WFTW Body: 

ಹಳೆಯ ಒಡಂಬಡಿಕೆಯ ಅನೇಕ ಧಾರ್ಮಿಕ ಕಟ್ಟಳೆಗಳು ಹೊಸ ಒಡಂಬಡಿಕೆಯಲ್ಲಿ ಹೊಸ ರೂಪದೊಂದಿಗೆ ಕಂಡುಬರುತ್ತವೆ. ಸುನ್ನತಿಯು ಹಳೆಯ ಒಡಂಬಡಿಕೆಯಲ್ಲಿ ಒಂದು ಬಹಳ ಪ್ರಮುಖ ಕಟ್ಟಳೆಯಾಗಿತ್ತು. ಖಂಡಿತವಾಗಿ, ಅಂತಹ ಪ್ರಾಮುಖ್ಯವಾದ ಕಟ್ಟಳೆಗೆ ಹೊಸ ಒಡಂಬಡಿಕೆಯಲ್ಲಿ ಒಂದು ಮಹತ್ವವುಳ್ಳ ಆತ್ಮಿಕ ಅರ್ಥ ಇರಲೇ ಬೇಕು - ಹೌದು, ಅದಕ್ಕೆ ಅರ್ಥವಿದೆ.

ಇದರ ಅರ್ಥವನ್ನು ’ಫಿಲಿಪ್ಪಿಯವರಿಗೆ 3:3,4' ಈ ವಚನಗಳಲ್ಲಿ ನಮಗೆ ವಿವರಿಸಲಾಗಿದೆ: "ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, ಕ್ರಿಸ್ತ ಯೇಸುವನ್ನು ಮಹಿಮೆ ಪಡಿಸುವವರೂ ಮತ್ತು ಶರೀರಸಂಬಂಧವಾದ ಸಂಗತಿಗಳಲ್ಲಿ ಭರವಸವಿಲ್ಲದವರೂ ಆದ ನಾವು, ನಿಜವಾದ ಸುನ್ನತಿಯುಳ್ಳವರು ಆಗಿದ್ದೇವೆ". ಈ ವಚನದಲ್ಲಿ ಹೇಳಲಾಗಿರುವ ಮೂರು ವರ್ಣನೆಗಳು ಒಂದಕ್ಕೊಂದು ಪರಸ್ಪರ ಸಂಬಂಧಪಟ್ಟಿವೆ. ನಾವು ದೇವರಾತ್ಮನ ಮೂಲಕ ಆರಾಧಿಸುವುದು ಹೇಗೆಂದರೆ, ಕ್ರಿಸ್ತನನ್ನು ಮಾತ್ರ ಮಹಿಮೆಪಡಿಸುವುದು ಮತ್ತು ಶರೀರ ಸಂಬಂಧವಾದ ಸಂಗತಿಗಳಲ್ಲಿ (ನಮ್ಮ ಸ್ವಾಭಾವಿಕ ಸಾಮರ್ಥ್ಯದಲ್ಲಿ) ಭರವಸೆ ಇಡದಿರುವುದು.

ಜನರು ದೈಹಿಕವಾಗಿ ಸುನ್ನತಿ ಮಾಡಿಸಿಕೊಂಡಾಗ, ತಮ್ಮ ಶರೀರದ ಮಾಂಸದ ಒಂದು ಭಾಗವನ್ನು ಕತ್ತರಿಸಿ ಹಾಕುತ್ತಾರೆ. ನಾವು ಆತ್ಮಿಕ ಸುನ್ನತಿಯನ್ನು ಹೊಂದಿದಾಗ, ನಮ್ಮ ಶರೀರ ಸಂಬಂಧವಾದ ಗುಣಗಳಲ್ಲಿ (ನಮ್ಮ ಸ್ವಂತ ಕಾರ್ಯಗಳಲ್ಲಿ) ನಾವು ಇರಿಸಿರುವ ಭರವಸೆಯನ್ನು ಕಡಿದು ಹಾಕಿ, ಅದನ್ನು ಸಾಯಿಸುತ್ತೇವೆ. ಹಳೆಯ ಒಡಂಬಡಿಕೆಯ ಕಾಲದಲ್ಲಿ ಸುನ್ನತಿ ಮಾಡಿಸಿಕೊಳ್ಳದ ಜನರು ಇಸ್ರಾಯೇಲ್ ಜನಾಂಗಕ್ಕೆ ಸೇರಿಸಲ್ಪಡುತ್ತಿರಲಿಲ್ಲ (ಆದಿಕಾಂಡ 17:14). ಹೊಸ ಒಡಂಬಡಿಕೆಯ ಅಡಿಯಲ್ಲಿ, ತನ್ನಲ್ಲೇ ಭರವಸೆ ಇರಿಸಿರುವ ಯಾವನೂ ಸಹ ನಿಜವಾದ ಯೇಸು ಕ್ರಿಸ್ತನ ಸಭೆಗೆ ಸೇರಿದವನು ಆಗಲಾರನು. ಕ್ರಿಸ್ತನಿಗೆ ಮಾತ್ರ ಮಹಿಮೆ ಸಲ್ಲಿಸುವವನು ಮತ್ತು ತನ್ನಲ್ಲೇ ಭರವಸೆ ಇಲ್ಲದವನು ಮಾತ್ರ ನಿಜವಾದ ದೇವಸಭೆಯ ಅಂಗವಾಗಿದ್ದಾನೆ. ನಾವು ಕಟ್ಟಿರುವ ಸಭೆಯು ಬೇರೆಯವರು ಕಟ್ಟಿರುವ ಸಭೆಗಿಂತ ಉತ್ತಮವಾದದ್ದೆಂದು ನಾವು ಜಂಭ ಪಡುವುದಾದರೆ, ದೇವರು ನಮಗೆ ತಮ್ಮ ನಿಜವಾದ ದೇವಸಭೆಯಲ್ಲಿ ಯಾವ ಸ್ಥಾನವನ್ನೂ ಕೊಡುವುದಿಲ್ಲ.

ಅಪೋಸ್ತಲರ ಕೃತ್ಯಗಳು 7:41'ರಲ್ಲಿ, "ತಮ್ಮ ಕೈಗಳಿಂದ ಮಾಡಿದ ವಸ್ತುಗಳಲ್ಲಿ ಉಲ್ಲಾಸಪಟ್ಟಂತ" ಜನರನ್ನು ವರ್ಣಿಸಲಾಗಿದೆ. ನಾವು ನಮ್ಮ ಸ್ವಂತ ಸಾಧನೆಗಾಗಿ ಹೆಮ್ಮೆಪಟ್ಟರೆ, ಆಗ ನಾವು ಆತ್ಮಿಕವಾಗಿ ಸುನ್ನತಿಯನ್ನು ಹೊಂದಿಲ್ಲ. ಒಂದು ವೇಳೆ ನಿನ್ನ ಸ್ವಂತ ಬಲದಿಂದ ಏನನ್ನಾದರೂ ಸಾಧಿಸಿದ್ದೇನೆಂದು ನೀನು ಅಂದುಕೊಂಡರೆ, ನಿನ್ನ ನಂಬಿಕೆಯು ಕುಂದಿಹೋಗಿದೆ. ಆಗ ನಿನ್ನನ್ನು ಪ್ರೀತಿಸುವ ದೇವರು, "ನೀನು ಇಡೀ ರಾತ್ರಿ ಮೀನು ಹಿಡಿಯಲು ಪ್ರಯತ್ನಿಸಿದರೂ, ನಿನಗೆ ಒಂದು ಮೀನೂ ಸಿಗದಂತೆ" ನೋಡಿಕೊಳ್ಳುತ್ತಾರೆ (ಯೋಹಾನನು 21:3), ಏಕೆಂದರೆ ನಿಜವಾದ ನಂಬಿಕೆಯೆಂದರೆ ದೇವರ ಮೇಲೆ ಮಾತ್ರ ಸಂಪೂರ್ಣವಾಗಿ ಆತುಕೊಳ್ಳುವಂತದ್ದು, ಎಂಬುದನ್ನು ಅವರು ನಿನಗೆ ಕಲಿಸಲು ಬಯಸುತ್ತಾರೆ.

ಒಂದು ದಿನ ರಾಜನಾದ ನೆಬೂಕದ್ನೆಚ್ಚರನು ತನ್ನ ಅರಮನೆಯ ಮಹಡಿಯ ಮೇಲೆ ನಿಂತುಕೊಂಡು ತನ್ನ ಸುತ್ತಲೂ ಹರಡಿದ್ದ ಮಹಾ ಸಾಮ್ರಾಜ್ಯವಾದ ಬಾಬೆಲನ್ನು ತಾನು ಕಟ್ಟಿದ್ದೇನೆಂದು ಕೊಚ್ಚಿಕೊಳ್ಳುತ್ತಿದ್ದನು (ದಾನಿಯೇಲನು 4:29,30). ಅವನು ಮನಸ್ಸಿನಲ್ಲಿ ಇದನ್ನು ಯೋಚಿಸಿದ ಕೂಡಲೇ, ದೇವರು ಅವನ ಸಾಮ್ರಾಜ್ಯವನ್ನು ಅವನಿಂದ ಕಸಿದುಕೊಂಡರು ಮತ್ತು ಅವನನ್ನು ಕಾಡುಮೃಗಕ್ಕೆ ಸಮಾನನಾಗಿ ಮಾಡಿದರು. ಆ ದಿನದಿಂದ ಅವನಿಗೆ ಮಾನವಪ್ರಜ್ಞೆ ಮತ್ತು ತಿಳುವಳಿಕೆ ಮತ್ತೆ ಬರುವುದಕ್ಕೆ ಹಲವು ವರ್ಷಗಳ ಸಮಯ ಬೇಕಾಯಿತು. ಇವನ ಹಾಗೆಯೇ, ಅನೇಕ ವಿಶ್ವಾಸಿಗಳು ಸಹ "ತಾವು ದೇವರಿಗಾಗಿ ಮಾಡುವಂತ ಸಾಧನೆಗಳ ಬಗ್ಗೆ" ಮನಸ್ಸಿನಲ್ಲಿ ಕೊಚ್ಚಿಕೊಳ್ಳುತ್ತಾರೆ. ಆದರೆ ನೆಬೂಕದ್ನೆಚ್ಚರನು ಕೊನೆಗೆ ತನ್ನ ಹುಚ್ಚುತನಕ್ಕಾಗಿ ಪಶ್ಚಾತ್ತಾಪಪಟ್ಟನು ಮತ್ತು ದೇವರಿಗೆ ಮಹಿಮೆ ಸಲ್ಲಿಸಿದನು (ದಾನಿಯೇಲನು 4:34-36). ಕೊನೆಯಲ್ಲಿ ಅವನ ಹೃದಯಕ್ಕೆ ಸುನ್ನತಿಯಾಯಿತು. ದುಃಖಕರ ಸಂಗತಿ ಏನೆಂದರೆ, ಅನೇಕ ಕ್ರೈಸ್ತ ಮುಖಂಡರು ಇಂತಹ ಆತ್ಮಿಕ ಸುನ್ನತಿಯನ್ನು ಅನುಭವಿಸಿಲ್ಲ.

ದೇವರು ಬಯಸುವುದು ಏನೆಂದರೆ, ನಮ್ಮ ಹೃದಯಕ್ಕೆ ಸುನ್ನತಿಯ ಅನುಭವ ಉಂಟಾಗಿ, ಅದರ ಮೂಲಕ "ನಾವು ಅವರನ್ನು ಪೂರ್ಣ ಹೃದಯದಿಂದ ಪ್ರೀತಿಸಬೇಕು," ಎಂಬುದಾಗಿ (ಧರ್ಮೋಪದೇಶಕಾಂಡ 30:6). ಅಂತಹ ಪ್ರೀತಿಯು ಹೃದಯದ ಸುನ್ನತಿಯ ಗುರುತಾಗಿದೆ. ನಾವು ನಮ್ಮನ್ನೇ ಪ್ರೀತಿಸುತ್ತಿದ್ದರೆ ಮತ್ತು ನಮ್ಮ ಬಗ್ಗೆ ಯೋಚಿಸಿ ಹೆಚ್ಚಳ ಪಡುತ್ತಿದ್ದರೆ, ನಾವು ಸುನ್ನತಿಯನ್ನು ಹೊಂದಿಲ್ಲ.