WFTW Body: 

ವಿವೇಚನೆ

ನಾವು ಕಾಲದ ಅಂತ್ಯವನ್ನು ಸಮೀಪಿಸುತ್ತಿರುವಾಗ, ಕ್ರೈಸ್ತಸಭೆಯಲ್ಲಿ ಪವಿತ್ರಾತ್ಮನ ಕಾರ್ಯಾಚರಣೆಯು ಹೆಚ್ಚು ಹೆಚ್ಚಾಗಿ ಕಂಡುಬರುತ್ತದೆ. ಇದಲ್ಲದೆ, ಲೋಕದಲ್ಲಿ ಮರುಳುಗೊಳಿಸುವ ಆತ್ಮಗಳ ಕಾರ್ಯಾಚರಣೆಯೂ ಸಹ ಹೆಚ್ಚುತ್ತಾ ಹೋಗುತ್ತದೆ. ಈ ಕಾರಣಕ್ಕಾಗಿ, ನಾವು ಮರುಳಾಗುವುದನ್ನು ತಪ್ಪಿಸಿಕೊಳ್ಳಲು ಕೆಲವು ವಿಷಯಗಳ ಬಗ್ಗೆ ಎಚ್ಚರ ವಹಿಸಬೇಕು.

(1) ಭಾವೋತ್ತೇಜಕ ಸೋಗುಗಳು

(2) ಅತಿರಿಕ್ತ ನಡವಳಿಕೆ

(3) ಫರಿಸಾಯತನ, ಮತ್ತು

(4) ಕ್ರೈಸ್ತ ಸಿದ್ಧಾಂತಕ್ಕೆ ಹೊಂದಿಕೆಯಾಗದ ಮನೋಭಾವಗಳು

ವೈರಿಯು ಯಾವಾಗಲೂ ಪವಿತ್ರಾತ್ಮನು ಕಾರ್ಯ ನಿರತನಾಗಿರುವಲ್ಲೇ ಕೆಲಸ ಮಾಡುತ್ತಾನೆ. ಹಾಗಾಗಿ ನೀವು ನೋಡಿದ ಮತ್ತು ಕೇಳಿದ ಪ್ರತಿಯೊಂದನ್ನು ಒಡನೆಯೇ ಒಪ್ಪಿಕೊಳ್ಳಬೇಡಿ. ನಿಮ್ಮಲ್ಲಿ ವಿವೇಚನೆ ಇರಲಿ. ಪವಿತ್ರಾತ್ಮನ ಕದಲಿಸುವಿಕೆಯ ಜೊತೆಗೆ ಧ್ವನಿ ಮತ್ತು ಉದ್ವೇಗಗಳು ಕಂಡುಬರಬಹುದು - ಮತ್ತು ಇವುಗಳ ಮೂಲಕ ಕೆಲವು ಜನರು ತಮ್ಮ ಮಾನವ ಸ್ವಭಾವದ ಹಿಡಿತದಿಂದ ಮತ್ತು ಜನರ ಭಯದಿಂದ ಬಿಡುಗಡೆ ಹೊಂದಲು ಸಹಾಯ ಪಡೆಯುತ್ತಾರೆ. ನಾವು ನಮ್ಮ ಭಾವೋದ್ವೇಗಗಳ ಮೌಲ್ಯವನ್ನು ತಗ್ಗಿಸುವುದಿಲ್ಲ, ಏಕೆಂದರೆ ಅದು ದೇವರು ನಮಗೆ ಕೊಟ್ಟಿರುವ ವ್ಯಕ್ತಿತ್ವದ ಒಂದು ಅಂಶವಾಗಿದೆ. ಆದರೆ ಅದೇ ಸಮಯದಲ್ಲಿ, ನಾವು ಇವುಗಳಿಗೆ ಬಹಳ ಹೆಚ್ಚಿನ ಮಹತ್ವ ಕೊಡಬಾರದು, ಏಕೆಂದರೆ ದೇವರು ಹೃದಯವನ್ನು ನೋಡುತ್ತಾರೆ, ಭಾವೋದ್ವೇಗವನ್ನಲ್ಲ. ನೀವು ಪ್ರಾರ್ಥಿಸುವಾಗ ಧ್ವನಿಯನ್ನು ಏರಿಸುವುದು ಒಳ್ಳೆಯದೇ, ಏಕೆಂದರೆ ಅದು ನಿಮ್ಮ ಗಮನವನ್ನು ಅಕ್ಕಪಕ್ಕದ ಜನರಿಂದ ಬೇರ್ಪಡಿಸಲು ಸಹಾಯ ಮಾಡುತ್ತದೆ. ಇದು ಹೇಗೆಂದರೆ, ನೀವು ಪ್ರಾರ್ಥಿಸುವಾಗ ಇತರರಿಂದ ಅಡಚಣೆ ಉಂಟಾಗದಂತೆ ಕಣ್ಣುಗಳನ್ನು ಮುಚ್ಚಿಕೊಂಡು, ನಿಮ್ಮ ಧ್ಯಾನವನ್ನು ದೇವರ ಕಡೆಗೆ ಹರಿಸುವ ಹಾಗೆ. ಇಂತಹ ಕಾರ್ಯಗಳು ನಿಮ್ಮ ಪ್ರಾರ್ಥನೆಯನ್ನು ಹೆಚ್ಚು ಆತ್ಮಿಕವಾಗಿ ಮಾಡುವುದಿಲ್ಲ, ಆದರೆ ನಿಮ್ಮ ಪರಿಸರದಿಂದ ನಿಮ್ಮನ್ನು ಪ್ರತ್ಯೇಕಿಸಲು ಇವು ಸಹಾಯ ಮಾಡುತ್ತವೆ. ಪವಿತ್ರಾತ್ಮನ ಪ್ರಭಾವವು ಜೋರಾದ ಧ್ವನಿಯಿಂದ ತೋರಿಬರುವುದಿಲ್ಲ, ಆದರೆ ಅದು ಪರಿಶುದ್ಧ ಜೀವಿತ, ಸಭೆಯಲ್ಲಿ ಪ್ರಭಾವಶಾಲಿಯಾದ ಸೇವೆ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ನಾಚಿಕೆಯಿಲ್ಲದೆ ಕರ್ತನ ಸಾಕ್ಷಿಯಾಗಿ ಇರುವುದರ ಮೂಲಕ ಕಂಡುಬರುತ್ತದೆ.

ಮಾನವ "ಪ್ರಾಣ"ದಲ್ಲಿ ಅಪಾರವಾದ ಬಲವಿದೆ (ಬುದ್ಧಿಶಕ್ತಿಯ ಬಲ, ಭಾವಾವೇಶದ ಬಲ ಮತ್ತು ಮನೋಬಲ). ಹಾಗಾಗಿ ಅನೇಕ ಜನರು ಇದನ್ನು ಉಪಯೋಗಿಸಿಕೊಳ್ಳುತ್ತಾರೆ (ಉದಾಹರಣೆಗೆ, ಯೋಗಾಭ್ಯಾಸದಿಂದ) ಮತ್ತು ಇದನ್ನು ಪವಿತ್ರಾತ್ಮನ ಬಲವೆಂದು ಎಣಿಸುತ್ತಾರೆ. ಇಂತಹ ಬಲವು ನಿಮ್ಮನ್ನು ಮರುಳು ಮಾಡಬಾರದು. "ಪವಿತ್ರಾತ್ಮನು ಯಾವಾಗಲೂ ಕ್ರಿಸ್ತನನ್ನು ಮಹಿಮೆಗೊಳಿಸುತ್ತಾನೆ" - ಜನರನ್ನು ಅಥವಾ ಅನುಭವಗಳನ್ನಲ್ಲ. ನೀವು ವಂಚನೆಯ ಕಾರ್ಯಗಳನ್ನು ಸರಿಯಾಗಿ ಗುರುತಿಸಲಿಕ್ಕೆ ಒಂದು ಉತ್ತಮ ವಿಧಾನ ಇದಾಗಿದೆ.

ಶಿಸ್ತು

"ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಮತ್ತು ಶಿಕ್ಷಣದ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ" (2 ತಿಮೊ. 1:7) . ಪವಿತ್ರಾತ್ಮನು ನಿಮ್ಮ ಜೀವನದಲ್ಲಿ ಎಲ್ಲಾ ಭಯ ಮತ್ತು ಹೇಡಿತನವನ್ನು ತೆಗೆದುಹಾಕುತ್ತಾನೆ ಮತ್ತು ಅದರ ಜಾಗದಲ್ಲಿ ಬಲ, ಪ್ರೀತಿ ಮತ್ತು (ಶಿಸ್ತಿನ ಮೂಲಕ) ಶಿಕ್ಷಣವನ್ನು ಕೊಡುತ್ತಾನೆ. ಶಿಸ್ತು ಪಾಲನೆ ಮಾಡದೆ, ಯಾವ ಮನುಷ್ಯನೂ ನಿಜವಾದ ಆತ್ಮಿಕನು ಆಗಲಾರನು. ’ಸ್ವಸ್ಥಚಿತ್ತವು’ ದೇವರಾತ್ಮನಿಂದ ಉಂಟಾಗುವ ಫಲವಾಗಿದೆ (ಗಲಾ. 5:23) . ಶಿಸ್ತು ಇಲ್ಲದ ಜೀವನವು ತೂತು ಇರುವ ಒಂದು ಪಾತ್ರೆಯಂತಿದೆ. ಅದನ್ನು ಎಷ್ಟು ಸಲ ತುಂಬಿಸಿದರೂ, ಅದು ಖಾಲಿಯಾಗುತ್ತಾ ಇರುತ್ತದೆ. ಅದನ್ನು ಪದೇ ಪದೇ ತುಂಬಿಸಬೇಕಾಗುತ್ತದೆ.

ನೀವು ಈ ಮೂರು ಕ್ಷೇತ್ರಗಳಲ್ಲಿ ಶಿಸ್ತನ್ನು ಹೆಚ್ಚು ಹೆಚ್ಚಾಗಿ ಬೆಳೆಸಿಕೊಳ್ಳಬೇಕು:

(1) ನಿಮ್ಮ ದೇಹದ ಉಪಯೋಗದಲ್ಲಿ,

(2) ನಿಮ್ಮ ಸಮಯದ ಉಪಯೋಗದಲ್ಲಿ, ಮತ್ತು

(3) ನಿಮ್ಮ ಹಣದ ಬಳಕೆಯಲ್ಲಿ.

ರೋಮಾ. 8:13, ನಾವು ’ದೇಹದ ದುರಭ್ಯಾಸ’ಗಳನ್ನು ಪವಿತ್ರಾತ್ಮನಿಂದ ನಾಶ ಮಾಡಬೇಕೆಂದು ಹೇಳುತ್ತದೆ. ಇವುಗಳು ಹೃದಯದಿಂದ ಉಂಟಾಗುವ ಕಾರ್ಯಗಳಲ್ಲ - ಏಕೆಂದರೆ ಆ ಕಾರ್ಯಗಳು ಉದ್ದೇಶಪೂರ್ವಕ ಪಾಪಗಳು ಆಗಿರುತ್ತವೆ. ಇವು ನಮ್ಮ ಶರೀರದಲ್ಲಿ ಶಿಸ್ತು ಇಲ್ಲದಿರುವ ಕಾರಣ, ನಮ್ಮ ದೇಹವು ಸ್ವಾಭಾವಿಕವಾಗಿ ಮಾಡುವಂತ ಕಾರ್ಯಗಳಾಗಿವೆ - ಉದಾಹರಣೆಗೆ, ಅತಿಯಾಗಿ ಊಟ ಮಾಡುವುದು, ಅತಿಯಾಗಿ ನಿದ್ರಿಸುವುದು, ಅಥವಾ ಅತಿ ಮಾತಿನ ವಾಚಾಳಿತನ, ಇತ್ಯಾದಿಯಾದ ಕಾರ್ಯಗಳು. ಪವಿತ್ರಾತ್ಮನು ವಿಶೇಷವಾಗಿ ನಮ್ಮ ನಾಲಿಗೆಯನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ಬೇಕಾದ ಸಹಾಯವನ್ನು ಒದಗಿಸಲು ಇಚ್ಛಿಸುತ್ತಾನೆ.

ಎಫೆ. 5:16ರಲ್ಲಿ, ’ಸಮಯ’ವನ್ನು ವ್ಯರ್ಥಮಾಡದೆ, ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳುವಂತೆ ನಮಗೆ ತಿಳಿಸಲಾಗಿದೆ. ನೀವು ಶಿಸ್ತುಪಾಲನೆ ಮಾಡಿದರೆ, ಬಹಳಷ್ಟು ಸಮಯ ಪೋಲಾಗಿ ಹೋಗದಂತೆ ಉಳಿಸಿಕೊಳ್ಳಬಹುದು ಮತ್ತು ಅದನ್ನು ದೇವರ ವಾಕ್ಯದ ಅಭ್ಯಾಸಕ್ಕಾಗಿ ಬಳಸಿಕೊಳ್ಳಬಹುದು. ನೀವು ವಿಶ್ರಾಂತಿ ಪಡೆಯುವುದು ಅಥವಾ ಆಟವಾಡುವುದು, ಇಂತಹ ಚಟುವಟಿಕೆಗಳನ್ನು ಮಾಡಬಾರದೆಂದು ನನ್ನ ಮಾತಿನ ಅರ್ಥವಲ್ಲ. ನೀವು ಒಬ್ಬ ಸನ್ಯಾಸಿಯಾಗಬಾರದು, ಏಕೆಂದರೆ ಸನ್ಯಾಸವು ದಾಸತ್ವದ ಜೀವನವಾಗಿದೆ. ಆದರೆ ಯೇಸುವಿನ ಶಿಷ್ಯರು ರೊಟ್ಟಿಯ ತುಂಡುಗಳನ್ನು "ಯಾವುದೂ ವ್ಯರ್ಥವಾಗದಂತೆ" ಕೂಡಿಸಿದಂತೆ (ಯೋಹಾ. 6:12) , ನೀವು "ಸಮಯದ ತುಣುಕುಗಳನ್ನು ಸೇರಿಸಿಕೊಳ್ಳುವುದು" ಹೇಗೆಂದು ಯೋಚಿಸಿರಿ. ಶಿಸ್ತು ಬದ್ಧರಾಗಿ, ನಿಮ್ಮ ಸಮಯವನ್ನು ಉತ್ತಮವಾಗಿ ಉಪಯೋಗಿಸಿರಿ; ಆದರೆ ಈ ವಿಷಯದಲ್ಲಿ ತಿಕಲುತನ ಬೇಡ! ವಿಶ್ರಮಿಸಿರಿ.

ಲೂಕ. 16:11ರಲ್ಲಿ, "ಹಣದ ವಿಷಯದಲ್ಲಿ" ನಂಬಿಗಸ್ತರಾಗಿ ಇಲ್ಲದ ಜನರಿಗೆ ದೇವರು "ನಿಜವಾದ ಆತ್ಮಿಕ ಸಂಪತ್ತನ್ನು" ಕೊಡಲಾರರು, ಎಂದು ಯೇಸುವು ಹೇಳುತ್ತಾನೆ. ಇದರಲ್ಲಿ ಮೊದಲನೇ ಹೆಜ್ಜೆ, ’ಹಣದ ವಿಷಯದಲ್ಲಿ ನೀತಿವಂತಿಕೆ’ಯಾಗಿದೆ - ಮೋಸ ಮಾಡದಿರುವುದು, ಸಾಲವನ್ನು ಹಿಂದಿರುಗಿಸುವುದು, ಇತ್ಯಾದಿ. ಇದರ ಮುಂದಿನ ಹೆಜ್ಜೆ, ’ಹಣದ ವಿಷಯದಲ್ಲಿ ನಂಬಿಗಸ್ಥಿಕೆ’ - ದುಂದು ಬಳಕೆ, ಅದ್ದೂರಿ ಜೀವನ, ಉಪಯೋಗವಿಲ್ಲದ ಭೋಗವಸ್ತುಗಳು, ಅನಾವಶ್ಯಕ ಖರ್ಚು, ಇವುಗಳಿಂದ ದೂರವಿರುವುದು.

ಯಾರು ತಮ್ಮ ಜೀವನದಲ್ಲಿ ಪವಿತ್ರಾತ್ಮನ ಮೂಲಕ ’ಶಿಸ್ತನ್ನು ಪಾಲಿಸಲು’ ಒಪ್ಪಿಕೊಳ್ಳುತ್ತಾರೋ, ಅವರು ಕ್ರೈಸ್ತ ಜೀವಿತದಲ್ಲಿ ದೇವರಿಂದ ಅತ್ಯುತ್ತಮವಾದುದನ್ನು ಪಡೆಯುತ್ತಾರೆ, ಎಂಬುದನ್ನು ನೆನಪಿರಿಸಿಕೊಳ್ಳಿರಿ.