ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

"ನಾನು ನನ್ನ ಚಿತ್ತದಂತೆ ನಡೆಯುವದಕ್ಕಾಗಿ ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವದಕ್ಕೆ ಪರಲೋಕದಿಂದ ಬಂದೆನು" (ಯೋಹಾನ 6:38). ಇಲ್ಲಿ ಯೇಸುವು ತನ್ನ ಸ್ವಂತ ಪದಗಳಲ್ಲಿ ತಾನು ಭೂಲೋಕಕ್ಕೆ ಬಂದ ಕಾರಣವೇನೆಂದು ನಮಗೆ ತಿಳಿಸಿದ್ದಾರೆ. ಯೇಸುವಿನ ಈ ಲೋಕದ ಸಂಪೂರ್ಣ ಜೀವಿತದ ಪ್ರತಿಯೊಂದು ದಿನವನ್ನು ಆತನು ಹೇಗೆ ಜೀವಿಸಿದನು ಎಂಬುದರ ವಿವರಣೆ ಈ ಒಂದು ವಾಕ್ಯದಲ್ಲಿದೆ. ಯೇಸುವು ನಜರೇತಿನಲ್ಲಿ ಜೀವಿಸಿದ 30 ವರ್ಷಗಳನ್ನು ರಹಸ್ಯ ವರ್ಷಗಳು ಎಂದು ಉಲ್ಲೇಖಿಸಲಾಗುತ್ತದೆ. ಆದರೆ ಇಲ್ಲಿ ಆ 30 ವರ್ಷಗಳ ಪ್ರತಿಯೊಂದು ದಿನವೂ ತಾನು ಏನು ಮಾಡಿದೆನು ಎನ್ನುವುದನ್ನು ಯೇಸುವು ಪ್ರಕಟಗೊಳಿಸಿದ್ದಾನೆ: ಆತನು ತನ್ನ ಚಿತ್ತಕ್ಕೆ ವಿಧೇಯನಾಗದೆ, ತನ್ನ ತಂದೆಯ ಚಿತ್ತದಂತೆ ನಡೆದನು. ಹಿಂದೆ ಅನಂತಕಾಲದಿಂದಲೂ ಯೇಸುವು ತಂದೆಯೊಂದಿಗೆ ಪರಲೋಕದಲ್ಲಿದ್ದಾಗ, ಆತನು ತನ್ನ ಚಿತ್ತವನ್ನು ನಿರಾಕರಿಸುವ ಅವಶ್ಯಕತೆ ಇರಲಿಲ್ಲ, ಏಕೆಂದರೆ ಆತನ ಸ್ವ-ಚಿತ್ತ ಮತ್ತು ಆತನ ತಂದೆಯ ಚಿತ್ತ ಇವೆರಡೂ ಒಂದೇ ಆಗಿದ್ದವು. ಆದರೆ ಆತನು ನಮ್ಮಂತೆ ದೇಹಧಾರಿಯಾಗಿ ಈ ಲೋಕಕ್ಕೆ ಬಂದಾಗ, ಆ ಶರೀರದಲ್ಲಿ ನೆಲೆಸಿದ್ದ ಸ್ವ-ಚಿತ್ತವು ಎಲ್ಲಾ ಅಂಶಗಳಲ್ಲಿಯೂ ದೇವರ ಚಿತ್ತಕ್ಕೆ ಸಂಪೂರ್ಣ ವಿರೋಧವಾಗಿದ್ದ ಚಿತ್ತವಾಗಿತ್ತು. ಯೇಸುವು ತನ್ನ ತಂದೆಯ ಚಿತ್ತದಂತೆ ನಡೆಯುವದಕ್ಕೆ ಇದ್ದ ಒಂದೇ ಒಂದು ವಿಧಾನವೆಂದರೆ, ಆತನು ಸ್ವ-ಚಿತ್ತವನ್ನು ಪ್ರತೀ ಕ್ಷಣವೂ ಅಲ್ಲಗಳೆಯುವದು ಆಗಿತ್ತು. ಯೇಸುವು ತನ್ನ ಲೌಕಿಕ ಜೀವಿತದ ಉದ್ದಕ್ಕೂ ಹೊತ್ತುಕೊಂಡು ಸಾಗಿದ ಶಿಲುಬೆ ಇದೇ ಆಗಿತ್ತು - ತನ್ನ ಸ್ವ-ಚಿತ್ತವನ್ನು ಶಿಲುಬೆಗೆ ಏರಿಸುವದು - ಮತ್ತು ನಾವು ಅವರನ್ನು ಹಿಂಬಾಲಿಸಬೇಕಾದರೆ, ನಾವೂ ಸಹ ಪ್ರತಿದಿನ ಹೀಗೆಯೇ ಮಾಡಬೇಕೆಂದು ಅವರು ತಿಳಿಸುತ್ತಾರೆ. ಸತತವಾಗಿ ಸ್ವ-ಚಿತ್ತದ ಪ್ರಕಾರ ನಡೆಯಲು ನಿರಾಕರಿಸುವ ಮೂಲಕ ಯೇಸುವು ಒಬ್ಬ ಆತ್ಮಿಕ ಮನುಷ್ಯನಾದನು. ಅದೇ ರೀತಿಯಾಗಿ ನಮ್ಮ ಸ್ವ-ಚಿತ್ತವನ್ನು ನಿರಾಕರಿಸುವದು ನಮ್ಮನ್ನೂ ಸಹ ಆತ್ಮಿಕರನ್ನಾಗಿ ಮಾಡುತ್ತದೆ.

ಆತ್ಮಿಕತೆಯು ದೇವರನ್ನು ಒಂದು ಬಾರಿ ಸಂಧಿಸುವ ಮೂಲಕ ಉಂಟಾಗುವುದಿಲ್ಲ. ಅದು ಸ್ವ-ಚಿತ್ತವನ್ನು ನಿರಾಕರಿಸಿ, ಎಡೆಬಿಡೆದೆ ಹಗಲು-ರಾತ್ರಿ, ವಾರದಿಂದ ವಾರಕ್ಕೆ, ವರ್ಷದಿಂದ ವರ್ಷಕ್ಕೆ ದೇವರ ಚಿತ್ತದ ಪ್ರಕಾರ ನಡೆಯುವದರ ಫಲಿತಾಂಶವಾಗಿದೆ. ಇಬ್ಬರು ಸಹೋದರರ ಆತ್ಮಿಕ ಮಟ್ಟವನ್ನು (ಇಬ್ಬರೂ ಒಂದೇ ದಿನ ಮಾನಸಾಂತರ ಹೊಂದಿ ಕ್ರಿಸ್ತನ ಬಳಿಗೆ ಬಂದಂಥವರು) ಮಾನಸಾಂತರವಾಗಿ 10 ವರ್ಷಗಳ ನಂತರ ಹೋಲಿಸಿ ನೋಡೋಣ. ಅವರಲ್ಲೊಬ್ಬನು ಈಗ ಚೆನ್ನಾಗಿ ಬೆಳೆದು ಆತ್ಮಿಕ ವಿವೇಚನೆಯನ್ನು ಪಡೆದಿದ್ದಾನೆ, ಮತ್ತು ದೇವರು ಆತನಿಗೆ ಸಭೆಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಡಲು ಸಾಧ್ಯವಾಗುತ್ತದೆ. ಅವರಲ್ಲಿ ಇನ್ನೊಬ್ಬನು ಇನ್ನೂ ಆತ್ಮಿಕ ವಿವೇಚನೆ ಇಲ್ಲದೆ, ಒಂದು ಚಿಕ್ಕ ಮಗಿವಿನಂತೆ ಇದ್ದಾನೆ, ಮತ್ತು ಅವನನ್ನು ಇತರರು ಕೈ ಹಿಡಿದು ನಡೆಸಿ, ಪದೇ ಪದೇ ಉತ್ತೇಜಿಸಬೇಕಾಗುತ್ತದೆ. ಇವರಿಬ್ಬರ ನಡುವೆ ಹೇಗೆ ಇಷ್ಟು ಅಂತರ ಉಂಟಾಯಿತು? ಇದಕ್ಕೆ ಉತ್ತರ: ಅವರು ತಮ್ಮ 10 ವರ್ಷಗಳ ಕ್ರಿಸ್ತೀಯ ಜೀವನದಲ್ಲಿ ಪ್ರತಿ ದಿನವೂ ಕೈಗೊಂಡಿರುವ ಚಿಕ್ಕ ಚಿಕ್ಕ ನಿರ್ಧಾರಗಳು. ಅವರಿಬ್ಬರೂ ಇದೇ ರೀತಿಯಾಗಿ ಮುಂದುವರಿದರೆ, ಇನ್ನು 10 ವರ್ಷಗಳಲ್ಲಿ ಅವರ ನಡುವಿನ ಅಂತರ ಇನ್ನಷ್ಟು ಹೆಚ್ಚುತ್ತದೆ. ಮತ್ತು ನಿತ್ಯತ್ವದಲ್ಲಿ, ಅವರಿಬ್ಬರ ಮಹಿಮೆಯು ಎಷ್ಟರ ಮಟ್ಟಿಗೆ ವ್ಯತ್ಯಾಸವಾಗಿ ಇರುತ್ತದೆ ಎಂದರೆ, ಒಂದು 2000-ವಾಟ್ ಶಕ್ತಿಯ ವಿದ್ಯುತ್ ದೀಪ ಮತ್ತು ಇನ್ನೊಂದು 5-ವಾಟ್ ಶಕ್ತಿಯ ದೀಪದಂತೆ ಅವರು ಇರುತ್ತಾರೆ! "ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚು ಕಡಿಮೆಯುಂಟಷ್ಟೆ" (1 ಕೊರಿಂಥ. 15:41).

ಉದಾಹರಣೆಗೆ, ನೀವು ಒಂದು ಮನೆಗೆ ಭೇಟಿ ನೀಡುತ್ತೀರಿ ಎಂದುಕೊಳ್ಳೋಣ, ಮತ್ತು ನಿಮಗೆ ಯಾರೋ ಒಬ್ಬ ಸಹೋದರನ ಕುರಿತಾಗಿ (ಅವನು ನಿಮಗೆ ಅಷ್ಟೊಂದು ಹಿಡಿಸದವನು), ನಿಮ್ಮ ಮಧ್ಯದಲ್ಲಿ ಅವನು ಇಲ್ಲದಿರುವಾಗ, ಏನೋ ಅಪವಾದವನ್ನು ಮಾಡುವ ಅವಕಾಶ ಸಿಗುತ್ತದೆ. ಆಗ ನೀವು ಏನು ಮಾಡುತ್ತೀರಿ? ಚಾಡಿ ಹೇಳುವಂಥ ಶೋಧನೆಗೆ ತಲೆಬಾಗುತ್ತೀರೋ, ಅಥವಾ ಆ ಯೋಚನೆಗೆ ಅವಕಾಶ ನೀಡದೆ, ಬಾಯಿ ಮುಚ್ಚಿ ಸುಮ್ಮನೆ ಇರುತ್ತೀರೋ? ಯಾರ ವಿರುದ್ಧವಾಗಿಯಾದರೂ ಕೆಟ್ಟ ಮಾತನ್ನು ನುಡಿದದ್ದರಿಂದ ಯಾರಿಗೂ ಕುಷ್ಠರೋಗ ಅಥವಾ ಕ್ಯಾನ್ಸರ್ ಕಾಯಿಲೆಯನ್ನು ದೇವರು ಎಂದೂ ಕೊಟ್ಟಿಲ್ಲ. ಹಾಗೆ ಆಗುವುದಿಲ್ಲ. ಮತ್ತು ಈ ಕಾರಣಕ್ಕಾಗಿ ಹಲವರು ತಮ್ಮ ಜೀವನದಲ್ಲಿ ಪಾಪವು ಯಾವ ಕೆಡುಕನ್ನೂ ಉಂಟುಮಾಡುವದಿಲ್ಲ ಎಂದು ಕಲ್ಪನೆ ಇರಿಸಿಕೊಂಡಿದ್ದಾರೆ. ಏನು ಹೇಳೋಣ, ಅನೇಕ ಸಹೋದರರು ಹಾಗೂ ಸಹೋದರಿಯರು ನಿತ್ಯತ್ವದಲ್ಲಿ ಕಂಡುಕೊಳ್ಳಲಿರುವ ವಿಷಯ ಏನೆಂದರೆ, ಪ್ರತೀ ಸಲ ಅವರು ತಮ್ಮ ಇಷ್ಟದ ಪ್ರಕಾರ ನಡೆದುಕೊಂಡಾಗ, ಅವರು ಸ್ವಲ್ಪ ಸ್ವಲ್ಪವಾಗಿ ತಮ್ಮನ್ನೇ ಕೆಡಿಸಿಕೊಳ್ಳುತ್ತಾರೆ. ಅವರು ನಿತ್ಯತ್ವದಲ್ಲಿ ತಮ್ಮ ಭೂಲೋಕದ ಜೀವಿತವನ್ನು ಹಾಳುಮಾಡಿಕೊಂಡೆವಲ್ಲಾ ಎಂದು ವಿಷಾದಕ್ಕೆ ಒಳಗಾಗುತ್ತಾರೆ.

ಯೇಸುವೂ ಸಹ ನಜರೇತಿನಲ್ಲಿ ಜೀವಿಸಿದ 30 ವರ್ಷಗಳ ಕಾಲ ಎಲ್ಲಾ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದರು. ಯಾರೂ ನೋಡದಿರುವ ಆ ವರ್ಷಗಳ ಬಗ್ಗೆ, "ಆತನು ಯಾವುದೇ ಸಮಯದಲ್ಲಿ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ," ಎಂದು ಬರೆಯಲಾಗಿದೆ (ರೋಮಾ. 15:3). ಆತನು ಯಾವಾಗಲೂ ತನ್ನನ್ನು ನಿರಾಕರಿಸಿಕೊಂಡನು. ಈ ರೀತಿಯಾಗಿ ಆತನು ಎಲ್ಲಾ ಸಮಯದಲ್ಲಿ ತಂದೆಯನ್ನು ಸಂತೋಷಪಡಿಸಿದನು. ನಮ್ಮ ಜೀವನದ ಅನೇಕ ಕ್ಷೇತ್ರಗಳಲ್ಲಿ ನಮ್ಮನ್ನೇ ಸಂತೋಷಪಡಿಸಿಕೊಳ್ಳುವ ಸಾಧ್ಯತೆಯಿದೆ - ಉದಾಹರಣೆಗೆ, ಊಟ ತಿಂಡಿಯ ವಿಷಯದಲ್ಲಿ. ಒಂದು ವೇಳೆ ನಿಮಗೆ ಹಸಿವೆ ಇಲ್ಲದಿದ್ದಾಗಲೂ ಕೆಲವು ರುಚಿಕರವಾದ ತಿಂಡಿಗಳನ್ನು ಖರೀದಿಸಲು ನೀವು ಸ್ವಲ್ಪ ಹಣವನ್ನು ಉಪಯೋಗಿಸಬಹುದು. ಖಂಡಿತವಾಗಿ ಅದರಲ್ಲಿ ಯಾವ ತಪ್ಪು ಅಥವಾ ಪಾಪವಿಲ್ಲ. ಆದರೆ ಅದು ಒಂದು ನಿರ್ದಿಷ್ಟ ಜೀವನ ಶೈಲಿಯ ಸೂಚನೆಯಾಗಿದೆ. ನಿಮ್ಮ ಕೈಯಲ್ಲಿ ಹಣವಿರುವದರಿಂದ, ಅವಶ್ಯಕತೆ ಇದ್ದರೂ ಅಥವಾ ಇಲ್ಲದಿದ್ದರೂ, ನಿಮಗೆ ಇಷ್ಟವಾದುದನ್ನು ಖರೀದಿಸುತ್ತೀರಿ. ನೀವು ನಿಮ್ಮ ಇಷ್ಟದ ಪ್ರಕಾರ ನಡೆದುಕೊಳ್ಳುತ್ತೀರಿ. ಯವುದೋ ವಸ್ತು ಬೇಕೆಂದು ಅನಿಸಿದರೆ ಅದನ್ನು ಖರೀದಿಸುತ್ತೀರಿ. ಎಲ್ಲಿಗೋ ಹೋಗುವ ಮನಸ್ಸಾದರೆ, ನೀವು ಹೋಗುತ್ತೀರಿ. ಬಹಳ ಸಮಯ ಮಲಗುವ ಮನಸ್ಸಾದರೆ, ನೀವು ಹಾಯಾಗಿ ಮಲಗುತ್ತೀರಿ. ನೀವು ಸಭಾಕೂಟಕ್ಕೆ ಸರಿಯಾದ ಸಮಯಕ್ಕೆ ಹೋಗಬಹುದು ಮತ್ತು ದಿನಾಲೂ ದೇವರ ವಾಕ್ಯವನ್ನು ಓದಬಹುದು, ಮತ್ತು ಅದರ ಜೊತೆಗೆ ನಿಮ್ಮದೇ ಆದ ಜೀವನ ಶೈಲಿಯಲ್ಲಿ ಜೀವಿಸಬಹುದು - ಇದರ ಅಂತಿಮ ಪರಿಣಾಮ ಏನು? ನೀವು ರಕ್ಷಣೆಯನ್ನು ಕಳಕೊಳ್ಳದಿರಬಹುದು, ಆದರೆ ನಿಶ್ಚಯವಾಗಿ ದೇವರು ಅವರಿಗಾಗಿ ಜೀವಿಸುವಂತೆ ನಿಮಗೆ ಕೊಟ್ಟಿರುವ ಒಂದು ಜೀವನವನ್ನು ಹಾಳು ಮಾಡಿಕೊಳ್ಳುತ್ತೀರಿ.

ಆದರೆ ಇನ್ನೊಬ್ಬ ಸಹೋದರನು ಬೇರೊಂದು ರೀತಿಯಲ್ಲಿ ನಡೆಯುತ್ತಾನೆ. ಆತನು ತನ್ನ ದೇಹವನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ನಿಶ್ಚಯಿಸುತ್ತಾನೆ. ತನಗೆ ಹಸಿವು ಇಲ್ಲದಿದ್ದಾಗ, ಸುಮ್ಮನೆ ಏನನ್ನೂ ತಿನ್ನದಿರಲು ಆತನು ನಿರ್ಧರಿಸುತ್ತಾನೆ. ತನಗೆ ಅಗತ್ಯವಿಲ್ಲದ ವಸ್ತುಗಳನ್ನು ಯಾವತ್ತೂ ಕೊಂಡುಕೊಳ್ಳುವುದಿಲ್ಲ, ಎಂದು ಆತನು ನಿರ್ಧರಿಸುತ್ತಾನೆ. ದೇವರೊಂದಿಗೆ ಸಮಯ ಕಳೆಯಲಿಕ್ಕಾಗಿ ಆತನು ಪ್ರತಿದಿನ 15 ನಿಮಿಷ ಮೊದಲೇ ಎದ್ದೇಳಲು ತೀರ್ಮಾನಿಸುತ್ತಾನೆ. ಯಾರಾದರೂ ಕೋಪಗೊಂಡು ಆತನಿಗೆ ಏನಾದರೂ ಹೇಳಿದರೆ, ಆತನು ಮೃದುವಾದ ಉತ್ತರವನ್ನು ಕೊಡಲು ನಿರ್ಧರಿಸುತ್ತಾನೆ. ಯಾವಾಗಲೂ ಪ್ರೀತಿ ಸದ್ಭಾವನೆ ತನ್ನಲ್ಲಿ ಇರುವಂತೆ ಆತನು ನಡೆಯುತ್ತಾನೆ. ದಿನ ಪತ್ರಿಕೆಯಲ್ಲಿ ಅಥವಾ ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕಾಮ ಅಥವಾ ಕೆಟ್ಟ ರೀತಿಯ ಯೋಚನೆಗಳನ್ನು ಎಬ್ಬಿಸುವ ಸುದ್ದಿಗಳ ಕಡೆಗೆ ಕಣ್ಣು ಹಾಯಿಸದಿರಲು ಆತನು ನಿಶ್ಚಯಿಸುತ್ತಾನೆ. ಪ್ರತಿಯೊಂದು ಸನ್ನಿವೇಷದಲ್ಲಿಯೂ, ತನ್ನನ್ನು ತಾನು ತಗ್ಗಿಸಿಕೊಂಡು, ತಾನು ಮಾಡಿದ್ದೇ ಸರಿಯೆಂದು ವಾದ ಮಾಡದಿರಲು ಆತನು ನಿಶ್ಚಯಿಸುತ್ತಾನೆ. ಲೋಕದ ಸೆಳೆತಕ್ಕೆ ಒಳಪಡಿಸುವ ಕೆಲವು ಗೆಳೆತನಗಳಿಂದ ದೂರ ಸರಿಯಲು ಆತನು ತೀರ್ಮಾನಿಸುತ್ತಾನೆ. ಎಲ್ಲಾ ಸಮಯದಲ್ಲಿ ತನ್ನ ಸ್ವಂತ ಚಿತ್ತವನ್ನು ನಿರಾಕರಿಸುವ ನಿರ್ಧಾರದ ಮೂಲಕ (ಸ್ವಂತ ಸುಖದ ವಿಷಯಗಳು), ದೇವರನ್ನು ಮಾತ್ರವೇ ಸಂತೋಷಪಡಿಸುವ ಮನೋಭಾವವನ್ನು ಆತನು ಬೆಳೆಸಿಕೊಳ್ಳುತ್ತಾನೆ. ಆತನು ಅವಶ್ಯವಿಲ್ಲದ ಸಾಮಾನುಗಳನ್ನು ಖರೀದಿಸದೇ ಇರುವುದರಿಂದ, ಅಥವಾ ನಿದ್ರೆಯಿಂದ 15 ನಿಮಿಷ ಮೊದಲೇ ಏಳುವುದರಿಂದ, ಅಥವಾ ತನ್ನ ಆತ್ಮ ಗೌರವವನ್ನು ಬದಿಗಿರಿಸಿ ಕ್ಷಮಾಪಣೆಯನ್ನು ಕೇಳುವುದರಿಂದ ಏನನ್ನು ಕಳೆದುಕೊಳ್ಳುತ್ತಾನೆ? ಯಾವ ನಷ್ಟವನ್ನೂ ಅನುಭವಿಸುವುದಿಲ್ಲ. ಆದರೆ ಆತನು ಪಡೆಯುವ ಲಾಭದ ಬಗ್ಗೆ ಯೋಚಿಸಿರಿ!

ಹೀಗೆ ಚಿಕ್ಕಪುಟ್ಟ ವಿಷಯಗಳಲ್ಲಿ ಯಾವಾಗಲೂ ನಂಬಿಗಸ್ತನಾಗಿ ನಡೆಯುವ ಇಂತಹ ಒಬ್ಬ ಮನುಷ್ಯನು, ಕೆಲವೇ ವರ್ಷಗಳಲ್ಲಿ ದೇವರ ಒಬ್ಬ ವಿಶ್ವಾಸಪಾತ್ರ ಮನುಷ್ಯನಾಗುತ್ತಾನೆ - ಇದಕ್ಕೆ ಕಾರಣ ಆತನ ಸತ್ಯವೇದ ಜ್ಞಾನವಲ್ಲ, ಆದರೆ ಜೀವನದಲ್ಲಿ ಕೈಗೊಳ್ಳುವ ಚಿಕ್ಕ ನಿರ್ಧಾರಗಳಲ್ಲಿ ತನ್ನನ್ನೇ ಸಂತೋಷಪಡಿಸಿಕೊಳ್ಳದೆ, ದೇವರನ್ನು ಸಂತೋಷಪಡಿಸುವ ಮನೋಭಾವವನ್ನು ಆತನು ಹೊಂದಿರುವದರಿಂದ. ಹಾಗಾಗಿ ನಿಮ್ಮ ಚಿತ್ತವು ನಿರ್ಬಲವಾಗದಂತೆ ನೋಡಿಕೊಳ್ಳಿರಿ. ದೇವರನ್ನು ಪ್ರಸನ್ನಗೊಳಿಸುವ ಚಿತ್ತವನ್ನು ಎಲ್ಲಾ ಸಮಯದಲ್ಲೂ ಇರಿಸಿಕೊಳ್ಳಲು ಶ್ರಮಿಸಿರಿ. ಚೆನ್ನಾಗಿ ಬೆಳೆದಿರುವ ಕ್ರೈಸ್ತರು ಯಾರೆಂದರೆ, "ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ (ತಮ್ಮ ಚಿತ್ತವು ಸರಿಯಾದ ಮಾರ್ಗದಲ್ಲಿ ಸಾಗುವಂತೆ ಹಲವಾರು ವರ್ಷಗಳು ಶ್ರಮಿಸುವದು) ಶಿಕ್ಷಿಸಿಕೊಂಡು, ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರು" (ಇಬ್ರಿಯ. 5:14). ನೀವು ದೇವರ ಒಬ್ಬ ನಿಜವಾದ ಪುರುಷ/ ಸ್ತ್ರೀ ಆಗುವಿರಿ, ಎಂಬ ನಿರ್ಧಾರವನ್ನು ಮಾಡಿರಿ.