿಸುವ ಒಬ್ಬ ಸಾಯತಕ್ಕ ಮನುಷ್ಯನಾಗಿರಲಿಲ್ಲ. ಆತನು "ಜನನದ ಆರಂಭವಿಲ್ಲದ"ದೇವರ ಮಗನಾಗಿದ್ದು, ನಮಗಿಂತ ವಿಭಿನ್ನನಾಗಿದ್ದನು (ಇಬ್ರಿ. 7:3). ಯೇಸುವಿನ ಜನನ, ಮರಣ, ಪುನರುತ್ಥಾನ ಮತ್ತು ಪರಲೋಕಕ್ಕೆ ಏರುವಿಕೆಯನ್ನು ನಾವು ವರ್ಷಕ್ಕೊಂದು ದಿನವಲ್ಲ, ಪ್ರತಿದಿನವೂ ಜ್ಞಾಪಿಸಿಕೊಳ್ಳಬೇಕು.
ನಾವು ಹಳೆಯ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯ ನಡುವಿನ ವ್ಯತ್ಯಾಸವನ್ನು ಅರಿತುಕೊಂಡಾಗ, ದೇವರು ಈಗ ತನ್ನ ಮಕ್ಕಳು ಯಾವುದೋ "ಪವಿತ್ರ ದಿನಗಳನ್ನು"ಆಚರಿಸುವುದನ್ನು ಏಕೆ ಇಷ್ಟಪಡುವುದಿಲ್ಲ ಎಂಬುದನ್ನು ಸಹ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಳೆಯ ಒಡಂಬಡಿಕೆಯಲ್ಲಿ ಕೆಲವು ಪ್ರತ್ಯೇಕ ದಿನಗಳನ್ನು ಪರಿಶುದ್ಧ ದಿನಗಳಾಗಿ ಆಚರಿಸುವಂತೆ ಇಸ್ರಾಯೇಲ್ಯರು ಆಜ್ಞಾಪಿಸಲ್ಪಟ್ಟಿದ್ದರು. ಆದರೆ ಅವು ಕೇವಲ ಛಾಯೆಗಳಾಗಿದ್ದವು. ಈಗಲಾದರೋ ಕ್ರಿಸ್ತನು ಬಂದಿರುವಾಗ, ನಮ್ಮ ಜೀವಿತಗಳಲ್ಲಿ ಪ್ರತಿದಿನವೂ ಒಂದೇ ಸಮನಾಗಿ ಪರಿಶುದ್ಧವಾಗಿ ಇರಬೇಕೆಂದು ದೇವರ ಚಿತ್ತವಾಗಿದೆ. ಈ ಹೊಸ ಒಡಂಬಡಿಕೆಯ ಅಡಿಯಲ್ಲಿ ಸಬ್ಬತ್ ದಿನವು ಸಹ ಗತಿಸಿಹೋಗಿದೆ. ಈ ಕಾರಣಕ್ಕಾಗಿ ಹೊಸ ಒಡಂಬಡಿಕೆಯಲ್ಲಿ ಎಲ್ಲಿಯೂ ಯಾವ ಪವಿತ್ರ ದಿನವನ್ನೂ ಉಲ್ಲೇಖಿಸಲಾಗಿಲ್ಲ (ಕೊಲೊ. 2:16,17).
ಹಾಗಿದ್ದರೆ, ಕ್ರಿಸ್ಮಸ್ ದಿನಾಚರಣೆಯು ಹೇಗೆ ಕ್ರೈಸ್ತಜಗತ್ತನ್ನು ಪ್ರವೇಶಿಸಿತು? ಯಾವ ರೀತಿ ಶಿಶು ದೀಕ್ಷಾಸ್ನಾನ, ದಶಮಾಂಶ ಪದ್ಧತಿ, ಧರ್ಮಗುರುಗಳ ವ್ಯವಸ್ಥೆ, ಸಂಬಳ ಪಡೆಯುವ ಸಭಾಪಾಲಕರುಗಳು ಮುಂತಾದ ಹಲವಾರು ಮಾನವ ಸಂಪ್ರದಾಯಗಳು ಸಭೆಯಲ್ಲಿ ಪ್ರವೇಶಿಸಿದವೋ - ಹಾಗೆಯೇ ಸೈತಾನ ಹಾಗೂ ಮಾನಸಾಂತರ ಹೊಂದದ ಜನರ ಕುಯುಕ್ತಿಯಿಂದಾಗಿ - ಈ ಕ್ರಿಸ್ಮಸ್ ಸಂಪ್ರದಾಯವು ಪ್ರವೇಶಿಸಿತು.
4ನೇ ಶತಮಾನದ ರೋಮಾ ಚಕ್ರವರ್ತಿ ಕಾನ್ಸ್‍ಟನ್‍ಟೈನನು ಕ್ರೈಸ್ತಧರ್ಮವನ್ನು ರೋಮಾ ಸಾಮ್ರಾಜ್ಯದ ಅಧಿಕೃತ ಧರ್ಮವನ್ನಾಗಿ ಪ್ರಕಟಿಸಿದಾಗ, ಅನೇಕರು ಹೆಸರು ಮಾತ್ರಕ್ಕೆ ಕ್ರೈಸ್ತರಾಗಿ ಮಾರ್ಪಟ್ಟರು - ಅವರ ಹೃದಯದಲ್ಲಿ ಯಾವುದೇ ಮಾರ್ಪಾಟು ಉಂಟಾಗಿರಲಿಲ್ಲ. ಹಾಗಾಗಿ ಅವರಿಗೆ ತಮ್ಮ ಎರಡು ವಾರ್ಷಿಕ ವಿಗ್ರಹಾರಾಧನೆಯ ಮಹಾಹಬ್ಬಗಳನ್ನು - ಅವು ಸೂರ್ಯನ ಆರಾಧನೆಗೆ ಸಂಬಂಧಿಸಿದ್ದವು - ಬಿಟ್ಟುಬಿಡಲು ಮನಸ್ಸಿರಲಿಲ್ಲ. ಮೊದಲನೆಯದು, ಸೂರ್ಯದೇವನ ಜನ್ಮದಿನವಾದ ಡಿಸೆಂಬರ್ 25ನೇ ತಾರೀಖು. ಆ ದಿನ ದಕ್ಷಿಣ ಗೋಳದ ದಿಕ್ಕಿನಲ್ಲಿ ಸಾಗಿದ್ದ ಸೂರ್ಯನು ಉತ್ತರ ದಿಕ್ಕಿಗೆ ಚಲಿಸಲು ಆರಂಭಿಸುತ್ತಾನೆ (ದಕ್ಷಿಣಾಯನದ ಅಂತ್ಯ, ಉತ್ತರಾಯಣದ ಆರಂಭ). ಎರಡನೆಯದು, ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಆಚರಿಸುವ ವಸಂತಕಾಲದ ಹಬ್ಬ. ಅಂದರೆ ಚಳಿಗಾಲ ತೀರಿ, ಇವರ ಸೂರ್ಯದೇವನು ಬೆಚ್ಚಗಿನ ಬೇಸಿಗೆ ಕಾಲವನ್ನು ಆರಂಭಿಸುವ ದಿವಸ. ಇವರು ತಮ್ಮ ಸೂರ್ಯದೇವನ ಹೆಸರನ್ನು ಯೇಸು ಎಂದು ಬದಲಾಯಿಸಿ, ತಮ್ಮ ಎರಡು ಪ್ರಧಾನ ಹಬ್ಬಗಳಲ್ಲಿ ಒಂದನ್ನು ಕ್ರಿಸ್ಮಸ್ ಎಂಬುದಾಗಿ, ಮತ್ತೊಂದನ್ನು ಈಸ್ಟರ್ ಎಂಬುದಾಗಿ ಬದಲಾಯಿಸಿ, ಅವನ್ನು ಕ್ರೈಸ್ತಧರ್ಮದ ಹಬ್ಬಗಳಾಗಿ ಆಚರಿಸುವವರಾದರು!!
"ದೇವರ ವಾಕ್ಯವು ಭೂಲೋಕದಲ್ಲಿ ನಮಗೆ ದೊರಕಿರುವ ಏಕೈಕ ಪರಲೋಕದ ಬೆಳಕಾಗಿದೆ
ಇಂದಿನ ಕ್ರಿಸ್ಮಸ್ ಆಚರಣೆಯ ಸಂಪ್ರದಾಯಗಳು ಯುರೋಪಿನ ದೇಶಗಳಲ್ಲಿ ಕ್ರೈಸ್ತಧರ್ಮವು ಹುಟ್ಟಿಕೊಳ್ಳುವುದಕ್ಕೆ ಮೊದಲೇ ಪ್ರಚಲಿತ ಅನ್ಯಧಾರ್ಮಿಕ ಸಂಪ್ರದಾಯ ಹಾಗೂ ಆಚಾರ ಪದ್ಧತಿಗಳಿಂದ ವಿಕಸಿತವಾಗಿವೆ. ಕ್ರಿಸ್ತನ ಜನ್ಮದಿನದ ದಿನಾಂಕ ಮತ್ತು ಇಸವಿ ಯಾವತ್ತೂ ತೃಪ್ತಿಕರವಾಗಿ ನಿಶ್ಚಯಿಸಲ್ಪಟ್ಟಿಲ್ಲ; ಆದರೆ, ಕ್ರಿ.ಶ. 440ನೇ ಇಸವಿಯಲ್ಲಿ ಕ್ಯಾಥೋಲಿಕ್ ಸಭೆಯ ಧರ್ಮಗುರುಗಳು ಈ ಜನ್ಮದಿನದ ಆಚರಣೆಗೆ ಒಂದು ತಾರೀಖನ್ನು ಆರಿಸಿಕೊಂಡಾಗ, ಅವರು ಆ ಕಾಲದ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದ ಚಳಿಗಾಲದ ಉತ್ತರಾಯಣದ ದಿನವನ್ನು ಆರಿಸಿಕೊಂಡರು - ಆ ದಿನವು ಆ ಜನರಿಗೆ ಅತ್ಯಂತ ಪ್ರಮುಖ ಹಬ್ಬದ ದಿನವಾಗಿತ್ತು. ಕ್ರೈಸ್ತಧರ್ಮವು ಪ್ರಪಂಚದಾದ್ಯಂತ ಅನ್ಯದೇಶಗಳಲ್ಲಿ ಹರಡುತ್ತಿದ್ದಂತೆ, ಈ ಚಳಿಗಾಲದ ಉತ್ತರಾಯಣದ ಹಬ್ಬದ ಆಚರಣೆಯ ಹಲವಾರು ಪದ್ಧತಿಗಳು ಕ್ರೈಸ್ತತ್ವದ ಅಂಗವಾಗಿ ಸೇರಿಕೊಂಡವು.
Encyclopaedia Brittanica' ಎಂಬ ಮಹಾಗ್ರಂಥವು (ಐತಿಹಾಸಿಕ ವಾಸ್ತವಾಂಶಗಳ ವಿಶ್ವಾಸಾರ್ಹ ಸಂಗ್ರಹ) ಕ್ರಿಸ್ಮಸ್ ಆಚರಣೆಯ ಮೂಲದ ಬಗ್ಗೆ ಈ ಕೆಳಗಿನಂತೆ ತಿಳಿಸುತ್ತದೆ:
"ಪ್ರಾಚೀನ ರೋಮನ್ ಹಬ್ಬವಾದ ಸ್ಯಾಟರ್ನಾಲಿಯಾ ಎಂಬುದು ಆಧುನಿಕ ಕ್ರಿಸ್ಮಸ್ ಆಚರಣೆಗೆ ಬಹುಶಃ ಅತ್ಯಂತ ನಿಕಟ ಸಂಬಂಧವನ್ನು ಹೊಂದಿರುತ್ತದೆ. ಈ ಹಬ್ಬವು ಸಾಮಾನ್ಯವಾಗಿ ಚಳಿಗಾಲದ ಉತ್ತರಾಯಣ ದಿನಕ್ಕೆ ನಿಕಟವಾಗಿ ಆಚರಿಸಲಾಗುತ್ತಿತ್ತು ಮತ್ತು ಇದು ಬಿತ್ತನೆಯ ಕಾಲದ ಅಂತ್ಯವನ್ನು ಸೂಚಿಸುತ್ತಿತ್ತು. ಈ ಆಚರಣೆಯ ಸಮಯದಲ್ಲಿ ಅನೇಕ ದಿನಗಳ ವರೆಗೆ ಆಟಗಳು, ಔತಣಕೂಟಗಳು ಮತ್ತು ಉಡುಗೊರೆಗಳನ್ನು ನೀಡುವ ಪದ್ಧತಿಯಿತ್ತು, ಮತ್ತು ಈ ಮಹೋತ್ಸವದ ಆಚರಣೆಯ ಪ್ರಯುಕ್ತ ಅನೇಕ ದಿನಗಳ ಪರ್ಯಂತ ವ್ಯಾಪಾರ ಉದ್ಯೋಗಗಳನ್ನು ಸ್ಥಗಿತ ಗೊಳಿಸಲಾಗುತ್ತಿತ್ತು. ಈ ಹಬ್ಬ ಅಂತ್ಯದ ದಿನಗಳಲ್ಲಿ, ಮೇಣದ ಮುಂಬತ್ತಿಗಳನ್ನು, ಮೇಣದ ಹಣ್ಣುಗಳ ಮಾದರಿಗಳನ್ನು ಮತ್ತು ಚಿಕ್ಕ ಪ್ರತಿಮೆಗಳನ್ನು ಉಡುಗೊರೆಯಾಗಿ ಕೊಡಲಾಗುತ್ತಿತ್ತು. ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗಳಲ್ಲಿ ಸ್ಯಾಟರ್ನಾಲಿಯಾ ಹಬ್ಬದ ನೇರವಾದ ಪ್ರಭಾವವಿದೆ. ರೋಮ್ ಸಾಮ್ರಾಜ್ಯದ ಇನ್ನೊಂದು ಹಬ್ಬವಾಗಿದ್ದ ಅಜೇಯ ಸೂರ್ಯನ ಜನ್ಮದಿನವನ್ನೇ ಕ್ರಿಸ್ಮಸ್ ಹಬ್ಬದ ಆಚರಣೆಗಾಗಿ ಆರಿಸಿಕೊಂಡದ್ದು, ಈ ದಿನಗಳಿಗೆ ಸೂರ್ಯನ ಹಿನ್ನೆಲೆಯನ್ನು ಕೊಟ್ಟು ಮತ್ತು ಇದನ್ನು ರೋಮ್ ಸಾಮ್ರಾಜ್ಯದ ಹೊಸ ವರ್ಷದ ಆಚರಣೆಯೊಂದಿಗೆ ಜೋಡಿಸಿತು; ಈ ಸಂದರ್ಭದಲ್ಲಿ ಮನೆಗಳು ಹಸಿರು ಎಲೆಗಳ ತೋರಣಗಳಿಂದ ಮತ್ತು ದೀಪಗಳಿಂದ ಅಲಂಕರಿಸಲ್ಪಡುತ್ತಿದ್ದವು ಮತ್ತು ಮಕ್ಕಳಿಗೂ, ಬಡವರಿಗೂ ಉಡುಗೊರೆಗಳನ್ನು ನೀಡಲಾಗುತ್ತಿತ್ತು." (https://www.britannica.com/topic/Winter-Holidays)
ಈ ಮೂರ್ತಿಪೂಜೆಯ ಆಚರಣೆಗಳು ನಿಮ್ರೋದನು ಆರಂಭಿಸಿದ ಬಾಬೆಲಿನ ಮತಧರ್ಮದಿಂದ ಉದ್ಭವಿಸಿದವು (ಆದಿ. 10:8-10ನ್ನು ಓದಿಕೊಳ್ಳಿರಿ). ವಾಡಿಕೆಯ ತಿಳುವಳಿಕೆಯ ಪ್ರಕಾರ, ನಿಮ್ರೋದನು ತೀರಿಹೋದ ನಂತರ, ಅವನ ಪತ್ನಿ ಸೆಮಿರಾಮಿಸ್ಸಳು ಅನೈತಿಕವಾಗಿ ಒಂದು ಮಗುವನ್ನು ಹೆತ್ತು, ಆ ಮಗು ನಿಮ್ರೋದನ ಪುನರ್ಜನ್ಮವೆಂದು ಹೇಳಿಕೊಂಡಳು. ಈ ರೀತಿಯಾಗಿ ತಾಯಿ-ಮಗನ ಆರಾಧನೆ ಆರಂಭವಾಯಿತು, ಮತ್ತು ಹಲವಾರು ಶತಮಾನಗಳ ನಂತರ ನಾಮಧೇಯ ಕ್ರೈಸ್ತರು ಇದನ್ನೇ ಮಾದರಿಯಾಗಿ ಇಟ್ಟುಕೊಂಡು, ಮರಿಯಳು ಮತ್ತು ಯೇಸುವಿನ ಆರಾಧನೆಯನ್ನು ಜಾರಿಗೊಳಿಸಿದರು.
ಈ ಶಿಶು-ದೇವರ ಜನ್ಮದಿನವು, ಪ್ರಾಚೀನ ಬಾಬೆಲಿನವರಿಂದ ಡಿಸೆಂಬರ್ 25 ತಾರೀಖಿನಂದೇ ಆಚರಿಸಲಾಗುತ್ತಿತ್ತು. ಸೆಮಿರಾಮಿಸ್ಸಳು ಗಗನದ ಒಡತಿ ಅಥವಾ ಗಗನದ ರಾಣಿಯಾಗಿದ್ದಳು (ಯೆರೆ. 44:19), ಮತ್ತು ಅನೇಕ ಶತಮಾನಗಳ ನಂತರ ಎಫೆಸ ಪಟ್ಟಣದಲ್ಲಿ ಆಕೆಯ ಆರಾಧನೆ ಡಿಯಾನ ಮಹಾದೇವಿ ಮತ್ತು ಅರ್ತೆಮೀದೇವಿ ಎಂಬ ಹೆಸರಿನಿಂದ ನಡೆಯುತ್ತಿತ್ತು (ಅ.ಕೃ. 19:28).
ಸೆಮಿರಾಮಿಸ್ಸಳು ಸತ್ತುಹೋಗಿದ್ದ ಒಂದು ಮರದ ಬುಡದಿಂದ ಒಂದೇ ರಾತ್ರಿಯಲ್ಲಿ ಒಂದು ದೊಡ್ಡ ಸದಾ ಹಸಿರಿನ ಮರ ಬೆಳೆಯಿತೆಂದು ಹೇಳಿಕೊಂಡಳು. ಇದು ಸಾಂಕೇತಿಕವಾಗಿ, ನಿಮ್ರೋದನು ಪುನರ್ಜನ್ಮ ಹೊಂದಿ, ಪರಲೋಕದ ಕೊಡುಗೆಗಳನ್ನು ಭೂಲೋಕಕ್ಕೆ ತರುವುದನ್ನು ಸೂಚಿಸಿತು. ಅಂದಿನಿಂದ ಸೂಜಿ ಎಲೆಯ ಮರವನ್ನು ಕಡಿದು, ಅದರ ಕೊಂಬೆಗಳಲ್ಲಿ ಉಡುಗೊರೆಗಳನ್ನು ತೂಗುಹಾಕುವ ಪರಿಪಾಠ ಆರಂಭವಾಯಿತು. ಹೌದು, ಇಂದಿನ ಕ್ರಿಸ್ಮಸ್ ಮರಕ್ಕೆ ಅದೇ ಮೂಲವಾಗಿದೆ!
ದೇವರ ವಾಕ್ಯವೋ ಅಥವಾ ಮಾನವ ಸಂಪ್ರದಾಯವೋ?
ಈ ಕ್ರಿಸ್ಮಸ್ ದಿನಾಚರಣೆಯ ಹಿನ್ನಲೆಯಲ್ಲಿ ಅಡಕವಾಗಿರುವ ಅತ್ಯಂತ ಅಪಾಯಕರ ಮೂಲತತ್ವ ಏನೆಂದರೆ, ದೇವರ ವಾಕ್ಯದ ಆಧಾರವಿಲ್ಲದೆಯೂ ಮಾನವ ಸಂಪ್ರದಾಯವನ್ನು ಅನುಸರಿಸುವಂಥದ್ದು. ಮಾನವ ಸಂಪ್ರದಾಯದ ಸೆಳೆತ ಎಷ್ಟು ಬಲವಾಗಿದೆಯೆಂದರೆ, ಇತರ ವಿಷಯಗಳಲ್ಲಿ ದೇವರ ವಾಕ್ಯವನ್ನು ಯಥಾರ್ಥವಾಗಿ ಕೈಗೊಳ್ಳುವ ಕ್ರೈಸ್ತವಿಶ್ವಾಸಿಗಳು ಸಹ ಕ್ರಿಸ್ಮಸ್ ಆಚರಣೆಯನ್ನು ಬಿಟ್ಟುಬಿಡಲು ಅಶಕ್ತರಾಗಿದ್ದಾರೆ.
ಕ್ರಿಸ್ಮಸ್ ಮೂಲತಃ ಮೂರ್ತಿಪೂಜೆಯ ಒಂದು ಉತ್ಸವವಾಗಿದೆ, ಎಂಬುದನ್ನು ಲೌಕಿಕ ಲೇಖಕರೂ ಸಹ (ಮೇಲೆ ಪ್ರಸ್ತಾಪಿಸಿದ ಎನ್ನ್ಸ್ ಕ್ಲೋಪೀಡಿಯಾ ಬ್ರಿಟಾನಿಕಾದ ಬರಹಗಾರರು) ಸ್ಪಷ್ಟವಾಗಿ ತಿಳಿಸಿರುವಾಗ, ಅನೇಕ ವಿಶ್ವಾಸಿಗಳು ಅದನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲವೆಂಬದು ಆಶ್ಚರ್ಯಕರ ಸಂಗತಿಯಾಗಿದೆ. ಹಬ್ಬದ ಹೆಸರನ್ನು ಬದಲಾಯಿಸಿ ಇದನ್ನು ಕ್ರೈಸ್ತ ಆಚರಣೆಯಾಗಿ ಮಾಡಲು ಸಾಧ್ಯವಿಲ್ಲ!
ನಾವು ಆರಂಭದಲ್ಲಿ ಉಲ್ಲೇಖಿಸಿದಂತೆ, ದೇವರ ವಾಕ್ಯ ಹಾಗೂ ಮಾನವ ಸಂಪ್ರದಾಯದ ನಡುವಿನ ಈ ನಿರಂತರ ಹೋರಾಟವನ್ನೇ ಯೇಸುಸ್ವಾಮಿಯು ಫರಿಸಾಯರೊಂದಿಗೆ ನಡೆಸಿದರು. ಅವರು ಪಾಪದ ವಿರುದ್ಧವಾಗಿ ಮಾಡಿದ ಬೋಧನೆಗಿಂತ ಹೆಚ್ಚಾಗಿ, ಪಿತೃಗಳ ಸಂಪ್ರದಾಯವನ್ನು ವಿರೋಧಿಸಿ ಮಾತಾಡಿದ್ದಕ್ಕಾಗಿ ಬಹಳ ವಿರೋಧವನ್ನು ಎದುರಿಸಿದರು. ನಾವು ಸಹ ಯೇಸು ಸ್ವಾಮಿಯಂತೆ ನಿಷ್ಠಾವಂತರಾಗಿ ನಡೆದರೆ, ನಮಗೂ ಇದೇ ಅನುಭವ ಸಿಗಲಿದೆ.
ಈ ನಿಟ್ಟಿನಲ್ಲಿ, ದೇವರ ವಾಕ್ಯ ಮಾತ್ರವೇ ನಮಗೆ ಮಾರ್ಗದರ್ಶಕವಾಗಿದೆ - ಭಯಭಕ್ತಿಯುಳ್ಳ ದೇವಜನರು ಸಹ ಯಾವುದೋ ಕ್ಷೇತ್ರದಲ್ಲಿ ದೇವರ ವಾಕ್ಯಕ್ಕೆ ಅನುಗುಣವಾಗಿ ನಡೆಯದಿದ್ದಾಗ, ಆ ವಿಷಯದಲ್ಲಿ ಅವರು ನಮಗೆ ಮಾದರಿಯಲ್ಲ. "ಎಲ್ಲಾ ಮನುಷ್ಯರು ಸುಳ್ಳುಗಾರರಾದರೂ ದೇವರು ಸತ್ಯವಂತನೇ ಸರಿ" (ರೋಮಾ. 3:4). ಬೆರೋಯದ ಜನರು ದೇವರ ವಾಕ್ಯವನ್ನು ಶಾಸ್ತ್ರಗ್ರಂಥಗಳಲ್ಲಿ ಶೋಧಿಸಿ, ಪೌಲನ ಬೋಧನೆಯು ಸೂಕ್ತವಾದದ್ದೋ ಎಂದು ಖಚಿತ ಪಡಿಸಿಕೊಂಡರು, ಮತ್ತು ಪವಿತ್ರಾತ್ಮನು ಅವರನ್ನು ಸದ್ಗುಣವುಳ್ಳವರೆಂದು ಪ್ರಶಂಸಿಸಿದನು (ಅ.ಕೃ. 17:11). ಈ ಮಾದರಿಯು ನಾವೆಲ್ಲರೂ ಅನುಸರಿಸಬೇಕಾದ ಉತ್ತಮ ಉದಾಹರಣೆಯಾಗಿದೆ.
ದಾವೀದನು ದೇವರಿಗೆ ಒಪ್ಪಿಗೆಯಾದ ಒಬ್ಬ ಮನುಷ್ಯನಾಗಿದ್ದನು. ಆದರೆ ಮೋಶೆಯು ಮಾಡಿಸಿದ ತಾಮ್ರಸರ್ಪವನ್ನು ಇಸ್ರಾಯೇಲ್ಯರು ಆರಾಧಿಸುವುದು ದೇವರಿಗೆ ಅಸಹ್ಯವೆಂದು ಅರಿಯದೆ, ಆತನು 40 ವರ್ಷಗಳ ವರೆಗೆ ಆ ಆರಾಧನೆಯನ್ನು ಅನುಮತಿಸಿದ್ದನು. ಇಷ್ಟು ನೇರವಾದ ವಿಗ್ರಹಾರಾಧನೆಯ ವಿಷಯವಾಗಿದ್ದಾಗ್ಯೂ ಆತನಿಗೆ ಬೆಳಕು ಸಿಕ್ಕಿರಲಿಲ್ಲ. ಆದರೆ ದಾವೀದನಿಗಿಂತ ಬಹಳ ಸಣ್ಣ ರಾಜನಾಗಿದ್ದ ಹಿಜ್ಕೀಯನು ಇದನ್ನು ಅರಿತುಕೊಂಡು, ಆ ವಿಗ್ರಹಾರಾಧನೆಯ ಸಂಪ್ರದಾಯವನ್ನು ಸಂಪೂರ್ಣವಾಗಿ ನಿಲ್ಲಿಸಿದನು (2 ಅರಸು. 18:1-4) . ಹಾಗೆಯೇ ನಾವು ದೇವಭಕ್ತರ ದೈವತ್ವವನ್ನು ಅನುಸರಿಸಬಹುದು, ಆದಾಗ್ಯೂ ಅವರು ತಿಳಿಯದೆ ಪಾಲಿಸಿದ ಮಾನವ ಸಂಪ್ರದಾಯವನ್ನು ಅನುಸರಿಸುವುದಲ್ಲ. ದೇವರ ಮಾತನ್ನು ಮತ್ತು ಅವರು ತೋರಿಸುವ ಮಾರ್ಗವನ್ನು ನೇರವಾಗಿ ಅನುಸರಿಸಿ, ಅದಕ್ಕೆ ಯಾವುದನ್ನೂ ಸೇರಿಸದೆ, ದೇವರ ಮಾತಿನಿಂದ ಒಂದನ್ನೂ ತೆಗೆಯದೆ ಇರುವುದರಲ್ಲಿ ನಮ್ಮ ಸುರಕ್ಷತೆಯಿದೆ.
ಇತರರನ್ನು ನ್ಯಾಯತೀರ್ಪಿಗೆ ಒಳಪಡಿಸಬೇಡಿ
ಕೊನೆಯದಾಗಿ: ಯಥಾರ್ಥರಾಗಿದ್ದರೂ ಕ್ರಿಸ್ಮಸ್ ದಿನಾಚರಣೆ ಮಾಡುವ ವಿಶ್ವಾಸಿಗಳ ಬಗ್ಗೆ ನಮ್ಮ ಮನೋಭಾವ ಹೇಗಿರಬೇಕು?
ನಾವು ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ಒಂದು ವಿಷಯವೆಂದರೆ, ಕ್ರಿಸ್ಮಸ್ಸನ್ನು ಆಚರಿಸದೇ ಇರುವುದರಿಂದ ನಾವು ಆತ್ಮಿಕರಾಗುವುದಿಲ್ಲ. ಅದಲ್ಲದೆ ಈ ಹಬ್ಬವನ್ನು ಆಚರಿಸುವ ಕ್ರೈಸ್ತರು ಇದೇ ಕಾರಣಕ್ಕಾಗಿ ಲೌಕಿಕ ವಿಶ್ವಾಸಿಗಳಾಗುವುದಿಲ್ಲ. ಪ್ರತಿದಿನ ಸ್ವ-ಇಚ್ಛೆಯನ್ನು ನಿರಾಕರಿಸಿ ಯೇಸುವನ್ನು ಹಿಂಬಾಲಿಸಿ ನಡೆಯುವವರು ಮತ್ತು ಪ್ರತಿದಿನ ಪವಿತ್ರಾತ್ಮನ ತುಂಬುವಿಕೆಯಿಂದ ಜೀವಿಸುವವರು - ಇವರು ಕ್ರಿಸ್ಮಸ್ಸನ್ನು ಆಚರಿಸಿದರೂ ಅಥವಾ ಆಚರಿಸದೇ ಇದ್ದರೂ - ಇವರೇ ಆತ್ಮಿಕ ಜನರು.
ಹಾಗಾಗಿ ಈ ಹಬ್ಬವನ್ನು ಆಚರಿಸುವಂತ ವಿಶ್ವಾಸಿಗಳನ್ನು ನಾವು ಭೇಟಿ ಮಾಡಿದಾಗ, ಈ ಹಬ್ಬದ ಆರಂಭ ಮೂರ್ತಿಪೂಜೆಯ ಹಿನ್ನೆಲೆಯಿಂದ ಬಂತೆಂಬುದನ್ನು ತಿಳಿಯದೇ ಅವರು ಅದರಲ್ಲಿ ತೊಡಗಿರಬಹುದು ಎಂಬುದಾಗಿ ಯೋಚಿಸುವ ಕೃಪೆಯ ದೃಷ್ಟಿ ನಮ್ಮಲ್ಲಿರಬೇಕು. ಈ ಕಾರಣಕ್ಕಾಗಿ, ಅವರು ಈ ಆಚರಣೆಯ ಮೂಲಕ ಯಾವುದೇ ಪಾಪ ಮಾಡುತ್ತಿಲ್ಲ. ಇನ್ನೊಂದು ಕಡೆ, ನಾವು ಅವರನ್ನು ತೀರ್ಪು ಮಾಡಿದರೆ - ನಮ್ಮಲ್ಲಿ ಸತ್ಯದ ಜ್ಞಾನ ಇರುವುದರಿಂದ - ನಾವು ಪಾಪ ಮಾಡುತ್ತೇವೆ.
ಡಿಸೆಂಬರ್ 25ರ ದಿನ ಸಾಮಾನ್ಯವಾಗಿ ರಜಾದಿನ ಆಗಿರುವುದರಿಂದ ಮತ್ತು ಈ ಅವಧಿಯಲ್ಲಿ ಶಾಲೆಗಳಿಗೆ ರಜೆ ಇರುವುದರಿಂದ, ಅನೇಕರು ಈ ವರ್ಷಾಂತ್ಯದ ವೇಳೆಯನ್ನು ಕುಟುಂಬದ ಸಮ್ಮಿಲನಕ್ಕಾಗಿ ಬಳಸಿಕೊಳ್ಳುತ್ತಾರೆ - ಇದು ಒಂದು ಉತ್ತಮ ಸಂಗತಿಯಾಗಿದೆ. ಇದಲ್ಲದೆ ಕೆಲ ಜನರು ಕೇವಲ ಡಿಸೆಂಬರ್ 25ರಂದು ಸಭಾಕೂಟಕ್ಕೆ ಹೋಗುವುದರಿಂದ - ಸಭೆಗಳಲ್ಲಿ ಆ ದಿನ ಕೂಟವನ್ನು ಏರ್ಪಡಿಸುವುದು ಒಳ್ಳೆಯದೇ, ಏಕೆಂದರೆ ಇಂತಹ ಜನರಿಗೆ ಸುವಾರ್ತೆಯನ್ನು ನೀಡುವ ಅವಕಾಶ ದೊರಕುತ್ತದೆ ಮತ್ತು ಯೇಸುವು ಭೂಲೋಕಕ್ಕೆ ಜನರನ್ನು ಪಾಪಗಳಿಂದ ರಕ್ಷಿಸುವುದಕ್ಕಾಗಿ ಬಂದರು ಮತ್ತು ಅವರು ನಮಗಾಗಿ ಮರಣವನ್ನೂ, ಸೈತಾನನನ್ನೂ ಜಯಿಸಿದ್ದಾರೆ ಎಂಬುದನ್ನು ಇಂತಹ ಜನರಿಗೆ ವಿವರಿಸಿ ಹೇಳಲು ಸಾಧ್ಯವಾಗುತ್ತದೆ.
ಕ್ರೈಸ್ತತ್ವದ ಆರಂಭದ ದಿನಗಳಲ್ಲಿ, ಕೆಲವು ಕ್ರೈಸ್ತರು ಸಬ್ಬತ್ ದಿನವನ್ನು ಆಚರಿಸುತ್ತಿದ್ದರು - ಇದು ಕ್ರೈಸ್ತರಿಗೆ ಅನ್ವಯಿಸದ ಯಹೂದ್ಯ ಧಾರ್ಮಿಕ ವಿಶೇಷ ದಿನವಾಗಿತ್ತು, ಮತ್ತು ಕ್ರಿಸ್ಮಸ್‍ನಂತಹ ದಿನವಾಗಿತ್ತು. ಇದಕ್ಕಾಗಿ ಪವಿತ್ರಾತ್ಮನು ರೋಮಾಪುರದವರಿಗೆ 14'ನೇ ಅಧ್ಯಾಯದಲ್ಲಿ ಬೇರೆ ಕ್ರೈಸ್ತ ವಿಶ್ವಾಸಿಗಳು ಈ ಜನರನ್ನು ತೀರ್ಪುಮಾಡುವುದರ ಮೂಲಕ ಪಾಪ ಮಾಡದಂತೆ ಅವರನ್ನು ಎಚ್ಚರಿಸಬೇಕೆಂದು ಪೌಲನಿಗೆ ಪ್ರೇರಣೆ ನೀಡಿದನು. ಇದೇ ಎಚ್ಚರಿಕೆ ಕ್ರಿಸ್ಮಸ್ ಆಚರಿಸುವ ಇತರರನ್ನು ತೀರ್ಪುಮಾಡುವವರಿಗೆ ಅನ್ವಯಿಸುತ್ತದೆ.
"ನಂಬಿಕೆಯಲ್ಲಿ ದೃಢವಿಲ್ಲದವರನ್ನೂ ಸೇರಿಸಿಕೊಳ್ಳಿರಿ, ಆದರೆ ಅವರ ಸಂದೇಹಾಸ್ಪದ ಕಾರ್ಯಗಳನ್ನು ಅವರ ಮುಂದೆ ಚರ್ಚಿಸಬೇಡಿರಿ. ಮತ್ತೊಬ್ಬನ ಸೇವಕನ ವಿಷಯವಾಗಿ ತೀರ್ಪುಮಾಡುವದಕ್ಕೆ ನೀನು ಯಾರು? ಒಬ್ಬನು ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ವಿಶೇಷವೆಂದು ಎಣಿಸುತ್ತಾನೆ; ಮತ್ತೊಬ್ಬನು ಎಲ್ಲಾ ದಿವಸಗಳನ್ನೂ ವಿಶೇಷವೆಂದು ಎಣಿಸುತ್ತಾನೆ. ದಿನವನ್ನು ಗಣ್ಯ ಮಾಡುವವನು ಕರ್ತನಿಗಾಗಿ ಅದನ್ನು ಗಣ್ಯ ಮಾಡುತ್ತಾನೆ, ಅವನು ದೇವಸ್ತೋತ್ರ ಮಾಡುತ್ತಾನಲ್ಲಾ; ದಿನವನ್ನು ಗಣ್ಯ ಮಾಡದವನು, ಕರ್ತನಿಗಾಗಿ ಈ ರೀತಿ ಮಾಡುತ್ತಾನೆ, ಮತ್ತು ದೇವರಿಗೆ ಸ್ತೋತ್ರ ಸಲ್ಲಿಸುತ್ತಾನೆ. ಪ್ರತಿಯೊಬ್ಬನು ತನ್ನ ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿಕೊಳ್ಳಬೇಕು. ಆದರೆ ನೀನು ನಿನ್ನ ಸಹೋದರನ ವಿಷಯವಾಗಿ ತೀರ್ಪುಮಾಡುವುದೇಕೆ? ಅದಲ್ಲದೆ, ನಿನ್ನ ಸಹೋದರನನ್ನು ನೀನು ಹೀನೈಸುವದೇನು? ಏಕೆಂದರೆ, ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ಲಾ ಮತ್ತು ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ (ಕೇವಲ) ದೇವರ ಮುಂದೆ ಉತ್ತರ ಕೊಡಬೇಕು" (ರೋಮಾ. 14:1-12ರಿಂದ ಆರಿಸಲಾಗಿದೆ).
ಕ್ರಿಸ್ಮಸ್‍ನ ಕುರಿತಾದ ಈ ಅಧ್ಯಯನವನ್ನು ಅಂತ್ಯಗೊಳಿಸಲು ಈ ಮಾತುಗಳು ಅತ್ಯಂತ ಸೂಕ್ತವಾಗಿವೆ.