ಬರೆದಿರುವವರು : ಜೆರೇಮಿ ಆಟ್ಲೀ
ಭೂಲೋಕದಲ್ಲಿರುವ ದೇವಜನರ ವಿಷಯವಾಗಿ, "ಇವರೇ ಶ್ರೇಷ್ಠರು, ಇವರನ್ನು ನೋಡಿ ನಾನು ಆನಂದಿಸುತ್ತೇನೆ," ಎಂದು ದೇವರು ಹೇಳುತ್ತಾರೆ (ಕೀರ್ತ. 16:3 ಭಾವಾನುವಾದ).
"ದೇವಜನರಲ್ಲಿ ಆನಂದಿಸುವುದು" ಎಂಬುದರ (ನಿಜವಾದ) ಅರ್ಥವೇನು? ನಮ್ಮ ಕುಟುಂಬದಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆಯ ಅನುಭವದಿಂದ ಈ ವಾಕ್ಯವನ್ನು ನಾನು ಒಂದು ಹೊಸದಾದ ಬೆಳಕಿನಲ್ಲಿ ನೋಡಲು ಸಹಾಯವಾಯಿತು ಮತ್ತು ನಮ್ಮ ಈ ಮನೋಭಾವವು ಕರ್ತನಿಗೆ ಎಷ್ಟು ಅಮೂಲ್ಯವಾದದ್ದು ಎಂಬುದನ್ನು ನಾನು ನೋಡಲು ನನಗೆ ಸಹಾಯ ಮಾಡಿತು.
ಸತ್ಯವಾದ ಕಥೆ: ನಮ್ಮ ಒಂದು ವರ್ಷದ ಮಗುವು ಅಂಬೆಗಾಲಿಕ್ಕಲು ಕಲಿಯುತ್ತಿದ್ದಳು. ಆಕೆಯು ನಡೆಯುವಾಗ ತಾನು ಬೀಳದಂತೆ ಕುರ್ಚಿ ಅಥವಾ ಮೇಜನ್ನು ಹಿಡಿಯುತ್ತಿದ್ದಳು, ಆದರೆ ಯಾವುದರ ಸಹಾಯವಿಲ್ಲದೆ ಆಕೆ ನಡೆಯುವ ಧೈರ್ಯ ಮಾಡಿರಲಿಲ್ಲ.
ಅಂದು ಒಂದು ವಿಶೇಷ ದಿನ. ನಮ್ಮ ಮನೆಯ ಚಾವಡಿಯಲ್ಲಿ ಆಕೆ ಕಿಲಕಿಲನೆ ನಗುತ್ತಾ ಇನ್ನೂ ತೂರಾಡುವ ನಡಿಗೆಯಿಂದ ನಾನು ನಿಂತಿದ್ದ ಕಡೆಗೆ ಬರಲು ಪ್ರಾರಂಭಿಸಿದಳು. ಅದನ್ನು ಕಂಡು ನಾನು ರೋಮಾಂಚನಗೊಂಡೆ! ನಾನು ಆಕೆಯನ್ನು ಪ್ರೋತ್ಸಾಹಿಸಲು ಪ್ರಾರಂಭಿಸಿದೆ, ಮತ್ತು ಆಕೆ ಆ ಕೋಣೆಯನ್ನು ದಾಟುವ ತನ್ನ ಮೊದಲ ಪ್ರಯತ್ನದಲ್ಲಿ ಸಫಲಳಾಗುತ್ತಾಳೋ ಎಂದು ನಾನು ಅತ್ಯಾಸಕ್ತಿಯಿಂದ ಆಕೆಯನ್ನು ನೋಡುತ್ತಾ ಇದ್ದೆ.
ಆಗ ನಡೆದ ಒಂದು ಅನಿರೀಕ್ಷಿತ ಸಂಗತಿಯಿಂದಾಗಿ ನನ್ನ ಸಂತೋಷವು ಮತ್ತೊಂದು ಹಂತಕ್ಕೆ ಏರಿತು. ಆ ಅಂಬೆಗಾಲು ಹಾಕಿ ನಡೆಯುತ್ತಿದ್ದ ನನ್ನ ಮಗಳು ವೇಗವಾಗಿ ಓಡಲು ಆರಂಭಿಸಲಿಲ್ಲ; ಆಕೆಯ ಅಕ್ಕ ನನ್ನ ಬಳಿ ಬಂದು, ನನ್ನ ಜೊತೆ ಸೇರಿಕೊಂಡು ತನ್ನ ತಂಗಿಯನ್ನು ಹುರಿದುಂಬಿಸಲು ಪ್ರಾರಂಭಿಸಿದಳು. ಆ ಸಣ್ಣ ಕೂಸನ್ನು ನೋಡಿ ನನ್ನ ಹಿರಿಯ ಮಕ್ಕಳಲ್ಲಿ ಒಬ್ಬಾಕೆಯು ನನ್ನೊಂದಿಗೆ ಆನಂದಿಸುವುದನ್ನು ನೋಡಿದಾಗ ನನ್ನ ಆನಂದವು ಹೆಚ್ಚಾಯಿತು ಮತ್ತು ನಾನು ಸಂತೋಷದಲ್ಲಿ ತೇಲಿಹೋದೆನು.
ಯಥಾರ್ಥವಾಗಿ, ನಾನು ನನ್ನ ಸಣ್ಣ ಮಗಳ ನಡಿಗೆಯ ಪ್ರಯತ್ನವನ್ನು ನೋಡಿ ಆನಂದಿಸುವುದಕ್ಕಿಂತ ಹೆಚ್ಚಾಗಿ, ನನ್ನ ಹಿರಿಯ ಮಗಳು ಆನಂದಿಸುವುದನ್ನು ನೋಡಿ ಇನ್ನೂ ಹೆಚ್ಚಿನ ಆನಂದವನ್ನು ಪಡೆದೆ, ಎಂದು ನನಗೆ ಅನಿಸಿತು.
"ದೇವರ ಕರುಣೆಯು ನಮ್ಮಲ್ಲಿರುವ ಪ್ರೀತಿಯ ಕೊರತೆಗಾಗಿ ನಮ್ಮನ್ನು ಪಶ್ಚಾತ್ತಾಪಕ್ಕೆ ನಡೆಸಲಿ ಮತ್ತು ಆತನು ತನ್ನ ಕುಟುಂಬಕ್ಕಾಗಿ ಹೊಂದಿರುವ ಪರಿಪೂರ್ಣ ಸಂತೋಷವನ್ನು ನಮ್ಮ ಹೃದಯಗಳಲ್ಲಿ ತುಂಬಿಸಿ, ಅದು ಉಕ್ಕಿ ಹರಿಯುವಂತೆ ಮಾಡಲಿ"
ಈ ಹಿಂದಿನ ವರ್ಷಗಳಲ್ಲಿ ಈ ತರಹದ ಘಟನೆಗಳು (ನಮ್ಮ ಕುಟುಂಬದಲ್ಲಿ) ಅನೇಕ ಬಾರಿ ಪುನರಾವರ್ತನೆಗೊಂಡಿವೆ, ಮತ್ತು ಆಗ ಪ್ರತೀ ಬಾರಿ ನನ್ನ ಮನಸ್ಸಿಗೆ ಹೊಳೆದಿರುವ ಒಂದು ಪಾಠ ಇದು: ನನ್ನ ಮಕ್ಕಳು ಒಬ್ಬರೊಂದಿಗೆ ಒಬ್ಬರು ಆನಂದಿಸುವಾಗ - ಒಬ್ಬರು ಇನ್ನೊಬ್ಬರ ಬೆಳವಣಿಗೆಯನ್ನು, ಅಥವಾ ಪ್ರತಿಭೆಯನ್ನು ನೋಡಿ ಆನಂದಿಸುವಾಗ - ಅದು ಅವರ ತಂದೆಯಾದ ನನ್ನ ಹೃದಯಕ್ಕೆ ಒಂದು ಅತ್ಯಂತ ಆಹ್ಲಾದಕರ ಸಂತೋಷವನ್ನು ನೀಡುತ್ತದೆ. ಅದಲ್ಲದೆ ಇದರಿಂದ ನಾನು ಕಲಿತಿರುವ ಇನ್ನೊಂದು ಸಂಗತಿ ಏನೆಂದರೆ, ನಾನು ಕ್ರಿಸ್ತನಲ್ಲಿ ಹೊಂದಿರುವ ನನ್ನ ಸಹೋದರ-ಸಹೋದರಿಯರನ್ನು ನೋಡಿ ನಿಜವಾದ ಪ್ರೀತಿಯಿಂದ ಆನಂದಿಸುವಾಗ, ನಾನು ನನ್ನ ಪರಲೋಕದ ತಂದೆಯ ಹೃದಯಕ್ಕೆ ಅತ್ಯಂತ ಆಹ್ಲಾದಕರ ಸಂತೋಷವನ್ನು ತರಲು ಸಾಧ್ಯವಾಗುತ್ತದೆ ಎಂದು.
ನಾವು ಆಧುನಿಕ ಮತ್ತು "ಅತ್ಯಂತ ವಿದ್ಯಾವಂತ" ಬುದ್ಧಿಯನ್ನು ಉಪಯೋಗಿಸಿ ನೋಡಿದರೆ, ದೇವರ ಕುಟುಂಬದ ಇತರ ಅಂಗಾಂಗಗಳನ್ನು ನೋಡಿ ಆನಂದಿಸುವುದು ಕ್ರಿಸ್ತನಲ್ಲಿ ಆನಂದಿಸುವ ಅನುಭವಕ್ಕೆ ಸರಿಹೊಂದುವುದಿಲ್ಲವೆಂದು ಮೇಲ್ನೋಟಕ್ಕೆ ತೋರುತ್ತದೆ. ಆದಾಗ್ಯೂ, ಕ್ರೈಸ್ತರಲ್ಲಿ ಅತಿ ಶ್ರೇಷ್ಠರಾದ ದೇವಭಕ್ತರು ದೇವರ ಕುಟುಂಬದ ಇತರ ಸದಸ್ಯರನ್ನು ನೋಡಿ ಯಾವುದೇ ಮುಜುಗರವಿಲ್ಲದೆ ನಿರೂಪಿಸಿರುವ ವಚನಗಳು ನಮಗೆ ದೇವರ ವಾಕ್ಯದಲ್ಲಿ ಕಂಡುಬರುತ್ತವೆ.
"ನೀವು ನಮಗೆ ಅತಿ ಪ್ರಿಯರಾದ ಕಾರಣ, ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ, ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು" (1 ಥೆಸ. 2:8).
"ನಾನು ಸೆರೆಯಲ್ಲಿ ಪಡೆದಿರುವ ನನ್ನ ಮಗನಾದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಬೇಡಿಕೊಳ್ಳುತ್ತೇನೆ .... ಅವನು ನನಗೆ ಪ್ರಾಣದಂತಿದ್ದರೂ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ" (ಫಿಲೆಮೋನನಿಗೆ. 10,12).
"ಅವನು ರೋಗದಲ್ಲಿ ಬಿದ್ದು ಸಾಯುವ ಹಾಗಿದ್ದನೆಂಬುದು ನಿಜವೇ. ಆದರೆ ದೇವರು ಅವನನ್ನು ಕರುಣಿಸಿದರು; ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖ ಬಾರದಂತೆ ನನ್ನನ್ನೂ ಕರುಣಿಸಿದರು"(ಪಿಲಿಪ್ಪಿ. 2:27).
"ಕಣ್ಣು ಕೈಗೆ - ನೀನು ನನಗೆ ಅವಶ್ಯವಿಲ್ಲವೆಂದೂ, ತಲೆಯು ಕಾಲುಗಳಿಗೆ - ನೀವು ನನಗೆ ಅವಶ್ಯವಿಲ್ಲವೆಂದೂ ಹೇಳುವುದಕ್ಕಾಗುವುದಿಲ್ಲ .... ದೇಹದಲ್ಲಿ ಭೇದವೇನೂ ಇರದೆ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸುವ ಹಾಗೆ, (ಕ್ರಿಸ್ತನ ದೇಹದಲ್ಲಿಯೂ) ದೇವರು ಕೊರತೆಯುಳ್ಳದ್ದಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ಕ್ರಿಸ್ತನ ದೇಹವನ್ನು ಹದವಾಗಿ ಕೂಡಿಸಿದ್ದಾರೆ"1 ಕೊರಿ. 12:21,24-25).
"ಕ್ರಿಸ್ತ ಯೇಸುವಿನಲ್ಲಿರುವ ಪ್ರೀತಿಯಿಂದ ನಾನು ನಿಮ್ಮೆಲ್ಲರಿಗೋಸ್ಕರ ಎಷ್ಟೋ ಹಂಬಲಿಸುತ್ತೇನೆ; ಇದಕ್ಕೆ ದೇವರೇ ನನ್ನ ಸಾಕ್ಷಿ"(ಪಿಲಿಪ್ಪಿ.1:8).
"ಈಗ ನೀವು ಕರ್ತನಲ್ಲಿ ದೃಢವಾಗಿ ನಿಂತಾಗ, ನಮ್ಮಲ್ಲಿ ನಿಜವಾದ ಜೀವಕಳೆ ಉಂಟಾಗುತ್ತದೆ" (1 ಥೆಸ. 3:8).
ಸಭೆಗಾಗಿ ಪೌಲನಲ್ಲಿದ್ದ ಪ್ರೀತಿಯನ್ನು ನೋಡಿದಾಗ, ಅದು ನನ್ನೆದುರು ಒಂದು ದೊಡ್ಡ ಸವಾಲಾಗಿ ನಿಂತಿದೆ. "ನಾನು ಸಭೆಯನ್ನು ಪ್ರೀತಿಸುತ್ತೇನೆ" ಎಂದು ಹೇಳುವುದು ಸುಲಭ; ಆದರೆ ಮೇಲಿನ ವಚನಗಳಲ್ಲಿರುವ ಪೌಲನ ಉದಾಹರಣೆಯೊಂದಿಗೆ ಹೋಲಿಸಿ, ಸಭೆಯ ಯಾರೋ ಒಬ್ಬ ಸದಸ್ಯನಿಗಾಗಿ ನನ್ನಲ್ಲಿರುವ ಪ್ರೀತಿಯನ್ನು ಹೋಲಿಸಿ ನೋಡುವುದು ಇನ್ನೊಂದು ವಿಷಯ. ನಾನು ಇತರರ ಬೆಳವಣಿಗೆಯಲ್ಲಿ, ಮತ್ತು ಇತರರು ಹೊಂದಿರುವ ಆತ್ಮಿಕ ವರಗಳಲ್ಲಿ ಸಂತೋಷಿಸುತ್ತೇನೆಯೇ? ಈ ವಿಷಯದಲ್ಲಿ ನಾನು ಕರ್ತನ ಜೊತೆಗೆ ಸಾಗುತ್ತಿದ್ದೇನೆಯೇ (ಆತನು "ಅವರಿಗೋಸ್ಕರ ವಿಜ್ಞಾಪನೆ ಮಾಡುವುದಕ್ಕಾಗಿ ಯಾವಾಗಲೂ ಬದುಕುವವನಾಗಿದ್ದಾನೆ" - ಇಬ್ರಿ. 7:25)ಮತ್ತು ನನ್ನ ಹಿರಿಯ ಮಗಳು ಅಂಬೆಗಾಲಿಡುವ ತಂಗಿಗಾಗಿ ಮಾಡಿದಂತೆ, ನಾನು ಕ್ರಿಸ್ತನಲ್ಲಿರುವ ನನ್ನ ಕ್ರೈಸ್ತ ಸಹೋದರ-ಸಹೋದರಿಯರಿಗಾಗಿ ಹರ್ಷಧ್ವನಿ ಗೈಯುತ್ತೇನೆಯೇ?
ಹರ್ಷಧ್ವನಿಗೆ ವಿರೋಧವಾದದ್ದು
ನಾವು ಎಲ್ಲಾ ರೀತಿಯ ದ್ವೇಷಭಾವದಿಂದ ನಮ್ಮನ್ನು ಶುದ್ಧೀಕರಿಸಿಕೊಳ್ಳುವುದು ಬಹಳ ಪ್ರಾಮುಖ್ಯವಾದದ್ದು. ಆದಾಗ್ಯೂ ನಾವು ಇದನ್ನು ಮಾಡಿದ ಕೂಡಲೇ ಮೂರ್ಖತನದಿಂದ ನಮ್ಮನ್ನು ಅಭಿನಂದಿಸಿಕೊಳ್ಳುತ್ತೇವೆ ಮತ್ತು ನಮ್ಮಲ್ಲಿ ಯಾರ ವಿರುದ್ಧವಾಗಿಯೂ ಕಹಿಭಾವನೆ ಇಲ್ಲ, ಅಥವಾ ನಾವು ಚಾಡಿ ಹೇಳುವುದಿಲ್ಲ, ಅಥವಾ ನಾವು ಯಾರನ್ನೂ ನಿಂದಿಸುವುದಿಲ್ಲ, ಎಂಬ ವಿಷಯಗಳಿಗಾಗಿ ನಾವು ಹೆಚ್ಚಳಪಡುತ್ತೇವೆ, ಹಾಗೂ ಇತರರಿಗಾಗಿ ಸಂತೋಷಿಸುವುದರ ವಿರುದ್ಧವಾದ ಈ ಸಂಗತಿಗಳು ನಮ್ಮಲ್ಲಿಲ್ಲವೆಂದು ಅಂದುಕೊಳ್ಳುತ್ತೇವೆ. ಆದರೆ ನಾನು ಗಮನಿಸಿರುವ ಪ್ರಕಾರ, ಇತರರಿಗಾಗಿ ಸಂತೋಷಿಸುವುದರ ವಿರುದ್ಧವಾದ ಇನ್ನೊಂದು ಅತೀ ಅಪಾಯಕಾರಿಯಾದ ಸಂಗತಿಯ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು; ಅದು ಯಾವುದೆಂದರೆ, ಅಗತ್ಯವಾದದ್ದನ್ನು ಕಡೆಗಣಿಸುವ ಅಸಡ್ಡೆ.
"ನಾವು ಉಪವಾಸ ಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ? ನಮ್ಮ ಆತ್ಮವನ್ನು ಕುಂದಿಸಿಕೊಂಡಿದ್ದೇವೆ, ನೀನು ಗಮನಿಸದಿರುವುದೇಕೆ? ಎಂದು ಅವರು ಕೇಳುತ್ತಾರೆ. (ಕರ್ತನು ಇದಕ್ಕೆ ಉತ್ತರಿಸುತ್ತಾನೆ) ಇಗೋ, ನಿಮ್ಮ ಉಪವಾಸದ ದಿನದಲ್ಲಿಯೂ ನಿಮ್ಮ ಇಷ್ಟವಾದ ಕೆಲಸಗಳನ್ನು ನಡೆಸುತ್ತೀರಿ ಮತ್ತು ನಿಮ್ಮ ಆಳುಗಳನ್ನು ದುಡಿತಕ್ಕೆ ಎಳೆಯುತ್ತೀರಿ .... ನಾನು ಆಯ್ದುಕೊಳ್ಳುವ ಉಪವಾಸ ಯಾವುದೆಂದರೆ, ಕೇಡಿನ ಬಂಧಗಳನ್ನು ಬಿಡಿಸುವುದು, ಭಾರವಾದ ಹೊರೆಗಳನ್ನು ಬಿಚ್ಚುವುದು, ಜಜ್ಜಿಹೋದವರನ್ನು ಬಿಡುಗಡೆ ಮಾಡುವುದು, ನೊಗಗಳನ್ನೆಲ್ಲಾ ಮುರಿದುಹಾಕುವುದು, ಇವೇ ಅಲ್ಲವೇ? ಹಸಿದವರಿಗೆ ಊಟ ಬಡಿಸುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾಗಿರುವವರನ್ನು ಕಂಡರೆ ಅವರಿಗೆ ಬಟ್ಟೆ ಹೊದಿಸುವುದು, ನಿನ್ನಂತೆ ಇರುವ ಇತರ ಮಾನವರಿಂದ ಮುಖ ಮರೆಮಾಡದೇ ಇರುವುದು, ಇವುಗಳೇ ಅಲ್ಲವೇ? ಇದನ್ನು ಮಾಡಿದಾಗ ನಿನ್ನ ಸುತ್ತಲೂ ಸೂರ್ಯೋದಯದಂತೆ ಬೆಳಕು ಹರಡುವುದು, ನಿನ್ನ ಆರೋಗ್ಯವು ಬೇಗನೆ ಸುಧಾರಿಸುವುದು; ನಿನ್ನ ನೀತಿಯು ನಿನ್ನ ಮುಂದೆ ಹೋಗುವುದು; ಕರ್ತನ ಮಹಿಮೆಯು ನಿನಗೆ ಬೆನ್ನುಗಾವಲಾಗುವುದು"(ಯೆಶಾ. 58:3,6-8).
ಪ್ರತಿದಿನವೂ ದೇವರನ್ನು ಕಾಣಬೇಕೆಂದು ಹಾತೊರೆಯುತ್ತಿದ್ದ ಜನರಿಗೆ ದೇವರು ಮತ್ತೆ ಮತ್ತೆ ಸಾರಿ ಹೇಳಿದ ಪಾಪ ಯಾವುದೆಂದರೆ (ಯೆಶಾ. 58:1-2) ಅಜಾಗರೂಕತೆ, ಅಸಡ್ಡೆ ಮತ್ತು ನಿರ್ಲಕ್ಷ್ಯವೆಂಬ ಪಾಪವಾಗಿತ್ತು. ಅವರು ದೇವರನ್ನು ಅರಿಯಲು ಬಯಸಿದರು ಮತ್ತು ಆತನ ಮಾರ್ಗಗಳನ್ನು ಕಂಡುಕೊಳ್ಳಲು ಉತ್ಸುಕರಾಗಿದ್ದರು, ಆದರೂ ದೋಷಿಗಳೆಂದು ನಿರ್ಣಯಿಸಲ್ಪಟ್ಟರು, ಏಕೆಂದರೆ ಅಂತಹ ದೈವಿಕತೆಗೂ ಮತ್ತು ತಾವು ತಮ್ಮ ಸಹೋದರ-ಸಹೋದರಿಯರೊಂದಿಗೆ ಇರಿಸಿಕೊಳ್ಳುವ ಅನ್ಯೋನ್ಯತೆಗೂ ಯಾವುದೇ ಪರಸ್ಪರ ಸಂಬಂಧವಿಲ್ಲವೆಂದು ಅವರು ಭಾವಿಸಿದರು! ಅವರು ದೇವರನ್ನು ಹುಡುಕುತ್ತಿದ್ದರೂ, ದೇವರ ಕುಟುಂಬದ ಬಗ್ಗೆ ತಾವು ಉದಾಸೀನರಾಗಿ ಇರಬಹುದೆಂದು ಭಾವಿಸಿದರು!
ನಾವು ಕರ್ತನೊಂದಿಗೆ ನಡೆಯುವಾಗ, ನಮಗೆ ತಿಳಿದಿರುವ ಪಾಪಗಳ ಮೇಲೆ ಜಯಗಳಿಸುವಂತೆ ನಮ್ಮನ್ನು ನಡೆಸಲು ಆತನು ಖಂಡಿತವಾಗಿ ಬಯಸುತ್ತಾನೆ (ದ್ವೇಷ, ಚಾಡಿ ಹೇಳುವುದು, ನಿಂದಿಸುವುದು, ಇತ್ಯಾದಿ), ಆದರೆ ಅದಕ್ಕಿಂತ ಹೆಚ್ಚಾಗಿ, ನಾವು ಪ್ರತಿಯೊಂದು ಒಳ್ಳೆಯ ಕಾರ್ಯವನ್ನು ಅಸಡ್ಡೆ ಮಾಡದೆ (ಇದೂ ಸಹ ಪಾಪವಾಗಿದೆ) ಆಸಕ್ತಿಯಿಂದ ಮಾಡಬೇಕೆಂದು, ವಿಶೇಷವಾಗಿ ನಮ್ಮ ಹೃದಯದಲ್ಲಿ ಪ್ರೀತಿಯ ಕೊರತೆಯನ್ನು ಪರಿಹರಿಸಬೇಕೆಂದು, ಆತನು ನಮಗೆ ತೋರಿಸಿಕೊಡಲು ಇಚ್ಛಿಸುತ್ತಾನೆ. ನಮ್ಮಲ್ಲಿ ಕೇವಲ ನಮ್ಮ ಸ್ವಂತ ಅವಶ್ಯಕತೆಗಳಿಗಾಗಿ ಆತನ ಪ್ರೀತಿಯನ್ನು ತುಂಬಿಸುವುದು ಮಾತ್ರವಲ್ಲದೆ, ಆ ಪ್ರೀತಿಯು ಇತರರಿಗಾಗಿ ತುಂಬಿ ಹರಿಯುವಂತೆ ಮಾಡಲು ಆತನು ಬಯಸುತ್ತಾನೆ (ಯೋಹಾ. 7:38). ಇದನ್ನು ನಂಬುವುದು ಕಷ್ಟ, ಆದರೆ ಉದಾಸೀನತೆ ಅಥವಾ ಅಸಡ್ಡೆಯು ನೇರವಾದ ದ್ವೇಷಕ್ಕಿಂತಲೂ ಕೆಟ್ಟದಾಗಿದೆಯೆಂದು ದೇವರ ವಾಕ್ಯವು ಹೇಳುತ್ತದೆ - "ನಿನ್ನ ಕೃತ್ಯಗಳನ್ನು ನಾನು ಬಲ್ಲೆನು; ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ; ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇದ್ದರೆ ಒಳ್ಳೇದಾಗಿತ್ತು. ನೀನು ಬೆಚ್ಚಗೂ ಇಲ್ಲದೆ ತಣ್ಣಗೂ ಇಲ್ಲದೆ ಉಗುರುಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರುವೆನು"(ಪ್ರಕ. 3:15-16) - ನಿಜವಾಗಿ ದೇವರು ಉಗುರುಬೆಚ್ಚಗೆ ಇರುವುದಕ್ಕಿಂತ ತಣ್ಣಗಿರುವುದು ಮೇಲು ಎನ್ನುತ್ತಾರೆ!
ನಾನು ಏನನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದೇನೆ ಎಂಬುದನ್ನು ನೋಡುವುದಕ್ಕಿಂತ (ನಾನು ಅಸಡ್ಡೆ ಮಾಡುವಂತ ಒಳ್ಳೆಯ ಕಾರ್ಯಗಳು), ನಾನು "ತಿಳಿದೂ ಮಾಡುತ್ತಿರುವ ಕೆಟ್ಟದ್ದರ ಮೇಲೆ"(ನನ್ನ ತಪ್ಪು ಕಾರ್ಯಗಳು) ಹೆಚ್ಚು ಗಮನ ಕೊಡುವುದು ತುಂಬ ಸುಲಭ ಎಂಬುದನ್ನು ನಾನು ಗಮನಿಸಿದ್ದೇನೆ. ಆದರೆ ದೇವರು ಕೇವಲ ಕೆಟ್ಟದ್ದನ್ನು ("ತಣ್ಣಗೆ ಇರುವುದು") ತೆಗೆದುಹಾಕಿ, ನಮ್ಮ ಉದಾಸೀನಭಾವ ಅಥವಾ ಅಸಡ್ಡೆಯನ್ನು ("ಉಗುರುಬೆಚ್ಚಗೆ ಇರುವುದು") ಇದ್ದಂತೆಯೇ ಬಿಡುವುದರಲ್ಲಿ ತೃಪ್ತರಾಗುವುದಿಲ್ಲ; ಅವರು ಪ್ರವಾಹದಂತೆ ಹರಿಯುವ ಒಳ್ಳೆಯತನವನ್ನು ("ಅವರ ಉರಿಯುತ್ತಿರುವ ಪ್ರಜ್ವಲ ಪ್ರೀತಿ") ನಮ್ಮಲ್ಲಿ ತುಂಬಿಸಲು ಬಯಸುತ್ತಾರೆ; ಮತ್ತು ದೇವರ ಕೃಪೆಯಿಂದ ನಾವು ದಾಟಿಹೋಗಬೇಕಾದ ಅಪಾಯಕರ ಪ್ರದೇಶ ಪೊಳ್ಳುತನ, ನಿರುತ್ಸಾಹ, ಅಜಾಗರೂಕತೆ ಮತ್ತು ಅಸಡ್ಡೆ ಇವುಗಳು ತುಂಬಿರುವ ಮರುಭೂಮಿಯಾಗಿದೆ.
"ದೆವ್ವವು ಮನುಷ್ಯನನ್ನು ಬಿಟ್ಟುಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ; ವಿಶ್ರಾಂತಿ ಸಿಗದ ಕಾರಣ ಅದು, "ನಾನು ಬಿಟ್ಟುಬಂದ ನನ್ನ ಮನೆಗೆ ಹಿಂತಿರುಗಿ ಹೋಗುತ್ತೇನೆ" ಅಂದುಕೊಂಡು ಬಂದು, ಆ ಮನೆ ಗುಡಿಸಿ ವ್ಯವಸ್ಥಿತವಾಗಿರುವುದನ್ನು ಕಂಡು ಹೊರಟುಹೋಗಿ, ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುವುದು; ಅವು ಒಳಹೊಕ್ಕು ಅಲ್ಲಿ ವಾಸಮಾಡುವವು; ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗುವದು (ಲೂಕ. 11:24-26).
ದ್ವೇಷವು ನಮ್ಮ ಆತ್ಮಗಳಿಗೆ ಎಷ್ಟು ಅಪಾಯಕಾರಿಯಾಗಿದೆಯೋ, ಕ್ರಿಸ್ತನ ದೇಹವಾದ ಕ್ರೈಸ್ತಸಭೆಯಲ್ಲಿ ಅಸಡ್ಡೆ ಅಥವಾ ಅಜಾಗರೂಕತೆಯು ನಿಖರವಾಗಿ ಅಷ್ಟೇ ಅಪಾಯಕಾರಿಯಾಗಿದೆಯೆಂದು ನಾವು ಕಂಡುಕೊಳ್ಳಬೇಕು. ನಾವು ಇದನ್ನು ಗ್ರಹಿಸಿಕೊಂಡರೆ, ಇತರ ಸಹೋದರರ ಕಡೆಗೆ ನಮ್ಮ ಉದಾಸೀನತೆಯ ಬಗ್ಗೆ ನಮಗೆ ಪ್ರಕಟನೆ ನೀಡುವಂತೆ ನಾವು ಕರ್ತನನ್ನು ಕೇಳುತ್ತೇವೆ. ಆತನ ದಯೆಯು ಪ್ರೀತಿಯ ಎಲ್ಲಾ ಕೊರತೆಯ ಬಗ್ಗೆ ನಾವು ಪಶ್ಚಾತ್ತಾಪ ಪಡುವಂತೆ ಮಾಡಲಿ, ಮತ್ತು ದೇವರ ಕುಟುಂಬದ ಬಗ್ಗೆ ಆತನಲ್ಲಿರುವ ಸಂಪೂರ್ಣ ಆನಂದವನ್ನು ಆತನು ಪ್ರವಾಹದಂತೆ ಹರಿಸಿ ನಮ್ಮ ಹೃದಯಗಳನ್ನು ತುಂಬಿಸಲಿ. ನಾನು ಒಬ್ಬ ತಂದೆಯಾಗಿ ಸ್ವಂತ ಅನುಭವದ ಮೂಲಕ ಕಂಡಿರುವ ಅತ್ಯಂತ ಆಹ್ಲಾದಕರ ಸಂತೋಷದ ಕುರಿತಾಗಿ ಆಲೋಚಿಸಿದಾಗ, ಮತ್ತು ದೇವರ ಕುಟುಂಬದ ಇತರ ಸದಸ್ಯರಿಗಾಗಿ ದೇವರಲ್ಲಿರುವ ಪ್ರೀತಿಯನ್ನು ನಾವು ಹಂಚಿಕೊಂಡು ದೇವರ ಸಂತೋಷವನ್ನು ಹೆಚ್ಚಿಸುವ ಅವಕಾಶ ನಮ್ಮೆಲ್ಲರಿಗೆ ಇದೆಯೆಂದು ನೆನಪಿಸಿಕೊಂಡಾಗ, ನಾನು ಮಹತ್ತರವಾದ ಆಶೀರ್ವಾದವನ್ನು ಹೊಂದಿದ್ದೇನೆ.
"ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ಕೊಡುವ ಆಜ್ಞೆಯಾಗಿದೆ"(ಯೋಹಾ. 15:12).
"ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ .... ಮೊಟ್ಟ ಮೊದಲು ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ" (1 ಪೇತ್ರ. 4:7-8).
"ಅಧರ್ಮವು ಹೆಚ್ಚಾಗುವುದರಿಂದ ಬಹುಜನರ ಪ್ರೀತಿಯು ತಣ್ಣಗಾಗಿ ಹೋಗುವದು. ಆದರೆ ಕಡೆಯವರೆಗೂ ತಾಳುವವನು (ದೇವರ ಉರಿಯುತ್ತಿರುವ ಪ್ರೀತಿಯಲ್ಲಿ) ರಕ್ಷಣೆ ಹೊಂದುವನು" (ಮತ್ತಾ. 24:12-13).