WFTW Body: 

ಒಬ್ಬ ಕ್ರೈಸ್ತನು ದೇವರ ಮುಂದೆ ಜೀವಿಸದಿದ್ದರೆ, ಆತನು ಬಹಳ ಸುಲಭವಾಗಿ ತನ್ನ ಯಥಾರ್ಥ ಆತ್ಮಿಕ ಸ್ಥಿತಿಯ ಬಗ್ಗೆ ಅಜ್ಞಾನಿಯಾಗಿ ಉಳಿದುಕೊಳ್ಳಬಹುದು. ಸತ್ಯವೇದದ "ಪ್ರಕಟನೆ" ಗ್ರಂಥದಲ್ಲಿ ಕರ್ತನು ಏಳು ಸಭೆಗಳ ನಾಯಕರನ್ನು ಖಂಡಿಸಿದ್ದರಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತದೆ. ಕರ್ತನು ಲವೊದಿಕೀಯದ ಸಭೆಯ ದೂತನಿಗೆ (ಸಭಾ ಹಿರಿಯನಿಗೆ) ಹೀಗೆ ಹೇಳಿದನು, "ನೀನು ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬಟ್ಟೆಯಿಲ್ಲದವನು ಆಗಿರುವುದನ್ನು ತಿಳಿಯದೇ ಇದ್ದೀ."

* ದೇವರು ನಮ್ಮ ಜೀವನದಲ್ಲಿ ವಿಭಿನ್ನ ಸನ್ನಿವೇಶಗಳು ನಮ್ಮನ್ನು ಎದುರಿಸುವುದನ್ನು ಅನುಮತಿಸುವದರ ಮೂಲಕ ನಮ್ಮ ಹೃದಯಗಳಲ್ಲಿ ಅಡಗಿರುವ ಸಂಗತಿಯನ್ನು ಬಹಿರಂಗ ಪಡಿಸುತ್ತಾರೆ. ನಾವು ಹಿಂದಿನ ಹಲವು ವರ್ಷಗಳಲ್ಲಿ ಅನೇಕ ಜನರೊಂದಿಗೆ ಅನುಭವಿಸಿರುವ ಅಪ್ರಿಯ ಸನ್ನಿವೇಶಗಳ ಫಲವಾಗಿ ನಾವು ನಮ್ಮ ಹೃದಯಗಳಲ್ಲಿ ಹಲವು ಅಹಿತಕರ ನೆನಪುಗಳನ್ನು ಸಂಗ್ರಹಿಸಿದ್ದೇವೆ. ಇವುಗಳು ನಮ್ಮ ಹೃದಯಗಳ ತಳಭಾಗದಲ್ಲಿ ಅಡಗಿರುತ್ತವೆ - ಮತ್ತು ನಮ್ಮ ಹೃದಯಗಳು ಶುದ್ಧವಾಗಿವೆಯೆಂದು ನಾವು ಅಂದುಕೊಳ್ಳುತ್ತೇವೆ. ನಂತರ ಯಾವುದೋ ಸಣ್ಣ ಪುಟ್ಟ ಘಟನೆ ಸಂಭವಿಸುವುದನ್ನು ದೇವರು ಅನುಮತಿಸುತ್ತಾರೆ, ಮತ್ತು ಅದರ ಮೂಲಕ ತಳದಲ್ಲಿ ಅಡಗಿದ್ದ ಇಂತಹ ಎಲ್ಲಾ ಅಸಹ್ಯಕರ ಸಂಗತಿಗಳು ಮತ್ತೊಮ್ಮೆ ನಮ್ಮ ಮನಸ್ಸಿಗೆ ಬರುತ್ತವೆ. ನಾವು ಈ ಅವಕಾಶವನ್ನು ಬಳಸಿಕೊಳ್ಳಬೇಕು ಮತ್ತು ನಮ್ಮ ಮನಸ್ಸನ್ನು ಶುದ್ಧೀಕರಿಸಬೇಕು ಮತ್ತು ಸಂಬಂಧಪಟ್ಟ ಜನರನ್ನು ಕ್ಷಮಿಸಬೇಕು ಮತ್ತು ಅವರನ್ನು ಪ್ರೀತಿಸಲು ನಿರ್ಧರಿಸಬೇಕು. ನಾವು ಈ ಸಂದರ್ಭದಲ್ಲಿ ನಮ್ಮ ಹೃದಯಗಳಿಂದ ಈ ಸಂಗತಿಗಳನ್ನು ತೆಗೆದುಹಾಕದಿದ್ದರೆ, ಆ ಗೊಂದಲ ದಾಟಿಹೋದ ಮೇಲೆ ಆ ನೆನಪುಗಳು ಮತ್ತೊಮ್ಮೆ ಮುಳುಗಿ ಕೆಳಗೆ ಹುದುಗಿಕೊಳ್ಳುತ್ತವೆ, ಮತ್ತು ನಮ್ಮ ಹೃದಯಗಳಲ್ಲಿ ಉಳಿದುಕೊಳ್ಳುತ್ತವೆ. ಆಗ ನಾವು ಎಲ್ಲವೂ ಸರಿಯಾಗಿದೆ ಎಂದು ಅಂದುಕೊಳ್ಳಬಹುದು. ಆದರೆ ಅದು ನಿಜಸ್ಥಿತಿಯಲ್ಲ. ಇನ್ನೊಂದು ಸಣ್ಣ ಘಟನೆಯು ಅವೆಲ್ಲವನ್ನು ಮತ್ತೆ ನಮ್ಮ ಮನಸ್ಸಿಗೆ ತರಬಹುದು. ಆದ್ದರಿಂದ ಪ್ರತೀ ಸಲ ಯಾವುದಾದರೂ ಸಂಗತಿಯು ಮೇಲೆದ್ದಾಗ ನಾವು ನಮ್ಮನ್ನು ಶುದ್ಧೀಕರಿಸಿಕೊಳ್ಳಬೇಕು.

+ ದಾರಿ ತಪ್ಪಿದ ಮಗನ ಸಾಮ್ಯದಲ್ಲಿ, ಆ ಅಣ್ಣನಿಗೆ ತನ್ನ ತಮ್ಮನ ಕುರಿತು ತಪ್ಪಾದ ಭಾವನೆಗಳು ಇದ್ದುದನ್ನು ನಾವು ಕಾಣುತ್ತೇವೆ. ಆದರೆ ಇದು ಹೊರಹೊಮ್ಮಿ ಬಂದದ್ದು ತಮ್ಮನು ಮನೆಗೆ ಹಿಂದಿರುಗಿ ಬಂದಾಗ ಮತ್ತು ಆತನಿಗಾಗಿ ಒಂದು ಸಂತೋಷ ಕೂಟ ನೆರವೇರಿದಾಗ ಮಾತ್ರ. ಆಗ ಆ ಅಣ್ಣನು ತಮ್ಮನ ಮೇಲೆ ತಾನು ಹೊರಿಸುತ್ತಿರುವ ಆರೋಪ ನಿಜವೋ ಸುಳ್ಳೋ ಎಂಬುದನ್ನು ಪರಿಶೀಲಿಸದೇ, ತನ್ನ ಸ್ವಂತ ಕಲ್ಪನೆಯ ಆಧಾರದ ಮೇಲೆ ತಪ್ಪು ಹೊರಿಸುವುದನ್ನು ನಾವು ನೋಡುತ್ತೇವೆ (ಉದಾಹರಣೆಗೆ, "ತಮ್ಮನು ತನ್ನ ಹಣವನ್ನು ಸೂಳೆಯರ ಸಂಗಡ ವ್ಯರ್ಥ ಮಾಡಿದನು" ಎಂದು ಹೇಳಿದ್ದು). ಯಾರೊಂದಿಗಾದರೂ ನಮ್ಮ ಸಂಬಂಧ ಸರಿ ಇಲ್ಲದಿರುವಾಗ, ನಾವು ಯಾವಾಗಲೂ ಅವರ ಬಗ್ಗೆ ಬಹಳ ಕೆಟ್ಟದ್ದನ್ನೇ ನಂಬುತ್ತೇವೆ.

+ ಆ ತಂದೆಯು ಹಿರಿಯ ಮಗನಿಗೆ "ನನ್ನದೆಲ್ಲವೂ ನಿನ್ನದೇ" ಎಂದು ಹೇಳಿದನು. ಹಿರೀಮಗನು ತಂದೆ ತನಗೆ ಕೊಟ್ಟದ್ದರ ಬಗ್ಗೆ ಯೋಚಿಸುವುದರ ಬದಲಾಗಿ, ತನ್ನ ಸ್ವಂತ ಸಫಲತೆಗಳ ಬಗ್ಗೆಯೇ ಧ್ಯಾನಿಸುತ್ತಿದ್ದನು: "ನಾನು ನಿನ್ನ ಒಂದು ಅಪ್ಪಣೆಯನ್ನಾದರೂ ಎಂದೂ ಮೀರಲಿಲ್ಲ; ನಾನು ಇಷ್ಟು ವರ್ಷ ನಿನಗೆ ಸೇವೆ ಮಾಡಿದ್ದೇನೆ". ಅವನು ತನ್ನ ತಮ್ಮನ ನ್ಯೂನ್ಯತೆಗಳನ್ನು ಸಹ ಮೆಲುಕು ಹಾಕುತ್ತಿದ್ದನು, "ಈ ನಿನ್ನ ಮಗನು ನಿನ್ನ ಬದುಕನ್ನೆಲ್ಲಾ ನುಂಗಿಹಾಕಿದನು" (ಲೂಕ. 15:29-32). ಆ ತಂದೆಯಂತೆಯೇ, ದೇವರು ನಮಗೆ "ನನ್ನದೆಲ್ಲವೂ ನಿನ್ನದೇ" ಎಂದು ಹೇಳುತ್ತಾರೆ. ಯೇಸುವಿನಲ್ಲಿರುವ ಎಲ್ಲವೂ ನಮ್ಮದೇ - ಆತನ ಸಂಪೂರ್ಣ ಪರಿಶುದ್ಧತೆ, ಎಲ್ಲಾ ಸದ್ಗುಣಗಳು, ವಿಶಾಲವಾದ ತಾಳ್ಮೆ, ಸಂಪೂರ್ಣ ದೀನತೆ, ಇತ್ಯಾದಿಗಳು.

ನಮಗೆ ಈ ಸಾಮ್ಯದಿಂದ ಸಿಗುವ ಪಾಠ ಇದು: "ಯಾವಾಗಲೂ ದೇವರ ಕೃಪೆಯ ಐಶ್ವರ್ಯದಲ್ಲಿ ಮಗ್ನನಾಗಿರು - ನಿನ್ನ ಸ್ವಂತ ಸಾಧನೆಗಳನ್ನು, ಅಥವಾ ನಿನ್ನ ಸಹ-ವಿಶ್ವಾಸಿಗಳ ಕುಂದುಕೊರತೆಗಳನ್ನು ಗಮನಿಸಬೇಡ."

ದೇವರು ನಮ್ಮ ಹೃದಯಗಳಲ್ಲಿ ಅಡಗಿರುವ ಸಂಗತಿಯನ್ನು ಪ್ರಕಟ ಗೊಳಿಸಲಿಕ್ಕಾಗಿ ನಮ್ಮ ಜೀವಿತಗಳಲ್ಲಿ ಹಲವು ವಿಧವಾದ ಸನ್ನಿವೇಶಗಳು ಬರುವುದನ್ನು ಅನುಮತಿಸುತ್ತಾರೆ - ಮತ್ತು "ಹೀಗೆ ಪ್ರತೀ ಸಲ ನಮ್ಮ ಹೃದಯದ ಒಳಗಿನಿಂದ ಯಾವುದೋ ಸಂಗತಿಯು ಮೇಲೆದ್ದು ಬಂದಾಗ, ನಾವು ನಮ್ಮನ್ನು ಶುದ್ಧೀಕರಿಸಿಕೊಳ್ಳಬೇಕು."