WFTW Body: 

’ರೋಮನ್ ಕ್ಯಾಥೋಲಿಕ್' ಸಭೆಯಲ್ಲಿ, ಜನರು ತಮ್ಮ ಪಾಪಗಳನ್ನು ಯಾಜಕನಿಗೆ ಅರಿಕೆ ಮಾಡುವ ಒಂದು ಪದ್ಧತಿ ಇದೆ. ಕೆಲವು ’’ಪ್ರೊಟೆಸ್ಟಂಟ್’ ಸಭೆಗಳಲ್ಲೂ ವಿಶ್ವಾಸಿಗಳು ತಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಬೇಕೆಂದು ಪ್ರೋತ್ಸಾಹಿಸುವುದುಂಟು ಮತ್ತು ಪ್ರತಿಯೊಬ್ಬ ವಿಶ್ವಾಸಿಯೂ "ತಾನು ಲೆಕ್ಕ ಕೊಡಬೇಕಾದ ಜೊತೆಗಾರ"ನನ್ನು ಹೊಂದಿರಬೇಕು ಮತ್ತು ಆ ಸಂಗಾತಿಗೆ ತನ್ನ ಎಲ್ಲಾ ಪಾಪಗಳನ್ನು ಸಮಯದಿಂದ ಸಮಯಕ್ಕೆ ಅರಿಕೆ ಮಾಡುವುದರ ಮೂಲಕ ಪಾಪಗಳನ್ನು ಜಯಿಸಬೇಕು, ಎಂದು ಬೋಧಿಸಲಾಗುತ್ತದೆ. ಇಂತಹ ಬೋಧನೆ ಹೊಸ ಒಡಂಬಡಿಕೆಯಲ್ಲಿ ಕಂಡುಬರುವುದೇ ಇಲ್ಲ. ಇದು ಮನೋವಿಜ್ಞಾನದ ಬೋಧನೆಯಾಗಿದೆ ಮತ್ತು ಪವಿತ್ರಾತ್ಮನ ಬೋಧನೆಯಲ್ಲ. ಆದಾಗ್ಯೂ, ಅನೇಕ ವಿಶ್ವಾಸಿಗಳು ಕುರುಡಾಗಿ ಈ ಸುಳ್ಳು ಬೋಧನೆಯನ್ನು ಸ್ವೀಕರಿಸಿದ್ದಾರೆ ಮತ್ತು ಅದನ್ನು ಅನುಸರಿಸುತ್ತಿದ್ದಾರೆ.

ಸತ್ಯವೇದವು ಎಲ್ಲಿಯೂ ಒಬ್ಬ ಈ 'ಜೊತೆಗಾರ'ನ ಬಗ್ಗೆ ಮಾತನಾಡುವುದಿಲ್ಲ. ಪಾಪವನ್ನು ದೂರವಿರಿಸುವ ಈ ವಿಧಾನ ನಿಜವಾಗಿ ’ಮಾನವ ಭಯದ’ ಮೂಲಕ ಪವಿತ್ರತೆಯನ್ನು ಹೊಂದುವ ವಿಧಾನವಾಗಿದೆ - ಈ "ಸಂಗಾತಿಗೆ" ಪಾಪವನ್ನು ಅರಿಕೆ ಮಾಡುವಾಗ ಉಂಟಾಗುವ ಅವಮಾನದ ದೆಸೆಯಿಂದ ಪಾಪವನ್ನು ಮಾಡದಿರುವುದು. ಆದರೆ ಸತ್ಯವೇದವು ನಮಗೆ ನೀಡಿರುವ ಆಜ್ಞೆ, ಏನೆಂದರೆ, ’ದೇವರ ಭಯದಿಂದ ಪವಿತ್ರತೆಯನ್ನು ಸಿದ್ಧಿಗೆ ತರಬೇಕು’ ಎಂಬುದಾಗಿಯೇ ಹೊರತು ಮನುಷ್ಯನ ಭಯದಿಂದ ಅಲ್ಲ (2ಕೊರಿಂಥದವರಿಗೆ 7:1). ನಾವು ದೇವರಿಗೆ ಲೆಕ್ಕ ಒಪ್ಪಿಸಬೇಕಾಗಿದೆ - "ನಾವು ನಮ್ಮ ಕೆಲಸ-ಕಾರ್ಯಗಳ ಬಗ್ಗೆ ದೇವರಿಗೆ ಮಾತ್ರ ಜವಾಬು ಕೊಡಬೇಕಿದೆ" (ಇಬ್ರಿಯರಿಗೆ 4:13).

ನಾವು ನಮ್ಮ ಪಾಪಗಳನ್ನು ಕರ್ತನ ಬಳಿ ಮಾತ್ರ ಅರಿಕೆ ಮಾಡಬೇಕು. ’ಯಾಕೋಬನು 5:16'ರ ಆಜ್ಞೆ - "ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ" - ಎಂಬುದಕ್ಕೆ ಅನೇಕ ಬಾರಿ ತಪ್ಪಾದ ಅರ್ಥವನ್ನು ಕಲ್ಪಿಸಲಾಗುತ್ತದೆ. ಅಲ್ಲಿ ಸ್ಪಷ್ಟವಾಗಿ ಕಂಡುಬರುವ ಸಂದರ್ಭವೇನೆಂದರೆ, ಅಸ್ವಸ್ಥನಾಗಿದ್ದ ಒಬ್ಬ ಕ್ರೈಸ್ತ ವಿಶ್ವಾಸಿಗಾಗಿ ಆತನ ಸಭಾ ಹಿರಿಯರು ಪ್ರಾರ್ಥನೆ ಮಾಡುವಂಥದ್ದಾಗಿದೆ. ಕೆಲವೊಮ್ಮೆ ಪಾಪದ ನಿಮಿತ್ತ ಅನಾರೋಗ್ಯ ಉಂಟಾಗುವುದರಿಂದ (ಇದನ್ನು ನಾವು’ಯೋಹಾನನು 5:14'ರಲ್ಲಿ ಕಾಣಬಹುದು), ರೋಗಿಯು ತನ್ನ ಪಾಪಗಳನ್ನು (ಆತನ ರೋಗಕ್ಕೆ ಪಾಪವು ಕಾರಣವಾಗಿರಬಹುದು) ಅರಿಕೆ ಮಾಡುವಂತೆ ಆತನಿಗೆ ಹೇಳಲಾಗಿದೆ, ಏಕೆಂದರೆ "ಆಗ ಆತನು ಸ್ವಸ್ಥನಾಗಬಹುದು". ಈ ವಚನವು ವಿಶ್ವಾಸಿಗಳು ತಮ್ಮ ಪಾಪಗಳನ್ನು ಇತರ ವಿಶ್ವಾಸಿಗಳಿಗೆ ಅರಿಕೆ ಮಾಡಬೇಕೆಂದು ಬೋಧಿಸುತ್ತಿಲ್ಲ. ಒಂದು ವಚನವನ್ನು ಬೇರೆ ಯಾವುದೋ ಸಂದರ್ಭದಲ್ಲಿ ಬಳಸಿಕೊಳ್ಳುವುದು ಬಹಳ ಅಪಾಯಕಾರಿಯಾಗಿದೆ. ಒಂದು ವಚನವು ಅದರ ಸಂದರ್ಭದಿಂದ ತೆಗೆದು ಬಳಸಲ್ಪಟ್ಟಾಗ, ಅದು ಸಾಮಾನ್ಯವಾಗಿ ಸುಳ್ಳು ಬೋಧನೆಗೆ ನೆಪವಾಗುತ್ತದೆ. ಹಾಗಾಗಿ ನೀನು ಸತ್ಯವೇದದ ಪ್ರತಿಯೊಂದು ವಚನವನ್ನು ಅದರ ಸಂದರ್ಭಕ್ಕೆ ಅನುಸಾರವಾಗಿ ಅಭ್ಯಾಸ ಮಾಡಬೇಕು ಮತ್ತು ಅದೇ ಸನ್ನಿವೇಶಕ್ಕೆ ಸಂಬಂಧಿಸಿದ ಇತರ ವಚನಗಳೊಂದಿಗೆ ಆ ವಚನವನ್ನು ಹೋಲಿಸಿ ನೋಡಬೇಕು.

"ಎಲ್ಲಾ ವಿಶ್ವಾಸಿಗಳು ನೀಡುವ ಸಾಕ್ಷಿಯು, ಅವರ ಜೀವಿತದಲ್ಲಿ ದೇವರು ಮಾಡಿರುವಂತ ಕಾರ್ಯಕ್ಕಾಗಿ ದೇವರಿಗೆ ಮಹಿಮೆ ಸಲ್ಲಿಸಬೇಕು"

ನಾವು ಒಬ್ಬ ವ್ಯಕ್ತಿಗೆ ಅರಿಕೆ ಮಾಡಬೇಕಾದದ್ದು ನಾವು ಆತನ ವಿರುದ್ಧವಾಗಿ ಮಾಡಿರುವ ಪಾಪವನ್ನು ಮಾತ್ರ - ಉದಾಹರಣೆಗೆ, ನಾವು ಅವನಿಗೆ ಯಾವುದೇ ರೀತಿಯಲ್ಲಿ ಮೋಸ ಮಾಡಿದ್ದರೆ ಅಥವಾ ಅವನಿಗೆ ನೋವು ಉಂಟುಮಾಡಿದ್ದರೆ, ಇತ್ಯಾದಿ (ಮತ್ತಾಯ 5:23,24). ಇದನ್ನು ಯಾವಾಗಲೂ ನೆನಪಿನಲ್ಲಿಡಿ.

ನಮ್ಮ ಹಿಂದಿನ ಪಾಪಗಳನ್ನು ನಾವು ಯಾರಿಗೂ ವಿವರವಾಗಿ ತಿಳಿಸಬಾರದು, ಏಕೆಂದರೆ ಅದು ಸೈತಾನನನ್ನು ಮಹಿಮೆ ಪಡಿಸುತ್ತದೆ (ಆತನೇ ಆ ಪಾಪಗಳನ್ನು ಮಾಡುವಂತೆ ನಮ್ಮನ್ನು ಪ್ರೇರೇಪಿಸಿದನು) ಮತ್ತು ಇದನ್ನು ಕೇಳಿಸಿಕೊಂಡ ಇತರರ ಮನಸ್ಸುಗಳು ಕೆಟ್ಟುಹೋಗುತ್ತವೆ. ಈಗ ಇದಕ್ಕೆ ಬದಲಾಗಿ, ನಾವು ಕ್ರಿಸ್ತನ ರಕ್ತದ ಮೂಲಕ ಪರಿಶುದ್ಧರೂ, ನೀತಿವಂತರೂ (ಯಾವತ್ತೂ ಪಾಪವನ್ನೇ ಮಾಡದವರಂತೆ) ಆಗಿದ್ದೇವೆಂದು ಸಾರುತ್ತಾ ನಾವು ದೇವರನ್ನು ಮಹಿಮೆ ಪಡಿಸಬೇಕು. ನೀವು ಇದನ್ನು ನಿಮ್ಮ ಜೀವಿತವಿಡೀ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದೇ ವೇಳೆ, ’ನಾವು ದೇವರ ಕೃಪೆಯ ಮೂಲಕ ರಕ್ಷಿಸಲ್ಪಟ್ಟ ಪಾಪಿಗಳು,’ ಎಂಬುದಾಗಿ ನಾವು ಯಾವಾಗಲೂ ಒಪ್ಪಿಕೊಳ್ಳಬೇಕು. ಆದಾಗ್ಯೂ, ಎಂದಿಗೂ ದೇವರನ್ನು ಹೊರತಾಗಿ ಯಾರ ಬಳಿಯೂ ನಾವು ನಮ್ಮ ಪಾಪಗಳನ್ನು ವಿವರವಾಗಿ ಅರಿಕೆ ಮಾಡಬಾರದು. ಇದೇ ಹೊಸ ಒಡಂಬಡಿಕೆಯ ದಾರಿಯಾಗಿದೆ.

ಎಲ್ಲಾ ವಿಶ್ವಾಸಿಗಳು ನೀಡುವ ಸಾಕ್ಷಿಯು, ಅವರ ಜೀವಿತದಲ್ಲಿ ದೇವರು ಮಾಡಿರುವಂತ ಕಾರ್ಯಕ್ಕಾಗಿ ದೇವರಿಗೆ ಮಹಿಮೆ ಸಲ್ಲಿಸಬೇಕು (ಇದು ಅವರ ಸಾಕ್ಷಿಯ ಸಕಾರಾತ್ಮಕ ಅಂಶವಾಗಿದೆ), ಮತ್ತು ಅವರ ಸಾಕ್ಷಿಯಲ್ಲಿ ದೇವರನ್ನು ಅರಿಯುವುದಕ್ಕೆ ಮೊದಲು ಸೈತಾನನು ಅವರ ಜೀವಿತದಲ್ಲಿ ಮಾಡಿಸಿದ ಎಲ್ಲಾ ಕಾರ್ಯಗಳ ವಿವರಗಳನ್ನು ಉಲ್ಲೇಖಿಸಿ ಎಂದಿಗೂ ಸೈತಾನನನ್ನು ಹೆಚ್ಚಳ ಪಡಿಸಬಾರದು. ನಾವು ಪಾಪಿಗಳಾಗಿದ್ದೆವು, ಜಾರಿ ಬೀಳುತ್ತಿದ್ದೆವು ಅಥವಾ ದೇವರ ವಿರೋಧಿಗಳಾಗಿದ್ದೆವು, ಎಂದು ಮಾತ್ರ ಹೇಳಿದರೆ ಸಾಕು.

ಸತ್ಯವೇದದಲ್ಲಿ ನಾನು ವೈಯಕ್ತಿಕವಾಗಿ ಪ್ರೋತ್ಸಾಹವನ್ನು ಪಡೆದಿರುವ ವಿಷಯ ಏನೆಂದರೆ, ಅಪೊಸ್ತಲ ಪೇತ್ರನು ತನ್ನ ಪತ್ರಗಳಲ್ಲಿ ತಾನು ಪರ್ವತದ ಮೇಲೆ ನೋಡಿದ ರೂಪಾಂತರದ ಅನುಭವವನ್ನು ಉಲ್ಲೇಖಿಸಿದ್ದಾನೆ ಮತ್ತು ತಾನು ಕರ್ತನನ್ನು ನಿರಾಕರಿಸಿದ್ದ ಬಗ್ಗೆ ಹೇಳಿಲ್ಲ (2 ಪೇತ್ರನು 1:17,18). ಅದೇ ರೀತಿ ಅಪೊಸ್ತಲ ಪೌಲನು ಯೆಹೂದ್ಯರಿಗೆ (ಅಪೋಸ್ತಲರ ಕೃತ್ಯಗಳು 22) ಮತ್ತು ಅಗ್ರಿಪ್ಪ ರಾಜನಿಗೆ (ಅಪೋಸ್ತಲರ ಕೃತ್ಯಗಳು 26) ತನ್ನ ಸಾಕ್ಷಿಯನ್ನು ನೀಡುವಾಗ, ತಾನು ಕರ್ತನನ್ನು ಮುಖಾಮುಖಿ ಭೇಟಿಯಾದ ಬಗ್ಗೆ ವಿವರವಾಗಿ ಹೇಳುತ್ತಾನೆ ಮತ್ತು ತಾನು ಕ್ರೈಸ್ತರನ್ನು ಹಿಂಸೆ ಪಡಿಸಿದ್ದರ ಬಗ್ಗೆ ಸ್ವಲ್ಪ ಮಾತ್ರ ಹೇಳುತ್ತಾನೆ. ಪಾಪಗಳ ವಿವರವನ್ನು ಅರಿಕೆ ಮಾಡುವುದು ’ರೋಮನ್ ಕ್ಯಾಥೋಲಿಕ್’ ಮತ್ತು ಅನ್ಯಧರ್ಮಗಳ ಪದ್ಧತಿಯಾಗಿದೆ, ಆದರೆ ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಇದನ್ನು ಕೆಲವು ’ಪ್ರೊಟೆಸ್ಟಂಟ್’ ಬರಹಗಾರರು ಸಹ ಪ್ರೋತ್ಸಾಹಿಸುತ್ತಿದ್ದಾರೆ. ಇಂತಹ ಉಪದೇಶವು "ಮಾನವ ಕಲ್ಪಿತ ಧಾರ್ಮಿಕತೆ ಹಾಗೂ ದೇಹದಂಡನೆಯ ಮೂಲಕ ಜ್ಞಾನದ ತೋರಿಕೆಯನ್ನು ನೀಡುತ್ತವೆ. ಆದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ" (ಕೊಲೊಸ್ಸೆಯವರಿಗೆ 2:23). ತನ್ನನ್ನು ತಾನು ಕೀಳಾಗಿಸುವುದು ದೀನತೆಯಲ್ಲ - ಮತ್ತು ಅದರಲ್ಲಿ ಯಾವ ವಿವೇಕವೂ ಇಲ್ಲ. ನಮ್ಮಲ್ಲಿ ವಿವೇಕದ ದೊಡ್ಡ ಕೊರತೆಯಿದೆ.