ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಯೇಸು ಹೀಗೆ ಹೇಳಿದನು. "ಭೂಲೋಕದಲ್ಲಿ ನಿಮ್ಮ ಸ್ವಂತಕ್ಕಾಗಿ ಹಣ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಅದಂತೂ ನುಸಿ ಹಿಡಿದು ಕಿಲುಬು ಹತ್ತಿ ಕೆಟ್ಟು ಹೋಗುವುದು. ಇಲ್ಲಿ ಕಳ್ಳರು ಕನ್ನ ಕೊರೆದು ಕದಿಯುವರು. ಆದರೆ ಪರಲೋಕದ ಜೀವಿತಕ್ಕಾಗಿ ಹೂಡಿಕೆ ಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬು ಹತ್ತಿ, ಕೆಟ್ಟು ಹೋಗುವುದಿಲ್ಲ. ಅಲ್ಲಿ ಕಳ್ಳರು ಕನ್ನ ಕೊರೆಯುವುದೂ ಇಲ್ಲ, ಕದಿಯುವುದೂ ಇಲ್ಲ. ನಿನ್ನ ಹಣದ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸು ಇರುವುದಷ್ಟೇ" (ಮತ್ತಾ. 6:19-21 - ಭಾವಾನುವಾದ). ಅನೇಕ ಜನರು ಹಣವನ್ನು ಪ್ರೀತಿಸುವುದು ತಪ್ಪು ಎಂಬುದಾಗಿ ನಂಬುವುದಿಲ್ಲ. ಹಣವನ್ನು ಹೊಂದಿರುವುದು ಪಾಪವಲ್ಲ, ಹಣದ ಪ್ರೀತಿ ಅಥವಾ ವ್ಯಾಮೋಹ ಒಂದು ಪಾಪವಾಗಿದೆ.

ನಾವು ಈ ಆಜ್ಞೆಯನ್ನು ಪಾಲಿಸಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಸುಲಭ. ನಿಮ್ಮ ಮನಸ್ಸು ಪರಲೋಕದ ವಿಷಯಗಳಿಗಿಂತ ಹೆಚ್ಚಾಗಿ ಇಹಲೋಕದ ವಿಷಯಗಳ ಬಗ್ಗೆ ಯೋಚಿಸುತ್ತಿದ್ದರೆ, ಅಂದರೆ ನೀವು ಪರಲೋಕದ ವಿಷಯಗಳಿಗಿಂತ ಹೆಚ್ಚಾಗಿ ನಿಮ್ಮ ಇಹಲೋಕದ ಆಸ್ತಿಪಾಸ್ತಿಗಳ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ಹೃದಯವು ಈ ಭೂಮಿಯ ಮೇಲಿದೆ ಮತ್ತು ನಿಮ್ಮ ಗಂಟು ಇಲ್ಲೇ ಇದೆ ಎಂದು ನೀವು ಖಚಿತವಾಗಿ ತಿಳಿಯಬಹುದು. ನಾವು ಈ ಆಜ್ಞೆಯನ್ನು ಪಾಲಿಸಿದ್ದೇವೆಯೇ ಎಂದು ತಿಳಿದುಕೊಳ್ಳುವ ಮಾರ್ಗವೆಂದರೆ, ನಮ್ಮ ಹೃದಯ ಎಲ್ಲಿ ನೆಲೆಸಿದೆಯೆಂದು ದಿನದ ಮಧ್ಯದಲ್ಲಿ ನಾವು ನಮ್ಮನ್ನೇ ಪ್ರಶ್ನಿಸುವುದು. ನಮ್ಮ ಕೆಲಸದ ಸಮಯದಲ್ಲಿ (ಅಥವಾ ಬೇರೆ ಚಟುವಟಿಕೆಗಳ ನಡುವೆ) ನಾವು ಯಾವುದೋ ಚಿಕ್ಕ ಆರ್ಥಿಕ ನಷ್ಟಕ್ಕಾಗಿ ತುಂಬಾ ಬೇಸರಗೊಂಡರೆ ಅಥವಾ ಯಾವುದೋ ಒಂದು ಆರ್ಥಿಕ ಲಾಭಕ್ಕಾಗಿ ಅತಿಯಾಗಿ ಸಂಭ್ರಮಪಟ್ಟರೆ, ಅದು ನಾವು ಈ ಭೂಮಿಯ ಮೇಲೆ ಗಂಟನ್ನು ಅಥವಾ ಗುಪ್ತನಿಧಿಯನ್ನು ಕೂಡಿಟ್ಟಿದ್ದೇವೆ ಎಂಬುದನ್ನು ಸೂಚಿಸುತ್ತದೆ.

ಅನೇಕ ವರ್ಷಗಳ ಹಿಂದೆ ಯಾರೋ ಒಬ್ಬರು ನನಗೆ ಹಣದ ಒಂದು ಸಣ್ಣ ಉಡುಗೊರೆಯನ್ನು ನೀಡಿದಾಗ, ಕರ್ತನು ನನ್ನನ್ನು ಈ ರೀತಿಯಾಗಿ ಪ್ರಶ್ನಿಸಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. "ನಿನ್ನ ಸಂತೋಷವು ಇದರಿಂದಾಗಿ ಹೆಚ್ಚಾಗಿದೆಯೇ?" ತಕ್ಷಣವೇ ಈ ಸ್ವಲ್ಪ ಹಣ ಸಿಕ್ಕಿದ್ದರಿಂದ ನನ್ನ ಸಂತೋಷ ಹೆಚ್ಚಿದೆಯೆಂದು ನನಗೆ ಅರಿವಾಯಿತು ಮತ್ತು ನಾನು ಅದನ್ನು ಕರ್ತನ ಮುಂದೆ ಒಪ್ಪಿಕೊಂಡೆ. ಹಣದಲ್ಲಿ ನನ್ನ ಸಂತೋಷ ಇರಬಾರದು, ಕೇವಲ ಕರ್ತನಲ್ಲಿ ಇರಬೇಕು, ಎಂಬುದನ್ನು ನಾನು ಆ ದಿನ ಕಲಿತುಕೊಂಡೆ. ಹಣದ ಹೆಚ್ಚಳ ಎಂದಿಗೂ ನನ್ನ ಸಂತೋಷವನ್ನು ಹೆಚ್ಚಿಸಬಾರದೆಂದು ನನಗೆ ಅರಿವಾಯಿತು. ಅದು ನನ್ನ ಸಂತೋಷವನ್ನು ಹೆಚ್ಚಿಸಿದರೆ, ನನ್ನ ಸಂತೋಷ ಹಣದಲ್ಲಿದೆ ಎಂದರ್ಥ.

ಕರ್ತನಲ್ಲಿ ಯಾವಾಗಲೂ ಸಂತೋಷಿಸಿರಿ, ಎಂದು ಸತ್ಯವೇದವು ಹೇಳುತ್ತದೆ ಮತ್ತು ಕರ್ತನು ನಿರಂತರವೂ ಬದಲಾಗದೆ ಇದ್ದಂತೆಯೇ ಇರುವನು. ಆದ್ದರಿಂದ ಕರ್ತನಲ್ಲಿ ನಿಮ್ಮ ಆನಂದ ನೀವು ಹಣ ಗಳಿಸಿದಾಗಲೂ, ಕಳೆದುಕೊಂಡಾಗಲೂ, ಹೆಚ್ಚಬಾರದು ಅಥವಾ ಕುಗ್ಗಲೂಬಾರದು. ಅದು ಒಂದೇ ಸಮನಾಗಿ ಇರಬೇಕು. ನೀವು ಹಣವನ್ನು ಕಳೆದುಕೊಂಡದ್ದರಿಂದ ನಿಮ್ಮ ಸಂತೋಷ ಕುಗ್ಗಿದರೆ, ನಿಮ್ಮ ಹೃದಯ ಹಣದಲ್ಲೇ ಇತ್ತೆಂದು ನೀವು ಖಚಿತವಾಗಿ ಹೇಳಬಹುದು. ನೀವು ಸ್ವಲ್ಪ ಹಣವನ್ನು ಪಡೆದಿದ್ದರಿಂದ ನಿಮ್ಮ ಸಂತೋಷ ಹೆಚ್ಚಿದರೆ, ನಿಮ್ಮ ಹೃದಯ ಹಣದಲ್ಲೇ ಇತ್ತೆಂದು ನೀವು ಖಚಿತವಾಗಿ ತಿಳಿಯಬಹುದು. ನಾವು ದೇವರನ್ನು ನಂಬಬೇಕು. ದೇವರು ನಮ್ಮ ಇಹಲೋಕದ ಜೀವಿತಕ್ಕೆ ಬೇಕಾದ ಎಲ್ಲವನ್ನೂ ಒದಗಿಸುತ್ತಾರೆ. ಆದಾಗ್ಯೂ ನಮ್ಮ ಸಂತೋಷ ಈ ಲೌಕಿಕ ವಸ್ತುಗಳನ್ನು ಆಧರಿಸಬಾರದು. ನಾವು ಈ ಲೌಕಿಕ ವಸ್ತುಗಳನ್ನು ಉಪಯೋಗಿಸಬಹುದು. ಆದರೆ ನಮ್ಮ ಆನಂದವನ್ನು ಅವುಗಳಲ್ಲಿ ಕಾಣಬಾರದು.

ಹಣ ಒಬ್ಬ ಅದ್ಭುತ ಸೇವಕನಾಗಿದೆ. ಆದರೆ ಬಹಳ ಕೆಟ್ಟ ಯಜಮಾನನೂ ಆಗಿದೆ. ಅದನ್ನು ಬೆಂಕಿಗೆ ಹೋಲಿಸಬಹುದು. ನಾವು ನಮ್ಮ ಮನೆಗಳಲ್ಲಿ ಬೆಂಕಿಯಿಲ್ಲದೆ ಜೀವಿಸಲಾರೆವು; ಉದಾಹರಣೆಗೆ, ಅಡುಗೆ ಮಾಡಲು ಬೆಂಕಿಯು ಬೇಕೇ ಬೇಕು. ಆದರೆ ಒಲೆಯ ಮೇಲಿರುವ ಆ ಬೆಂಕಿಯೇ ಹಿಡಿತವಿಲ್ಲದ ಯಜಮಾನನಾದರೆ, ಆಗ ಇಡೀ ಮನೆಯೇ ಸುಟ್ಟು ಭಸ್ಮವಾಗುತ್ತದೆ. ಬೆಂಕಿಯು ಬಹಳ ಅಪಾಯಕಾರಿ ಯಜಮಾನನಾಗಿದೆ. ನಿಮ್ಮ ಇಡೀ ಮನೆಯನ್ನೇ ಸುಟ್ಟುಹಾಕುವ ಸಾಮರ್ಥ್ಯ ಅದಕ್ಕಿದೆ. ಆದರೆ ನೀವು ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ (ಉದಾಹರಣೆಗೆ, ಒಲೆಯ ಗ್ಯಾಸಿನ ನಿಯಂತ್ರಕವನ್ನು ತಿರುಗಿಸುವಾಗ, "ನಿನ್ನನ್ನು ಯಾವಾಗ ಉರಿಸಬೇಕು ಮತ್ತು ಯಾವಾಗ ಆರಿಸಬೇಕು ಎಂದು ನಾನು ನಿರ್ಧರಿಸುತ್ತೇನೆ. ಅದನ್ನು ನಿರ್ಧರಿಸುವುದು ನಾನೇ ಹೊರತು ನೀನಲ್ಲ," ಎಂದು ಹೇಳಿರಿ). ಆಗ ನೀವು ಮನೆಯ ಯಜಮಾನನಾಗುತ್ತೀರಿ, ಬೆಂಕಿಯು ಅದ್ಭುತ ಸೇವಕನಾಗುತ್ತದೆ. ಹಣವನ್ನೂ ಕೂಡ ಬೆಂಕಿಯಂತೆಯೇ ಇರಿಸಿಕೊಳ್ಳಬೇಕು. ಹೇಗೆ ನಮಗೆ ಬೆಂಕಿ ಅಗತ್ಯವೋ, ಹಾಗೆಯೇ ಈ ಭೂಮಿಯ ಮೇಲಿನ ಜೀವಿತಕ್ಕೆ ಹಣವೂ ಅವಶ್ಯವಾಗಿದೆ. ಆದರೆ ಅದು ಒಬ್ಬ ಸೇವಕನಾಗಿರಬೇಕು. ನೀವು ಹೀಗೆ ಹೇಳಬೇಕು: "ಹಣವೇ, ನೀನು ನನ್ನನ್ನು ಆಳಬಾರದೆಂದು ನಾನು ನಿರ್ಧರಿಸಿದ್ದೇನೆ; ನಾನು ನಿನ್ನನ್ನು ಆಳುತ್ತೇನೆ. ನೀನು ನನ್ನ ಮನಸ್ಸನ್ನು ನಿಯಂತ್ರಿಸಿ, ಯಾವಾಗಲೂ ನಿನ್ನ ಬಗ್ಗೆಯೇ ಯೋಚಿಸುವಂತೆ ಮಾಡಬೇಡ. ನಾನು ಕರ್ತನ ಬಗ್ಗೆ ಮತ್ತು ಪರಲೋಕದ ವಿಷಯಗಳ ಬಗ್ಗೆ ಯೋಚಿಸುತ್ತೇನೆ, ಆದರೆ ನಿನ್ನನ್ನು ಬಳಸಿಕೊಳ್ಳುತ್ತೇನೆ." ಇದೇ ಒಬ್ಬ ಆತ್ಮಿಕ ಮನುಷ್ಯನ ನಿಲುವು ಆಗಿರುತ್ತದೆ.

ಚಿನ್ನವನ್ನು ಒಬ್ಬ ಸೇವಕನಂತೆ ಬಳಸಿಕೊಂಡರೆ, ಅದು ತುಂಬಾ ಉಪಯುಕ್ತವಾಗುತ್ತದೆ. ಪರಲೋಕದಲ್ಲೂ ಚಿನ್ನವಿದೆಯೆಂದು ಸತ್ಯವೇದ ಹೇಳುತ್ತದೆ! ಆದರೆ ಅಲ್ಲಿ ನಾವು ಚಿನ್ನದ ಬೀದಿಗಳ ಬಗ್ಗೆ ಓದುತ್ತೇವೆ. ಅಂದರೆ ನೀವು ಚಿನ್ನದ ಮೇಲೆ ನಡೆಯುತ್ತೀರಿ; ಅದು ನಿಮ್ಮ ಪಾದಗಳ ಕೆಳಗೆ ಇರುತ್ತದೆ. ಪರಲೋಕಕ್ಕೆ ಒಳಪಟ್ಟ ಒಬ್ಬ ಕ್ರೈಸ್ತ ಹಾಗೂ ಇಹಲೋಕಕ್ಕೆ ಒಳಪಟ್ಟ ಒಬ್ಬ ಕ್ರೈಸ್ತನ ನಡುವಿನ ವ್ಯತ್ಯಾಸ ಇದಾಗಿದೆ. ಪರಲೋಕಕ್ಕೆ ಒಳಪಟ್ಟ ಕ್ರೈಸ್ತನು ಚಿನ್ನವನ್ನು ತನ್ನ ಪಾದಗಳ ಕೆಳಗೆ ಇರಿಸಿದ್ದಾನೆ. ಅದು ಅವನನ್ನು ಆಳುವುದಿಲ್ಲ. ಆದರೆ ಲೌಕಿಕ ಮನಸ್ಸುಳ್ಳ ಕ್ರೈಸ್ತನು ಚಿನ್ನವನ್ನು ತನ್ನ ತಲೆಯ ಮೇಲೆ ಇರಿಸುತ್ತಾನೆ ಮತ್ತು ಅವನ ಮನಸ್ಸು ಯಾವಾಗಲೂ ಅದರಲ್ಲಿ ಮಗ್ನವಾಗಿರುತ್ತದೆ.

ಹಾಗಾಗಿ ಹಣವು ಯಾವಾಗಲೂ ನಿಮ್ಮ ಮನಸ್ಸಿನಲ್ಲಿದ್ದರೆ, ನೀವು ನಿಜವಾಗಿ ಹಣವನ್ನೇ ಪ್ರೀತಿಸುತ್ತಿದ್ದೀರಿ. ಆದರೆ ಈ ಮಾತನ್ನು ನೀವು ಅಂಗೀಕರಿಸಬಹುದು ಅಥವಾ ಒಪ್ಪದಿರಬಹುದು. ಇದು ಒಬ್ಬ ಹುಡುಗಿಯನ್ನು ಪ್ರೀತಿಸುವ ಒಬ್ಬ ಹುಡುಗನು, ಯಾವಾಗಲೂ ಅವಳ ಬಗ್ಗೆಯೇ ಯೋಚಿಸುವಂತಿದೆ. ಯಾರು ಯಾವಾಗಲೂ ಹಣದ ಬಗ್ಗೆ ಯೋಚಿಸುತ್ತಾರೋ, ಅವರು ಹಣದ ವ್ಯಾಮೋಹದಲ್ಲಿದ್ದಾರೆ, ಮತ್ತು ಹಣದಾಸೆಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಹಣದ ವ್ಯಾಮೋಹವನ್ನು ಹೊಂದಲು ನೀವು ಶ್ರೀಮಂತರಾಗಿರಬೇಕಿಲ್ಲ. ನಾನು ಭಾರತದಲ್ಲಿ ಇದು ವರೆಗೂ ಹಣವನ್ನು ಪ್ರೀತಿಸದಿರುವ ಒಬ್ಬನೇ ಒಬ್ಬ ಭಿಕ್ಷುಕನನ್ನೂ ಕಂಡಿಲ್ಲ. ಪ್ರತಿಯೊಬ್ಬ ಭಿಕ್ಷುಕನೂ ಹಣವನ್ನು ಪ್ರೀತಿಸುತ್ತಾನೆ. ನೀವು ಅವರಿಗೆ 50 ಪೈಸೆ ಕೊಟ್ಟರೆ, ಅವರು ಅದನ್ನು ತಿರಸ್ಕರಿಸುತ್ತಾರೆ. ಅವರು ಹಣವನ್ನು ಪ್ರೀತಿಸುತ್ತಾರೆ ಮತ್ತು ಇನ್ನೂ ಹೆಚ್ಚು ಬೇಕೆಂದು ಬಯಸುತ್ತಾರೆ. ಆದ್ದರಿಂದ, ಒಬ್ಬ ಮನುಷ್ಯನು ಹಣವನ್ನು ಪ್ರೀತಿಸುವಂತೆ ಮಾಡುವುದು ಸಂಪತ್ತಲ್ಲ. ಬಡವರೂ ಕೂಡ ಹಣವನ್ನು ಶ್ರೀಮಂತರಷ್ಟೇ ಪ್ರೀತಿಸುತ್ತಾರೆ.

"ಹಣವು - ಬೆಂಕಿಯಂತೆಯೇ, ಒಂದು ಅದ್ಭುತ ಸೇವಕನಾಗಿದೆ, ಆದರೆ ಅದೊಂದು ಅತ್ಯಂತ ಅಪಾಯಕಾರಿ ಯಜಮಾನನಾಗಿದೆ.

ಇನ್ನೊಂದು ಸಂಗತಿಯೆಂದರೆ, ನಿಮ್ಮ ಬಳಿ ಎಷ್ಟು ಸಂಪತ್ತಿದ್ದರೂ ನೀವು ಹಣದ ವ್ಯಾಮೋಹದಿಂದ ಬಿಡುಗಡೆ ಹೊಂದಬಹುದು. ಇದು ಹಣದ ಬಗ್ಗೆ ನೀವು ಇರಿಸಿಕೊಳ್ಳುವ ಮನೋಭಾವವನ್ನು ಅವಲಂಬಿಸಿದೆ. ನಿಮ್ಮ ಮನೆಯ ಸೇವಕನು ನಿಮ್ಮ ಮನೆಯನ್ನು ಆಳಲು ತೊಡಗಿದರೆ, ಅದು ತುಂಬಾ ಕೆಟ್ಟದಾಗಿರುತ್ತದೆ. ನಿಮ್ಮ ಬಳಿ ಕೇವಲ ಸ್ವಲ್ಪ ಹಣವಿರಬಹುದು (ಕೇವಲ ಒಬ್ಬ ಸೇವಕನಿರುವಂತೆ), ಆದರೆ ನಿಮ್ಮ ಮನೆ ಹಾಗೂ ನಿಮ್ಮ ಮನಸ್ಸಿನ ಆಲೋಚನೆಗಳಲ್ಲಿ ಹಣದ ಯೋಚನೆಯೇ ತುಂಬಿರಬಹುದು. ಮತ್ತೊಂದೆಡೆ, ಅಬ್ರಹಾಮನ ಮನೆಯಲ್ಲಿ 318 ಸೇವಕರಿದ್ದರೂ, ಅವರೆಲ್ಲರೂ ಅವನ ಸೇವೆ ಮಾಡಿದರು ಮತ್ತು ಅವನಿಗೆ ವಿಧೇಯರಾಗಿ ಇದ್ದರು. ನಿಮ್ಮ ಮನೆಯಲ್ಲೂ ಹೀಗಿರಬಹುದು. ಅಬ್ರಹಾಮನಂತೆ, ನಿಮ್ಮ ಬಳಿ ಬಹಳಷ್ಟು ಹಣವಿರಬಹುದು ಮತ್ತು ನೀವು ಅದನ್ನು ಸರಿಯಾಗಿ ಹಿಡಿತದಲ್ಲಿ ಇರಿಸಿಕೊಂಡರೆ, ಆಗ ನೀವು ಹಣವನ್ನು ದೇವರ ಮಹಿಮೆಗಾಗಿ ಬಳಸಿಕೊಳ್ಳಬಹುದು.

ಸಕಲ ವಿಧವಾದ ಕೆಟ್ಟತನಕ್ಕೆ ಹಣದಾಸೆಯು ಮೂಲವಾಗಿದೆ (ಬಹಳಷ್ಟು ಹಣ ಇಲ್ಲದಿರುವವರಲ್ಲೂ ಈ ಮನೋಭಾವ ಇರಬಹುದು). ಈ ಸೂಕ್ಷ್ಮ ವಿಷಯವನ್ನು (ಹಣ ಮತ್ತು ಹಣದಾಸೆ) ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಹಣವನ್ನು ಅಪಾರವಾಗಿ ಪ್ರೀತಿಸುವ ಅನೇಕ ಬಡ ಜನರನ್ನು ನಾನು ನೋಡಿದ್ದೇನೆ ಮತ್ತು ಹಣವನ್ನು ಪ್ರೀತಿಸದ ಶ್ರೀಮಂತರನ್ನೂ ನಾನು ನೋಡಿದ್ದೇನೆ. ಮುಖ್ಯ ಪ್ರಶ್ನೆ ನಿಮ್ಮ ಸಂಪತ್ತಿನ ಬಗ್ಗೆ ಅಲ್ಲ, ಬದಲಾಗಿ ನೀವು ಯಾವುದನ್ನು ಪ್ರೀತಿಸುತ್ತೀರಿ ಎಂಬುದು, ಎಂದು ನಾನು ಕಂಡುಕೊಂಡಿದ್ದೇನೆ. ಯೇಸುವು ಇದನ್ನೇ ಹೇಳಿದರು; ನಿಮ್ಮ ಮನಸ್ಸು ಪರಲೋಕದ ವಿಷಯಗಳ ಮೇಲೆ ನೆಲೆಸಬೇಕು. ಪರಲೋಕದಲ್ಲಿ ಸಂಪತ್ತನ್ನು ಕೂಡಿಟ್ಟುಕೊಳ್ಳಿರಿ; ನೀವು ಯಾವುದನ್ನು ಪ್ರೀತಿಸುತ್ತೀರಿ ಎಂಬುದನ್ನು ಕಂಡುಕೊಳ್ಳಲು, ನೀವು ಯಾವುದರ ಬಗ್ಗೆ ಆಲೋಚಿಸುತ್ತೀರಿ ಮತ್ತು ನಿಮ್ಮ ಹೃದಯ ಯಾವುದಕ್ಕಾಗಿ ತವಕಿಸುತ್ತದೆ ಎಂಬುದನ್ನು ಪರೀಕ್ಷಿಸಿರಿ.

ಯೇಸುವು ಮೇಲಿನ ವಿಷಯವನ್ನು ವಿವರಿಸಿದ ನಂತರ, ಹಣದ ಕುರಿತಾಗಿ ಕಣ್ಣನ್ನು ಪ್ರಸ್ತಾಪಿಸಿ, ಮತ್ತಾ. 6:22ರಲ್ಲಿ, "ಕಣ್ಣು ದೇಹಕ್ಕೆ ದೀಪವಾಗಿದೆ; ಹೀಗಿರುವಲ್ಲಿ ನಿನ್ನ ಕಣ್ಣು ನೆಟ್ಟಗಿದ್ದರೆ, ನಿನ್ನ ದೇಹವೆಲ್ಲಾ ಬೆಳಕಾಗಿರುವದು," ಎಂದು ಹೇಳಿದರು. ಇದು ತಿಳಿಸುವುದು ಏನೆಂದರೆ, ಹಣದ ಬಗ್ಗೆ ನಿಮ್ಮ ದೃಷ್ಟಿಯನ್ನು ಪರಿಗಣಿಸಬೇಕು. ನಿಮ್ಮ ದೃಷ್ಟಿ ಸರಿಯಾಗಿರದಿದ್ದರೆ, ನಿಮ್ಮ ದೃಷ್ಟಿಯಲ್ಲಿ ಹಣವು ಅತ್ಯಂತ ಮುಖ್ಯವಾಗಿರುತ್ತದೆ. ಭೂಮಿಯ ಮೇಲಿನ ನಿಮ್ಮ ಜೀವನಕ್ಕೆ ಹಣವೇ ಅತ್ಯಂತ ಪ್ರಾಮುಖ್ಯವಾದದ್ದೆಂದು ನೀವು ಪರಿಗಣಿಸುತ್ತೀರಿ, ಮತ್ತು ಇದರಿಂದಾಗಿ ನಿಮ್ಮ ದೇಹವು ಕತ್ತಲೆಯಿಂದ ತುಂಬಿರುತ್ತದೆ. "ಹಾಗಾದರೆ ನಿನ್ನೊಳಗಿರುವ ಬೆಳಕೇ ಕತ್ತಲಾದರೆ, ಆ ಕತ್ತಲು ಎಷ್ಟಿರಬೇಕು!" ಎಲ್ಲಾ ಮೂಲತತ್ವಗಳನ್ನು ಸರಿಯಾಗಿ ತಿಳಿದುಕೊಂಡು, ಇತರರ ದೃಷ್ಟಿಯಲ್ಲಿ ಉತ್ತಮ ಕ್ರೈಸ್ತರು ಅನಿಸಿಕೊಂಡು, ತಪ್ಪದೆ ಸಭಾಕೂಟಗಳಲ್ಲಿ ಪಾಲ್ಗೊಳ್ಳುವ ಅನೇಕ ಜನರು ಹಣವನ್ನು ಎಷ್ಟು ಅಪಾರವಾಗಿ ಪ್ರೀತಿಸುತ್ತಾರೆ ಎಂಬುದು ಆಶ್ಚರ್ಯಕರವಾಗಿದೆ. ಹೊಸ ಒಡಂಬಡಿಕೆಯ ಮಾದರಿಯ ಕ್ರೈಸ್ತಸಭೆಗಳ ಸದಸ್ಯರೆಂದು ಹೇಳಿಕೊಳ್ಳುವ ಜನರು, ತಮಗಿಂತ ಹೆಚ್ಚಾಗಿ ಇತರ ನಿರ್ಜೀವ ಕ್ರೈಸ್ತ ಪಂಗಡಗಳ ಸದಸ್ಯರು ಹಣದ ಪ್ರೀತಿಯಿಂದ ಬಿಡುಗಡೆ ಹೊಂದಿದ್ದಾರೆಂದು ತಿಳಿಯದೆ, ಆ ನಿರ್ಜೀವ ಕ್ರೈಸ್ತ ಪಂಗಡಗಳನ್ನು ಕೀಳಾಗಿ ಪರಿಗಣಿಸಬಹುದು.

ನೀವು ಕೆಲವು ಪ್ರಾಥಮಿಕ ಪ್ರಶ್ನೆಗಳನ್ನು ನಿಮಗೆ ಹಾಕಿಕೊಳ್ಳಿರಿ: ನಿಮಗೆ ಸ್ವಲ್ಪ ಹೆಚ್ಚು ಹಣ ದೊರೆತಾಗ ನೀವು ಸಂಭ್ರಮ ಪಡುತ್ತೀರೋ? ನೀವು ಹಣವನ್ನು ಕಳೆದುಕೊಂಡಾಗ ಬಹಳ ಬೇಸರಿಸುತ್ತೀರೋ? ಹೌದಾದರೆ, ನೀವು ಹಣವನ್ನು ಪ್ರೀತಿಸುತ್ತೀರಿ. ಸಂತೋಷ ಕರ್ತನಲ್ಲಿ ಮಾತ್ರವಾಗಿದ್ದರೆ, ಅದು ಒಂದು ಸ್ವಲ್ಪವೂ ಬದಲಾಗುವುದಿಲ್ಲ. ಒಂದು ವೇಳೆ ನಮ್ಮ ಸಂತೋಷ ಲೌಕಿಕ ಸಂಗತಿಗಳನ್ನು ಅವಲಂಬಿಸಿದ್ದರೆ, ನಮ್ಮ ಆದಾಯ ಹೆಚ್ಚು ಕಡಿಮೆಯಾದಾಗ ಅದು ಏರಿಳಿತವಾಗುತ್ತದೆ.

ಯಾವನೂ ಇಬ್ಬರು ಯಜಮಾನರ ಸೇವೆ ಮಾಡಲಾರನು. "ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು." ಯೇಸುವಿನ ಈ ಬಹಳ ಮಹತ್ವಪೂರ್ಣ ಹೇಳಿಕೆಯು, ಲೂಕ. 14:26ರಲ್ಲಿ "ತಂದೆ, ತಾಯಿ, ಹೆಂಡತಿ, ಮಕ್ಕಳು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರನ್ನು ಹಗೆ ಮಾಡಬೇಕು," ಎಂಬ ಆತನ ಹೇಳಿಕೆಯಷ್ಟೇ ಮಹತ್ವವುಳ್ಳದ್ದಾಗಿದೆ. ಯೇಸುವಿನ ಮನೋಭಾವ ಹಾಗೂ ಆಲೋಚನೆಗಳು ಬಹಳ ವಿಭಿನ್ನವಾಗಿದ್ದವು. ನೀವು ದೇವರನ್ನು ಪ್ರೀತಿಸಬೇಕಾದರೆ ಧನವನ್ನು ದ್ವೇಷಿಸಬೇಕು ಎಂದು ಯೇಸು ಹೇಳಿದನು (ಮತ್ತಾ. 6:24). ಇಲ್ಲಿ ಧನವು ಹಣ, ಜಮೀನು, ವ್ಯಾಪಾರ-ವ್ಯವಹಾರ ಇವೆಲ್ಲವನ್ನು ಒಳಗೊಂಡಿದೆ. ನೀವು ದೇವರನ್ನು ಪ್ರೀತಿಸ ಬೇಕಾದರೆ ಇವೆಲ್ಲವುಗಳನ್ನು ದ್ವೇಷಿಸಬೇಕು ಎಂಬುದಾಗಿ ಯೇಸು ಹೇಳಿದನು. ನೀವು ಧನವನ್ನು ಉಪಯೋಗಿಸಬಹುದು, ಆದರೆ ದೇವರಿಗಾಗಿ ನಿಮ್ಮ ಪ್ರೀತಿ ಎಷ್ಟು ಉನ್ನತವಾಗಿರಬೇಕು ಎಂದರೆ - ಸೂರ್ಯನ ಉಜ್ವಲವಾದ ಕಾಂತಿಯಂತೆ. ಸೂರ್ಯನ ಬೆಳಕಿನಲ್ಲಿ ಹೇಗೆ ನಕ್ಷತ್ರಗಳು ಮರೆಯಾಗುತ್ತವೋ ಹಾಗೆಯೇ ನಿಮ್ಮ ಹಣದ ಮೇಲಿನ ಆಸಕ್ತಿಯು ಆ ನಕ್ಷತ್ರಗಳಂತೆ ಮರೆಯಾಗಬೇಕು. ಒಂದು ವೇಳೆ ನಿಮ್ಮ ಜೀವಿತದಲ್ಲಿ ಹಾಗಿರದಿದ್ದರೆ, ನೀವು ದೇವರ ಸೇವೆ ಮಾಡಲಾರಿರಿ.

"ನಿಮಗೆ ಒಬ್ಬನು ಪ್ರಿಯನಾದರೆ, ನೀವು ಮತ್ತೊಬ್ಬನನ್ನು ತಾತ್ಸಾರ ಮಾಡುವಿರಿ," ಎಂದು ಯೇಸು ಹೇಳುತ್ತಾರೆ. ಈ ವಾಕ್ಯದಲ್ಲಿ ದೇವರು ಮತ್ತು ಧನ ಎಂಬ ಪದಗಳನ್ನು ಸೇರಿಸಿಕೊಂಡು ಓದಿದರೆ ಅದು ಹೀಗಿರುತ್ತದೆ: "ಯಾರು ಸಹ ದೇವರನ್ನು ಮತ್ತು ಲೌಕಿಕ ಸಂಗತಿಗಳನ್ನು (ಲೌಕಿಕ ಸಂಪತ್ತು, ಹಣ) ಸೇವಿಸಲು ಆಗುವುದಿಲ್ಲ. ಒಂದೋ, ಅವನು ಹಣವನ್ನು ದ್ವೇಷಿಸಿ ದೇವರನ್ನು ಪ್ರೀತಿಸುತ್ತಾನೆ ಅಥವಾ ದೇವರನ್ನು ದ್ವೇಷಿಸಿ ಹಣವನ್ನು ಪ್ರೀತಿಸುತ್ತಾನೆ." ಯೇಸುವು ಸೂಚಿಸುತ್ತಿರುವುದು ಏನೆಂದರೆ, ಯಾವನಾದರೂ ಹಣವನ್ನು ಪ್ರೀತಿಸಿದರೆ ಅವನು ದೇವರನ್ನು ದ್ವೇಷಿಸುತ್ತಾನೆ, ಎಂಬುದಾಗಿ. ಇದು ನಿಮಗೆ ಮೊದಲು ತಿಳಿಯದೇ ಇರಬಹುದು. ಆದರೆ ಈಗ ಅದು ನಿಮಗೆ ಗೊತ್ತಾಗಿದೆ. ನೀವು ಹಣವನ್ನು ಪ್ರೀತಿಸಿದರೆ ದೇವರನ್ನು ದ್ವೇಷಿಸುತ್ತೀರಿ ಎಂಬುದಾಗಿ ಯೇಸುವು ಹೇಳುತ್ತಿದ್ದಾರೆ. ನೀವು ದೇವರಿಗಾಗಿ ಅನೇಕ ಹಾಡುಗಳನ್ನು ಹಾಡುವುದರಿಂದ ದೇವರನ್ನು ಪ್ರೀತಿಸುತ್ತೀರಿ ಎಂದು ಅಂದುಕೊಳ್ಳಬಹುದು, ಆದರೆ ಯೇಸುವು ತೋರಿಸುತ್ತಿರುವುದು ಬೇರೊಂದು ವಿಷಯವನ್ನು.

ಯೇಸು ಹೇಳುತ್ತಿರುವುದು ನೀವು ದೇವರನ್ನು ಹಿಡಿದುಕೊಂಡರೆ, ಹಣವನ್ನು ತಾತ್ಸಾರ ಮಾಡುತ್ತೀರಿ ಮತ್ತು ನೀವು ಹಣವನ್ನು ಹಿಡಿದುಕೊಂಡರೆ ದೇವರನ್ನು ತಾತ್ಸಾರ ಮಾಡುತ್ತಿರಿ ಎಂಬುದಾಗಿ. ನೀವು ಹಣವನ್ನು ಸಂಪಾದಿಸಬಹುದು ಮತ್ತು ಹಣವನ್ನು ಇಟ್ಟುಕೊಳ್ಳಬಹುದು. ಆದರೆ ಆ ಹಣವನ್ನು ನೀವು ಪ್ರೀತಿಸಲು ಪ್ರಾರಂಭಿಸಿದ ತಕ್ಷಣ ದೇವರನ್ನು ದ್ವೇಷಿಸಲು ಪ್ರಾರಂಭಿಸುತ್ತೀರಿ. ದೇವರು ನಿಮಗೆ ಒಳ್ಳೆಯ ಕೆಲಸವನ್ನು ಕೊಟ್ಟಿರಬಹುದು ಅಥವಾ ಪಿತ್ರಾರ್ಜಿತ ಆಸ್ತಿಯಿಂದ ನೀವು ಬಹಳಷ್ಟು ಹಣವನ್ನು ಪಡೆದಿರಬಹುದು, ಅದು ಒಳ್ಳೆಯದೇ. ಆದರೆ ನೀವು ಅದನ್ನೇ ಪ್ರೀತಿಸಿದರೆ ಅಥವಾ ಅದನ್ನು ಹಿಡಿದುಕೊಂಡರೆ, ನೀವು ದೇವರನ್ನು ತಾತ್ಸಾರ ಮಾಡುತ್ತೀರಿ ಮತ್ತು ದೇವರನ್ನು ದ್ವೇಷಿಸುತ್ತೀರಿ. ಇದನ್ನು ನಾವು ಅರ್ಥಮಾಡಿಕೊಳ್ಳುವುದು ಬಹಳ ಪ್ರಾಮುಖ್ಯ. ನಾವು ನಂಬಿಗಸ್ತರಾಗಿ ಕರ್ತನನ್ನು ಸೇವಿಸಬೇಕಾದರೆ, ಈ ವಿಷಯದ ಬಗ್ಗೆ ತಿಳುವಳಿಕೆಯನ್ನು ಪಡೆಯಬೇಕು ಮತ್ತು ಸರಿಯಾದ ಮನೋಭಾವವನ್ನು ಹೊಂದಿಕೊಳ್ಳಬೇಕು.