WFTW Body: 

ಎಲ್ಲೆಡೆ ಹರಡಿರುವ ವಂಚನೆ ಮತ್ತು ಅನೇಕ ಮಂದಿ ಸುಳ್ಳು ಪ್ರವಾದಿಗಳು ಅಂತ್ಯದ ದಿನಗಳ ಗುಣಲಕ್ಷಣಗಳು, ಎಂಬುದಾಗಿ ಯೇಸುವು ಮತ್ತು ಅಪೊಸ್ತಲರು, ನಮಗೆ ಪದೇ ಪದೇ ಎಚ್ಚರಿಕೆಯನ್ನು ನೀಡಿದ್ದಾರೆ (ಮತ್ತಾ. 24:3-5,11,24; 1 ತಿಮೊ. 4:1) - ಮತ್ತು ನಾವು ಹಿಂದಿನ ಕೆಲವು ದಶಕಗಳಿಂದ ಇವುಗಳನ್ನು ಬಹಳ ಹೆಚ್ಚಾಗಿ ಕಂಡಿದ್ದೇವೆ.

ಲಕ್ಷಾಂತರ ಕ್ರೈಸ್ತರು ಇಂತಹ ಸುಳ್ಳು ಪ್ರವಾದಿಗಳಿಂದ ಮತ್ತು ಈ ನಕಲಿ ಉಜ್ಜೀವನಗಳಿಂದ ಏಕೆ ಮೋಸಗೊಳ್ಳುತ್ತಾರೆ? ಮತ್ತು ಬಹಳಷ್ಟು ಬೋಧಕರು ಅನೀತಿ ಮತ್ತು ದುರಾಶೆಗೆ ಏಕೆ ಬಲಿಯಾಗುತ್ತಿದ್ದಾರೆ?

ಇದಕ್ಕೆ ಕೆಲವು ಮುಖ್ಯ ಕಾರಣಗಳು ಹೀಗಿವೆ :
1.ಇಂದು ಹೆಚ್ಚಿನ ಕ್ರೈಸ್ತರು ಹೊಸ ಒಡಂಬಡಿಕೆಯ ಬೋಧನೆಗಳನ್ನು ಅರಿತಿಲ್ಲ, ಏಕೆಂದರೆ ಅವರು ಅದನ್ನು ಶ್ರದ್ಧೆಯಿಂದ ಓದಿಕೊಂಡು ಅಭ್ಯಾಸಿಸಿಲ್ಲ; ಹಾಗಾಗಿ ಅವರು ತಮ್ಮ ನಾಯಕರ ಬೋಧನೆಗಳನ್ನು ಅನುಸರಿಸುತ್ತಾರೆಯೇ ಹೊರತು, ಹೊಸ ಒಡಂಬಡಿಕೆಯ ಬೋಧನೆಗಳನ್ನಲ್ಲ.

2.ಈ ಕ್ರೈಸ್ತರಿಗೆ ತಮ್ಮ ಉತ್ತಮ ನಡತೆಗಿಂತ (ದೈವಿಕ ಜೀವಿತ) ಅದ್ಭುತ ಕಾರ್ಯಗಳು (ದೈವಿಕ ವರಗಳು) ಹೆಚ್ಚು ಮುಖ್ಯವಾಗಿರುತ್ತದೆ.

3.ಇವರಿಗೆ ಆತ್ಮಿಕ ಸಂಪತ್ತಿಗಿಂತ ಲೌಕಿಕ ಸಂಪತ್ತು ಹೆಚ್ಚು ಮುಖ್ಯವಾಗಿರುತ್ತದೆ.

4.ಇವರು ಪವಿತ್ರಾತ್ಮನ ಯಥಾರ್ಥವಾದ ನಡೆಸುವಿಕೆ ಹಾಗೂ ಭಾವನಾತ್ಮಕ ಉತ್ಸಾಹ ಅಥವಾ ಮನೋವಿಜ್ಞಾನದ ಕುತಂತ್ರಗಳನ್ನು ಹೇಗೆ ಗುರುತಿಸಿ ವಿಂಗಡಿಸಬೇಕೆಂದು ಕಲಿತಿಲ್ಲ. ಇದರ ಕಾರಣವೂ ಸಹ ಹೊಸ ಒಡಂಬಡಿಕೆಯ ಅಜ್ಞಾನವೇ ಆಗಿದೆ.

5.ಇವರು ಮನೋಸ್ಥಿತಿಯ ನಿಯಂತ್ರಣದಿಂದ ಸಿಗುವ ಗುಣಪಡಿಸುವಿಕೆ (ಮನಸ್ಸಿನ ಒಳ್ಳೆಯ ಭಾವನೆಗಳ ಮೂಲಕ ಗುಣಹೊಂದುವುದು), ಮತ್ತು ಯೇಸುವಿನ ಹೆಸರಿನಲ್ಲಿ ಉಂಟಾಗುವ ದೈವಿಕ ಗುಣಪಡಿಸುವಿಕೆ ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲಾರರು.

6.ಇವರಿಗೆ ಕರ್ತನಿಂದ ಸಿಗುವ ಒಳಗಿನ ಆನಂದಕ್ಕಿಂತ ಭಾವನಾತ್ಮಕ ಉದ್ರೇಕ ಮತ್ತು ವಿಚಿತ್ರವಾದ ಶಾರೀರಿಕ ಬದಲಾವಣೆಗಳು ಹೆಚ್ಚು ಮುಖ್ಯವಾಗಿವೆ.

7.ಜನರ ನಾಯಕರು ಅಂತರಾತ್ಮದಲ್ಲಿ ದೇವರೊಂದಿಗೆ ನಡೆಯುವುದಕ್ಕಿಂತ ಹೆಚ್ಚಾಗಿ, ಜನರ ಸೇವೆಗೆ ಪ್ರಾಮುಖ್ಯತೆ ನೀಡುತ್ತಾರೆ.

8.ಈ ನಾಯಕರಿಗೆ ದೇವರ ಮೆಚ್ಚುಗೆಗಿಂತ ಜನರ ಮೆಚ್ಚುಗೆಯು ಹೆಚ್ಚು ಪ್ರಾಮುಖ್ಯವಾಗಿದೆ.

9. ಈ ನಾಯಕರಿಗೆ ಸಭೆಯ ಜನರು ತಮ್ಮನ್ನು ಕ್ರಿಸ್ತನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಂಡಿದ್ದಾರೋ ಎಂಬುದಕ್ಕಿಂತ, ಸಭಾಕೂಟಗಳಲ್ಲಿ ಎಷ್ಟು ಜನರು ಹಾಜರಾಗುತ್ತಾರೆ ಎಂಬುದು ಹೆಚ್ಚು ಪ್ರಾಮುಖ್ಯವಾಗಿದೆ.

10. ಈ ನಾಯಕರಿಗೆ ಒಂದು ಸ್ಥಳೀಯ ಸಭೆಯನ್ನು ಕಟ್ಟಿ, ತಾವು ಅದರ ಸೇವಕರಾಗಿ ಇರುವುದಕ್ಕಿಂತ, ತಮ್ಮ ಖಾಸಗಿ ಸಾಮ್ರಾಜ್ಯ ಮತ್ತು ತಮ್ಮ ಆರ್ಥಿಕ ಸಾಮ್ರಾಜ್ಯಗಳನ್ನು ಕಟ್ಟುವ ಕಾರ್ಯವು ಹೆಚ್ಚು ಮುಖ್ಯವಾಗಿದೆ. "ಚಿಕ್ಕವರಿಂದ ಮೊದಲುಗೊಂಡು ದೊಡ್ಡವರ ತನಕ ಎಲ್ಲರು ಬಾಚಿಕೊಳ್ಳುತ್ತಲೇ ಇದ್ದಾರೆ, ಮತ್ತು ಪ್ರವಾದಿಗಳು ಮೊದಲಾಗಿ ಯಾಜಕರ ವರೆಗೆ ಸಕಲರು ಮೋಸಮಾಡುತ್ತಾರೆ"(ಯೆರೆಮೀಯನು 6:13).

ಈ ಮೇಲಿನ ಎಲ್ಲಾ ಅಂಶಗಳು ಯೇಸುವು ಕಲಿಸಿದ ವಿಷಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿವೆ. ಹೊಸ ಒಡಂಬಡಿಕೆಯಲ್ಲಿ ಯೇಸುವನ್ನು ವಿರೋಧಿಸುವವನು ’ಕ್ರಿಸ್ತ ವಿರೋಧಿ’ ಎಂದು ಕರೆಯಲ್ಪಟ್ಟಿದ್ದಾನೆ. ಇದನ್ನು ಕ್ರೈಸ್ತ ವಿಶ್ವಾಸಿಗಳು ಸ್ಪಷ್ಟವಾಗಿ ಕಂಡುಕೊಳ್ಳದಿದ್ದರೆ, ಈ ಲೋಕದ ಕೇಂದ್ರ ಸ್ಥಾನಕ್ಕೆ "ಕ್ರಿಸ್ತ ವಿರೋಧಿ"ಯು ಬಂದು ನಿಂತು, ತನ್ನ ವಂಚನೆಯ ಸೂಚಕಕಾರ್ಯಗಳನ್ನು ಮತ್ತು ಅದ್ಭುತ ಕಾರ್ಯಗಳನ್ನು ಮಾಡಿ ತೋರಿಸುವಾಗ (2 ಥೆಸ. 2:3-10), ಆ ಕ್ರೈಸ್ತರು ಸಹ ಕುರುಡರಂತೆ ಅವನನ್ನು ಸ್ವೀಕರಿಸುತ್ತಾರೆ. ಕ್ರಿಸ್ತನ ಆತ್ಮದಿಂದ ನಡೆಸಲ್ಪಡುವುದು ಎಂದರೆ, ಮೇಲೆ ಪ್ರಸ್ತಾಪಿಸಿರುವ ಎಲ್ಲಾ ಅಂಶಗಳಿಗೆ ವಿರುದ್ಧವಾದ ಆತ್ಮವನ್ನು ಹೊಂದಿರುವುದಾಗಿದೆ.

"ಯೇಸುವು ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ ಮತ್ತು ಈ ದಿನ ಆತನು ನಮಗೆ ಮಾದರಿಯಾಗಿದ್ದಾನೆ ಮತ್ತು ನಮ್ಮ ನಂಬಿಕೆಯನ್ನು ಹುಟ್ಟಿಸುವವನು ಆಗಿದ್ದಾನೆ - ದಾವೀದನು ಅಥವಾ ಎಲೀಯನು ನಮ್ಮ ಮಾದರಿಯಲ್ಲ"

ಯೇಸುವು ’ಮತ್ತಾಯನು 7:13-27'ರಲ್ಲಿ ಹೇಳಿದ ಮಾತಿನ ಭಾವಾನುವಾದ ಇಲ್ಲಿದೆ (ಇದನ್ನು ’ಮತ್ತಾಯ ಅಧ್ಯಾಯ 5-7'ರ ಬೋಧನೆಯ ಹಿನ್ನೆಲೆಯಲ್ಲಿ ಓದಿಕೊಳ್ಳಿರಿ):
ಯೇಸುವು ಹೀಗೆ ಹೇಳಿದರು - "ನಾನು ಈಗ ತಾನೇ ವಿವರಿಸಿದಂತೆ (’ಮತ್ತಾಯನು 5-7 ಅಧ್ಯಾಯಗಳು’),ನಿತ್ಯಜೀವಕ್ಕೆ ಪ್ರವೇಶಿಸುವ ಬಾಗಿಲು ಮತ್ತು ಅಲ್ಲಿಗೆ ಹೋಗುವ ಮಾರ್ಗ ಇವೆರಡೂ ಇಕ್ಕಟ್ಟಾಗಿವೆ. ಆದರೆ ಸುಳ್ಳು ಪ್ರವಾದಿಗಳು ನಿಮ್ಮ ಬಳಿಗೆ ಬಂದು, ’ನಿತ್ಯಜೀವಕ್ಕೆ ಹೋಗುವ ಬಾಗಿಲು ಮತ್ತು ದಾರಿ ಇಕ್ಕಟ್ಟಾಗಿಲ್ಲ, ಅವು ಅಗಲವಾಗಿವೆ, ಅಲ್ಲಿಗೆ ಹೋಗುವುದು ಸುಲಭ’, ಎಂದು ಹೇಳುತ್ತಾರೆ. ಅವರ ಬಗ್ಗೆ ಎಚ್ಚರವಾಗಿರಿ. ನೀವು ಅವರ ಜೀವಿತದ ಫಲಗಳನ್ನು ಗಮನಿಸಿ ನೋಡಿದರೆ, ಅವರನ್ನು ಸುಲಭವಾಗಿ ಗುರುತಿಸಬಹುದಾಗಿದೆ: ಕೋಪ, ಸ್ತ್ರೀ-ವ್ಯಾಮೋಹ, ಹಣದಾಸೆ ಮತ್ತು ಲೋಕದ ಸಂಪತ್ತಿನ ಆಸೆ, ಈ ವಿಷಯಗಳಿಂದ (ಲೌಕಿಕ ಜನರು ಇವುಗಳಿಗಾಗಿ ತವಕಿಸುತ್ತಾರೆ) ಅವರ ಜೀವಿತ ಮುಕ್ತವಾಗಿದೆಯೇ, ಎಂಬುದನ್ನು ನಾವು ನೋಡಬೇಕು. ನಾನು ಈಗ ನಿಮಗೆ ಬೋಧಿಸಿದ ಹಾಗೆ ಆ ಪ್ರವಾದಿಗಳು ಇವೆಲ್ಲವನ್ನು ವಿರೋಧಿಸಿ ಬೋಧಿಸುತ್ತಾರೆಯೇ? (ಮತ್ತಾ. 5:21-32; ಮತ್ತಾ. 6:24-34). ಈ ಸುಳ್ಳು ಪ್ರವಾದಿಗಳು ಸಕಲ ವಿಧವಾದ ಮಹತ್ಕಾರ್ಯಗಳ ವರಗಳನ್ನು ಹೊಂದಿರಬಹುದು ಮತ್ತು ನನ್ನ ಹೆಸರಿನಲ್ಲಿ (ಕ್ರಿಸ್ತನ ಹೆಸರಿನಲ್ಲಿ) ಸೂಚಕಕಾರ್ಯಗಳನ್ನು ಮಾಡಬಹುದು ಮತ್ತು ರೋಗಿಗಳನ್ನು ನಿಜವಾಗಿ ಗುಣಪಡಿಸಬಹುದು, ಆದಾಗ್ಯೂ ಕಡೇ ದಿನದಲ್ಲಿ ನಾನು ಅವರನ್ನು ನರಕಕ್ಕೆ ಕಳುಹಿಸುತ್ತೇನೆ, ಏಕೆಂದರೆ ಅವರು ನನ್ನನ್ನು (ನಾನು ಪವಿತ್ರನಾದ ದೇವರೆಂದು) ಅರಿತುಕೊಳ್ಳಲಿಲ್ಲ ಮತ್ತು ಅವರು ತಮ್ಮ ಖಾಸಗಿ ಜೀವನದ ಪಾಪವನ್ನು ತೆಗೆದುಹಾಕಲಿಲ್ಲ (ಮತ್ತಾ. 7:21-23). ಹಾಗಿದ್ದರೆ ನೀವು ಒಂದು ಕ್ರೈಸ್ತಸಭೆಯನ್ನು ಕಟ್ಟುವಾಗ, ಅದನ್ನು ಕಾಲಮಾನದಲ್ಲಿ ಅಥವಾ ನಿತ್ಯತ್ವದಲ್ಲಿ ಕದಲಿಸಿ ಉರುಳಿಸಲಾಗದ ಬಂಡೆಯ ಮೇಲೆ ಕಟ್ಟಲು ಬಯಸಿದರೆ, ನಾನು ನಿಮಗೆ ಈಗ ತಾನೇ ತಿಳಿಸಿದ ಎಲ್ಲಾ ವಿಷಯಗಳನ್ನು (ಮತ್ತಾಯನು ಅಧ್ಯಾಯಗಳು 5-7) ಎಚ್ಚರಿಕೆಯಿಂದ ಪಾಲಿಸಿ ನಡೆಯಿರಿ, ಅಷ್ಟೇ ಅಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಪಾಲಿಸಬೇಕೆಂದು ನಿಮ್ಮ ಸಭೆಯಲ್ಲಿ ಉಪದೇಶಿಸಿರಿ. ಆಗ ನಾನು ಸದಾಕಾಲವೂ ನಿಮ್ಮೊಂದಿಗೆ ಇರುತ್ತೇನೆ ಮತ್ತು ನನ್ನ ಸಂಪೂರ್ಣ ಅಧಿಕಾರವು ನಿಮ್ಮನ್ನು ಬೆಂಬಲಿಸುತ್ತದೆ (ಮತ್ತಾ. 28:20,18). ಆದರೆ ನೀವು ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದಿದ್ದರೆ, ಆಗ ನೀವು ಕಟ್ಟುವ ಸಭೆಯು ಜನರ ದೃಷ್ಟಿಗೆ ಒಂದು ದೊಡ್ಡ ಆಕರ್ಷಕ ಸಭೆಯಾಗಿ ಕಾಣಿಸಿದರೂ, ಅದು ಒಂದು ದಿನ ಖಂಡಿತವಾಗಿ ದಢಾರನೆ ಕುಸಿದು ಬೀಳುತ್ತದೆ (ಮತ್ತಾ. 7:25)."

ಹಾಗಾದರೆ, ನಾವು ಈ ಕಡೆಯ ದಿನಗಳಲ್ಲಿ ಒಂದು ಕದಲಿಸಲಾರದ ಸಭೆಯನ್ನು ಹೇಗೆ ಕಟ್ಟಬಹುದು?
1. ನಾವು ಪರ್ವತ ಪ್ರಸಂಗವನ್ನು ಅನುಸರಿಸಿ (ಮತ್ತಾಯನು 5-7 ಅಧ್ಯಾಯಗಳು) ಜೀವಿಸಬೇಕು ಮತ್ತು ಯಾವಾಗಲೂ ಅದನ್ನು ಬೋಧಿಸಬೇಕು.
2. ನಾವು ಹಳೆಯ ಒಡಂಬಡಿಕೆಯಲ್ಲಿ ಜೀವಿಸದೆ, ಹೊಸ ಒಡಂಬಡಿಕೆಯಲ್ಲೇ ಜೀವಿಸಬೇಕು. ಇದಕ್ಕಾಗಿ, ನಾವು ಈ ಎರಡು ಒಡಂಬಡಿಕೆಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಕೊಳ್ಳಬೇಕು (2 ಕೊರಿ. 3:6). ನಾವು ಹೊಸ ಒಡಂಬಡಿಕೆಯ ಬೋಧನೆಯನ್ನು ಮುಂದುವರಿಸಬೇಕು.

ಇಂದು ಬೋಧಕರು ಗಂಭೀರವಾದ ಪಾಪದಲ್ಲಿ ಬಿದ್ದಾಗ, ಅವರು ಹಳೇ ಒಡಂಬಡಿಕೆಯ ದೇವಭಕ್ತರು ಸಹ ಈ ಪಾಪಗಳಲ್ಲಿ ಬಿದ್ದ ಸಂದರ್ಭಗಳನ್ನು ಉಲ್ಲೇಖಿಸಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ (ಮತ್ತು ಅದರಲ್ಲಿ ಸಮಾಧಾನವನ್ನು ಕಂಡುಕೊಳ್ಳುತ್ತಾರೆ). ನಂತರ ಸ್ವಲ್ಪ ಸಮಯದ ವಿರಾಮದ ಬಳಿಕ ತಮ್ಮ ಸೇವೆಯನ್ನು ಮತ್ತೆ ಮುಂದುವರಿಸುತ್ತಾರೆ. ಅವರು ವ್ಯಭಿಚಾರವನ್ನು ಮಾಡಿದ ದಾವೀದನನ್ನು, ಮತ್ತು ಮನಗುಂದಿದ ಎಲೀಯನನ್ನು ಉದಾಹರಣೆಯಾಗಿ ತೋರಿಸುತ್ತಾರೆ, ಮತ್ತು "ಆದಾಗ್ಯೂ ದೇವರು ಅವರನ್ನು ಉಪಯೋಗಿಸಿಕೊಂಡರು" ಎಂದು ಹೇಳುತ್ತಾರೆ! ಆದರೆ ಅವರು ಪೌಲನು ತನ್ನ ಜೀವಿತದ ಕೊನೆಯ ವರೆಗೆ ಜಯಶಾಲಿಯಾಗಿಯೂ, ಪವಿತ್ರತೆಯಿಂದಲೂ ಜೀವಿಸಿದ್ದನ್ನು ಮಾತ್ರ ಉಲ್ಲೇಖಿಸುವುದಿಲ್ಲ.

ಇಂದು ಹಳೆ ಒಡಂಬಡಿಕೆಯ ದೇವಭಕ್ತರು ನಮಗೆ ಉದಾಹರಣೆಯಾಗಿಲ್ಲ, ಎಂಬುದನ್ನು ಈ ಬೋಧಕರು (ಮತ್ತು ಹೆಚ್ಚಿನ ಕ್ರೈಸ್ತ ವಿಶ್ವಾಸಿಗಳು) ಕಂಡುಕೊಂಡಿಲ್ಲ. ಈ ಕೃಪೆಯ ಕಾಲದಲ್ಲಿ ನಮಗೆ ಬಹಳ ಹೆಚ್ಚಿನದ್ದು ಕೊಡಲ್ಪಟ್ಟಿದೆ ಮತ್ತು "ಯಾವನಿಗೆ ಬಹಳವಾಗಿ ಕೊಟ್ಟಿದೆಯೋ ಅವನಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು"(ಲೂಕ. 12:48). ಯೇಸುವು ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ ಮತ್ತು ಈ ದಿನ ಆತನು ನಮಗೆ ಮಾದರಿಯಾಗಿದ್ದಾನೆ ಮತ್ತು ನಮ್ಮ ನಂಬಿಕೆಯನ್ನು ಹುಟ್ಟಿಸುವವನು ಆಗಿದ್ದಾನೆ - ದಾವೀದನು ಅಥವಾ ಎಲೀಯನು ನಮ್ಮ ಮಾದರಿಯಲ್ಲ. ಹಳೆ ಒಡಂಬಡಿಕೆಯ ದೇವಭಕ್ತರು (’ಇಬ್ರಿಯರಿಗೆ ಅಧ್ಯಾಯ 11'ರಲ್ಲಿ ಪಟ್ಟಿ ಮಾಡಲ್ಪಟ್ಟಿರುವವರು) ಮತ್ತು ಯೇಸುವಿನ ನಡುವಿನ ವ್ಯತ್ಯಾಸವು ’ಇಬ್ರಿಯರಿಗೆ 12:1-4' ರಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಲ್ಪಟ್ಟಿದೆ. ಆದರೆ ಕೇವಲ ಕೆಲವರು ಇದನ್ನು ಅರ್ಥಮಾಡಿಕೊಂಡು ಜೀವಿಸುತ್ತಾರೆ. ದೇವರು ಹೊಸ ಒಡಂಬಡಿಕೆಯಲ್ಲಿ "ನಮಗೊಸ್ಕರ ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿದ್ದಾರೆ"(ಇಬ್ರಿ. 11:40) ಎಂಬುದನ್ನು ಕೆಲವರು ಮಾತ್ರವೇ ಕಂಡುಕೊಂಡಿದ್ದಾರೆ.

ನಾವು ಜಾಗರೂಕರಾಗಿಯೂ, ಎಚ್ಚರಿಕೆಯಿಂದಲೂ ಇರದಿದ್ದರೆ, ನಮ್ಮಲ್ಲಿ ಯಾರೇ ಆದರೂ ಅನೇಕ ಬೋಧಕರು ಬಿದ್ದಂತೆಯೇ ಬೀಳಬಹುದು - ಏಕೆಂದರೆ ಸೈತಾನನು ಬಹಳ ಕುಯುಕ್ತಿಯುಳ್ಳ ಶತ್ರುವಾಗಿದ್ದಾನೆ. ನಮ್ಮ ರಕ್ಷಣೆಯು ನಾವು ಹೊಸ ಒಡಂಬಡಿಕೆಯ ಬೋಧನೆಗೆ ನಿಖರವಾಗಿ ವಿಧೇಯರಾಗುವುದರಲ್ಲಿ ಮತ್ತು ದೇವಭಕ್ತ ನಾಯಕರಿಗೆ ಒಳಪಡುವುದರಲ್ಲಿದೆ (ದೇವಭಕ್ತ ನಾಯಕರೆಂದರೆ, ನಾನು ಮೇಲೆ ತಿಳಿಸಿರುವ 10 ತಪ್ಪಾದ ಅಂಶಗಳಲ್ಲಿ ಯಾವುದೇ ಒಂದು ತಪ್ಪನ್ನೂ ಮಾಡದವರು). ನಾವು ಇತರರ ತಪ್ಪಿನಿಂದ ಕಲಿತುಕೊಂಡರೆ, ನಾವು ಅದೇ ತಪ್ಪನ್ನು ಮಾಡದೇ ಇರಬಹುದು.

ಆದ್ದರಿಂದ ನಾವು ನಮ್ಮ ಮುಖವನ್ನು ಯಾವಾಗಲೂ ಕರ್ತನ ಮುಂದೆ ಧೂಳಿನಲ್ಲಿ ಇರಿಸೋಣ - ಏಕೆಂದರೆ ಅಲ್ಲಿ ಯೋಹಾನನಿಗೆ ದೈವಿಕ ಜ್ಞಾನವು ಪ್ರಕಟವಾದಂತೆ (ಪ್ರಕಟನೆ 1:17) ನಮಗೂ ಪ್ರಕಟವಾಗುತ್ತದೆ. ನಮ್ಮನ್ನು ನಾವು ತಗ್ಗಿಸಿಕೊಂಡರೆ, ಜಯಶಾಲಿಗಳಾಗಲು ಬೇಕಾದ ಕೃಪೆಯು ನಮಗೆ ಸಿಗುತ್ತದೆ (1 ಪೇತ್ರ. 5:5). ಪವಿತ್ರಾತ್ಮನು ನಮಗೆ ದೇವರ ವಾಕ್ಯದ ಬಗ್ಗೆ ಮತ್ತು ನಮ್ಮ ಬಗ್ಗೆ ಸತ್ಯವನ್ನು ತೋರಿಸುವಾಗ, ನಾವು ಯಥಾರ್ಥವಾದ ಪ್ರಾಮಾಣಿಕತೆಯಿಂದ ಎಲ್ಲಾ ಪಾಪಗಳಿಂದ "ರಕ್ಷಣೆಯನ್ನು ಹೊಂದುವಂತೆ ಸತ್ಯವನ್ನು ಪ್ರೀತಿಸೋಣ". ಆಗ ಸ್ವತಃ ದೇವರು ನಮ್ಮನ್ನು ಎಲ್ಲಾ ವಂಚನೆಗಳಿಂದ ಕಾಪಾಡುತ್ತಾರೆ (2 ಥೆಸ. 2:10,11). ಆಮೇನ್.