WFTW Body: 

1ಕೊರಿಂಥದವರಿಗೆ 2:14,15 ರಲ್ಲಿ ನಾವು, "ಪ್ರಾಕೃತ ಮನುಷ್ಯ (ಪ್ರಾಣದಿಂದ ನಡೆಸಲ್ಪಡುವವನು)" ಹಾಗೂ "ಆತ್ಮಿಕ ಮನುಷ್ಯ (ದೇವರಾತ್ಮನಿಂದ ನಡೆಸಿಕೊಳ್ಳುವವನು)" ಎಂದು ಓದುತ್ತೇವೆ. ಒಬ್ಬ "ಪ್ರಾಣದಿಂದ ನಡೆಸಲ್ಪಡುವ ಕ್ರೈಸ್ತ" ಮತ್ತು ಒಬ್ಬ "ಆತ್ಮಿಕ ಕ್ರೈಸ್ತನ" ನಡುವೆ ಅಪಾರವಾದ ಅಂತರವಿದೆ. ದೇವಜ್ಞಾನವನ್ನು ಮಾನವ ಬುದ್ಧಿವಂತಿಕೆಯು ಅರಿಯಲಾರದು, ಏಕೆಂದರೆ ಅಲ್ಲಿ ಹೇಳಲ್ಪಟ್ಟಿರುವಂತೆ, "ಪ್ರಾಕೃತ ಮನುಷ್ಯನು ದೇವರಾತ್ಮನ ವಿಷಯಗಳನ್ನು ಅಂಗೀಕರಿಸುವುದಿಲ್ಲ; ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ; ಅವು ಆತ್ಮವಿಚಾರದಿಂದ ತಿಳಿಯತಕ್ಕವು ಆಗಿರುವುದರಿಂದ, ಅವನು ಅವುಗಳನ್ನು ಗ್ರಹಿಸಲಾರನು. ದೇವರಾತ್ಮನಿಂದ ನಡಿಸಿಕೊಳ್ಳುವವನೋ ಎಲ್ಲವನ್ನೂ ವಿಚಾರಿಸಿ ತಿಳುಕೊಳ್ಳುತ್ತಾನೆ; ಆದರೆ ಇವನನ್ನು ಯಾವನೂ ವಿಚಾರಿಸಿ ತಿಳಕೊಳ್ಳುವುದಿಲ್ಲ."

ಕಣ್ಣು ಮತ್ತು ಕಿವಿ ವಿಭಿನ್ನವಾಗಿರುವಂತೆ, ಮನಸ್ಸು ಮತ್ತು ಆತ್ಮವು ವಿಭಿನ್ನವಾಗಿವೆ. ಹೇಗೆ ಒಬ್ಬ ವ್ಯಕ್ತಿಯು ಉತ್ತಮ ಶ್ರವಣಶಕ್ತಿಯನ್ನು ಹೊಂದಿದ್ದರೂ ಕುರುಡನಾಗಿರಲು ಸಾಧ್ಯವಿದೆಯೋ, ಹಾಗೆಯೇ ಒಬ್ಬ ವ್ಯಕ್ತಿಯು ಬುದ್ಧಿಶಕ್ತಿಯಲ್ಲಿ ಮೇಧಾವಿಯಾಗಿದ್ದು, ಆತ್ಮಿಕವಾಗಿ ’ಸತ್ತಿರಬಹುದು’ - ಅಥವಾ ಇದಕ್ಕೆ ಪ್ರತಿಯಾಗಿ ಆತ್ಮಿಕ ನಿಪುಣನಲ್ಲಿ ಲೌಕಿಕ ಜಾಣತನ ಇಲ್ಲದಿರಬಹುದು. ಪ್ರಾಪಂಚಿಕ ಕಾರ್ಯಗಳನ್ನು ನಿಭಾಯಿಸಲು ನಮಗೆ ಚುರುಕಾದ ಬುದ್ಧಿಯು ಅವಶ್ಯವಾಗಿದೆ. ಆದರೆ ದೇವರ ಕುರಿತಾದ ವಿಷಯಗಳಲ್ಲಿ, ನಮ್ಮ ಆತ್ಮದ ಸ್ಥಿತಿಯೇ ಪ್ರಾಮುಖ್ಯವಾಗಿರುತ್ತದೆ. ದೇವರ ಜ್ಞಾನವನ್ನು ಪಡೆಯಲು ನಮಗೆ ಪವಿತ್ರಾತ್ಮನ ಪ್ರಕಟನೆ ಅವಶ್ಯವಾಗಿದೆ, ಮತ್ತು ಇದನ್ನು ದೀನತೆಯುಳ್ಳ ಜನರಿಗೆ ಮಾತ್ರ ನೀಡಲಾಗುತ್ತದೆ ("ಶಿಶುಗಳಂತೆ" ದೀನತೆಯ ಮನೋಭಾವವನ್ನು ಹೊಂದಿರುವವರಿಗೆ - ಮತ್ತಾ. 11:25), ಆದರೆ ಬುದ್ಧಿವಂತರಿಗೆ ಅಲ್ಲ (ಅವರಲ್ಲಿಯೂ ದೀನತೆ ಇದ್ದಾಗ ಇದು ಸಾಧ್ಯವಾಗುತ್ತದೆ).

ಒಬ್ಬ ಬುದ್ಧಿವಂತ ಮನುಷ್ಯನು ದೀನನಾಗಿರುವುದು ಕಷ್ಟ, ಆದರೂ ಅದು ಅಸಾಧ್ಯವಲ್ಲ. ಸ್ವ-ನೀತಿಯುಳ್ಳ ಒಬ್ಬ ಫರಿಸಾಯನಿಗೆ ತಾನು ಪಾಪಿಯೆಂದು ಒಪ್ಪಿಕೊಳ್ಳುವುದು ಕಷ್ಟಕರವಾದರೂ ಅಸಾಧ್ಯವಲ್ಲ, ಎಂಬುದಕ್ಕೆ ಇದನ್ನು ಹೋಲಿಸಬಹುದು. ವೇಶ್ಯೆಯರು ಮತ್ತು ಕಳ್ಳರೂ ಬಹಳ ಸುಲಭವಾಗಿ ತಾವು ಪಾಪಿಗಳೆಂದು ಒಪ್ಪಿಕೊಳ್ಳುತ್ತಾರೆ. ದೈವಿಕ ಪ್ರಕಟನೆಯ ವಿಷಯದಲ್ಲೂ ಹಾಗೆಯೇ: ವಿದ್ಯಾಭ್ಯಾಸವಿಲ್ಲದ ಒಬ್ಬ ಮನುಷ್ಯನು ತಾನು ಬುದ್ಧಿವಂತನಲ್ಲವೆಂದು ಒಪ್ಪಿಕೊಳ್ಳುವುದು ಸುಲಭ - ಹಾಗಾಗಿ ಆತನು ಹೆಚ್ಚು ತ್ವರಿತವಾಗಿ ದೈವಿಕ ಪ್ರಕಟನೆಯನ್ನು ಪಡೆಯಬಹುದು. ಅದಕ್ಕಾಗಿಯೇ ಯೇಸುವು ತನ್ನ ಹೆಚ್ಚಿನ ಸಮಯವನ್ನು ಶಾಸ್ತ್ರಾಭ್ಯಾಸ ಮಾಡದ ಮೂವರು ಮೀನುಗಾರರೊಂದಿಗೆ ಕಳೆದರು - ಪೇತ್ರ, ಯಾಕೋಬ ಮತ್ತು ಯೋಹಾನ - ಏಕೆಂದರೆ ಅವರು ಆತ್ಮಿಕ ವಿಷಯಗಳಿಗೆ ಬಹಳ ತ್ವರಿತವಾಗಿ ಸ್ಪಂದಿಸುತ್ತಿದ್ದುದನ್ನು ಅವರು ಕಂಡುಕೊಂಡರು. ಇದೇ ಕಾರಣಕ್ಕಾಗಿ ಫರಿಸಾಯರಿಗೆ ಕ್ರಿಸ್ತನನ್ನು ಸ್ವೀಕರಿಸುವುದು ಬಹಳ ಕಷ್ಟಕರವೆಂದು ಕಂಡು ಬಂತು - ಏಕೆಂದರೆ ಬುದ್ಧಿಶಕ್ತಿಯಿಂದಾಗಿ ಅವರಲ್ಲಿ ಉತ್ಪನ್ನವಾದ ಹೆಮ್ಮೆಯು ತಾವು ಆತ್ಮಿಕವಾಗಿ ಮೂರ್ಖರೆಂದು ಒಪ್ಪಿಕೊಳ್ಳದಂತೆ ಅವರನ್ನು ತಡೆಯುತ್ತಿತ್ತು. ನೀವು ಬುದ್ಧಿಜೀವಿಗಳು ಮತ್ತು ಬುದ್ಧಿವಂತ ಕಾಲೇಜು ವಿದ್ಯಾರ್ಥಿಗಳೊಂದಿಗೆ ಹೆಚ್ಚಾಗಿ ಬೆರೆಯುತ್ತಿದ್ದರೆ, ನೀವು ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

ದೇವರ ಮುಂದೆ ಮಾನವ ಬುದ್ಧಿವಂತಿಕೆಗೆ ಯಾವುದೇ ಮೌಲ್ಯವಿಲ್ಲ. ದೇವರಿಗೆ ಇದು ನಮ್ಮ ಮೈಬಣ್ಣದಷ್ಟೇ ಚಿಕ್ಕ ವಿಷಯವಾಗಿದೆ - ಈ ಎರಡು ಅಂಶಗಳೂ ನಮಗೆ ಹುಟ್ಟಿದಾಗಿನಿಂದಲೇ ಪ್ರಾಪ್ತವಾದವುಗಳು, ಮತ್ತು ಜನರು ಹುಟ್ಟಿದಾಗಲೇ ಪಡೆದಂತ ಈ ಸಂಗತಿಗಳು ದೇವರ ಮುಂದೆ ಅವರಿಗೆ ಯಾವ ಲಾಭವನ್ನೂ ಒದಗಿಸುವುದಿಲ್ಲ. ದೇವರ ದೃಷ್ಟಿಯಲ್ಲಿ ಜಾಣತನವು ಮಾನವ ನೀತಿವಂತಿಕೆಯ ಹಾಗೆ, ಹೊಲಸು ಬಟ್ಟೆಯಂತಿದೆ (ಯೆಶಾ. 64:6). ಕ್ರಿಸ್ತನು ನಮ್ಮನ್ನು ನೀತೀಕರಿಸುವುದು ಮಾತ್ರವಲ್ಲದೆ, ಆತನೇ ನಮಗೆ ಜ್ಞಾನವನ್ನೂ ಒದಗಿಸುತ್ತಾನೆ (1ಕೊರಿ. 1:30 ನೋಡಿರಿ).

ಅಪೊಸ್ತಲ ಪೌಲನ ಹಾಗಿನ ಒಬ್ಬ ಸ್ವನೀತಿವಂತ ಫರಿಸಾಯನೂ ಮತ್ತು ಅತೀ ಬುದ್ಧಿವಂತನೂ (ಇವೆರಡೂ ರಕ್ಷಿಸಲ್ಪಡುವದಕ್ಕೆ ತಡೆಯಾಗುತ್ತವೆ) ರಕ್ಷಣೆ ಹೊಂದಿದ್ದು ಮಾತ್ರವಲ್ಲದೆ, ಆತನು ಕ್ರಿಸ್ತನ ಒಬ್ಬ ಶ್ರೇಷ್ಠ ಅಪೊಸ್ತಲನಾಗಲು ಸಾಧ್ಯವಾದುದನ್ನು ನೋಡಿ ನಾವು ಪ್ರೋತ್ಸಾಹಿಸಲ್ಪಡುತ್ತೇವೆ. ಆದರೆ ಆತನು ತನ್ನನ್ನು ನಿರಂತರವಾಗಿ ತಗ್ಗಿಸಿಕೊಂಡದ್ದೇ ಇದಕ್ಕೆ ಕಾರಣವಾಗಿತ್ತು. ಆತನು ಕೊರಿಂಥದವರೊಂದಿಗೆ ಮಾತನಾಡುವಾಗ ತನ್ನ ಬುದ್ಧಿಶಕ್ತಿಯನ್ನು ಆಧರಿಸಿಕೊಳ್ಳಬಾರದು, ಎಂಬ ಭಯ ಅಥವಾ ಜಾಗರೂಕತೆ ಆತನಲ್ಲಿತ್ತು, ಹಾಗಾಗಿ ಆತನು ಅವರ ನಡುವೆ "ಬಲಹೀನನೂ, ಭಯ ಪಡುವವನೂ, ಬಹು ನಡುಗುವವನೂ ಆಗಿದ್ದನು" (1ಕೊರಿ. 2:3). ತಾನು ದೇವರಾತ್ಮನ ಬಲದಿಂದ ಬೋಧಿಸುವುದರ ಬದಲಾಗಿ ಸ್ವಂತ ಬುದ್ಧಿಶಕ್ತಿಯ (ಪ್ರಾಣದ) ಸಾಮರ್ಥ್ಯದಿಂದ ಬೋಧಿಸಬಾರದು ಎಂಬ ಭಯ ಅವನಲ್ಲಿತ್ತು. ನಾವೆಲ್ಲರೂ ಮಾತನಾಡುವಾಗ ನಮ್ಮಲ್ಲಿಯೂ ಇದೇ ರೀತಿಯ ಭಯವಿರಬೇಕು. ಇದಕ್ಕಾಗಿ ನಾವು ಸದಾ ಪವಿತ್ರಾತ್ಮನ ಶಕ್ತಿಗಾಗಿ ಪ್ರಾರ್ಥಿಸಬೇಕು - ನಮಗೆ ಇದು ನಿತ್ಯವೂ ಅವಶ್ಯವಾಗಿದೆ.

ಆದುದರಿಂದ, ಸತ್ಯವೇದದ ಸತ್ಯಾಂಶವು ಬುದ್ಧಿಶಕ್ತಿಯ ನಿಪುಣತೆಯಿಂದ ಪ್ರಸ್ತುತಪಟ್ಟರೆ, ಅದನ್ನು ನಾವು ಆತ್ಮನ ಬಲದ ಬೋಧನೆಯೆಂದು ತಪ್ಪಾಗಿ ತಿಳಿಯಬಾರದು. ಹಾಗೆಯೇ ಬಹಳ ಭಾವೋದ್ವೇಗದ ಒಂದು ಸಂದೇಶವನ್ನೂ ಸಹ ಆತ್ಮಿಕ ಸಂದೇಶವೆಂದು ನಾವು ತಪ್ಪಾಗಿ ಗ್ರಹಿಸಬಾರದು. ಬುದ್ಧಿಶಕ್ತಿ ಮತ್ತು ಭಾವನೆಗಳು ನಮ್ಮ ಪ್ರಾಣಕ್ಕೆ (ಅಥವಾ ಮನಸ್ಸಿಗೆ) ಸೇರಿದವುಗಳಾಗಿವೆ. ಇವು ಒಳ್ಳೆಯ ಸೇವಕರಾಗಿದ್ದರೂ ಕೆಟ್ಟ ಯಜಮಾನರಾಗಿವೆ. ಕೇವಲ ಪವಿತ್ರಾತ್ಮನು ಮಾತ್ರ ನಮ್ಮ ಜೀವಿತದ ಒಡೆಯನಾಗಿ ಇರಬೇಕು. ಒಟ್ಟಿನಲ್ಲಿ, ನಾನು ಆಗಾಗ ಹೇಳುವ ಹಾಗೆ, ಆತ್ಮಿಕ ಮನೋಭಾವವನ್ನು ಬೆಳೆಸಿಕೊಳ್ಳುವ ಮಾರ್ಗವು ಕ್ರಿಸ್ತೀಯ ಜೀವನದ ಈ ಮೂರು ರಹಸ್ಯಗಳಲ್ಲಿ ಅಡಕವಾಗಿದೆ: "ದೀನತೆ, ದೀನತೆ ಮತ್ತು ದೀನತೆ!" ಅದು ನಿಮ್ಮಲ್ಲಿದ್ದರೆ, ನಿಮಗೆ ಎಲ್ಲವೂ ಸರಿಯಾಗಿ ನಡೆಯುತ್ತದೆ.