ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ ತಿಳಿಯುವುದು
WFTW Body: 

ಪರಮ ಗೀತ ಎಲ್ಲಾ ಕ್ರೈಸ್ತರಿಗೆ ಒಂದು ಪ್ರಾಮುಖ್ಯವಾದ ಪುಸ್ತಕವಾಗಿದೆ. ನನ್ನ ಕ್ರೈಸ್ತ ಜೀವಿತವನ್ನು ಪ್ರಾರಂಭ ಮಾಡುವಾಗ ಮೊದಲು ನಾನು ಈ ಪುಸ್ತಕವನ್ನೇ ಅಧ್ಯಯನ ಮಾಡುವಂತೆ ಕರ್ತನು ನನ್ನನ್ನು ಮುನ್ನಡೆಸಿದಕ್ಕೆ ನಾನು ಆತನಿಗೆ ಅಪಾರವಾದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕ್ರೈಸ್ತ ಸುವಾರ್ತೆಯನ್ನು ಹರಡುವುದಾಗಲಿ, ಸಭೆಯನ್ನು ಕಟ್ಟುವುದಾಗಲಿ, ಸತ್ಯವೇದವನ್ನು ಬೋಧಿಸುವುದಾಗಲಿ ಅಥವಾ ಸಾಮಾಜಿಕ ಕೆಲಸವಾಗಲಿ, ಇನ್ನು ಬೇರೆ ಏನೇ ಆಗಲಿ ಅದು ಕ್ರಿಸ್ತನೊಂದಿಗಿನ ವೈಯಕ್ತಿಕ ಪ್ರೀತಿಯ ಸಂಬಂಧದ ಬುಗ್ಗೆಯಿಂದ ಹರಿಯುವುದಾಗಿದೆ. ಮೊದಲು ನಾವು “ಮದಲಿಂಗನ ಮತ್ತು ಮದಲಗಿತ್ತಿಯ ಹಾಡನ್ನು” ಕಲಿಯಲೇಬೇಕು. ಆ ಹಾಡನ್ನು ನಮ್ಮ ಕರ್ತನು ಮೊದಲು ನಮಗಾಗಿ ಹಾಡುತ್ತಾನೆ ಮತ್ತು ನಾವು ತಿರುಗಿ ಅದೇ ಹಾಡನ್ನು ಆತನಿಗೆ ಹಾಡುತ್ತೇವೆ.

ಪರಮ ಗೀತ 1:1 ರಲ್ಲಿ ಮೊದಲನೆಯದಾಗಿ ನಮಗೆ ಕಂಡುಬರುವುದು ಸೊಲೊಮೋನನ ಹಾಡು. ಪ್ರಾಥಮಿಕವಾಗಿ ಇದು ಮದಲಿಂಗನ ಹಾಡು, ಮದಲಗಿತ್ತಿಯ ಹಾಡಲ್ಲ. ಅದರ ಅರ್ಥ ಪ್ರಾಥಮಿಕವಾಗಿ ಇದು ನಮಗಾಗಿ ನಮ್ಮ ಕರ್ತನ ಹಾಡು. ಮತ್ತು ಇದು ಆತನಿಗಾಗಿ ನಮ್ಮ ಹಾಡಲ್ಲ. ನಾವು ಆತನನ್ನು ಪ್ರೀತಿಸುತ್ತೇವೆ ಯಾಕೆಂದರೆ ಆತನು ಮೊದಲು ನಮ್ಮನ್ನು ಪ್ರೀತಿಸಿದನು (1 ಯೋಹಾನ 4:19). ನಾವು ಆತನನ್ನು ಮೊದಲು ಪ್ರೀತಿಸಲಿಲ್ಲ. ಆತನು ಮೊದಲು ನಮ್ಮನ್ನು ಪ್ರೀತಿಸಿದನು. ಆತನು ಈ ಹಾಡನ್ನು ಮೊದಲು ನಮಗಾಗಿ ಹಾಡಿದ ಕಾರಣಕ್ಕಾಗಿ, ನಾವು ಆತನಿಗೆ ಈ ಹಾಡನ್ನು ಈಗ ಹಾಡಲು ಸಾಧ್ಯ.

"ಎನ್ನೊಂದಿಗೆ ಲೆಬನೋನಿನಿಂದ ಬಾ! ವಧುವೇ, ಲೆಬನೋನಿನಿಂದ ನನ್ನೊಂದಿಗೆ ಬಾ! ಅಮಾನದ ತುದಿ, ಶೆನೀರ್ ಮತ್ತು ಹೆರ್ಮೋನ್ ಶಿಖರಗಳು, ಸಿಂಹಗಳ ಗವಿಗಳು, ಚಿರತೆಗಳ ಗುಡ್ಡಗಳು, ಇವುಗಳಿಂದ ಹೊರಟು ಬಾ!" ಎಂಬುದನ್ನು ಪರಮ ಗೀತ 4:8 ರಲ್ಲಿ ಮದಲಿಂಗನು ಮದಲಗಿತ್ತಿಗೆ ಹೇಳುವುದನ್ನು ನಾವು ಕೇಳುತ್ತೇವೆ.

ಇದು ಸ್ವರ್ಗೀಯ ಸ್ಥಳದಲ್ಲಿ ವಾಸಿಸಲು ಕೊಡುವ ಆಹ್ವಾನವಾಗಿದೆ. ಕರ್ತನು ಹೀಗೆ ನುಡಿಯುತ್ತಾನೆ. ಈ ಭೂಲೋಕದ ಸಂಗತಿಗಳನ್ನು ಭೂಲೋಕದ ಕೀಳಾದ ದೃಷ್ಟಿಕೋನದಿಂದ ನೋಡಬೇಡಿರಿ. ನನ್ನ ಜೊತೆ ಸ್ವರ್ಗೀಯ ಸ್ಥಳಕ್ಕೆ ಬನ್ನಿರಿ ಮತ್ತು ಪ್ರತಿಯೊಂದು ಸಂಗತಿಗಳನ್ನು ಸ್ವರ್ಗೀಯ ದೃಷ್ಟಿಕೋನದಿಂದ ನೋಡಿರಿ. ಅಲ್ಲಿಂದ ನೀವು ನೋಡುವಾಗ ಭೂಲೋಕದ ಸಂಗತಿಗಳು ಸಣ್ಣದಾಗಿ, ಕಾಂತಿಹೀನವಾಗಿ, ಪ್ರಯೋಜನವಿಲ್ಲದವುಗಳಾಗಿ ಕಂಡು ಬರುತ್ತವೆ. ಕರ್ತನು ನಮ್ಮನ್ನು ಉನ್ನತ ಸ್ಥಳಕ್ಕೆ ಏರಿಸಲು ಬಯಸುತ್ತಾನೆ. ಅಲ್ಲಿ ಸಿಂಹಗಳು, ದೆವ್ವಗಳು, ಕೆಟ್ಟ ದುರಾತ್ಮ ಸೇನೆಗಳು ಮತ್ತು ಅವುಗಳ ಶಕ್ತಿಗಳು ಇವೆ, ನಿಜ. ಆದರೆ ನಾವು ಕರ್ತನ ಜೊತೆ ಅಲ್ಲಿರುತ್ತೇವೆ ಮತ್ತು ಆತನೊಟ್ಟಿಗೆ ಆ ಕೆಟ್ಟ ದುಷ್ಟ ಶಕ್ತಿಗಳನ್ನು ಜಯಿಸುತ್ತೇವೆ.

ಆತನೊಂದಿಗೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳಿ ಮತ್ತು ನಂತರ ಆತನ ಸೇವೆ ಮಾಡಿ. ನೀವು ಆತನಿಗಾಗಿ ಶ್ರಮಿಸಬಹುದಾದ ಹೊಲದ ಅತ್ಯುತ್ತಮ ಭಾಗ ಯಾವುದು ಎಂದು ಆತನೊಬ್ಬನಿಗೆ ಮಾತ್ರ ತಿಳಿದಿದೆ.

ಪರಮಗೀತ 4:12ರಲ್ಲಿ, ವರನು ವಧುವನ್ನು “ಅಗುಳಿ ಹಾಕಿದ ಉದ್ಯಾನ,” ಎಂದು ಕರೆಯುತ್ತಾನೆ. ಅಂದರೆ ಅದು ಒಂದು ವಿಶೇಷವಾದ ತೋಟ, ವರನಿಗಷ್ಟೇ ಸೇರಿದ ತೋಟ. ಅವಳು ಯಾರಿಗೂ ಸೇರಿದವಳಲ್ಲ — ಅವಳು ತನ್ನ ಕರ್ತನಿಗಷ್ಟೇ ಸೇರಿದವಳು. ಕರ್ತನೊಂದಿಗೆ ನಿನ್ನ ಸಂಬಂಧ ಹೀಗೆ ಇದೆಯೇ? ಕರ್ತನು ನಿಮಗೆ — “ನೀನು ನನ್ನ ಖಾಸಗಿ ಉದ್ಯಾನ, ನೀನು ನನಗಷ್ಟೇ ಸೇರಿದವಳು” ಎಂದು ಹೇಳಬಹುದೇ? ಈ ಲೋಕದಲ್ಲಿ ನಮ್ಮನ್ನು ಆಕರ್ಷಿಸುವ ಅನೇಕ ಸಂಗತಿಗಳಿವೆ. ನಮಗೆ ಬೇಕಾದುದಕ್ಕಿಂತ ಹೆಚ್ಚು ಹಣ ಸಂಪಾದಿಸುವ ಅವಕಾಶಗಳು, ಭೌತಿಕ ಅಧಿಕಾರ ಮತ್ತು ಖ್ಯಾತಿ, ನಮಗೆ ಒಂದು ಹೆಸರು ಮಾಡಿಕೊಳ್ಳುವ ಆಸೆ, ಇತ್ಯಾದಿಗಳು.

ಇಂತಹ ಪ್ರಲೋಭನೆಗಳನ್ನು, ವಧುವನ್ನು ಸೆಳೆಯಲು ಬರುವ ಇತರ ಪುರುಷರಿಗೆ ಹೋಲಿಸಬಹುದು. ಆದರೆ ಇಲ್ಲಿ ಕಾಣುವ ವಧು ಹಾಗಿಲ್ಲ. ಅವಳು ಇವುಗಳಿಂದ ಆಕರ್ಷಿತಳಾಗುವುದಿಲ್ಲ. ಅವಳು ತನ್ನ ಪ್ರಿಯಕರನಲ್ಲೇ ಸಂಪೂರ್ಣವಾಗಿ ತೊಡಗಿದ್ದಾಳೆ. ಅವಳು ತನ್ನ ವರನಿಗಷ್ಟೇ ಸೇರಿದವಳು. ಕ್ರಿಸ್ತನೊಂದಿಗೆ ಇಂತಹ ಸಂಬಂಧದಲ್ಲಿ ಬದುಕುವ ವಿಶ್ವಾಸಿಗಳು ಬಹಳ ಕಡಿಮೆ. ಆ ಕಾರಣದಿಂದಲೇ ಅನೇಕರು ಕರ್ತನನ್ನು ನಿಕಟವಾಗಿ (ಆಳವಾದ ಅನ್ಯೋನ್ಯತೆಯಿಂದ) ತಿಳಿದುಕೊಳ್ಳುವುದಿಲ್ಲ, ಮತ್ತು ಆತನ ವಾಕ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಪವಿತ್ರ ಗ್ರಂಥವನ್ನು ಅರ್ಥಮಾಡಿಕೊಳ್ಳುವ ರಹಸ್ಯವೇನೆಂದರೆ ಕರ್ತನೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿರುವುದು. ಆತನ ವಾಕ್ಯದ ಅರ್ಥವನ್ನು ಆತನಿಗಿಂತ ಇನ್ನೂ ಹೆಚ್ಚಾಗಿ ಯಾರು ಕಲಿಸಲು ಸಾಧ್ಯ? ಆದ್ದರಿಂದ, ಯೇಸುವಿನ ಶಿಷ್ಯರು ಕರ್ತನೊಂದಿಗೆ ನಡೆದಂತೆ, ಆತನೊಂದಿಗೆ ನಡೆಯಿರಿ ಮತ್ತು ಆತನ ಸ್ವರವನ್ನು ಕೇಳಲು ಹಂಬಲಿಸಿರಿ. ಆಗ ನಿಮ್ಮ ಕಣ್ಣುಗಳು ಅವರಂತೆಯೇ ತೆರೆಯಲ್ಪಡುವವು, ಮತ್ತು ನಿಮ್ಮ ಹೃದಯಗಳು ಅವರಂತೆಯೇ ಜ್ವಲಿಸುವುವು.

ಪರಮ ಗೀತ 5:2ರಲ್ಲಿ, ವರನು ಮಧ್ಯರಾತ್ರಿಯಲ್ಲಿ ಬಂದು "ನನ್ನ ಪ್ರಿಯಳೇ, ಬಾಗಿಲು ತೆಗೆ" ಎಂದು ಕರೆದಾಗ, ವಧುವು ತಾನು ಸಿದ್ಧಳಾಗಿ ಬಾಗಿಲು ತೆಗೆಯಲು ಬಹಳ ಸೋಮಾರಿಯಾಗಿದ್ದಳು (ಪರಮ ಗೀತ 5:3). ಆಕೆ "ನನ್ನ ಪಾದಗಳನ್ನು ತೊಳೆದುಕೊಂಡೆನಲ್ಲಾ, ಅವುಗಳನ್ನು ಹೇಗೆ ಕೊಳೆ ಮಾಡಿಕೊಳ್ಳಲಿ" , ಎಂದು ಚಿಂತಿಸುವಾಗ, ವರನು ಬಾಗಿಲ ರಂದ್ರದಲ್ಲಿ ಕೈ ನೀಡಿದನು (ಪರಮ ಗೀತ 5:4). ಆಗ ಅವಳು ಮನಸ್ಸನ್ನು ಬದಲಾಯಿಸಿ ವರನಿಗಾಗಿ ಬಾಗಿಲು ತೆಗೆದಳು. ಅಷ್ಟರಲ್ಲಿ ಅವನು ಹೊರಟು ಹೋಗಿದ್ದನು. ಆತನು ಕರೆದ ತಕ್ಷಣ ಆಕೆಯು ಉತ್ತರಿಸದ ಕಾರಣ, ಆತನು ಹೊರಟು ಹೋಗಿದ್ದನು. ಇದು ನಮಗೂ ಸಂಭವಿಸಬಹುದು. ಕರ್ತನು ನಮಗೆ, ನೀನು ಈಗ ಮಾಡುತ್ತಿರುವ ಎಲ್ಲವನ್ನು ಬದಿಗಿಡು, ಆ ಪುಸ್ತಕವನ್ನು ಓದುವುದನ್ನು ನಿಲ್ಲಿಸು, ನೀನು ಮಾಡುತ್ತಿರುವ ಸಂಭಾಷಣೆಯನ್ನು ನಿಲ್ಲಿಸು, ನೀನೊಬ್ಬಳೇ ನನ್ನೊಂದಿಗೆ ಬಾ, ನನ್ನೊಂದಿಗೆ ಮಾತನಾಡಲು ಬಾ, ನಾವಿಬ್ಬರೇ ಜೊತೆಯಾಗಿ ನಡೆಯೋಣ, ಎಂದು ಹೇಳಬಹುದು. ಆಗ ನಾವು ಹೀಗೆ ಉತ್ತರಿಸಬಹುದು, "ನನಗೆ ಬಹಳ ಮುಖ್ಯವಾದ ಕೆಲಸವಿದೆ. ಇನ್ನು 15 ನಿಮಿಷಗಳಲ್ಲಿ ಅದು ಮುಗಿಯುತ್ತದೆ. ನಂತರ ನಾನು ಬರುತ್ತೇನೆ" ಎಂದು ನಾವು ಹೇಳಬಹುದು. ಮತ್ತು 15 ನಿಮಿಷದ ನಂತರ ನಾವು ಆ ಮುಖ್ಯವಾದ (?) ಕೆಲಸವನ್ನು ಮುಗಿಸಿ, "ಕರ್ತನೇ ನಾನು ಈಗ ಸಿದ್ಧನಾಗಿದ್ದೇನೆ" ಎಂದು ಹೇಳುತ್ತೇವೆ. ಆದರೆ ಅಷ್ಟರಲ್ಲಿ ಕರ್ತನು ಹೊರಟು ಹೋಗಿರುವುದು ನಮಗೆ ತಿಳಿದುಬರುತ್ತದೆ ಮತ್ತು ನಾವು ಆತನನ್ನು ಹುಡುಕಲು ಸಾಧ್ಯವಿಲ್ಲ. ನೀವು ದೇವರ ಪರಿಣಾಮಕಾರಿಯಾದ ಸೇವಕರಾಗಲು ಬಯಸುತ್ತೀರಾ? ಕರ್ತನು ನಿಮ್ಮನ್ನು ಕರೆದಾಗ ಎಲ್ಲವನ್ನು ಬದಿಗಿಟ್ಟು, ಆತನ ಮಾತನ್ನು ಕೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಆಗ ನೀವು ಎಂದಿಗೂ ಪಶ್ಚಾತಾಪಪಡುವುದಿಲ್ಲ.

ಪರಮ ಗೀತ 5:3ರಲ್ಲಿ ವರನು ವಧುವಿಗೆ "ನಾನು ರಾತ್ರಿ ಇಡೀ ಹೊರಗಿದ್ದು ಇಬ್ಬನಿಯಿಂದ ನೆನೆದಿದ್ದೇನೆ" ಎಂದು ಹೇಳುತ್ತಾನೆ. ಯೇಸು ಕಳೆದು ಹೋದವರನ್ನು ಹುಡುಕಲು ಮತ್ತು ರಕ್ಷಿಸಲು ಭೂಮಿಗೆ ಬಂದುದರಿಂದ ಆತನು ಈ ಪ್ರಪಂಚದ ಕತ್ತಲೆಯ ರಾತ್ರಿಯಲ್ಲಿ ಕಳೆದುಹೋದ ಕುರಿಗಳನ್ನು ಹುಡುಕುತ್ತಾ, ಶಿಲುಬೆಯ (ಸ್ವ- ನಿರಾಕರಣೆ) ದಾರಿಯಲ್ಲಿ ನಡೆದು ಸಂಕಷ್ಟವನ್ನು ಅನುಭವಿಸಿದನು. ಆತನು ಈಗ ತನ್ನ ವಧುವನ್ನು ಅದೇ ದಾರಿಯಲ್ಲಿ ನಡೆಯಲು ಆಹ್ವಾನಿಸುತ್ತಿದ್ದಾನೆ. ಆದರೆ ಅವಳು ಸಿದ್ದಳಿಲ್ಲ.

ಪರಮಗೀತ 6:4–10ರಲ್ಲಿ, ವರನು ತನ್ನ ವಧುವಿನ ಬಗ್ಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾನೆ. ಎಲ್ಲಾ ಸ್ತ್ರೀಯರಲ್ಲಿಯೂ ತನ್ನ ವಧುವಿನಂತವರು ಯಾರೂ ಇಲ್ಲ, ಅವಳು ಪರಿಪೂರ್ಣಳು ಎಂದು ಹೇಳುತ್ತಾನೆ. ಅವನು ಹೇಳುವ ಮಾತು ಹೀಗಿದೆ: “ನಾನು ಅವಳನ್ನು ಎಲ್ಲರಿಗಿಂತ ಮೇಲಾಗಿ ಆರಿಸಿಕೊಂಡಿದ್ದೇನೆ.” ಪ್ರತಿ ಗಂಡನು ತನ್ನ ಹೆಂಡತಿಯನ್ನು ಹೀಗೆ ನೋಡಬೇಕು: ಈ ಲೋಕದಲ್ಲಿ ಅನೇಕ ಆಕರ್ಷಕ ಸ್ತ್ರೀಯರು ಇರಬಹುದು. ಆದರೆ ನನ್ನ ಹೆಂಡತಿಯಂತವರು ಯಾರೂ ಇಲ್ಲ. ನನ್ನ ಕಣ್ಣಿನಲ್ಲಿ ಅವಳೇ ಮೊದಲನೆಯವಳು. ಇದೇ ರೀತಿಯಲ್ಲಿ ಕರ್ತನು ನಮ್ಮ ಬಗ್ಗೆ ಹೇಳುತ್ತಾನೆ. ಈ ಲೋಕದಲ್ಲಿ ಅನೇಕ ಬುದ್ಧಿವಂತರಿಗಿಂತ ಅನೇಕ ಶ್ರೀಮಂತರಿಗಿಂತ, ಮತ್ತು ಅನೇಕ ಮಹಾನ್ ವ್ಯಕ್ತಿಗಳಿಗಿಂತ ಕರ್ತನು ನಮ್ಮನ್ನು ಹೆಚ್ಚಾಗಿ ಮೆಚ್ಚುತ್ತಾನೆ.

ಪರಮಗೀತ 7:1-9ರಲ್ಲಿ, ಮದುಮಗನು ತನ್ನ ಮದುಮಗಳನ್ನು ಮೆಚ್ಚಿಕೊಳ್ಳುತ್ತಾನೆ. ನಮ್ಮೆಲ್ಲಾ ಬಲಹೀನತೆಗಳ ಹೊರತಾಗಿಯೂ, ನಮ್ಮ ಕರ್ತನು ನಿಜವಾಗಿಯೂ ನಮ್ಮನ್ನು ಪ್ರಶಂಸಿಸುತ್ತಾನೆ ಮತ್ತು ಮೆಚ್ಚಿಕೊಳ್ಳುತ್ತಾನೆ ಎಂಬುದನ್ನು ನಾವು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಕರ್ತನು ತಮ್ಮನ್ನು ಮೆಚ್ಚುತ್ತಾನೆಂದು ನಂಬಲು ಸಾಧ್ಯವಾಗದ ಕಾರಣ, ಅನೇಕ ವಿಶ್ವಾಸಿಗಳು ನಿರಂತರವಾದ ಸ್ವಯಂ-ದೂಷಣೆಯಲ್ಲಿ ಬದುಕುತ್ತಾರೆ. ಮದುಮಗನು ಮದುಮಗಳ ತುಟಿಗಳನ್ನು ಹೊಗಳಿದಾಗ, ವಾಸ್ತವವಾಗಿ ಆತನ ತುಟಿಗಳ ಬಗ್ಗೆ ಆ ಹೊಗಳಿಕೆ ಹೆಚ್ಚು ಸತ್ಯವಾಗಿದೆ ಎಂದು ಆಕೆಯು ತಕ್ಷಣವೇ ಪ್ರತಿಕ್ರಿಯಿಸುತ್ತಾಳೆ (ಪರಮಗೀತ 7:9)! ಇದು ಅವರಿಬ್ಬರ ನಡುವಿನ ಉನ್ನತ ಮಟ್ಟದ ಅನ್ಯೋನ್ಯತೆಯನ್ನು ಸೂಚಿಸುತ್ತದೆ. ನಾವು ಕೂಡ ನಮ್ಮ ಕರ್ತನೊಂದಿಗೆ ಹೊಂದಿರಬೇಕಾದ ಅನ್ಯೋನ್ಯತೆಯೂ ಇಂತಹದೇ ಆಗಿದೆ.

ಪರಮಗೀತ 7:10 ರಲ್ಲಿ, ಮದುಮಗಳು ಹೀಗೆ ಹೇಳುತ್ತಾಳೆ, "ನಾನು ನನ್ನ ಪ್ರಿಯನವಳು, ಆತನ ಒಲವು ನನ್ನ ಮೇಲೆಯೇ ಇದೆ." ಇಲ್ಲಿ ಮದುಮಗಳು ಕೇವಲ ಕರ್ತನು ತನಗೆ ಮಾತ್ರ ಸೇರಿದವನೆಂದು ಹೇಳುತ್ತಿಲ್ಲ. ಬದಲಾಗಿ ಕರ್ತನು ತನ್ನ ಬಗ್ಗೆ ಸಂತೋಷಪಟ್ಟಿದ್ದಾನೆ ಎಂದೂ ಹೇಳುತ್ತಿದ್ದಾಳೆ. ಕರ್ತನು "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳುವುದು ಒಂದು ವಿಚಾರವಾದರೆ, "ನಾನು ನಿನ್ನಿಂದ ಸಂತೋಷಗೊಂಡಿದ್ದೇನೆ" ಎಂದು ಹೇಳುವುದು ಸಂಪೂರ್ಣವಾಗಿ ಬೇರೆಯದೇ ಆದ ವಿಚಾರವಾಗಿದೆ. ಗಂಡನು ತನ್ನ ಹೆಂಡತಿಯನ್ನು ಪ್ರೀತಿಸಬಹುದು, ಆದರೆ ಆಕೆ ಕೆಲಸಗಳನ್ನು ಮಾಡುವ ರೀತಿ ಅವನಿಗೆ ಇಷ್ಟವಾಗದಿರಬಹುದು. ಅಂತೆಯೇ ಕರ್ತನು ನಿಮ್ಮನ್ನು ಪ್ರೀತಿಸಬಹುದು, ಆದರೆ ನಿಮ್ಮ ಜೀವನದಲ್ಲಿನ ಅನೇಕ ವಿಷಯಗಳ ಬಗ್ಗೆ ಆತನು ಅಸಂತೋಷಗೊಂಡಿರಬಹುದು . ಪ್ರಬುದ್ಧವಾದ ಪ್ರೀತಿಯು ಕರ್ತನನ್ನು ಸಂತೋಷಪಡಿಸಲು ಬಯಸುತ್ತದೆ. ಈಗ ಮದುಮಗಳು ತನ್ನ ಮದುಮಗನ ಜೊತೆ-ಕೆಲಸಗಾರಳಾಗಿ ಹೀಗೆ ಹೇಳುತ್ತಾಳೆ. "ಬಾ ನನ್ನ ಪ್ರಿಯನೇ, ನಾವು ಹೊಲಗಳಿಗೆ ಹೋಗೋಣ" (ಪರಮಗೀತ 7:11). ಬೆಳೆಯು ಕೊಯ್ಲಿಗೆ ಸಿದ್ಧವಾಗಿರುವ ಈ ಅಗತ್ಯವುಳ್ಳ ಲೋಕದ ಕುರಿತಾದ ಮದುಮಗನ ಕಳಕಳಿಯನ್ನು ಈಗ ಮದುಮಗಳು ಸಹ ಹಂಚಿಕೊಳ್ಳುತ್ತಾಳೆ. ಆದರೆ ಆ ಹೊಲಗಳಿಗೆ ಎಂದಿಗೂ ನೀವೊಬ್ಬರೇ ಹೋಗಬೇಡಿ. ನಿಮ್ಮ ಪ್ರಿಯನೊಂದಿಗೆ ಅಲ್ಲಿಗೆ ಹೋಗಿ. ಆತನೊಂದಿಗೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳಿ ಮತ್ತು ನಂತರ ಆತನ ಸೇವೆ ಮಾಡಿ. ನೀವು ಆತನಿಗಾಗಿ ಶ್ರಮಿಸಬಹುದಾದ ಹೊಲದ ಅತ್ಯುತ್ತಮ ಭಾಗ ಯಾವುದು ಎಂದು ಆತನೊಬ್ಬನಿಗೆ ಮಾತ್ರ ತಿಳಿದಿದೆ.

ಕಳೆದ ಅರುವತ್ತು ವರ್ಷಗಳ ಕಾಲ ಕರ್ತನ ಪೂರ್ಣ-ಕಾಲಿಕ ಸೇವಕನಾಗಿ ನಾನು ಆತನ ಸೇವೆ ಮಾಡಲು ಕಂಡುಕೊಂಡದ್ದು ಹೀಗೆಯೇ. ನಾನಾಗಿಯೇ ಸ್ವತಃ ಎಲ್ಲಿಗೂ ಹೋಗಲು ಬಯಸಲಿಲ್ಲ. ನಾನು ಹೇಳಿದ್ದೇನೆಂದರೆ, “ಕರ್ತನೇ, ನೀನು ನನ್ನನ್ನು ಮುನ್ನಡೆಸು. ನಾನು ನಿನ್ನೊಂದಿಗೆ ಬರುತೇನೆ. ನಾವು ಒಟ್ಟಿಗೆ ಹೊಲಗಳಿಗೆ ಹೋಗೋಣ. ನೀನು ಎಲ್ಲಿಗೆ ಹೋಗುತ್ತಿರುವೆ ಎಂದು ಹೇಳು ಮತ್ತು ನೀನು ಒಂದು ಕಡೆ ಹೋಗುತ್ತಿಲ್ಲವಾದರೆ, ನಾನು ಅಲ್ಲಿಗೆ ಹೋಗಲು ಬಯಸುವುದಿಲ್ಲ.” ನಾವು ಕರ್ತನೊಂದಿಗೆ ಅನ್ಯೋನ್ಯತೆಯಿಂದ ಮತ್ತು ಆತನಿಗೆ ಅಧೀನರಾಗಿ, ಆತನ ಸೇವೆ ಮಾಡಿದರೆ, ನಮ್ಮ ಜೀವನದಲ್ಲಿ ಯಾವುದೇ ಗರ್ವ ಇರುವದಿಲ್ಲ, ಅಥವಾ ನಾವು ನಮ್ಮ ಸೇವೆಯನ್ನು ಇತರರೊಂದಿಗೆ ಹೋಲಿಸಲಾಗುವದಿಲ್ಲ.