WFTW Body: 

ಪರ್ವತ ಪ್ರಸಂಗದಲ್ಲಿ ಯೇಸುವು ತನ್ನ ಶಿಷ್ಯರಿಗೆ, ’ಯಾರೇ ಒಬ್ಬ ಮನುಷ್ಯನು ಒಬ್ಬ ಪರಸ್ತ್ರೀಯನ್ನು ಕಾಮುಕ ದೃಷ್ಟಿಯಿಂದ ನೋಡಿದರೆ, ಆತನು ಆಕೆಯೊಂದಿಗೆ ವ್ಯಭಿಚಾರ ಮಾಡಿದ್ದಕ್ಕೆ ಸಮನಾಗಿದೆ’, ಎಂದು ಹೇಳಿದರು. ಆತನು ಮುಂದುವರಿಸಿ, ’ಅಂತಹ ಮನುಷ್ಯನು ತನ್ನ ಕಣ್ಣುಗಳನ್ನು ಕಿತ್ತು ಬಿಸಾಕಿದರೆ ಒಳ್ಳೆಯದು, ಇಲ್ಲವಾದರೆ ಆತನು ನರಕಕ್ಕೆ ಹೋಗಬೇಕಾಗುತ್ತದೆ’, ಎಂದು ಹೇಳಿದರು. ಈ ಬೋಧನೆಯ ಮೂಲಕ ಆತನು ಕಲಿಸಿಕೊಟ್ಟದ್ದು ಏನೆಂದರೆ, ಸ್ತ್ರೀಯರನ್ನು ಮೋಹಿಸಿ ಎಡೆಬಿಡದೆ ಲೈಂಗಿಕ ಯೋಚನೆಗಳಲ್ಲಿ ತೊಡಗಿರುವ ಮನುಷ್ಯನನ್ನು ಅಂತಹ ಆಲೋಚನೆಗಳು ಕೊನೆಗೆ ನರಕಕ್ಕೆ ಕಳುಹಿಸಲು ಶಕ್ತವಾಗಿವೆ, ಎಂಬುದು.

ಆದಾಮನ ದಿನದಿಂದ ಮೊದಲುಗೊಂಡು, ಪ್ರತಿಯೊಬ್ಬ ಪುರುಷನ ಹೃದಯದಲ್ಲಿ ಉರಿಯುತ್ತಾ ಬಂದಿರುವ ನರಕದ ಬೆಂಕಿಯೇ ಇಂದು ಒಬ್ಬ ಪುರುಷನ ಹೃದಯದಲ್ಲಿ ಕಾಮಾಗ್ನಿಯಾಗಿ ಉರಿಯುತ್ತಿದೆ. ಇದನ್ನು ನಾಶಗೊಳಿಸುವ ಸಾಮರ್ಥ್ಯ ಪವಿತ್ರಾತ್ಮನ ಬೆಂಕಿಗೆ ಮಾತ್ರ ಇದೆ. ನಿನ್ನ ಹೃದಯದಲ್ಲಿ ಎರಡರಲ್ಲಿ ಒಂದು ವಿಧವಾದ ಬೆಂಕಿಯು ಉರಿಯುತ್ತದೆ: ಹೃದಯವು ಮೋಹದ ಬೆಂಕಿಯಿಂದ ಪಾಪಕ್ಕೆ ಒಳಗಾಗುವುದು ಅಥವಾ ಅದು ಯೇಸುವನ್ನು ಪ್ರೀತಿಸಿ ಆತನಿಗಾಗಿ ಉರಿಯುವಂತದ್ದು. ನೀನು ಇವೆರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕು: ಈಗ ಶುದ್ಧೀಕರಿಸುವ ಕುಲುಮೆಯ ಬೆಂಕಿ ಅಥವಾ ಭವಿಷ್ಯಕಾಲದಲ್ಲಿ ನರಕದ ಬೆಂಕಿ. ಇವುಗಳ ಹೊರತಾಗಿ ಮೂರನೆಯ ಆಯ್ಕೆ ಇಲ್ಲ.

ಯೇಸುವಿನ ಬೋಧನೆಯನ್ನು ಕೇಳಿಸಿಕೊಂಡ ಯೆಹೂದ್ಯ ಜನಾಂಗವು ಈಗಾಗಲೇ ಧರ್ಮಶಾಸ್ತ್ರದ ಮೂಲಕ ಬಹಳ ಉನ್ನತ ನೈತಿಕ ಮಟ್ಟವನ್ನು ಹೊಂದಿತ್ತು. ಅವರು ನೈತಿಕ ವಿಧಿ-ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದರು ಮತ್ತು ಅದರ ಪ್ರಕಾರ ವಿವಾಹಕ್ಕೆ ಹೊರತಾದ ಯಾವುದೇ ಲೈಂಗಿಕ ಸಂಬಂಧಕ್ಕೆ ಮರಣದಂಡನೆಯ ಶಿಕ್ಷೆ ವಿಧಿಸಲಾಗುತ್ತಿತ್ತು. ಆ ಕಾಲದಲ್ಲಿ ಜನರನ್ನು ಅನೀತಿಯ ಮಾರ್ಗಕ್ಕೆ ಸೆಳೆಯುವ ಅಶ್ಲೀಲವಾದ ಪುಸ್ತಕಗಳು ಅಥವಾ ಮ್ಯಾಗಜ಼ಿನ್‌ಗಳು ಅಥವಾ ಟಿ.ವಿ. ಕಾರ್ಯಕ್ರಮಗಳು ಇರಲಿಲ್ಲ. ಆ ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಯು ಸಭ್ಯವಾದ ಉಡುಪನ್ನು ತೊಡುತ್ತಿದ್ದಳು, ಮತ್ತು ಸ್ತ್ರೀ-ಪುರುಷರ ನಡುವೆ ಸಾಮಾನ್ಯವಾಗಿ ಮಾತುಕತೆಗೆ ಅವಕಾಶವೇ ಇರಲಿಲ್ಲ. ಆದಾಗ್ಯೂ, ಇಷ್ಟೊಂದು ಪರಿಮಿತಿಗಳಿದ್ದ ಆ ಸಮಾಜದಲ್ಲಿ, ಪುರುಷರು ಸ್ತ್ರೀಯರನ್ನು ನೋಡಿ ಮೋಹಿಸುತ್ತಿದ್ದರೆಂದು ಕರ್ತರಿಗೆ ತಿಳಿದಿತ್ತು, ಮತ್ತು ಅವರು ಇದರ ವಿರುದ್ಧವಾಗಿ ತಮ್ಮ ಶಿಷ್ಯರಿಗೆ ಎಚ್ಚರಿಕೆ ನೀಡಬೇಕಾಯಿತು. ಅಂತಹ ಕಠಿಣ ಶಿಸ್ತಿನ ಸಮಾಜದಲ್ಲಿ ಇದು ಅವಶ್ಯವಾಗಿದ್ದರೆ, ಇಂದಿನ ನಮ್ಮ ಅಶ್ಲೀಲ ಸಮಾಜದಲ್ಲಿ ಇದರ ಕುರಿತಾಗಿ ಕರ್ತರು ಯುವಜನರನ್ನು ಇನ್ನೂ ಎಷ್ಟು ಹೆಚ್ಚಾಗಿ ಎಚ್ಚರಿಸಲು ಬಯಸುತ್ತಾರೆ.

ಇಂದಿನ ಸಮಾಜವು ಸಾಧ್ಯವಿರುವ ಎಲ್ಲಾ ಸಾಧನಗಳ ಮೂಲಕ ನಮ್ಮ ಮನಸ್ಸುಗಳನ್ನು ಪ್ರಚೋದಿಸಿ, ನಮ್ಮ ಲೈಂಗಿಕ ಭಾವೋದ್ರೇಕಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ದಿನಗಳಲ್ಲಿ ನಾವೆಲ್ಲರೂ ಹೆಚ್ಚು ಜಾಗರೂಕತೆಯಿಂದ ಇರಬೇಕು. ನೀನು ಈ ಕಾಮದ ಬೆಂಕಿಯನ್ನು ನಂದಿಸುವ ಬಗ್ಗೆ ಗಂಭೀರವಾಗಿರುವುದಾದರೆ, ಅದಕ್ಕೆ ಸರಬರಾಜು ಆಗುವ ಇಂಧನವನ್ನು ಕೂಡ ಕಡಿತಗೊಳಿಸುವ ಬಗ್ಗೆ ನೀನು ಗಂಭೀರವಾಗಿ ಯೋಚಿಸಬೇಕು. ನೀನು ಇಂಧನದ ಮೂಲವನ್ನು ಯಾವುದೇ ಕರುಣೆ ತೋರಿಸದೆ ಉಗ್ರವಾಗಿ ಮತ್ತು ಕೂಲಂಕುಷವಾಗಿ ನಿರ್ಮೂಲ ಮಾಡಬೇಕು. ಕಣ್ಣನ್ನು ಕೀಳುವುದು ಮತ್ತು ಕೈಯನ್ನು ಕತ್ತರಿಸುವುದು ಎಂದರೆ ಇದೇ ಆಗಿದೆ. ಯೇಸುವು ಈ ಆಜ್ಞೆಯ ಮೂಲಕ ನಮ್ಮನ್ನು ಪಾಪಕ್ಕೆ ನಡೆಸುವಂತ ಸಂಗತಿಗಳನ್ನು ನಾಶ ಮಾಡಬೇಕೆಂದು ಹೇಳಿದರು. ಪಾಪದ ವಿಪತ್ತು ಮತ್ತು ನರಕದ ಬೆಂಕಿಯ ವಾಸ್ತವಿಕತೆಯ ಬಗ್ಗೆ ಎಲ್ಲರಿಗಿಂತ ಹೆಚ್ಚಾಗಿ ಯೇಸುವು ಅರಿತಿದ್ದರು. ಹಾಗಾಗಿ ಪಾಪದಿಂದ ರಕ್ಷಿಸಲ್ಪಡುವುದಕ್ಕಾಗಿ ಇಂತಹ ಅಮೂಲಾಗ್ರ (ಬೇರು ಸಮೇತ) ಆತ್ಮಿಕ ಶಸ್ತ್ರಚಿಕಿತ್ಸೆ ಅವಶ್ಯವಾಗಿದೆಯೆಂದು ಅವರು ಒತ್ತಿಹೇಳಿದರು.

ಇಂದು ಕರ್ತರ ಆಜ್ಞೆಯನ್ನು ನಾವು ಕಾರ್ಯರೂಪಕ್ಕೆ ತರುವುದು ಹೇಗೆಂದರೆ, "ನೀನು ನಿನ್ನ ಮನಸ್ಸಿನಲ್ಲಿ ಮಾಡುವ ಪಾಪಕ್ಕೆ ಕಾರಣ ನಿನ್ನ ಟಿ.ವಿ.ಯ ಕಾರ್ಯಕ್ರಮಗಳಾಗಿದ್ದರೆ, ತಕ್ಷಣ ಅದನ್ನು ಕಿತ್ತುಹಾಕು." ಟಿ.ವಿ. ಕಾರ್ಯಕ್ರಮಗಳ ನಟನಟಿಯರನ್ನು ನೋಡಿ ಅವರ ಜೊತೆಗೆ ನೀನು ಸಹ ನರಕಕ್ಕೆ ಹೋಗುವುದಕ್ಕಿಂತ, ಟಿ.ವಿ. ನೋಡುವುದನ್ನು ನಿಲ್ಲಿಸಿ ಸ್ವರ್ಗಕ್ಕೆ ಹೋಗುವುದು ಉತ್ತಮ. ಅಥವಾ ಯಾವುದಾದರೂ ಮ್ಯಾಗಜ಼ಿನ್‌ಗಳೋ, ಅಥವಾ ಯಾವುದೋ ವಿಧವಾದ ಸಂಗೀತವೋ ಪಾಪ ಮಾಡಲು ನಿನ್ನನ್ನು ಪ್ರಚೋದಿಸುತ್ತಿದ್ದರೆ, ಆ ಪತ್ರಿಕೆಗಳನ್ನು ಬಿಸಾಕು ಮತ್ತು "App"ಗಳನ್ನು "delete"ಮಾಡು. ಭೂಮಿಯ ಮೇಲೆ ನೀನು ಅತ್ಯಂತ ಅಮೂಲ್ಯವೆಂದು ಎಣಿಸಿ ಬಿಟ್ಟುಬಿಡಲು ಬಯಸದಿರುವ ಸಂಗತಿ ಯಾವುದೇ ಆಗಿದ್ದರೂ, ಅದರ ಪರಿಣಾಮವಾಗಿ ಕೊನೆಗೆ ನೀನು ಪರಲೋಕಕ್ಕೆ ಹೋಗುವ ಅವಕಾಶವನ್ನು ಕಳೆದುಕೊಂಡು ನರಕಕ್ಕೆ ಹೋಗುವುದಾದರೆ, ಅದನ್ನು ಬಿಟ್ಟುಬಿಡಲು ನೀನು ಖಂಡಿತವಾಗಿ ಒಪ್ಪಿಕೊಳ್ಳುತ್ತೀ.

ನೀನು ಇದನ್ನು ಓದುತ್ತಿರುವಾಗಲೇ ಸೈತಾನನು ನಿನ್ನ ಕಿವಿಯಲ್ಲಿ, "ಅಂತಹ ಚಿಕ್ಕ ವಿಷಯಕ್ಕಾಗಿ ನೀನು ಖಂಡಿತವಾಗಿ ಸಾಯುವುದಿಲ್ಲ (ನರಕಕ್ಕೆ ಹೋಗುವುದಿಲ್ಲ)," ಎಂದು ಪಿಸುಗುಟ್ಟುತ್ತಾನೆ. ಪತ್ರಿಕೆಯ ಒಂದು ಚಿತ್ರವನ್ನು ಅಥವಾ ಟಿ.ವಿ. ಕಾರ್ಯಕ್ರಮದ ಯಾವುದೋ ಒಂದು ವ್ಯಕ್ತಿಯನ್ನು ನೋಡಿ ಮೋಹಿಸುವುದು ವ್ಯಭಿಚಾರವೆಂದು ಹೇಳಲು ಬರುವುದಿಲ್ಲವೆಂದು ಸೈತಾನನು ಜಾಣತನದಿಂದ ನಿನಗೆ ತಿಳಿಸುತ್ತಾನೆ. ಅವನ ಮಾತನ್ನು ಕೇಳಬೇಡ - ಸೈತಾನನು ಮೊದಲಿನಿಂದಲೂ ಸುಳ್ಳುಗಾರನಾಗಿದ್ದಾನೆ ಎಂದು ಯೇಸುವು ನಮ್ಮನ್ನು ಎಚ್ಚರಿಸಿದ್ದಾರೆ.

ಇಂತಹ ಪಾಪದ ಬಗ್ಗೆ ಸುಮ್ಮನೆ, "ಇನ್ನು ಮುಂದೆ ನಾನು ಹೀಗೆ ಮಾಡುವುದಿಲ್ಲ," ಅಥವಾ "ನಾನು ಅದನ್ನು ಬಿಟ್ಟುಬಿಡಲು ಪ್ರಯತ್ನಿಸುತ್ತೇನೆ," ಎಂದು ಹೇಳಬೇಡ. ಹೊರನೋಟಕ್ಕೆ ದುಷ್ಟತನದಂತೆ ಕಾಣಿಸುವ ಸಂಗತಿಗಳಿಂದಲೂ ಸಹ ದೂರವಿರುವಂತೆ ಸತ್ಯವೇದವು ನಮ್ಮನ್ನು ಎಚ್ಚರಿಸುತ್ತದೆ. ಈ ಪಾಪವನ್ನು ತಕ್ಷಣವೇ ಬಿಟ್ಟು, ಅದನ್ನು ಶಾಶ್ವತವಾಗಿ ತ್ಯಜಿಸಲು ದೇವರು ನಿನಗೆ ಪ್ರತಿಯೊಂದು ರೀತಿಯ ಸಹಾಯ ಮಾಡುತ್ತಾರೆಂದು ನೀನು ನಂಬಬೇಕು. ಇಂದಿನಿಂದ ಯುದ್ಧಕ್ಕೆ ಇಳಿ, ಮತ್ತು ಜೀವವುಳ್ಳ ದೇವರ ಸೇನೆಯ ಸೈನಿಕನಾದ ನಿನ್ನನ್ನು ಧಿಕ್ಕರಿಸಿದ ಈ ಗೊಲ್ಯಾತನ ತಲೆಯನ್ನು ಕತ್ತರಿಸುವ ವರೆಗೂ ಬಿಟ್ಟುಕೊಡಬೇಡ.

'1ಕೊರಿಂಥದವರಿಗೆ 7:1'ರ ವಚನವು, ಹುಡುಗಿಯರೊಂದಿಗೆ ದೈಹಿಕ ಸಂಪರ್ಕದಿಂದ ದೂರವಿರುವಂತೆ ನಮಗೆ ಎಚ್ಚರಿಕೆ ನೀಡುತ್ತದೆ. ಪವಿತ್ರಾತ್ಮನು ಏನನ್ನಾದರೂ "ಒಳ್ಳೆಯದಲ್ಲ" ಎಂದು ಹೇಳಿದಾಗ (ಅವರು ಇಲ್ಲಿ ಹೇಳಿರುವಂತೆ), ಯಾವುದೇ ಶಿಷ್ಯನಿಗೆ ಆ ಒಂದು ಮಾತು ಆ ಕಾರ್ಯದಿಂದ ಸಂಪೂರ್ಣವಾಗಿ ದೂರವಿರಲು ಸಾಕಾಗುತ್ತದೆ. ಕಾನೂನುವಾದಿಗಳು ಹೊರತೋರಿಕೆಯ ಆಜ್ಞಾಪಾಲನೆಯಿಂದ ಜೀವಿಸುತ್ತಾರೆ, ಆದರೆ ಶಿಷ್ಯರು ಆಜ್ಞೆಯ ಆತ್ಮವನ್ನು (ಆಳವಾದ ಅರ್ಥವನ್ನು) ಪಾಲಿಸುತ್ತಾರೆ. ಉದಾಹರಣೆಗೆ: ಒಬ್ಬ ಸ್ತ್ರಿಯನ್ನು ಹೃದಯದಲ್ಲಿ ಮೋಹಿಸುವುದು ವ್ಯಭಿಚಾರವೆಂದು ಯೇಸುವಿಗೆ ತಿಳಿದಿತ್ತು, ಏಕೆಂದರೆ ಯೇಸು ಈ ಏಳನೆಯ ಆಜ್ಞೆಯ ಆತ್ಮವನ್ನು ಅರ್ಥಮಾಡಿಕೊಂಡು ಪಾಲಿಸಲು ಬಯಸಿದರು. ನೀನು ಅದೇ ರೀತಿ ಪೂರ್ಣಹೃದಯ ಉಳ್ಳವನಾಗಿದ್ದರೆ, ದೇವರ ಎಲ್ಲಾ ಆಜ್ಞೆಗಳ ಮೂಲ ಉದ್ದೇಶ ಏನೆಂದು ನೋಡುತ್ತಿ. ಅಪೊಸ್ತಲ ಪೌಲನು ತಿಮೊಥೆಯನಿಗೆ ಏನು ಹೇಳಿದನೆಂದು ಗಮನಿಸು: "ಎಲ್ಲಾ ಯೌವನಸ್ಥರು ಹೆಚ್ಚಾಗಿ ಅನುಭವಿಸುವಂತ ಯೌವನದ ಇಚ್ಛೆಗಳ ಎಲ್ಲಾ ಸೆಳೆತಗಳಿಂದ ನೀನು ದೂರ ಓಡಿಹೋಗು" (2 ತಿಮೊ. 2:22 - Living ಭಾಷಾಂತರ). ಶೋಧನೆಗೆ ಒಳಗಾಗುವ ಸಾಧ್ಯತೆಯಿರುವ ಎಲ್ಲಾ ಸಂದರ್ಭಗಳಿಂದ ನೀನು ಪಲಾಯನ ಮಾಡಬೇಕು/.

ಕರ್ತನು ತನ್ನ ದೇವಾಲಯವನ್ನು ಮತ್ತೊಮ್ಮೆ ಶುದ್ಧೀಕರಿಸುತ್ತಿದ್ದಾನೆ. ಈಗ ನಿನ್ನ ಭೌತಿಕ ದೇಹವು ದೇವರ ಆಲಯವಾಗಿದೆ. ಅದರಲ್ಲಿ ಮಾಡಬೇಕಾದ ಎಲ್ಲವನ್ನೂ ಪೂರ್ಣಗೊಳಿಸಲು ಈಗಲೇ ಕರ್ತನಿಗೆ ಅನುಮತಿಸು.