ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ಕರ್ತರು ನನ್ನನ್ನು ಹೇಗೆ ನಡೆಸಿದ್ದಾರೆಂದು ನಾನು ನನ್ನ ಜೀವಿತದಲ್ಲಿ ಅನೇಕ ಬಾರಿ ಯೋಚಿಸಿದ್ದೇನೆ ಮತ್ತು ಅದು ನನ್ನ ನಂಬಿಕೆಗೆ ಹೊಸ ಚೈತನ್ಯ ನೀಡಿದೆ. ನಾನು ಯಾವುದೋ ಕಷ್ಟಕರ ಸನ್ನಿವೇಶವನ್ನು ಎದುರಿಸುವಾಗ ಮತ್ತು ಅದಕ್ಕೆ ಪರಿಹಾರವೇನೆಂದು ತಿಳಿಯದಿದ್ದಾಗ, ನಾನು ಸತ್ಯವೇದದ ವಾಗ್ದಾನಗಳನ್ನು ನೆನಪಿಸಿಕೊಳ್ಳುತ್ತೇನೆ ಮತ್ತು ಇತರ ವಿಶ್ವಾಸಿಗಳು ನನಗೆ ನೀಡುವ ಉತ್ತೇಜನವನ್ನು ಕೇಳಿಸಿಕೊಳ್ಳುತ್ತೇನೆ. ಆದರೆ ಇವೆಲ್ಲಕ್ಕೂ ಹೆಚ್ಚಾಗಿ, ನಾನು ಹಿಂದಿನ ಘಟನೆಗಳನ್ನು ತಿರುಗಿ ನೋಡಿದಾಗ, ನನ್ನ ನಂಬಿಕೆಯು ಬಲಗೊಳ್ಳುತ್ತದೆ. "ಇದು ವರೆಗೆ ನಾನು ಒಂದು ಬಾರಿಯಾದರೂ ನಿನ್ನ ಕೈ ಬಿಟ್ಟಿದ್ದೇನೆಯೇ?" ಎಂದು ಕರ್ತರು ನನ್ನನ್ನು ಪ್ರಶ್ನಿಸುತ್ತಾರೆ. ನನ್ನ ಉತ್ತರ, "ಇಲ್ಲ ಕರ್ತರೇ. ಒಂದು ಬಾರಿಯೂ ನೀವು ಕೈ ಬಿಟ್ಟಿಲ್ಲ". ಆಗ ಅವರು ಹೀಗೆನ್ನುತ್ತಾರೆ, "ಈಗಲೂ ನಾನು ನಿನ್ನ ಕೈ ಬಿಡುವುದಿಲ್ಲ". ಇದು ಬೇರೆಲ್ಲಾ ಸಂಗತಿಗಳಿಗಿಂತ ಹೆಚ್ಚಾಗಿ ನನ್ನನ್ನು ಉತ್ತೇಜಿಸುತ್ತದೆ.

ನೀನು ಮತ್ತೊಮ್ಮೆ ಬಿದ್ದುಹೋಗಿದ್ದೀಯಾ? ಹಿಂದಿನ ದಿನಗಳನ್ನು ನೆನಪಿಸಿಕೋ ಮತ್ತು ಹಿಂದೆ ಕರ್ತರು ಯಾವ ರೀತಿ ನಿನ್ನನ್ನು ಕ್ಷಮಿಸಿದರೆಂದು ನೋಡು. ಅವರು ನಿನ್ನನ್ನು ಕ್ಷಮಿಸಿದಾಗ, ನೀನು ಮತ್ತೊಮ್ಮೆ ಬೀಳುವೆಯೆಂದು ಅವರಿಗೆ ತಿಳಿದಿರಲಿಲ್ಲವೇ? ನೀನು ಮತ್ತೊಮ್ಮೆ ಬಿದ್ದಾಗ ಅವರಿಗೆ ಆಶ್ಚರ್ಯವಾಯಿತೇ? ಇಲ್ಲ. ಹಾಗಿದ್ದಲ್ಲಿ ಅವರು ಮತ್ತೊಮ್ಮೆ ನಿನ್ನನ್ನು ಕ್ಷಮಿಸುತ್ತಾರೆ. ಹಿಂದಿನ ಸಂಗತಿಗಳನ್ನು ಕೃತಜ್ಞತೆಯಿಂದ ನೆನಪಿಸಿಕೋ. ಅದು ನಿನ್ನ ನಂಬಿಕೆಯನ್ನು ಬಲಪಡಿಸುವುದು. ನಿನ್ನಲ್ಲಿ ಕರ್ತರ ಕರುಣೆಗಾಗಿ ಕೃತಜ್ಞತೆಯಿರಲಿ. ನೀನು ನಿನ್ನ ಹಿಂದಿನ ಸೋಲುಗಳನ್ನು ತಿರುಗಿ ನೋಡಿದಾಗ, ನಿನ್ನ ಸುತ್ತಲೂ ಇರುವಂತ ಸೋತಿರುವ ಸಹ-ವಿಶ್ವಾಸಿಗಳನ್ನು ಕರುಣೆಯಿಂದ ನೋಡಬೇಕೆಂದು ನೀನು ತಿಳಿದುಕೊಳ್ಳುವೆ.

ನಾವು ತಲೆಯೆತ್ತಿ ಕರ್ತರನ್ನು ನೋಡುವುದನ್ನು ಮತ್ತು ಅವರ ಮಹಿಮೆಯನ್ನು ಹೆಚ್ಚು ಹೆಚ್ಚಾಗಿ ಕಾಣುವುದನ್ನು ನಿಲ್ಲಿಸಬಾರದು. ಯೇಸುವಿನ ಮಹಿಮೆಯ ಬಹಳಷ್ಟು ಅಂಶವನ್ನು ನಾವು ಇನ್ನೂ ನೋಡಿಲ್ಲ. ನಾವು ಇದಕ್ಕಾಗಿ ಹಂಬಲಿಸಬೇಕು, ಏಕೆಂದರೆ ನಮ್ಮನ್ನು ಕರ್ತರ ಈ ಸಾರೂಪ್ಯಕ್ಕೆ ಬದಲಾಯಿಸಬೇಕೆಂದು ಪವಿತ್ರಾತ್ಮನು ತವಕಿಸುತ್ತಾನೆ. ನಾವು ಕರ್ತರ ಮಹಿಮೆಯನ್ನು ನೋಡುತ್ತಿರುವಾಗ, ಅದರ ಪರಿಣಾಮವಾಗಿ ನಮ್ಮಲ್ಲಿ ದೀನತೆ ಉಂಟಾಗುತ್ತದೆ, ಏಕೆಂದರೆ ಆಗ ನಾವು ನಮ್ಮ ಸ್ವಂತ ಕೊರತೆಯನ್ನು ಕಂಡುಕೊಳ್ಳುತ್ತೇವೆ. ನಮ್ಮ ಜೀವಿತದ ಕೊನೆಯ ವರೆಗೆ ದೀನರಾಗಿ ಮುಂದುವರಿಯುವ ರಹಸ್ಯ ಇದಾಗಿದೆ.

ಒಬ್ಬ ಮನುಷ್ಯನು ದೇವರಿಂದ ಅಭಿಷೇಕಿಸಲ್ಪಟ್ಟು ಯಾವುದೋ ವಿಶೇಷ ಕಾರ್ಯಕ್ಕಾಗಿ ಬಳಸಲ್ಪಟ್ಟಾಗ, ಆತನು ಬಹಳ ಸುಲಭವಾಗಿ ಗರ್ವಿಷ್ಠನಾಗುತ್ತಾನೆ. ನಾನು ಇಂತಹ ಅನೇಕ ಬೋಧಕರನ್ನು ಕಂಡಿದ್ದೇನೆ. ದೇವರು ಅವರನ್ನು ಬಳಸಿಕೊಂಡದ್ದರಿಂದ, ಅವರು ಬಹಳ ಗರ್ವಿಗಳಾಗುತ್ತಾರೆ ಮತ್ತು ಜನರಿಂದ ಬಹಳ ದೂರ ಸರಿಯುತ್ತಾರೆ. ನಾವು ನಮ್ಮ ಜೀವಿತದ ಕೊನೆಯ ವರೆಗೆ ಮುರಿಯಲ್ಪಟ್ಟವರು ಮತ್ತು ದೀನರಾಗಿ ಉಳಿದುಕೊಳ್ಳಲು ಏನು ಮಾಡಬೇಕು? ನಾವು ಮಾಡಬೇಕಾದ ಒಂದೇ ಒಂದು ಸಂಗತಿ: ನಮ್ಮ ನಂಬಿಕೆಯನ್ನು ಹುಟ್ಟಿಸುವಂತ ಮತ್ತು ಪರಿಪೂರ್ಣ ಗೊಳಿಸುವಂತ ಯೇಸುವನ್ನೇ ದೃಷ್ಟಿಸುತ್ತಾ ಇರುವುದು. ನಾವು ಯೇಸುವನ್ನೇ ನೋಡುವುದಾದರೆ ಗರ್ವಿಷ್ಠರಾಗಲು ಸಾಧ್ಯವೇ ಇಲ್ಲ. ಒಬ್ಬ ವ್ಯಕ್ತಿಯು ತನ್ನನ್ನು ಇತರರೊಂದಿಗೆ ಹೋಲಿಸಿಕೊಳ್ಳಲು ಆರಂಭಿಸಿ, ತಾನು ಅವರಿಗಿಂತ ಉತ್ತಮನು, ಪವಿತ್ರಾತ್ಮನಿಂದ ಹೆಚ್ಚು ಅಭಿಷೇಕಿಸಲ್ಪಟ್ಟವನು, ಅವರಿಗಿಂತ ಹೆಚ್ಚಾಗಿ ದೇವರ ಕಾರ್ಯವನ್ನು ಮಾಡಿರುವಾತನು, ಇತ್ಯಾದಿಯಾಗಿ ಯೋಚಿಸುತ್ತಾ ಗರ್ವಿಷ್ಠನಾಗುತ್ತಾನೆ.

ಲೋಕದಲ್ಲಿ ಹೆಚ್ಚಿನ ಜನರು ಭವಿಷ್ಯವನ್ನು ಭಯ ಮತ್ತು ಚಿಂತೆಯಿಂದ ನೋಡುತ್ತಾರೆ. ಆದರೆ ನಾವು ನಂಬಿಕೆಯಿಂದ ಕಾಯುತ್ತಿದ್ದೇವೆ.

ಇದಕ್ಕೆ ಬದಲಾಗಿ, ಅವನು ತಲೆಯೆತ್ತಿ ಯೇಸುವನ್ನು ದೃಷ್ಟಿಸಿದರೆ - ಅಪೊಸ್ತಲ ಯೋಹಾನನು ಪತ್ಮೊಸ್ ದ್ವೀಪದಲ್ಲಿ ಮಾಡಿದಂತೆ - ಅವನು ಪಶ್ಚಾತಾಪ ಪಡುವನು ಮತ್ತು ಅಡ್ಡಬಿದ್ದು ತನ್ನ ಮುಖವನ್ನು ಧೂಳಿನಲ್ಲಿಡುವನು. ಅವನು ಎಡೆಬಿಡದೆ ಯೇಸುವನ್ನು ದೃಷ್ಟಿಸುತ್ತಿದ್ದರೆ, ತನ್ನ ಮುಖವನ್ನು ನಿರಂತರವಾಗಿ ಧೂಳಿನಲ್ಲಿಡುವನು. ನಾವು ಪ್ರತಿಯೊಬ್ಬರೂ ಎಲ್ಲಾ ವೇಳೆಯಲ್ಲಿ ನಮ್ಮ ಮುಖಗಳನ್ನು ಧೂಳಿನಲ್ಲಿ ಇರಿಸುವುದನ್ನು ಕಲಿಯುವುದು ಅವಶ್ಯವಾಗಿದೆ. ಅದೇ ಸುರಕ್ಷಿತ ಸ್ಥಳವಾಗಿದೆ. ಹಾಗಾಗಿ ನಿಮ್ಮ ಜೀವಿತದ ಕೊನೆಯ ವರೆಗೆ ದೇವರು ನಿಮ್ಮನ್ನು ನೋಡಿ ಸಂತೋಷಿಸಬೇಕೆಂದು ನೀವು ಬಯಸಿದರೆ, ತಲೆಯೆತ್ತಿ ದೇವರನ್ನೇ ನೋಡುತ್ತೀರಿ.

ದೇವರು ನಮಗಾಗಿ ಅದ್ಭುತ ಸಂಗತಿಗಳನ್ನು ಕಾಯ್ದಿರಿಸಿದ್ದಾರೆ. ಅವರು ನಮಗಾಗಿ ಒಂದು ಶ್ರೇಷ್ಠ ಕಾರ್ಯವನ್ನು ಯೋಜಿಸಿದ್ದಾರೆ. ನಾವು ಈ ಲೋಕವನ್ನು ಯಾವಾಗ ಬಿಡಬೇಕಾಗುತ್ತದೆಯೆಂದು ನಮಗೆ ತಿಳಿದಿಲ್ಲ. ಆದರೆ ಕರ್ತರು ತಿರುಗಿ ಬರುವುದಕ್ಕೆ ಮುಂಚೆ, ಈ ಲೋಕದಲ್ಲಿ ಅವರಿಗಾಗಿ ಯಾವುದಾದರೂ ಉಪಯುಕ್ತ ಕಾರ್ಯವನ್ನು ಮಾಡಲು ನಾವು ಆಸಕ್ತರಾಗಿದ್ದೇವೆ. ಲೋಕದಲ್ಲಿ ಹೆಚ್ಚಿನ ಜನರು ಭವಿಷ್ಯವನ್ನು ಭಯ ಮತ್ತು ಚಿಂತೆಯಿಂದ ನೋಡುತ್ತಾರೆ. ಆದರೆ ನಾವು ನಂಬಿಕೆಯಿಂದ ಕಾಯುತ್ತಿದ್ದೇವೆ.

ಧರ್ಮೋಪದೇಶಕಾಂಡ 11:21(KJV) ರಲ್ಲಿ, ಇಸ್ರಾಯೇಲ್ಯರಿಗಾಗಿ ದೇವರು ಏನು ಹಾರೈಸುತ್ತಾರೆಂದು ಮೋಶೆಯು ಅವರಿಗೆ ತಿಳಿಸಿದನು, "ನೀವು ನೆಲೆಗೊಳ್ಳುವ ದೇಶದಲ್ಲಿ ನಿಮ್ಮ ದಿನಗಳು ಹಾಗೂ ನಿಮ್ಮ ಮಕ್ಕಳ ದಿನಗಳು ಭೂಮಿಯ ಮೇಲೆ ಪರಲೋಕದ ದಿನಗಳಂತೆ ವೃದ್ಧಿಯಾಗಲಿ". ನಮ್ಮೆಲ್ಲರಿಗಾಗಿ ದೇವರ ಚಿತ್ತ ಇದೇ ಆಗಿದೆ - ಭೂಮಿಯ ಮೇಲೆ ನಮ್ಮ ದಿನಗಳು ಪರಲೋಕದ ದಿನಗಳಂತಿರಬೇಕು, ಎಂಬುದಾಗಿ. ನಮ್ಮ ಮನೆಗಳಲ್ಲಿ ಮತ್ತು ನಮ್ಮ ಕ್ರೈಸ್ತ ಸಭೆಗಳಲ್ಲಿ ನಾವು ಇದೀಗ ಸಂತೋಷ, ಸಮಾಧಾನ, ಪ್ರೀತಿ, ಪರಿಶುದ್ಧತೆ ಮತ್ತು ಒಳ್ಳೆಯತನವನ್ನು ರುಚಿಸಿ ನೋಡಬೇಕು, ಎನ್ನುವುದು ದೇವರ ಇಚ್ಛೆಯಾಗಿದೆ. ನಾನು ಸ್ವಲ್ಪ ಮಟ್ಟಿಗೆ ಇದನ್ನು ರುಚಿಸಿ ನೋಡಿದ್ದೇನೆ. ಹಾಗಾಗಿ ನನ್ನ ಜೀವನ ಮತ್ತು ಸೇವೆಯು ನನಗೆ ಒಂದು ದೊಡ್ಡ ಹೊರೆಯಾಗಿಲ್ಲ. ಖಂಡಿತವಾಗಿಯೂ ಇಲ್ಲ. ನನ್ನ ಜೀವನವು ಉಲ್ಲಾಸಕರವಾಗಿದೆ ಮತ್ತು ನನ್ನ ಪ್ರತಿದಿನವೂ ರೋಮಾಂಚನಕಾರಿಯಾಗಿದೆ, ಏಕೆಂದರೆ ನಾನು ಭೂಲೋಕದ ಮೂಲಸಿದ್ಧಾಂತಗಳ ಮೂಲಕ ಜೀವಿಸುವುದನ್ನಲ್ಲ, ಆದರೆ ಪರಲೋಕದ ಮೂಲಸಿದ್ಧಾಂತಗಳನ್ನು ಆಧರಿಸಿ ಜೀವಿಸುವುದನ್ನು ಕಲಿತುಕೊಂಡಿದ್ದೇನೆ. ನೀವು ನಿಮ್ಮ ಕ್ರಿಸ್ತೀಯ ಜೀವಿತದ ಆರಂಭದಲ್ಲಿ ಈ ರೀತಿಯಾಗಿ ಜೀವಿಸಲು ನಿರ್ಧರಿಸುವುದು ಸುಲಭ. ಆದರೆ ಈಗ ನೀವು ಆರಂಭಿಸಿರುವ ಈ ಹೊಸ ವರ್ಷದಲ್ಲೂ ಪರಲೋಕದ ಮೂಲಸಿದ್ಧಾಂತಗಳ ಮೂಲಕ ಜೀವಿಸುತ್ತೀರಿ ಮತ್ತು ಈ ಲೋಕದ ರೀತಿಯಲ್ಲಿ ಅಲ್ಲವೆಂದು ನಾನು ಹಾರೈಸುತ್ತೇನೆ. ಕೊನೆಯ ವರೆಗೂ ಸಹಿಸಿಕೊಂಡು ಜೀವಿಸಿದ ಯೇಸುವಿನ ಮೇಲೆ ನಿಮ್ಮ ದೃಷ್ಟಿಯನ್ನು ಇರಿಸಿರಿ - ಇದರಿಂದ ನಿಮ್ಮ ಭೂಮಿಯ ಮೇಲಿನ ದಿನಗಳು ಪರಲೋಕದ ದಿನಗಳಂತಿರುತ್ತವೆ. ಇದು ನಮಗಾಗಿ ದೇವರ ಚಿತ್ತವಾಗಿದೆ.

ನಿಮ್ಮೆಲ್ಲರಿಗೂ ಈ ಹೊಸ ವರ್ಷವು ಬಹಳ ಅಶೀರ್ವಾದದಾಯಕವಾಗಿದ್ದು, ಪ್ರತಿದಿನವೂ ದೇವರ ಅತಿಶಯವಾದ ವರಗಳನ್ನು ಹೊಂದಿರಲೆಂದು ನಾನು ಹಾರೈಸುತ್ತೇನೆ!