WFTW Body: 

ನಾವು ನಮ್ಮ ಅಂತ್ಯಕ್ಕೆ ಬಂದಾಗ (ಅಂದರೆ ನಾವು ನಮ್ಮನ್ನೇ ಬರಿದು ಮಾಡಿಕೊಂಡು ಶೂನ್ಯರಾದಾಗ) ಮಾತ್ರ ನಾವು ಕರ್ತನಾದ ಯೇಸುವಿನೆಡೆಗೆ ಬರಲು ಸಿದ್ಧರಾಗುತ್ತೇವೆ. ಯೇಸುವು, "ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ," ಎಂದು ಜನರನ್ನು ಆಹ್ವಾನಿಸಿದರು (ಮತ್ತಾ. 11:28). ಯೇಸುವು ಎಲ್ಲಾ ಜನರನ್ನು ತನ್ನ ಬಳಿಗೆ ಆಹ್ವಾನಿಸುವುದಿಲ್ಲ. ಪಾಪದ ಜೀವಿತದಿಂದ ಸೋತು ಸುಣ್ಣವಾದವರನ್ನು ಮಾತ್ರ ಅವರು ತನ್ನ ಬಳಿಗೆ ಆಹ್ವಾನಿಸಿದರು, ಎಂದು ನಾವು ಈ ವಚನದಲ್ಲಿ ನೋಡಬಹುದು. ದುಂದುಗಾರನಾದ ಮಗನು ತನ್ನ "ಸರ್ವ ಸಂಪತ್ತನ್ನು ಹಾಳುಮಾಡಿಕೊಂಡಾಗ" ಮತ್ತು "ಅವನಿಗೆ ಯಾರೂ ಏನನ್ನೂ ಕೊಡದಿದ್ದಾಗ" ತನ್ನ ತಂದೆಯ ಬಳಿಗೆ ತಿರುಗಿಬಂದನು. ಆಗಲೇ "ಅವನಿಗೆ ಬುದ್ಧಿ ಬಂತು" (ಲೂಕ. 15:16-18). ನಾವು ಮನುಷ್ಯರ ಮೆಚ್ಚುಗೆಗಾಗಿ ಹಾತೊರೆಯುವುದನ್ನು ನಿಲ್ಲಿಸಿದಾಗ, ಮತ್ತು ಜನರ ಹಾಗೂ ಬೇರೆ ಬೇರೆ ಸನ್ನಿವೇಶಗಳ ಬಗ್ಗೆ ಗೊಣಗುಟ್ಟುವುದನ್ನು ನಿಲ್ಲಿಸುವ ಸ್ಥಿತಿಗೆ ಬಂದಾಗ ಮಾತ್ರ, ನಮ್ಮ ಆತ್ಮಿಕ ಜೀವನದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ - ಅದಲ್ಲದೆ, ಆಗ ನಾವು ಪಾಪಗಳಿಂದ ಸೋತುಹೋಗಿರುವ ನಮ್ಮ ಸ್ವಂತ ಜೀವಿತದಿಂದ ಬಳಲುತ್ತೇವೆ ಮತ್ತು ಮರುಗುತ್ತೇವೆ. ಇದೇ "ನಿಜವಾದ ಮಾನಸಾಂತರವಾಗಿದೆ."

ನಾವು ಈ ಅನುಭವವನ್ನು ಪಡೆಯದಿದ್ದರೆ, ಪೂರ್ಣಾವಧಿಗೆ ಮುಂಚಿತವಾಗಿ ಹುಟ್ಟಿದ ಮಕ್ಕಳು ಸತತವಾಗಿ ಶಾಖ-ನಿಯಂತ್ರಿತ ಪೆಟ್ಟಿಗೆಯಲ್ಲಿ ('incubator') ಇರಿಸಲ್ಪಡುವ ಹಾಗೆ, ನಮ್ಮನ್ನು ಸಹ ಇರಿಸಬೇಕಾಗುತ್ತದೆ (ನಾವು ಪೋಷಣೆ ಮತ್ತು ಪ್ರೋತ್ಸಾಹಕ್ಕಾಗಿ ಯಾವಾಗಲೂ ಇತರರನ್ನು ಅವಲಂಬಿಸುತ್ತೇವೆ). ನಾವು ಕ್ರೈಸ್ತಸಭೆಯಲ್ಲಿ ನಮ್ಮ ಭದ್ರತೆಯನ್ನು ಕಂಡುಕೊಳ್ಳಬಾರದು. ಕರ್ತನಲ್ಲಿ ಮಾತ್ರವೇ ನಾವು ಅದನ್ನು ಕಂಡುಕೊಳ್ಳಬೇಕು. ’ಯೆಹೆಜ್ಕೇಲನು 36:25-30'ರಲ್ಲಿ, ಯೇಸುವು ಹೊಸ ಒಡಂಬಡಿಕೆಯಲ್ಲಿ ನಮಗೆ ನೀಡುವಂತ ಸಮೃದ್ಧಿಯ ಜೀವಿತವು ಪ್ರವಾದಿಸಲ್ಪಟ್ಟಿದೆ. ನಾವು ಅಂತಹ ಜೀವಿತವನ್ನು ಜೀವಿಸುವಾಗ, ’ಯೆಹೆಜ್ಕೇಲನು 36:31'ನೇ ವಚನದಲ್ಲಿ ಮುಂದುವರಿಸಿ ಹೇಳುವಂತೆ, ’ನಮ್ಮ ಹಿಂದಿನ ದಿನಗಳಲ್ಲಿ ನಾವು ಮಾಡಿದ ಎಲ್ಲಾ ದುರಾಚಾರಗಳಿಗಾಗಿ ನಮ್ಮನ್ನು ನಾವೇ ಹೇಸಿಕೊಳ್ಳುವೆವು’. ಒಬ್ಬ ದೈವಿಕ ಮನುಷ್ಯನ ಪ್ರಾಥಮಿಕ ಲಕ್ಷಣಗಳಲ್ಲಿ ಒಂದು ಯಾವುದೆಂದರೆ, ಅವನ ಹೃದಯದಲ್ಲಿ ಯಾವಾಗಲೂ ಈ ರೀತಿಯ ಒಂದು ಕೂಗು ಇರುತ್ತದೆ, "ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ನಾನು ಎಲ್ಲಾ ಪಾಪಗಳಿಂದ ಹೇಗೆ ಸಂಪೂರ್ಣವಾಗಿ ಬಿಡುಗಡೆ ಹೊಂದಲಿ?" (ರೋಮ. 7:24 - ಭಾವಾನುವಾದ). ಅವನು ಎಲ್ಲಾ ಕಲ್ಮಶಗಳಿಂದ ಮತ್ತು ದೇಹದಲ್ಲಿರುವ ಪಾಪದ ವಾಸನೆಯಿಂದಲೂ ಕೂಡ ಮುಕ್ತನಾಗಲು ನಿರಂತರವಾಗಿ ಹಂಬಲಿಸುತ್ತಾನೆ.

ಸಂಕಷ್ಟದ ದಿನಗಳು ಬರುವಾಗ ನೀವು ದೃಢವಾಗಿ ನಿಲ್ಲಬೇಕೆಂದು ದೇವರು ಬಯಸುತ್ತಾರೆ (ಜ್ಞಾನೋಕ್ತಿಗಳು 24:10). ಆದರೆ ಆ ವಿಪತ್ತಿನ ದಿನದಲ್ಲಿ ನೀವು ದೃಢವಾಗಿರಲು ಬಯಸಿದರೆ, ಸದ್ಯದ ಸಮಾಧಾನದ ಸಮಯದಲ್ಲಿ ನೀವು ದೇವರ ಜ್ಞಾನದಲ್ಲಿ ಬೆಳೆದು ಬಲಿಷ್ಠರಾಗಬೇಕು.

ದೇವರ ಆಲೋಚನೆಗಳು ನಮ್ಮ ಆಲೋಚನೆಗಳಲ್ಲ. ಅವರು ಎಲ್ಲಕ್ಕೂ ಮೊದಲು - ಆಶಾಭಂಗಗೊಳಿಸುವ ಸನ್ನಿವೇಶಗಳು ಮತ್ತು ವೈಫಲ್ಯಗಳ ಮೂಲಕ - ನಿನ್ನನ್ನು ಮುರಿಯಬೇಕು ಮತ್ತು ಇದಕ್ಕಾಗಿ ನಿನಗಾಗಿ ಅವರು ನಿಯೋಜಿಸಿರುವ ಆತ್ಮಿಕ ಶಿಕ್ಷಣ ಸಿಗುವಂತ ಸೂಕ್ತ ಸ್ಥಳಕ್ಕೆ ಅವರು ನಿನ್ನನ್ನು ಕಳುಹಿಸುತ್ತಾರೆ.

ಮೋಶೆಯನ್ನು ಇಸ್ರಾಯೇಲಿನ ಅತ್ಯಂತ ಶ್ರೇಷ್ಠ ನಾಯಕನನ್ನಾಗಿ ಸಿದ್ಧಗೊಳಿಸುವುದಕ್ಕಾಗಿ ದೇವರು ತಯಾರಿಸಿದ ಯೋಜನೆಯೆಂದರೆ - 40 ವರ್ಷಗಳ ಕಾಲ ಆತನು ಮರುಭೂಮಿಯಲ್ಲಿ ಕುರಿಗಳನ್ನು ಮೇಯಿಸುವಂತೆ ಮಾಡಿ, ಮಾವನ ಮನೆಯಲ್ಲಿ 40 ವರ್ಷ ವಾಸವಾಗಿದ್ದು, ಆತನ ಕೈಕೆಳಗಿನ ಕೆಲಸಗಾರನಾಗಿ ಅವಮಾನಗಳನ್ನು ಸಹಿಸಿಕೊಳ್ಳುವಂತೆ ಮಾಡಿದ್ದು. ಇಂತಹ ಯೋಜನೆ ನಮ್ಮಲ್ಲಿ ಯಾರಿಗೂ ಹೊಳೆಯುತ್ತಿರಲಿಲ್ಲ. ಆದರೆ ಇದು ದೇವರ ವಿಧಾನವಾಗಿದೆ. ಇದೇ ರೀತಿ ದೇವರು ಯಾಕೋಬನನ್ನು ವಿಶೇಷ ಸನ್ನಿವೇಶಗಳ ಮೂಲಕ ನಡೆಸಿದ ನಂತರ ಅವನನ್ನು ’ದೇವರ ರಾಜಕುಮಾರ’ (ಅಥವಾ "ಇಸ್ರಾಯೇಲ್") ಎಂಬುದಾಗಿ ಬದಲಾಯಿಸಿದರು. ಒಬ್ಬ ಮನುಷ್ಯನನ್ನು ಮುರಿಯುವುದು ದೇವರಿಗೆ ಅತ್ಯಂತ ಕಷ್ಟಕರ ಕೆಲಸವಾಗಿದೆ. ಆದರೆ ಆ ಕಾರ್ಯದಲ್ಲಿ ದೇವರು ಸಫಲರಾದಾಗ, ಅಂತಹ ಮನುಷ್ಯನಿಂದ ಹೊರಡುವ ಶಕ್ತಿಯು ಪರಮಾಣುವನ್ನು ವಿಭಜಿಸಿದಾಗ ಬಿಡುಗಡೆಯಾಗುವ ಶಕ್ತಿಗಿಂತ ಎಷ್ಟೋ ಪಟ್ಟು ಹೆಚ್ಚಾಗಿರುತ್ತದೆ!

ಅಪೊಸ್ತಲ ಪೌಲನು ತನ್ನ ಅನುಭವವನ್ನು ಹೀಗೆ ವಿವರಿಸುತ್ತಾನೆ, "ನಾವು ಕೆಡವಲ್ಪಟ್ಟರೂ ಮತ್ತೆ ಎದ್ದು ಮುನ್ನಡೆಯುತ್ತೇವೆ" (2 ಕೊರಿ. 4:9 - Living Bible). ನಾವು ಕೆಡವಲ್ಪಡುವುದನ್ನು ದೇವರು ಆಗಾಗ್ಗೆ ಅನುಮತಿಸುತ್ತಾರೆ. ಆದರೆ ನಾವು ಇತರರಂತೆ ಬಿದ್ದ ಸ್ಥಳದಲ್ಲೇ ಉಳಕೊಳ್ಳುವುದಿಲ್ಲ. "ನಾವು ಬಿದ್ದಲ್ಲಿಂದ ಮೇಲೆದ್ದು ಮುನ್ನಡೆಯುತ್ತೇವೆ." ಈ ವಿಷಯವು ಸೈತಾನನನ್ನು ಇನ್ನೂ ಹೆಚ್ಚಾಗಿ ಕೆರಳಿಸುತ್ತದೆ. ಕೆಡವಲ್ಪಡುವುದರ ಮೂಲಕ ದೇವರು ನಮಗೆ ಪರಿಶುದ್ಧತೆಯ ಪಾಠವನ್ನು ಸಹ ಕಲಿಸುತ್ತಾರೆ ಮತ್ತು ಅದರಿಂದ ನಮಗೆ ಬಹಳ ಒಳ್ಳೆಯ ಫಲ ಸಿಗುತ್ತದೆ. ಹಾಗಾಗಿ ಈ ಅನುಭವವನ್ನು ಪಡೆದ ದಿನದಿಂದ ನಾನು ಹೋದಲ್ಲೆಲ್ಲಾ ಯೇಸುವಿನ ಜಯ ಮತ್ತು ಸೈತಾನನ ಸೋಲನ್ನು ಇನ್ನೂ ಹೆಚ್ಚಾಗಿ ಸಾರುತ್ತಿದ್ದೇನೆ. ಹಲ್ಲೆಲೂಯಾ!!