ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಆತ್ಮಭರಿತ ಜೀವಿತ
WFTW Body: 

ಇಂದು ದೇವಜನರಲ್ಲಿ ಅನೇಕರು ಬಾಬೆಲಿನಲ್ಲಿ ಇದ್ದಾರೆ - ಈ ವಿಷಯವನ್ನು ’ಪ್ರಕಟನೆ 18:4' ಸ್ಪಷ್ಟ ಪಡಿಸುತ್ತದೆ. ಆ ವಚನದಲ್ಲಿ ದೇವರು ಅವರಿಗೆ, "ನನ್ನ ಜನರೇ, ಬಾಬೆಲನ್ನು ಬಿಟ್ಟುಬನ್ನಿರಿ," ಎನ್ನುತ್ತಾರೆ. ಇಲ್ಲಿ ಸಮಸ್ಯೆ ಅವರ ನಾಯಕರು ಮತ್ತು ಮಂದೆಯ ಕುರುಬರಲ್ಲಿದೆ, ಏಕೆಂದರೆ ಅವರು ಮಂದೆಯನ್ನು ತಪ್ಪು ದಾರಿಯಲ್ಲಿ ನಡೆಸುತ್ತಾರೆ. ಯೇಸುವಿನ ದಿನದಲ್ಲಿ ನಡೆದಂತೆ, ಇಂದು ದೇವಜನರಲ್ಲಿ ಹಲವರು "ಒಳ್ಳೆಯ ಕುರುಬರಿಲ್ಲದ ಕುರಿಗಳಂತೆ" ಇದ್ದಾರೆ (ಮತ್ತಾ. 9:36). ಯೇಸುವು ತನ್ನ 12ನೇ ವಯಸ್ಸಿನಿಂದ 30ನೇ ವಯಸ್ಸಿನ ವರೆಗೆ, ತಾನು ಪ್ರತಿ ವರ್ಷ ಮೂರು ಸಲ ಯೆರೂಸಲೇಮಿನ ದೇವಾಲಯಕ್ಕೆ ಹೋದಾಗ ಮತ್ತು ವಾರ ವಾರವೂ ನಜರೇತಿನ ಸಭಾಮಂದಿರದಲ್ಲಿ, ದೇವರಿಗೆ ಯಾವ ರೀತಿಯ ಅವಮಾನ ಮತ್ತು ಅಪಚಾರ ಸಲ್ಲುತ್ತಿತ್ತು ಎಂಬುದನ್ನು ಗಮನಿಸಿದ್ದರು, ಎನ್ನುವುದನ್ನು ಯೋಚಿಸಿ ನೋಡಿರಿ. ಆದರೆ ಇದರ ಕುರಿತಾಗಿ ಅವರು ಏನನ್ನೂ ಹೇಳಲಿಲ್ಲ ಅಥವಾ ಮಾಡಲಿಲ್ಲ, ಏಕೆಂದರೆ ಅದಕ್ಕೆ ತಕ್ಕದಾದ ದೇವರ ಸಮಯವು ಬಂದಿರಲಿಲ್ಲ. ಆದರೆ ಆ ವರ್ಷಗಳು ಮತ್ತು ಆ ಅನುಭವಗಳು ಆತನ ನಜರೇತಿನ ವಿದ್ಯಾಭ್ಯಾಸದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದವು ಮತ್ತು ಅವುಗಳು ಆತನ ಮುಂದಿನ ಸೇವೆಗೆ ಬೇಕಾಗಿದ್ದವು.

ಬಾಬೆಲಿನ ಆತ್ಮದ ಮೂಲಸ್ವರೂಪವು, ಮತ್ತಾಯ 19:27 (Living Bible) ರಲ್ಲಿ ಪೇತ್ರನು ಯೇಸುವಿಗೆ ಹೇಳಿದ ಮಾತಿನಲ್ಲಿ ಕಂಡುಬರುತ್ತದೆ, "ನಾವು ಇದನ್ನು ಮಾಡಿದ್ದರಲ್ಲಿ ನಮಗೆ ಏನು ದೊರಕುವದು?" ಆತನಂತೆ ನಾವು ಸಹ ಕರ್ತರಿಗಾಗಿ ಅನೇಕ ಸಂಗತಿಗಳನ್ನು ಈಗಾಗಲೇ ಬಿಟ್ಟುಬಿಟ್ಟಿದ್ದರೆ, ಕರ್ತರು ನಮಗೆ ಪ್ರತಿಫಲ ಕೊಡುತ್ತಾರೋ ಇಲ್ಲವೋ - ಸದ್ಯ ಇಹಲೋಕದಲ್ಲಿ ಮತ್ತು ಮುಂದೆ ಪರಲೋಕದಲ್ಲಿ - ಎಂದು ನಾವು ಸಂದೇಹ ಪಡಬಹುದು. ಇದು ಏನನ್ನು ತೋರಿಸುತ್ತದೆ ಎಂದರೆ, ನಾವು ದೇವಭಕ್ತಿಯನ್ನು ನಮ್ಮ ಲಾಭಸಾಧನವೆಂದು ಎಣಿಸಿದ್ದೇವೆ ಮತ್ತು ನಮ್ಮ ಅಲೋಚನೆಗಳಲ್ಲಿ ಸ್ವಾರ್ಥದೃಷ್ಟಿ ಇದೆ. ಕೆಲವರು ಲೋಕದಲ್ಲಿ ತಮ್ಮ ಬೋಧನೆ ಮತ್ತು ತಾವು ಕರ್ತರಿಗಾಗಿ ಮಾಡುವ ಸೇವೆಯಿಂದ ಹಣ ಸಂಪಾದನೆ ಅಥವಾ ಲೌಕಿಕ ಮಾನ್ಯತೆಯನ್ನು ಪಡೆಯಬೇಕೆಂದು ಬಯಸಬಹುದು. ಬೇರೆ ಕೆಲವರು ಪರಲೋಕದ ಪ್ರತಿಫಲಕ್ಕಾಗಿ ಅಥವಾ ’ಕ್ರಿಸ್ತನ ವಿವಾಹದ ಕನ್ಯೆ’ ಎಂಬ ಪದವಿಯನ್ನು ಪಡೆಯುವುದಕ್ಕಾಗಿ ಹಾತೊರೆಯಬಹುದು. ಅದು ಏನೇ ಆಗಿರಲಿ, ಅದರಲ್ಲಿ ನಮ್ಮ ಯಾವುದೋ ಸ್ವಂತ ಲಾಭ ಸೇರಿದ್ದರೆ, ನಮ್ಮಲ್ಲಿ ಬಾಬೆಲಿನ ಆತ್ಮವು ಇನ್ನೂ ಕೆಲಸ ಮಾಡುತ್ತಿದೆ. ನಾವು ಈ ಆತ್ಮಿಕ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಗೊಳಿಸಿಕೊಳ್ಳುವುದು ಅವಶ್ಯವಾಗಿದೆ.

ಪೇತ್ರನು ತಾನು ದೇವರ ಸೇವೆ ಮಾಡುವುದರಿಂದ ತನಗೆ ಏನು ಲಾಭವೆಂದು ಕೇಳಿದಾಗ, ಯೇಸುವು ಮತ್ತಾಯ 20:1-16 ರ ಮೂಲಕ ಸಾಮ್ಯ ರೂಪದಲ್ಲಿ ಉತ್ತರಿಸಿದರು. ಅಲ್ಲಿ ಯೇಸುವು ಎರಡು ವಿಧವಾದ ಕೆಲಸಗಾರರ ಬಗ್ಗೆ ಮಾತನಾಡಿದರು : (1) ಕೆಲವರು ಪ್ರತಿಫಲಕ್ಕಾಗಿ (ಸಂಬಳಕ್ಕಾಗಿ) ದುಡಿಯುತ್ತಾರೆ - ದಿನಕ್ಕೆ ಒಂದು ಪಾವಲಿ ಸಂಬಳ (2ನೇ ವಚನ), ಮತ್ತು ಬೇರೆ ಕೆಲವರು "ನ್ಯಾಯಬದ್ಧವಾದ ಕೂಲಿಯನ್ನು ಪಡೆಯುವವರು" (4ನೇ ವಚನ) - ಆದರೆ ಇಬ್ಬರೂ ಸಂಬಳಕ್ಕಾಗಿ ಕೆಲಸಕ್ಕೆ ಬಂದವರು; (2) ಇತರ ಕೆಲವರು ಸಂಬಳದ ಭರವಸೆಯಿಲ್ಲದೆ ಕೆಲಸಕ್ಕೆ ಹೋದರು (7ನೇ ವಚನ). ಈ ಎರಡನೇ ವರ್ಗದ ಕೆಲಸಗಾರರು ಅತಿ ಹೆಚ್ಚಿನ ಸಂಬಳವನ್ನು ಗಳಿಸಿದರು - ಒಂದು ತಾಸಿನ ಕೆಲಸಕ್ಕೆ ಒಂದು ಪಾವಲಿ ಸಂಬಳ. ಉಳಿದವರೆಲ್ಲರಿಗೆ ಕಡಿಮೆ ಸಂಬಳ ದೊರೆಯಿತು - ಮೊದಲನೇ ಗುಂಪಿನವರು 12 ಗಂಟೆಗಳ ಕಾಲ ಕೆಲಸ ಮಾಡಿ ಒಂದು ಪಾವಲಿ ಪಡೆದರು, ಅಂದರೆ ಪ್ರತಿಗಂಟೆಗೆ ಕೇವಲ 0.08 ಪಾವಲಿ. ಆದುದರಿಂದ ಯೇಸುವು ಈ ಸಾಮ್ಯದಲ್ಲಿ ಹೇಳಿದ್ದೇನೆಂದರೆ, ಈಗ ಯಾರು ಕಡೆಯವರಾಗಿದ್ದಾರೋ ಅವರು ದೇವರ ರಾಜ್ಯದಲ್ಲಿ ಮೊದಲಿನವರು ಆಗಿರುತ್ತಾರೆ - ಯಾಕೆಂದರೆ ದೇವರು ಮನುಷ್ಯನ ಪ್ರತಿಯೊಂದು ಕೆಲಸದ ’ಗುಣಮಟ್ಟ’ ಮತ್ತು ಅದರ ’ಮೂಲ ಉದ್ದೇಶ’ವನ್ನು ಪರೀಕ್ಷಿಸುವವರಾಗಿದ್ದಾರೆ (1 ಕೊರಿ. 3:13,4:5) ಮತ್ತು ಎಷ್ಟು ಪ್ರಮಾಣದ ಕೆಲಸ ಎಂಬುದನ್ನಲ್ಲ.

ಯೇಸುವು ಯೆರೂಸಲೇಮಿನ ಮಾರುಕಟ್ಟೆಯಲ್ಲಿ ತಮ್ಮ ಸ್ವಂತಕ್ಕೋಸ್ಕರ ಹಣ ಮಾಡುತ್ತಿದ್ದವರನ್ನು ಎಂದೂ ಹೊಡೆದೋಡಿಸಲಿಲ್ಲ. ಯಾಕೆಂದರೆ ಮಾರುಕಟ್ಟೆ ಇರುವುದೇ ಹಣ ಸಂಪಾದನೆ ಮಾಡುವುದಕ್ಕಾಗಿ. ಜಾನ್ ವೆಸ್ಲಿಯವರು ಹೀಗೆ ಹೇಳಿದರು, ಕ್ರೈಸ್ತರು ತಮ್ಮ ಕೈಲಾದಷ್ಟು ಮಟ್ಟಿಗೆ ಕಷ್ಟಪಟ್ಟು ದುಡಿದು ಹಣ ಸಂಪಾದಿಸಬೇಕು. ನಾನು ಈ ಮಾತನ್ನು ಒಪ್ಪುತ್ತೇನೆ. ದೇವಾಲಯದಲ್ಲಿ ಯಾರು ತಮ್ಮ ಸ್ವಂತ ಲಾಭ ನೋಡುತ್ತಿದ್ದರೋ, ಅಂಥವರನ್ನು ಮಾತ್ರ ಯೇಸುವು ಹೊಡೆದೋಡಿಸಿದರು. ಈ ದಿನವೂ ಹಾಗೆಯೇ; ಕ್ರೈಸ್ತಸಭೆಯಲ್ಲಿ ಯಾರು ತಮ್ಮ ಪ್ರತಿಷ್ಠೆ ಅಥವಾ ಖ್ಯಾತಿ ಅಥವಾ ಐಶ್ವರ್ಯ ಅಥವಾ ಇನ್ನೂ ಯಾವುದೇ ರೀತಿಯ ಲಾಭಕ್ಕಾಗಿ ಹವಣಿಸುತ್ತಾರೋ, ಅಂಥವರನ್ನು ಯೇಸುವು ಸಭೆಯಿಂದ ಹೊರಕ್ಕೆ ಅಟ್ಟಿಸುತ್ತಾರೆ. ಕ್ರೈಸ್ತಸಭೆಯು ಒಂದು ತ್ಯಾಗದ ಸ್ಥಳವಾಗಿರಬೇಕು. ಜೆಕರ್ಯನ ಪ್ರವಾದನೆಯ ಪುಸ್ತಕದ ಕೊನೆಯ ವಾಕ್ಯ, ಕರ್ತನು ಹಿಂದಿರುಗಿ ಬರುವ ಸಂದರ್ಭದ ಕುರಿತಾಗಿ ಹೀಗೆ ಹೇಳುತ್ತದೆ, "ಕರ್ತನ ಆಲಯದಲ್ಲಿ ದುರಾಸೆಯುಳ್ಳ ಯಾವ ವ್ಯಾಪಾರಿಯೂ ಇರುವುದಿಲ್ಲ" (ಜೆಕ. 14:21 - Living Bible). ನಾವು ನಮ್ಮನ್ನು ದೇವರ ಸೇವೆಯಲ್ಲಿ ತೊಡಗಿಸಿಕೊಂಡಾಗ, ನಮ್ಮ ಸ್ವಾರ್ಥಕ್ಕಾಗಿ ಏನನ್ನೂ ಬಯಸಬಾರದು.

ಕರ್ತರು ಅವರ ಯಥಾರ್ಥ ಸೇವೆ ಮಾಡುವವರಿಗೆ ಪ್ರತಿಫಲವನ್ನು ದಯಪಾಲಿಸುತ್ತಾರೆ, ಎಂಬ ವಾಗ್ದಾನವು ಮತ್ತಾಯನ ಸುವಾರ್ತೆಯಿಂದ ಪ್ರಕಟನೆ ಗ್ರಂಥದ ವರೆಗೆ ಹೊಸ ಒಡಂಬಡಿಕೆಯಲ್ಲಿ ಕಂಡುಬಂದರೂ, ನಾವು ಬಹುಮಾನಕ್ಕಾಗಿ ಕೆಲಸ ಮಾಡುವುದು ಸರಿಯಲ್ಲ. ಕರ್ತನು ನಮಗಾಗಿ ಕಲ್ವಾರಿಯ ಮೇಲೆ ಮಾಡಿದ ಕಾರ್ಯಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಲು ನಾವು ಕೆಲಸ ಮಾಡುತ್ತೇವೆ. ಯಾರು ಪ್ರತಿಫಲದ ಆಶೆಯಿಂದ ಕೆಲಸ ಮಾಡುತ್ತಾರೋ ಅವರಿಗೆ ಯಾವ ಬಹುಮಾನವೂ ಸಿಗುವುದಿಲ್ಲ!