'1ಕೊರಿಂಥದವರಿಗೆ 11ನೇ ಅಧ್ಯಾಯ’ದಲ್ಲಿ ನಮಗೆ ತಿಳಿಸಲ್ಪಟ್ಟಿರುವ ಪ್ರಕಾರ, ನಾವು ರೊಟ್ಟಿಯನ್ನು ಮುರಿಯುವ ಸಮಯದಲ್ಲಿ ಕರ್ತನ ಮರಣವನ್ನು ನೆನಪಿಗೆ ತಂದುಕೊಳ್ಳಬೇಕು. ಯೇಸುವು ಭೂಲೋಕಕ್ಕೆ ಬಂದು ತನ್ನ ಜೀವಿತ ಮತ್ತು ಬೋಧನೆಯ ಮೂಲಕ ನಮಗೆ ಕಲಿಸಿದ್ದೇನೆಂದರೆ, "ನಮ್ಮ ಪ್ರಾಣವು ಮರಣಾವಸ್ಥೆಯನ್ನು ಅನುಭವಿಸುವುದರ ಮೂಲಕ ನಾವು ದೈವಿಕ ಜೀವಿತದಲ್ಲಿ ಪಾಲ್ಗೊಳ್ಳುತ್ತೇವೆ" ('2 ಕೊರಿ. 4:10'ನ್ನು ನೋಡಿ). ಹಾಗಾಗಿ ನಾವು ಯೇಸುವಿನ ಮರಣದ ಪ್ರತಿಯೊಂದು ಅಂಶವನ್ನು ಧ್ಯಾನಿಸಿ, ಆ ಮರಣದಲ್ಲಿ ನಾವು ಪಾಲ್ಗೊಳ್ಳುವುದು ಹೇಗೆ (ಮುರಿಯಲ್ಪಟ್ಟ ರೊಟ್ಟಿಯನ್ನು ತಿನ್ನುವುದು) ಮತ್ತು ಕ್ರಿಸ್ತನೊಂದಿಗೆ ಶಿಲುಬೆಗೆ ಏರಿಸಲ್ಪಡುವುದು ಹೇಗೆ ಎನ್ನುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು ಒಳ್ಳೆಯದು.
ಕ್ರಿಸ್ತನ ಶಿಲುಬೆಯ ಮರಣದ ಒಂದು ಅಂಶ ಏನೆಂದರೆ, ಆತನು ತಾನು ಮಾಡದ ಪಾಪಕ್ಕಾಗಿ ಶಿಲುಬೆಯ ಮೇಲೆ ದಂಡನೆಯನ್ನು ಸ್ವೀಕರಿಸಿದನು "(ನಾನು ಮಾಡದಿದ್ದ ತಪ್ಪಿಗಾಗಿ ಶಿಕ್ಷೆಗೆ ಗುರಿಯಾದೆನು ಮತ್ತು ಕದಿಯದಿದ್ದರೂ ಅದಕ್ಕಾಗಿ ದಂಡ ತೆತ್ತೆನು" - ಕೀರ್ತ. 69:4 - 'Living Bible' ಭಾವಾನುವಾದ). ಆದಾಮನ ನಡವಳಿಕೆ ಇದಕ್ಕೆ ನಿಖರವಾಗಿ ತದ್ವಿರುದ್ಧವಾಗಿತ್ತು - ಆತನು ತನ್ನ ತಪ್ಪನ್ನು ಒಪ್ಪಿಕೊಳ್ಳಲೇ ಇಲ್ಲ. ಆತನು ತನ್ನ ಹೆಂಡತಿಯನ್ನು ದೂಷಿಸಿದನು (ಆದಿ. 3:12). ಈ ರೀತಿಯಾಗಿ ಆದಾಮನ ಮಕ್ಕಳು ಮತ್ತು ದೇವರ ಮಕ್ಕಳು ನಡೆಯುವ ಮಾರ್ಗಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ.
ಆದಾಮನ ಮಕ್ಕಳು ತಮ್ಮ ತಂದೆಯ ಹಾಗೆ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ. ಯೇಸುವು ಫರಿಸಾಯರಿಗೆ, "ಮನುಷ್ಯರ ಮುಂದೆ ನೀವು ನೀತಿವಂತರೆಂದು ತೋರಿಸಿಕೊಳ್ಳುತ್ತೀರಿ," ಎಂದು ಹೇಳಿದರು (ಲೂಕ. 16:15). ಆದಾಮನು ತನ್ನ ಸ್ವಂತ ಕೊರತೆಯನ್ನಾಗಲೀ ಅಥವಾ ತನ್ನ ಸ್ವಂತ ಪಾಪವನ್ನಾಗಲೀ ಅರಿಯದೇ ಹೋದನು. ಆತನಿಗೆ ಇತರರ ಪಾಪ ಮಾತ್ರ ಕಂಡಿತು. ಯಾವನೇ ಆದರೂ ಇತರರನ್ನು ದೂಷಿಸುವಾಗ ಮತ್ತು ಸ್ವತಃ ತನ್ನಲ್ಲಿ ಯಾವ ತಪ್ಪನ್ನೂ ಕಾಣದಿರುವಾಗ, ಆತನು ಯಥಾರ್ಥವಾಗಿ ದೂರುಗಾರನಾದ ಸೈತಾನನೊಂದಿಗೆ ಅನ್ಯೋನ್ಯತೆಯಲ್ಲಿದ್ದಾನೆ.
ಶಿಲುಬೆಯ ಮೇಲೆ ಸಾಯಿಸಲ್ಪಟ್ಟ ಕಳ್ಳನು, "ಕರ್ತನೇ, ನನ್ನನ್ನು ನೆನಪಿಸಿಕೋ," ಎಂದು ಹೇಳಿದ ಮಾತ್ರಕ್ಕೆ ರಕ್ಷಣೆಯನ್ನು ಹೊಂದಲಿಲ್ಲ. ಈ ಮಾತನ್ನು ಹೇಳುವುದಕ್ಕೆ ಮೊದಲು ಆತನು ತನ್ನ ಸ್ವಂತ ಪಾಪಗಳನ್ನು ಒಪ್ಪಿಕೊಂಡದ್ದರಿಂದ ರಕ್ಷಣೆ ಹೊಂದಿದನು.
"ಯೇಸುವನ್ನು ನೋಡುತ್ತಿರು - ಆತನನ್ನು ನೋಡುತ್ತಿರುವಾಗ, ನೀನು ನಿನ್ನ ಭ್ರಷ್ಟತೆಯನ್ನು ಕಾಣುವೆ"
ಇತರರ ಬಗ್ಗೆ ತೀರ್ಪು ನೀಡಲು ದೇವರಿಗೆ ನಮ್ಮ ಸಹಾಯ ಬೇಕಿಲ್ಲ. ಅದನ್ನು ಮಾಡಲು ಸ್ವತಃ ಅವರು ಸಂಪೂರ್ಣ ಸಮರ್ಥರಾಗಿದ್ದಾರೆ! ನಾವು ಸ್ವತಃ ನಮ್ಮನ್ನು ಮಾತ್ರ ಪರೀಕ್ಷಿಸಿಕೊಳ್ಳಬೇಕೆಂದು ದೇವರು ಬಯಸುತ್ತಾರೆ. ದೇವರು ನಮಗೆ "ನಿನ್ನ ಸ್ವಂತ ಪಾಪವನ್ನು ಒಪ್ಪಿಕೋ," ಎಂಬ ಒಂದೇ ಕರೆಯನ್ನು ನೀಡುತ್ತಾರೆ (ಯೆರೆಮೀಯನು 3:13). ಇದನ್ನು ಮಾಡುವಂತ ಕ್ರೈಸ್ತ ವಿಶ್ವಾಸಿಗಳು ಇಡೀ ವಿಶ್ವದಲ್ಲೇ ಅತೀ ಹೆಚ್ಚಿನ ಸಂತೋಷವನ್ನು ಹೊಂದುತ್ತಾರೆ.
ಕರ್ತನು ಪ್ರವಾದಿ ಯೆರೆಮೀಯನ ಮೂಲಕ ಯೆಹೂದ್ಯರಿಗೆ ಹೇಳಿದ್ದೇನೆಂದರೆ, ಯೂದಾಯ ದೇಶದವರು ತಮ್ಮ ಉತ್ತರ ದಿಕ್ಕಿನಲ್ಲಿದ್ದ ಇಸ್ರಾಯೇಲ್ಯರ ವಿಫಲತೆಯಿಂದ ಯಾವುದೇ ಪಾಠವನ್ನು ಕಲಿಯಲಿಲ್ಲ (ಯೆರೆಮೀಯನು 3:6-8). ಅದಲ್ಲದೆ ಇಸ್ರಾಯೇಲ್ ದೇಶವು ಯೆಹೂದಕ್ಕಿಂತ ಹೆಚ್ಚು ಸಭ್ಯಳೆಂದು ಕರ್ತನು ಹೇಳಿದನು. ಅನೇಕ ಕ್ರೈಸ್ತ ಪಂಗಡಗಳು ಜೀವವಿಲ್ಲದ ಕ್ರೈಸ್ತ ಸಮುದಾಯಗಳಿಂದ ಹೊರಬಂದಿದ್ದರೂ, ದೇವರು ಅಂತಹ ಸಮುದಾಯಗಳನ್ನು ಶಿಕ್ಷಿಸಿದ್ದನ್ನು ನೋಡಿಯೂ ಯಾವುದೇ ಪಾಠವನ್ನು ಕಲಿತಿಲ್ಲ. ಆದ್ದರಿಂದ ಇವರು ಆ ಕ್ರೈಸ್ತ ಸಮುದಾಯಗಳಿಗಿಂತ ಹೆಚ್ಚಿನ ಫರಿಸಾಯತನಕ್ಕೆ ಇಳಿದಿದ್ದಾರೆ ಮತ್ತು ಜೀವವಿಲ್ಲದ ಸ್ಥಿತಿಯಲ್ಲಿದ್ದಾರೆ.
ನೀವು ಯಾವಾಗಲೂ ಯೇಸುವಿನ ಸನ್ನಿಧಿಯಲ್ಲಿ, ಆತನನ್ನು ತಲೆಯೆತ್ತಿ ನೋಡುತ್ತಾ ಜೀವಿಸಿರಿ. ನೀವು ಹೀಗೆ ಮಾಡಿದಾಗ ಜೀವನದಲ್ಲಿ ನಿರಂತರವಾಗಿ ನಿಮ್ಮನ್ನೇ ತೀರ್ಪು ಮಾಡಿಕೊಳ್ಳುತ್ತಾ ಜೀವಿಸುತ್ತೀರಿ. ಆತ್ಮಿಕ ಬೆಳವಣಿಗೆಯ ಮಾರ್ಗ ಇದಾಗಿದೆ. ಲೋಕದ ಯಾವುದೇ ಕ್ರೈಸ್ತ ಸಭೆಯಲ್ಲಿ ಸಾಮಾನ್ಯವಾಗಿ ನೀವು ಕೇಳಿಸಿಕೊಳ್ಳುವ ಸಂದೇಶ ಇದಲ್ಲ. ಹಾಗಿರುವಾಗ ನಿಮಗೆ ನೀವೇ ಬೋಧಕರಾಗಬೇಕು. ನೀವು ನಿಮ್ಮೊಳಗೆ ನೋಡುತ್ತಾ ಆತ್ಮಪರೀಕ್ಷೆ ಮಾಡಿಕೊಳ್ಳುವುದು ಸರಿಯಲ್ಲ - ಏಕೆಂದರೆ ಅದು ನಿಮ್ಮನ್ನು ಸ್ವನಿಂದನೆ ಮತ್ತು ನಿರುತ್ಸಾಹಕ್ಕೆ ನಡೆಸುತ್ತದೆ. ಆದರೆ ಯೇಸುವಿನ ಮಾರ್ಗದರ್ಶನವನ್ನು ಹುಡುಕಿರಿ - ಮತ್ತು ಆತನನ್ನು ದೃಷ್ಟಿಸುವಾಗ, ನೀವು ನಿಮ್ಮ ಸ್ವಂತ ಭ್ರಷ್ಟತೆಯನ್ನು ಕಾಣುತ್ತೀರಿ - ಹೀಗೆ ಮಾಡಿದಾಗ ಯೆಶಾಯ, ಯೋಬ ಮತ್ತು ಯೋಹಾನ (ಪತ್ಮೊಸ್ ದ್ವೀಪದಲ್ಲಿ) ಇದನ್ನೇ ಕಂಡರು. ಆ ಮೇಲೆ ನೀವು ನಿಮ್ಮನ್ನು ತೀರ್ಪು ಮಾಡಿಕೊಳ್ಳಬಹುದು.
ನಾನು ಎಂದಿಗೂ ನನ್ನೊಳಗೆ ನೋಡುವುದಿಲ್ಲ. ನಾನು ನಿರಂತರವಾಗಿ ತಲೆಯೆತ್ತಿ ಯೇಸುವನ್ನು ಮಾತ್ರ ನೋಡುತ್ತೇನೆ - ಆತನ (ಆತನು ನನ್ನಂತೆಯೇ ಶೋಧಿಸಲ್ಪಟ್ಟ ಮನುಷ್ಯನು) ಸಂಪೂರ್ಣ ನಿರ್ಮಲ ಹೃದಯವನ್ನು, ಆತನ ಪ್ರೀತಿಯನ್ನು ಮತ್ತು ಆತನಲ್ಲಿದ್ದ ದೀನತೆಯನ್ನು ನೋಡುತ್ತೇನೆ. ಅದು ಎಲ್ಲಾ ವೇಳೆಯಲ್ಲಿ ನನಗೆ ನನ್ನ ಅಗತ್ಯತೆಗಳ ಅರಿವನ್ನು ನೀಡುತ್ತದೆ.