ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಮನೆ ಸಭೆ
WFTW Body: 

ದೇವರನ್ನು ಸನ್ಮಾನಿಸುವುದರಿಂದ ಉಂಟಾಗುವ ಆಶೀರ್ವಾದದ ಒಂದು ಉದಾಹರಣೆಯು ನಮಗೆ ಕಾನಾ ಊರಿನ ಮದುವೆಯಲ್ಲಿ ಸಿಗುತ್ತದೆ (ಯೋಹಾನನು 2:1-11). ಇಲ್ಲಿ ನಾವು ಗಮನಿಸಬಹುದಾದ ಸಂಗತಿಯೆಂದರೆ, ಯೇಸುವು ಮೊದಲ ಬಾರಿಗೆ ತನ್ನ ಮಹಿಮೆಯನ್ನು ಪ್ರಕಟಪಡಿಸಲು ನಿರ್ಧರಿಸಿದ್ದು ಒಂದು ಮದುವೆಯ ಸಂದರ್ಭದಲ್ಲಿ ಆಗಿತ್ತು. ಇಂದು ಸಹ, ಯೇಸುವು ತನ್ನ ಮಹಿಮೆಯನ್ನು ಪ್ರತಿಯೊಂದು ಮದುವೆಯ ಸಮಾರಂಭದಲ್ಲಿ ಮತ್ತು ಪ್ರತಿಯೊಂದು ವಿವಾಹಿತ ಕುಟುಂಬದಲ್ಲಿ ಪ್ರಕಟಿಸಲು ಬಯಸುತ್ತಾರೆ. ಲೈಂಗಿಕತೆ, ಪ್ರೀತಿ ಮತ್ತು ವಿವಾಹ ಇವು ಆತನು ನಮಗೆ ನೀಡಿರುವ ಅತೀ ಅಮೂಲ್ಯ ಕೊಡುಗೆಗಳಲ್ಲಿ ಸೇರಿವೆ ಮತ್ತು ಇವುಗಳ ಮೂಲಕ ಆತನು ತನ್ನ ಮಹಿಮೆಯನ್ನು ನಮಗೆ ತೋರಿಸುವುದು ಮಾತ್ರವಲ್ಲದೆ, ನಮ್ಮ ಜೀವಿತದ ಮೂಲಕ ಇತರರಿಗೂ ಕೂಡ ಆ ಮಹಿಮೆಯನ್ನು ತೋರಿಸುತ್ತಾನೆ - ಆದರೆ ಇದಕ್ಕಾಗಿ ನಾವು ಆತನಿಗೆ ಅವಕಾಶ ನೀಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಕಾನಾ ಊರಿನ ದ್ರಾಕ್ಷಾರಸದ ಕೊರತೆಯು, ಪ್ರತಿಯೊಂದು ವಿವಾಹಿತ ಕುಟುಂಬವೂ ಸಮಸ್ಯೆಗಳನ್ನು ಮತ್ತು ಕೊರತೆಗಳನ್ನು ಎದುರಿಸುತ್ತದೆ ಎಂಬ ಅಂಶವನ್ನು ಸೂಚಿಸುತ್ತದೆ. ಈ ಸಮಸ್ಯೆಗಳು ಬಹಳ ಸಮಯದವರೆಗೆ ಮುಂದುವರಿದರೆ ಗಂಡ ಮತ್ತು ಹೆಂಡತಿ ಇಬ್ಬರೂ ಹತಾಶೆ ಮತ್ತು ನಿರಾಶೆಗೆ ಒಳಗಾಗಬಹುದು. ಆದರೆ ಒಂದು ಮದುವೆಯಲ್ಲಿ ಯೇಸುವಿಗೆ ಸರ್ವಶ್ರೇಷ್ಠ ಸ್ಥಾನವನ್ನು ಕೊಟ್ಟಾಗ, ಕಾನಾ ಊರಿನಲ್ಲಿ ನಡೆದಂತೆ, ಯೇಸುವು ಬಹು ಬೇಗನೆ ಸಮಸ್ಯೆಗಳನ್ನು ನೀಗಿಸುತ್ತಾರೆ ಮತ್ತು ಅಗತ್ಯತೆಗಳನ್ನು ಪೂರೈಸುತ್ತಾರೆ.

ನಮ್ಮ ಮನೆಗೆ ಕ್ರಿಸ್ತನನ್ನು ಒಬ್ಬ ಅತಿಥಿಯಾಗಿ ಆಹ್ವಾನಿಸಿದರೆ ಸಾಲದು; ಆತನು ನಮ್ಮ ಮನೆಯ ಮುಖ್ಯಸ್ಥನಾಗಬೇಕು. ಮನೆಯಲ್ಲಿ "ಕ್ರಿಸ್ತನೇ ಈ ಮನೆಯ ಒಡೆಯನು" ಎನ್ನುವ ಫಲಕವನ್ನು ತೂಗುಹಾಕಿದ್ದರೂ, ಅಲ್ಲಿ ವಾಸ್ತವವಾಗಿ ಗಂಡನೇ (ಅಥವಾ ಹೆಂಡತಿಯೇ!) ಯಜಮಾನನಾಗಿದ್ದರೆ, ಅದು ಕೇವಲ ಒಂದು ಅಪಹಾಸ್ಯದ ಸಂಗತಿಯಾಗುತ್ತದೆ. ಆದರೆ ಎಲ್ಲಿ ಕ್ರಿಸ್ತನನ್ನು ಯಥಾರ್ಥವಾಗಿ ಕುಟುಂಬದ ಶಿರಸ್ಸು ಮತ್ತು ಕರ್ತನೆಂದು ಸ್ವೀಕರಿಸುತ್ತಾರೋ, ಅಲ್ಲಿ ಯೇಸುವು ತನ್ನ ಮಹಿಮೆಯನ್ನು ಎರಡು ಸಾವಿರ ವರ್ಷಗಳ ಹಿಂದೆ ಕಾನಾ ಊರಿನಲ್ಲಿ ಮಾಡಿದ ಹಾಗೆಯೇ ಸ್ಪಷ್ಟವಾಗಿ ತೋರಿಸುತ್ತಾರೆ (ಯೋಹಾನನು 2:11).

"ಕಾನಾ ಊರಿನಲ್ಲಿ ದ್ರಾಕ್ಷಾರಸವು ಸಾಲದೆ ಹೋದಾಗ, ಅವರು ಕರ್ತನ ಕಡೆಗೆ ತಿರುಗಿಕೊಂಡರು ಮತ್ತು ಆತನು ಅವರ ಕೈ ಬಿಡಲಿಲ್ಲ. ಅದೇ ರೀತಿ ನೀವು ನಿಮ್ಮ ಅಗತ್ಯತೆಯ ಸಮಯದಲ್ಲಿ ಆತನ ಬಳಿಗೆ ಹೋದರೆ, ಆತನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ."

ಯೇಸುವಿನ ತಾಯಿ ಮರಿಯಳು ಕಾನಾದ ಆ ಸೇವಕರಿಗೆ, "ಆತನು ನಿಮಗೆ ಏನು ಹೇಳುತ್ತಾನೋ ಹಾಗೆಯೇ ಮಾಡಿರಿ," ಎಂದು ಸಲಹೆಯನ್ನು ನೀಡಿದಳು (ಯೋಹಾ. 2:5). ಅವರು ಆ ಸಲಹೆಯಂತೆ ನಡೆದರು ಮತ್ತು ತಕ್ಷಣವೇ ಯೇಸುವಿಗೆ ಸಂಪೂರ್ಣವಾಗಿ ವಿಧೇಯರಾದರು - ಮತ್ತು ಆ ಸಮಸ್ಯೆಯು ಬೇಗನೆ ಪರಿಹಾರವಾಯಿತು. ಮದುವೆಯಾದ ದಂಪತಿಗಳು (ಮತ್ತು ಮದುವೆಗೆ ತಯಾರಾಗುತ್ತಿರುವ ಯೌವನಸ್ಥರು) ಈ ಸಲಹೆಯನ್ನು ಇದೇ ರೀತಿ ಸ್ವೀಕರಿಸಿ, ಕರ್ತನ ಆಜ್ಞೆಗಳನ್ನು ತಕ್ಷಣ ಸಂಪೂರ್ಣವಾಗಿ ಪಾಲಿಸುವುದಾದರೆ, ಅವರ ಸಮಸ್ಯೆಗಳು ಬಹಳಷ್ಟು ಬೇಗನೆ ಪರಿಹಾರವಾಗುತ್ತವೆ!

ಆ ಮದುವೆಯಲ್ಲಿ ನೀರು ದ್ರಾಕ್ಷಾರಸವಾಗಿ ಬದಲಾಯಿತು. ಆ ರುಚಿಯಿಲ್ಲದ, ಬಣ್ಣವಿಲ್ಲದ ಮತ್ತು ಸಾಮಾನ್ಯ ವಸ್ತುವು (ನೀರು), ಒಂದೇ ಕ್ಷಣದಲ್ಲಿ ಸಿಹಿಯಾದ, ಮಿನುಗುವ ಮತ್ತು ಬೆಲೆಬಾಳುವ ವಸ್ತುವಾಗಿ (ದ್ರಾಕ್ಷಾರಸ) ಮಾರ್ಪಟ್ಟಿತು. ಇದು ಏನನ್ನು ಸೂಚಿಸುತ್ತದೆ ಎಂದರೆ, ಮನೆಯ ಸಂಪೂರ್ಣ ನಿಯಂತ್ರಣವು ಕರ್ತನಿಗೆ ಒಪ್ಪಿಸಲ್ಪಟ್ಟಾಗ, ವೈವಾಹಿಕ ಜೀವನದ ಸಾಮಾನ್ಯ ಸಂಗತಿಗಳು (ದಿನಾಲೂ ಮಾಡಬೇಕಾದ, ಬೇಸರ ತರುವ, ಕಠಿಣ ಹಾಗೂ ನೀರಸ ಕಾರ್ಯಗಳೂ ಸೇರಿದಂತೆ), ಸ್ವಲ್ಪ ಸ್ವಲ್ಪವಾಗಿ ಆಕರ್ಷಕ ಮತ್ತು ಉಲ್ಲಾಸಭರಿತ ಸಂಗತಿಗಳಾಗಿ ಬದಲಾಗುತ್ತವೆ. ರುಚಿಕರವಲ್ಲದ್ದು ಸಿಹಿಯಾಗುತ್ತದೆ, ಮತ್ತು ಹಿಂದೆ ಸಾಮಾನ್ಯ ಸಂಗತಿಯೆಂದು ಕಡೆಗಣಿಸಲಾದ ವಿಷಯಗಳು ಅತ್ಯಂತ ಅಮೂಲ್ಯ ವಿಷಯಗಳಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಅನೇಕ ಜನರ ಅವಶ್ಯಕತೆಗಳು ಕೂಡ ಆ ಒಂದು ಪವಾಡದಿಂದಾಗಿ ಪೂರೈಸಲ್ಪಟ್ಟವು. ಒಂದು ಕ್ರೈಸ್ತ ವಿವಾಹವು ಪತಿಪತ್ನಿಗೆ ಮಾತ್ರ ಸಂತೋಷ ನೀಡುವುದರಿಂದ ತನ್ನ ಉದ್ದೇಶವನ್ನು ಪೂರೈಸಲಾರದು. ಮದುವೆಯಾದ ದಂಪತಿಗಳಿಗಾಗಿ ದೇವರ ಉದ್ದೇಶವೇನೆಂದರೆ, ಅವರ ಪಾತ್ರೆಯು "ನಿರಂತರವಾಗಿ ತುಂಬಿ ಹೊರಸೂಸಬೇಕು" (ಕೀರ್ತನೆಗಳು 23:5). ಅವರು ಇತರ ಅನೇಕರಿಗೆ - ವಾಸ್ತವವಾಗಿ ಅವರನ್ನು ಭೇಟಿಯಾಗುವ ಪ್ರತಿಯೊಬ್ಬರಿಗೆ - ಆಶೀರ್ವಾದದ ಸಾಧನವಾಗಬೇಕು. ದೇವರು ಒಮ್ಮೆ ತಮ್ಮ ವಿಧೇಯ ಸೇವಕನಿಗೆ ಹೀಗೆಂದರು, "ನಾನು ನಿನ್ನನ್ನು ಅಶೀರ್ವದಿಸುವೆನು ...ಮತ್ತು ನೀನು ಇತರರಿಗೆ ಒಳ್ಳೆಯದನ್ನು ಮಾಡುವುದರ ಮೂಲಕ ಆಶೀರ್ವಾದ ನಿಧಿಯಾಗುವಿ... (ಇದಲ್ಲದೆ) ನಿನ್ನ ನಿಮಿತ್ತವಾಗಿ ಭೂಲೋಕದ ಎಲ್ಲಾ ಕುಟುಂಬಗಳಿಗೂ, ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು" (ಆದಿಕಾಂಡ 12:2,3). ಗಲಾತ್ಯದವರಿಗೆ 3:13'ರ ಪ್ರಕಾರ, ದೇವರು ಈ ಆಶೀರ್ವಾದವನ್ನು ನಮಗೂ ಸಹ ನೀಡಿದ್ದಾರೆ. ದಾಂಪತ್ಯ ಜೀವನದಲ್ಲಿ ಈ ಶ್ರೇಷ್ಠ ಗುರಿಗಿಂತ ದೊಡ್ಡದು ಬೇರೇನಾದರೂ ಇದೆಯೇ? ಆದರೆ ನಾವು ಇತರರಿಗೆ ಎಷ್ಟರ ಮಟ್ಟಿಗೆ ಆಶೀರ್ವಾದವಾಗುತ್ತೇವೆ ಎಂಬುದು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ದೇವರಿಗೆ ಎಷ್ಟು ವಿಧೇಯರಾಗಿದ್ದೇವೋ ಅದೇ ಅಳತೆಯಲ್ಲಿ ಇರುತ್ತದೆ. ಕರ್ತನು ಅಬ್ರಹಾಮನಿಗೆ ಹೇಳಿದ ಮಾತು, "ನೀನು ನನ್ನ ಮಾತನ್ನು ಕೇಳಿ ಅದನ್ನು ಪಾಲಿಸಿದ್ದರಿಂದ, ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು" (ಆದಿಕಾಂಡ 22:18).

ಕಾನಾ ಊರಿನ ಈ ಮಹತ್ಕಾರ್ಯವು ಲೈಂಗಿಕತೆ, ಪ್ರೀತಿ ಮತ್ತು ಮದುವೆಯ ವಿಷಯಗಳಲ್ಲಿ ದೊಡ್ಡ ತಪ್ಪು ಮಾಡಿ ಪರಿಸ್ಥಿತಿಯನ್ನು ಕೆಡಿಸಿಕೊಂಡಿರುವ ಜನರಿಗೂ ಸಹ ನಿರೀಕ್ಷೆಯನ್ನು ಕೊಡುವ ಸಂದೇಶವಾಗಿದೆ. ಕಾನಾದಲ್ಲಿ ದ್ರಾಕ್ಷಾರಸವು ಸಾಲದೆ ಹೋದಾಗ, ಅವರು ಕರ್ತನ ಕಡೆಗೆ ತಿರುಗಿಕೊಂಡರು ಮತ್ತು ಆತನು ಅವರನ್ನು ನಿರಾಸೆಗೊಳಿಸಲಿಲ್ಲ. ನೀವು ಸಹ ನಿಮ್ಮ ಕೊರತೆಯ ಸಮಯದಲ್ಲಿ - ನಿಮ್ಮ ತಪ್ಪುಗಳು ಎಷ್ಟೇ ದೊಡ್ಡದಾಗಿದ್ದರೂ - ಆತನ ಬಳಿಗೆ ಹೋದರೆ, ಆತನು ನಿಮ್ಮನ್ನು ಕೈಬಿಡುವುದಿಲ್ಲ. ನೀವು ನಿಮ್ಮ ಅವಶ್ಯಕತೆಯ ಬಗ್ಗೆ ಯಥಾರ್ಥರಾಗಿ ಇರಬೇಕೆಂದು (ಕಾನಾದವರು ಯಥಾರ್ಥರಾಗಿದ್ದಂತೆಯೇ) ಮತ್ತು ನಿಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕೆಂದು ಮಾತ್ರ ಆತನು ಕೇಳುತ್ತಾನೆ. ನೀನು ನಿನ್ನ ಮೂರ್ಖತನದಿಂದ ಆ ಹುಡುಗಿಯೊಂದಿಗೆ (ಅಥವಾ ಆ ಹುಡುಗನೊಂದಿಗೆ) ಮಿತಿ ಮೀರಿ ನಡೆದುಕೊಂಡಿದ್ದೀಯಾ? ಪ್ರೀತಿಯ ವಿಷಯದಲ್ಲಿ ನೀನು ದೊಡ್ಡ ತಪ್ಪನ್ನು ಮಾಡಿದ್ದೀಯಾ - ಒಂದು ವೇಳೆ ನಿನ್ನ ಅಜ್ಞಾನದಿಂದ ಹೀಗೆ ಮಾಡಿರಬಹುದು. ಇದರ ಫಲವಾಗಿ ಈಗ ನೀನು ಮುಜುಗರಕ್ಕೆ ಮತ್ತು ಹತಾಶೆಗೆ ಒಳಗಾಗಿದ್ದೀಯಾ? ನಿನ್ನನ್ನು ಇತರರು ತಪ್ಪಾಗಿ ಅರ್ಥ ಮಾಡಿಕೊಂಡು ದೂಷಿಸುತ್ತಿದ್ದಾರಾ - ಅಥವಾ ನಿನ್ನನ್ನು ಅಪನಿಂದೆ ಮಾಡುತ್ತಿದ್ದಾರಾ? ಹಾಗಿದ್ದರೆ ತಕ್ಷಣವೇ ಕರ್ತನ ಕಡೆಗೆ ತಿರುಗಿಕೋ, ಒಂದು ಕ್ಷಣವೂ ತಡ ಮಾಡಬೇಡ. ಆತನು ಪಾಪಿಗಳ ಮಿತ್ರನಾಗಿದ್ದಾನೆ. ಆತನು ನಿನ್ನ ಪಾಪವನ್ನು ಕ್ಷಮಿಸುವುದಕ್ಕೆ ಮಾತ್ರವಲ್ಲದೆ, ಸೈತಾನನು ನಿನ್ನ ಜೀವನದಲ್ಲಿ ತಂದಿರುವ ಅವ್ಯವಸ್ಥೆಯನ್ನು ಸಹ ಸರಿಪಡಿಸಲು ಕಾಯುತ್ತಿದ್ದಾನೆ. ಆತನು ಈ ಎರಡು ಉದ್ದೇಶಗಳನ್ನು ಪೂರೈಸಲಿಕ್ಕಾಗಿಯೇ ಈ ಲೋಕಕ್ಕೆ ಬಂದನು (1 ಯೋಹಾನನು 3:5,8). ನೀನು ನಿರಾಶೆಗೆ ಅವಕಾಶ ನೀಡಬೇಡ. ಯಾಕೆಂದರೆ ನಿನಗೂ ಕೂಡ ನಿರೀಕ್ಷೆಯಿದೆ. ಕರ್ತನು ಕಾನಾ ಊರಿನ ಮದುವೆಯಲ್ಲಿ ಕೊರತೆಯನ್ನು ನೀಗಿಸಿ ಎಲ್ಲವನ್ನೂ ಸರಿಪಡಿಸಿದನು, ಮತ್ತು ನಿನ್ನ ಜೀವನದಲ್ಲೂ ಆತನು ಪ್ರತಿಯೊಂದು ಕೊರತೆಯನ್ನು ನೀಗಿಸಿ ಎಲ್ಲವನ್ನೂ ಸರಿಪಡಿಸಲು ಶಕ್ತನಾಗಿದ್ದಾನೆ. ಕರ್ತನು ಕಾನಾ ಊರಿನಲ್ಲಿ ತನ್ನ ಮಹಿಮೆಯನ್ನು ಪ್ರಕಟಿಸಿದನು, ಮತ್ತು ಆತನು ನಿನ್ನ ವಿಷಯದಲ್ಲೂ ಇದನ್ನೇ ಮಾಡಬಲ್ಲನು.

ನೀವು ಒಂದು ವೇಳೆ ನಿರಾಶೆಯನ್ನು ಎದುರಿಸುತ್ತಿದ್ದರೆ, ಕ್ರೈಸ್ತ ಜೀವಿತದಲ್ಲಿ ನಿಜವಾದ ಧನ್ಯತೆ ಬರುವುದು ಕೊಡುವುದರಿಂದಲೇ ಹೊರತು ತೆಗೆದುಕೊಳ್ಳುವುದರಿಂದ ಅಲ್ಲ, ಎಂಬ ವಿಷಯದಿಂದ ಧೈರ್ಯ ಹೊಂದಿರಿ (ಅಪೋಸ್ತಲರ ಕೃತ್ಯಗಳು 20:35). ನಿಮ್ಮ ಆಸೆಗಳು ನೆರವೇರದಿದ್ದಾಗಲೂ, ದೇವರು ಎಲ್ಲಾ ಕಾರ್ಯಗಳು ನಿಮ್ಮ ಹಿತಕ್ಕಾಗಿ ನಡೆಯುವಂತೆ ಮಾಡಲು ಶಕ್ತರಾಗಿದ್ದಾರೆ ಮತ್ತು ನೀವು ಹೇರಳವಾದ ಜೀವಿತವನ್ನು ಜೀವಿಸಿ ಅವರನ್ನು ಮಹಿಮೆಪಡಿಸಲು ನಿಮಗೆ ಸಹಾಯ ಮಾಡುತ್ತಾರೆ.