ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

"ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕೈಗೊಳ್ಳುವಂತೆ ಅವರಿಗೆ ಉಪದೇಶ ಮಾಡಿರಿ ..."(ಮತ್ತಾಯ. 28:20). "

ಇದು ಶ್ರೇಷ್ಠವಾದ ಆಜ್ಞೆಯ ಮುಂದಿನ ಭಾಗವಾಗಿದೆ. ಮೊದಲನೆಯದಾಗಿ, ನಾವು  ಹೊರಟುಹೋಗಿ ಎಲ್ಲಾ ದೇಶಗಳ ಜನರಿಗೆ ಅವರು ಪಾಪಿಗಳೆಂದು ಹೇಳುತ್ತೇವೆ, ಕ್ರಿಸ್ತನು ಅವರ ಪಾಪಗಳಿಗಾಗಿ ಮರಣಹೊಂದಿದನು ಮತ್ತು ಸತ್ತವರೊಳಗಿಂದ ಎದ್ದನು ಎಂಬುದನ್ನು ತಿಳಿಸುತ್ತೇವೆ ಮತ್ತು ಆತನು ಪರಲೋಕಕ್ಕೆ ಏರಿ ಹೋಗಿದ್ದಾನೆ ಮತ್ತು ನಮಗಾಗಿ ಹಿಂದಿರುಗಿ ಬರಲಿದ್ದಾನೆ ಮತ್ತು  ತಂದೆಯ ಬಳಿಗೆ ಹೋಗಲು ಆತನೇ ಏಕೈಕ ಮಾರ್ಗವಾಗಿದ್ದಾನೆ, ಎಂಬುದಾಗಿಯೂ ನಾವು ತೋರಿಸಿಕೊಡುತ್ತೇವೆ. ಎಲ್ಲೆಲ್ಲಿ ಜನರು ನಮ್ಮ ಬೋಧನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೋ, ಅಲ್ಲಿ ಆ ಜನರಿಗೆ ಯೇಸುವನ್ನು ತಮ್ಮ ಜೀವಿತದಲ್ಲಿ ಪ್ರಭುವನ್ನಾಗಿ (ಸ್ವಂತ ರಕ್ಷಕನಾಗಿ) ಸ್ವೀಕರಿಸುವಂತೆ, ಜೀವಿತದಾದ್ಯಂತ ಕ್ರಿಸ್ತನ ಶಿಷ್ಯರಾಗಿ ಆತನನ್ನು ಹಿಂಬಾಲಿಸುವಂತೆ, ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ತೆಗೆದುಕೊಳ್ಳುವಂತೆ ಆಹ್ವಾನಿಸುತ್ತೇವೆ, ಮತ್ತು ತ್ರಯೇಕ ದೇವರ ರಹಸ್ಯವನ್ನು ಅವರಿಗೆ ಪರಿಚಯ ಮಾಡಿಸುತ್ತೇವೆ. ಆದರೆ ಇದೆಲ್ಲಾ ಅಲ್ಲಿಗೇ ಮುಗಿಯುವುದಿಲ್ಲ; ಇವೆಲ್ಲವೂ ಒಲಂಪಿಕ್ ಮ್ಯಾರಥಾನ್ ಓಟದ ಸ್ಪರ್ಧೆಯ ಪ್ರಾರಂಭದ ಗೆರೆಯ ಸಮೀಪಕ್ಕೆ ಬಂದಂತಾಗಿದೆ.

ನೀವು ನಿಮ್ಮ ದೇಶದ ಪ್ರತಿನಿಧಿಯಾಗಿ ಒಲಂಪಿಕ್ ಮ್ಯಾರಥಾನ್ ಓಟದ ಸ್ಪರ್ಧೆಯ ಪ್ರಾರಂಭದ ಗೆರೆಯ ಮುಂದೆ ನಿಲ್ಲಲು ಆಯ್ಕೆಯಾದರೆ, ಅದೊಂದು ಉತ್ತಮ ಸಂಗತಿಯಾಗಿದೆ. ಅದನ್ನು ಒಂದು ಶ್ರೇಷ್ಠ ಸಾಧನೆ ಎನ್ನಬಹುದು, ಆದಾಗ್ಯೂ ಅದಕ್ಕೆ ತನ್ನದೇ ಆದ ಯಾವುದೇ ಹೆಚ್ಚಿನ ಮಹತ್ವವಿರುವುದಿಲ್ಲ, ಏಕೆಂದರೆ ಓಟದ ಪ್ರಾರಂಭದ ಸಾಲಿನಲ್ಲಿ ನಿಲ್ಲುವುದು ಓಟದ ಆರಂಭವಾಗಿದೆ, ಅಷ್ಟೇ. ಅದರಂತೆಯೇ ನೀವು ಶಿಷ್ಯರಾಗಿದ್ದೀರಿ ಮತ್ತು ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಹೊಂದಿದ್ದೀರಿ ಎಂಬ ಅಂಶವು ಅದ್ಭುತವಾಗಿದೆ, ಆದರೆ ಒಲಂಪಿಕ್ ಪಂದ್ಯದ ಚಿತ್ರಣದಂತೆ, ನೀವು ಓಟವನ್ನು ಪ್ರಾರಂಭಿಸಬೇಕು. ಮತ್ತು ಆ ಓಟವನ್ನು ಓಡುವುದು ಎಂದರೆ, ಯೇಸುವು ನಮಗೆ ಆಜ್ಞಾಪಿಸಿದ ಪ್ರತಿಯೊಂದು ಕಾರ್ಯವನ್ನು ಕೈಗೊಳ್ಳುವುದಾಗಿದೆ.

ಪ್ರತಿಯೊಬ್ಬ ಕ್ರೈಸ್ತನಿಗೆ ಇದಕ್ಕೆ ಇಡೀ ಜೀವಿತವೇ ಬೇಕಾಗುತ್ತದೆ. ಮತ್ತು ಪ್ರತಿಯೊಂದು ಕ್ರೈಸ್ತಸಭೆಯೂ ಜನರಿಗೆ ಇದನ್ನೇ ಬೋಧಿಸಬೇಕಾಗಿದೆ.

"ಯೇಸುವಿನ ಎಲ್ಲಾ ಆಜ್ಞೆಗಳನ್ನು ಪಾಲಿಸುವ ಹಾತೊರೆಯುವಿಕೆ - ಇದು ಪ್ರತಿಯೊಬ್ಬ ಶಿಷ್ಯನಲ್ಲಿ ಕಾಣಿಸಬೇಕು"

ಶಿಷ್ಯರನ್ನು ಮಾಡುವುದು ಮತ್ತು ದೀಕ್ಷಾಸ್ನಾನ, ಇವೆರಡನ್ನು ಒಂದು ಸಭೆಯು ಆದ್ಯತೆಯನ್ನಾಗಿ ಮಾಡಿಕೊಂಡಿದ್ದರೆ, ಅದು ಅಷ್ಟರಲ್ಲೇ ತೃಪ್ತಿಗೊಳ್ಳಬಾರದು. ಆ ಸಭೆಯು ಪ್ರತಿ ಭಾನುವಾರದ ಸಭಾಕೂಟದಲ್ಲಿ ಏನನ್ನು ಬೋಧಿಸುತ್ತಿರಬೇಕು? ಯೇಸುವಿನ ಪ್ರತಿಯೊಂದು ಬೋಧನೆಯನ್ನು. ಆತನ ಬೋಧನೆಗಳಲ್ಲಿ ಕೆಲವನ್ನು ಮಾತ್ರ ಆಯ್ದುಕೊಂಡು ಬೋಧಿಸುವುದಲ್ಲ ಮತ್ತು ಖಂಡಿತವಾಗಿ ಮನಃಶಾಸ್ತ್ರವನ್ನಾಗಲೀ ಅಥವಾ ಕೇವಲ ಮನೋರಂಜನೆಯ ಬೋಧನೆಯನ್ನಾಗಲೀ ಮಾಡುವುದಲ್ಲ, ಯೇಸುವು ಬೋಧಿಸಿದ ಪ್ರತಿಯೊಂದನ್ನೂ ಬೋಧಿಸಬೇಕು. ಒಂದು ಸಭೆಯು ತನ್ನ ಸದಸ್ಯರ ಉತ್ತಮ ಆತ್ಮಿಕ ಬೆಳವಣಿಗೆಗಾಗಿ ಕಾಳಜಿ ವಹಿಸುವುದರ ಬದಲಾಗಿ ಕೂಟದಲ್ಲಿ ಸಂಗೀತವನ್ನು ಸುಧಾರಿಸುವುದಕ್ಕೆ ಹೆಚ್ಚು ಗಮನ ಹರಿಸುವುದಾದರೆ, ಅದು ಬಹಳ ದುಃಖಕರವಾದ ವಿಷಯವಾಗಿದೆ. ಇದು ಬಹಳ ಶೋಚನೀಯ ಸಂಗತಿಯಾಗಿದೆ. ಪರಲೋಕದಲ್ಲಿರುವ ನಮ್ಮ ದೇವರಿಗೆ ಯಾವುದರ ಬಗ್ಗೆ ಹೆಚ್ಚು ಕಾಳಜಿ ಇದೆಯೆಂದು ನೀವು ಯೋಚಿಸಿದ್ದೀರಾ?

ಒಂದೆಡೆ ಸೇರಿಬಂದಿರುವ ಒಂದು ಹೊಸ ಸಭೆಯ ಬಗ್ಗೆ ಯೋಚಿಸಿರಿ. ಆ ಸಭೆಯಲ್ಲಿ ನಿಜವಾಗಿ ಹೊಸದಾಗಿ ಹುಟ್ಟಿರುವ ಅನೇಕ ಜನರು ಇರುತ್ತಾರೆ, ಮತ್ತು ಯೇಸುವನ್ನು ಅವರು ತಮ್ಮ ಜೀವನದ ಕರ್ತನಾಗಿ ಮಾಡಲು ಹಾತೊರೆಯುತ್ತಿದ್ದಾರೆಂದು ಅಂದುಕೊಳ್ಳಿರಿ. ನೀವು ಗಮನಿಸಿ ನೋಡಿದಾಗ ಆ ಸಭೆಯು ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವುದಾಗಿ ಕಂಡುಬಂದರೆ, ದೇವರು ಆ ಸಭೆಯನ್ನು ಮೆಚ್ಚುತ್ತಾರೆಂದು ನೀವು ಭಾವಿಸುತ್ತೀರಾ? ಉತ್ತಮ ಸಂಗೀತವು ಒಳ್ಳೆಯದೇ. ನಾವು ಅದರ ವಿರುದ್ಧವಾಗಿಲ್ಲ. ಆದರೆ ಯಾವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂಬುದು ಮುಖ್ಯವಾದ ಪ್ರಶ್ನೆಯಾಗಿದೆ. ದೇವರ ಆಸಕ್ತಿ ಆ ಸಭೆಯ ಜನರು ಕ್ರಿಸ್ತನ ಸಾರೂಪ್ಯದಲ್ಲಿ ಬೆಳೆಯಬೇಕು ಎಂಬುದಾಗಿದೆಯೋ, ಅಥವಾ ಅಲ್ಲಿ ಸಂಗೀತವು ಹೆಚ್ಚು ಮನೋರಂಜಕವಾಗಲಿ ಎಂಬುದಾಗಿದೆಯೋ? ಕ್ರೈಸ್ತರು ಹೇಗೆ ಸರಿಯಾದ ದಾರಿಯಿಂದ ದೂರ ಸರಿದಿದ್ದಾರೆಂದು ನಾವು ಇದರಲ್ಲಿ ಕಾಣಬಹುದು, ಇದಕ್ಕೆ ಕಾರಣವೇನೆಂದರೆ ಕ್ರೈಸ್ತ ನಾಯಕರು ದೇವರು ಏನನ್ನು ಮೆಚ್ಚುತ್ತಾರೆ ಎಂಬುದನ್ನು ಅರಿತುಕೊಂಡಿಲ್ಲ.

ನಾವು ನಮ್ಮ ಸಭೆಗಳಲ್ಲಿ ಏನು ಮಾಡಬೇಕು, ಎಂಬುದನ್ನು ಯೋಚಿಸಿರಿ. ಯೇಸುವಿನ ಆಜ್ಞೆಗಳಲ್ಲಿ ಒಂದನ್ನೂ ತಪ್ಪದೆ ಪಾಲಿಸಬೇಕೆಂದು ನಾವು ಬೋಧಿಸಬೇಕು. ಸ್ವತಃ ನಾವು ದೇವರ ಆಜ್ಞೆಗಳಿಗೆ ವಿಧೇಯರಾಗದಿದ್ದಲ್ಲಿ, ಅವುಗಳನ್ನು ಪಾಲಿಸುವುದು ಹೇಗೆಂದು ನಾವು ಇತರರಿಗೆ ಕಲಿಸಲಾರೆವು. ಈ ಕೆಳಗಿನ ಎರಡು ಹೇಳಿಕೆಗಳ ನಡುವಿನ ವ್ಯತ್ಯಾಸವನ್ನು ಗಮನಿಸಿರಿ: "ನಾನು ಆಜ್ಞಾಪಿಸಿದ್ದನ್ನೆಲ್ಲಾ ಅವರಿಗೆ ಬೋಧಿಸಿರಿ" ಮತ್ತು "ನಾನು ಆಜ್ಞಾಪಿಸಿದ್ದನ್ನೆಲ್ಲಾ ಮಾಡುವುದು ಹೇಗೆಂದು ಅವರಿಗೆ ಕಲಿಸಿರಿ."

ಒಂದು ವೇಳೆ ಯೇಸು ಆಜ್ಞಾಪಿಸಿದ ಎಲ್ಲವನ್ನೂ ನಾನು ಇತರರಿಗೆ ಕಲಿಸಬೇಕಾದರೆ, ಯೇಸುವಿನ ಎಲ್ಲಾ ಬೋಧನೆಗಳನ್ನು ಪಟ್ಟಿ ಮಾಡಿಕೊಂಡು, ಒಬ್ಬ ಬೋಧಕನು ರಸಾಯನಶಾಸ್ತ್ರ, ಭೌತಶಾಸ್ತ್ರ ಅಥವಾ ಇತಿಹಾಸವನ್ನು ಕಲಿಸುವಂತೆ ಇವನ್ನೂ ಸಹ ಕಲಿಸಬಹುದು. ನಾನು ಮೂಲತತ್ವಗಳನ್ನು ಅಧ್ಯಯನ ಮಾಡಿ, ನಂತರ ಅವುಗಳನ್ನು ಕಲಿಸಬೇಕಾಗುತ್ತದೆ. ಆದರೆ "ಅವರಿಗೆ ಅವುಗಳನ್ನು ಮಾಡುವುದು ಹೇಗೆಂದು ಕಲಿಸುವುದಕ್ಕೆ ... ," ಮೊದಲು ನಾನೇ ಸ್ವತಃ ಅದನ್ನು ಮಾಡುವುದು ಹೇಗೆಂದು ಕಲಿಯಬೇಕಾಗುತ್ತದೆ, ಮತ್ತು ಆ ಮೇಲೆ ಅದನ್ನು ನಾನು ಇತರರಿಗೆ ಕಲಿಸಬಹುದು. ಸ್ವತಃ ನಾನೇ ಅದನ್ನು ಮಾಡಿರದಿದ್ದರೆ, ಈಜು ಕಲಿಯದೇ ಇತರರಿಗೆ ಈಜು ಕಲಿಸಲು ಹೊರಟಂತೆ ಆಗುತ್ತದೆ. ನೀವು ಈಜುವಿಕೆಯ ತತ್ವಗಳನ್ನು ಮತ್ತು ಸೂತ್ರಗಳನ್ನು ಅರಿತಿದ್ದರೆ, ಕರಿಹಲಗೆಯ ಮೇಲೆ ಅವುಗಳನ್ನು ಸ್ಪಷ್ಟವಾಗಿ ಬರೆದು, ಜನರ ದೊಡ್ಡ ಸಮೂಹಕ್ಕೆ ವಿವರಿಸಿ ಹೇಳಬಹುದು, ಇದಕ್ಕೆ ನೀವು ಸ್ವತಃ ಒಬ್ಬ ಈಜುಗಾರನಾಗಬೇಕಿಲ್ಲ. "ಅವರಿಗೆ ಬೋಧಿಸಿರಿ," ಎಂದರೆ ಇಷ್ಟು ಮಾತ್ರವಾಗಿದೆ. ಆದರೆ ನಾವು "ಅವರಿಗೆ ಅದನ್ನು ಮಾಡಲು ಕಲಿಸಬೇಕಾದರೆ ..." ನಾವೇ ನೀರಿನಲ್ಲಿ ಈಜಿ ತೋರಿಸಬೇಕಾಗುತ್ತದೆ ಮತ್ತು ಈಜುಕೊಳದಲ್ಲಿ ಅಥವಾ ನದಿಯಲ್ಲಿ ಖುದ್ದಾಗಿ ಈಜಿ ಒಂದು ಬದಿಯಿಂದ ಇನ್ನೊಂದು ಬದಿಯನ್ನು ತಲುಪಬೇಕಾಗುತ್ತದೆ.

ಜನರಿಗೆ ಯೇಸುವಿನ ಪ್ರತಿಯೊಂದು ಆಜ್ಞೆಯನ್ನು ಹೇಗೆ ಪಾಲಿಸಬೇಕೆಂದು ಕಲಿಸುವುದು ಒಬ್ಬ ಕ್ರಿಸ್ತೀಯ ಸತ್ಯವೇದ ಬೋಧಕನ ಜವಾಬ್ದಾರಿಯಾಗಿರುತ್ತದೆ ಮತ್ತು ಅದಕ್ಕಾಗಿ ಆತನು ಬಹಳಷ್ಟು ಶ್ರಮಿಸಬೇಕಾಗುತ್ತದೆ. ಈ ಆಜ್ಞೆಗೆ ಅನುಸಾರವಾಗಿ ನಾನು, "ಯೇಸುವಿನ ಎಲ್ಲಾ ಬೋಧನೆಗಳು," ಎಂಬ ಪುಸ್ತಕವನ್ನು ಬರೆದೆನು. ನನ್ನ ಏಕೈಕ ಉದ್ದೇಶ - ಯೇಸುವಿನ ಆಜ್ಞೆಯ ಪ್ರಕಾರ, ಯೇಸುವಿನ ಪ್ರತಿಯೊಂದು ಬೋಧನೆಯನ್ನು ಬೋಧಿಸುವುದು ಮತ್ತು ನಾನು ನನ್ನ ಜೀವನದ ಕಳೆದ 64 ವರ್ಷಗಳಲ್ಲಿ ಅವುಗಳಿಗೆ ವಿಧೇಯನಾಗಲು ಪ್ರಯತ್ನಿಸುತ್ತಿರುವ ಹಾಗೆಯೇ, ನೀವೂ ಸಹ ಅವುಗಳಿಗೆ ಹೇಗೆ ವಿಧೇಯರಾಗಬೇಕೆಂದು ಕಲಿಸುವುದು. ನನಗೆ ಇಷ್ಟವಾದ ಆಜ್ಞೆಗಳಿಗೆ ಮಾತ್ರ ಒತ್ತು ನೀಡುವುದಲ್ಲ ಅಥವಾ ಸುಲಭವಾದ ಆಜ್ಞೆಗಳನ್ನು ಮಾತ್ರ ಬೋಧಿಸಿ, ಇತರ ಆಜ್ಞೆಗಳನ್ನು ನಿರ್ಲಕ್ಷಿಸುವುದಲ್ಲ.

ಯೇಸುವಿನ ಎಲ್ಲಾ ಆಜ್ಞೆಗಳನ್ನು ಪಾಲಿಸುವ ಹಾತೊರೆಯುವಿಕೆ - ಇದು ಪ್ರತಿಯೊಬ್ಬ ಶಿಷ್ಯನಲ್ಲಿ ಕಾಣಿಸಬೇಕು.