WFTW Body: 

ಕೆಲವು ವಿಶ್ವಾಸಿಗಳು, ದೇವರ ವಾಕ್ಯವು ಕೇವಲ ಒಂದೇ ಒಂದು ಆಜ್ಞೆಯನ್ನು ಹೊಂದಿದೆ ಎಂಬುದಾಗಿ ಪರಿಗಣಿಸುತ್ತಾರೆ - ಆ ಆಜ್ಞೆ ಯಾವುದೆಂದರೆ, ಈ ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ ಎಂಬುವಂತದ್ದು (ಮಾರ್ಕ 16:15). ಲೋಕದ ಉದ್ದಗಲದಲ್ಲಿನ ಕ್ರಿಸ್ತನ ಸಂಪೂರ್ಣ ದೇಹವು ನಿಶ್ಚಯವಾಗಿ ಆ ಆಜ್ಞೆಗೆ ವಿಧೇಯವಾಗಿದೆ. ವಿಶೇಷವಾಗಿ, ಕ್ರಿಸ್ತನ ದೇಹಕ್ಕೆ ಕ್ರಿಸ್ತನು ಕೊಟ್ಟಿರುವಂತ ಸುವಾರ್ತಿಕರು ಈ ಆಜ್ಞೆಗೆ ವಿಧೇಯರಾಗಿರುತ್ತಾರೆ (ಎಫೆಸ 4:11). ಆದರೆ ಈ ಒಂದು ಆಜ್ಞೆಯು, "ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ," (ಮತ್ತಾಯ 28:19) ಎಂಬುದಾಗಿ ಕ್ರಿಸ್ತನು ಕೊಟ್ಟ ಇನ್ನೊಂದು ಆಜ್ಞೆಯೊಂದಿಗೆ ಹೊಂದಿಕೊಂಡು ಹೋಗದಿದ್ದಲ್ಲಿ, ಕ್ರಿಸ್ತನ ದೇಹಕ್ಕಾಗಿ ಕೊಡಲ್ಪಟ್ಟ ಕಾರ್ಯವು ಪೂರ್ಣಗೊಳ್ಳದೆ ಹಾಗೆಯೇ ಉಳಿದುಕೊಳ್ಳುತ್ತದೆ.

ಯಾರು ತಮ್ಮ ಸ್ವಂತ ವೆಚ್ಚ ಮತ್ತು ಹೆಚ್ಚಿನ ಸ್ವ-ಪ್ರಯಾಸದ ಮೂಲಕ, ಲೋಕದಲ್ಲೆಲ್ಲಾ ಸುವಾರ್ತೆಯನ್ನು ಸಾರುತ್ತಿದ್ದಾರೋ ಮತ್ತು ಯೇಸುವಿನ ಹೆಸರನ್ನು ಕೇಳದೆ ಇರುವಂತವರಿಗೆ ಸುವಾರ್ತೆಯನ್ನು ಸಾರಿದ್ದಾರೋ, ಅಂಥವರ ವಿಷಯವಾಗಿ ನಾವು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. 20ನೇ ಶತಮಾನದ ಸುವಾರ್ತಾ ಪ್ರಸಾರದ ಒಂದು ಬೇಸರದ ಸಂಗತಿ ಏನೆಂದರೆ, ಮತ್ತಾಯ 28:19, 20ರಲ್ಲಿ ಕೊಟ್ಟಿರುವಂತ ಮೂರು ಆಜ್ಞೆಗಳು - ಜನರನ್ನು ಶಿಷ್ಯರನ್ನಾಗಿ ಮಾಡುವಂತದ್ದು, ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸುವಂತದ್ದು ಹಾಗೂ ಯೇಸುವಿನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವಂತದ್ದು - ಇವುಗಳು ಇಂದು ಬಹಳವಾಗಿ ನಿರ್ಲಕ್ಷಿಸಲ್ಪಟ್ಟಿವೆ. ವಿಶ್ವಾಸಿಗಳಲ್ಲಿ ಬಹುತೇಕ ಮಂದಿ ಶಿಷ್ಯತ್ವಕ್ಕೆ ಒತ್ತು ನೀಡದೇ ಸುವಾರ್ತೆಯನ್ನು ಮಾತ್ರ ಒತ್ತಿ ಹೇಳುವಾಗ, ನಮ್ಮ ಕರ್ತವ್ಯ ಏನಾಗಿರಬೇಕೆಂದರೆ, ಒತ್ತು ನೀಡದೇ ಇರುವಂಥದ್ದಕ್ಕೆ - ಅಂದರೆ ಶಿಷ್ಯಂದಿರನ್ನು ಮಾಡುವಂತದ್ದು - ಗಮನ ಹರಿಸುವುದು ಮತ್ತು ಮುಗಿಸದೇ ಬಿಡಲ್ಪಟ್ಟ ಕಾರ್ಯವನ್ನು ಮುಗಿಸುವುದಾಗಿದೆ.

ಅನೇಕರಲ್ಲಿ ಇರುವ ಕಾಳಜಿ, ಲೋಕದ ಬೇರೆ ಬೇರೆ ಕ್ಷೇತ್ರಗಳಿಗೆ ಸುವಾರ್ತೆಯನ್ನು ತಲುಪಿಸುವ ಕಾರ್ಯವು ಪೂರ್ಣಗೊಂಡಿಲ್ಲ ಎಂಬುದಾಗಿ ಮಾತ್ರವಾಗಿದೆ. ಆ ಭಾರವನ್ನು ದೇವರು ಸುವಾರ್ತಾ ಪ್ರಸಾರದ ಕರೆಯನ್ನು ಹೊಂದಿರುವವರಿಗೆ ಕೊಡುತ್ತಾರೆ. ಆದರೆ ಇತರರಿಗೆ ದೇವರು ಅದರಷ್ಟೇ ಮುಖ್ಯವಾದ ಇನ್ನೊಂದು ಕಾರ್ಯವನ್ನು - ಇನ್ನೂ ಹೆಚ್ಚು ಕಠಿಣವಾದ ಕಾರ್ಯವನ್ನು - ಅಂದರೆ ಮಾನಸಾಂತರ ಹೊಂದಿರುವಂಥವರನ್ನು ಶಿಷ್ಯಂದಿರನ್ನಾಗಿ ಮಾಡುವಂತ ಕಾರ್ಯವನ್ನು ಕೊಡುತ್ತಾರೆ.

ಇದಕ್ಕೆ ಒಂದು ಉದಾಹರಣೆಯನ್ನು ಕೊಡುವುದಾದರೆ, ಒಂದು ಬಡಗಿ ಅಂಗಡಿಯಲ್ಲಿ ಹೆಚ್ಚಿನ ಬಡಗಿಗಳು ಮೇಜಿನ ನಾಲ್ಕು ಕಾಲುಗಳನ್ನು ಮಾತ್ರ ಮಾಡುತ್ತಿದ್ದಾರೆ ಮತ್ತು ಬಹಳ ಕೆಲವರು ಮಾತ್ರ ಮೇಜುಗಳ ಮೇಲ್ಭಾಗವನ್ನು ತಯಾರಿಸುವುದರಲ್ಲಿ ತೊಡಗಿದ್ದಾರೆ, ಎಂದು ಅಂದುಕೊಳ್ಳಿರಿ. ಅದರ ಫಲಿತಾಂಶ ಏನೆಂದರೆ, ಬಡಗಿ ಅಂಗಡಿಯು ಅರೆವಾಸಿ ತಯಾರಾದ ಮೇಜುಗಳಿಂದ ತುಂಬಿರುತ್ತದೆ ಮತ್ತು ಬಡಗಿಗಳು ಇನ್ನೂ ಅರ್ಧಮರ್ಧ ಮೇಜುಗಳನ್ನು ತಯಾರಿಸುತ್ತಿದ್ದಾರೆ. ನಾವು ನಿಶ್ಚಯವಾಗಿ ಹೇಳಬಹುದಾದದ್ದು ಏನೆಂದರೆ, ನಜರೇತಿನಲ್ಲಿದ್ದ ಯೇಸುವಿನ ಬಡಗಿಯ ಅಂಗಡಿಯಲ್ಲಿ, ಒಂದು ಮೇಜನ್ನು ಸರಿಯಾಗಿ ಪೂರ್ಣಗೊಳಿಸಿದ ಮೇಲೆ ಮುಂದಿನ ಮೇಜಿನ ಕೆಲಸವನ್ನು ಶುರುಮಾಡುತ್ತಿದ್ದರು. ಯೇಸು ಯಾವಾಗಲೂ ಕೈಗೆತ್ತಿಕೊಂಡ ಒಂದು ಕಾರ್ಯವನ್ನು ಮುಗಿಸುವುದಕ್ಕೆ ಆದ್ಯತೆಯನ್ನು ನೀಡುತ್ತಿದ್ದರು (ಆತನು ಶಿಲುಬೆಯ ಮೇಲೆಯೂ ಸಹ, "ಇದು ತೀರಿತು" ಎಂದು ಹೇಳಿ ಕೊನೆಗೊಳಿಸಿದ ಹಾಗೆ) ಮತ್ತು ಯೇಸು ಇವತ್ತು ಸಹ ಹಾಗೆಯೇ ಇದ್ದಾರೆ. ನಾವು ಯೇಸುವಿನೊಟ್ಟಿಗೆ ಜೊತೆ ಕೆಲಸಗಾರರಾಗಿದ್ದೇವೆ ಮತ್ತು ನಾವೂ ಸಹ ಕೈಗೆತ್ತಿಕೊಂಡ ಒಂದು ಕೆಲಸವನ್ನು ಮುಗಿಸುವುದಕ್ಕೆ ಆದ್ಯತೆಯನ್ನು ಕೊಡಬೇಕು. ಮಾನಸಾಂತರ ಹೊಂದಿದ ಎಲ್ಲರೂ ಶಿಷ್ಯರಾಗುವದು ನಮ್ಮ ಆದ್ಯತೆಯಾಗಿರಬೇಕು.

ಹಳೆ ಒಡಂಬಡಿಕೆಯಲ್ಲಿ, ದೇವಜನರಾಗಿದ್ದ ಯೆಹೂದ್ಯರು ಒಂದೇ ದೇಹವಾಗಿರುವುದು ಅಸಾಧ್ಯವಾಗಿತ್ತು. ಯಾವಾಗ ಯೇಸು ಪರಲೋಕಕ್ಕೆ ಏರಿಸಲ್ಪಟ್ಟರೋ ಮತ್ತು ಪವಿತ್ರಾತ್ಮನು ಸುರಿಸಲ್ಪಟ್ಟು ಮನುಷ್ಯನೊಳಗೆ ಬಂದು ನೆಲಸಿದನೋ, ಆಗ ಜನರು ಒಂದೇ ದೇಹವಾಗಲು ಸಾಧ್ಯವಾಯಿತು. ಪ್ರಸ್ತುತ, ಇಬ್ಬರು ಒಂದಾಗಬಹುದು. ಹಳೆ ಒಡಂಬಡಿಕೆಯ ಇಸ್ರಾಯೇಲ್ ಒಂದು ಸಮೂಹವಾಗಿತ್ತು. ಇಸ್ರಾಯೇಲ್ ದೇಶವು ಗಾತ್ರದಲ್ಲಿ ಬೆಳೆಯುತ್ತಾ ಹೋಯಿತು, ಆಗಲೂ ಅದು ಒಂದು ಸಮೂಹವಾಗಿಯೇ ಉಳಿದಿತ್ತು. ಆದರೆ ಹೊಸ ಒಡಂಬಡಿಕೆಯ ಸಭೆಯು ಒಂದು ದೇಹವಾಗಿ ಇರುತ್ತದೆ, ಸಮೂಹವಾಗಿ ಅಲ್ಲ.

ಇಬ್ಬರು ಒಂದಾಗದೇ ಇದ್ದಾಗ, ಅಲ್ಲಿ ಕೇವಲ ಒಂದು ಸಮೂಹ ಕಂಡುಬರುತ್ತದೆ. ಕ್ರಿಸ್ತನ ದೇಹದಲ್ಲಿ ಗಾತ್ರವು ಪ್ರಮುಖವಾದದ್ದಲ್ಲ, ಐಕ್ಯತೆಯು ಪ್ರಮುಖವಾದ ವಿಷಯವಾಗಿದೆ. ಮತ್ತು ಈ ಗುಣಮಟ್ಟದಿಂದ ವೀಕ್ಷಿಸಿ ನೋಡಿದಾಗ ಸಮೂಹವಲ್ಲದ ಒಂದು ”ಸಭೆ” ಕಾಣಸಿಗುವುದು ಅಪರೂಪದ ಮಾತು ಆಗಿದೆ. ಎಲ್ಲಿ ನೋಡಿದರೂ ಸಮೂಹಗಳು ಗಾತ್ರದಲ್ಲಿ ದೊಡ್ಡದಾಗಿ ಬೆಳೆಯುತ್ತಿರುವದು ಕಂಡುಬರುತ್ತದೆ - ಆದರೆ ಅವು ಐಕ್ಯತೆಯಲ್ಲಿ ಬೆಳೆಯುತ್ತಿರುವುದಿಲ್ಲ. ಅಲ್ಲಿ ನಾಯಕತ್ವದ ಮಟ್ಟದಲ್ಲಿಯೂ ಜಗಳ, ಹೊಟ್ಟೆಕಿಚ್ಚು ಮತ್ತು ಸ್ಪರ್ಧೆಯು ಕಾಣಸಿಗುತ್ತದೆ.

ಕ್ರಿಸ್ತನ ದೇಹದ ಪ್ರತಿರೂಪವು ಲೋಕದಲ್ಲಿ ಎಲ್ಲೆಡೆಯೂ ಬೇರೆ ಬೇರೆ ಸ್ಥಳಗಳಲ್ಲಿ ಕಾಣಿಸಬೇಕೆಂದು ದೇವರು ಬಯಸುತ್ತಾರೆ. ಬಾಬೆಲಿನ ಕ್ರೈಸ್ತತ್ವಕ್ಕೆ ಇದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಆದರೆ ದೇವರ ಕಾರ್ಯವು, ಯೇಸುವಿನ ಶಿಷ್ಯರ ಗುರುತು ಪರಸ್ಪರ ಗಾಢವಾದ ಪ್ರೀತಿಯೇ ಹೊರತು ಸಂಖ್ಯೆಯ ಹೆಚ್ಚಳವಲ್ಲ, ಎನ್ನುವುದನ್ನು ಗ್ರಹಿಸಿಕೊಂಡಿರುವ ದೇವಜನರ ಉಳಕೊಂಡಿರುವ ಒಂದು ಶೇಷಭಾಗದ ಮೂಲಕ ನಿರಂತರವಾಗಿ ಸಾಗುತ್ತದೆ.

ಕ್ರಿಸ್ತನ ದೇಹದಲ್ಲಿ, ಯಾವ ವರವು ಇಲ್ಲದ ವ್ಯಕ್ತಿಯೂ ಸೇರಿದಂತೆ ಪ್ರತಿಯೊಬ್ಬನೂ ಯೋಗ್ಯನೆಂದು ಎಣಿಸಲ್ಪಡುತ್ತಾನೆ. ಆತನಿಗೆ ಮಹತ್ವ ಕೊಡಲ್ಪಡುವದು ಏಕೆಂದರೆ, ಆತನು ದೇಹದ ಒಂದು ಅಂಗವಾಗಿದ್ದಾನೆ. ನಿಜವಾಗಿಯೂ, ದೇವರು ಕೊರತೆಯುಳ್ಳ ಅಂಗಕ್ಕೆ ಹೆಚ್ಚಿನ ಮಾನವನ್ನು ಕೊಟ್ಟು ದೇಹದಲ್ಲಿ ಐಕ್ಯತೆಯನ್ನು ತುಂಬಿದ್ದಾರೆ (1 ಕೊರಿಂಥ 12:24, 25). ಸಭೆಯಲ್ಲಿ ನಾವು ದೇವರ ಮಾದರಿಯನ್ನು ಅನುಸರಿಸಬೇಕು ಮತ್ತು ಒಬ್ಬರಿಗೆ ವರವು ಕೊಡಲ್ಪಟ್ಟಿಲ್ಲವಾದಲ್ಲಿ, ಅವರು ದೇವರಿಗೆ ಭಯಪಡುತ್ತಿದ್ದರೆ ಮತ್ತು ದೀನತೆಯಿಂದ ಇದ್ದರೆ ಅಂಥವರನ್ನು ಸನ್ಮಾನಿಸಬೇಕು. ಬಾಬೆಲಿನಲ್ಲಿ, ವರವುಳ್ಳಂತ ಬೋಧಕನು, ವರವುಳ್ಳಂತ ಹಾಡುಗಾರನು ಮತ್ತು ಮಾನಸಾಂತರ ಹೊಂದಿದ ಅಂತರಿಕ್ಷಯಾತ್ರಿಯು ಸನ್ಮಾನ ಪಡೆಯುತ್ತಾರೆ. ಆದರೆ ಸಭೆಯಲ್ಲಿ (ದೇವರ ಗುಡಾರ), ಯಾರಲ್ಲಿ ಕರ್ತರ ಭಯಭಕ್ತಿ ಇದೆಯೋ ಅಂಥವರನ್ನು ನಾವು ಸನ್ಮಾನಿಸುತ್ತೇವೆ (ಕೀರ್ತನೆಗಳು 15:1, 4).

ಯೇಸುವು ನಮಗೆ ತಿಳಿಸಿಕೊಟ್ಟಂತ ವಿಷಯಗಳಿಗೆ ವಿಧೇಯರಾಗಬೇಕೆಂದು ನಾವು ಎಲ್ಲಾ ಕ್ರೈಸ್ತರಿಗೆ ಬೋಧಿಸಬೇಕು, ಎಂಬುದಾಗಿ ಯೇಸು ಹೇಳಿದ್ದಾರೆ (ಮತ್ತಾಯ 28:20). ದೇವರು ಯಜ್ಞಕ್ಕಿಂತ ಹೆಚ್ಚಾಗಿ ವಿಧೇಯತೆಯನ್ನು ಬಯಸಿ ಮೆಚ್ಚುತ್ತಾರೆ (1 ಸಮುವೇಲ 15:22). ನಾವು ದೇವರಿಗೆ ನಮ್ಮ ಪ್ರೀತಿಯನ್ನು ರುಜುವಾತು ಪಡಿಸಲು ದೈಹಿಕವಾಗಿ ಅನೇಕ ಬಾಧೆಗಳನ್ನು ಪಡಬೇಕು ಎನ್ನುವದು ಅನ್ಯಮತಗಳ ಆಲೋಚನೆಯಾಗಿದೆ. ಭಾರತದ ಅನ್ಯಜನರ ಸಂಸ್ಕೃತಿಯಲ್ಲಿ ಇದು ಪ್ರಚಲಿತವಾಗಿದೆ ಮತ್ತು ದುರದೃಷ್ಟವಶಾತ್ ನಮ್ಮ ದೇಶದ ಕ್ರೈಸ್ತತ್ವಕ್ಕೂ ಸಹ ಇದು ಹರಡಿಕೊಂಡಿದೆ. ಇದರಿಂದಾಗಿ ಒಬ್ಬನು ಲೌಕಿಕ ಕೆಲಸವನ್ನು ಬಿಟ್ಟು, ಯಾವುದೋ ಒಂದು ಕಠಿಣ ಸ್ಥಳಕ್ಕೆ ಹೋಗಿ, ಹಲವಾರು ರೀತಿಯ ಪರಿಶ್ರಮ ಪಡುವುದು ಆತ್ಮಿಕತೆಯಾಗಿದೆ ಎಂಬುದಾಗಿ ಚಿತ್ರೀಕರಿಸಲ್ಪಟ್ಟಿದೆ. ಇವೆಲ್ಲವುಗಳಲ್ಲಿ ಹೆಚ್ಚು ತ್ಯಾಗವಿದೆ, ಆದರೆ ಇವು ದೇವರ ವಾಕ್ಯಕ್ಕೆ ವಿಧೇಯರಾಗುವುದಕ್ಕೆ ಬದಲಿ ವ್ಯವಸ್ಥೆ ಎಂದಿಗೂ ಆಗಲಾರವು.

ಯೇಸುವಿಗಾಗಿ ಇರುವಂತ ನಮ್ಮ ಪ್ರೀತಿಯು ಯಜ್ಞಗಳ ಮೂಲಕ ತೋರಿಬರುವದಿಲ್ಲ, ಆದರೆ ಆತನ ಆಜ್ಞೆಗಳಿಗೆ ವಿಧೇಯರಾಗುವುದರಿಂದ ತೋರಿಬರುತ್ತದೆ - ಇದನ್ನು ಸ್ವತಃ ಯೇಸುವೇ ಯೋಹಾನ 14:15ರಲ್ಲಿ ಹೇಳಿದ್ದಾರೆ. ಮತ್ತಾಯ 5ನೇ ಅಧ್ಯಾಯದಿಂದ 7ನೇ ಅಧ್ಯಾಯದ ವರೆಗೆ ಯೇಸುವು ನಮಗೆ ಕಲಿಸಿದಂತ ವಿಷಯಗಳಿಗೆ ವಿಧೇಯರಾಗುವುದು ನಾವು ಆತನಿಗಾಗಿ ಹೊಂದಿರುವಂತ ಪ್ರೀತಿಗೆ ದೊಡ್ಡ ರುಜುವಾತಾಗಿದೆ; ಇದು ಸಂಬಳದಲ್ಲಿ ಶೇಕಡಾ 50ರಷ್ಟು ಭಾಗವನ್ನು ಕೊಡುವುದಕ್ಕಿಂತ ಅಥವಾ ನಮ್ಮ ಇಹಲೋಕದ ಕೆಲಸವನ್ನು ಬಿಟ್ಟು ಒಬ್ಬ ಮಿಷನರಿ ಆಗುವುದಕ್ಕಿಂತ ಹೆಚ್ಚಿನ ರುಜುವಾತಾಗಿದೆ.

ಪವಿತ್ರತೆಯು ನಿಜವಾದ ಸಭೆಯ (ಯೆರುಸಲೇಮ್) ಗುಣಲಕ್ಷಣವಾಗಿದೆ. ಹಾಗಾಗಿ ಯೆರುಸಲೇಮಿನ ಬೆಳವಣಿಗೆಯು ಪವಿತ್ರತೆಯ ಬೆಳವಣಿಗೆಯ ಆಧಾರದ ಮೇಲೆ ಅಳೆಯಲ್ಪಡುತ್ತದೆ - ಇದರಲ್ಲಿ ನಮ್ಮಲ್ಲಿ ಒಬ್ಬರಿಗೊಬ್ಬರಿಗೆ ಇರುವ ಪ್ರೀತಿಯು ಸಹ ಸೇರಿದೆ. ಜೀವದ ಮಾರ್ಗವು ಇಕ್ಕಟ್ಟಾಗಿದೆ ಮತ್ತು ಕೆಲವರು ಮಾತ್ರ ಆ ಮಾರ್ಗವನ್ನು ಕಂಡುಕೊಳ್ಳುತ್ತಾರೆ, ಎಂದು ಯೇಸು ಹೇಳಿದರು. ಯೇಸು ಎಷ್ಟು ಇಕ್ಕಟ್ಟಾದ ಬಾಗಿಲನ್ನು ಮಾಡಿದ್ದಾನೋ, ಅಷ್ಟೇ ಇಕ್ಕಟ್ಟಾದ ಬಾಗಿಲಿನ ಸಂದೇಶವನ್ನು ಯಾರು ಸಾರುತ್ತಾರೋ, ಅಂತಹ ಸಭೆಗೆ ಬಹಳ ಸ್ವಲ್ಪ ಜನ ಸೇರುತ್ತಾರೆಂದು ನಾವು ಕಂಡುಕೊಳ್ಳುತ್ತೇವೆ (ಮತ್ತಾಯ 7:13,14). ಒಂದು ವೇಳೆ ಇದಕ್ಕೆ ಬದಲಾಗಿ, ನಾವು ಆ ಬಾಗಿಲನ್ನು ಯೇಸುವು ಇರಿಸಿದ್ದಕ್ಕಿಂತ ವಿಶಾಲವಾಗಿ ಮಾಡಿದರೆ, ನಮ್ಮ ಸಂಖ್ಯೆಯನ್ನು ತುಂಬಾ ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಇಂದಿನ ಕ್ರೈಸ್ತತ್ವವು ಹೆಚ್ಚಿನ ಅಂಶ ಈ ವಿಷಯದಲ್ಲಿ ದಾರಿ ತಪ್ಪಿ ಹೋಗಿದೆ. ಯೇಸು ಇಕ್ಕಟ್ಟಾದ ಮಾರ್ಗದ ಬಗ್ಗೆ ಮಾತನಾಡಿದ್ದಾರೆ ಮತ್ತು ಇಕ್ಕಟ್ಟಾದ ಮಾರ್ಗವೆಂದರೆ ’ಪರ್ವತದ ಮೇಲೆ ಮಾಡಿದ ಪ್ರಸಂಗ’ದಲ್ಲಿ ಹೇಳಿರುವಂತ ವಿಷಯಗಳಾಗಿವೆ (ಮತ್ತಾಯ 5ನೇ ಅಧ್ಯಾಯದಿಂದ 7ನೇ ಅಧ್ಯಾಯ). ಈ ಅಧ್ಯಾಯಗಳಲ್ಲಿ ಹೇಳಿರುವಂತ ವಿಷಯಗಳು ಒಟ್ಟಾಗಿ ಇಕ್ಕಟ್ಟಾದ ಮಾರ್ಗ ಮತ್ತು ಇಕ್ಕಟ್ಟಾದ ಬಾಗಿಲುಗಳು ಆಗಿವೆ.